ನೀವು ನನ್ನ ಫೇವರಿಟ್ ಸರ್…. But not now…! – ಶಿಕ್ಷಕನ ಡೈರಿಯಿಂದ 55

WhatsApp Group Join Now
Telegram Group Join Now

ಶಿಕ್ಷಕನ ಡೈರಿಯಿಂದ

ನೀವು ನನ್ನ ಫೇವರಿಟ್ ಸರ್…. But not now…!

      "ನನಗೆ ನೀವೊಂದು ಪತ್ರ ಬರೆಯಬೇಕು‌" ಎಂದು ಮಕ್ಕಳಲ್ಲಿ ಹೇಳುವಾಗ ಮಕ್ಕಳ ನೈಜ ಅಭಿಪ್ರಾಯ ಮತ್ತು ಒಳ್ಳೆಯ ಸಲಹೆ ಬರಬೇಕೆಂದು ನಾನು ಅಪೇಕ್ಷಿಸಿದ್ದೇನೋ ನಿಜ.. ಆದರೆ ಇಷ್ಟೊಂದು ದಿಟ್ಟ ಮತ್ತು ನೇರ ಅಭಿಪ್ರಾಯದ ಪತ್ರವನ್ನು ನಾನು ನಿರೀಕ್ಷಿಸಿರಲಿಲ್ಲ... 

     ಬರಾಕ್ ಒಬಾಮ ತನ್ನ ಮಕ್ಕಳಿಗೆ ಬರೆದ ಪತ್ರವೊಂದು ಆರನೇ ತರಗತಿಯ ಇಂಗ್ಲೀಷ್ ಪಠ್ಯದಲ್ಲಿದೆ‌. ಆ ಪಠ್ಯದ ಓದಿನ ನಂತರ ಮಕ್ಕಳಲ್ಲಿ ನನಗೊಂದು‌ ಪತ್ರ ಬರೆಯಲು ಹೇಳುವುದು ನನ್ನ ಪ್ರತೀ ವರ್ಷದ ಅಭ್ಯಾಸ. ಆ ಪತ್ರದ ಮೂಲಕ  ಮಕ್ಕಳು ನನ್ನ ಕುರಿತಾದ ಅಭಿಪ್ರಾಯಗಳನ್ನೆಲ್ಲಾ ವ್ಯಕ್ತಪಡಿಸಬೇಕೆಂಬುದು ನನ್ನ ಉದ್ದೇಶವಾಗಿರುತ್ತಿತ್ತಾದರೂ ಸಣ್ಣ ಪುಟ್ಟ ಸಲಹೆಗಳನ್ನು  ಹೊರತುಪಡಿಸಿದರೆ , ಅದರಲ್ಲಿರುತ್ತಿದ್ದುದು  ನನ್ನ ಕುರಿತಾದ ಹೊಗಳಿಕೆಯಷ್ಟೇ. 

     ಅಂಜಲಿ ಎಂಬ ಈ ಹುಡುಗಿ ಬರೆದ ಪತ್ರವನ್ನು ನಿಮ್ಮ ಮುಂದಿಡುವ ಮೊದಲು ಅದರ ಹಿನ್ನೆಲೆಯನ್ನು ನಾನು ಬರೆಯಲೇಬೇಕು. ಉಳಿದ ತರಗತಿಯ ಬ್ಯಾಚ್ಗಳಿಗೆ ಹೋಲಿಸಿದರೆ ಅಂಜಲಿಯ ತರಗತಿಯಲ್ಲಿದ್ದುದು ವಿಪರೀತ ತಂಟೆಯ ಮಕ್ಕಳು. ತರಗತಿಯಲ್ಲೂ ಅವರನ್ನು ನಿಯಂತ್ರಿಸುವುದು ಕಷ್ಟವೇ ಇತ್ತು. ದೊಡ್ಡ ಅಪರಾಧಗಳನ್ನೇನೂ ಮಾಡದಿದ್ದರೂ ಶಿಕ್ಷಕರ ನಿಯಂತ್ರಣಕ್ಕೇ ಸಿಕ್ಕದ ಅವರ ವರ್ತನೆಯ ಸಂತ್ರಸ್ತರಾಗಿಬಿಟ್ಟಿದ್ದೆವು ಶಿಕ್ಷಕರಾದ ನಾವುಗಳು.. ಅಂತಿಪ್ಪ‌ ತರಗತಿಯಲ್ಲಿಯೂ  ನೀರ‌ ನಡುವಿನ ಪದ್ಮಪತ್ರದ ಹಾಗಿದ್ದವರು ಅಂಜಲಿ ಮತ್ತು ಅವಳ ಗೆಳತಿ ಪ್ರಿಯಾ.

       ಮುಖ್ಯೋಪಾಧ್ಯಾಯನ ಹೊಣೆಯನ್ನು ಹೊತ್ತ ಬಳಿಕ ನನ್ನೊಳಗಿನ ಒತ್ತಡಗಳನ್ನು ಮಕ್ಕಳ‌ ತಪ್ಪುಗಳ ಕುರಿತಾಗಿ ಅಸಹನೆಯನ್ನು ತೀವ್ರವಾಗಿ ವ್ಯಕ್ತಪಡಿಸುವ ಮೂಲಕ ಹೊರಹಾಕುವುದು ನನ್ನ ಅಭ್ಯಾಸವಾಗಿಬಿಟ್ಟಿತ್ತು. ಸಹಜವಾಗಿಯೇ ಈ ತೀವ್ರತೆ‌ ಆರನೆಯ ತರಗತಿಯ ಮಕ್ಕಳಿಗೆ ಅತೀ ಹೆಚ್ಚು ತಟ್ಟುತ್ತಿತ್ತು. ಅದಕ್ಕೆ ಸರಿಯಾಗಿ ಐದನೇ ತರಗತಿಯ ಮಕ್ಕಳು ಶಾಲಾ ಚಟುವಟಿಕೆಗಳೆಲ್ಲದರಲ್ಲಿ ಬಹಳ ಚೆಂದದಿಂದ ಭಾಗವಹಿಸುತ್ತಾ ನಮ್ಮ ಅಭಿಮಾನಕ್ಕೆ ಪಾತ್ರರಾಗುತ್ತಿದ್ದರು. 

     ಅದೊಂದು ದಿನ ನನಗೆ ಐದನೇ ತರಗತಿಯ ಮಕ್ಕಳ ಬಗ್ಗೆ ವಿಪರೀತ‌ ಖುಷಿಯಾಗಿತ್ತು. ಬೆಳಗಿನ ಅಸೆಂಬ್ಲಿಯಲ್ಲಿ  ಆ ಮಕ್ಕಳ ಕುರಿತಾಗಿ ಮೆಚ್ಚುಗೆಯ ಮಳೆ ಸುರಿಸಿದೆ. ಅವರನ್ನು ಹೊಗಳಿದವನಿಗೆ ಆರನೆಯ ತರಗತಿಯ ಮಕ್ಕಳ ಬಗ್ಗೆಯೂ ಒಂದಿಷ್ಟು ಮಾತಾಡಿದೆ. ಇಂತಹ‌ ಸಂದರ್ಭದಲ್ಲಿ ‌ನಾವುಗಳು ಹೇಗೆ ಮಾತಾಡುತ್ತೇವೆಂದು ನಿಮಗೆ ತಿಳಿದಿದೆಯಲ್ಲಾ.. ನನ್ನ ಮಾತು ಆರನೆಯ ತರಗತಿಯ ಮಕ್ಕಳು ಸರಿಯಿಲ್ಲವೆಂದೂ, ಐದನೇ ತರಗತಿಯ ಮಕ್ಕಳಿಂದ ಅವರು ಕಲಿಯಬೇಕೆಂದೂ ಧ್ವನಿಸಿತ್ತು.

     ಅದಕ್ಕೆ ಒಂದೋ ಎರಡೋ ದಿನಗಳ ಹಿಂದಷ್ಟೆ‌ ಆರನೇ ತರಗತಿಯ ಮಕ್ಕಳಿಗೆ ಪತ್ರ ಬರೆಯಲು ತಿಳಿಸಿದ್ದೆ... ಬಹುಶಃ ಅಸೆಂಬ್ಲಿ ಮುಗಿದ ಕೂಡಲೇ ಅಂಜಲಿ ಪತ್ರ ಬರೆಯಲು‌ ಪ್ರಾರಂಭಿಸಿರಬೇಕು. ಮಧ್ಯಾಹ್ನದೊಳಗೆ ಅವಳೇ ತಯಾರಿಸಿದ ಚೆಂದದ ಕವರಿನೊಳಗಿದ್ದ ಪತ್ರ ನನ್ನ‌ ಕೈ ಸೇರಿತ್ತು. ಇನ್ನು ಮುಂದೆ ನೀವು ಓದಲಿರುವುದು ಅವಳದ್ದೇ ವಾಕ್ಯಗಳು....

   "My dear Sir,
ನನ್ನ ಪೂಜ್ಯರಾದ ಶಿಕ್ಷಕರಿಗೆ ನಾನು ಮಾಡುವ ವಂದನೆಗಳು. ಮೊದಲು ನನಗೆ ನೀವು ನನ್ನ favourite sir. But not now.. because you always support to 5th standard student only. but not you only, every teacher support them. When nivedan came to this school you support 5th standard .Why? This is my question"

          ನಿವೇದನ್ ಹೆಸರು ಇಲ್ಲಿ ಬಂದಿದ್ದು ನನಗೆ ಅಚ್ಚರಿ. ಆತ ಐದನೇ ತರಗತಿಯ ವಿದ್ಯಾರ್ಥಿ. ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಮಗ. ಅವನ ಪೋಷಕರು ಶಾಲೆಯ ಬಹುದೊಡ್ಡ ದಾನಿಗಳು . ಅವನು ಶಾಲೆಗೆ ಸೇರಿದ ನಂತರ ನಾವು ಆ ತರಗತಿಯನ್ನು ಹೊಗಳುತ್ತಿದ್ದೇವೆ ಎಂಬ ಊಹೆಯನ್ನು ಬಹುಶಃ ಈ ಮಕ್ಕಳು ಮಾಡಿಕೊಂಡಿದ್ದರು. ಇದು   ತಪ್ಪು ಗ್ರಹಿಕೆಯಾಗಿದ್ದರೂ ಕೂಡ, ಅಂಜಲಿ ಅದನ್ನು ಉಲ್ಲೇಖಿಸಿದ್ದು ಒಳ್ಳೆಯದೇ ಆಯಿತು ಎಂದು ನಾನಂದುಕೊಂಡೆ. ಮಕ್ಕಳು ಯಾವೆಲ್ಲ ರೀತಿಯಲ್ಲಿ ಯೋಚಿಸಬಹುದು ಎಂಬ ಕಲ್ಪನೆಯೇ ನಮಗಿರಲಿಲ್ಲ ನೋಡಿ.. ನಾನು ಪತ್ರದ ಓದನ್ನು ಮುಂದುವರಿಸಿದೆ.

       "ಅಸೆಂಬ್ಲಿ ಸಮಯದಲ್ಲಿ ನಮ್ಮ ಕ್ಲಾಸಿನ ಮಕ್ಕಳ ತಪ್ಪು ಮಾತ್ರ ಹುಡುಕುತ್ತೀರಿ. ಒಳ್ಳೆಯ ಕೆಲಸ ಮಾಡಿದರೆ ಎಂದೂ ಕೂಡ ಹೊಗಳಲಿಲ್ಲ. ಇದು ನನ್ನೊಬ್ಬಳ ಅನಿಸಿಕೆ ಏನಲ್ಲ. ಆರನೇ ತರಗತಿಯ ಎಲ್ಲ ವಿದ್ಯಾರ್ಥಿಗಳ ಮನಸ್ಸಿನ ಮಾತು ಹೌದು ಎಂದು ಭಾವಿಸಿದ್ದೇನೆ. ಯಾರಿಗೂ ನಿಮ್ಮ ಮುಂದೆ ಈ ವಿಚಾರ ತಿಳಿಸಲು ಹೆದರುತ್ತಾರೆ. ಅದರಲ್ಲಿ ನಾನು ಕೂಡ. ಹೀಗಾಗಿ ನಾನು ಪತ್ರ ಬರೆದಿದ್ದೇನೆ. ಸರ್... ನಮ್ಮ ಕ್ಲಾಸ್ ಮಾಡಿದ ತಪ್ಪಿಗೆ ನಾನು ಕ್ಷಮೆ ಕೇಳುತ್ತೇನೆ. ನಮ್ಮ ಕ್ಲಾಸ್ ಮಕ್ಕಳು ನಿಮಗೆ ಪಾಠ ಮಾಡಲು ತುಂಬಾ ಡಿಸ್ಟರ್ಬ್ ಮಾಡಿದ್ದಾರೆ. ನಿಮಗೆ ಮಾತ್ರ ಅಲ್ಲ, ಎಲ್ಲ ಪಿರಿಯಡ್ಗಳಲ್ಲಿ ಡಿಸ್ಟರ್ಬ್ ಮಾಡುತ್ತಾರೆ. ನಮ್ಮ ಕ್ಲಾಸಿನ ಮೂರು ನಾಲ್ಕು ಜನ ನಮ್ಮ ಕ್ಲಾಸನ್ನೇ ಹಾಳು ಮಾಡುತ್ತಾರೆ. ನಮ್ಮ ಕ್ಲಾಸನ್ನು ದ್ವೇಷ ಮಾಡುವುದನ್ನು ಬಿಟ್ಟು ಇಷ್ಟ ಪಡುತ್ತೀರಾ? ನಮ್ಮ ಕ್ಲಾಸ್ ಮಾಡಿದ ತಪ್ಪಿಗೆ ನೀವು ಇಷ್ಟಪಡುವುದಿಲ್ಲ. ನನಗೆ ಗೊತ್ತು, ಆದರೂ ಕೇಳಿದೆ. ಸರ್, ನಾನು ಈ ಪತ್ರದಲ್ಲಿ ಏನಾದರೂ ತಪ್ಪು ಬರೆದಿದ್ದರೆ ನನ್ನನ್ನು ಕ್ಷಮಿಸಿ. ನನ್ನನ್ನು ಮತ್ತು ನಮ್ಮ ಕ್ಲಾಸನ್ನು ದ್ವೇಷ ಮಾಡಬೇಡಿ ಪ್ಲೀಸ್.. bye bye sir.. don't discuss with other teachers and students.
                  Your student,
                        Anjali"

   ಆ ಒಂದೇ ದಿನದಲ್ಲಿ ನಾನು ಹತ್ತಕ್ಕಿಂತ ಹೆಚ್ಚು ಬಾರಿ ಆ ಪತ್ರ ಓದಿದ್ದೆ. ಪ್ರತಿ ಬಾರಿ ಓದಿದಾಗಲೂ ಮನಸ್ಸು ಭಾರವಾಗಿತ್ತು. ಕಣ್ಣುಗಳು ತೇವಗೊಂಡಿದ್ದವು. ವಿದ್ಯಾರ್ಥಿನಿಯೊಬ್ಬಳು ಇಷ್ಟು‌ ನೇರವಾಗಿ‌, ಆದರೆ ಸೌಜನ್ಯಪೂರ್ಣವಾಗಿ ನನ್ನನ್ನು‌ ಟೀಕಿಸಿದ್ದು, ಆಕೆ ನನಗೆ ನೀಡಿದ ಅತೀ ದೊಡ್ಡ ಗೌರವ ಎಂದೇ ನನಗನಿಸಿತ್ತು. ಈ ಒಂದು ಪತ್ರ ಅಂಜಲಿಯನ್ನು ನನ್ನ ಅಚ್ಚುಮೆಚ್ಚಿನ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಮೊದಲಿನ ಸಾಲಿಗೆ ತಂದುಬಿಟ್ಟಿತ್ತು.

         ಈ ಪತ್ರದ ನಂತರ ನನ್ನಲ್ಲಾದ ಬದಲಾವಣೆಯನ್ನು ಅಂಜಲಿ ಗುರುತಿಸಿದ್ದಳೋ ಇಲ್ಲವೋ ಗೊತ್ತಿಲ್ಲ.. ಆದರೆ ನಾನಂತೂ ತುಂಬಾ ಬದಲಾಗಿದ್ದೆ.

            -ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏Mob:97417 02799

WhatsApp Group Join Now
Telegram Group Join Now
Sharing Is Caring:

Leave a Comment