ಎರಡು ಗಿಫ್ಟಿನ ಕತೆಗಳು – ಶಿಕ್ಷಕನ ಡೈರಿಯಿಂದ 51

ಶಿಕ್ಷಕನ‌ ಡೈರಿಯಿಂದ

ಎರಡು ಗಿಫ್ಟಿನ ಕತೆಗಳು


        ಶಾಲಾ ತಪಾಸಣೆಗೆ ಬಂದಿದ್ದ ಅಧಿಕಾರಿಯನ್ನು ಆ ಮಗುವಿನ ಆ ಒಂದು ಮಾತು ತೀರಾ ಭಾವುಕರನ್ನಾಗಿಸಿತ್ತಂತೆ. ಅದನ್ನವರು ಆ ಶಾಲೆಯ ಶಿಕ್ಷಕರಲ್ಲಿ ಆರ್ದ್ರ ದನಿಯಲ್ಲೇ ಹಂಚಿಕೊಂಡಿದ್ದರು. ಶಿಕ್ಷಕರ ಕ್ಲಸ್ಟರ್ ಸಮಾಲೋಚನಾ ಸಭೆಯಲ್ಲಿ ಆ ಶಾಲೆಯ ಶಿಕ್ಷಕರು  ಈ ವಿಚಾರವನ್ನು ಹೆಮ್ಮೆಯಿಂದಲೇ ಹಂಚಿಕೊಂಡಾಗ ನಾವೂ ತುಸು ಭಾವುಕರಾದೆವು.

           ಆ ಶಾಲಾ ತಪಾಸಣೆಗೆ ನಾಲ್ಕೈದು ಅಧಿಕಾರಿಗಳ ತಂಡ ಬಂದಿತ್ತಂತೆ. ದಾಖಲೆಗಳನ್ನೆಲ್ಲಾ ಪರಿಶೀಲಿಸಿದ ನಂತರ ಒಬ್ಬೊಬ್ಬರು ಅಧಿಕಾರಿಗಳು ಒಂದೊಂದು ತರಗತಿಗೆ ಹೋಗಿ ಮಕ್ಕಳೊಡನೆ ಮಾತುಕತೆಗಿಳಿದಿದ್ದರು. ಮೂರನೆಯ ತರಗತಿಗೆ ಹೋದ ಈ ಅಧಿಕಾರಿ ಪ್ರತೀ ಮಗುವಿನೊಂದಿಗೆ ಆತ್ಮೀಯವಾಗಿ ಸಂಭಾಷಿಸುತ್ತಿದ್ದರು. ಹಾಗೇ ಮಾತಾಡುತ್ತಿರುವಾಗ "ಅಪ್ಪ ನಿನಗೇನು ತರ್ತಾರೆ? ನೀನು ಅಪ್ಪನಲ್ಲಿ ಏನು ಗಿಫ್ಟ್ ಕೇಳುತ್ತಿ?" ಎಂಬ ಪ್ರಶ್ನೆಯನ್ನು ಆ ಹುಡುಗಿಯಲ್ಲಿ ಕೇಳಿದಾಗ "ಅಪ್ಪ ನಮಗಾಗಿ ಹೋಟೆಲಿನಲ್ಲಿ ಅಷ್ಟು ಕಷ್ಟಪಟ್ಟು ದುಡಿಯುತ್ತಿರುವಾಗ, ನಾವು ಅದು ತನ್ನಿ ಇದು ತನ್ನಿ ಎಂದು ಹೇಳಿದ್ರೆ ಸರಿಯಾಗ್ತದಾ ಸರ್?" ಎಂದು ಮುಗ್ಧವಾಗಿ ಪ್ರಶ್ನಿಸಿದ್ದಳು. ಪುಟ್ಟ ಹುಡುಗಿಯ ದೊಡ್ಡ ಮಾತು ಅವರನ್ನು ದಂಗುಬಡಿಸಿತ್ತು. ಆ ಹುಡುಗಿಯೊಡನೆ ಹೆಚ್ಚು ಮಾತನಾಡುತ್ತಾ ಹೋದಂತೆ ತಂದೆ ತಾಯಿಯರ ಶ್ರಮದ ಬಗ್ಗೆ ಆಕೆಗಿರುವ ಗೌರವ, ಒಂದು ಪೆನ್ಸಿಲನ್ನೂ ಬಹಳ ಜಾಗರೂಕತೆಯಿಂದ ಬಳಸುವ ಅವಳ ಜವಾಬ್ದಾರಿಯುತ ವರ್ತನೆ ಎಲ್ಲವೂ ಅರ್ಥ ಮಾಡಿಕೊಂಡ ಅವರು ವಿಶೇಷವಾದ ಅನುಭೂತಿಯನ್ನು ಪಡೆದ ಭಾವದೊಂದಿಗೆ ಶಾಲೆಯ ಶಿಕ್ಷಕರೊಡನೆ ಹಂಚಿಕೊಂಡಿದ್ದರು. ಆ ಹುಡುಗಿಯಿಂದ ಬಹಳ ಪ್ರಭಾವಿತರಾಗಿದ್ದ ಅವರು ಮುಂದೆ ಆ ಶಾಲೆಗೆ ಭೇಟಿ ನೀಡಿದಾಗೆಲ್ಲ ಆ ಮಗುವನ್ನು ಮಾತನಾಡಿಸಿ ಬರುತ್ತಿದ್ದರಂತೆ.

          ಸಮಾಲೋಚನಾ ಸಭೆಯಲ್ಲಿ  ಆ ಶಾಲೆಯ ಶಿಕ್ಷಕರು ಬಹಳ ಹೆಮ್ಮೆಯಿಂದ ಈ ವಿಚಾರವನ್ನು  ಹಂಚಿಕೊಂಡಿದ್ದರು.  ಆ ಕ್ಷಣಕ್ಕೆ ನಾವೆಲ್ಲರೂ ಆ ಪುಟ್ಟ ಹುಡುಗಿಯ ಅಭಿಮಾನಿಗಳಾಗಿಬಿಟ್ಟಿದ್ದೆವು. ಮಗುವೊಬ್ಬಳು  ತಂದೆ ತಾಯಿಯರಿಗೆ ಕಷ್ಟವಾಗಬಾರದೆಂದು  ತನ್ನ ಸಣ್ಣ ಪುಟ್ಟ ಬಯಕೆಗಳನ್ನು ತ್ಯಜಿಸುತ್ತಾಳೆಂದರೆ ಅದಕ್ಕಿಂತ ದೊಡ್ಡ ಮೌಲ್ಯ ಯಾವುದಿದೆ ಹೇಳಿ.. 

          *          *           *

         ಪಾಠದ ಹೆಸರು Dignity of labour. ಶ್ರೀಮಂತ ತಂದೆ ತನ್ನ ಸೋಮಾರಿ ಮಗನಿಗೆ ದುಡಿದು ತರಲು ಹೇಳಿ, ತಂದ ಹಣವನ್ನು ಬಾವಿಗೆಸೆಯಲು ತಿಳಿಸುವುದೂ, ಒಂದೆರಡು ದಿನ ತನ್ನವರಿಂದ ಕೇಳಿ ತಂದ ಹಣವನ್ನು ಬಾವಿಗೆಸೆದ ಮಗ ಮೂರನೇ ದಿನ ನಿಜವಾಗಿ ದುಡಿದು ತಂದ ಹಣವನ್ನು ಬಾವಿಗೆಸೆಯಲು ನಿರಾಕರಿಸುವುದೂ, ಕೊನೆಗೂ ಮಗ ಶ್ರಮದ ಬೆಲೆ ತಿಳಿದನೆಂದು ಅಪ್ಪ ಖುಷಿ ಪಡುವುದೂ ಪಾಠದಲ್ಲಿರುವ ವಿಷಯ. ಒಂದು ವಾರದ ಹಿಂದಷ್ಟೇ ಸಮಾಲೋಚನಾ ಸಭೆಯಲ್ಲಿ ಆ ಪುಟ್ಟ ಹುಡುಗಿಯ ಕತೆ ಕೇಳಿ ಬಂದಿದ್ದ ನನಗೆ ಅದನ್ನು ಪ್ರಸ್ತಾಪಿಸದೇ ಇರಲಾದೀತೇ? ಪಾಠದ ಕೊನೆಯಲ್ಲಿ ಬೇಜವಾಬ್ದಾರಿಯುತ ಮಕ್ಕಳ ದುಂದುವೆಚ್ಚದ ಕುರಿತಾದ ಒಂದಿಷ್ಟು ಉದಾಹರಣೆಗಳನ್ನೂ, ಮೇಲೆ ಹೇಳಿದ ಹುಡುಗಿಯ ಕತೆಯನ್ನೂ ಹೇಳಿ ಮಕ್ಕಳ ಜವಾಬ್ದಾರಿಯ ಕುರಿತಾಗಿ ಪುಟ್ಟ ಭಾಷಣ ಬಿಗಿದು, ನೀವು ತಂದೆ ತಾಯಿಯರ ದುಡಿಮೆಯ‌ ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುವಿರಾ ಕೇಳಿದೆ. ಮಕ್ಕಳೆಲ್ಲರೂ ತಾವ್ಯಾರೂ ಅಂಥವರಲ್ಲವೆಂಬಂತೆಯೂ, ಹಿತಮಿತವಾಗಿ ಖರ್ಚು ಮಾಡುವವರೆಂಬಂತೆಯೂ ಪೋಸು ಕೊಟ್ಟರು. ಅಷ್ಟರಲ್ಲಿ ಒಬ್ಬ "ಸರ್, ಅಖಿಲ್ ನ ಅಮ್ಮ ಅವನಿಗೇ ಬರೀ ತಿಂಡಿ ತಿನ್ನಲಿಕ್ಕೆ ಪ್ರತೀದಿನ ಇಪ್ಪತ್ತು ರೂಪಾಯಿ ಕೊಡ್ತಾರೆ." ಎಂದ. "ಅವನು ಪ್ರತೀದಿನ ಬೇಕರಿಗೆ ಹೋಗಿ ತುಂಬಾ ತಿಂಡಿ ತಿಂತಾನೆ.." ಎಂದ ಮತ್ತೊಬ್ಬ. ಅಖಿಲನ ಮುಖದಲ್ಲಿ ಚೂರು ಮುಜುಗರ ಕಾಣಿಸಿದ ಹಾಗಾಯಿತು. ನಾನು  ಆ ಮಕ್ಕಳ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳದಂತೆ ನಟಿಸಿ, ಪಟ್ಟನೆ ಬೇರೆ ವಿಷಯದ ಕಡೆ ಮಾತು ತಿರುಗಿಸಿದೆ. 
   ‌‌   ‌ ‌‌‌‌     ಅಖಿಲ್ ಒಬ್ಬ ಚುರುಕಿನ, ಆದರೆ ಕೀಟಲೆ- ತಂಟೆಗಳಿಗೇನೂ ಕೊರತೆಯಿರದ, ಯಾರನ್ನೂ ಯಾವುದನ್ನೂ ಹೆಚ್ಚು ಲೆಕ್ಕಿಸದ, ಬಿಂದಾಸ್ ಲೈಫ್‌ಸ್ಟೈಲಿನ ಹುಡುಗ.  ಮನೆಯಲ್ಲಿ ಅವನು ಮತ್ತವನ‌ ತಾಯಿ ಇಬ್ಬರೇ ಇರುವುದೆಂದೂ,  ಅವನ ತಾಯಿ ಶ್ರಮಜೀವಿಯೆಂದೂ, ಮಗನ ಕುರಿತಾಗಿ ಅಪಾರ ಕನಸು ಹೊತ್ತವರು ಮಾತ್ರವಲ್ಲದೇ ಮಗನ ಮನಸ್ಸಿಗೆ ತುಸು ನೋವೂ ಆಗಬಾರದೆಂಬ ಮನಸ್ಥಿತಿಯುಳ್ಳವರೆಂದೂ ಹಿಂದೆಲ್ಲೋ ಕೇಳಿದ ನೆನಪಿತ್ತು. 
        ಕ್ಲಾಸ್ ಮುಗಿದ ಮೇಲೆ ಯಾವುದೋ ವಿಷಯದ ಬಗ್ಗೆ ಮಾತಾಡುತ್ತಾ ಅಖಿಲ್ ನನ್ನೊಡನೆ ಬಂದಿದ್ದ ಅಖಿಲ್ ನೊಡನೆ ಮಕ್ಕಳು ಹೇಳಿದ ವಿಚಾರದ ಬಗ್ಗೆ ಮಾತನಾಡಿದೆ.
      " ಆಗ ಮಕ್ಕಳು ಹಾಗಂದಾಗ ಕಿರಿಕಿರಿಯಾಯಿತಾ?" ಕೇಳಿದೆ. ಏನೂ ಉತ್ತರಿಸದ ಅವನ ಮೌನದಲ್ಲಿ ಹೌದು ಎಂಬ ಉತ್ತರವಿದ್ದಂತೆ ಕಾಣಿಸಿತು.
        "ಪ್ರತೀದಿನದ ಖರ್ಚಿಗೆ ಇಪ್ಪತ್ತು ರೂಪಾಯಿ ಬೇಕೇ ಬೇಕು ಅಂತೀಯಾ?" ತುಸು ತಮಾಷೆಯ ದನಿಯಲ್ಲಿ ಕೇಳಿದೆ. ಅವನಿಗೆ ನನ್ನ ಪ್ರಶ್ನೆ ಕಿರಿಕಿರಿಯೆನಿಸಬಾರದಲ್ಲ!     
              "ನಾನು ಕೇಳುವುದಿಲ್ಲ, ಅಮ್ಮನೇ ಕೊಡ್ತಾರೆ" ಎಂದ.
            "ಏನು ಮಾಡ್ತಿ ಅಷ್ಟು ಹಣದಿಂದ?"
              "ಸಂಜೆ ಅಂಗಡಿಗೆ ಹೋಗಿ ತಿಂಡಿ ತಿಂತೇನೆ." ತಾನು ತಿನ್ನುವ ತಿಂಡಿಗಳನ್ನು ಹೆಸರಿಸಿದ.
              ನಾನು ಅವನ ಅಮ್ಮನ ಕೆಲಸದ ಬಗ್ಗೆಯೂ, ಎಷ್ಟು ಹೊತ್ತು ಕೆಲಸ ಮಾಡುವರೆಂಬ ಬಗ್ಗೆಯೂ ಕೇಳಿದೆ. ಉತ್ತರಿಸಿದ ಅವನಲ್ಲಿ ಅಮ್ಮನ ಶ್ರಮ ಮತ್ತು ತನ್ನ ವೆಚ್ಚದ ಬಗ್ಗೆ ತುಸು ಸಂಕೋಚದ ಭಾವ ಕಾಣಿಸಿತು.
           " ನಿಜಕ್ಕೂ ನಿನಗೆ ದಿನಕ್ಕೆ ಇಪ್ಪತ್ತು ರೂಪಾಯಿ ಅಗತ್ಯವಿದೆಯಾ?" ಕೇಳಿದೆ.
            "ಇಲ್ಲ.. ಆದರೆ... ಅಮ್ಮನೇ ಕೊಡ್ತಾರೆ" ಸಣ್ಣ ನಗೆ ಬೀರಿದ.
             "ಹತ್ತು ರೂಪಾಯಿ ಕೊಟ್ರೆ ಸಾಕಾಗ್ತದಾ?" ನಾನೂ ನಕ್ಕೆ.
            "ಹೂಂ... ನಾಳೆಯಿಂದ ಹತ್ತೇ ರೂಪಾಯಿ ತಗೊಳ್ತೇನೆ."
            "ಅಮ್ಮನೇ ಇಪ್ಪತ್ತು ರೂಪಾಯಿ ಕೊಡುವುದಲ್ವಾ? ಯಾಕೆ ಸುಮ್ಮನೆ ಬೇಡ ಎನ್ನುವುದು?" 
            ಅವನು ನಿರುತ್ತರ. "ನಾನೊಂದು ಐಡಿಯಾ ಕೊಡ್ಲಾ...? ನಿನಗೆ ಇಷ್ಟ ಆದರೆ ಮಾತ್ರ ಮಾಡು."
     ‌‌‌‌‌‌‌      ಅವನು ಕುತೂಹಲದಿಂದ ನನ್ನ ಮುಖ ನೋಡತೊಡಗಿದ‌.
            "ಅಮ್ಮ ಹೇಗೂ ಇಪ್ಪತ್ತು ರೂಪಾಯಿ ಕೊಡ್ತಾರಲ್ಲಾ, ಅದರಲ್ಲಿ ಹತ್ತು ರೂಪಾಯಿ ಮಾತ್ರ ಖರ್ಚು ಮಾಡು.. ಇನ್ನು ಹತ್ತುರೂಪಾಯಿ ಹಾಗೇ ಉಳಿಸಿಕೋ.. ನಿನ್ನಲ್ಲಿ ಪಿಗ್ಗೀಬ್ಯಾಂಕ್ ಇದ್ಯಲ್ಲಾ..."
    ‌   "ಇದೆ..."
       "ಅದರಲ್ಲಿ ಹಣ ಇಡು. ದಿನಕ್ಕೆ ಹತ್ತು ರೂಪಾಯಿ ಅಂದರೆ ಬಹಳ ಬೇಗ ತುಂಬಾ ಹಣ ಆಗ್ತದೆ... ಆ ಹಣದಿಂದ ಯಾವತ್ತಾದರೂ ಒಂದಿನ...., ನಿನ್ನ ಅಮ್ಮನ ಬರ್ತ್ಡೇ ದಿನ ಆದ್ರೂ ಆಗ್ಬಹುದು, ಬೇರೆ ಯಾವ ದಿನ ಆದ್ರೂ ಆಗ್ಬಹುದು.. ಅಮ್ಮನಿಗೆ ತುಂಬಾ ಇಷ್ಟವಾಗುವ ವಸ್ತುವನ್ನು ಗಿಫ್ಟಾಗಿ ತಂದುಕೊಡು.. ಅಮ್ಮ ತುಂಬಾ ಖುಷಿಪಡ್ತಾರೆ..."
           ಕೊನೆಯ ವಾಕ್ಯ ಅವನ ಕಣ್ಣಿನ ಹೊಳಪು ಹೆಚ್ಚಿಸಿದಂತೆ ಕಾಣಿಸಿತು.  
‌           ಒಂದು ಕ್ಷಣ ನನ್ನ ಕಣ್ಣೆದುರು‌ ಅವನು ಹಣ ಉಳಿಸಿ ಅಮ್ಮನಿಗೊಂದು ಸೀರೆಯೋ ಇನ್ನೇನೋ ಉಡುಗೊರೆ ತಂದು ಕೊಟ್ಟಾಗ  ಅಮ್ಮನ ಕಣ್ಣಲ್ಲಿ ಆನಂದಬಾಷ್ಪ ಸುರಿಯುವ ದೃ಼ಶ್ಯ ಹಾಗೇ ಹಾದುಹೋದಂತಾಯಿತು. ನನ್ನ ಸಲಹೆಗೆ ನಾನೇ ಖುಷಿ ಪಟ್ಟೆ.

           ಮುಂದೇನಾಯಿತು? ನಿಜವಾಗಿಯೂ ಆ ಹುಡುಗ ನನ್ನ ಸಲಹೆಯನ್ನು ಪಾಲಿಸಿದನೇ?  ಅಮ್ಮನಿಗೆ ಗಿಫ್ಟ್ ತಂದುಕೊಟ್ಟನೇ? ಎಂದೆಲ್ಲ ನೀವು ಕೇಳಿದರೆ, ಕೊಟ್ಟಿರಬಹುದು ಎಂಬುದಷ್ಟೇ ನನ್ನ ಉತ್ತರ. ಆ ಸಲಹೆಯ ನಂತರ ಒಂದೆರಡು ಬಾರಿ ಆ ಹುಡುಗನಿಗೆ ಅದನ್ನು ನೆನಪಿಸಿದ್ದೆನಾದರೂ, ನನ್ನ ಒತ್ತಾಯಕ್ಕೆ ಅವನು ಹಾಗೆ ಮಾಡಬಾರದೆಂಬ ಎಚ್ಚರವಂತೂ ನನಗಿದೆ. ನನ್ನ ಸಲಹೆಯನ್ನು ಅವನು ಪಾಲಿಸಿರುತ್ತಾನೆ, ಅವನ ಅಮ್ಮನಿಗೆ ಮಗನ ಬಗ್ಗೆ ಹೆಮ್ಮೆಯೆನಿಸಿರುತ್ತದೆ ಎಂಬ ಸದಾಶಯವಷ್ಟೇ ನನ್ನದು. ಒಂದು ವೇಳೆ ಹುಡುಗ ಹಾಗೆ ಮಾಡಿರದಿದ್ದರೆ ನಾನು ಕಳೆದುಕೊಳ್ಳುವುದೇನೂ ಇಲ್ಲವಲ್ಲ..

         ಶಿಕ್ಷಕ ವೃತ್ತಿಯೆಂದರೆ ಒಂದು ಒಳಿತು ಬಿತ್ತುವ ಕಾಯಕ. ನಾವು ಒಳಿತನ್ನು ಬಿತ್ತುತ್ತಾ ಸಾಗುತ್ತಿರಬೇಕು-  ಬಿತ್ತಿದ ಕೆಲವಾದರೂ ಮೊಳಕೆಯೊಡೆದು ಹೆಮ್ಮರವಾಗುತ್ತವೆ ಎಂಬ ಆಶಯದೊಡನೆ.

            -  ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment