ಸೈಕಲ್ ಕಾಣೆಯಾಗಿತ್ತು.! – ಶಿಕ್ಷಕನ ಡೈರಿಯಿಂದ 52

ಶಿಕ್ಷಕನ‌ ಡೈರಿಯಿಂದ

ಸೈಕಲ್ ಕಾಣೆಯಾಗಿತ್ತು.!

        "ರಾಹುಲನ ಸೈಕಲ್ ಕಳೆದುಹೋಗಿದೆಯಂತೆ.. ಅಲ್ಲೆಲ್ಲಾ ಹುಡುಕಿ ಬಂದೆವು.. ಸಿಗಲಿಲ್ಲ" ನನ್ನ ಮನೆಯೆದುರಿನ ರಸ್ತೆಯಲ್ಲಿ ನನ್ನ ನೆರೆಹೊರೆಯ ಯುವಕರ ಗುಂಪು ಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿ ನಾನೂ ಅವರ ಜೊತೆಯಾದೆ. ರಾಹುಲ ನಮ್ಮ ಶಾಲೆಯ ಆರನೇ ತರಗತಿಯ ಹುಡುಗ. ಅವನ ಮನೆ ಶಾಲೆಯಿಂದ ಅರ್ಧ ಕಿಲೋಮೀಟರ್ ದೂರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ನನ್ನ ಮನೆಯ ಸಮೀಪದಲ್ಲೇ ಇತ್ತು. ರಾಹುಲನ ಚಿಕ್ಕಪ್ಪ ರಾಹುಲನಿಗೆ ಸೈಕಲ್ ಉಡುಗೊರೆ ಕೊಟ್ಟು ಹೆಚ್ಚು ದಿನವೇನೂ ಆಗಿರಲಿಲ್ಲ.. ಆ ಸೈಕಲ್ ತಂದ ದಿನದಿಂದ ನಾನು ಸೈಕಲನ್ನೂ, ಅದರೊಂದಿಗೆ ರಾಹುಲನ ಬಾಂಧವ್ಯವನ್ನೂ ನೋಡಿಕೊಂಡೇ ಬಂದಿದ್ದೆ. ಎಂದೂ ಸೈಕಲನ್ನು ಶಾಲೆಯ ಬಳಿ ಕೊಂಡೊಯ್ಯದಿದ್ದ ರಾಹುಲ ಈ ದಿನ ಶಾಲೆಗೆ ಸೈಕಲ್ ಒಯ್ದಿದ್ದನಂತೆ.

       ಅದು ಶನಿವಾರವಾಗಿತ್ತು. ಆ ದಿನ ಶಾಲೆಯ ಸಮೀಪದಲ್ಲೇ ಸಣ್ಣ ಉತ್ಸವವೊಂದು ನಡೆಯುತ್ತಿತ್ತು. ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟ ನಂತರ ಶಾಲೆಯ ಹಲವು ಮಕ್ಕಳು‌ ಆ ಉತ್ಸವಕ್ಕೆ ಹೋಗಿದ್ದರು. ನಮ್ಮ ರಾಹುಲನೂ ಆ ಉತ್ಸವಕ್ಕೆ ಸೈಕಲಿನೊಂದಿಗೆ ಹೋಗಿದ್ದನಂತೆ. ಬಹಳ ಜಾಗ್ರತೆಯಿಂದ‌ ಸೈಕಲನ್ನು ಉತ್ಸವ ನಡೆಯುವ ಮೈದಾನದಿಂದ ಅನತಿ ದೂರದಲ್ಲಿರುವ ಪೊದೆಯ ಹಿಂದೆ ಇಟ್ಟು ಹೋಗಿದ್ದನಂತೆ. ಮರಳಿ ಬಂದು ನೋಡಿದರೆ‌ ಸೈಕಲ್‌ ಕಾಣೆಯಾಗಿತ್ತು.
        "ಆ ಕಡೆಯ ಇಬ್ಬರು ಮಕ್ಕಳು ಸೈಕಲೊಂದನ್ನು ತಳ್ಳಿಕೊಂಡು ಹೋಗುತ್ತಿದ್ದುದನ್ನು ಅಲ್ಲೊಬ್ಬರು‌ ನೋಡಿದ್ದಾರಂತೆ" ಎಂದನೊಬ್ಬ ಯುವಕ. "ಹಾಗಾದರೆ ಆ ಕಡೆ ಹೋಗಿ ಹುಡುಕೋಣ ಬನ್ನಿ.." ಎಂದರು ಇನ್ನಿಬ್ಬರು. ಅಷ್ಟರಲ್ಲಿ ಸೈಕಲ್ ಕಾಣೆಯಾದ ಸಮಯಕ್ಕೂ ಅಲ್ಲೊಬ್ಬರು ನೋಡಿದ ಸಮಯಕ್ಕೂ ತಾಳೆ ಬಂದಿರಲಿಲ್ಲವೆಂದು ಯುವಕರು ಸುಮ್ಮನಾದರು. ಆದರೆ ನನ್ನ ಮನಸ್ಸಿಗೊಂದು ಹುಳ ಬಿದ್ದಿತ್ತು.
 
       ನಮ್ಮದೇ ಶಾಲೆಯ ಹುಡುಗರಿಬ್ಬರು ಆ ದಿನ ಸಂಜೆ ಸೈಕಲನ್ನು ತಳ್ಳಿಕೊಂಡು ಹೋಗುತ್ತಿದ್ದುದನ್ನು ನಾನೂ ನೋಡಿದ್ದೆ‌. ಸೈಕಲನ್ನು ದೂಡಿಕೊಂಡು ಹೋಗುತ್ತಿದ್ದ ಮನೋಜ ಆಗಾಗ ತನ್ನ ಪೆದ್ದುತನವನ್ನೋ, ಮುಗ್ಧತೆಯನ್ನೋ ಪ್ರದರ್ಶಿಸುತ್ತಿದ್ದವನಾದರೂ ಸಣ್ಣ ಪುಟ್ಟ ತುಂಟತನವನ್ನೂ, ಅಶಿಸ್ತಿನ ವರ್ತನೆಯನ್ನೂ ತೋರಿಸುತ್ತಿದ್ದವ. ಅವನ ಜೊತೆಗಿದ್ದ ಮೌನೇಶ ಅವನಷ್ಟೇ ತುಂಟನಾದರೂ, ಅವನಿಗಿಂತ ಪ್ರಬುದ್ಧನೂ, ಬುದ್ಧಿವಂತನೂ ಆಗಿದ್ದವ. ಬೈಕಿನಲ್ಲಿ ಬರುತ್ತಿದ್ದ ನಾನು ಸೈಕಲ್ ತಳ್ಳಿಕೊಂಡು ಬರುತ್ತಿದ್ದ ಮನೋಜನನ್ನು ಕಂಡಾಗ 'ಓ.. ಹೊಸ ಸೈಕಲ್ಲೂ.. ' ಅಂತ ಉದ್ಗರಿಸಿ ಬಂದಿದ್ದೆ. ಯುವಕರೆದುರು ಆ ಹುಡುಗ‌ನ ಬಗ್ಗೆ ಹೇಳಹೊರಟವನು ಅಲ್ಲೇ ತಡೆದುಕೊಂಡೆ. ಮನೋಜ ತಳ್ಳಿಕೊಂಡು ಹೋಗುತ್ತಿದ್ದ ಸೈಕಲ್ಲಿನ ರೂಪವನ್ನು ನೆನಪಿಸಿಕೊಂಡೆ. ನಿಜ... ಅದು ರಾಹುಲನ ಸೈಕಲ್ಲಿನಂತೆಯೇ ಇತ್ತು. ನನಗೆ ಮನೋಜನ ಮನೆಗೊಮ್ಮೆ ಕರೆ ಮಾಡೋಣ ಎನಿಸಿತು. ಅದು ನಿಜವಾಗಿಯೂ ಮನೋಜನದೇ ಸೈಕಲಾಗಿದ್ದರೆ...? ಸುಖಾಸುಮ್ಮನೆ ಅವನ ಮೇಲೆ ಸಂಶಯಗೊಂಡರೆ ನನ್ನದೇ ತಪ್ಪಾದೀತು ಅಂದುಕೊಂಡೆ. ಮರುದಿನ ಅಂದರೆ ಭಾನುವಾರವೂ ನನ್ನ ಮನಸ್ಸಿನಲ್ಲಿ ಸೈಕಲಿನದೇ ಯೋಚನೆಯಿತ್ತು. ತುಂಬ ಯೋಚಿಸಿ, ಮನೋಜ ಕೊಂಡೊಯ್ಯುತ್ತಿದ್ದ ಸೈಕಲ್ ರಾಹುಲನದ್ದೇ ಎಂಬ ತೀರ್ಮಾನಕ್ಕೆ ಬಂದಿದ್ದ ನಾನು ಸೋಮವಾರ ಬೆಳಿಗ್ಗೆಯೇ ಅವನ ಬಾಯಿಬಿಡಿಸಬೇಕು ಅಂದುಕೊಂಡಿದ್ದೆ. ಆದರೂ ಮಗ ಯಾರದ್ದೋ ಸೈಕಲ್ ತಂದಿದ್ದರೆ ಮನೆಯವರಾದರೂ ಹೇಳಬೇಕಿತ್ತಲ್ಲ... ಅಥವಾ ಮನೆಯವರ ಬೆಂಬಲವೂ ಇದಕ್ಕಿರಬಹುದೇ ಎಂದೆಲ್ಲಾ ಯೋಚನೆಗಳು ಬರತೊಡಗಿದ್ದವು.

       ಸೋಮವಾರ ಬೆಳಿಗ್ಗೆ ನಾನು ಶಾಲೆಗೆ ಹೋಗುವಷ್ಟರಲ್ಲಿ ಮಕ್ಕಳೆಲ್ಲಾ ಪ್ರಕರಣದ ತೀರ್ಪನ್ನು ಸಿದ್ಧ ಮಾಡಿಟ್ಟಾಗಿತ್ತು. ರಾಹುಲನ ಸೈಕಲ್ ಕಳೆದುಹೋಗಿದೆ ಎಂಬ ಸುದ್ದಿ ಬೆಳ್ಳಂಬೆಳಗ್ಗೆ ಶಾಲೆಯ ಮಕ್ಕಳಿಗೆಲ್ಲಾ ಪಸರಿಸುತ್ತಿರುವಾಗಲೇ, ಮನೋಜನ ಸೋದರಸಂಬಂಧಿಯೂ, ನೆರೆಮನೆಯವನೂ ಆಗಿದ್ದ ಮಹೇಶ, ಮನೋಜ ಸೈಕಲೊಂದನ್ನು ಮನೆಗೆ ತಂದಿದ್ದಾನೆಂದೂ, ಯಾರದ್ದೋ ಸೈಕಲ್ ಮನೆಗೆ ತಂದಿದ್ದರಿಂದ ಮನೆಯವರು‌ ಅವನಿಗೆ ಪೆಟ್ಟುಕೊಟ್ಟಿದ್ದಾರೆಂಬ ಸುದ್ದಿಯನ್ನು ಕೊಟ್ಟಿದ್ದಲ್ಲದೇ ಮನೋಜ ಕೊಂಡೊಯ್ದದ್ದು ರಾಹುಲನ ಸೈಕಲನ್ನೇ‌ ಎಂಬ ತೀರ್ಮಾನಕ್ಕೆ ಎಲ್ಲರೂ ಬರುವಂತೆ ಮಾಡಿದ್ದ. ನಾನು ಮನೋಜನನ್ನು ಮಾತನಾಡಿಸಿದೆ. ತಾನು ಸೈಕಲನ್ನು ಕದ್ದೊಯ್ದುದು ಹೌದೆಂದೂ, ಹಾಗೆ ಕದ್ದೊಯ್ಯಲು ತನ್ನ ಪಾಲುದಾರನಾದ ಮೌನೇಶನ‌ ಸಲಹೆಯೇ ಕಾರಣವೆಂದೂ, ವಾರದಲ್ಲಿ
 ಮೂರುದಿನದಂತೆ ಇಬ್ಬರೂ ಸೈಕಲನ್ನು ಹಂಚಿಕೊಳ್ಳುವುದೆಂದು ತಮ್ಮಿಬ್ಬರಲ್ಲಿ ಒಪ್ಪಂದವೇರ್ಪಟ್ಟಿತ್ತೆಂದೂ ಮನೋಜ ತಿಳಿಸಿದರೆ, ಇದಕ್ಕೂ ತನಗೂ ಸಂಬಂಧವೇ ಇಲ್ಲವೆಂದು ಮೌನೇಶ ವಾದಿಸಿದ. ಮೌನೇಶನನ್ನು ಶನಿವಾರದಂದು ಸೈಕಲ್ಲನ್ನು ನೋಡಿದ್ದ ನನಗೆ ಅವನ ಬುದ್ಧಿವಂತಿಕೆಯ ಅರಿವೂ ಇದ್ದುದರಿಂದ ಮನೋಜ‌ ಹೇಳುತ್ತಿರುವುದರಲ್ಲಿ ಸತ್ಯವಿದೆ ಎಂದು ನನಗರ್ಥವಾಗಿತ್ತು. ಮೊದಲ ಮೂರು ದಿನ ಮನೋಜನಿಗೇ ಸೈಕಲ್ ಬಳಸಲು ಕೊಟ್ಟಿರುವುದರಲ್ಲಿ ಮೌನೇಶನ ಪ್ರಚಂಡತನವೂ ನನ್ನ ಗಮನಕ್ಕೆ ಬಂದಿತ್ತು. ಇಬ್ಬರಿಗೂ ಒಂದಿಷ್ಟು ಜೋರು ಮಾಡಿದೆ. ಸೈಕಲ್ ಕದ್ದೊಯ್ಯುವಾಗ ಇದು ತಮ್ಮ ಸಹಪಾಠಿಯೊಬ್ಬನದ್ದು ಎನ್ನುವ ಕಲ್ಪನೆಯೇ ಅವರಿಬ್ಬರಿಗೂ ಇರಲಿಲ್ಲವಂತೆ. ಉತ್ಸವಕ್ಕೆ ಬಂದ ಯಾರೋ ಬಡಪಾಯಿ ಇಟ್ಟುಹೋದ ಸೈಕಲ್ ಎಂದೇ ಅವರು ಭಾವಿಸಿದ್ದರು. ಸೈಕಲ್ ಯಾರದ್ದೇ ಆದರೂ ಕದ್ದಿದ್ದನ್ನು ಸರಿ ಎನ್ನಲಾದೀತೇ?

      ಇನ್ನು ಸೈಕಲನ್ನು ವಾಪಸ್ ತರುವ ಕೆಲಸವಾಗಬೇಕಿತ್ತಲ್ಲ.. ಮನೋಜನಲ್ಲಿ "ಯಾವಾಗ ತರುತ್ತಿ?" ಕೇಳಿದೆ. "ಈಗ ಅದು ನಮ್ಮನೆಯಲ್ಲಿಲ್ಲ ಸರ್.." ಪಾಪದವನಂತೆ ಉತ್ತರಿಸಿದ. "ಅಪ್ಪ ನಿನ್ನೆ ಬೆಳಿಗ್ಗೆಯೇ ಅದು ಇದ್ದ ಜಾಗದಲ್ಲೇ ಇಟ್ಟು ಹೋಗಿದ್ದಾರೆ." ಈಗ ನಾನವರನ್ನು ಅವರಿಗೆ ಸೈಕಲ್ ಸಿಕ್ಕಿದ್ದ ಜಾಗಕ್ಕೆ ಕಳುಹಿಸಿದೆ. ಸೈಕಲ್ ಅಲ್ಲಿರಲಿಲ್ಲವೆಂದು ಪೆಚ್ಚುಮೋರೆ ಹಾಕಿಕೊಂಡು ವಾಪಸ್ ಬಂದರು.
  
    ಈಗ ಹೊಸ ಸಮಸ್ಯೆ ತಲೆದೋರಿತಲ್ಲ....! ನಾನು ಕ್ರುದ್ಧನಾಗಿದ್ದೆ. ನನ್ನ ಕೋಪವನ್ನೆಲ್ಲಾ ಆ ಮಕ್ಕಳ ಮೇಲೆ ಕಿರುಚಾಡಿ ಹಗುರ ಮಾಡಿಕೊಂಡ ಮೇಲೆ ಮನೋಜನ ಮನೆಗೆ ಫೋನಾಯಿಸಿದೆ. ಅಮ್ಮ ಫೋನ್ ಎತ್ತಿದರು. ನಾನು ಸೈಕಲ್ ವಿಚಾರ ಪ್ರಸ್ತಾಪಿಸುವಾಗಲೇ ಅವರ ಧ್ವನಿ ಗದ್ಗದವಾಗಿತ್ತು. "ಸೈಕಲ್ ಆ ಜಾಗದಲ್ಲಿ ಇಡುತ್ತೇವೆಂದು ಅವನಿಗೆ ಹೇಳಿದ್ದಷ್ಟೆ ಸರ್.... ಅಲ್ಲಿಡುವುದು ಸೇಫ್ ಅಲ್ಲ ಎಂದು ಇಲ್ಲೇ ಅಡಗಿಸಿಟ್ಟಿದ್ದೇವೆ. ಸೈಕಲ್ ಯಾರದ್ದೆಂದು ತಿಳಿದು ಅವರಿಗೆ ಮುಟ್ಟಿಸಬೇಕೆಂದುಕೊಂಡಿದ್ದೇವೆ" ಎಂದವರಿಗೆ ಸೈಕಲ್ ಯಾರದ್ದೆಂದು ತಿಳಿಸಿದೆ. "ಅವನಿಗೆ ಸೈಕಲ್ ಬಗ್ಗೆ ಇಷ್ಟು ಆಸೆಯಿತ್ತೆಂದು ತಿಳಿದಿದ್ದರೆ ಹೇಗಾದರೂ ಮಾಡಿ ತಂದುಕೊಡುತ್ತಿದ್ದೆ ಸರ್.. ಅವನು ಹೀಗೆ ಮಾಡ್ತಾನೆ ಎಂದುಕೊಂಡಿರಲಿಲ್ಲ" ಎಂದು ಬಿಕ್ಕಿದ ಅವರಿಗೆ ಏನು ಹೇಳುವುದೆಂದು ನನಗೆ ತಿಳಿಯಲಿಲ್ಲ. "ಮಕ್ಕಳು ತಪ್ಪು ಮಾಡುವುದು ಸಹಜ ಬಿಡಿ, ಹೀಗೆ ತಪ್ಪು ಮಾಡಿ ಸಿಕ್ಕಿಬಿದ್ದರೆ ಮುಂದೆಂದೂ ತಪ್ಪು ಮಾಡಿವುದಿಲ್ಲ" ಎಂದ ನನ್ನ ಮಾತುಗಳು ತೀರಾ ಕೃತಕ ಎಂದು ನನಗೇ ಅನಿಸಿತ್ತು. ನನ್ನ ಮಗನೋ ಮಗಳೋ ಈ ತಪ್ಪು ಮಾಡಿದ್ದರೆ ನನ್ನ ಪ್ರತಿಕ್ರಿಯೆ ಹೇಗಿರುತ್ತಿತ್ತು ಎಂದು ಯೋಚಿಸತೊಡಗಿದೆ. 

      ನಾನು ಕರೆ ಮಾಡಿದ ಬೆನ್ನಿಗೇ ಆಕೆ ಸೈಕಲ್ಲಿನ ಓನರ್ ರಾಹುಲನ ತಾಯಿಗೆ ಕರೆ ಮಾಡಿ ಕ್ಷಮಾಪಣೆ ಕೇಳಿದರಂತೆ. ಮರುದಿನ ಬೆಳಿಗ್ಗೆ ನಾನು ನನ್ನ ಮನೆಯ ಜಗುಲಿಯಲ್ಲಿ ಕುಳಿತಿದ್ದೆ. ಮನೋಜ ಆ ಸೈಕಲನ್ನು ತಳ್ಳಿಕೊಂಡು ಬಂದು ರಾಹುಲನ ಮನೆಯ ಸಮೀಪದಲ್ಲಿ ನಿಲ್ಲಿಸಿ, ನಡೆದುಕೊಂಡು ಮುಂದೆ ಸಾಗುತ್ತಿದ್ದ. ದೂರದಿಂದಲೇ ಅವನ ಮುಖದ ಭಾವನೆಗಳನ್ನು ಓದಲೆತ್ನಿಸಿದೆ. ಅವನ ಮುಖ ನಿರ್ಭಾವುಕವಾಗಿತ್ತು. ಅವನ ಮನಸ್ಸಿನಲ್ಲಿ ಏನು ಯೋಚನೆಯಿತ್ತು ತಿಳಿಯಲಾಗಲಿಲ್ಲ... ಅವನಂತಹುದೇ ಸನ್ನಿವೇಶದಲ್ಲಿ ನಾನಿದ್ದಿದ್ದರೆ..? ಕಲ್ಪಿಸಿಕೊಳ್ಳುವುದೇ ತುಂಬಾ ಕಷ್ಟವೆನಿಸಿತು. 

      - ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment