Amazing ಅಮೋಘಾ – ಶಿಕ್ಷಕನ ಡೈರಿಯಿಂದ 47

ಶಿಕ್ಷಕನ ಡೈರಿಯಿಂದ

Amazing ಅಮೋಘಾ…..!


                     ಮಹಾನಗರದಲ್ಲಿ ಕಲಿಯುತ್ತಿದ್ದ ಅಮೋಘಾ ಎಂಬ ಈ ಹುಡುಗಿ ನಮ್ಮ ಶಾಲೆಯ ಆರನೆಯ ತರಗತಿಗೆ ಸೇರಿದಾಕ್ಷಣ ತರಗತಿಯ ಮಕ್ಕಳಲ್ಲೊಂದು ಬಗೆಯ ಸಂಚಲನವಾಗಿರಲೂಬಹುದು. ಅವಳ ತೆಳ್ಳನೆಯ ನೀಳಕಾಯವೂ, ಅವಳು ತೊಡುವ ಆಧುನಿಕ ಉಡುಗೆಗಳೂ 'ತರಗತಿಗೊಬ್ಬಳು ಹೀರೋಯಿನ್ ಬಂದಳು' ಎಂದು ಹಲವರು ಯೋಚಿಸುವಂತೆ ಮಾಡಿರಲೂ ಬಹುದು. ಆದರೆ‌ ಒಂದೆರಡು ದಿನಗಳಲ್ಲೇ ಅವಳು ತೀರಾ ಪಾಪದ ಮುಗ್ಧ ಹುಡುಗಿಯೆಂದು ಎಲ್ಲರ ಅನುಭವಕ್ಕೆ ಬಂದಿತ್ತು. ಅವಳ ಮುಗ್ಧತೆ ಕೆಲವು ಮಕ್ಕಳಿಗೆ ಆಗಾಗ ನಗೆಯನ್ನೂ ತರಿಸಿದ್ದಿತ್ತು. ಶಿಕ್ಷಕರಿಗಂತೂ ಕೆಲವೊಮ್ಮೆ ಅವಳ ಮಾತುಗಳು ಅವಳದ್ದು ಮುಗ್ಧವರ್ತನೆಯೋ, ಅಥವಾ ತಮಾಷೆಗೆಂದು ಹಾಗೆ ನಟಿಸುತ್ತಿದ್ದಾಳೋ ಎಂದು ಗೊಂದಲ ಉಂಟುಮಾಡಿದ್ದೂ, ಕೋಪ ಬರಿಸಿದ್ದೂ ಇತ್ತು.
                
           ಒಮ್ಮೆ ಅವಳ ತರಗತಿಯೆದುರು ನಾನು ನಿಂತಿದ್ದೆ. ಅವಳ ತರಗತಿಯಲ್ಲಿ ಹಿರಿಯ ಶಿಕ್ಷಕಿಯೊಬ್ಬರಿದ್ದರು, ತುಸು ಸ್ಟ್ರಿಕ್ಟ್ ಟೀಚರ್ ಅವರು. ಕೊನೆಯ ಬೆಂಚಿನಲ್ಲಿ ಕುಳಿತಿದ್ದ ಈ ಹುಡುಗಿ ಹಿಂದಿನ ಬಾಗಿಲಿನಿಂದ ಹೊರಗೋಡಿ ಬಂದು "ಸರ್, ನಾನು ನೀರು ಕುಡಿದು ಬರಲೇ?" ಪ್ರಶ್ನಿಸಿದ್ದಳು. ನಾನು "ಒಳಗೆ ಟೀಚರ್ ಇದಾರಲ್ಲ, ಅವರಲ್ಲಿ ಕೇಳಬೇಕು" ಎಂದೆ. "ಅವರಲ್ಲಿ ಕೇಳಲು ಭಯವಾಗ್ತದೆ, ಪೆಟ್ಟು ಕೊಟ್ರೆ..?" ಎಂದು ಪೆಚ್ಚುಪೆಚ್ಚಾಗಿ ನುಡಿದಿದ್ದಳು. ನನಗೆ ನಗುವುದೋ ಅಳುವುದೋ ತಿಳಿಯದ ಪರಿಸ್ಥಿತಿ. "ಕೇಳಲು ಭಯವಾಗ್ತದೆ, ಹಾಗೇ ಹೊರಗೆ ಓಡಿಬರಲು ಭಯವಾಗುವುದಿಲ್ವೇ?"ಕೇಳಿದೆ. ಹುಡುಗಿ ನಸುನಗುವಿನೊಂದಿಗೆ ತಲೆತಗ್ಗಿಸಿ ನಿಂತಿದ್ದಳು. ಹಾಗೆಲ್ಲಾ ಹೆದರುವ ಅಗತ್ಯವಿಲ್ಲ ಎಂದು ತಿಳಿಹೇಳಿದೆ.

           ಕೆಲವು ದಿನಗಳು ಕಳೆವಷ್ಟರಲ್ಲಿ ಶಿಕ್ಷಕರಿಗೆಲ್ಲಾ ಆಕೆಯದು ಮಗುವಿನಂತಹ ಮನಸ್ಸು ಎನ್ನುವುದು ಅರ್ಥವಾಗಿತ್ತು. ಆದರೆ ಮಕ್ಕಳು ಅವಳನ್ನು  ಅರ್ಥಮಾಡಿಕೊಳ್ಳಲು ತುಸು‌ ಸಮಯ ತೆಗೆದುಕೊಂಡರೋ, ಅಥವಾ ಅವಳೇ ಉಳಿದವರೊಡನೆ ಬೆರೆಯುವುದರಲ್ಲಿ ಹಿಂದುಳಿದಳೋ... ಆರನೇ ತರಗತಿಯ ತರಗತಿ ಶಿಕ್ಷಕನಾಗಿದ್ದ ನನಗೆ ಆಕೆ ಸಹಪಾಠಿಗಳಿಂದ ಕೊಂಚ ಅಂತರದಿಂದಿರುವುದು ಗಮನಕ್ಕೆ ಬಂದಿತ್ತು.  ನಲವತ್ತಕ್ಕಿಂತ ಹೆಚ್ಚು ಮಕ್ಕಳುಳ್ಳ ತರಗತಿಯಲ್ಲಿ ಎಲ್ಲಾ ಮಕ್ಕಳು ಪರಸ್ಪರರನ್ನು ಅರ್ಥ ಮಾಡಿಕೊಳ್ಳಲೂ ಒಂದಿಷ್ಟು ಕಾಲಾವಕಾಶ ಬೇಕಿತ್ತು ಬಿಡಿ. ಅವಳ ಸಹಪಾಠಿ ಹುಡುಗಿಯರು 'ಅವಳು ಪೆದ್ದುಪೆದ್ದಾಗಿ ವರ್ತಿಸುತ್ತಾಳೆ' ಎಂದು ಭಾವಿಸಿ ಅವಳಿಗೆ ಬುದ್ಧಿಹೇಳುವುದು, ಕೆಲವೊಮ್ಮೆ ತುಸು ಜೋರು ಮಾಡುವುದು ನನ್ನ ಗಮನಕ್ಕೆ ಬಂದಿದ್ದೂ ಇತ್ತು. ಮಗುವಿನ‌ ಸಾಮಾಜೀಕರಣಕ್ಕೆ ಇದೆಲ್ಲ ಅಗತ್ಯವಾದುದೇ ಎಂದು ನಾನು ಭಾವಿಸಿದ್ದೆ. ಅವರ್ಯಾರೂ ಅವಳನ್ನು ಆಡಿಕೊಂಡು ನಗುವ ಸಣ್ಣತನ ತೋರಿರದಿದ್ದುದು ನನ್ನ ಗಮನದಲ್ಲಿತ್ತು. ಆದರೂ ಅಮೋಘ  ತರಗತಿಯಲ್ಲಿ ಉಳಿದ ಮಕ್ಕಳ ಮೇಲೆ ಸಣ್ಣ ವಿಷಯಕ್ಕೆ ಬೇಸರಗೊಂಡಿದ್ದೂ, ನಾನವಳಿಗೆ ಆತ್ಮ ವಿಶ್ವಾಸ ತುಂಬಿದ್ದೂ, ಉಳಿದ ಮಕ್ಕಳಿಗೂ ಅವಳೊಂದಿಗೆ ಕಟುವಾಗಿ ವರ್ತಿಸಬಾರದೆಂಬಂತೆ ಸೂಚಿಸಿದ್ದೂ ಎರಡು ಮೂರು ಬಾರಿ ನಡೆದಿತ್ತು. 
 
              ಇದೇ ಸಮಯದಲ್ಲಿ  ನಾನು ಮಕ್ಕಳ ಸ್ಥಳಗಳನ್ನು ಬದಲಿಸಿ, ಮಕ್ಕಳ ಎತ್ತರಕ್ಕನುಸಾರ ಕುಳ್ಳಿರಿಸಿದ್ದೆ. ಅಮೋಘಾಳ ಪಕ್ಕಕ್ಕೆ ಶಹೀನಾ ಬಂದಿದ್ದಳು. ಬಹುಶಃ ಆ ತರಗತಿಯಲ್ಲಿ  ಅಮೋಘಾಳ ಪಾಲಿಗೆ ಮಹತ್ವದ ತಿರುವು ಅದು. ಮಗುವಿನಂತಹ ಅಮೋಘಾಳಿಗೆ ತಾಯಿಯಂತಹ ಶಹೀನಾ ಸಿಕ್ಕಿದ್ದಳು. ಶಹೀನಾ ಶಾಂತಸ್ವಭಾವದ, ಆದರೆ ದೃಢ ನಿಲುವಿನ ಪ್ರಬುದ್ಧ ಹುಡುಗಿ...  ಅಮೋಘ  ಶಹೀನಾಳನ್ನು ಗಾಢವಾಗಿ ಹಚ್ಚಿಕೊಂಡಿದ್ದೂ, ಅವರಿಬ್ಬರೂ ಪರಸ್ಪರರ ಸಾಮಿಪ್ಯವನ್ನು ಅತಿಯಾಗಿ ಆನಂದಿಸುತ್ತಿದ್ದುದನ್ನು ಕಂಡು ನಾನೂ ಖುಷಿ ಪಟ್ಟಿದ್ದೆ. ಶಹೀನಾಳ ಸಾಂಗತ್ಯ ತರಗತಿಯೊಳಗೆ ಅಮೋಘಳ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಅವಳ ವರ್ತನೆಯಲ್ಲಿ‌ ಮುಗ್ಧತೆಯೊಡನೆ ಪ್ರಬುದ್ಧತೆಯೂ ಕಾಣಿಸತೊಡಗಿತು. ಅವಳು ಉಳಿದ ಮಕ್ಕಳಿಗೂ ಆಪ್ತಳಾದಳು.

              Amazing ಅಮೋಘಾ... ಅವಳಿಗೆ ಅವಳೇ ಇಟ್ಟುಕೊಂಡ ಹೆಸರದು. English adjectiveಗಳ‌ ಪದಭಂಡಾರ ಹೆಚ್ಚಿಸಲು ತಮ್ಮ ಹೆಸರ ಮೊದಲಕ್ಷರದಿಂದ ಪ್ರಾರಂಭವಾಗುವ adjectiveನೊಂದಿಗೆ ತಮ್ಮ ಹೆಸರನ್ನು ಸೇರಿಸಿಕೊಳ್ಳುವ ಚಟುವಟಿಕೆಯೊಂದನ್ನು ಕೊಟ್ಟಿದ್ದೆ. ಅಮೋಘ ತನ್ನ ಹೆಸರನ್ನು Amazing Amogha ಎಂದಾಗ ನನಗೆ ಅದೆಷ್ಟು ಚೆಂದದ ಹೆಸರೆನಿಸಿತು.  ಅಂದಿನಿಂದ ನಾನವಳನ್ನು 
ಹಾಗೇ ಕರೆಯಲು ಪ್ರಾರಂಭಿಸಿದೆ.

            ಚಿತ್ರ ಬಿಡಿಸುವುದೆಂದರೆ ಅಮೋಘಾಳಿಗೆ ಬಹಳ ಪ್ರಿಯವಾದ ಹವ್ಯಾಸ. ಆಗಾಗ ಸುಂದರ ಚಿತ್ರಗಳನ್ನು ಬಿಡಿಸಿ ನಮಗೆ ತೋರಿಸುತ್ತಿದ್ದಳು. ನಮ್ಮ ಮೆಚ್ಚುಗೆ ಅವಳಿಗೂ ಖುಷಿಕೊಡುತ್ತಿತ್ತು. ಒಂದು ದಿನ ತರಗತಿಯಲ್ಲಿ  ನಾನು ಜೋಕೊಂದನ್ನು ಹೇಳುತ್ತಿದ್ದೆ.  ಹೇಳಿ ಮುಗಿಸುವಾಗ ಅಮೋಘಾ ಏನೋ ಬರೆಯುತ್ತಿರುವಂತೆ ಕಾಣಿಸಿತು. "ಏನದು, ತೋರಿಸು" ಎಂದೆ ಗಂಭೀರವಾಗಿ. ಪುಸ್ತಕ‌ಅಡಗಿಸಿಡುವ ಪ್ರಯತ್ನ ಮಾಡಿದಳು. ನಾನು ಬಿಡಲಿಲ್ಲ. ಪುಸ್ತಕ ಬಿಡಿಸಿ ನೋಡಿದರೆ ಆಕೆ ನಾನು ಹೇಳಿದ ಜೋಕನ್ನು ಚಿತ್ರರೂಪಕ್ಕೆ ತಂದಿರುವುದು ಕಾಣಿಸಿತು. ಚಿತ್ರಕಲೆಯಲ್ಲಿನ‌ ಅವಳ ತಾದಾತ್ಮ್ಯತೆ ನನಗಂತೂ ಅತೀವ ಖುಷಿಕೊಟ್ಟಿತ್ತು. ನನಗಾಗ ಚಿತ್ರಕಲೆಯಲ್ಲಿ ಸಾಧನೆ ಮಾಡಿದ ನನ್ನ ಹಳೆ ವಿದ್ಯಾರ್ಥಿ ಅಕ್ಷಯ್ ನೆನಪಾದ. ಚಿತ್ರಕಲೆಯ ಕ್ರೇಜ್ ನಲ್ಲಿ ಅವನಿಗೂ ಇವಳಿಗೂ ಬಹಳ ಹೋಲಿಕೆಯಿದೆಯೆನಿಸಿತು. (ಅಕ್ಷಯನ ಕುರಿತಾಗಿ ಹಿಂದೊಮ್ಮೆ "ಅಕ್ಷಯ ಕಲಾವಿದ" ಎಂಬ ಶೀರ್ಷಿಕೆಯಡಿ ಬರೆದಿದ್ದೆ). ಅವಳು ಬಿಡಿಸಿದ ಚಿತ್ರದ ಕುರಿತಾಗಿ ಮೆಚ್ಚುಗೆಯ ಮಾತನಾಡಿ "ದೊಡ್ಡ ಕಲಾವಿದೆಯಾಗುವ ಲಕ್ಷಣ ನಿನ್ನಲ್ಲಿದೆ.." ಎಂದೆ. ಅಮೋಘಾಳ ಮುಖದಲ್ಲಿ ಮಿಂಚು.. "ಹೀಗೆ ಹೇಳಿದ್ದು ನಾನೇ ಮೊದಲಾ?" ಕೇಳಿದೆ. ಹೌದೆಂದು ತಲೆಯಾಡಿಸಿದಳು. "ಹಾಗಾದರೆ  ದೊಡ್ಡ ಕಲಾವಿದೆಯಾದ ನಂತರ ನೀನು ನನ್ನದೇ ಚಿತ್ರವೊಂದನ್ನು ಬಿಡಿಸಿ ನನಗೆ ಉಡುಗೊರೆಯಾಗಿ ಕೊಡಬೇಕು." ಎಂದೆ ನಗುತ್ತಾ. "ಆಯಿತು ಕೊಡುತ್ತೇನೆ.." ಎಂದಳು.
         ಮರುದಿನ ಅಮೋಘ ಚಿಕ್ಕ ಕಾಗದವೊಂದನ್ನು ನನ್ನಲ್ಲಿ‌ ತಂದುಕೊಟ್ಟಿದ್ದಳು. ಅದರಲ್ಲಿ ಜೋಡಿಯ ಚಿತ್ರವೊಂದನ್ನು ಬಿಡಿಸಿದ್ದಳು. ಸರಿಯಾಗಿ ಗಮನಿಸಿದೆ. ನನ್ನ ವಾಟ್ಸ್ಆಪ್ ಡೀಪಿಯನ್ನು ಹೋಲುತ್ತಿದ್ದ ಚಿತ್ರವದು‌. ಅವಳು ನನ್ನ ಮತ್ತು‌ ನನ್ನ ಹೆಂಡತಿಯ ಚಿತ್ರ ಬಿಡಿಸುವ ಪ್ರಯತ್ನ ಮಾಡಿದ್ದಳು. ನನ್ನ ಮನಸ್ಸು ತುಂಬಿ ಬಂತು. ಧನ್ಯವಾದ ತಿಳಿಸಿ ಇನ್ನೂ ಚೆಂದದ ಚಿತ್ರ ಬಿಡಿಸಿ ಕೊಡುವ ದಿನ ಬೇಗ ಬರಲೆಂದು ಹಾರೈಸಿದೆ.

         ಆರನೆಯ ತರಗತಿಯ  ಇಂಗ್ಲೀಷ್ ಪಾಠವೊಂದರ ಕೊನೆಯಲ್ಲಿ ಪತ್ರ ಬರೆಯುವ ಚಟುವಟಿಕೆಯೊಂದನ್ನು ನೀಡಬೇಕಿತ್ತು. ನಿಮಗೆ ಇಷ್ಟವಾದ ಯಾರಿಗಾದರೂ ಒಂದು ಪತ್ರ ಬರೆದುಕೊಂಡು ಬನ್ನಿ ಎಂದಿದ್ದೆ. ಎಲ್ಲರೂ ಸ್ನೇಹಿತರಿಗೋ, ಕುಟುಂಬದ ಸದಸ್ಯರಿಗೋ ಪತ್ರ ಬರೆದಿದ್ದರೆ ಅಮೋಘಾ ನನಗೇ ಪತ್ರ ಬರೆದಿದ್ದಳು. ಅವಳು ಬರೆದ ಪತ್ರದಲ್ಲಿ ಆಕೆ ನನ್ನ ಕುರಿತಾಗಿ ಆಕೆ ಪ್ರಾಮಾಣಿಕ ಅಭಿಪ್ರಾಯ ಬರೆದಂತೆ ಕಾಣಿಸಿತು. ನನ್ನ ಮೇಲೆ ಆಕೆ ಅಪಾರ ಪ್ರೀತಿಯಿಟ್ಟಿದ್ದಾಳೆ ಎನಿಸಿತು. ಓದಿದ ನಾನು ಭಾವುಕನಾದೆ. ನನ್ನ ವಿದ್ಯಾರ್ಥಿಗಳ ಕಡೆಯಿಂದ ನನಗೆ ಬಂದ‌‌ ಮೊದಲ ಪತ್ರ ಅದಾಗಿತ್ತು.

           ನನ್ನ ಬಗ್ಗೆ ಇಷ್ಟು ಪ್ರೀತಿಯಿಟ್ಟಿದ್ದ ಅಮೋಘಾಳ ಪಾಲಿಗೆ ನಾನು ವಿಲನ್ ಆಗಬೇಕಾದ ದಿನವೂ ಬಂತು.. ಅಮೋಘಾ ಈಗ ಏಳನೆಯ ತರಗತಿಗೆ ಬಂದಿದ್ದಳು. ಏಳನೇ ಕ್ಲಾಸಿನ ತರಗತಿ ಶಿಕ್ಷಕರು ನನಗೊಂದು ಸಣ್ಣ ಕೆಲಸ ಹೇಳಿದ್ದರು, "ನೀವು ಆರನೇ ತರಗತಿಯಲ್ಲಿದ್ದಾಗ ಈ ಮಕ್ಕಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಲ್ಲಾ, ಇವರ ಪ್ಲೇಸ್ ಚೇಂಜ್ ಮಾಡ್ತೀರಾ ಒಮ್ಮೆ..?" ನಾನು‌ ಯಾಕೆ ಏನು ಕೇಳದೇ ಓಕೆ ಅಂದಿದ್ದೆ. ನಾವು ಆಗಾಗ ಮಕ್ಕಳು ಕುಳಿತುಕೊಳ್ಳುವ ಸ್ಥಳದಲ್ಲಿ ಬದಲಾವಣೆ ಮಾಡುವಾಗ ಬೇರೆ ಬೇರೆ ಅಂಶಗಳನ್ನು ಪರಿಗಣಿಸುತ್ತಿದ್ದೆವು. ಒಂದು ಬೆಂಚಿನಲ್ಲಿ ಬೇರೆ ಬೇರೆ ಕಲಿಕಾ ಸ್ತರದ ಮಕ್ಕಳು ಕುಳಿತಿರಬೇಕು., ತುಂಬಾ ತಂಟೆ‌ ಮಾಡುವ ಮಕ್ಕಳು ಒಂದೇ ಬದಿಯಲ್ಲಿ ಕೇಂದ್ರೀಕೃತರಾಗಬಾರದು,  ತುಂಬಾ ಆತ್ಮೀಯರಾಗಿರುವ ಎರಡೋ ಮೂರೋ ಮಕ್ಕಳು ಒಂದೇ ಕಡೆ ಕುಳಿತು ಉಳಿದವರೊಂದಿಗೆ ಬೆರೆಯದೇ ದ್ವೀಪದಂತಾಗುವುದನ್ನು ತಡೆಯಬೇಕು,  ಎಂಬಿತ್ಯಾದಿ‌ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮಕ್ಕಳ ಪ್ಲೇಸ್ ಚೇಂಜ್ ಮಾಡುವುದು ನಮ್ಮ‌ಕ್ರಮವಾಗಿತ್ತು. ನಾನು‌‌ ಏಳನೇ ತರಗತಿಯಲ್ಲಿ ಇದನ್ನೆಲ್ಲಾ‌ ಅನುಷ್ಠಾನಗೊಳಿಸಲು ಹೊರಟೆ.

          ಅಮೋಘಾ ಮತ್ತು ಶಹೀನಾಳ ಸ್ನೇಹದ ಕುರಿತಾಗಿ ನೀವು ಬಲ್ಲಿರಿ. ಆರನೆಯ ತರಗತಿಯಿಂದ ಅವರಿಬ್ಬರೂ ಒಟ್ಟಿಗೇ ಕುಳಿತಿದ್ದರು. ಉಳಿದವರ ಸ್ಥಳಗಳು ಚೂರು ಪಾರು ಬದಲಾಗಿದ್ದರೂ ಅವರಿಬ್ಬರು ಒಟ್ಟಿಗೇ ಇದ್ದರು.  ದೀರ್ಘಕಾಲ ಜೊತೆಗೆ  ಕುಳಿತವರ ಸ್ಥಳಗಳನ್ನು ನಾವು ಆಗಾಗ ಬದಲಿಸುತ್ತಿದ್ದೆವು‌. ಆದರೆ ಇವರಿಬ್ಬರ ಸ್ಥಳ ಬದಲಾಯಿಸಿಲ್ಲ ಎಂಬ ಆಕ್ಷೇಪಣೆಯನ್ನು ತರಗತಿಯ ಹುಡುಗರು ಮೊದಲೇ ಎತ್ತಿದ್ದರು. ಅದೂ ಅಲ್ಲದೇ ನಾನೀಗ ಎಲ್ಲರ ಸ್ಥಳವನ್ನೂ ಬದಲಿಸಲೇಬೇಕಿತ್ತು.  ಬದಲಾವಣೆ ಬರಿಯ ಸ್ಥಳದ್ದಾಗಿರಲಿಲ್ಲ., ಪ್ರತಿಯೊಬ್ಬರ ಅಕ್ಕಪಕ್ಕ ಕುಳಿತವರನ್ನೂ ಬದಲಿಸುವ ಯೋಚನೆಯಿದ್ದದ್ದು.., ಮಕ್ಕಳೆಲ್ಲರೂ ಹೊಸ ಹೊಸ ಗೆಳೆಯರನ್ನು ಪಡೆಯಬೇಕಲ್ಲ...  ಅಮೋಘಾ ಮತ್ತು ಶಹೀನಾಳನ್ನು ದೂರಮಾಡಲೇಬೇಕಿತ್ತು.      ತರಗತಿಯಲ್ಲಿ ನಿರುಪದ್ರವಿಗಳಾಗಿದ್ದ ಅಮೋಘಾ ಮತ್ತು ಶಹೀನಾಳ ವಿಚಾರದಲ್ಲಿ ನಾನು ಪಕ್ಷಪಾತಿಯೇ ಆಗಿದ್ದೆ. ಶಹೀನಾಳನ್ನು ಅಮೋಘಾಳ ಪಕ್ಕದಿಂದ ಎಬ್ಬಿಸಿದೆನಾದರೂ ಅವಳ ಎದುರುಗಡೆಯೇ ಕೂರಿಸಿದ್ದೆ. ಆದರೆ ಇದನ್ನು ಅರ್ಥಮಾಡಿಕೊಳ್ಳುವ ಮನಸ್ಥಿತಿಯಲ್ಲಿ ಅಮೋಘಾಳಿರಲಿಲ್ಲ. ಡೆಸ್ಕಿಗೆ ತಲೆಕೊಟ್ಟು ನಿಶ್ಶಬ್ದವಾಗಿ ಅಳತೊಡಗಿದಳು. ಅವಳನ್ನು ಮಾತನಾಡಿಸಲು,  ಸಮಾಧಾನಪಡಿಸಲು ಪ್ರಯತ್ನಿಸಿದೆ. ಶಹೀನಾ ಹತ್ತಿರದಲ್ಲೇ ಇದ್ದಾಳಲ್ಲಾ ಎಂದು ತಿಳಿಸಲೂ ಪ್ರಯತ್ನಿಸಿದೆ. ಅವಳ ಪಕ್ಕದಲ್ಲಿ ಹೊಸದಾಗಿ ಬಂದು ಕುಳಿತ ಹುಡುಗಿಯೂ ಅವಳ ತಲೆನೇವರಿಸಿ ಸಾಂತ್ವನಗೈಯಲು ಪ್ರಯತ್ನಿಸಿದಳು. ಅವಳ ತಲೆಯನ್ನು ತುಸುವೂ ಮೇಲೆತ್ತಿಸಲಾಗಲಿಲ್ಲ. ಇದು ಅತಿಯಾಯಿತೆನ್ನಿಸಿತು‌. ಶಹೀನಾಳನ್ನೂ ಸ್ವಲ್ಪ ದೂರವೇ ಕುಳ್ಳಿರಿಸಿದೆ. ನನ್ನ ಅಹಂಕಾರಕ್ಕೆ ಪೆಟ್ಟುಬಿದ್ದಿತ್ತು. "ಹೆಚ್ಚು ಸಾಂತ್ವನ ಬೇಕಿಲ್ಲ, ಸ್ವಲ್ಪ ಹೊತ್ತು ಹೀಗೇ ಇರಲಿ, ಸರಿಯಾಗ್ತಾಳೆ" ಎಂದೆ.

           ಅಷ್ಟರಲ್ಲಿ ತರಗತಿಯ ಹುಡುಗಿಯೊಬ್ಬಳು ನನ್ನಲ್ಲಿ ಹೇಳಿದ್ದಳು, "ನಿನ್ನೆ ಸರ್ ಪ್ಲೇಸ್ ಚೇಂಜ್ ಮಾಡ್ಲಿಕ್ಕೆ ಹೊರಟಿದ್ರು, ಅಷ್ಟೊತ್ತಿಗೆ ಅಮೋಘಾ ಶಹೀನಾಳ ಕೈಯನ್ನು ಗಟ್ಟಿಯಾಗಿ ಹಿಡ್ಕೊಂಡುಬಿಟ್ಟಿದ್ಲು.." ಅವರ ಕ್ಲಾಸ್ ಟೀಚರ್ ಈ ಕೆಲಸವನ್ನು ನನಗೆ ವರ್ಗಾಯಿಸಲು ಇಂಥದೊಂದು ಕಾರಣವಿತ್ತೆಂದು ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಈ ಕೆಲಸಕ್ಕೆ ನಾನು ಕೈ ಹಾಕುತ್ತಿರಲಿಲ್ಲವೇನೋ? ಈ ಕೇಸನ್ನು ನಾನು  ನಿಭಾಯಿಸಬಲ್ಲೆನೇನೋ ಎಂದು ಅದನ್ನವರು ನನಗೆ ವರ್ಗಾಯಿಸಿದ್ದರು.

         ನಾನು ಅಮೋಘಾಳನ್ನು ಮತ್ತೆ ಮಾತನಾಡಿಸಲಿಲ್ಲ‌. ಅಮೋಘಾಳ ಪಕ್ಕ ಬಂದಿದ್ದ ಹೊಸ ಸ್ನೇಹಿತೆಯರು ಮಾತ್ರ ಅವಳ ಮೇಲೆ ಪ್ರೀತಿಯ ಸಿಂಚನಗೈದು ಸಮಾಧಾನಿಸಿದ್ದರು. ಮರುದಿನ ಬೆಳಿಗ್ಗೆ ತರಗತಿಯ ಹೊರಗೆ ಅಮೋಘಾ ಸಿಕ್ಕಳು.. ಶಹೀನಾಳೂ ಜೊತೆಗಿದ್ದಳು. "Amazing ಅಮೋಘಾ.." ಎಂದೆ.. ಸಣ್ಣಗೆ ನಕ್ಕಳು.. "ಸರಿ ಆದ್ಯಾ?" ಕೇಳಿದೆ. "ಹೌದು" ಎಂಬಂತೆ ತಲೆಯಾಡಿಸಿದಳು. ನಾನ್ಯಾಕೆ ಅವರಿಬ್ಬರನ್ನು ದೂರ ಕುಳ್ಳಿರಿಸಿದೆ ಎಂದವಳಿಗೆ ವಿವರಿಸಬೇಕಿತ್ತು. "ಜೀವನದಲ್ಲಿ ಶಾಶ್ವತವಾಗಿ ಯಾರೂ ಜೊತೆಗಿರಲು ಸಾಧ್ಯವಿಲ್ಲ, ಒಬ್ಬರನ್ನೊಬ್ಬರು ಅಗಲಲೇಬೇಕು..; ದೂರ ಕುಳಿತ ತಕ್ಷಣ ಸ್ನೇಹ ದೂರವಾಗಲಾರದು, ತರಗತಿಯ‌‌ ಹೊರಗೆ ಉಳಿದ ಸಂದರ್ಭಗಳಲ್ಲೆಲ್ಲಾ ಒಟ್ಟಿಗೇ ಇರಬಹುದು; ಭೌತಿಕವಾಗಿ ಜೊತೆಗಿರುವುದು ಮುಖ್ಯವಲ್ಲ, ಭೌತಿಕವಾಗಿ ದೂರವಿದ್ದರೂ ಮಾನಸಿಕವಾಗಿ ಹತ್ತಿರವಿರುವುದು ಮುಖ್ಯ, ಅದನ್ನು ಕಲಿಯುವುದು ‌ಮುಖ್ಯ.. ಹೊಸ ಸ್ನೇಹಿತೆಯರ ಸ್ನೇಹದ ಅನುಭವವೂ ಈಗ ಸಿಕ್ಕಿತಲ್ಲ..." ಎಂಬಿತ್ಯಾದಿ ವಿಚಾರಗಳನ್ನು ಆಕೆಗೆ ಅರ್ಥವಾಗುವ ಪದಗಳಲ್ಲಿ  ತಿಳಿಸಿದವನು 'ಅಬ್ಬಬ್ಬಾ, ಒಂದು ಸ್ಥಳ ಬದಲಾವಣೆಯಲ್ಲಿ ಇಷ್ಟೆಲ್ಲಾ ಫಿಲಾಸಫಿಯಿದೆಯಲ್ಲಾ..' ಎಂದು‌  ಅಚ್ಚರಿಪಟ್ಟೆ.

            ಅಮೋಘಾಳ ಮುಖ‌ನೋಡಿದೆ. ಅವಳ ಮುಖ ಶಾಂತವಾಗಿತ್ತು. ನನ್ನ ವಿಚಾರಗಳನ್ನು ಆಕೆ ಒಪ್ಪಿದ್ದಳು. ಅವರಿಬ್ಬರನ್ನೂ ದೂರ ಕೂರಿಸಿದ್ದೂ ಅವಳ ಪಾಲಿಗೆ ಮಹತ್ವದ‌ ತಿರುವು ಎಂದು ನನಗನಿಸಿತು‌. ಅವಳೀಗ ಭಾವನಾತ್ಮಕವಾಗಿ ಗಟ್ಟಿಯಾಗಿದ್ದಾಳೆ ಎಂದುಕೊಂಡು ನನ್ನ ನಡೆಯ ಬಗ್ಗೆ ನಾನೇ ಖುಷಿಪಟ್ಟೆ.

             - ಸದಾಶಿವ ಕೆಂಚನೂರು.
ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment