ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಈ ದಿನ ಪರಿಚಯಿಸಲಾಗುತ್ತಿರುವ ಕೃತಿ – ಶಿಕ್ಷಕ-ವಿದ್ಯಾರ್ಥಿ

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು

IMG 20220327 WA0013 min
ಶಿಕ್ಷಕ-ವಿದ್ಯಾರ್ಥಿ
IMG 20220327 WA0014 min
ಶಿಕ್ಷಕ-ವಿದ್ಯಾರ್ಥಿ

(ಕೃತಿ ಪರಿಚಯ – 11)

ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಇಂದು ಪರಿಚಯಿಸಲಾಗುತ್ತಿರುವ ಕೃತಿ , ಶಿಕ್ಷಕ-ವಿದ್ಯಾರ್ಥಿ.

ಪುಟಗಳು: 176.
ಲೇಖಕರು: ಶ್ರೀ.ಸಿ.ಎಚ್.ಕೃಷ್ಣಶಾಸ್ತ್ರಿ. ಬಾಳಿಲ (Haim Ginott ರವರ ಪುಸ್ತಕ  Teacher and Child  ಇದರ ಆಧಾರ.)
ಬೆಲೆ: 60.

ಪ್ರಕಾಶಕರು:- ಕನ್ನಡ ಪ್ರಪಂಚ ಪ್ರಕಾಶನ.

ಮುದ್ರಣ: ಶೋಭಾ ಹೈಟೆಕ್ ಪ್ರಿಂಟರ್ಸ್.

          ಶಿಕ್ಷಕ ವೃತ್ತಿಯೆಂದರೆ ಅದೊಂದು ಅತ್ಯಮೂಲ್ಯವಾದಂತಹ ಸೇವೆ. ಶಿಕ್ಷಕನಾದವನು ವೃತ್ತಿಯಲ್ಲಿ ಅತೀ ಜವಾಬ್ದಾರಿಯುತವಾಗಿ, ಜಾಗರೂಕವಾಗಿ, ಸ್ಥಿತಪ್ರಜ್ಞೆ ಯಿಂದ ಇರಬೇಕಾಗುತ್ತದೆ. ಒಂದಷ್ಟು ಎಡವಿದರೂ ಪಶ್ಚಾತಾಪದ ಸರದಿಯೂ ಒದಗಿಬರಬಹುದು.
     ಒಂದು ಸಮಾಜ ಅಭಿವೃದ್ಧಿಯ ಕಡೆಗೆ ಸಾಗಬೇಕು ಎಂದಾದರೆ ಅಲ್ಲಿಯ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಜವಾಬ್ದಾರಿಯುತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ಭಾವನೆಗಳೊಂದಿಗೆ ಸಂವಹನ ನಡೆಸುತ್ತಿರುತ್ತಾರೆ. ಇತರ ವೃತ್ತಿಯಲ್ಲಿರುವಂತೆ ನಿರ್ಜೀವ ವಸ್ತುಗಳು ಅವರೊಂದಿಗೆ ಇರದೆ, ಇವರ ಪ್ರತೀ ಚಲನವಲನ,ಸಂವಹನ,ಕಾರ್ಯವೈಖರಿಗಳನ್ನು ಅನುಕರಿಸುವ, ಅನುಸರಿಸುವ ಜೀವಗಳು ಅಕ್ಕಪಕ್ಕಗಳಲ್ಲಿ ಓಡಾಡುತ್ತಿರುತ್ತವೆ.
      ಇಂತಹ ಸನ್ನಿವೇಶಗಳಲ್ಲಿ ಶಿಕ್ಷಕರಾದವರು ತಮಲ್ಲಿ ಅತ್ಯಂತ ಜಾಗರೂಕತೆಯಿಂದ ಕೌಶಲ್ಯಭರಿತವಾಗಿ ವರ್ತಿಸುವ ಚಾಕಚಕ್ಯತೆಯನ್ನು ಪಡೆದಿರಬೇಕಾಗುತ್ತದೆ.
      ಕೆಲವು ಬಾರಿ ವಿದ್ಯಾರ್ಥಿಗಳನ್ನು ನಿಭಾಯಿಸಲಾಗದೆ ತಮಗೆ ಉಂಟಾದ ನಕಾರಾತ್ಮಕ ಭಾವನೆಗಳನ್ನು ಹಿಡಿದಿಡಲಾಗದೆ ಹೊರಗೆಡವಿ ಪಶ್ಚಾತಾಪದ ಸನ್ನಿವೇಶ ಒದಗಿರುವುದೂ ಇದೆ. ಹಾಗೆಯೇ ಶಿಕ್ಷಕರು ಒಂದಷ್ಟು ದುಗುಡ,ನಿರಾಶೆ, ಹತಾಶೆಯನ್ನು ಹೊಂದುವುದನ್ನು ಕಾಣಬಹುದು.
     ಈ ಎಲ್ಲಾ ಸಮಸ್ಯೆಗಳನ್ನು ನಮ್ಮೊಳಗೇ ವಿಮರ್ಶೆಗಳೊಂದಿಗೆ ಪರಿಹರಿಸಲು ಒಂದಷ್ಟು ಸಹಾಯಕವಾಗುವ ಹೊತ್ತಗೆಯೆಂದರೆ ಈ ‘ಶಿಕ್ಷಕ-ವಿದ್ಯಾರ್ಥಿ’ .

    ಈ ಹೊತ್ತಗೆಯೊಳಗೆ ಶಿಕ್ಷಕರು ತರಗತಿ ಕೋಣೆಯೊಳಗೆ ನಿಮಿಷ ನಿಮಿಷಕ್ಕೂ ಎದುರಿಸುವ ಸಮಸ್ಯೆಗಳು, ಕಿರಿ ಕಿರಿ ಎನಿಸುವ ಅನಿರೀಕ್ಷಿತ ಬಿಕ್ಕಟ್ಟಿನ ಪ್ರಸಂಗಗಳನ್ನು ಬಗೆಹರಿಸಲು ಬೇಕಾಗುವ ಕೌಶಲಗಳನ್ನು ಒದಗಿಸಿಕೊಟ್ಟಿದ್ದಾರೆ. ತರಗತಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬರಿಯ ಪುಸ್ತಕದ ಜ್ಞಾನದಿಂದ ಬಗೆಹರಿಸಲಾಗದೇ ಆ ಸನ್ನಿವೇಶವನ್ನು ನಿಭಾಯಿಸುವ ಕೌಶಲವನ್ನು ಶಿಕ್ಷಕರಲ್ಲಿರಬೇಕಾಗುತ್ತದೆ. ಲೇಖಕರು ಇಲ್ಲಿ ಶಿಕ್ಷಕರ ಆಶಾಕಿರಣವಾಗಿದ್ದಾರೆ. ಶಾಲಾ ವಾತಾವರಣದಲ್ಲಿ ಉಂಟಾಗುವ ಭಾವನಾತ್ಮಕ ಸಮಸ್ಯೆಗಳಿಗೆ ಮನೋವೈಜ್ಞಾನಿಕ ಪರಿಹಾರಗಳನ್ನು ಇಲ್ಲಿ ಒದಗಿಸಿದ್ದಾರೆ. ಶಿಕ್ಷಕ ಇಲ್ಲಿ ಬರಿಯ ಶಿಕ್ಷಕನಾಗಿರದೆ ಮನೋವಿಜ್ಞಾನಿ, ವೈದ್ಯ, ಸ್ನೇಹಿತ, ಪೋಷಕ ಎಲ್ಲಾ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಒಂದಷ್ಟು ಸಹಾಯಮಾಡಬಹುದಾದ ಪುಸ್ತಕ ಇದಾಗಿದೆ.
   ಪುಸ್ತಕವನ್ನೊಮ್ಮೆ ಅವಲೋಕಿಸಿದಾಗ, ಶಿಕ್ಷಕನಾದವನಿಗೆ ತರಗತಿಗೆ ಕಾಲಿಡುವ ಮೊದಲು ತರಗತಿಯಲ್ಲಿ ಉಂಟಾಗಬಹುದಾದ ಕ್ಲಿಷ್ಠಕರ ಸನ್ನಿವೇಶಗಳಿಗೆ ಒಂದಷ್ಟು ಮಾನಸಿಕ ತಯಾರಿ, ಮತ್ತು ತರಗತಿ ನಿಭಾಯಿಸಲು ಸಹಾಯಕವಾಗಬಲ್ಲಂತಹ ದೃಷ್ಟಾಂತಗಳು ಅದಕ್ಕೆ ಪೂರಕ ಪರಿಹಾರಗಳನ್ನೂ ಒದಗಿಸುತ್ತದೆ.
   ಲೇಖಕರ ಕೊನೆಯ ಉಪಸಂಹಾರದಲ್ಲಿ ಕೊಟ್ಟಿರುವ ದೃಷ್ಟಾಂತದಲ್ಲಿ ಇರುವಂತಹ ಕೊನೆಯ ಸಾಲು….’ಓದು ಬರಹ,ಲೆಕ್ಕ-ಶಾಲೆಗಳಲ್ಲಿ ಮುಖ್ಯವಾದ ವಿಷಯಗಳು ನಿಜ. ಆದರೆ ಅವೆಲ್ಲವೂ ಒಬ್ಬ ವ್ಯಕ್ತಿಯನ್ನು ಹೆಚ್ಚೆಚ್ಚು ಮಾನವೀಯವಾಗಿ ಮಾಡಿದಾಗಲೇ ಒಬ್ಬ ಶಿಕ್ಷಕ/ಶಿಕ್ಷಕಿ ನೀಡಿದ ಶಿಕ್ಷಣ ಸಾರ್ಥಕವಾಗುವುದು…..’
         ಈ ಮಾತು ಶಿಕ್ಷಕರಾದ ನಮ್ಮ ನಿಮ್ಮೆಲ್ಲರ ಮನದ ಅಂಗಳಗಳಲ್ಲಿ ಅಲೆಗಳಂತೆ ಆಗಾಗ ಹಾದು ನಮ್ಮನ್ನು ಬಡಿದೆಚ್ಚರಿಸಿರುವುದಂತೂ ನಿಜ ಅಲ್ಲವೇ…..
        ಶಾಲೆಗಳಲ್ಲಿ ಇನ್ನಷ್ಟು ಚಲನಶೀಲರಾಗಿ ನಿರಂತರತೆಯತ್ತ ಸಾಗಲು ಈ ಪುಸ್ತಕವನ್ನು ಕೊಂಡು ಓದಿ ತಮ್ಮದಾಗಿಸಿಕೊಳ್ಳಿ ಎಲ್ಲರಿಗೂ ಶುಭವಾಗಲಿ ಎಂದು ಹೇಳುತ್ತಾ…..
       

          ನಾನು ಓದಿದ ಈ ಅಮೂಲ್ಯ ಹೊತ್ತಗೆಯನ್ನು ಪರಿಚಯಿಸಲು ಅವಕಾಶವನ್ನು ನೀಡಿದ, ಅಧ್ಯಕ್ಷರು/ಕಾರ್ಯದರ್ಶಿಗಳು
.ರಾ.ಪ್ರಾ.ಶಾಲಾ.ಶಿಕ್ಷಕರ ಸಂಘ(ರಿ) ದ.ಕ. ಇವರಿಗೆ ಹೃದಯಸ್ಪರ್ಶಿ ಕೃತಜ್ಞತೆಗಳು….

ಶ್ರೀಮತಿ ಪರಮೇಶ್ವರಿ

ಸಹಶಿಕ್ಷಕರು ಸ.ಉ.ಹಿ.ಪ್ರಾ.ಶಾಲೆ.ಜಾಲ್ಸೂರು.

ಆತ್ಮೀಯ ಶಿಕ್ಷಕ ಮಿತ್ರರೇ,
ನೀವು ಕೂಡ ಇದೇ ರೀತಿ ಹಲವು ಉತ್ತಮ ಪುಸ್ತಕಗಳನ್ನು ಓದಿ ತಮ್ಮದಾಗಿಸಿ ಜ್ಞಾನವನ್ನು ಹೆಚ್ಚಿಸಿಕೊಂಡಿರಬಹುದು. ನೀವು ಓದಿದ ಹೊತ್ತಗೆಯ ಪರಿಚಯವನ್ನು ನಮ್ಮೊಂದಿಗೆ ಇದೇ ರೀತಿ ಹಂಚುವ ಮೂಲಕ ನಮಗೂ ಜ್ಞಾನದ ಬೆಳಕನ್ನು ಹಚ್ಚುವಲ್ಲಿ ಕೈಜೋಡಿಸಬೇಕಾಗಿ ವಿನಂತಿ.
ತಮ್ಮ ಬರಹವನ್ನು ಕಳಿಸಬೇಕಾದ ಸಂಖ್ಯೆ :- 8970260893

Sharing Is Caring:

Leave a Comment