ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಕೃತಿ ಪರಿಚಯದಲ್ಲಿ ಇಂದಿನ ಕೃತಿ ವೀರ ಸಾವರ್ಕರ್ ಬರೆದ 1857 – ಭಾರತದ ಸ್ವಾತಂತ್ರ್ಯ ಸಂಗ್ರಾಮ

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು

IMG 20220212 WA0009 min
ವೀರ ಸಾವರ್ಕರ್ ಬರೆದ 1857 – ಭಾರತದ ಸ್ವಾತಂತ್ರ್ಯ ಸಂಗ್ರಾಮ

(ಕೃತಿ ಪರಿಚಯ – 5)

ಬರಹ: ಉದಯಭಾಸ್ಕರ್ ಸುಳ್ಯ

ಇದು ಪ್ರಕಟಗೊಳ್ಳುವ ಮೊದಲೇ ಎರಡು ದೇಶಗಳಲ್ಲಿ ಬ್ಯಾನ್ ಆದ ಕೃತಿ!

‘ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು..!’ ಕೃತಿ ಪರಿಚಯದ ಸರಣಿ ಲೇಖನದಲ್ಲಿ ಈ ದಿನ ಪರಿಚಯಿಸುತ್ತಿರುವ ಕೃತಿಯ ಶೀರ್ಷಿಕೆ ‘1857 – ಭಾರತದ ಸ್ವಾತಂತ್ರ್ಯ ಸಂಗ್ರಾಮ’. ಮೂಲ ಲೇಖಕರು: ವೀರ ಸಾವರ್ಕರ್. ಕನ್ನಡಾನುವಾದ: ಬಾಬು ಕೃಷ್ಣಮೂರ್ತಿ. ಪ್ರಕಾಶಕರು: ಶ್ರೀ ಸಮುದ್ಯತಾ ಸಾಹಿತ್ಯ. ಪುಟಗಳ ಸಂಖ್ಯೆ 28+300. ಪುಸ್ತಕದ ಈ ಹಿಂದಿನ ಮುಖ ಬೆಲೆ ರೂ‌.180/-

ಬ್ರಿಟಿಷರ ದೃಷ್ಟಿಯಲ್ಲಿ ಕೇವಲ ‘ಸಿಪಾಯಿ ದಂಗೆ’ ಎಂದು ನಿಕೃಷ್ಟವಾಗಿ ಪರಿಗಣಿಸಲ್ಪಟ್ಟಿರುವ ಮತ್ತು ಭಾರತೀಯರ ಪಾಲಿಗೆ ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ವೆಂದು ಕರೆಯಲ್ಪಡುವ ಅಭೂತಪೂರ್ವ ಹೋರಾಟವೊಂದು 1857 ರಲ್ಲಿ ನಡೆದಿತ್ತು. ಆದರೆ ಈ ಸ್ವಾತಂತ್ರ್ಯ ಹೋರಾಟವನ್ನು ಪ್ರಥಮ ಹೋರಾಟವೆಂದು ಕರೆಯಬೇಕೋ ಬೇಡವೋ ಅನ್ನುವುದರಲ್ಲಿ ಸ್ವಲ್ಪಮಟ್ಟಿಗೆ ಗೊಂದಲವಿದೆ. ಯಾಕೆಂದರೆ ಅದಕ್ಕೂ ಮೊದಲು ಉತ್ತರ ಭಾರತದಲ್ಲಿ 23 ಬಂಡಾಯಗಳು, ಮುಂಬಯಿ ಮತ್ತು ಪಶ್ಚಿಮ ಭಾರತದಲ್ಲಿ 23 ಬಂಡಾಯಗಳು ಹಾಗೂ ದಕ್ಷಿಣ ಭಾಗದಲ್ಲಿ 19 ಹೋರಾಟಗಳು ನಡೆದಿದ್ದವು. ಇವೆಲ್ಲವೂ 1769 ರಿಂದ 1857 ರ ಮಧ್ಯೆ ನಡೆದಂತಹ ಹೋರಾಟಗಳು. ಹಾಗಾಗಿ 1857 ರ ಹೋರಾಟವನ್ನೇ ಪ್ರಥಮ ಎಂದು ಕರೆಯುವುದಕ್ಕೆ ಒಂದಷ್ಟು ಗೊಂದಲವಿದೆ. ಆದರೆ ಈ ಹೋರಾಟ ಸ್ವಾತಂತ್ರ್ಯಪೂರ್ವ ಇತಿಹಾಸದಲ್ಲಿ ಮಹತ್ತರ ಪಾತ್ರವನ್ನು ವಹಿಸಿ ಬ್ರಿಟಿಷರಿಗೆ ನಡುಕ ಹುಟ್ಟಿಸಿರುವುದಂತೂ ಸತ್ಯ. ಇದೇ ಘಟನೆಗಳನ್ನು ಕಲೆಹಾಕಿ ಇಂಚಿಂಚಾಗಿ ಕಣ್ಣಿಗೆ ಕಟ್ಟುವಂತೆ ಬರೆಯಲಾಗದ ಕೃತಿಯೇ 1857 – ಭಾರತದ ಸ್ವಾತಂತ್ರ್ಯ ಸಂಗ್ರಾಮ.

ಈ ಪುಸ್ತಕದ ಮೂಲ ಲೇಖಕರು ವೀರ ಸಾವರ್ಕರ್. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರಿಂದ ಎರಡು ಬಾರಿ ಕರಿನೀರಿನ ಶಿಕ್ಷೆಗೆ ಒಳಗಾದ ಏಕೈಕ ಕ್ರಾಂತಿಕಾರಿಯೆಂದರೆ ವೀರ ಸಾವರ್ಕರ್! ಸ್ವತಃ ತಾವು ಸವರ್ಣೀಯರಾದರೂ ಜಾತಿ ಬೇಧವನ್ನು ಅಳಿಸುವ ಸಲುವಾಗಿ ಮಹಾರಾಷ್ಟ್ರದಲ್ಲಿ ಪತಿತ ಪಾವನ ಅನ್ನುವ ದೇವಸ್ಥಾನವನ್ನು ಕಟ್ಟಿ ಅದಕ್ಕೆ ದಲಿತರನ್ನೇ ಅರ್ಚಕರನ್ನಾಗಿ ನೇಮಿಸಿ ಅವರೊಂದಿಗೆ ಸಹಭೋಜನ ನಡೆಸಿ ಸಾಮಾಜಿಕವಾಗಿಯೂ ಕ್ರಾಂತಿಯನ್ನು ನಡೆಸಿದ ಕ್ರಾಂತಿಕಾರಿ ಇವರು.!

ಸಾವರ್ಕರ್ ಅವರು ಈ ಪುಸ್ತಕವನ್ನು ಬರೆದ ಉದ್ದೇಶವೇನೆಂದರೆ ಅವರೇ ಹೇಳುವಂತೆ, 1857 ರ ಸಂಗ್ರಾಮದ ಐತಿಹಾಸಿಕ ಘಟನೆಗಳನ್ನು ಖಚಿತವಾಗಿ ಜನರ ಮುಂದೆ ತೆರೆದಿಡುವುದು ಮತ್ತು ಎರಡನೆಯ ಸ್ವಾತಂತ್ರ್ಯ ಸಮರವನ್ನು ಆರಂಭಿಸಿ ತಮ್ಮ ತಾಯ್ನಾಡನ್ನು ಯಶಸ್ವಿಯಾಗಿ ಮುಕ್ತಗೊಳಿಸಲು ತನ್ನ ಜನರನ್ನು ಜ್ವಲಂತ ಆಕಾಂಕ್ಷೆಯೊಂದಿಗೆ ಎದ್ದು ನಿಲ್ಲುವಂತೆ ಪ್ರೇರೇಪಿಸುವುದು. ಇದರ ಜೊತೆಗೆ ಮುಂದಿನ ಹೋರಾಟಕ್ಕೆ ರಾಷ್ಟ್ರವನ್ನು ಸಜ್ಜುಗೊಳಿಸುವ ಕ್ರಾಂತಿಕಾರಿಗಳ ಸಂಘಟನಾತ್ಮಕ ಕಾರ್ಯಕ್ರಮಗಳಿಗೆ ಹಂದರವನ್ನು ಒದಗಿಸಿಕೊಡುವುದು. ಆ ರೀತಿಯ ಕ್ರಾಂತಿಕಾರಿ ಸಂದೇಶವನ್ನು ಭಾರತದಾದ್ಯಂತ ಬಹಿರಂಗವಾಗಿ ಬಿತ್ತರಿಸಲು ಹಾಗೂ ದೃಢ ವಿಶ್ವಾಸದಿಂದ ಜನರು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಮಾಡಲು ಅತಿ ಸನಿಹದ ಭೂತಕಾಲದಲ್ಲಿ ನಡೆದುಹೋದ ಅಭೂತಪೂರ್ವ ಘಟನಾವಳಿಗಳನ್ನು ಆಯ್ದುಕೊಂಡು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವುದಕ್ಕಿಂತಲೂ ಬೇರೆ ರೀತಿಯಲ್ಲಿ ಸಾಧ್ಯವಿಲ್ಲ ಅನ್ನುವುದು ಅವರ ದೃಢ ನಂಬಿಕೆಯಾಗಿತ್ತು. ಆ ಉದ್ದೇಶಕ್ಕಾಗಿಯೇ ಈ ಕೃತಿಗೆ ‘1857 – ಭಾರತದ ಸ್ವಾತಂತ್ರ್ಯ ಸಂಗ್ರಾಮ’ ಎಂದು ನಾಮಕರಣ ಮಾಡಿದ್ದಾರೆ.

ಸಾವರ್ಕರ್ ರಿಗೆ 21 ವರ್ಷ ವಯಸ್ಸಾಗಿದ್ದಾಗ ಅಂದರೆ, 1908 ರಲ್ಲಿ ಮೊದಲಿಗೆ ಈ ಕೃತಿಯನ್ನು ಮರಾಠಿಯಲ್ಲಿ ರಚಿಸಿದ್ದರು. ಲಂಡನ್ನಿನ ಫ್ರೀ ಇಂಡಿಯಾ ಸೊಸೈಟಿಯ ಸಾಪ್ತಾಹಿಕ ಸಭೆಗಳಲ್ಲಿ ಸಾವರ್ಕರ್ ಅವರು ಈ ಕೃತಿಯ ಆಯ್ದ ಭಾಗಗಳನ್ನು ಇಂಗ್ಲೀಷ್ ನಲ್ಲಿ ಪ್ರಸ್ತುತಪಡಿಸುತ್ತಿದ್ದರು. ಈ ಕಾರ್ಯಕ್ರಮದ ವರದಿಯ ಮೂಲಕವೋ, ಮತ್ತಾವುದೋ ಮೂಲದಿಂದಲೋ ಬ್ರಿಟಿಷ್ ಗುಪ್ತಚಾರರಿಗೆ ಈ ಪುಸ್ತಕದ ಕುರಿತಾದ ಮಾಹಿತಿ ಲಭ್ಯವಾಗುತ್ತದೆ. ಮರಾಠಿ ಹಸ್ತಪ್ರತಿಯ ಒಂದೆರಡು ಅಧ್ಯಾಯಗಳನ್ನು ಗುಪ್ತಚರ ಏಜೆಂಟರು ಕಳವುಗೈದು ಗುಪ್ತಚರ ಕೇಂದ್ರವಾದ ಸ್ಕಾಟ್ಲೆಂಡ್ ಯಾರ್ಡ್ ಗೆ ರವಾನಿಸಿದ್ದರು.

ಭಾರತದ ಬಂದರುಗಳಲ್ಲಿ ಕಾವಲು ಅಧಿಕಾರಿಗಳ ಕಣ್ತಪ್ಪಿಸಿ ಮರಾಠಿ ಹಸ್ತಪ್ರತಿಯನ್ನು ಉದ್ದೇಶಿತ ಸ್ಥಳಕ್ಕೆ ತಲುಪಿಸಿ ಮುದ್ರಿಸಲು ಸಿದ್ದತೆ ನಡೆಸಲಾಗುತ್ತದೆ. ಆದರೆ ಮಹಾರಾಷ್ಟ್ರದ ಮುದ್ರಣಾಲಯಗಳು ವಿವಾದಿತ ಕೃತಿಯನ್ನು ಮುದ್ರಿಸಲು ಧೈರ್ಯ ತೋರುವುದಿಲ್ಲ. ಆಗ ಅಭಿನವ ಭಾರತ ಗುಪ್ತ ಸಂಘಟನೆಯ ಸದಸ್ಯನೊಬ್ಬ ತನ್ನದೇ ಮುದ್ರಣಾಲಯದಲ್ಲಿ ಕೃತಿಯನ್ನು ಪ್ರಕಟಿಸಲು ಮುಂದಾದರೂ ಮರಾಠಿಯಲ್ಲಿ ಕೃತಿ ಪ್ರಕಟವಾಗಲಿದೆ ಅನ್ನುವ ಮಾಹಿತಿ ಅಲ್ಲಿನ ಪೋಲೀಸರಿಗೆ ಲಭ್ಯವಾಗುತ್ತದೆ. ಮಹಾರಾಷ್ಟ್ರದ ಮುದ್ರಣಾಲಗಳ‌ ಮೇಲೆ ಏಕಕಾಲದಲ್ಲಿ ಧಾಳಿಯಾಗುತ್ತದೆ.‌! ಆದರೆ ಹಿತೈಷಿ ಪೋಲೀಸ್ ಒಬ್ಬನ ಮುನ್ಸೂಚನೆಯಿಂದ ಮರಾಠಿ ಹಸ್ತಪ್ರತಿಯನ್ನು ಸುರಕ್ಷಿತವಾಗಿ ಲಂಡನ್ನಿನ ಬದಲು ಪ್ಯಾರಿಸ್ಸಿಗೆ ಕಳಿಸಲಾಗುತ್ತದೆ. ಭಾರತದಲ್ಲಿ ಆ ಕೃತಿಯನ್ನು ಪ್ರಕಟಿಸಲು ಸಾಧ್ಯವೇ ಇಲ್ಲ ಅನ್ನುವುದು ಗೊತ್ತಾದ ಮೇಲೆ ಜರ್ಮನಿಯಲ್ಲಿ ಮುದ್ರಿಸುವ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಜರ್ಮನಿಯಲ್ಲಿ ಸಂಸ್ಕೃತ ಸಾಹಿತ್ಯವನ್ನು ನಾಗರಿ ಲಿಪಿಯಲ್ಲಿ ಮುದ್ರಿಸುವ ಮುದ್ರಣಾಲಯಗಳಿದ್ದರೂ, ಮರಾಠಿ ಭಾಷೆಯ ಗಂಧಗಾಳಿಯಿರದ ಜರ್ಮನಿಯ ಮುದ್ರಣಾಲಯದ ಮೊಳೆ ಜೋಡಿಸುವ ಕಾರ್ಮಿಕರಿಂದ ಈ ಕೆಲಸ ಸಾಧ್ಯವಾಗಲೇ ಇಲ್ಲ. ಈ ಎಲ್ಲಾ ಕಾರಣದಿಂದಾಗಿ ಮರಾಠಿಯಲ್ಲಿದ್ದ ಹಸ್ತಪ್ರತಿಯನ್ನು ಪ್ರಕಟಿಸುವ ಯೋಜನೆ ಕೈಬಿಡಲಾಗುತ್ತದೆ.

ಆ ನಂತರ ಈ ಕೃತಿಯನ್ನು ಇಂಗ್ಲೀಷ್ ಗೆ ಭಾಷಾಂತರಿಸಿ ಪ್ರಕಟಿಸಲು ನಿರ್ಧರಿಸಲಾಯಿತು. ಆದರೆ ಅದನ್ನು ಇಂಗ್ಲೆಂಡ್ ನಲ್ಲಿ ಮುದ್ರಿಸುವ ಸೂಚನೆ ಸಿಕ್ಕ ಗುಪ್ತಚರರು ಈ ಕೃತಿಯನ್ನು ಪ್ರಕಟಿಸಿದ ಮುದ್ರಣಾಲಯಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆಯೊಡ್ಡುತ್ತಾರೆ. ಅಲ್ಲಿಂದ ಇಂಗ್ಲೀಷ್ ಹಸ್ತಪ್ರತಿಯನ್ನು ಪ್ರಾನ್ಸ್ ಗೆ ಕಳಿಸಿ ಮುದ್ರಿಸುವ ಯೋಜನೆ ರೂಪಿಸಲಾಗುತ್ತದೆ. ಆದರೆ ಆ ಕಾಲದಲ್ಲಿ ಜರ್ಮನಿಯ ಆಕ್ರಮಣದ ಭಯದಿಂದ ನಲುಗಿ ಹೋಗಿದ್ದ ಫ್ರಾನ್ಸ್ ಸರ್ಕಾರ ಇಂಗ್ಲೆಂಡ್ ನೊಡನೆ ಕೈಜೋಡಿಸಿ ಅದರ ಹಿಡಿತದಲ್ಲಿತ್ತು. ಹಾಗಾಗಿ ಫ್ರಾನ್ಸ್ ನ ಯಾವುದೇ ಮುದ್ರಣಾಲಯಗಳು ಈ ಕೃತಿಯನ್ನು ಮುದ್ರಿಸುವ ಧೈರ್ಯ ತೋರಲಿಲ್ಲ. ‌ಆ ನಂತರ ಹಾಲೆಂಡ್ ನ ಮುದ್ರಣಾಲಯಗಳಿಗೆ ಹಸ್ತಪ್ರತಿಯನ್ನು ಕಳಿಸಿ ಅಲ್ಲಿ ಮುದ್ರಿಸುವ ಯೋಜನೆ ರೂಪಿಸಲಾಗುತ್ತದೆ. ಆದರೆ ಅದರ ಜೊತೆ‌ ಜೊತೆಗೆ ಫ್ರಾನ್ಸ್‌ ನಲ್ಲಿ ಕೃತಿಯನ್ನು ಮುದ್ರಿಸಲಾಗುತ್ತಿದೆ ಅನ್ನುವ ಸುಳ್ಳು ಸುದ್ದಿಯನ್ನು ಹಬ್ಬಿಸಿ ಬ್ರಿಟಿಷ್ ಗುಪ್ತಚರರ ದಿಕ್ಕು ತಪ್ಪಿಸಲಾಗುತ್ತದೆ.‌ ಅವರಿಗೆ ಖಚಿತ ಸುಳಿವು ಸಿಗುವ ಮೊದಲೇ ಹಾಲೆಂಡ್ ನಲ್ಲಿ ಪುಸ್ತಕ ಮುದ್ರಣಗೊಂಡು ಫ್ರಾನ್ಸ್ ಗೆ ರವಾನೆಯಾಗಿ ವಿತರಣಾ ಕಾರ್ಯಕ್ಕೆ ಸಿದ್ದವಾಗುತ್ತದೆ.

ಸಾವರ್ಕರರ ಈ ಕೃತಿಯ ಹಸ್ತಪ್ರತಿಯ ಬರಹಗಳ ಬಗ್ಗೆ ಬೆದರಿದ್ದ ಬ್ರಿಟಿಷ್ ಸರ್ಕಾರ ಈ ಕೃತಿಯನ್ನು ಪ್ರಕಟಗೊಳ್ಳುವುದಕ್ಕೆ ಮೊದಲೇ ಇಂಗ್ಲೆಂಡ್ ಮತ್ತು ಭಾರತದಲ್ಲಿ ಬಹಿಷ್ಕರಿಸುತ್ತಾರೆ ಮತ್ತು ಈ ಕೃತಿಯನ್ನು ಪ್ರಕಟಿಸುವುದು ರಾಜದ್ರೋಹದ ಕೆಲಸವೆಂದು ಕಾನೂನು ಕ್ರಮ ಕೈಗೊಳ್ಳಲು ಸಿದ್ದರಾಗುತ್ತಾರೆ. ಹಾಗಾಗಿ ಜಗತ್ತಿನ ಇತಿಹಾಸದಲ್ಲಿ ಪ್ರಕಟಗೊಳ್ಳುವುದಕ್ಕೆ ಮೊದಲೇ ಎರಡೆರಡು ದೇಶದಲ್ಲಿ ಬಹಿಷ್ಕಾರಕ್ಕೆ ಒಳಗಾದ ಯಾವುದಾದರೂ ಕೃತಿ ಇದೆಯೆಂದಾದರೆ ಅದು ವೀರ ಸಾವರ್ಕರ್ ಬರೆದ 1857 ರ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕೃತಿ!!

ನೇತಾಜಿ ಸುಭಾಷ್ ಚಂದ್ರ ಬೋಸರ ಆಝಾದ್ ಹಿಂದ್ ಫೌಜ್ ನ ಸೈನಿಕರು ಸತ್ಯನಿಷ್ಠ ಪಠ್ಯಪುಸ್ತಕವೆಂದು ಪರಿಗಣಿಸಿ ಪದೇಪದೇ ತಮ್ಮ ಶಿಬಿರಗಳಲ್ಲಿ ಓದುತ್ತಿದ್ದ ಪುಸ್ತಕ, ಭಾರತೀಯ ಕ್ರಾಂತಿಕಾರಿಗಳ ಭಗವದ್ಗೀತೆ ಎಂದೇ ಪರಿಗಣಿಸಲ್ಪಟ್ಟು ಪೂಜನೀಯ ಸ್ಥಾನ ಪಡೆದ ಪುಸ್ತಕ, ಅದೇ ಸ್ವಾತಂತ್ರ್ಯವೀರ ಸಾವರ್ಕರ್ ಅವರು ಬರೆದ 1857 ರ ಭಾರತದ ಸ್ವಾತಂತ್ರ್ಯ ಸಂಗ್ರಾಮ.

IMG 20220109 WA0005 min
ಉದಯಭಾಸ್ಕರ್

ಉದಯಭಾಸ್ಕರ್ ಸುಳ್ಯ ಅವರ ಹುಟ್ಟೂರು ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುಂಬಳಚೇರಿ, ಪ್ರಸ್ತುತ ಸುಳ್ಯ ನಿವಾಸಿ‌. ಸ್ವ ಉದ್ಯೋಗದೊಂದಿಗೆ ಬರವಣಿಗೆಯನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಇವರು ಕನ್ನಡ, ಅರೆಭಾಷೆ, ತುಳು, ಮಲಯಾಳಂ ಭಾಷೆಗಳಲ್ಲಿ ಸಾಹಿತ್ಯ ರಚಿಸಬಲ್ಲವರಾಗಿದ್ದು 700 ಕ್ಕಿಂತಲೂ ಅಧಿಕ ಸಾಹಿತ್ಯ ರಚಿಸಿದ್ದಾರೆ. ಆಕಾಶವಾಣಿ ಮಂಗಳೂರು ಮತ್ತು ಪುತ್ತೂರಿನ ರೇಡಿಯೋ ಪಾಂಚಜನ್ಯದಲ್ಲಿ ಇವರ ಕವನ ವಾಚನ ಪ್ರಸಾರಗೊಂಡಿದ್ದು ಅನೇಕ ರಚನೆಗಳು ಆಡಿಯೋ ರೂಪದಲ್ಲಿ ಯೂ ಟ್ಯೂಬ್ ನಲ್ಲಿ ಲಭ್ಯವಿದೆ. ಸಾಹಿತ್ಯದ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿರುವ ಇವರು ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಅದರ ಮೂಲಕ ರೋಗಿಗಳಿಗೆ ರಕ್ತ ಪೂರೈಕೆ ಮತ್ತು ಕ್ಯಾನ್ಸರ್ ಪೀಡಿತರಿಗೆ ಕೂದಲು ತಲುಪಿಸುವ ಸೇವಾ ಚಟುವಟಿಕೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಕಾರ್ಯಕ್ರಮ ನಿರೂಪಣೆ, ಹಿನ್ನೆಲೆ ಧ್ವನಿ, ಧಾರ್ಮಿಕ ಭಾಷಣ, ವಿಮರ್ಶೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ದೂರವಾಣಿ ಸಂಖ್ಯೆ:- 9448843929

Sharing Is Caring:

Leave a Comment