ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಪುಸ್ತಕ ಪರಿಚಯ -1 ಈ ವಾರದ ಪುಸ್ತಕ ಧ್ಯಾನ

IMG 20220109 WA0004 min
ಧ್ಯಾನ

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು..

(ಕೃತಿ ಪರಿಚಯ – 1)

ಬರಹ: ಉದಯಭಾಸ್ಕರ್ ಸುಳ್ಯ

‘ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು..!’ ಕೃತಿ ಪರಿಚಯದ ಸರಣಿ ಲೇಖನದಲ್ಲಿ ಮೊದಲಿಗೆ ಪರಿಚಯಿಸುತ್ತಿರುವ ಕೃತಿಯ ಶೀರ್ಷಿಕೆ ‘ಧ್ಯಾನ’, ಸಹ ಶೀರ್ಷಿಕೆ ‘ಒಂದು ಶಾಂತಿ ಯಾತ್ರೆ’. ಮಂಗಳೂರಿನ ಯಾನ ಪ್ರಕಾಶನದ ಮೂಲಕ ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಿರುವ ಈ ಕೃತಿಯ ಲೇಖಕರು ತೀರ್ಥರಾಮ ವಳಲಂಬೆಯವರು. ರಕ್ಷಾ ಪುಟಗಳನ್ನು ಹೊರತುಪಡಿಸಿ ಒಟ್ಟು ಮುದ್ರಿತ ಪುಟಗಳ ಸಂಖ್ಯೆ 180. ಪುಸ್ತಕದ ಈ ಹಿಂದಿನ ಮುಖ ಬೆಲೆ ರೂ‌.150/- (ಪರಿಷ್ಕೃತ ಬೆಲೆ ಹೆಚ್ಚಾಗಿರಲೂಬಹುದು)

ಧ್ಯಾನ! ಈ ಪದ ಎಲ್ಲರಿಗೆ ಚಿರಪರಿಚಿತವೇ ಸರಿ. ಆದರೆ ಈ ಪುಸ್ತಕದಲ್ಲೊಂದು ವಿಶೇಷತೆಯಿದೆ. ಸಾಮಾನ್ಯವಾಗಿ ಧ್ಯಾನ ಅನ್ನುವ ಪದ ಕಿವಿಗೆ ಬಿದ್ದಾಕ್ಷಣ ನಮಗೆ ನೆನಪಾಗುವಂತದ್ದು ದೇವರು, ಧರ್ಮ, ಅಧ್ಯಾತ್ಮ, ಜಪಮಾಲೆ, ಮಠ ಮಂದಿರ, ಗುರುಗಳು ಇನ್ನಿತರೆ ಚೌಕಟ್ಟುಗಳು. ಆದರೆ ಇಂತಹ ಚೌಕಟ್ಟುಗಳನ್ನು ಮೀರಿ ನಿಂತಿರುವಂತದ್ದೇ ಈ ಪುಸ್ತಕದ ವಿಶೇಷತೆ. ಮುಖ್ಯವಾಗಿ ಇದರಲ್ಲಿನ ವಿಚಾರಗಳು ನಮ್ಮನ್ನು ಯಾವುದೋ ಒಂದು ನಂಬಿಕೆಯ ಗೂಟಕ್ಕೆ ಕಟ್ಟಿ ಹಾಕುವುದಿಲ್ಲ ಅಥವಾ ಯಾವುದೋ ಒಂದು ಸಿದ್ದಾಂತದಲ್ಲಿ ಉಸಿರುಗಟ್ಟುವಂತೆ ಬಂಧಿಸಿಬಿಡುವುದಿಲ್ಲ. ಧ್ಯಾನದ ಯಾವುದೇ ವಿಧಿ ವಿಧಾನಗಳ ಮಾರ್ಗದರ್ಶನ ಸೂತ್ರವೂ ಈ ಪುಸ್ತಕದಲ್ಲಿಲ್ಲ. ಬದಲಿಗೆ ‘ಧ್ಯಾನ’ ಅನ್ನುವ ಒಂದು ಸ್ಥಿತಿ ಇಡೀ ಪ್ರಕೃತಿಯಲ್ಲಿ ಹೇಗೆ ಆವರಿಸಿಕೊಂಡಿದೆ ಅನ್ನುವುದನ್ನು ಪರಿಚಯ ಮಾಡಿಕೊಡುವ ಲೇಖಕರು ಪ್ರಕೃತಿ ತತ್ತ್ವಗಳನ್ನು ತೆರೆದಿಡುತ್ತಾ ಸಾಗುತ್ತಾರೆ. ಸೃಷ್ಟಿ ಸೂತ್ರವೇ ಹೀಗೆ ಅಂದುಕೊಳ್ಳುತ್ತಾ ಇಲ್ಲಿರುವ ಧನಾತ್ಮಕ ಮತ್ತು ಋಣಾತ್ಮಕ ಸನ್ನಿವೇಶಗಳಿಗೆ ವಿಚಲಿತರಾಗದೆ ಪ್ರಕೃತಿ ತತ್ತ್ವಗಳನ್ನು ಸಮಚಿತ್ತತೆಯಿಂದ ಸ್ವೀಕರಿಸಿ ಒಪ್ಪಿಕೊಂಡು ಒತ್ತಡಕ್ಕೆ ಒಳಗಾಗದ ಮನಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಈ ಪುಸ್ತಕ ಸದ್ದಿಲ್ಲದೇ ನಮ್ಮನ್ನು ಪ್ರೇರೇಪಿಸುತ್ತದೆ. ಅದು ಒತ್ತಡದ ಹೇರಿಕೆಯೆಂದು ಎಲ್ಲಿಯೂ ಅನ್ನಿಸುವುದೇ ಇಲ್ಲ, ಬದಲಿಗೆ ತೆರೆದ ಮನಸ್ಸು ವಿಶಾಲ ಹೃದಯದಿಂದ ಸಹಜವಾಗಿ ಹೀರಿಕೊಳ್ಳುವಂತೆ ಮಾಡಿಬಿಡುತ್ತದೆ.!

ಪುಸ್ತಕದ ಆರಂಭದಲ್ಲಿ ಲೇಖಕರು ತೆರೆದಿಟ್ಟ ಅಂತರಾಳದ ಮುಖ್ಯಾಂಶಗಳು ಹೀಗಿವೆ:- “ತಲೆಗೊಂದು ಸಿದ್ದಾಂತ ಹುಟ್ಟಿಕೊಳ್ಳುವುದರಿಂದ ಜನರ ಮಧ್ಯೆ ಸಹಮತ ಇಲ್ಲವಾಗಿದೆ. ಗೆಳೆತನ, ಸಂಬಂಧಗಳೆಲ್ಲ ಅರ್ಥ ಕಳೆದುಕೊಂಡಿವೆ. ಯಾವ ಕ್ಷಣದಲ್ಲೂ ಅದು ಅಪ್ರಸ್ತುತವಾಗಬಹುದು. ಸದ್ಯದ ಶಿಕ್ಷಣ ಪದ್ಧತಿಯಲ್ಲಿ ಸ್ಪರ್ಧೆಗೆ ಒತ್ತುಕೊಟ್ಟು ಪುಟ್ಟ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದರಿಂದ, ಬೆಳೆದು ಬಂದಾಗ ಅವರು ಜೀವನದಲ್ಲಿ ಸೋಲುತ್ತಾರೆ. ತಮ್ಮ ನಿಜವಾದ ಸ್ವರೂಪವನ್ನರಿತು ಮುನ್ನಡೆಯುವ ಬದಲು ಇನ್ನೊಬ್ಬರ ಜೀವನದೊಡನೆ ಹೋಲಿಕೆಗೆ ತೊಡಗಿ ಅದು ಸಾಧ್ಯವಾಗದೇ ಇದ್ದಾಗ ಅದನ್ನು ಸಾಧಿಸಲು ಸುಳ್ಳು, ಮೋಸ, ವಂಚನೆ ಎಲ್ಲವನ್ನೂ ತಮ್ಮದಾಗಿಸಿಕೊಳ್ಳುತ್ತಾರೆ. ಈ ಸ್ಪರ್ಧೆಯ ಮನೋಭಾವದಿಂದಾಗಿ ಜನರು ಜೀವನದುದ್ದಕ್ಕೂ ವಸ್ತುಗಳಲ್ಲಿ ಸುಖವನ್ನು ಅರಸುವುದರಿಂದ ಆ ಸುಖ ಶಾಶ್ವತವಾಗಿ ಉಳಿಯುವುದೇ ಇಲ್ಲ. ನಾವು ಬಯಸುವ ವಸ್ತುಗಳೂ, ಅನುಕೂಲತೆಗಳೂ ಲಭಿಸುತ್ತಾ ಹೋದಂತೆ ಅವುಗಳ ಆಕರ್ಷಣೆ ಕಡಿಮೆಯಾಗಿ ಸುಖ ಬೇರೆಲ್ಲೋ ಇದೆ ಎಂದು ಸುಖದ ಅನ್ವೇಷಣೆ ಮುಂದುವರಿಯುತ್ತಲೇ ಹೋಗುತ್ತದೆ. ‌ಕೊನೆಗೂ ತೃಪ್ತಿ ಅನ್ನೋದು ಮರೀಚಿಕೆಯಾಗುತ್ತದೆ. ನೈಸರ್ಗಿಕ ಬದುಕನ್ನು ಕಳೆದುಕೊಂಡಾಗ ಅತೃಪ್ತಿ ಸಹಜವಾಗಿ ಕಾಣಿಸಿಕೊಳ್ಳುತ್ತದೆ. ನಾನು ಈ ಪುಸ್ತಕದಲ್ಲಿ ಪ್ರಕೃತಿಯ ಅಂತರಾಳವನ್ನು ವಿಶ್ಲೇಷಿಸುವ ಕೆಲಸವನ್ನಷ್ಟೇ ಮಾಡಿರುತ್ತೇನೆ. ಅದು ನಮಗೆ ಅರ್ಥವಾದಲ್ಲಿ ನಮ್ಮೆಲ್ಲಾ ಪ್ರಶ್ನೆಗಳಿಗೂ ಪ್ರಕೃತಿಯಿಂದಲೇ ಉತ್ತರವನ್ನು ಪಡೆಯುವುದು ಸಾಧ್ಯವಿದೆ. ಪ್ರಕೃತಿ ತತ್ತ್ವ ತುಂಬಾ ಕುತೂಹಲಕಾರಿ. ಈ ಪುಸ್ತಕವನ್ನು ಓದುವ ಓದುಗರು ಒಂದು ಗೊಂದಲದಿಂದ ಇನ್ನೊಂದು ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ನಿಗಾ ವಹಿಸಿರುತ್ತೇನೆ”

ಮೇಲಿನ ವಾಕ್ಯಗಳಲ್ಲಿ ಲೇಖಕರೇ ತಮ್ಮ ಅಂತರಾಳವನ್ನು ತೆರೆದಿಟ್ಟಂತೆ, ಎಲ್ಲೂ ಕೂಡ ನಮ್ಮನ್ನು ತತ್ತ್ವ ಸಿದ್ದಾಂತಗಳ ಪಕ್ಷ ಪಂಥಗಳ ಬಂಧನಕ್ಕೆ ಸಿಕ್ಕಿ ಹಾಕಿಕೊಳ್ಳದಂತೆ ಪುಸ್ತಕದುದ್ದಕ್ಕೂ ಎಚ್ಚರ ವಹಿಸುತ್ತಾರೆ ಅನ್ನುವುದಕ್ಕೆ ಪೂರಕವಾದ ಒಂದೆರಡು ಅಂಶಗಳು ಹೀಗಿವೆ:-

೧. ಚರಿತ್ರೆಯಲ್ಲಿ ಕಂಡುಬರುವ ಸಾವಿರಾರು ಘಟನೆಗಳಲ್ಲಿ ಒಂದನ್ನು ಮಾತ್ರ ನಾವು ವಿಮರ್ಶೆಗೆ ತೆಗೆದುಕೊಂಡರೆ ನಮಗೆ ಅಲ್ಲಿ ದೋಷಗಳು ಕಂಡುಬರುತ್ತವೆ. ಸಹಸ್ರಾರು ವರ್ಷಗಳ ಇತಿಹಾಸವನ್ನು ಒಂದೇ ಘಟನೆ ಎಂದು ತಿಳಿದುಕೊಂಡಾಗ ಇಲ್ಲಿ ಕಂಡುಬರುವ ಎಲ್ಲಾ ಘಟನೆಗಳು ಒಂದಕ್ಕೊಂದು ಪೂರಕವಾಗಿರುವಂತೆ ಕಾಣುತ್ತವೆ.

೨. ನಾವೇ ಸರಿ ಎನ್ನುವ ಸಂಘಟನೆಯೊಂದಿಗೆ ನೇತಾಡುವವರಿಗೆ ಸತ್ಯ ಯಾವತ್ತೂ ಮರೀಚಿಕೆಯಾಗುತ್ತದೆ. ಸತ್ಯವನ್ನು ಅರಿಯಬೇಕಾದರೆ ಆತನು ಎಲ್ಲಾ ಬಂಧನಗಳಿಂದಲೂ ಮುಕ್ತನಾಗಿರಬೇಕಾಗುತ್ತದೆ. ಪ್ರಪಂಚದಲ್ಲಿ ಪ್ರತಿಯೊಬ್ಬನೂ ಸತ್ಯವನ್ನು ಹತ್ತಿರದಿಂದ ನೋಡಬಲ್ಲ ಹಕ್ಕನ್ನು ಪಡೆದೇ ಹುಟ್ಟುತ್ತಾನೆ. ಇಂತಹ ಸಂಘಟನೆಗಳು ಆತನಿಂದ ಈ ಹಕ್ಕನ್ನು ಕಸಿದುಕೊಳ್ಳುತ್ತವೆ. ಆದರೆ ನಾವು ಅಂತಹ ‌ನಿರ್ಬಂಧಕ್ಕೆ ಒಳಗಾಗದೆ ವಾಸ್ತವಿಕತೆಯನ್ನು ಇದ್ದಂತೆ ತೆಗೆದುಕೊಳ್ಳುವ ಹಂತಕ್ಕೆ ಬಂದರೆ ಉಳಿದದ್ದು ತನ್ನಿಂದ ತಾನಾಗಿ ನಡೆದುಹೋಗುತ್ತದೆ. ನಮ್ಮ ಮನಸ್ಸಿನಲ್ಲಿ ಜ್ಣಾನ ಪ್ರಕಟವಾಗಲು ಬೇಕಾದ ವಾತಾವರಣ ಉಂಟಾದೊಡನೆ ಜ್ಞಾನ ತನ್ನಿಂದ ತಾನೇ ಹೊರಹೊಮ್ಮುತ್ತದೆ.!

ಇನ್ನು ಮುಖ್ಯವಾಗಿ ಇಂದಿನ ದಿನಗಳಲ್ಲಿ ಹಳಸಿಹೋದ ಸಂಬಂಧಗಳಿಂದಾಗಿ ಕೊರಗುವ ಯುವ ಮನಸ್ಸುಗಳು, ಹಕ್ಕು ಸಾಧಿಸುವ ಮೇಲಾಧಿಕಾರಿಗಳ ಒತ್ತಡದಿಂದ ಬೇಸತ್ತ ಉದ್ಯೋಗಿಗಳು‌, ಇನ್ನೊಬ್ಬರ ಅಂತಸ್ತು ಕೀರ್ತಿ ಸೌಕರ್ಯಗಳ ಜೊತೆಗೆ ತಮ್ಮನ್ನು ಹೋಲಿಸಿಕೊಂಡು ಸದಾ ಕೊರಗುವ ಎಲ್ಲಾ ವರ್ಗದ ಜನರು ಖಂಡಿತವಾಗಿಯೂ ಈ ಪುಸ್ತಕದಲ್ಲಿ ವಿವರಿಸಿದ ಪ್ರಕೃತಿ ತತ್ತ್ವಗಳನ್ನು ಅರಗಿಸಿಕೊಂಡು ಸೃಷ್ಟಿ ಸೂತ್ರಕ್ಕೆ ಶರಣಾಗಿ ಬದುಕುವ ಕಲೆಯನ್ನು ಕರಗತಗೊಳಿಸಿಕೊಂಡರೆ ನಿತ್ಯಶಾಂತಿಯನ್ನು ಸುಲಭದಲ್ಲೇ ಪಡೆಯಬಹುದು. ‌ಅಷ್ಟೊಂದು ಕುತೂಹಲಕಾರಿಯಾದ ಈ ಪ್ರಕೃತಿತತ್ತ್ವಗಳನ್ನು ಸೃಷ್ಟಿ ಸೂತ್ರಗಳ ಸೂಕ್ಷ್ಮಾತಿಸೂಕ್ಷ್ಮ ವಿಸ್ಮಯಕಾರಿ ವ್ಯವಸ್ಥೆಗಳನ್ನು ಓದುತ್ತಾ ಹೋದಂತೆ ವಾವ್! ಅಬ್ಬಾ! ಅನ್ನುವ ಉದ್ಗಾರಗಳು ಒಳಗೊಳಗೇ ನಮಗರಿವಿಲ್ಲದಂತೆ ಬಂದು ಬಿಡುತ್ತವೆ. ಎಲ್ಲಾ ಕಡೆಯೂ ನಮ್ಮ ಅಸ್ತಿತ್ವವನ್ನೇ ಹಕ್ಕುದಾರಿಕೆಯನ್ನೇ ಸ್ಥಾಪಿಸ ಹೊರಟ ನಾವು, ಪ್ರಕೃತಿಯ ಹಿಂದಿರುವ ಇಂತಹದ್ದೊಂದು ವ್ಯವಸ್ಥೆಯನ್ನು ಅರ್ಥೈಸಿಕೊಂಡಲ್ಲಿ ಈ ಬ್ರಹ್ಮಾಂಡದ ಮುಂದೆ ನಾವೆಷ್ಟು ಕುಬ್ಜರು, ನಾವೆಷ್ಟು ಅತ್ಯಲ್ಪರು, ನಾವೆಷ್ಟು ತೃಣಮಾತ್ರರು ಅನ್ನುವ ಶಾಶ್ವತ ಸತ್ಯದ ಅರಿವಾಗಿ ತಮಗರಿವಿಲ್ಲದಂತೆಯೇ ಅಹಂಕಾರದ ಪರದೆಯನ್ನು ಕಳಚಿಕೊಂಡು ಬಿಡುತ್ತೇವೆ. ಮಾತ್ರವಲ್ಲದೆ ದೇಶ ಕಾಲದ ಗಡಿಯನ್ನು ಮೀರಿ ಇಡೀ ಪ್ರಪಂಚವನ್ನೇ ಬಾಚಿ ತಬ್ಬಿಕೊಳ್ಳಬೇಕೆನ್ನುವಷ್ಟರ ಮಟ್ಟಿಗೆ ಹೃದಯ ವಿಶಾಲವಾಗುತ್ತದೆ.

ಡಿಡಿಟಿ ಸಿಂಪಡಿಸಿದೊಡನೆ ಆರಂಭದಲ್ಲಿ ಕಂಗಾಲಾಗುವ ಇರುವೆಗಳು ವಾರದೊಳಗೇ ಅದಕ್ಕೆ ಬೇಕಾದ ಪ್ರತಿರೋಧಕ ಶಕ್ತಿಗಳನ್ನು ಬೆಳೆಸಿಕೊಂಡು ಸಮಸ್ಯೆಯಿಂದ ಹೊರಬರುವ ಸೋಜಿಗದ ಬದುಕಿನ ವ್ಯವಸ್ಥೆ, ಮೊಸಳೆಯೊಂದು ಮಾಂಸಾಹಾರಿಯಾಗಿದ್ದರೂ ಹಕ್ಕಿಯೊಂದು ತನ್ನ ಹಲ್ಲುಗಳನ್ನು ಸ್ವಚ್ಛಗೊಳಿಸುವುದಿದ್ದರೆ ಗಂಟೆಗಟ್ಟಲೆ ಬಾಯ್ದೆರೆದು ಅದಕ್ಕೆ ಸಹಕರಿಸುವುದು ಮತ್ತು ತನ್ನ ಕೆಲಸ ಮುಗಿದೊಡನೆ ಗಬಕ್ಕನೆ ತಿಂದು ಬಿಡುವಂತಹ ಕೆಟ್ಟ ಯೋಚನೆಯೇ ಮಾಡದೇ ‘ನೀ ನನಗಿದ್ದರೆ ನಾ ನಿನಗೆ’ ಅನ್ನುವ ಕೃತಜ್ಞತಾ ಭಾವಕ್ಕೆ ಅಂಟಿಕೊಳ್ಳುವುದು… ಹೀಗೆ ಜೀವವೈವಿಧ್ಯದಲ್ಲಿನ ಅನೇಕ ವಿಸ್ಮಯಕಾರಿ ಗುಣಗಳನ್ನು ಎಳೆಎಳೆಯಾಗಿ ಅನಾವರಣಗೊಳಿಸುವ ಈ ಪುಸ್ತಕವನ್ನು ಓದಿದಾಗ ಅತ್ಯಂತ ಬುದ್ದಿವಂತರೆಂದು ಬೀಗುವ ನಾವು ಅದೆಷ್ಟು ಸಂಕುಚಿತರೂ, ಸ್ವಾರ್ಥಿಗಳೂ ಆಗಿದ್ದೇವೆ ಅನ್ನುವುದನ್ನೆಣಿಸಿ ಸಹಜವಾಗಿ ಪ್ರಕೃತಿಯ ಮುಂದೆ ತಲೆಬಾಗುವಂತಾಗುತ್ತದೆ.

ಸಕಲೇಶಪುರದ ಸಾರಾಯಿ ಅಂಗಡಿಯ ಅಶೋಕರಿಂದ ಹಿಡಿದು ಖ್ಯಾತ ಚಿಂತಕರಾದ ಎಸ್ ಎಲ್ ಬೈರಪ್ಪರ ತನಕ, ಮಂಗಳೂರಿನ ತರಕಾರಿ ವ್ಯಾಪಾರಿ ಇಬ್ರಾಹಿಂ ಅವರಿಂದ ಹಿಡಿದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ತನಕ ಸಮಾಜದ ಎಲ್ಲಾ ವರ್ಗದ, ಎಲ್ಲಾ ಧರ್ಮದ ಜನರನ್ನು ಸಮಾನವಾಗಿ ಸೆಳೆದು ಮುಕ್ತ ಪ್ರಶಂಸೆಗೆ ಒಳಗಾದ ಈ ಪುಸ್ತಕದ ಆರಂಭದ ಪುಟಗಳಲ್ಲಿ ಇವರೆಲ್ಲರ ಅನಿಸಿಕೆಗಳನ್ನು ಕಾಣಬಹುದು. ಇದರ ಜೊತೆಗೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಸೇರಿದಂತೆ ಅನೇಕ ಮಠಾಧಿಪತಿಗಳು ಸಂತ ಶ್ರೇಷ್ಠರು, ವಿಚಾರವಾದಿಗಳು, ಚಿಂತಕರು ಕೂಡ ಪುಸ್ತಕದ ಕುರಿತಾಗಿ ಬೆರಗಿನ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಯಾವುದೇ ವೇದಿಕೆಗಳಲ್ಲಿ ಕಾಣಿಸಿಕೊಳ್ಳದೆ, ಯಾವುದೇ ಪ್ರಶಸ್ತಿ ಸನ್ಮಾನಗಳಿಂದಲೂ ದೂರವೇ ಉಳಿದ ಕರಾವಳಿ ಭಾಗದ ಅಗ್ರಮಾನ್ಯ ಚಿಂತಕ, ದಾರ್ಶನಿಕ, ಸಾಹಿತಿಯಾಗಿರುವ ತೀರ್ಥರಾಮ ವಳಲಂಬೆಯವರು ಬರೆದಿರುವ ಇಂತಹದ್ದೊಂದು ವೈಚಾರಿಕ, ತಾತ್ತ್ವಿಕ, ತಾರ್ಕಿಕ ಕೃತಿ ವೇದ ಉಪನಿಷತ್ತು ಗೀತೆ ಮುಂತಾದ ಸದ್ಗ್ರಂಥಗಳ ಸಾರದಂತಿದ್ದು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆಯೂ ಇದೆ. ಪುಸ್ತಕದ ಆಳಕ್ಕಿಳಿದು ಪ್ರಕೃತಿ ತತ್ತ್ವದ ನಿಗೂಢ ಸಂಗತಿಗಳಿಗೆ ನಮ್ಮನ್ನು ನಾವು ತೆರೆದುಕೊಂಡು ಒತ್ತಡ ತುಮುಲಗಳಿಂದ ಮುಕ್ತರಾಗಿ ಮಸ್ತಕವನ್ನೂ ಬೆಳಗಿಸಿಕೊಳ್ಳೋಣವೇ..?

IMG 20220109 WA0005 min
ಉದಯಭಾಸ್ಕರ್

ಉದಯಭಾಸ್ಕರ್ ಸುಳ್ಯ ಅವರ ಹುಟ್ಟೂರು ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುಂಬಳಚೇರಿ, ಪ್ರಸ್ತುತ ಸುಳ್ಯ ನಿವಾಸಿ‌. ಸ್ವ ಉದ್ಯೋಗದೊಂದಿಗೆ ಬರವಣಿಗೆಯನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಇವರು ಕನ್ನಡ, ಅರೆಭಾಷೆ, ತುಳು, ಮಲಯಾಳಂ ಭಾಷೆಗಳಲ್ಲಿ ಸಾಹಿತ್ಯ ರಚಿಸಬಲ್ಲವರಾಗಿದ್ದು 700 ಕ್ಕಿಂತಲೂ ಅಧಿಕ ಸಾಹಿತ್ಯ ರಚಿಸಿದ್ದಾರೆ. ಆಕಾಶವಾಣಿ ಮಂಗಳೂರು ಮತ್ತು ಪುತ್ತೂರಿನ ರೇಡಿಯೋ ಪಾಂಚಜನ್ಯದಲ್ಲಿ ಇವರ ಕವನ ವಾಚನ ಪ್ರಸಾರಗೊಂಡಿದ್ದು ಅನೇಕ ರಚನೆಗಳು ಆಡಿಯೋ ರೂಪದಲ್ಲಿ ಯೂ ಟ್ಯೂಬ್ ನಲ್ಲಿ ಲಭ್ಯವಿದೆ. ಸಾಹಿತ್ಯದ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿರುವ ಇವರು ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಅದರ ಮೂಲಕ ರೋಗಿಗಳಿಗೆ ರಕ್ತ ಪೂರೈಕೆ ಮತ್ತು ಕ್ಯಾನ್ಸರ್ ಪೀಡಿತರಿಗೆ ಕೂದಲು ತಲುಪಿಸುವ ಸೇವಾ ಚಟುವಟಿಕೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಕಾರ್ಯಕ್ರಮ ನಿರೂಪಣೆ, ಹಿನ್ನೆಲೆ ಧ್ವನಿ, ಧಾರ್ಮಿಕ ಭಾಷಣ, ವಿಮರ್ಶೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

Sharing Is Caring:

1 thought on “ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಪುಸ್ತಕ ಪರಿಚಯ -1 ಈ ವಾರದ ಪುಸ್ತಕ ಧ್ಯಾನ”

  1. ‘ಧ್ಯಾನ ‘ ಕೃತಿ ಪರಿಚಯ ಅತ್ಯುತ್ತಮವಾಗಿದೆ. ಸರಳ, ಸುಂದರ ಪದಗಳ ಬಳಕೆ, ಸಾಲುಗಳ ಜೋಡಣೆ, ಓದುತ್ತಿದ್ದಂತೆ ಆತ್ಮೀಯ ಅನ್ನಿಸಿತು. ತೀರ್ಥರಾಮ
    ವಳಲಂಬೆಯವರ ಕೃತಿಯನ್ನು ಮನದಟ್ಟುಗೊಳಿಸುವ ಈ ಸರಣಿ ಲೇಖನದ ವಿಚಾರವು ಕೃತಿ ಪರಿಚಯದ ಮೂಲಕ ತಿಳಿಯಬಹುದಾಗಿದೆ.

    Reply

Leave a Comment