ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು
(ಕೃತಿ ಪರಿಚಯ – 9)
ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಈ ವಾರ ಪರಿಚಯಿಸಲಾಗುತ್ತಿರುವ ಕೃತಿ. ಆಯಿಷಾ
ಲೇಖಕರು:- ಆರ್ .ನಟರಾಜ್.(ತಮಿಳು)
ಕನ್ನಡಕ್ಕೆ ಅನುವಾದ:-ಎಸ್.ಬಿ.ಗಂಗಾಧರ.
ಪ್ರಕಾಶಕರು:- ವಿಶ್ವವ್ಯಾಪಿ ಗಣೇಶ ಪ್ರಕಾಶನ.
ಪುಸ್ತಕದ ಬೆಲೆ:-25/-
ಪುಟಗಳು:-60
ಈ ಪುಸ್ತಕ ನನ್ನನ್ನು ಬಹಳಷ್ಟು ಕಾಡಿದ,ಇತ್ತೀಚಿನವರೆಗೂ ಕಾಡುತ್ತಿರುವ ಪುಸ್ತಕ. ಇತ್ತೀಚಿಗೆ ನಾವೆಲ್ಲ ವಿಶ್ವಮಹಿಳಾ ದಿನವನ್ನು ಸಾಧನೆಗಳನ್ನು ಮೆರೆದ ಹಲವು ಮಹಿಳೆಯರ ಭಾವಚಿತ್ರಗಳನ್ನು ಪ್ರದರ್ಶಿಸಿ ಸಂಭ್ರಮದಿಂದ ಆಚರಿಸಿಕೊಂಡಿದ್ದೇವೆ. ಆದರೂ ಒಂದು ಕಡೆ ಸಮಾಜದಲ್ಲಿ ಅಸಮಾನತೆಯ ನೆರಳು ಇನ್ನೂ ಮಾಸಿಲ್ಲ ಅನ್ನುವ ಭಾವ ನಮ್ಮ ನಿಮ್ಮ ಮನದಲ್ಲಿ ಮೂಡದಿರಲು ಸಾಧ್ಯವಿಲ್ಲವೆಂದೆನಿಸುತ್ತದೆ. ಇಂತದ್ದೇ ಒಂದು ಆಲೋಚನಾ ಲಹರಿಯನ್ನು ಹೊಂದಿರುವ ಪುಟ್ಟ ಪುಸ್ತಕ ಈ ಆಯಿಷಾ.
ಆರ್ ನಾಗರಾಜನ್ ಅವರು ತಮಿಳಿನಲ್ಲಿ ಬರೆದ ಈ ಕಥೆಯನ್ನು ಗಂಗಾಧರ್ ಅವರು ಅನುವಾದಿಸಿದ್ದಾರೆ.
ಈ ಕಥೆಯಲ್ಲಿ ಹದಿನೈದು ವರ್ಷದ ಆಯಿಷಾ ವಿಜ್ಞಾನದ ವಿಷಯದಲ್ಲಿ ಅತೀ ಹೆಚ್ಚು ಆಸಕ್ತಿಯನ್ನು ಹೊಂದಿರುವ ಕಾರಣ ತರಗತಿಯಲ್ಲಿ ತನ್ನ ಶಿಕ್ಷಕರನ್ನು ಕೌತುಕ ಪ್ರಶ್ನೆಗಳ ಮೂಲಕ ಬೆರಗಾಗಿಸುವ ಸನ್ನಿವೇಶವನ್ನು ನೀಡುತ್ತಾಳೆ ,ಆಕೆ ಶಿಕ್ಷಕರಲ್ಲಿ ಕೇಳಿದ ಪ್ರಶ್ನೆಗಳಲ್ಲಿ , ‘ಮಿಸ್ ಕೆರೋಲಿನ್ಎರ್ಷೆಲ್ ರಂತಹ ಮೇರಿಕ್ಯೂರಿಯಂತಹ ಒಬ್ಬ ಹೆಣ್ಣು ಕೂಡ ವಿಜ್ಞಾನಿಯಾಗಿ ಬರಲಿಲ್ಲವಲ್ಲ ಏಕೆ…?’ ಇದು ಆಕೆಗೆ ಮಾತ್ರ ಅಲ್ಲ ,ಎಲ್ಲರನ್ನೂ ಕಾಡಿದ ಪ್ರಶ್ನೆ…ಈ ಪ್ರಶ್ನೆಗೆ ಉತ್ತರವನ್ನು ಕತ್ತಲೆಯ ಅಡುಗೆ ಕೋಣೆಯಲ್ಲಿ ಹುಡುಕಿ ಅನ್ನುವ ವಿಜ್ಞಾನ ಶಿಕ್ಷಕಿಯ ಮಾತು ಪ್ರತೀ ಓದುಗರಿಗೂ ಅಕ್ಷರಶಃ ನಿಜ ಎನಿಸದಿರದು.
ಹೀಗೆ ಆಯಿಷಾಳ ವಿಜ್ಞಾನದ ಜ್ಞಾನ, ಆಸಕ್ತಿ, ಪುಸ್ತಕ ಓದುವ ಉತ್ಸಾಹ, ಬುದ್ಧಿವಂತಿಕೆ ಇವೆಲ್ಲ ಓದುತ್ತಾ ಹೋದಾಗಲೆಲ್ಲ ಆ ವಿಶೇಷ ಹುಡುಗಿಯ ಬಗ್ಗೆ ಅಚ್ಚರಿ ಮೂಡಿಸುತ್ತದೆ.
ಆದರೆ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿಯಾದ ಆಕೆಯ ಈ ಪ್ರಶ್ನೆ ಕೇಳುವ ಸ್ವಭಾವ ಆಕೆಯನ್ನು ಕೆಲವು ಅರ್ಥಮಾಡಿಕೊಳ್ಳದ ಶಿಕ್ಷಕರಿಂದ ಹೊಡೆತ ಬೀಳುವ ಪರಿಸ್ಥಿತಿಯನ್ನೂ ಎದುರಿಸಿರುವುದು ಕಂಡುಬರುತ್ತದೆ.
ಕೊನೆಯಲ್ಲಿ ಈ ಹುಡುಗಿಯು ಶಿಕ್ಷಕರ ಹೊಡೆತ ತಪ್ಪಿಸಲು ತನ್ನದೇ ವಿಜ್ಞಾನ ಪ್ರಯೋಗದ ಮೂಲಕ ನೋವಾಗದ ಮದ್ದು ಕಂಡುಹಿಡಿದು ಸೇವಿಸಿ ತನಗೆ ತಾನೇ ದುರಂತ ಸಾವು ತಂದೊಡ್ಡುವ ಈ ಕಥೆ ಮನ ಕಲಕುತ್ತದೆ.
ಅಂದು ಅದೆಷ್ಟೋ ಆಯಿಷಾಳನ್ನು ನಾವು ಕಳೆದು ಕೊಂಡಿದ್ದೇವೆಯೋ , ವಯಸ್ಸಿಗೆ ಬಂದ ದಿನದಿಂದ ಶಾಲೆಯನ್ನು ಬಿಟ್ಟವರು, ಯಾರದೋ ಸೇವೆಗಾಗಿ ತಮ್ಮ ಜೀವನ,ಜೀವವನ್ನು ತೇಯ್ದವರು, ತಮ್ಮ ವಿಜ್ಞಾನದ ಕನಸುಗಳನ್ನು ಸಂಪ್ರದಾಯದ ಹಗ್ಗದಿಂದ ಬಂಧಿಸಿ ಬೆಂಕಿ ಹಚ್ಚಿ ತಾವೇ ಬೂದಿಯಾದಂತವರಿಗೆ ಈ ಪುಸ್ತಕ ಸಮರ್ಪಿಸಿರುವುದಾಗಿ ಲೇಖಕರು ತಿಳಿಸುತ್ತಾರೆ.
ಆದರೆ ಅದೃಷ್ಟವಶಾತ್ ಇಂದು ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ ಪ್ರತೀ ಮಗುವಿನ ಶಿಕ್ಷಣ ಅತ್ಯಮೂಲ್ಯ ಮತ್ತು ಸರ್ಕಾರ, ಪೋಷಕರ ಜವಾಬ್ದಾರಿ ಕೂಡ. ಆದ್ದರಿಂದ ಸರ್ಕಾರ ಉಚಿತ ಕಡ್ಡಾಯ ಶಿಕ್ಷಣ ನೀಡುವ ಮೂಲಕ ಎಲ್ಲ ಮಕ್ಕಳನ್ನು ಶಿಕ್ಷಿತರನ್ನಾಗಿಸುವುದರಿಂದ ಇಂದಿನ ಮಕ್ಕಳು ಬಹಳಷ್ಟು ಭಾಗ್ಯವಂತರು.
ಇನ್ನು ದುರಂತ ಸಾವು ಪಡೆದ ಇಂತಹ ಆಯಿಷಾ ಹುಟ್ಟಿಬರಲು ಸಾಧ್ಯವೇ ಇಲ್ಲ ಎಂಬ ಆಶಾಭಾವನೆ ನನ್ನದು….
ಪ್ರಸ್ತುತ ಶಿಕ್ಷಕಿಯಾಗಿರುವ ನಾನು ಒಮ್ಮೆ ಓದಿದ ಈ ಕಥೆಯನ್ನು ಹಲವು ಬಾರಿ ಮೆಲುಕು ಹಾಕುತ್ತಿರುತ್ತೇನೆ. ನಿಮ್ಮ ತರಗತಿಗಳಲ್ಲೂ ಆಯಿಷಾರಂತವರೂ ಕಾಣದೇ ಇರಲು ಸಾಧ್ಯವಿಲ್ಲ..ಆದ್ದರಿಂದ ಈ ಪುಸ್ತಕ ನೀವೂ ಓದಿ ನಿಮ್ಮ ತರಗತಿಗಳಲ್ಲಿ ಮತ್ತು ಸುತ್ತಮುತ್ತ ಕಾಣುವ ಆಯಿಷಾರಂತವರನ್ನು ಪ್ರೋತ್ಸಾಹ ನೀಡಿ ಎನ್ನುತ್ತಾ..
ಧನ್ಯವಾದಗಳೊಂದಿಗೆ,
ಶ್ರೀಮತಿ ಪರಮೇಶ್ವರಿ.
ಸಹಶಿಕ್ಷಕರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಾಲ್ಸೂರು.