ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಸರಣಿ ಕೃತಿ ಪರಿಚಯದಲ್ಲಿ ಇಂದಿನ ಕೃತಿ ನೇತಾಜಿ – ಚಲೋ ದಿಲ್ಲಿ ಎಂದು ಹೋದರೆಲ್ಲಿ??

IMG 20220205 WA0004 min
ನೇತಾಜಿ – ಚಲೋ‌ ದಿಲ್ಲಿ ಎಂದು ಹೋದರೆಲ್ಲಿ?

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು

(ಕೃತಿ ಪರಿಚಯ – 4)

ಬರಹ: ಉದಯಭಾಸ್ಕರ್ ಸುಳ್ಯ

‘ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು..!’ ಕೃತಿ ಪರಿಚಯದ ಸರಣಿ ಲೇಖನದಲ್ಲಿ ಈ ದಿನ ಪರಿಚಯಿಸಲಾಗುತ್ತಿರುವ ಕೃತಿಯ ಶೀರ್ಷಿಕೆ ‘ನೇತಾಜಿ – ಚಲೋ‌ ದಿಲ್ಲಿ ಎಂದು ಹೋದರೆಲ್ಲಿ?’ ಪ್ರಕಾಶಕರು: ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ. ಲೇಖಕರು: ಪ್ರತಾಪ್ ಸಿಂಹ.  ಪುಟಗಳ ಸಂಖ್ಯೆ: 264. ಪುಸ್ತಕದ ಈ ಹಿಂದಿನ ಮುಖ ಬೆಲೆ ರೂ‌.200/- (ಪರಿಷ್ಕೃತ ಬೆಲೆ ಹೆಚ್ಚಾಗಿರಲೂಬಹುದು)

ನೇತಾಜಿ! ಹೌದು, ಇದು ಭಾರತದ ಸ್ವಾತಂತ್ರ್ಯ ಹೋರಾಟ ರಾಷ್ಟ್ರೀಯ ಚಳುವಳಿಯ ಸ್ವರೂಪ ಪಡೆದುಕೊಂಡ ಸಂದರ್ಭದಲ್ಲಿ ಬ್ರಿಟಿಷರ ಎದೆ ನಡುಗಿಸಿದ ಹೆಸರು! ಹೋರಾಟದ ಹಾದಿಯಲ್ಲಿ ಅದೆಷ್ಟೋ ಬಾರಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿ, ಆ ಬಳಿಕ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿ, ಮತ್ತೆ ಕೆಲವು ಸಲ ವೇಷ ಮರೆಸಿ ಎದುರೆದುರೇ ಅಡ್ಡಾಡಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ರಂಗು ರಂಗಿನ ವ್ಯಕ್ತಿತ್ವದ ನೇತಾಜಿ ಕೊನೆಗೆ ತನ್ನ ಸಾವಿನಲ್ಲೂ ನಿಗೂಢತೆಯನ್ನು ಉಳಿಸಿಯೇ ಕಣ್ಮರೆಯಾದದ್ದು ಈಗ ಇತಿಹಾಸ. ಅಂತಹ ವ್ಯಕ್ತಿತ್ವವೊಂದರ ಹಿಂದಿನ ರೋಚಕ ಘಟನೆಗಳು, ಅಪರೂಪದ ಸನ್ನಿವೇಶಗಳ ಕುರಿತಾಗಿ ಬೆಳಕು ಚೆಲ್ಲುವ ಪುಸ್ತಕವೇ ನೇತಾಜಿ – ಚಲೋ ದಿಲ್ಲಿ ಎಂದು ಹೋದರೆಲ್ಲಿ?

ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ‘ಹೋದರೆಲ್ಲಿ?’ ಅನ್ನುವ ಪ್ರಶ್ನಾರ್ಥಕ ಚಿಹ್ನೆಯೇ ನೇತಾಜಿಯವರ ಸಾವಿನ ರಹಸ್ಯ ಇಂದಿಗೂ ಅಭೇದ್ಯವೆಂಬುದನ್ನು ಒತ್ತಿ ಹೇಳುತ್ತದೆ. ಈ ಕೃತಿಗೆ ಮೂಲ ಪ್ರೇರಣೆ ಮತ್ತು ಮೂಲ ಮಾಹಿತಿಯ ಆಗರ ನೇತಾಜಿಯವರ ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಲೆಪ್ಟಿನೆಂಟ್ ಆಗಿದ್ದ ಮಾನ್ವತಿ ಆರ್ಯ ಅವರು ಬರೆದ ಕೃತಿ. ಹಾಗಾಗಿ ಈ ಕೃತಿಯು ನೇತಾಜಿಯವರ ನಿಕಟವರ್ತಿಯೊಬ್ಬರ ಅನುಭವದ ಗಣಿಯಿಂದ ಮೂಡಿಬಂದ ಕೃತಿಯ ಮೂಲವನ್ನು ಹೊಂದಿರುವುದರಿಂದ ಈ ಕೃತಿಗೆ ಒಂದಷ್ಟು ತೂಕ ಹೆಚ್ಚು. ನೇತಾಜಿಯವರ ಪುತ್ರಿ ಡಾ.ಅನಿತಾ ಬೋಸ್ ಅವರ ಅಮೃತಹಸ್ತದಿಂದಲೇ ಈ ಕೃತಿ ಬಿಡುಗಡೆಗೊಂಡಿರುವ ಕಾರಣ ಒಂದು ರೀತಿಯ ಭಾವುಕ ಸ್ಪರ್ಶವೂ ಈ ಕೃತಿಯ ಮೇಲಿದೆ.

ಚಲೋ ದಿಲ್ಲಿ ಎಂದ ನೇತಾಜಿ ಹೋದರೆಲ್ಲಿ?

ನಿಜಕ್ಕೂ ಅವರು ಅಂದು ವಿಮಾನ ಅಪಘಾತದಲ್ಲಿ ಮಡಿದದ್ದು ಹೌದೇ?

ಆದರೆ, ಈ ಪುಸ್ತಕದಲ್ಲಿ ಒಂದು ಕಡೆ ಹೀಗೆ ಉಲ್ಲೇಖವಿದೆ…

“ಸುದ್ದಿ ಬರೆಯುವ ವೇಳೆ ಅಯ್ಯರ್ ಗಿದ್ದ ಏಕಮಾತ್ರ ಸುದ್ದಿಯ ಮೂಲವೆಂದರೆ ಜಪಾನೀ ಅಧಿಕಾರಿಗಳ ಹೇಳಿಕೆ ಮಾತ್ರ. ಇನ್ನೂ ಆಶ್ಚರ್ಯ ತರುವ ಸಂಗತಿಯೇನೆಂದರೆ, ನೇತಾಜಿಯಂತಹ ನಾಯಕ ಮತ್ತು ಅವರ ಜೊತೆಗೆ ಜಪಾನೀ ಸೈನ್ಯದ ಅತ್ಯುನ್ನತ ಅಧಿಕಾರಿ ಜನರಲ್ ಶಿಡೈ ಅವರಿದ್ದ ವಿಮಾನವೊಂದು, ಅದೂ ದ್ವಿತೀಯ ಮಹಾಯುದ್ಧದ ವೇಳೆ ಅಪಘಾತಕ್ಕೀಡಾದರೆ ಅದು ಸುದ್ದಿಯಾಗದೇ ಇರುತ್ತದೆಯೇ? ಆದರೆ ಅದು ತೈಪೆಯಲ್ಲಿ ಸುದ್ದಿಯಾಗಲೇ ಇಲ್ಲ!!”

ಇನ್ನು ನೇತಾಜಿಯವರು ತೀರಿಕೊಂಡಿದ್ದಾರೆಂಬ ಸುದ್ದಿ ಪ್ರಕಟವಾದ ನಂತರವೂ ಅನೇಕ ಬಾರಿ ಅವರನ್ನು ಬೇರೆ ಬೇರೆ ಕಡೆ ಕಂಡವರಿದ್ದಾರೆ ಅನ್ನುವ ಮಾಹಿತಿಯೂ ಈ ಪುಸ್ತಕದಲ್ಲಿ ಲಭ್ಯವಿದೆ.

“ಆ ಅನಾಮಿಕ ಸಂತ ಮತ್ತು ನೇತಾಜಿಯವರ ನಡುವೆ ಹಲವಾರು ಸಮಾನ ಅಂಶಗಳಿತ್ತು. ಆತನ ದೇಹದ ಆಕಾರ, ಬಾಹ್ಯರೂಪ ನಡೆಗಳಲ್ಲಿ ಆತ ಥೇಟು ನೇತಾಜಿಯನ್ನೇ ಹೋಲುತ್ತಿದ್ದ. ಆತ ನೇತಾಜಿಯಷ್ಟೇ ಎತ್ತರ ಮತ್ತು ದೃಢಕಾಯ ಹೊಂದಿದ್ದ. ಆತನ ವಯಸ್ಸು ಕೂಡ ನೇತಾಜಿಗೆ ಸಮಾನವಾಗಿತ್ತು. ನೇತಾಜಿಗಿದ್ದಂತೆಯೇ ಆತನ ಹಲ್ಲುಗಳ ನಡುವೆ ಸಂದುಗಳಿತ್ತು. ಆತನ ಹೊಟ್ಟೆಯ ಭಾಗದಲ್ಲಿ ಕತ್ತರಿಯಿಂದಾದ ಗಾಯ ನೇತಾಜಿಗಿದ್ದಂತೆಯೇ ಇತ್ತು. ಮಾತನಾಡುವಾಗ ಆತನ ಧ್ವನಿ ನೇತಾಜಿಯನ್ನೇ ಹೋಲುತ್ತಿತ್ತು. ಆ ಅನಾಮಿಕ ಬಾಬಾನ ಬಳಿ ನೇತಾಜಿಗೆ ಸಂಬಂಧಿಸಿದ ಅಪರೂಪದ ಕೌಟುಂಬಿಕ ಪತ್ರಗಳು, ದಾಖಲೆಗಳು, ಫೋಟೋಗಳು ಪುಸ್ತಕಗಳು, ಮ್ಯಾಗಜಿನ್ ಗಳು ಪತ್ತೆಯಾಗಿದ್ದವು..!!”

ಹೀಗೆ ನೇತಾಜೀಯವರ ಸಾವಿನ ಸುತ್ತ ಎದ್ದಿರುವ ಹಲವಾರು ಅನುಮಾನಗಳ ಹುತ್ತದ ಕುರಿತಾದ ರೋಚಕ ಮಾಹಿತಿಗಳು ಈ ಪುಸ್ತಕದಲ್ಲಿವೆ.

  • ಮೌಂಟ್ ಬ್ಲಾಂಕ್ ನಲ್ಲಿ ನಿಜಕ್ಕೂ ಮಕಾಡೆಯಾಯಿತಾ ವಿಮಾನ?
  • ಆ ಕಡತಗಳ ಪುಟ ಪುಟಗಳೊಳಗೂ ಅಡಗಿದ್ದವು ಅನುಮಾನ, ಸಂದೇಹಗಳು!
  • 1941 ಜನವರಿ 17 ರ ಬೆಳಿಗ್ಗೆ ಸುಭಾಶ್ ಕಾಣೆಯಾಗಿದ್ದು ಹೇಗೆ ಮತ್ತು ಎಲ್ಲಿಗೆ??!!
  • ಭಾರತ ಬಿಟ್ಟ ಬೋಸ್ ರು ಬರ್ಲಿನ್ ತಲುಪಿದ್ಧಾದರೂ ಹೇಗೆ?
  • ಅಂಥದ್ದೊಂದು ಪತ್ರ ಬರೆದಿದ್ದರಾ ನೇತಾಜಿ??????!!!
  • ಅವರು ಏಕಕಾಲಕ್ಕೆ ಒಬ್ಬ ಯೋಧ ಮತ್ತು ಸಂನ್ಯಾಸಿ ಎರಡೂ ಆಗಿದ್ದರಾ..!!!???
  • ನೈಮಿಷಾರಣ್ಯದಲ್ಲಿದ್ದ ಆ ಪರ್ದೇವಾಲಾ ಬಾಬಾ ಯಾರು? ನೇತಾಜಿಯೇ??!!!
  • ವಿಮಾನ ಅಪಘಾತದಲ್ಲಿ ನೇತಾಜಿ ಮಡಿದರು ಎನ್ನಲು ಅಂತಹದ್ದೊಂದು ದುರ್ಘಟನೆಯೇ ನಡೆದಿಲ್ಲವಲ್ಲಾ!!???
  • ರೆಂಕೋಜಿಯಲ್ಲಿರುವ ಚಿತಾಭಸ್ಮ ನೇತಾಜಿಯದ್ದೇ!!??

ಹೀಗೆ ಹಲವು ನಿಗೂಢ ವಿಸ್ಮಯಗಳನ್ನು ಒಳಗೊಂಡು ನೇತಾಜಿಯವರ ಸಾವಿನ ಸುತ್ತ ಭೇದಿಸಲಾಗದಂತೆ ಬೆಸೆದುಕೊಂಡಿರುವ ರೋಚಕ ವಿಷಯಗಳ ಕುರಿತಾದ ವಿವರಗಳನ್ನು ಪರಿಚಯಿಸಿಕೊಳ್ಳಬೇಕೆಂದಿದ್ದರೆ ಒಂದು ಬಾರಿ ಓದಲೇಬೇಕು… ‘ನೇತಾಜಿ – ಚಲೋ ದಿಲ್ಲಿ ಎಂದು ಹೋದರೆಲ್ಲಿ..??’

IMG 20220109 WA0005 min
ಉದಯಭಾಸ್ಕರ್

ಉದಯಭಾಸ್ಕರ್ ಸುಳ್ಯ ಅವರ ಹುಟ್ಟೂರು ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುಂಬಳಚೇರಿ, ಪ್ರಸ್ತುತ ಸುಳ್ಯ ನಿವಾಸಿ‌. ಸ್ವ ಉದ್ಯೋಗದೊಂದಿಗೆ ಬರವಣಿಗೆಯನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಇವರು ಕನ್ನಡ, ಅರೆಭಾಷೆ, ತುಳು, ಮಲಯಾಳಂ ಭಾಷೆಗಳಲ್ಲಿ ಸಾಹಿತ್ಯ ರಚಿಸಬಲ್ಲವರಾಗಿದ್ದು 700 ಕ್ಕಿಂತಲೂ ಅಧಿಕ ಸಾಹಿತ್ಯ ರಚಿಸಿದ್ದಾರೆ. ಆಕಾಶವಾಣಿ ಮಂಗಳೂರು ಮತ್ತು ಪುತ್ತೂರಿನ ರೇಡಿಯೋ ಪಾಂಚಜನ್ಯದಲ್ಲಿ ಇವರ ಕವನ ವಾಚನ ಪ್ರಸಾರಗೊಂಡಿದ್ದು ಅನೇಕ ರಚನೆಗಳು ಆಡಿಯೋ ರೂಪದಲ್ಲಿ ಯೂ ಟ್ಯೂಬ್ ನಲ್ಲಿ ಲಭ್ಯವಿದೆ. ಸಾಹಿತ್ಯದ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿರುವ ಇವರು ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಅದರ ಮೂಲಕ ರೋಗಿಗಳಿಗೆ ರಕ್ತ ಪೂರೈಕೆ ಮತ್ತು ಕ್ಯಾನ್ಸರ್ ಪೀಡಿತರಿಗೆ ಕೂದಲು ತಲುಪಿಸುವ ಸೇವಾ ಚಟುವಟಿಕೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಕಾರ್ಯಕ್ರಮ ನಿರೂಪಣೆ, ಹಿನ್ನೆಲೆ ಧ್ವನಿ, ಧಾರ್ಮಿಕ ಭಾಷಣ, ವಿಮರ್ಶೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ದೂರವಾಣಿ ಸಂಖ್ಯೆ:- 9448843929

Sharing Is Caring:

Leave a Comment