ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಇಂದಿನ ಕೃತಿ – ಅಮರ ಸುಳ್ಯದ ಕ್ರಾಂತಿ ಕಥನ ಮೂಡಣದ ಕೆಂಪು ಕಿರಣ

IMG 20220129 WA0001 min
ಮೂಡಣದ ಕೆಂಪು ಕಿರಣ

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು

(ಕೃತಿ ಪರಿಚಯ – 3)

ಬರಹ: ಉದಯಭಾಸ್ಕರ್ ಸುಳ್ಯ

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಈ ದಿನ ಪರಿಚಯಿಸಲಾಗುತ್ತಿರುವ ಕೃತಿಯ ಹೆಸರು ‘ಮೂಡಣದ ಕೆಂಪು ಕಿರಣ’. ಲೇಖಕರು: ಡಾ‌.ಪ್ರಭಾಕರ ಶಿಶಿಲ. ಪ್ರಕಾಶಕರು: ರಾಜ್ ಪ್ರಕಾಶನ ಮೈಸೂರು. ಪುಟಗಳು: 256. ಪುಸ್ತಕದ ಮುಖಬೆಲೆ: 180₹ (ಸುಳ್ಯದ ಶ್ರೀದೇವಿ ಪುಸ್ತಕದಂಗಡಿಯಲ್ಲಿ ಲಭ್ಯ)

ಭಾರತದ ಸ್ವಾತಂತ್ರ್ಯ ಹೋರಾಟ ಅನ್ನುವಂತದ್ದು ಹಲವು ಶತಮಾನಗಳ ಸುದೀರ್ಘ ಅವಧಿಯ ಹಲವು ಪೀಳಿಗೆಗಳ ಹೋರಾಟದ ಸಾಹಸಗಾಥೆ. ವ್ಯಾಪಾರಿಗಳ ಸೋಗಿನಲ್ಲಿ ತಕ್ಕಡಿ ಹಿಡಿದು ಒಬ್ಬರ ನಂತರ ಮತ್ತೊಬ್ಬರಂತೆ ಬಂದ ಪರಕೀಯರು ಕಾಲಾಂತರದಲ್ಲಿ ಇಲ್ಲಿಯೇ ನೆಲೆಯೂರಿ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅಮೂಲಾಗ್ರವಾಗಿ ನಮ್ಮ ಸಂಸ್ಕೃತಿ, ಆಚಾರ ವಿಚಾರ ನಂಬಿಕೆಗಳ ಮೇಲೆ ಪ್ರಹಾರ ಮಾಡಿ ಮಾನಸಿಕವಾಗಿ ಪಾಶ್ಚಾತ್ಯರನ್ನಾಗಿಸಿದ್ದು ಇತಿಹಾಸ ಮಾತ್ರವಲ್ಲ ಅದರ ಕಹಿ ವರ್ತಮಾನದಲ್ಲೂ ಮುಂದುವರಿದಿರುವುದು ಅರಗಿಸಿಕೊಳ್ಳಲಾರದ ತುತ್ತು‌. ಪರಕೀಯರು ನಮ್ಮನ್ನು ಆಳ್ವಿಕೆ ಮಾಡುತ್ತಿದ್ದದ್ದೇನೋ ನಿಜ, ಆದರೆ ನಾವದನ್ನು ಒಪ್ಪಿಕೊಂಡು ತೆಪ್ಪಗೆ ಬಿದ್ದಿರಲಿಲ್ಲ ಅನ್ನುವಂತದ್ದು ಕೂಡ ಅಷ್ಟೇ ನಿಜ. ಎಲ್ಲೆಲ್ಲಿಗೆ ಯಾವಾಗಲೆಲ್ಲಾ ಹೊಡೆತ ಬಿತ್ತೋ ಆವಾಗಲೆಲ್ಲಾ ಆ ಭಾಗದ ಜನ ಸಂಘಟಿತರಾಗಿ ಪರಕೀಯರ ವಿರುದ್ಧ ಕ್ರಾಂತಿಯ ಕಹಳೆಯೂದಿದ್ದರು. ಗೆದ್ದರೋ ಸೋತರೋ ಅನ್ನುವುದಕ್ಕಿಂತಲೂ ಸಂಘರ್ಷದ ಹಾದಿಯೊಂದು ನಿರಂತರವಾಗಿ ಚಾಲ್ತಿಯಲ್ಲಿತ್ತು ಅನ್ನುವುದಂತೂ ಸತ್ಯ. ‌

ಅಂತಹದ್ದೇ ಕ್ರಾಂತಿಯೊಂದು ಸುಳ್ಯ ಮತ್ತು ಕೊಡಗು ಭಾಗದಲ್ಲಿ 1837 ರಲ್ಲಿ ನಡೆದು ಹೋಗಿತ್ತು. ಅಂದರೆ, ಯಾವ ಸಂಗ್ರಾಮವನ್ನು ನಾವು ಈ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅನ್ನುವ ಹೆಸರಿನಿಂದ ಕರೆಯುತ್ತೇವೆಯೋ ಅದಕ್ಕಿಂತಲೂ 20 ವರ್ಷಕ್ಕೆ ಮೊದಲೇ ಕೊಡಗು ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಅದ್ಭುತವಾದ ಕ್ರಾಂತಿಯೊಂದು ನಡೆದುಹೋಗಿತ್ತು. ಇದನ್ನು ಭಾರತದ ಸ್ವಾತಂತ್ರ್ಯ ಹೋರಾಟವೆಂದು ಕರೆಯಬೇಕೋ ಅಥವಾ ಭಾಗಶಃ ನಡೆದ ಹೋರಾಟವಾದ್ದರಿಂದ ಬ್ರಿಟಿಷರ ವಿರುದ್ಧದ ರೈತಬಂಡಾಯವೆಂದು ಕರೆಯಬೇಕೋ ಅನ್ನುವಂತಹ ಜಿಜ್ಞಾಸೆ ಒಂದು ಕಡೆಯಿದ್ದರೂ ಈ ಹೋರಾಟ ಬ್ರಿಟಿಷರ ನಿದ್ದೆಗೆಡಿಸಿ ಬಿಸಿ ಮುಟ್ಟಿಸಿದ್ದಂತೂ ಸತ್ಯ.!

ಬಹುಶಃ ತೀರಾ ಇತ್ತೀಚಿನವರೆಗೂ ಮುದ್ರಿತ ಇತಿಹಾಸದ ಪುಟಗಳಲ್ಲಿ ಈ ಹೋರಾಟದ ಕುರುಹುಗಳು ಕಂಡುಬಂದದ್ದು ಬಹಳ‌ ಕಡಿಮೆಯೆಂದೇ ಹೇಳಬಹುದು. ಯಾಕೆಂದರೆ ಅದಕ್ಕೆ ಕಾರಣವೂ ಇತ್ತು. ಆಗಿನ ಕಾಲದ ಹೋರಾಟದ ಸುಳಿವುಗಳು ಬ್ರಿಟಿಷರಿಗೆ ಸಿಗಬಾರದು ಅನ್ನುವ ಕಾರಣಕ್ಕಾಗಿ ಅದರ ದಾಖಲೆಗಳನ್ನು ಆಗಿಂದಾಗ್ಗೆ ಅಳಿಸುತ್ತಿದ್ದರು ಅನ್ನುವುದು ಕೆಲವರ ಅಭಿಪ್ರಾಯ. ಬ್ರಿಟಿಷರಿಗಿಂತಲೂ ಅವರ ಕೈಕೆಳಗೆ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದ ನಮ್ಮವರೇ ನಮ್ಮ ಹೋರಾಟದ ಸೂತ್ರಗಳನ್ನು ಬ್ರಿಟಿಷರಿಗೆ ತಲುಪಿಸುವ ಭಯವೂ ಹೋರಾಟಗಾರರಿಗೆ ಇತ್ತು. ಈ ಎಲ್ಲ ಕಾರಣದಿಂದಾಗಿ 1837 ರಲ್ಲಿ ನಡೆದ ಅಭೂತಪೂರ್ವ ಐತಿಹಾಸಿಕ ಹೋರಾಟವೊಂದು ಪೂರಕ ದಾಖಲೆಗಳ‌ ಅಲಭ್ಯತೆ ಹಾಗೂ ಇತಿಹಾಸಕಾರರ ಅವಗಣನೆಯಿಂದಾಗಿ ಇತಿಹಾಸದ ಪುಟಗಳಲ್ಲಿ ಅಷ್ಟಾಗಿ ಮನ್ನಣೆ ಗಳಿಸಿಲ್ಲವೆಂಬುದು ಹಿರಿಯರ ಅಭಿಪ್ರಾಯ.

ಈ ಹೋರಾಟದ ಕುರಿತಾಗಿ ಪ್ರಸ್ತುತ ಒಂದಷ್ಟು ಕೃತಿಗಳು ಲಭ್ಯ. ದೇವಿಪ್ರಸಾದ್ ಸಂಪಾಜೆಯವರು ಬರೆದ ಅಮರ ಸುಳ್ಯದ ಸ್ವಾತಂತ್ರ್ಯ ಸಮರ, ನಿರಂಜನರು ಬರೆದ ಕಲ್ಯಾಣಸ್ವಾಮಿ ಹಾಗೂ ಇನ್ನಿತರ ಕೃತಿಗಳನ್ನು ಆಧಾರಗ್ರಂಥವಾಗಿಸಿ ಡಾ.ಪ್ರಭಾಕರ ಶಿಶಿಲರು ಮೂಡಣದ ಕೆಂಪು ಕಿರಣ ಕಾದಂಬರಿಯನ್ನೂ ಇದೇ ವಿಷಯದ ಮೇಲೆ ರಚಿಸಿದ್ದಾರೆ. ಈ ಕಾದಂಬರಿಯ ಮೂಲ ಕಥಾವಸ್ತು ಅಮರ ಸುಳ್ಯದ ಕ್ರಾಂತಿಯೇ ಆಗಿದ್ದರೂ ಅದನ್ನು ಕೇವಲ ಹೋರಾಟಕ್ಕೆ ಸೀಮಿತವಾಗಿಸದೇ ಹೋರಾಟಗಾರರ ಮನೆ, ಕುಟುಂಬ, ಪ್ರೀತಿ, ದಾಂಪತ್ಯ, ಶೃಂಗಾರ ಮುಂತಾದ ಭಾವನಾತ್ಮಕ ಸಂಗತಿಗಳನ್ನು ಕೂಡ ತಂದು ಓದುಗರ ಹೃದಯಕ್ಕೆ ಹೆಚ್ಚು ಹತ್ತಿರವಾಗಿಸಿದ್ದಾರೆ.

ಅದು ಪೂಮಲೆಯ ತಪ್ಪಲಿನ ಕೆದಂಬಾಡಿ. ಆ ದಿನ ಕೆದಂಬಾಡಿ ರಾಮಗೌಡರ ಮಗ ಭೋಜಪ್ಪನ ಮದುವೆ. ಆದರೆ ನೆಂಟರ ಹೆಸರಿನಲ್ಲಿ ಅಂಗಳದಲ್ಲಿ ಓಡಾಡುತ್ತಿದ್ದವರೆಲ್ಲಾ ಅಪರಿಚಿತ ವ್ಯಕ್ತಿಗಳು.! ನವವಧುವಿಗೋ ಅಚ್ಚರಿ! ಅರೇ, ತನ್ನ ಗಂಡನಿಗೆ ಇಷ್ಟೊಂದು ಬಂಧು ಬಾಂಧವರಿದ್ದಾರೆಯೇ? ಆದರೆ ವಾಸ್ತವದ ಸಂಗತಿಯೇ ಬೇರೆ. ಮದುವೆಯ ಚಪ್ಪರದ ಅಡಿಯಲ್ಲೇ ಬ್ರಿಟಿಷರ ವಿರುದ್ಧದ ಕ್ರಾಂತಿಕಾರ್ಯಕ್ಕೂ ಒಂದು ದಂಡು ಸಿದ್ದವಾಗುತ್ತಿತ್ತು! ಕ್ರಾಂತಿ ಕಾರ್ಯಕ್ಕೋಸ್ಕರ ಜನರನ್ನು ಸಂಘಟಿಸಿದರೆ ಬ್ರಿಟಿಷರಿಗೆ ಬಹುಬೇಗ ಸುದ್ದಿ ತಲುಪಬಹುದು ಅನ್ನುವ ಕಾರಣಕ್ಕಾಗಿ ತನ್ನದೇ ಮಗನ ಮದುವೆಯ ಹೆಸರಿನಲ್ಲಿ ರೈತರ ದಂಡನ್ನೂ ಕೂಡಾ ಒಟ್ಟು ಸೇರಿಸಿದ ಕೆದಂಬಾಡಿ ರಾಮಗೌಡರು ಬ್ರಿಟಿಷರಿಗೆ ಸಂಶಯ ಬರದ ರೀತಿಯಲ್ಲಿ ಮದುವೆ ಸಂಭ್ರಮ ಮತ್ತು ಕ್ರಾಂತಿಕಾರ್ಯ ಎರಡನ್ನೂ ಏಕಕಾಲದಲ್ಲಿ ನಿಭಾಯಿಸುವ ಎದೆಗಾರಿಕೆ ತೋರಿಸಿದ್ದರು! ಮುಂದೆ ಇಂತಹದ್ದೊಂದು ಕ್ರಾಂತಿ ಕಾರ್ಯ ನಡೆಯಲಿದೆ ಅನ್ನುವ ಯಾವ ವಿಚಾರವನ್ನು ಗ್ರಹಿಸಿರದ ನವವಧು ಗಂಗಮ್ಮ ಮಾತ್ರ ಮದುವೆಯ ಗುಂಗಿನಲ್ಲೇ ಮೈಮರೆತಿದ್ದಳು. ಆದರೆ ಮದುಮಗ ಭೋಜಪ್ಪನ ಮನಸ್ಸಿನಲ್ಲಿ ಮಾತ್ರ ಕ್ರಾಂತಿಕಾರ್ಯದ ಬಿರುಸಿನ ತರಂಗಗಳು..! ಈ ಎಲ್ಲಾ ಸಂಗತಿಗಳನ್ನು ಬಹಳಷ್ಟು ಮನಮುಟ್ಟುವಂತೆ ಚಿತ್ರಿಸಿದ್ದಾರೆ ಲೇಖಕರಾದ ಡಾ.ಪ್ರಭಾಕರ ಶಿಶಿಲರು‌.

ಮದುವೆಯ ಶಾಸ್ತ್ರ ಮುಗಿಸಿದ ನವದಂಪತಿಗಳ ಪ್ರಥಮ ರಾತ್ರಿಯ ಶೃಂಗಾರಭರಿತ ಸನ್ನಿವೇಶವನ್ನು ಕೂಡ ಸೊಗಸಾಗಿ ಚಿತ್ರಿಸುವ ಲೇಖಕರು ಕ್ರಾಂತಿಯ ಆರಂಭದ ಒಂದಷ್ಟು ಭಾಗದಲ್ಲಿ ಓದುಗರಿಗೆ ಕಚಗುಳಿಯನ್ನು ಕೊಟ್ಟು ಬಿಡುತ್ತಾರೆ. ಆಗಿನ ಕಾಲದ ಮದುವೆ ಸಂಪ್ರದಾಯಗಳು, ವಾಹನ ಸೌಕರ್ಯವಿಲ್ಲದ ಆ ಕಾಲದಲ್ಲಿ ದೊಂದಿ ಬೆಳಕಿನ ಪಾದಯಾತ್ರೆಯ‌ ದಿಬ್ಬಣ, ಊಟದ ಹೊತ್ತಿಗಷ್ಟೇ ಬಂದು ಓಡುವ ಇಂದಿನ ಗಡಿಬಿಡಿಯ ನೆಂಟರಿಗೂ ಮದುವೆಯ ಸಂಭ್ರಮದಲ್ಲೇ ವಾರಗಟ್ಟಲೇ ಬಂದು ಸೇರುತ್ತಿದ್ದ ಅಂದಿನ ಬಂಧುಗಳಿಗೂ ಇರುವ ವ್ಯತ್ಯಾಸ… ಹೀಗೆ ತಲೆಮಾರುಗಳ ಹಿಂದಕ್ಕೋಡಿದಂತಹ ಕಲ್ಪನಾಲೋಕದ ಅನುಭವ ಕೃತಿಯ ಆರಂಭದಲ್ಲಿ ಉಂಟಾಗುತ್ತದೆ.

ತನ್ನ ಪತಿ ಮರುದಿನ ದಂಡಿನ ಜೊತೆ ಸೇರಿ ಬ್ರಿಟಿಷರ ವಿರುದ್ಧ ಕ್ರಾಂತಿ ಕಾರ್ಯಕ್ಕೆ ಧುಮುಕುತ್ತಾನೆ ಅನ್ನುವ ಕಲ್ಪನೆಯೂ ನವವಧು ಗಂಗಮ್ಮಳಿಗಿರಲಿಲ್ಲ. ನಾಡಿಗೆ ಬಂದೆರಗಿದ ಸಂದಿಗ್ಧ ಪರಿಸ್ಥಿತಿಯನ್ನು ವಿವರಿಸಿ ಇಂತಹ ಸಂದರ್ಭದಲ್ಲಿ ನನ್ನ ಜೊತೆಗಾರರೆಲ್ಲಾ ದಂಡಿನ ಜೊತೆಗೆ ಹೊರಟು ನಿಂತಿರಬೇಕಾದರೆ ನಾನು ಮಾತ್ರ ಸುಖವನ್ನು ಅನುಭವಿಸುತ್ತಾ ಇಲ್ಲಿಯೇ ಬಿದ್ದಿರುವುದು ಎಲ್ಲಿಯ ನ್ಯಾಯ ಅನ್ನುತ್ತಲೇ ಗಂಗಮ್ಮಳ ಮನವೊಲಿಸಿದ ಭೋಜಪ್ಪ ಮದುವೆಯ ಮರುದಿನವೇ ದಂಡಿಗೆ ಹೊರಡುವ ಭಾವಪೂರ್ಣ ಸನ್ನಿವೇಶ ಎಂತವರ ಮನಸ್ಸನ್ನೂ ಕಲಕಿಬಿಡುತ್ತದೆ. ತಾಯ್ನಾಡಿನ ಮುಕ್ತಿಗೋಸ್ಕರ ನಮ್ಮ ಪೂರ್ವಜರು ಎಂತಹ ತ್ಯಾಗಕ್ಕೂ ಸಿದ್ದರಾಗಿದ್ದರು ಅನ್ನುವುದಕ್ಕೆ ಇದೊಂದು ಸ್ಪಷ್ಟವಾದ ನಿದರ್ಶನ.

ದೇಶದ ಸ್ವಾತಂತ್ರ್ಯ ಇತಿಹಾಸದಲ್ಲಿ ಅದೆಷ್ಟೋ ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಿದ್ದನ್ನು ನಾವೆಲ್ಲ ತಿಳಿದಿದ್ದೇವೆ. ಅದೇ ತರಹ ಕೊಡಗು ಮತ್ತು ದಕ್ಷಿಣ ಕನ್ನಡ ಭಾಗದಲ್ಲೂ ಅಂತಹ ಬಲಿದಾನಗಳು ನಡೆದುಹೋಗಿತ್ತು, ಇಲ್ಲಿಯೂ ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಲಾಗಿತ್ತು. ಅವೈಜ್ಞಾನಿಕ ತೆರಿಗೆ ಪದ್ಧತಿಯೂ ಸೇರಿದಂತೆ ಒಂದಷ್ಟು ಅವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಇಲ್ಲಿನ ರೈತಾಪಿ ವರ್ಗದವರು ಬ್ರಿಟಿಷರನ್ನು ಮಟ್ಟ ಹಾಕುವ ಸಲುವಾಗಿ ಸಂಘಟಿತರಾಗಿ ಬೆಳ್ಳಾರೆ ಮಾರ್ಗವಾಗಿ ಸಂಚರಿಸಿ ಖಜಾನೆಯನ್ನು ವಶಪಡಿಸಿಕೊಂಡು ಅಲ್ಲಿಂದ ಮುಂದಕ್ಕೆ ಮಂಗಳೂರು ಸೇರಿ ಸ್ವತಂತ್ರ ಧ್ವಜವನ್ನು ಹಾರಿಸಿ ಬ್ರಿಟಿಷರನ್ನು ಓಡಿಸಿದ ಅಭೂತಪೂರ್ವ ಶೌರ್ಯ ಸಾಹಸದ ಮೈನವಿರೇಳಿಸುವ ಕಥನದ ಎಳೆ ಎಳೆಯಾದ ಮಾಹಿತಿಯನ್ನು ಮೂಡಣದ ಕೆಂಪು ಕಿರಣದಲ್ಲಿ ಓದಬಹುದು.

ರೈತರು ಸಿಡಿದೆದ್ದದ್ದು ಯಾವೆಲ್ಲ ಕಾರಣಕ್ಕಾಗಿ? ಆ ಕಾಲದಲ್ಲಿ ಸಂಘಟನೆ ಹೇಗೆ ಸಾಧ್ಯವಾಯಿತು? ಅತ್ಯಂತ ವ್ಯವಸ್ಥಿತವಾಗಿ ಯೋಜನೆಯ ರೂಪುರೇಷೆ ಹಾಕಿದವರು ಯಾರು? ಗಲ್ಲಿಗೇರಿಸಲ್ಪಟ್ಟ ವೀರರು ಯಾರು? ಮಂಗಳೂರಿನಲ್ಲಿದ್ದ ಬ್ರಿಟಿಷ್ ಅಧಿಕಾರಿ ಏಕೆ ಪರಾರಿಯಾದ? ನಾಡನ್ನು ಮುಕ್ತವೆಂದು ಘೋಷಿಸಿ ಸ್ವತಂತ್ರ ಧ್ವಜವನ್ನು ಹಾರಿಸಿದ ಸ್ಥಳವಾದರೂ ಎಲ್ಲಿ? ಇವೆಲ್ಲಾ ಕುತೂಹಲವನ್ನು ತಣಿಸುವುದಕ್ಕಾಗಿ ಓದಲೇಬೇಕಾದ ಕೃತಿ ಮೂಡಣದ ಕೆಂಪು ಕಿರಣ.

IMG 20220109 WA0005 min
ಉದಯಭಾಸ್ಕರ್

ಉದಯಭಾಸ್ಕರ್ ಸುಳ್ಯ ಅವರ ಹುಟ್ಟೂರು ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುಂಬಳಚೇರಿ, ಪ್ರಸ್ತುತ ಸುಳ್ಯ ನಿವಾಸಿ‌. ಸ್ವ ಉದ್ಯೋಗದೊಂದಿಗೆ ಬರವಣಿಗೆಯನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಇವರು ಕನ್ನಡ, ಅರೆಭಾಷೆ, ತುಳು, ಮಲಯಾಳಂ ಭಾಷೆಗಳಲ್ಲಿ ಸಾಹಿತ್ಯ ರಚಿಸಬಲ್ಲವರಾಗಿದ್ದು 700 ಕ್ಕಿಂತಲೂ ಅಧಿಕ ಸಾಹಿತ್ಯ ರಚಿಸಿದ್ದಾರೆ. ಆಕಾಶವಾಣಿ ಮಂಗಳೂರು ಮತ್ತು ಪುತ್ತೂರಿನ ರೇಡಿಯೋ ಪಾಂಚಜನ್ಯದಲ್ಲಿ ಇವರ ಕವನ ವಾಚನ ಪ್ರಸಾರಗೊಂಡಿದ್ದು ಅನೇಕ ರಚನೆಗಳು ಆಡಿಯೋ ರೂಪದಲ್ಲಿ ಯೂ ಟ್ಯೂಬ್ ನಲ್ಲಿ ಲಭ್ಯವಿದೆ. ಸಾಹಿತ್ಯದ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿರುವ ಇವರು ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಅದರ ಮೂಲಕ ರೋಗಿಗಳಿಗೆ ರಕ್ತ ಪೂರೈಕೆ ಮತ್ತು ಕ್ಯಾನ್ಸರ್ ಪೀಡಿತರಿಗೆ ಕೂದಲು ತಲುಪಿಸುವ ಸೇವಾ ಚಟುವಟಿಕೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಕಾರ್ಯಕ್ರಮ ನಿರೂಪಣೆ, ಹಿನ್ನೆಲೆ ಧ್ವನಿ, ಧಾರ್ಮಿಕ ಭಾಷಣ, ವಿಮರ್ಶೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

Sharing Is Caring:

Leave a Comment