ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು
(ಕೃತಿ ಪರಿಚಯ – 7)
‘ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ‘ ಅಂಕಣದಲ್ಲಿ ಈ ದಿನ ಪರಿಚಯಿಸಲಾಗುತ್ತಿರುವ ಕೃತಿ – ವಿಚಾರ ಕ್ರಾಂತಿಗೆ ಕುವೆಂಪು ಕರೆ
ಲೇಖಕರು- ಪ್ರೊ.ದೇ.ಜ.ಗೌ. (ಪ್ರೊ.ದೇವೇಗೌಡ ಜವರೆಗೌಡ.
ಪ್ರಕಾಶಕರು:- ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು.
ಪುಸ್ತಕದ ಬೆಲೆ :- 30ರೂ.
ಪುಟಗಳು:- 48
ನಮ್ಮ ದೇಶದಲ್ಲಿ ಇದ್ದಂತಹ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಘನೋದ್ದೇಶದಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಈ ಪುಸ್ತಕವನ್ನು ಹೊರತರಲಾಗಿದೆ.
ಕುವೆಂಪು ಅವರು ಅತ್ಯಂತ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಇವರು ಒಬ್ಬ ವಿಚಾರವಾದಿ. ಶತಮಾನಗಳ ಹಿಂದಿನಿಂದ ಬಂದಿರುವ ಮೌಢ್ಯಗಳನ್ನು ತಮ್ಮ ಕಥೆ,ಕವನಗಳಲ್ಲಿ ಖಂಡಿಸಿಕೊಂಡು ಬಂದವರು. ಇವರ ವೈಚಾರಿಕ ಧಾರೆಯನ್ನು ಈ ಒಂದು ಚಿಕ್ಕ ಪುಸ್ತಕದಲ್ಲಿ ಹಿಡಿದಿಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.
ಈ ಪುಸ್ತಕ ಜನರಲ್ಲಿ ತೀವ್ರವಾದ ವೈಚಾರಿಕ ಪ್ರಜ್ಞೆ ಮೂಡಿಸುವುದರಲ್ಲಿ ಯಾವ ಸಂದೇಹವೂ ಇಲ್ಲ.
ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಧರ್ಮಗಳು ಒಂದೇ ನಾಣ್ಯದ ಎರಡು ಮುಖಗಳು. ಪರಸ್ಪರಾಶ್ರಯಿಗಳು,ಪರಸ್ಪರ ಪ್ರಚೋದಕಗಳು ಎಂಬುದನ್ನು ಈ ಹೊತ್ತಗೆ ತಿಳಿಸುತ್ತದೆ.
ಕುವೆಂಪುರವರು ವೈಜ್ಞಾನಿಕ ಬುದ್ಧಿಯ ಅಭಾವವನ್ನು ಹೊಂದಿರುವ ಸಮಾಜವನ್ನು ಮೂರ್ಖ ಸಮಾಜ ಎಂದು ಕರೆದಿರುವುದನ್ನು ಲೇಖಕರು ಈ ಪುಸ್ತಕದಲ್ಲಿ ವಿವರಿಸುತ್ತಾರೆ.
ಇವರು, ಸಮಾಜವನ್ನು ತಮ್ಮ ಮೌಢ್ಯದ ಬಲೆ ಹೆಣೆದು ದುಸ್ಥಿತಿಗೆ ತರುತ್ತಿರುವವರ ವಿರುದ್ಧ ಹೋರಾಟಕ್ಕಿಳಿದವರು. ಈ ಹೋರಾಟವನ್ನು ತಮ್ಮ ಮನೆಯಲ್ಲಿಯೇ ಮೊದಲು ಆರಂಭಿಸುತ್ತಾರೆ ಎಂಬುದನ್ನು ನಿದರ್ಶನಗಳ ಮೂಲಕ ಲೇಖಕರು ತಿಳಿಸುತ್ತಾರೆ.
ಇವರ ಜಲಗಾರ,ಶೂದ್ರತಪಸ್ವಿ ನಾಟಕಗಳಲ್ಲಿ ವ್ಯಕ್ತವಾಗಿರುವುದಲ್ಲದೆ , ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಗಳ ಮೂಲಕ ಜನರ ದಿಕ್ಕು ತಪ್ಪಿಸುವ ಮೌಢ್ಯದ ವಿರುದ್ಧ ಧ್ವನಿ ಎತ್ತುತ್ತಾರೆ.
ವಿನೂತನ ಚಿಂತನೆಗಳು ಕುವೆಂಪುರವರ ಹಲವು ಕವನಗಳಲ್ಲಿ ವ್ಯಕ್ತವಾಗಿದೆ. ಅವುಗಳಲ್ಲಿ “ನೂರು ದೇವರನು ನೂಕಾಚೆ ದೂರ……” ಈ ಕವನವೂ ಒಂದು.
ಜನತೆಯಲ್ಲಿ ವೈಚಾರಿಕ ಜಾಗೃತಿ ಮೂಡಿಸದಿದ್ದರೆ, ವೈಜ್ಞಾನಿಕ ಮನೋಧರ್ಮ ಬೆಳೆಸದಿದ್ದರೆ ಇಂದಿಗೂ ಪ್ರಾಣಿಗಳಂತೆ ಬದುಕು ನಡೆಸುತ್ತಾರೆ ಅನ್ನುವ ಕುವೆಂಪುರವರ ಸಾಮಾಜಿಕ ಕಾಳಜಿಯನ್ನು ಈ ಕೃತಿಯಲ್ಲಿ ಲೇಖಕರು ವ್ಯಕ್ತ ಪಡಿಸುತ್ತಾರೆ.
ಲೇಖಕರು ಕುವೆಂಪುರವರನ್ನು ಒಬ್ಬ ಜಾತಿ,ವರ್ಣ ಬೇಧಗಳ ವಿರುದ್ಧ ಸಿಡಿದೆದ್ಧ ಹೋರಾಟಗಾರ ಎಂಬುದಾಗಿ ಉಲ್ಲೇಖಿಸುತ್ತಾರೆ.
ಇವರ ವಿಶ್ವ ಮಾನವ ಸಂದೇಶದ ಸಾರವೂ,ಗುರಿಯೂ ಜಾತಿ,ಮತ,ವರ್ಣಾಶ್ರಮಗಳ ಸಮೂಲ ವಿನಾಶ ಎಂಬುದನ್ನು ಲೇಖಕರು ಈ ಕೃತಿಯಲ್ಲಿ ತಿಳಿಸುತ್ತಾರೆ.
ಒಟ್ಟಾರೆಯಾಗಿ ಈ ಕೃತಿಯು ಮಾನವ ಜಾತಿ,ಧರ್ಮ, ಮೇಲು ಕೀಳೆಂಬ ತಾರತಮ್ಯ ಭಾವವನ್ನು ತೊರೆದು ಅನಂತತೆಡೆಗೆ ಸಾಗಬೇಕು. ವೈಜ್ಞಾನಿಕ ಮನೋಭಾವವನ್ನು ಬೆಳೆಸಿ ರಾಷ್ಟ್ರದ ಏಳಿಗೆಗೆ ಕಾರಣವಾಗಬೇಕು ಅನ್ನುವ ಆಶಯವನ್ನು ಹೊಂದಿರುವುದರಿಂದ ಪ್ರತಿಯೊಬ್ಬರೂ ಓದಲೇಬೇಕಾದಂತಹ ಮಹತ್ವದ ಪುಸ್ತಕವಾಗಿದೆ…ಓದಿ ತಮ್ಮದಾಗಿಸಿಕೊಳ್ಳಿ.
ಪರಮೇಶ್ವರಿ.
ಸಹಶಿಕ್ಷಕರು.
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಾಲ್ಸೂರು.
ಆತ್ಮೀಯರೇನೀವು ಓದಿರುವ ಇತರರು ಓದಿದ್ರೆ ಉತ್ತಮ ಎಂದೆನಿಸುವ ಪುಸ್ತಕದ ಪರಿಚಯವನ್ನು ನಮಗೆ ಕಳುಹಿಸಿ ಕೊಡಿ, ವಾರದ ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಪ್ರಕಟಿಸಲಾಗುವುದು