ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಕೃತಿ ಪರಿಚಯ 2 ಭಗತ್ ಸಿಂಗ್ ಅಣ್ಣನ ಮಗಳು ಬರೆದ ಯುಗದ್ರಷ್ಟ ಭಗತ್ ಸಿಂಗ್

ಯುಗದ್ರಷ್ಟ ಭಗತ್ ಸಿಂಗ್
ಯುಗದ್ರಷ್ಟ ಭಗತ್ ಸಿಂಗ್

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು

WhatsApp Group Join Now
Telegram Group Join Now

(ಕೃತಿ ಪರಿಚಯ – 2)

ಬರಹ: ಉದಯಭಾಸ್ಕರ್ ಸುಳ್ಯ

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಈ ದಿನ ಪರಿಚಯಿಸಲಾಗುತ್ತಿರುವ ಕೃತಿಯ ಹೆಸರು ‘ಯುಗದ್ರಷ್ಟ ಭಗತ್ ಸಿಂಗ್’. ಮೂಲ ಲೇಖಕರು: ಡಾ‌.ವೀರೇಂದ್ರ ಸಿಂಧು, ಕನ್ನಡಕ್ಕೆ: ಡಾ. ಬಾಬು ಕೃಷ್ಣಮೂರ್ತಿ. ಪ್ರಕಾಶಕರು: ಶ್ರೀ ಸಮುದ್ಯತಾ ಸಾಹಿತ್ಯ ಬೆಂಗಳೂರು. ಪುಟಗಳು: 450. ಪುಸ್ತಕದ ಹಿಂದಿನ ಮುಖಬೆಲೆ: 300₹.

ಭಗತ್ ಸಿಂಗ್ ನ ಜೀವನ ಚರಿತ್ರೆಯ ಪುಸ್ತಕಗಳು ಕನ್ನಡದಲ್ಲಿ ಹಲವಾರು ಪ್ರಕಟಗೊಂಡಿವೆಯಾದರೂ ಯುಗದ್ರಷ್ಟ ಭಗತ್ ಸಿಂಗ್ ಪುಸ್ತಕವು ಮೇರುಮಟ್ಟದ ಕೃತಿಯಾಗಿದೆ. ಅದಕ್ಕೆ ಕಾರಣ ಈ ಕೃತಿಯ ಮೂಲ ಲೇಖಕಿಯಾದ ಡಾ. ವೀರೇಂದ್ರ ಸಿಂಧು ಅವರು ಸ್ವತಃ ಹುತಾತ್ಮ ಭಗತ್ ಸಿಂಗ್ ನ ತಮ್ಮ ಕುಲ್‌ತಾರ್ ಸಿಂಹರ ಮಗಳು! ಆದ ಕಾರಣವೇ ಈ ಪುಸ್ತಕವನ್ನು ಕೈಗಿಟ್ಟ ತಕ್ಷಣ ಅದೇನೋ ರೋಮಾಂಚನ, ಅದೇನೋ ಭಾವನಾತ್ಮಕ ಅನುಭವ! ಭಗತ್ ಸಿಂಗ್ ನ ಪರಿವಾರದಲ್ಲೇ ಹುಟ್ಟಿ ಬೆಳೆದವರೊಬ್ಬರು ಬರೆದ ಪುಸ್ತಕವಾದ್ದರಿಂದ ಉಳಿದೆಲ್ಲರಿಗಿಂತಲೂ ಹೆಚ್ಚು ಮಾಹಿತಿಗಳು, ದಾಖಲೆಗಳು ಇವರ ಕೃತಿಯಲ್ಲಿ ಲಭ್ಯ.

ಅದೆಷ್ಟೋ ಬಾರಿ ನಾವು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಓದುವಾಗ ಅವರ ಹೋರಾಟದ ಕಥನಗಳ ಭಾಗವಷ್ಟೇ ನಮಗೆ ಲಭ್ಯವಾಗುತ್ತವೆ. ಅಲ್ಲಿ ಆ ಹೋರಾಟಗಾರರ ಕೌಟುಂಬಿಕ ಭಾವನಾತ್ಮಕ ವಿಚಾರಗಳು ಲಭ್ಯವಾಗುವುದು ಬಹಳಷ್ಟು ಕಡಿಮೆ ಅಥವಾ ಅವರಿಗೂ ನಮ್ಮಂತೆಯೇ ಮನೆ ಮಠ ಸಂಸಾರ ಕುಟುಂಬಗಳಿದ್ದವು. ಅವೆಲ್ಲವನ್ನೂ ಬಿಟ್ಟು ಹೋರಾಟಕ್ಕೆ ಧುಮುಕುವ ವೇಳೆ ಅವರ ಕುಟುಂಬದ ಪರಿಸ್ಥಿತಿ ಹೇಗಿದ್ದಿರಬಹುದು, ಕುಟುಂಬದ ಸದಸ್ಯರ ಪ್ರತಿಕ್ರಿಯೆ ಹೇಗಿದ್ದಿರಬಹುದು, ಅದೆಷ್ಟು ನೋವುಂಡಿದ್ದರು ಅನ್ನುವುದರ ಕುರಿತು ನಾವು ಯೋಚಿಸುವುದೇ ಇಲ್ಲ. ಹೋರಾಟದಲ್ಲಿ ಭೌತಿಕವಾಗಿ ಬಲಿದಾನಗೈದವರ ಬಗ್ಗೆ ಸಾಕಷ್ಟು ಮಾಹಿತಿಗಳು ನಮಗೆ ಲಭ್ಯವಾಗುತ್ತವೆ. ಆದರೆ ಅವರ ಹಿಂದೆ ಭಾವನೆಗಳನ್ನು ಬಲಿದಾನಗೈದ ಅವರ ಕುಟುಂಬದವರ ಕುರಿತು ನಾವು ಯೋಚಿಸುವುದೇ ಇಲ್ಲ. ಹೋರಾಟಗಾರನ ಕುಟುಂಬದ ಹೊರತಾದ ವ್ಯಕ್ತಿಯೊಬ್ಬ ಆತನ ಕುಟುಂಬದ ಬಗ್ಗೆ ಭಾವನಾತ್ಮಕ ವಿಚಾರಗಳನ್ನು ಕಲೆಹಾಕಿ ಬರೆದರೂ ಅದು ಸ್ವಲ್ಪಮಟ್ಟಿಗೆ ಸಪ್ಪೆ ಅನಿಸಿಬಿಡಬಹುದು. ಆದರೆ ಯುಗದ್ರಷ್ಟ ಭಗತ್ ಸಿಂಗ್ ಪುಸ್ತಕವು ಸ್ವತಃ ಆತನ ಕುಟುಂಬದ ಸದಸ್ಯರೇ ಬರೆದಿರುವ ಕಾರಣದಿಂದ ಇಲ್ಲಿರುವ ಭಾವನಾತ್ಮಕ ಸಂಗತಿಗಳು ಸ್ವತಃ ಅನುಭವದ ಜೋಳಿಗೆಯಿಂದ ಹೆಕ್ಕಿ ಪೋಣಿಸಿದವೇ ಆಗಿವೆ.

ಹಾಗಾಗಿ ಭಗತ್ ಸಿಂಗ್ ನ ಕುರಿತಾಗಿರುವ ಎಲ್ಲಾ ಪುಸ್ತಕಗಳಿಂದಲೂ ಯುಗದ್ರಷ್ಟ ಭಗತ್ ಸಿಂಗ್ ಕೃತಿಯೇ ಅಗ್ರಸ್ಥಾನದಲ್ಲಿದೆ ಅನ್ನುವುದನ್ನು ಈ ಪುಸ್ತಕದ ಕನ್ನಡಾನುವಾದಕರಾದ ಡಾ.ಬಾಬು ಕೃಷ್ಣಮೂರ್ತಿ ಅಭಿಪ್ರಾಯ ಪಡುತ್ತಾರೆ. ಇನ್ನು ಅನೇಕ ಲೇಖಕರು ಭಗತ್ ಸಿಂಗ್ ನನ್ನು ತಮ್ಮ ತಮ್ಮ ಸಿದ್ದಾಂತಕ್ಕೋ, ಪಂಥಕ್ಕೋ, ಇಸಂಗೋ ಹೋಲಿಸಿಕೊಂಡು ತಮ್ಮ ತಮ್ಮ ಪಕ್ಷ ಸಿದ್ಧಾಂತಕ್ಕೆ ಸೀಮಿತಗೊಳಿಸಿಬಿಡುತ್ತಾರೆ. ಆದರೆ ಈ ಕೃತಿಯಲ್ಲಿ ಆತನ ಸಹಜವಾದ ಸ್ವಭಾವ, ಚಿಂತನೆಗಳು ಹೇಗಿತ್ತು ಅನ್ನುವುದನ್ನು ಸಮಗ್ರವಾಗಿ ತೋರಿಸಲಾಗಿದೆ. ಯಾವುದೋ ಒಂದು ಪಕ್ಷ ಸಿದ್ದಾಂತಕ್ಕೆ ಅಂಟಿಕೊಂಡ ಲೇಖಕರಿಗೆ ಮಹಾಪುರುಷರನ್ನು ಪ್ರಯತ್ನಪೂರ್ವಕವಾಗಿ ತಮ್ಮವನನ್ನಾಗಿಸಿಕೊಳ್ಳುವ ಪೂರ್ವಾಗ್ರಹವಿರುತ್ತದೆ. ಆದರೆ ಆತನ ಕುಟುಂಬದ ಸದಸ್ಯರೇ ಬರೆದಿರುವ ಕೃತಿ ಇದಾಗಿರುವ ಕಾರಣ ಅದಾವ ಪೂರ್ವಾಗ್ರಹವಿಲ್ಲದೇ ಸತ್ಯ ಸಂಗತಿಗಳನ್ನಷ್ಟೇ ಪ್ರಾಮಾಣಿಕವಾಗಿ ತೆರೆದಿಟ್ಟ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಹಾಗಾಗಿ ಭಗತ್ ಸಿಂಗ್ ನ ಬಗ್ಗೆ ಅರಿಯುವ ಕುತೂಹಲ ಹೊಂದಿದವರಿಗೆ ಇದೊಂದು ಅಧ್ಯಯನಯೋಗ್ಯ ಕೃತಿಯಾಗಿರುವುದರಲ್ಲಿ ಸಂಶಯವಿಲ್ಲ.

ಆಗಲೇ ಮೇಲೆ ಉಲ್ಲೇಖಿಸಿದಂತೆ ಒಬ್ಬ ಭಗತ್ ಸಿಂಗ್ ನ ಭೌತಿಕ ಬಲಿದಾನದ ಹಿಂದೆ ಅದೆಷ್ಟೋ ಭಾವನೆಗಳ ಬಲಿದಾನವೂ ನಡೆದುಹೋಗಿವೆ ಮತ್ತು ಒಬ್ಬ ಭಗತ್ ಸಿಂಗ್ ಜನ್ಮಜಾತ ಕ್ರಾಂತಿಕಾರಿಯಾಗಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿಕೊಂಡೇ ಹುಟ್ಟಿದ್ದರ ಹಿಂದೆ ಆತನ ಕುಟುಂಬದ ಅನೇಕ ಹಿರಿಯರ ಪ್ರೇರಣೆಯೂ ಇದೆ ಅನ್ನುವುದು ಬಹುತೇಕರಿಗೆ ತಿಳಿದಿರಲಾರದು. ಈ ಕೃತಿಯಲ್ಲಿ ಆ ಎಲ್ಲರ ಸಮಗ್ರವಾದ ಪರಿಚಯವಿದೆ. ಕೌಟುಂಬಿಕ ಮತ್ತು ಭಾವನಾತ್ಮಕ ಚಿತ್ರಣವನ್ನು ಸುಸ್ಪಷ್ಟವಾಗಿ ತೆರೆದಿಡಲಾಗಿದೆ. ಓದುತ್ತಾ ಓದುತ್ತಾ ನಾವೇ ಆ ಕುಟುಂಬದ ಸದಸ್ಯರೋ ಎಂಬಂತೆ ಭಾವೋದ್ರಿಕ್ತರಾಗುತ್ತೇವೆ, ಭಗತ್ ಸಿಂಗ್ ನ ಕುಟುಂಬದ ಕತೆ ನಮ್ಮ ಸುತ್ತ ಇಲ್ಲೇ ಎಲ್ಲೋ ನಿನ್ನೆ ಮೊನ್ನೆ ನಡೆದುಹೋದ ಘಟನೆಯಂತೆ ಭಾಸವಾಗುತ್ತದೆ, ಮಧ್ಯೆ ಮಧ್ಯೆ ನಮಗರಿವಿಲ್ಲದೇ ಕಣ್ಣೀರಾಗುತ್ತೇವೆ.

ಕೃತಿಯ ಆರಂಭದಲ್ಲಿ ‘ಅಧ್ಯಯನಕ್ಕೆ ಮುಂಚೆ’ ಅನ್ನುವ ಶೀರ್ಷಿಕೆಯಡಿಯಲ್ಲಿ ಲೇಖಕಿ ಡಾ ವೀರೇಂದ್ರ ಸಿಂಧು ಹೀಗೆ ಬರೆಯುತ್ತಾರೆ,

“ಅರ್ಜುನಸಿಂಹ,‌‌ ಕಿಶನ್ ಸಿಂಹ, ಅಜಿತ್ ಸಿಂಹ, ಸ್ವರ್ಣಸಿಂಹ ಮತ್ತು ಭಗತ್ ಸಿಂಗರು ತಮ್ಮ ಕ್ಷೇತ್ರದಲ್ಲಿ ತಮ್ಮದೇ ರೀತಿಯಲ್ಲಿ ರಾಷ್ಟ್ರೀಯ ಸ್ವಾತಂತ್ರ್ಯ ಪರ್ವದಲ್ಲಿ ಅಪೂರ್ವ ಕೊಡುಗೆ ನೀಡಿದ್ದಾರೆ. ಈ ವೀರರ ಮತ್ತು ಇವರ ಕಾರ್ಯಗಳ ಕಥೆ ಹೇಳುವುದೇ ನನ್ನ ಉದ್ದೇಶ. ಆದರೆ ಅದರಲ್ಲಿ ಆಳಕ್ಕಿಳಿಯುತ್ತಾ ಹೋದಂತೆಲ್ಲಾ ಶ್ರೀಮತಿ ಜಯಾ ಕೌರ್, ಶ್ರೀಮತಿ ವಿದ್ಯಾವತಿ, ಶ್ರೀಮತಿ ಹರನಾಮ್ ಕೌರ್ ಮತ್ತು ಶ್ರೀಮತಿ ಹುಕುಮ್ ಕೌರ್ ರನ್ನು ಈ ಕಥೆಯಿಂದ ಬೇರೆ ಮಾಡುವುದರಿಂದ ಇತಿಹಾಸಕ್ಕೆ ಅನ್ಯಾಯವಾಗುತ್ತದೆ ಎನಿಸುತ್ತದೆ. ಅಷ್ಟೇ ಅಲ್ಲ ಅದು ಅಮಾನವೀಯವೂ ಆಗುತ್ತದೆ. ಸ್ವಾತಂತ್ರ್ಯ ಯಜ್ಞದಲ್ಲಿ ಧುಮುಕಿದವರಂತೂ ನಿಸ್ಸಂಶಯವಾಗಿ ವೀರರೇ. ಅವರ ನರಳಾಟವಂತೂ ಅವರ್ಣನೀಯ. ಆದರೆ ಅವರ ಕಾರಣದಿಂದಾಗಿ ಅವರ ಪತ್ನಿಯರು ಇನ್ನೂ ಹೆಚ್ಚು ನರಳಬೇಕಾಯಿತಲ್ಲವೇ? ದೂರದಿಂದ ಕಾಣುವುದು ಕ್ರಾಂತಿಯ ದೀಪ. ಜೊತೆಗೆ ಆ ದೀಪವನ್ನು ಹಿಡಿದಿರುವ ಕೈ ಕೂಡ ಕಾಣಿಸುತ್ತದೆ. ಆ ದೀಪವನ್ನು ಬೆಳಗಿಸುವುದು ಎಳ್ಳು ಅಥವಾ ಸಾಸಿವೆ ಎಣ್ಣೆ. ಆ ಕಾಳುಗಳು ದೀಪವನ್ನುರಿಸಲೆಂದು ತಮ್ಮ ಎಣ್ಣೆಯನ್ನು ಧಾರೆಯೆರೆದು ನಿಃಸತ್ವಗೊಳ್ಳುತ್ತವೆ! ಇದೇ ರೀತಿಯಲ್ಲಿ ಕ್ರಾಂತಿವೀರರ ಪತ್ನಿಯರೂ ತಮ್ಮ ಜೀವಗಳನ್ನೇ ತೇಯ್ದು ತೇಯ್ದು ಗೌರವಾನ್ವಿತರೆನ್ನಿಸಿಕೊಳ್ಳುತ್ತಾರೆ!”

ಮೇಲೆ ಉಲ್ಲೇಖಿಸಲ್ಪಟ್ಟ ಹರನಾಮ್ ಕೌರ್, ಹುಕುಮ್ ಕೌರ್ ಇವರ ಹೆಸರನ್ನೆಲ್ಲಾ ಬಹುತೇಕರು ಕೇಳಿಯೂ ಇರಲಾರರು.! ಇವರೆಲ್ಲರ ಭಾವನೆಗಳ ತ್ಯಾಗವಂತೂ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವಪೂರ್ಣವಾದದ್ದೇ ಸರಿ. ಭಗತ್ ಸಿಂಗ್ ನ ಕ್ರಾಂತಿಬಲಿದಾನದ ಹಿಂದೆ ಮರೆಯಾಗಿ ಉಳಿದ ಆತನ ಕುಟುಂಬದ ಸದಸ್ಯರ ಇಂತಹ ತ್ಯಾಗದ ಕತೆಗಳನ್ನು, ಭಾವನಾತ್ಮಕ ಸನ್ನಿವೇಶಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ಕುರಿತಾಗಿ ಲೇಖಕಿಗಿರುವ ಕಾಳಜಿ ಮೇಲಿನ ಸಾಲುಗಳಲ್ಲಿ ಎದ್ದು ಕಾಣುತ್ತದೆ. ಆ ಕಾರಣದಿಂದಾಗಿಯೇ ಈ ಕೃತಿಗೆ ಅಗ್ರಮಾನ್ಯ ಸ್ಥಾನ.

ಸ್ವಾತಂತ್ರ್ಯ ಹೋರಾಟದಲ್ಲಿನ ಹಿಂಸೆ ಅಹಿಂಸೆಗಳ ಪರ ವಿರೋಧವಾಗಿ ಹೊರಗಡೆ ಸಾಕಷ್ಟು ಚರ್ಚೆಗಳಾಗುತ್ತಿದ್ದರೂ, ಹಿಂಸಾತ್ಮಕ ಹೋರಾಟವನ್ನು ಪ್ರಬಲವಾಗಿ ಪ್ರತಿಪಾದಿಸಿದ ಭಗತ್ ಸಿಂಗ್ ನ ಸ್ವಂತ ತಮ್ಮನ ಮಗಳಾದ ಈ ಕೃತಿಯ ಲೇಖಕಿ ಈ ಕೃತಿಯಲ್ಲಿ ಹೀಗೆಂದು ಬರೆಯುತ್ತಾರೆ, “ನನ್ನ ಮಟ್ಟಿಗೆ ನಾನು, ‘ರಾಷ್ಟ್ರದ ಸ್ವಾತಂತ್ರ್ಯದಲ್ಲಿ ಹಿಂಸೆಯು ತನ್ನ ಕೆಲಸ ಮಾಡಿದೆ ಮತ್ತು ಅಹಿಂಸೆ ತನ್ನ ಕೆಲಸ ಮಾಡಿದೆ’ ಎಂದೇ ನಿಸ್ಸಂದಿಗ್ಧವಾಗಿ ನಂಬುತ್ತೇನೆ!!” ಸ್ವಾತಂತ್ರ್ಯ ಹೋರಾಟಗಾರರು ಕೈಗೊಂಡ ಎಲ್ಲಾ ಹೋರಾಟದ ಹಾದಿಗಳೂ ಮಹತ್ವಪೂರ್ಣವಾದದ್ದೇ ಅನ್ನುವಂತೆ ಲೇಖಕಿಯ ಸಮನ್ವಯದ ವಿಶಾಲ ಚಿಂತನೆಯನ್ನಿಲ್ಲಿ ಕಾಣಬಹುದು.

ಸರ್ದಾರ್ ಅಜಿತ್ ಸಿಂಹನ ಮರೆತುಹೋದ ಮಹಾಸಾಧನೆ, ಸರ್ದಾರ್ ಕಿಶನ್ ಸಿಂಹನ ಅಲಕ್ಷ್ಯಕ್ಕೊಳಗಾದ ಹೃದಯ ವೈಶಾಲ್ಯ ತ್ಯಾಗಗಳು, ಭಗತ್ ಸಿಂಗ್ ನ ಬಲಿದಾನ ಮುಂತಾದ ಅಚ್ಚರಿಯ ಅಪೂರ್ವ ಸಂಗತಿಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕೆಂಬ ಬಲವಾದ ಆಸೆಯಿಂದ ಮೂಲ ಲೇಖಕಿ ಡಾ ವೀರೇಂದ್ರ ಸಿಂಧು ಮತ್ತು ಅನುವಾದಕರಾದ ಡಾ ಬಾಬು ಕೃಷ್ಣಮೂರ್ತಿಯವರು ಮಾಡಿದ ಶ್ರದ್ಧಾಪೂರ್ವಕ ಕೆಲಸ ಈ ಕೃತಿಯಲ್ಲಿ ಎದ್ದು ಕಾಣುತ್ತದೆ.

ಅಜಿತ್ ಸಿಂಹನ ಸಾಹಸಗಾಥೆಯ ತುಣುಕುಗಳನ್ನು ಉಲ್ಲೇಖಿಸುವುದಾದರೆ, ಆಗಿನ ಕಾಲದಲ್ಲಿ ಆತ ಗಡೀಪಾರಿನ ಶಿಕ್ಷೆಗೆ ಒಳಗಾಗಿ ಬ್ರೆಜಿಲ್, ಪ್ರಾನ್ಸ್, ಸ್ವಿಟ್ಜರ್ಲೆಂಡ್‌‌, ಜರ್ಮನಿ ಹೀಗೆ ಮೊದಲಾದ ದೇಶಗಳಲ್ಲಿ ಸುತ್ತಾಡಿದ್ದ. ಅಲ್ಲಿನ ಬಟ್ಟೆ ಕಾರ್ಖಾನೆ, ಟೂತ್ ಪೇಸ್ಟ್ ಫ್ಯಾಕ್ಟರಿ, ಮುಂತಾದ ಕಡೆ ಕೆಲಸ ಮಾಡುವುದರ ಜೊತೆಗೆ ಕ್ರಾಂತಿ ಸಂಘಟನೆಯಲ್ಲೂ ಭಾಗಿಯಾಗಿದ್ದ. ಮುಸಲೋನಿಯಂತಹ ನಾಯಕನನ್ನು ಭೇಟಿಯಾಗಿದ್ದ. ಅದೆಷ್ಟೋ ವರ್ಷಗಳ ಕಾಲ ಮರೆಯಾಗಿ ಉಳಿದು ನಂತರ ಬಾನುಲಿಯ ಮೂಲಕ ಭಾರತದೊಂದಿಗೆ ಸಂಪರ್ಕ ಸಾಧಿಸಿ ಅಚ್ಚರಿ ಹುಟ್ಟಿಸಿದ್ದ. ಬರೋಬ್ಬರಿ 39 ವರ್ಷಗಳ ಕಾಲ ತನ್ನ ಪತ್ನಿಯಿಂದ ದೂರಾಗಿ ಆ ನಂತರ ಭಾರತಕ್ಕೆ ಮರಳಿದಾಗ ಆತನ ಗುರುತು ಸಿಗದೆ ಪತ್ನಿಯೂ ಆತನನ್ನು ಸ್ವೀಕರಿಸಲು ಹಿಂದೇಟು ಹಾಕಿದಂತಹ ಭಾವನಾತ್ಮಕ ಸನ್ನಿವೇಶವೂ ನಿರ್ಮಾಣವಾಗಿತ್ತು. ಸ್ವಾತಂತ್ರ್ಯ ಸಿಗುವುದನ್ನೇ ಉಸಿರು ಬಿಗಿಹಿಡಿದು ಕಾದು ಕುಳಿತು ಕೊನೆಗೆ ಸ್ವಾತಂತ್ರ್ಯ ಸಿಕ್ಕಿದ ಮರುಕ್ಷಣವೇ ಸ್ವತಂತ್ರ್ಯ ಭಾರತದ ಮೊತ್ತ ಮೊದಲ ಸೂರ್ಯೋದಯದ ಸಂದರ್ಭದಲ್ಲಿ ಇಚ್ಚಾಮರಣಿಯಂತೆ ಸೂಚನೆ ಕೊಟ್ಟು ತನ್ನ ದೇಹತ್ಯಾಗ ಮಾಡಿದಂತಹ ಅಜಿತ್ ಸಿಂಹನ ಬದುಕಿನ ಈ ರೋಚಕ ಘಟನೆಗಳೆಲ್ಲಾ ಬಹುತೇಕರಿಗೆ ತಿಳಿದಿರಲಾರದು‌‌. ಈ ಎಲ್ಲಾ ಸಂಗತಿಗಳನ್ನು ಇಂಚಿಂಚಾಗಿ ಕಣ್ಣಿಗೆ ಕಟ್ಟುವಂತೆ ಈ ಕೃತಿಯಲ್ಲಿ ತೋರಿಸಲಾಗಿದೆ.

ಜನ್ಮಜಾತ ಕ್ರಾಂತಿಕಾರಿಯಾಗಿ, ಓರ್ವ ಮಾನವನಾಗಿ, ಕ್ರಾಂತಿಯ ದಾರ್ಶನಿಕನಾಗಿ, ಓರ್ವ ಶ್ರೇಷ್ಠ ನಾಯಕನಾಗಿ, ಒಬ್ಬ ಉತ್ತಮ ಲೇಖಕನಾಗಿ, ಹಲವು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದ ಭಗತ್ ಸಿಂಗ್ ನ ಅಲ್ಪಾವಧಿಯ ಅಚ್ಚರಿಯ ಬದುಕಿನ ಜೊತೆಗೆ ಆತನ ಇಡೀ ಪರಿವಾರದ ಭಾವನಾತ್ಮಕ ಘಟನೆಗಳನ್ನು ಮತ್ತು ಹೋರಾಟದ ಸಾಹಸಗಾಥೆಗಳನ್ನು ಅಧ್ಯಯನ ಮಾಡುವವರಿಗಾಗಿ ಯೋಗ್ಯವೆನಿಸಿದ ಕೃತಿ ‘ಯುಗದ್ರಷ್ಟ ಭಗತ್ ಸಿಂಗ್’!

IMG 20220109 WA0005 min
ಉದಯಭಾಸ್ಕರ್

ಉದಯಭಾಸ್ಕರ್ ಸುಳ್ಯ ಅವರ ಹುಟ್ಟೂರು ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುಂಬಳಚೇರಿ, ಪ್ರಸ್ತುತ ಸುಳ್ಯ ನಿವಾಸಿ‌. ಸ್ವ ಉದ್ಯೋಗದೊಂದಿಗೆ ಬರವಣಿಗೆಯನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಇವರು ಕನ್ನಡ, ಅರೆಭಾಷೆ, ತುಳು, ಮಲಯಾಳಂ ಭಾಷೆಗಳಲ್ಲಿ ಸಾಹಿತ್ಯ ರಚಿಸಬಲ್ಲವರಾಗಿದ್ದು 700 ಕ್ಕಿಂತಲೂ ಅಧಿಕ ಸಾಹಿತ್ಯ ರಚಿಸಿದ್ದಾರೆ. ಆಕಾಶವಾಣಿ ಮಂಗಳೂರು ಮತ್ತು ಪುತ್ತೂರಿನ ರೇಡಿಯೋ ಪಾಂಚಜನ್ಯದಲ್ಲಿ ಇವರ ಕವನ ವಾಚನ ಪ್ರಸಾರಗೊಂಡಿದ್ದು ಅನೇಕ ರಚನೆಗಳು ಆಡಿಯೋ ರೂಪದಲ್ಲಿ ಯೂ ಟ್ಯೂಬ್ ನಲ್ಲಿ ಲಭ್ಯವಿದೆ. ಸಾಹಿತ್ಯದ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿರುವ ಇವರು ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಅದರ ಮೂಲಕ ರೋಗಿಗಳಿಗೆ ರಕ್ತ ಪೂರೈಕೆ ಮತ್ತು ಕ್ಯಾನ್ಸರ್ ಪೀಡಿತರಿಗೆ ಕೂದಲು ತಲುಪಿಸುವ ಸೇವಾ ಚಟುವಟಿಕೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಕಾರ್ಯಕ್ರಮ ನಿರೂಪಣೆ, ಹಿನ್ನೆಲೆ ಧ್ವನಿ, ಧಾರ್ಮಿಕ ಭಾಷಣ, ವಿಮರ್ಶೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Sharing Is Caring:

Leave a Comment