ನನಗವನ ಮೇಲೆ ತುಂಬಾ ದ್ವೇಷವಿತ್ತು ಸರ್ – ಶಿಕ್ಷಕನ ಡೈರಿಯಿಂದ 13

WhatsApp Group Join Now
Telegram Group Join Now

ಶಿಕ್ಷಕನ ಡೈರಿಯಿಂದ.

ನನಗವನ ಮೇಲೆ ತುಂಬಾ ದ್ವೇಷವಿತ್ತು ಸರ್.

            ಶಿಕ್ಷಕರ ದಿನಾಚರಣೆಯಂತಹ ಸಂದರ್ಭಗಳಲ್ಲಿ ಶಿಕ್ಷಕರೆಂದರೆ ಹಾಗೆ ಹೀಗೆ ಎಂದು ದೊಡ್ಡ ದೊಡ್ಡ ಪದಪುಂಜಗಳಲ್ಲಿ ಹೊಗಳುವುದನ್ನು ಕೇಳಿದರೆ ನನಗಂತೂ ತೀರಾ ಮುಜುಗರವಾಗುತ್ತದೆ. ಎಷ್ಟೋ ಬಾರಿ ಆ ಹೊಗಳಿಕೆಗಳು ವಾಸ್ತವಕ್ಕಿಂತ ತೀರಾ ದೂರವಿರುತ್ತವೆ. ಆದರೆ ಅಪರೂಪಕ್ಕೆ ಈ ತರದ ಹೊಗಳಿಕೆಗಳು ನಮ್ಮ ನಿಜವಾದ ಕರ್ತವ್ಯವನ್ನು ನಮಗೆ ನೆನಪಿಸುವುದಿದೆ. ನಮ್ಮ ಅಂತಃಕರಣವನ್ನು ತುಸು ಚುಚ್ಚಿ ನಮ್ಮನ್ನು ಎಚ್ಚರಿಸುವುದಿದೆ.

        "ಶಿಕ್ಷಕರೆಂದರೆ ಮಾನವೀಯತೆಯ  ರಾಯಭಾರಿಗಳು, ಸಮಾಜದಲ್ಲಿನ ದ್ವೇಷಪರತೆಯನ್ನು ದೂರ ಮಾಡಿ ಪ್ರೀತಿಯನ್ನು ಹಂಚುವವರು" ಎಂಬಿತ್ಯಾದಿ ಬಣ್ಣನೆಗಳು ಇದೇ ತೆರನಾದವು.  ಈ ಸಾಲುಗಳಿಗೆ ಸದಾ ಅರ್ಹನಾಗುವ ಪ್ರಯತ್ನವನ್ನು ಶಿಕ್ಷಕನಾದವನು ಮಾಡುತ್ತಲೇ ಇರಬೇಕು ಅದವನ ಆದ್ಯ ಕರ್ತವ್ಯ ಎಂದು ನಾನು ದೃಢವಾಗಿ ನಂಬುತ್ತೇನೆ. ಆದರೂ ಈ ಕರ್ತವ್ಯವನ್ನು ಎಷ್ಟರಮಟ್ಟಿಗೆ ನಿಭಾಯಿಸಿದ್ದೇವೆ ಎಂದು ಪ್ರಶ್ನಿಸಿಕೊಂಡಾಗ ನನ್ನೊಳಗೇ ತುಸು ಗೊಂದಲವೇರ್ಪಡುತ್ತದೆ.

           ನಮ್ಮ ಶಾಲಾ ಕಟ್ಟಡದ ಎದುರುಗಡೆ ಸಣ್ಣದೊಂದು ಹೂವಿನ‌ ತೋಟವಿತ್ತು. ಬೇರೆ ಬೇರೆ ಹೂಗಿಡಗಳು ಅದರಲ್ಲಿದ್ದವು.  ಆ ಹೂಗಿಡಗಳ ಮಧ್ಯದಲ್ಲಿ, ನಾವು ನಡೆದಾಡುವ ದಾರಿಗೆ ತಾಕಿಕೊಂಡಂತೆ ಏಳನೆಯ‌ ತರಗತಿಯ ಹುಡುಗ ರಕ್ಷಿತ್ ಹೊಸಜಾತಿಯ ಗಿಡವೊಂದನ್ನು ನೆಟ್ಟಿದ್ದ. ಅದೊಂದು ಹುಲ್ಲಿನ ಜಾತಿಗೆ ಸೇರಿದ ಗಿಡ. ಎಲ್ಲಿಂದಲೋ ಬೀಜ ತಂದು ನೆಟ್ಟಿದ್ದ ರಕ್ಷಿತ್ ಅದನ್ನು ಗೊಬ್ಬರ ಹಾಕಿ ಚೆಂದಕ್ಕೆ ಪೋಷಿಸಿ, ಒಂದು ತಿಂಗಳಲ್ಲೇ ಆ ಗಿಡ ನಮ್ಮೆಲ್ಲರನ್ನು ಆಕರ್ಷಿಸುವಂತೆ ಬೆಳೆಸಿದ್ದ.    
            ಎಲ್ಲರೂ ಆ ಗಿಡದ ಬಗ್ಗೆ ಕುತೂಹಲಿಗಳಾಗಿರುವಾಗ ಇದ್ದಕ್ಕಿದ್ದಂತೆ ಒಂದು ದಿನ ಆ ಗಿಡ ತುಸು ಬಾಡಿತ್ತು. ಒಂದೆರಡು ದಿನಗಳಲ್ಲಿ ಸಂಪೂರ್ಣ ಒಣಗಿ ಹೋಗಿತ್ತು.  ಅದನ್ನು ನೋಡಿ ಎಲ್ಲರಿಗೂ "ಛೇ" ಎನಿಸಿತ್ತಾದರೂ, ತೀರಾ ಬೇಸರವಾಗಿದ್ದು ಆ ಗಿಡ ಸತ್ತಿದ್ದು ಹುಡುಗನೊಬ್ಬ ಅದರ ಮೇಲೆ ಫಿನಾಯಿಲ್ ಸುರಿದಿದ್ದರಿಂದ ಎಂದು ತಿಳಿದಾಗ.

             ರಕ್ಷಿತನ ಸ್ನೇಹಿತನೇ ಆಗಿದ್ದ ರೂಪೇಶ್ ಆ ಗಿಡಕ್ಕೆ ಫಿನಾಯಿಲ್ ಸುರಿದಿದ್ದ ಎಂಬ ವಿಷಯ ನನಗೆ ತಿಳಿದಿದ್ದು ಈ ಪ್ರಕರಣವನ್ನು ಒಮ್ಮೆ ವಿಚಾರಿಸಿ   ಬುದ್ಧಿ ಹೇಳಿ ಬಿಟ್ಟಿದ್ದ ನನ್ನ ಸಹೋದ್ಯೋಗಿಯಿಂದ. ಒಳ್ಳೆಯ  ವಿದ್ಯಾರ್ಥಿಯೇ ಆಗಿದ್ದ ರೂಪೇಶ್ ಹೀಗೆ ಮಾಡಿದ್ದನೆಂದರೆ ನಂಬುವುದು ಕಷ್ಟ ಎನ್ನಿಸಿತು. ಏನೋ ಗಂಭೀರ ವಿಚಾರವಿರಬಹುದು ಎನಿಸಿದ ನನಗೆ ನಾನೂ ಒಮ್ಮೆ ವಿಚಾರಿಸಿದರೆ ಹೇಗೆ ಎನ್ನಿಸಿತ್ತು. ಬಿಡುವಿನ ಸಮಯದಲ್ಲಿ ಹೀಗೇ ಏನೋ ಮಾತನಾಡುತ್ತಾ ರೂಪೇಶನಲ್ಲಿ ವಿಚಾರಿಸಿದೆ, "ಆ ಗಿಡವನ್ನು ನೀನೇ ಸಾಯಿಸಿದ್ದು ನಿಜವಾ?"
        "ಹೌದು ಸರ್" ಗಂಭೀರವಾಗಿದ್ದ ರೂಪೇಶನ ಧ್ವನಿಯಲ್ಲಿ‌ ಯಾವುದೇ ಪಶ್ಚಾತ್ತಾಪವಿರಲಿಲ್ಲ.
         "ಯಾಕೆ?" ಎಂದು ಆಶ್ಚರ್ಯದಿಂದಲೇ ಕೇಳಿದ್ದೆ. "ನನಗೆ ಅವನ ಮೇಲೆ ದ್ವೇಷ ಇತ್ತು ಸರ್" ಸತ್ಯವನ್ನಲ್ಲದೇ ನಾನು ಬೇರೇನೂ ಹೇಳುವುದಿಲ್ಲ ಎಂಬ ಭಾವದಲ್ಲಿ ಹೇಳಿದ್ದ. ನನಗೆ ಅಚ್ಚರಿ.
            "ಅವನ ಮೇಲೆ ನಿನಗೆ ದ್ವೇಷವೇ?" ಅಚ್ಚರಿಯಿಂದಲೇ ಪ್ರಶ್ನಿಸಿದ್ದ‌ ನಾನು ಹಿಂದೆ ರಕ್ಷಿತ್ ಇವನಿಗೆ ಎಂತಹ ಗೆಳೆಯನಾಗಿದ್ದ ಎಂಬುದನ್ನು ನೆನಪಿಸಿದೆ. ವರ್ಷಾರಂಭದಲ್ಲಿ ಇದೇ ರಕ್ಷಿತ್ ರೂಪೇಶನನ್ನು ತಲೆಯ ಮೇಲೇ ಹೊತ್ತು ತಿರುಗುವಷ್ಟು ಆತ್ಮೀಯನಾಗಿದ್ದುದನ್ನು ಹಲವು ಬಾರಿ ಕಂಡಿದ್ದ ನಾನು, ಅದನ್ನೆಲ್ಲ ನೆನಪಿಸಿ "ಅಂತಹ ಒಳ್ಳೆಯ ಸ್ನೇಹಿತನಾಗಿದ್ದವನ ಮೇಲೆ ನಿನ್ನ ದ್ವೇಷ ಸರಿಯೇ?" ಎಂದು ಪ್ರಶ್ನಿಸಿದ್ದೆ.
           "ಆಗ ಚೆನ್ನಾಗಿಯೇ ಇದ್ದ ಸರ್, ಈಗ ನನ್ನ ಜೊತೆ ಸರಿಯಾಗಿ ಮಾತಾಡುವುದೇ ಇಲ್ಲ" ಅದೇ ಗಂಭೀರ ಧ್ವನಿಯಲ್ಲಿ ಉತ್ತರಿಸಿದ ರೂಪೇಶನಲ್ಲಿ ಗೆಳೆಯ ತನಗೆ ಮೊದಲಿನಷ್ಟು ಪ್ರಾಮುಖ್ಯತೆಯನ್ನು ಕೊಡುತ್ತಿಲ್ಲ ಎಂಬ ಹತಾಶೆ ಕಾಣಿಸಿತು. ಅದೇ ಹತಾಶೆಯ ಜೊತೆಜೊತೆಗೆ ರಕ್ಷಿತನ ಜೊತೆಗೇನೋ ಸಣ್ಣ ಜಗಳ ನಡೆದಿರಬಹುದೇನೋ, ಅದರ ಪರಿಣಾಮವೇ ಈ ಪ್ರಕರಣವಿರಬಹುದು. ಆದರೂ ಈ ಹುಡುಗ ಹೀಗೆ ಯಾಕಾದ? 

            ರೂಪೇಶ ವರ್ಷಾರಂಭದಿಂದ ಹೇಗಿದ್ದ ಎಂಬುದನ್ನು ನಾನು ನೆನಪಿಸಿಕೊಂಡೆ. ಬಹಳ ಚುರುಕಾಗಿದ್ದ ಈತ ಶಾಲೆಯ ಎಲ್ಲಾ ಕೆಲಸಗಳಲ್ಲೂ ಸಕ್ರಿಯವಾಗಿ ಜವಾಬ್ದಾರಿ ಹೊರುತ್ತಿದ್ದವ. ವಿದ್ಯಾರ್ಥಿ ನಾಯಕನೆಂಬ ಹೊಣೆಗಾರಿಕೆಯೂ ಇತ್ತು. ಸಹಪಾಠಿಗಳಿಗೂ ಅಚ್ಚುಮೆಚ್ಚಿನವನೇ ಆಗಿದ್ದ. ಇತ್ತೀಚೆಗೆ ಮೊದಲಿನಷ್ಟು ಸ್ನೇಹಪರನಾಗಿರಲಿಲ್ಲ ಎಂಬುದು ನನ್ನ ಅವಲೋಕನವೂ ಆಗಿತ್ತು. ಸ್ನೇಹಿತರು ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂದು ಅವನಿಗನಿಸುತ್ತಿದೆಯೇ ಅಥವಾ ಒಂದೆರಡು ತಿಂಗಳ ಹಿಂದೆ ಅವನ ಅಚ್ಚುಮೆಚ್ಚಿನ ಶಿಕ್ಷಕಿಯೊಬ್ಬರು  ವರ್ಗಾವಣೆಯಾದ ನಂತರ  ಉಳಿದ ಶಿಕ್ಷಕರು ತನಗೆ ಅವರಷ್ಟು ಪ್ರಾಮುಖ್ಯತೆ ನೀಡುತ್ತಿಲ್ಲ ಎಂಬ ಭಾವನೆ  ಅವನನ್ನು ವ್ಯಗ್ರನಾಗಿಸಿರಬಹುದೇ ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಲ್ಲಿ ಮೂಡಿದವಾದರೂ ಉತ್ತರ ಹೊಳೆಯಲಿಲ್ಲ. ಏನೇ ಆದರೂ ಬೆಳೆಯುತ್ತಿರುವ ಗಿಡದ ಮೇಲೆ ಫಿನಾಯಿಲ್ ಸುರಿದಿರುವುದು ಗಂಭೀರವಾಗಿ ಪರಿಣಿಸಬೇಕಾದ ವಿಚಾರವಲ್ಲವೇ? ನಾನು ಮಾತು ಮುಂದುವರೆಸಿದೆ.

          "ನಿನಗೆ ಏನೇ ಸಿಟ್ಟಿದ್ದರೂ , ನೀನು ಹೀಗೆ ಮಾಡಬಹುದೇ?" ಅವನು ಮೌನವಾಗಿದ್ದ. "ಆ ಗಿಡವನ್ನು ಬೆಳೆಸಲು ಅವನೆಷ್ಟು ಶ್ರಮ ಪಟ್ಟಿರಬಹುದು..." ನಾನು ಹೀಗೆನ್ನುವಷ್ಟರಲ್ಲಿ ಫಟ್ಟನೆ ಉತ್ತರಿಸಿದ್ದ ರೂಪೇಶ. "ಅದರಲ್ಲೇನು ವಿಶೇಷ? ಯಾರು ಬೇಕಾದರೂ ನೆಡಬಹುದು." 

            ಇಷ್ಟೊಂದು ಉಡಾಫೆಯ ಉತ್ತರ ನಾನು ನಿರೀಕ್ಷಿಸಿರಲಿಲ್ಲ. ತಕ್ಷಣ ಕೋಪದಿಂದ ನುಡಿದೆ "ಸರಿ,   ನೀನೊಂದು  ಗಿಡ ನೆಟ್ಟು ಬೆಳೆಸು ನೋಡೋಣ..ಅದೇ ಗಿಡದ ಬೀಜ ರಕ್ಷಿತನಿಂದಲೇ‌ ತರಿಸಿಕೊಡುತ್ತೇನೆ."
         "ಬೇಡ ಸರ್, ನಾನೇ ತರುತ್ತೇನೆ." ರೂಪೇಶ ಸವಾಲು ಸ್ವೀಕರಿಸುವ ಧ್ವನಿಯಲ್ಲಿ ನುಡಿದಿದ್ದ. ನನಗೆ ಅವನ ಧ್ವನಿಯಲ್ಲಿ ಇನ್ನೂ ಪಶ್ಚಾತ್ತಾಪ ಕಾಣಿಸದ ಬಗ್ಗೆ ಬೇಸರವಾಗಿತ್ತು; ಆದರೆ ನಾನು ನೀಡಿರುವ ಸವಾಲಿನ ಬಗ್ಗೆ ವಿಶ್ವಾಸವಿತ್ತು.

        ಓದುಗರಾದ ನೀವೀಗ ಮುಂದೇನಾಯಿತು ಎಂದು ಊಹಿಸುವ ಪ್ರಯತ್ನ ಮಾಡಿರುತ್ತೀರಿ. ಬೀಜ ಬಿತ್ತಿ, ಗಿಡವನ್ನು ಪೋಷಿಸುವಾಗ ರೂಪೇಶನಿಗೆ ಅದರ ಕಷ್ಟದ ಅರಿವಾಗಿರುತ್ತದೆ, ನಾನೊಂದು ಅದ್ಭುತವಾದ ಅನುಭವವನ್ನು ಅವನಿಗೆ ಒದಗಿಸಿರುತ್ತೇನೆ ಎಂದೆಲ್ಲಾ ನೀವು ಊಹಿಸಿರುತ್ತೀರಿ ಎಂದು ನಾನು ಬಲ್ಲೆ. ಆದರೆ ನಿಮ್ಮ ಊಹೆ ತಪ್ಪು. ಮರುದಿನ ಆ ವಿಚಾರವನ್ನು ನಾನು ಮರೆತುಬಿಟ್ಟಿದ್ದೆ. ರೂಪೇಶನೂ ಮರೆತುಬಿಟ್ಟನೇ? ಗೊತ್ತಿಲ್ಲ.
        
         ಹಲವು ವರ್ಷಗಳ ಹಿಂದಿನ ಘಟನೆಯಾದುದರಿಂದ ನಾನು ಹೇಗೆ ಇದನ್ನು ಮರೆತೆ ಎನ್ನುವುದೂ ಈಗ ನೆನಪಾಗುತ್ತಿಲ್ಲ. ಅದು ವರ್ಷದ ಕೊನೆಯ ತಿಂಗಳಾಗಿತ್ತು ಎನ್ನುವುದು ನೆನಪಿದೆ. ಪರೀಕ್ಷಾ ತಯಾರಿಯ ಒತ್ತಡದಲ್ಲಿ ಮರೆತೆನೇ, ಮರುದಿನದಿಂದ ಯಾವುದಾದರೂ ತರಬೇತಿಯಲ್ಲಿ ಭಾಗಿಯಾಗಿದ್ದೆನೇ ನೆನಪಾಗುತ್ತಿಲ್ಲ‌. ಒಟ್ಟಿನಲ್ಲಿ ಹುಡುಗನಿಗೆ ಚೆಂದದ ಪಾಠವನ್ನು ಕಲಿಸುವ ಅವಕಾಶವನ್ನಂತೂ ನಾನು ತಪ್ಪಿಸಿಕೊಂಡಿದ್ದೆ.

         ಮಕ್ಕಳಿಗೆ ಚೆಂದದ ಅನುಭವವನ್ನು ಕಟ್ಟಿಕೊಡಬಲ್ಲ ಈ ಬಗೆಯ  ಅವಕಾಶಗಳನ್ನು ಅದೆಷ್ಟು ಬಾರಿ ನಾವು ಕೈ ಚೆಲ್ಲಿ ಬಿಟ್ಟಿರುತ್ತೇವಲ್ಲ ಎನ್ನುವುದಷ್ಟೆ ಈ ಘಟನೆಯನ್ನು ನೆನಪಿಸಿಕೊಂಡಾಗ ನನ್ನಲ್ಲಿ ಹುಟ್ಟಿಕೊಳ್ಳುವ ಒಳನೋಟ. 
ಮುಂದೆ ತನ್ನ ಹೈಸ್ಕೂಲು ದಿನಗಳಲ್ಲಿ ರೂಪೇಶ ಬಹಳ‌ ಒಳ್ಳೆಯ ವಿದ್ಯಾರ್ಥಿಯಾಗಿಯೇ ಮುಂದುವರೆದ ಬಗ್ಗೆ  ಸಮಾಧಾನವಂತೂ ನನ್ನಲ್ಲಿದೆ.
    
        - ಸದಾಶಿವ ಕೆಂಚನೂರು
IMG 20220130 WA0036 min 1
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

WhatsApp Group Join Now
Telegram Group Join Now
Sharing Is Caring:

Leave a Comment