ಇಲ್ಲಿ ಎಲ್ಲರೂ ಸಮಾನರು. ಆದರೆ…..– ಶಿಕ್ಷಕನ ಡೈರಿಯಿಂದ 50

WhatsApp Group Join Now
Telegram Group Join Now

ಶಿಕ್ಷಕನ‌ ಡೈರಿಯಿಂದ

ಇಲ್ಲಿ ಎಲ್ಲರೂ ಸಮಾನರು. ಆದರೆ….

ಶಿಕ್ಷಕನ ಡೈರಿ 50 ರ ಸಂಚಿಕೆ ತಲುಪಿದ್ದು ಸದಾಶಿವ ಕೆಂಚನೂರು ಇವರಿಗೆ ಅಭಿನಂದನೆಗಳು. ತರಗತಿ ಕೋಣೆಯ ಅನುಭವಗಳನ್ನು ಅತ್ಯಂತ ರೋಚಕವಾಗಿ ಪ್ರಸ್ತುತ ಪಡಿಸುವ ತಮ್ಮ ಶೈಲಿಗೆ ರಾಜ್ಯದಾದ್ಯಂತ ಓದುಗ ಅಭಿಮಾನಿಗಳಿದ್ದು, ಲೇಖನಗಳು ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ.ಸೂಕ್ಷ್ಮವಾಗಿ ಹಲವು ಘಟನೆಗಳ ಮೂಲಕ ಶಿಕ್ಷಕರನ್ನು ಚಿಂತನೆಗೆ ಕುಂಡೊಯ್ಯುವ ನಿಮ್ಮ ಲೇಖನಗಳು ಮುಂದುವರಿಯಲಿ…50 ರ ಅಂಕಣಕ್ಕೆ ನಿಮಗೆ ಮತ್ತೊಮ್ಮೆ ಅಭಿನಂದನೆಗಳು

   ನಾನಾಗ ಏಳನೇ ತರಗತಿಯ ವಿದ್ಯಾರ್ಥಿ. ಕೇವಲ ಹನ್ನೆರಡೇ ವಿದ್ಯಾರ್ಥಿಗಳಿದ್ದ ಕ್ಲಾಸದು. ತನ್ನ ಪಾಠ‌ ಮುಗಿಸಿ ಕ್ಲಾಸಿನಿಂದ ಹೊರಟಿದ್ದ ಗಣಿತ ಮಾಸ್ಟ್ರು ಏನೋ ನೆನಪಿಸಿಕೊಂಡು, "ನಿನ್ನೆ ಕೊಟ್ಟಿದ್ದ ಲೆಕ್ಕ ಮಾಡಿಕೊಂಡು ಬಂದಿದ್ದೀರಾ?" ಕೇಳಿದರು. ಎಲ್ಲರೂ ಮುಖ ಮುಖ ನೋಡಿಕೊಳ್ಳುತ್ತಿರುವಷ್ಟರಲ್ಲಿ ಅವರು ನನ್ನ ಬಳಿ ಬಂದಾಗಿತ್ತು. "ಬರೆದಿದ್ದೀಯಾ?" ಕೇಳಿದರು. "ಹೌದು" ಎಂದೆ. ಪಕ್ಕದಲ್ಲಿದ್ದ ಗೆಳೆಯ ಲಕ್ಷೀಕಾಂತನಲ್ಲೂ ಅದನ್ನೇ ಕೇಳಿದರು. ಹೇಳಲೋ ಬೇಡವೋ ಎಂಬ ಅನುಮಾನದಲ್ಲಿಯೇ "ಇಲ್ಲ" ಎಂದ. ಪ್ರಶ್ನೆ ಮುಂದಿನವರಿಗೂ ಹೋಯಿತು. ಎಲ್ಲರದ್ದೂ ಉತ್ತರ ಒಂದೇ.. "ಇಲ್ಲ.."

    ಮಾಸ್ಟರಿಗೇನೂ ಸಿಟ್ಟು ಬಂದಂತೆ ಕಾಣಿಸಲಿಲ್ಲ.. ಆದರೂ ಕೊಟ್ಟ ಕೆಲಸ ಮಾಡದವರಿಗೆ ಶಿಕ್ಷೆ ಕೊಡಬೇಕಲ್ಲ ಎಂದೋ ಏನೋ, ಅವರೆಲ್ಲರಿಗೂ ಒಂದೊಂದು ಪೆಟ್ಟು ಕೊಟ್ಟು ಹೊರಹೋದರು. ಪೆಟ್ಟು ತುಂಬಾ ನೋವು ಮಾಡದಿದ್ದುದರಿಂದ ಗೆಳೆಯರೆಲ್ಲರೂ ನಗುತ್ತಾ ಪೆಟ್ಟು ಬಿದ್ದ ಜಾಗವನ್ನು ತುರಿಸಿಕೊಳ್ಳುತ್ತಿರುವಾಗ ಬದಿಯಲ್ಲಿ ಪಾಪದವನಂತೆ ಕುಳಿತುಕೊಂಡಿದ್ದ ನನ್ನೆಡೆಗೆ ಲಕ್ಷ್ಮೀಕಾಂತನ ದೃಷ್ಟಿ ಹರಿಯಿತು. 
"ಎಲ್ಲಿ... ನಿನ್ನ ನೋಟ್ಸ್ ತೋರಿಸು.." ಎನ್ನುತ್ತಾ ನನ್ನ ಪುಸ್ತಕಕ್ಕೆ ಕೈ ಹಾಕಲು ಬಂದ ಲಕ್ಷ್ಮೀಕಾಂತನ ಊಹೆ ಸರಿಯೇ ಆಗಿತ್ತು. "ನನ್ನದೂ ಆಗಿಲ್ಲ..." ಸಿಕ್ಕಿಬಿದ್ದ ಕಳ್ಳನಂತೆ ಸಂಕೋಚದಿಂದ ಉತ್ತರಿಸಿದ್ದೆ. "ಇದು ಮೋಸ... " ತೀರಾ ಸಿಟ್ಟು ಬಂದಿರದಿದ್ದರೂ, ಆಕ್ಷೇಪಣೆಯ ಧ್ವನಿಯಲ್ಲಿ ಕಿರುಚಿ ಎಲ್ಲರನ್ನೂ ಆ ಕಡೆಗೆ ಕರೆದಿದ್ದ. ಅವನ ಆಕ್ಷೇಪಣೆಯ ದನಿಗೆ ಎಲ್ಲರೂ ತಮ್ಮ ದನಿಯನ್ನು ಸೇರಿಸಿದ್ದರು. "ನೀನು ಬರೆದಿಲ್ಲ ಎಂದು ಸತ್ಯ ಹೇಳಿದ್ದರೆ ನಮಗೆಲ್ಲಾ ಪೆಟ್ಟು ಬೀಳುವುದು ತಪ್ಪುತ್ತಿತ್ತು" ಎಂದ ಲಕ್ಷ್ಮೀಕಾಂತನ ಮಾತಿಗೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು.
     
    ಆ ತರಗತಿಯಲ್ಲಿ ಕಲಿಕೆಯಲ್ಲಿ ಯಾವಾಗಲೂ ನಾನು ಮೊದಲಸ್ಥಾನಿಯಾದರೆ, ಲಕ್ಷ್ಮೀಕಾಂತ ಎರಡನೇ ಸ್ಥಾನಿ. ತರಗತಿಯ ಉಳಿದವರಿಗಿಂತ ನಾನೂ ತುಂಬಾ ಮುಂದೆ ಇದ್ದುದರಿಂದ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದೆ. ಎರಡನೇ ತರಗತಿಯಿಂದ ಏಳನೇ ತರಗತಿಯವರೆಗೆ ಶಿಕ್ಷಕರಿಂದ ಒಂದೂ ಪೆಟ್ಟು ತಿನ್ನದ ವಿಶೇಷ ದಾಖಲೆ ನನ್ನ ಹೆಸರಿನಲ್ಲಿತ್ತು. ಅದಕ್ಕೆ ಪೆಟ್ಟು ಬೀಳುವಂತಹ ತಪ್ಪುಗಳನ್ನು ಮಾಡುತ್ತಿದ್ದುದು ತೀರಾ ಕಡಿಮೆಯೆಂಬುದು ಒಂದು ಕಾರಣವಾದರೆ, ಅಪರೂಪಕ್ಕೆ ತಪ್ಪು ಮಾಡಿದರೂ ನೆಚ್ಚಿನ ಶಿಷ್ಯನಾದುದರಿಂದ ಪೆಟ್ಟು ಕೊಡಲು ಶಿಕ್ಷಕರಿಗೆ ಮನಸ್ಸು ಬರುತ್ತಿರಲಿಲ್ಲ ಎನ್ನುವುದೂ ಒಂದು ಕಾರಣವೆಂಬ ಸತ್ಯ ನನ್ನ ಗೆಳೆಯರಿಗೂ ಗೊತ್ತಿತ್ತು. ಹಾಗಾಗಿಯೇ ಅವರು "ನೀನು ಸತ್ಯ ಹೇಳಿದ್ದರೆ ನಿನಗಂತೂ ಪೆಟ್ಟು ಬೀಳುತ್ತಿರಲಿಲ್ಲ, ನಮಗೂ ಪೆಟ್ಟು ಬೀಳುವುದು ತಪ್ಪುತ್ತಿತ್ತು" ಎಂದಿದ್ದರು. ಅಷ್ಟೆಲ್ಲಾ ಹೇಳಿದವರು ನಾನು ಸುಳ್ಳು ಹೇಳಿದ್ದೆನೆಂದು ಶಿಕ್ಷಕರಿಗೆ ತಿಳಿಸಿ, ನನಗೂ ಒಂದು ಪೆಟ್ಟು ಬೀಳಿಸುವ ಕೆಲಸಕ್ಕೆ ಕೈ ಹಾಕಿರಲಿಲ್ಲ. ನಾನು ಅವರಿಗೂ ಅಚ್ಚುಮೆಚ್ಚಿನವನಾಗಿದ್ದೆ. ನನ್ನ ಹೆಸರಿನಲ್ಲಿದ್ದ ಆ ವಿಶೇಷ ದಾಖಲೆ ಅಳಿಸುವುದು‌ ಅವರಿಗೂ ಬೇಕಾಗಿರಲಿಲ್ಲ. ನಾನು ಸತ್ಯ ಹೇಳಿದ್ದರೆ ಅವರಿಗೆ ಪೆಟ್ಟು ಬೀಳುತ್ತಿರಲಿಲ್ಲ‌ ಎನ್ನುವುದಷ್ಟೇ ಅವರ ಆಕ್ಷೇಪಣೆಯಾಗಿತ್ತು.

     ಶಿಕ್ಷಕನಾಗಿ ನನ್ನ ವಿದ್ಯಾರ್ಥಿಜೀವನವನ್ನು ನೆನಪಿಸಿಕೊಂಡಾಗ ನನ್ನನ್ನು ಕಾಡುವ ಘಟನೆಗಳಲ್ಲಿ ಇದೂ ಒಂದು. ನನ್ನ ಶಿಕ್ಷಕರು ಮಾಡುತ್ತಿದ್ದ ತಪ್ಪನ್ನು ನಾನು ಮಾಡಬಾರದು ಎನ್ನುವ ಎಚ್ಚರ ನನ್ನೊಳಗೆ ತುಸು ಸ್ಟ್ರಾಂಗಾಗಿಯೇ ಕುಳಿತುಕೊಂಡಿದೆಯೇನೋ, ಅದಕ್ಕೇ ಕಲಿಕೆಯಲ್ಲಿ ಮುಂದಿರುವ, ಎಲ್ಲರ ಅಚ್ಚುಮೆಚ್ಚಿನ ವಿದ್ಯಾರ್ಥಿಗಳು ಮಾಡಿದ ತಪ್ಪುಗಳೆಡೆಗೆ ಸ್ವಲ್ಪ ಹೆಚ್ಚು ಖಾರವಾಗಿಯೇ ಪ್ರತಿಕ್ರಿಯಿಸುತ್ತಿರುವ ಅಭ್ಯಾಸ ಬೆಳೆಯಿತೇನೋ ಎಂದು ನಾನು ಆಗಾಗ ಅಂದುಕೊಳ್ಳುವುದಿದೆ.

       *     *     *

    ಕೋವಿಡ್ ಕಾಲದ ಲಾಕ್ ಡೌನ್ ಸಂದರ್ಭದಲ್ಲಿ ಜಿಲ್ಲೆಯ ಗಡಿಗಳ ಚೆಕ್ ಪೋಸ್ಟ್ಗಳಲ್ಲಿ ಪೋಲೀಸರೊಂದಿಗೆ ಕಾವಲು ನಿಲ್ಲುವ ವಿಶಿಷ್ಟ ಕರ್ತವ್ಯವೊಂದು ಒದಗಿಬಂದಿತ್ತು. ನನಗೊಂಥರಾ ಸಂಕಷ್ಟದ ಕಾಲದಲ್ಲಿ ದೇಶಸೇವೆ ಮಾಡುತ್ತಿದ್ದೇವೆಂಬ ಸಂಭ್ರಮ. ಪೋಲೀಸರಿಗೂ ಒಂಥರಾ ಟೆನ್ಶನ್ನಿನ ದಿನಗಳವು. ದಿನಬಳಕೆಯ ಅಗತ್ಯ ವಸ್ತುಗಳ ವ್ಯಾಪಾರದ ವಾಹನಗಳು ಜಿಲ್ಲೆಯ ಗಡಿಯಿಂದಾಚೆ ಈಚೆ ತಿರುಗುವಾಗ ಕೋವಿಡ್ ಹರಡೀತು ಎಂಬ ಭಯದ ನಡುವೆಯೂ ಕ್ಷುಲ್ಲಕ ಕಾರಣಕ್ಕಾಗಿ ಓಡಾಡುವ ಜನಗಳೂ ಇರುತ್ತಿದ್ದರು. "ಪೋಲೀಸ್ ಭಾಷೆ" ಬಳಕೆಯಿಲ್ಲದಿದ್ದರೆ ಜನರನ್ನು ನಿಯಂತ್ರಿಸುವುದು ಸುಲಭವಲ್ಲ ಎಂಬ ಅರಿವಂತೂ ನನ್ನಲ್ಲಿ ಮೂಡಿತ್ತು. ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಶಿಕ್ಷಕರೊಬ್ಬರು ಜನರಿಗೆ ಜೋರು ಮಾಡುತ್ತಿದ್ದಾಗ 'ಭಲೆ ಭಲೇ, ಇವರು ಪೋಲೀಸರಿಗಿಂತಲೂ ಹುಶಾರಿದ್ದಾರಲ್ಲ' ಎಂದುಕೊಂಡಿದ್ದೆ. ನಾನೂ ಸ್ವಲ್ಪ ಸ್ಟ್ರಾಂಗಾಗಿ ಮಾತನಾಡಲು ಅಭ್ಯಾಸ ಮಾಡಿಕೊಂಡಿದ್ದೆ.
      ಇಂತಿಪ್ಪ ಸನ್ನಿವೇಶದಲ್ಲಿ ನನಗಿಂತ ಸುಮಾರು ಕಿರಿಯವರಾದ ಯುವ ಪೋಲೀಸ್ ಕಾನ್ಸ್ಟೇಬಲ್ ಜೊತೆಗೆ ಒಂದು ದಿನ ಕೆಲಸ ಮಾಡಬೇಕಾಗಿ ಬಂತು. ಆತನೋ ಬಹಳ ಸಾಧುಸ್ವಭಾವದ ಯುವಕ. ಜನರೊಂದಿಗೆ ಬಹಳ ವಿನಮ್ರನಾಗಿ ಮಾತನಾಡುತ್ತಿದ್ದ ಅವರ ನಡೆ ನನಗೆ ಉಳಿದ ಪೋಲೀಸರಿಗಿಂತ ವಿಭಿನ್ನವಾಗಿ ಕಾಣಿಸಿತು. ಬಹಳ ಒಳ್ಳೆಯ ಮನುಷ್ಯ ಎಂದು ಒಂದೆಡೆ ಅನಿಸಿದರೂ, ಹಿಂದಿನ ಒಂದೆರಡು ದಿನಗಳಲ್ಲಿ ಬೇರೆ ಪೋಲೀಸರೊಂದಿಗಿದ್ದಾಗ ನಾವೆದುರಿಸಿದ ಗಲಿಬಿಲಿಯ ಸನ್ನಿವೇಶಗಳು ಈತನೆದುರಿಗೆ ಬಂದರೆ ನಿಭಾಯಿಸುವುದು ಕಷ್ಟ ಅನಿಸಿತು. ಬಿಡುವಿನ ಸಮಯದಲ್ಲೊಮ್ಮೆ "ನಿಮ್ಮನ್ನು ನೋಡಿದರೆ ಪೋಲೀಸ್ ಅನಿಸುವುದಿಲ್ಲ, ಮಾಸ್ಟ್ರು ಅನಿಸುತ್ತದೆ.." ಎಂದೆ. "ನಾನು ಮಾಸ್ಟ್ರ ಮಗ.." ಹೀಗೆಂದು ನಕ್ಕ ಅವರೊಂದಿಗೆ ನನ್ನ ಮಾತು ಮುಂದುವರೆಯಿತು. ಪೋಲೀಸ್ ವೃತ್ತಿಯ ಅನುಭವಗಳನ್ನು ಹಂಚಿಕೊಳ್ಳುತ್ತಾ "ನಮ್ಮ ವೃತ್ತಿಯಲ್ಲಿ ಕೆಲವೊಂದು ವಿಚಾರಗಳು ತುಂಬಾ ಬೇಸರ ತರುತ್ತವೆ. ಯಾವುದೋ ಬಡಪಾಯಿಯ ಸಣ್ಣ ತಪ್ಪಿಗೆ ನಾವು ಯರ್ರಾಬಿರ್ರಿ ಆವಾಜು ಹಾಕುತ್ತೇವೆ, ಅದೇ ಪ್ರಭಾವಿಗಳು ಬಂದಾಗ ನಾವು ಮೆತ್ತಗಿರಲೇಬೇಕಾಗುತ್ತದೆ." ಆತನದ್ದು ಸಹೋದ್ಯೋಗಿಗಳ ವರ್ತನೆಯ ಕುರಿತಾದ ಅಸಹನೆ ಅಂದುಕೊಂಡೆ. ಅದರೆ ಅದು ಅಷ್ಟೇ ಆಗಿರಲಿಲ್ಲ. "ಪ್ರಭಾವಿಗಳೊಂದಿಗೆ ನಮ್ಮ ವರ್ತನೆ ಕಟುವಾಗಿಸಿಕೊಳ್ಳುವಷ್ಟು ಶಕ್ತಿಯಂತೂ ನಮಗಿಲ್ಲ. ಬಡಪಾಯಿಗಳೊಂದಿಗೆ ಮೃದುವಾಗಿರುವುದು ಸಾಧ್ಯವಿದೆಯಲ್ಲಾ? ಹಾಗಾಗಿಯೇ ನಾನು ಪಾಪದ ಜನರೊಡನೆ ನನ್ನ ಡ್ಯೂಟಿ ಮಾಡುವಾಗ ಪ್ರಭಾವಿಗಳೊಂದಿಗೆ ಇದ್ದ ರೀತಿಯಲ್ಲಿಯೇ ಇರಲು ಪ್ರಯತ್ನಿಸುತ್ತೇನೆ. ನನಗೆ ಗೊತ್ತು, ಇದರಿಂದ ನನಗೆ ಜನರನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ; ಕೆಲವೊಮ್ಮೆ ನಾನು ಹಾಕಿಕೊಂಡ ಗೆರೆಯನ್ನು ದಾಟುವುದೂ ಅನಿವಾರ್ಯವೂ ಆಗುತ್ತದೆ. ಆದರೂ ನನಗಿದರಲ್ಲಿ ಒಂದು ಬಗೆಯ ಸಮಾಧಾನ, ಸಂತೃಪ್ತಿ ಇದೆ."

     ಆತನ ಧೋರಣೆ ನನಗೆ ಬಹಳ ಖುಷಿ ಕೊಟ್ಟಿತು.

       *     *     *

    ಸ್ಟಾಫ್ರೂಮಿನಲ್ಲಿ ಶಿಕ್ಷಕರೆಲ್ಲ ಮಾತನಾಡುತ್ತ ಕುಳಿತಿದ್ದೆವು. ಸಹೋದ್ಯೋಗಿಯೊಬ್ಬರು‌ ವಾಟ್ಸಾಪಿನಲ್ಲಿ ಬಂದ ಎರಡು ಫೋಟೋಗಳ ಬಗ್ಗೆ ಮಾತನಾಡುತ್ತಿದ್ದರು. ಒಂದು ಫೋಟೋದಲ್ಲಿ ಅಪಾಯಕಾರಿ ರೀತಿಯಲ್ಲಿ ರೀಲ್ಸ್ ಮಾಡಲು ಪ್ರಯತ್ನಿಸಿ ಪೋಲೀಸ್ ಆತಿಥ್ಯ ಪಡೆದ ಯುವಕನೊಬ್ಬ ಬಹುದೊಡ್ಡ ಅಪರಾಧಿಯ ರೀತಿಯಲ್ಲಿ ಪೋಲೀಸರ ಕಾಲ ಬುಡದಲ್ಲಿ ಕುಳಿತಿದ್ದ. ಇನ್ನೊಂದು ಫೋಟೋದಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದ ಪ್ರಭಾವಿ ರಾಜಕಾರಣಿಯೊಬ್ಬ ಸ್ಟೇಷನ್ನಿನಲ್ಲಿ ಪೋಲೀಸ್ ಅಧಿಕಾರಿಗಳೆದುರು ಗತ್ತಿನಿಂದ ಕುಳಿತಿದ್ದ. "ಎಂತಹ ಅವಸ್ಥೆ ನೋಡಿ...." ಹೀಗೆಂದ ಸಹೋದ್ಯೋಗಿ ಮಿತ್ರರೊಡನೆ ಸಣ್ಣ ಕೀಟಲೆ ಮಾಡುವ ಮನಸ್ಸಾಯಿತು. ನಾನು ಕಲಿಕೆಯಲ್ಲಿ ಎಲ್ಲರಿಗಿಂತ ಹಿಂದಿರುವ, ವೈಯಕ್ತಿಕ ಶಿಸ್ತು ಸ್ವಲ್ಪವೂ ಇಲ್ಲದ, ತೀರಾ ನಿಷ್ಕಾಳಜಿ ತೋರುವ ಕುಟುಂಬದ ಹಿನ್ನೆಲೆ ಹೊಂದಿರುವ ಅಶ್ವಥ್ ಎನ್ನುವ ವಿದ್ಯಾರ್ಥಿಯನ್ನೂ, ಶಾಲೆಗೆ ಲೆಕ್ಕವಿಲ್ಲದಷ್ಟು ಮೊತ್ತದ ದೇಣಿಗೆಗಳನ್ನು ಕೊಡುತ್ತಿರುವ ಶ್ರೀಮಂತ ಮತ್ತು ವಿದ್ಯಾವಂತ ಪೋಷಕರ ಪ್ರತಿಭಾವಂತ ಮಗನಾದ ಪ್ರಭಾತ್ ಎನ್ನುವ ಹುಡುಗನನ್ನೂ ಉದಾಹರಣೆಯಾಗಿ ತೆಗೆದುಕೊಂಡೆ.

      "ಸರ್, 
 ಶಾಲೆಯಲ್ಲೇ ಮಗುವೊಂದು ದೊಡ್ಡ ಅಪರಾಧ ಮಾಡಿದ ಎಂದಿಟ್ಟುಕೊಳ್ಳಿ, ಅದು ಎಂತಹ ತಪ್ಪೆಂದರೆ ನಿಮ್ಮ ರಕ್ತ ಕುದಿಯುವಷ್ಟು ಸಿಟ್ಟು ತರಿಸುವ ತಪ್ಪು. ಈ ತಪ್ಪನ್ನು ನಮ್ಮ ಅಶ್ವಥ್ ಮಾಡಿದರೆ ನಿಮ್ಮ ಪ್ರತಿಕ್ರಿಯೆ ಹೇಗಿದ್ದೀತು.? ಈಗ ಅದೇ ತಪ್ಪನ್ನು ಪ್ರಭಾತ್ ಮಾಡಿದರೆ ನಿಮ್ಮ ಪ್ರತಿಕ್ರಿಯೆ ಹಾಗೇ ಇರ್ಲಿಕ್ಕೆ ಸಾಧ್ಯವೇ?"

       ಒಂದು ಕ್ಷಣ ಅಲ್ಲಿ ಕುಳಿತಿದ್ದ ಸಹೋದ್ಯೋಗಿಗಳೆಲ್ಲ ಮೌನವಾದರು. ನನ್ನ ಪ್ರಶ್ನೆಯ ಉದ್ದೇಶ ಕೀಟಲೆಯಷ್ಟೇ ಆಗಿತ್ತು. ಆದರೆ ಅದು ಹುಟ್ಟಿಸಿದ ಚಿಂತನೆ ಗಂಭೀರವಾದುದೇ ಆಗಿತ್ತು. ಸಹೋದ್ಯೋಗಿಗಳ ಮೌನದೊಂದಿಗೆ ನಾನೂ ಭಾಗಿಯಾದೆ. ಒಂದು ಕ್ಷಣ ನನ್ನ ಬಾಲ್ಯದ ಘಟನೆ, ಯುವಕ ಪೋಲೀಸ್ ಆಡಿದ ಮಾತುಗಳು ನನ್ನ ಮನಸ್ಸಿನಲ್ಲಿ ಹಾದು ಹೋದವು. ಬಹುಶಃ ನನ್ನಂತೆಯೇ ನನ್ನ ಸಹೋದ್ಯೋಗಿಗಳೆಲ್ಲರ ಮನಸ್ಸಿನಲ್ಲಿಯೂ ಇಂತಹುದೇ ಯೋಚನೆಗಳು, ನೆನಪುಗಳು ಹಾದುಹೋಗಿರಲೂಬಹುದು.

    ನಿಜ... ಇಲ್ಲಿ ಎಲ್ಲರೂ ಸಮಾನರು. ಆದರೆ.....

     ಈಗ ನಿಮಗೇನಾದರೂ ನೆನಪಾಯಿತೇ?

        - ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

WhatsApp Group Join Now
Telegram Group Join Now
Sharing Is Caring:

Leave a Comment