ಶಿಕ್ಷಕನ ಡೈರಿಯಿಂದ
ಐಶೂ ಎನ್ನುವ ನಾಯಿಮರಿ
ಅದೊಂದು ನಾಯಿಮರಿ "ಹೆಣ್ಣುನಾಯಿಯಾಗಿ ಹುಟ್ಟುವುದು ಪೂರ್ವಜನ್ಮದ ಘೋರ ಪಾಪದ ಫಲವೇನೋ" ಎಂಬ ಭಾವನೆಯನ್ನು ನನ್ನೊಳಗೆ ಹುಟ್ಟಿಸಿತ್ತು. ಅದನ್ನು ಸಾಯಿಸಿಬಿಡುವುದೊಂದೇ ಅದಕ್ಕೆ ಮುಕ್ತಿ ನೀಡುವ ಮಾರ್ಗವೆಂದೂ, ಅದನ್ನು ಕೊಲೆ ಎಂದುಕೊಳ್ಳದೇ ದಯಾಮರಣವೆಂದುಕೊಳ್ಳಬೇಕು ಎಂಬ ತರ್ಕವೂ ಮನಸ್ಸಲ್ಲಿ ಮೂಡಿತ್ತು.
ಹೆಣ್ಣು ನಾಯಿಮರಿಗಳು ಮನುಷ್ಯರಿಂದ ಪರಿತ್ಯಕ್ತವಾಗಿ ಬೀದಿಗೆ ಬೀಳುವುದು, ಬದುಕುಳಿಯಲು ಅವುಗಳು ನಾನಾರೀತಿಯ ಹೋರಾಟ ಮಾಡುವುದು ತೀರಾ ಮಾಮೂಲಿ ವಿಚಾರವೇ ಆದರೂ ಅವುಗಳು ಬದುಕುಳಿಯಲು ಮಾಡುವ ಹೋರಾಟವನ್ನು ಗಮನಿಸುವವರು ಕಮ್ಮಿಯೇ ಇರಬಹುದು.. ಹೀಗೆ ಬೀದಿಗೆ ಬಿದ್ದ ನಾಯಿಮರಿಗಳು ಅಕ್ಷರ ದಾಸೋಹದ ಶೇಷದ ಆಸೆಯಿಂದ ಶಾಲೆಯೆಡೆಗೆ ಬರುವುದುಂಟು. ಮಾನವೀಯತೆಯೇ ತುಂಬಿ ತುಳುಕುತ್ತಿರುವ ಕೆಲವರಂತೂ ತಮ್ಮ ನಾಯಿಮರಿ ಅಲ್ಲಾದರೂ ಬದುಕಿಕೊಳ್ಳಲಿ ಎಂದು ಶಾಲೆಯ ಸನಿಹವೇ ಬಿಡುವುದೂ ಉಂಟು. ನಾನು ಹೇಳ ಹೊರಟಿರುವ ಈ ನಾಯಿಮರಿ ಆಹಾರ ಹುಡುಕುತ್ತಾ ಮಕ್ಕಳ ಹಿಂದೆ ಶಾಲೆಗೆ ಬಂತೋ, ಅದನ್ನು ಶಾಲೆಯ ಹತ್ತಿರವೇ ಬಿಟ್ಟು ಹೋದರೋ ನನಗಂತೂ ತಿಳಿಯದು. ನಾನು ಮೊದಲ ಬಾರಿಗೆ ನೋಡುವಾಗ ಅದು ಶಾಲೆ ಪ್ರಾರಂಭಕ್ಕೂ ಮೊದಲು ಮಕ್ಕಳ ಕೈ ಕಾಲ ಬುಡದಲ್ಲಿ ಶೇಲೆ ಮಾಡಿಕೊಂಡಿತ್ತು. ಆಗ ಅದರದ್ದು ಸಣ್ಣ ಹೆಗ್ಗಣದ ಸೈಜು..., ಅಪ್ಪಟ ಬೆಳ್ಳಗಿನ ಮೈ ರೋಮಗಳು, ಅಲ್ಲಲ್ಲಿ ಮೆತ್ತಿರುವ ಚೂರುಪಾರು ಕೆಸರು..
ನಾಯಿಮರಿಗಳು ಶಾಲೆಯ ಸಮೀಪದಲ್ಲಿನೆಲೆ ನಿಲ್ಲಲು ಬಿಸಿಯೂಟವೊಂದೇ ಕಾರಣವಲ್ಲ, ಮಕ್ಕಳ ಪ್ರೀತಿಯೂ ಕಾರಣ ಎಂಬುದು ನನಗರಿವಾಗಿದ್ದು ಈ ನಾಯಿಮರಿಯನ್ನು ನೋಡಿಯೇ. ಬೆಳಿಗ್ಗೆ ಶಾಲೆ ಆರಂಭಕ್ಕೂಮೊದಲು, ಸಂಜೆ ಶಾಲೆಬಿಟ್ಟ ನಂತರ ಮಕ್ಕಳ ಕೈ ಕಾಲ ಶೆಕೆ ಈ ನಾಯಿಮರಿಗೆ ಯಥೇಚ್ಚವಾಗಿ ಸಿಗುತ್ತಿತ್ತು ಎಂಬುದು, ನಮ್ಮ ಕಣ್ಣುತಪ್ಪಿಸಲು ಮಕ್ಕಳು ಎಷ್ಟೇ ಪ್ರಯತ್ನಿಸಿದ್ದರೂ ನಮಗೆ ಗೋಚರವಾಗುತ್ತಿತ್ತು.
ಅದರ ಬದುಕಿನ ಕಷ್ಟ ಗೋಚರವಾಗಿದ್ದು ಅದು ನನಗೆ ಮೊದಲು ಕಾಣಿಸಿಕೊಂಡ ಏಳೆಂಟು ದಿನಗಳಲ್ಲಿ. ಆವತ್ತು ಶಾಲೆಗೆ ಎರಡು ದಿನಗಳ ರಜೆಯಿತ್ತು. ಮೂರನೇ ದಿನ ತುಸು ಬೇಗ ಶಾಲೆಗೆ ಹೋಗಿ ಬೀಗ ತೆಗೆಯುತ್ತಿದ್ದೆ. ಒಂದೇ ಸಮನೆ ಸುರಿಯುತ್ತಿರುವ ಜಡಿಮಳೆ ಬೇರೆ. ಎರಡು-ಮೂರು ದಿನದಿಂದ ಆಹಾರವಿಲ್ಲದೇ ತೀರಾ ಕೃಶಗೊಂಡ ನಾಯಿಮರಿ ಮಳೆಯಲ್ಲಿ ಸಂಪೂರ್ಣ ತೋಯ್ದು, ಮೈಯೆಲ್ಲಾ ಕೆಸರಾಗಿಸಿಕೊಂಡು, ಅಸಹ್ಯ ಹುಟ್ಟಿಸುವ ರೂಪದಲ್ಲಿ ನಡುಗುತ್ತಾ ನನ್ನ ಕಾಲಡಿ ಬಿದ್ದುಕೊಂಡಿತ್ತು.. ಕಾಲು ನೆಲಕ್ಕೆ ಬಡಿದು ಜೋರು ಮಾಡಿದರೂ, ಕೋಲು ಹಿಡಿದು ಹೊಡೆಯಲು ಎತ್ತಿದರೂ ದೂರ ಬಿಡಿ, ಸ್ವಲ್ಪ ಆಚೆ ಹೋಗಲೂ ಸಿದ್ಧವಿಲ್ಲದ ನಾಯಿಮರಿ ನೀನಲ್ಲದೇ ಬೇರೆ ಗತಿಯೇ ಇಲ್ಲ ಎನ್ನುತ್ತಿರುವಂತೆ ಭಾಸವಾಗಿತ್ತು. ಅಲ್ಲೇ ಪಕ್ಕದಲ್ಲಿ ನಿಂತಿರುವ ಮಕ್ಕಳಿಗೂ ಇದೇ ರೀತಿಯ ಶರಣಾಗತಿಯನ್ನು ತೋರಿಸಿಯಾಗಿತ್ತು.. ಜೋರು ಮಾಡುವುದು, ಹೊಡೆಯುವುದು ಬಿಡಿ, ಸಾಯಿಸ ಹೊರಟರೂ ಅದು ನಮ್ಮನ್ನು ಬಿಡುವ ಸಾಧ್ಯತೆ ಕಾಣಿಸಲಿಲ್ಲ. ಅದರ ಕಣ್ಣಲ್ಲಿ ಕಂಡಂಥ ದೈನ್ಯಭಾವವನ್ನು ಮತ್ತೆಲ್ಲೂ ಕಂಡಿರಲಿಲ್ಲ ನಾನು.. ಆ ಕ್ಷಣದಲ್ಲಿ ಸ್ವಲ್ಪ ತಿಂಡಿ ಹಾಕಿ ಮೈದಾನದ ಮೂಲೆಯಲ್ಲಿದ್ದ ಹಳೆಯ ಛಾವಣಿಯೆಡೆಗೆ ನಾಯಿಯನ್ನು ಸಾಗಿಸಲಾಯಿತು ನಿಜ.. ಆದರೆ ಮುಂದೆ..?
ನನ್ನೆದುರು ಎರಡು ದ್ವಂದ್ವಗಳಿದ್ದವು. ಒಂದು ಮಕ್ಕಳು ನಾಯಿಯನ್ನು ಮುದ್ದಿಸುವ ಕುರಿತಾದದ್ದು, ನೈರ್ಮಲ್ಯಕ್ಕೆ ಮಹತ್ವ ಕೊಡಬೇಕೇ ಅಥವಾ ಪ್ರಾಣಿದಯೆಯನ್ನು ಪ್ರೋತ್ಸಾಹಿಸಬೇಕೇ ಎನ್ನುವುದು. ಇನ್ನೊಂದು ನಾಯಿಯನ್ನು ಕುರಿತಾದದ್ದು., ಮೊದಲನೆಯದನ್ನು ಹೇಗೋ ಮ್ಯಾನೇಜು ಮಾಡಿಬಿಡಬಹುದಾಗಿತ್ತು. ಆದರೆ ಎರಡನೆಯದ್ದು ಕಷ್ಟ.. ಮುಂದಿನ ದಿನಗಳಲ್ಲೂ ನಾಯಿಯ ಇದೇ ನರಳಾಟ ಕಾಣಿಸದೇ ಇರದು. ಶಾಲೆಯಂತೂ ನಾಯಿಗೆ ಸುರಕ್ಷಿತ ತಾಣವಲ್ಲ. ಒಬ್ಬ ಎವರೇಜು ಮನುಷ್ಯ ಪ್ರಾಣಿಯಾದ ನಾನು ನಾಯಿಯನ್ನು ನನ್ನ ರೂಮಿಗೆ ಕರೆದೊಯ್ದು ಸಾಕುವಷ್ಟು ಒಳ್ಳೆಯವನಲ್ಲವಾದರೂ ಅದರ ಸಂಕಟವನ್ನು ನೋಡಿ ಹೃದಯ ಕಿರ್ರೋ ಎಂದು ರೋಧಿಸುವಷ್ಟು ಒಳ್ಳೆಯವನೇ. ಶಾಲೆಯಲ್ಲಿರುವ ಎಲ್ಲ ಮಕ್ಕಳೂ ಶಿಕ್ಷಕ ಮಿತ್ರರೂ ಇದೇ ಎವರೇಜು ಜಾತಿಗೆ ಸೇರಿದ್ದರಿಂದ ಸಮಸ್ಯೆ ಪರಿಹಾರವಾಗುವಂಥದ್ದಲ್ಲ ಎಂದುಕೊಂಡೆ. ಹೀಗೆ ನರಳುವುದಕ್ಕಿಂತ ಈ ಮರಿ ಸತ್ತು ಹೋಗಿದ್ದರೇ ಚೆನ್ನಾಗಿತ್ತು ಎನಿಸಿತು. ಇದರ ಮನೆಯವರು ಈ ಪರಿಸ್ಥಿತಿಗೆ ನೂಕುವ ಬದಲು ಸಾಯಿಸಿದರೇ ಉತ್ತಮವಿತ್ತಲ್ಲ ಎಂದುಕೊಂಡೆ.
ಮರುದಿನ ಉಳಿದ ಶಿಕ್ಷಕರೆಲ್ಲಾ ತರಗತಿಯಲ್ಲಿದ್ದಾಗ ಬಿಡುವಿನಲ್ಲಿದ್ದ ನಾನು ಸ್ಟಾಫ್ ರೂಮಿನಲ್ಲದ್ದಾಗ ಹೊರಗಡೆ ನಾಯಿಗಳು ಬೊಗಳುತ್ತಾ ಓಡಿ ಬಂದ ಸದ್ದು.. ಕುರ್ಚಿಯಿಂದ ಮೇಲೇಳುವಷ್ಟರಲ್ಲಿ ರಾಕೆಟ್ಟಿನ ವೇಗದಲ್ಲಿ ಇದೇ ಬಿಳಿ ನಾಯಿಮರಿ ಕೊಠಡಿಯೊಳಗೆ ನುಗ್ಗಿಬಿಟ್ಟಿತ್ತು. ಅದನ್ನು ಅಟ್ಟಿಸಿಕೊಂಡು ಬಂದ ಮೂರ್ನಾಲ್ಕು ನಾಯಿಗಳು ಅಷ್ಟೇ ವೇಗದಲ್ಲಿ ಬಂದು ಬಾಗಿಲ ಬಳಿ ಬ್ರೇಕ್ ಹಾಕಿಬಿಟ್ಟಿದ್ದವು. ಶಾಲೆಯ ಸುತ್ತಲಿನ ಬೀದಿಯಲ್ಲಿ ತಿರುಗಾಡಿಕೊಂಡು ಊಟದ ಸಮಯದಲ್ಲಿ ಶಾಲೆಯ ಆವರಣದೊಳಗೆ ತಮ್ಮ ಹಕ್ಕು ಚಲಾಯಿಸುವ ನಾಯಿಗಳ ಗ್ಯಾಂಗ್ ಅದು.. ನನ್ನನ್ನು ಕಂಡವೇ ಅಲ್ಲಿಂದ ಕಾಲ್ಕಿತ್ತವು.. ಅಯ್ಯೋ ದೇವಾ.. ಈ ನಾಯಿಯ ಕಷ್ಟವೇ...! ನಾಯಿಗಳು ಕಾಲ್ಕಿತ್ತಿದ್ದನ್ನು ಕಂಡು ಮೈ ಮುರುಟಿಕೊಂಡು ಮೆಲ್ಲನೆ ಬಾಗಿಲಿನೆಡೆಗೆ ಸಾಗಿತ್ತು ನಾಯಿ.. ಅದು ನಿಂತು ಹೋಗಿರುವ ಜಾಗದಲ್ಲೇನೋ ಹಿಕ್ಕೆಯಂಥದ್ದು.... ಭಯದಲ್ಲಿ ಅಲ್ಲಿಯೇ ಮಲವಿಸರ್ಜನೆ ಮಾಡಿಹೋಗಿತ್ತು... ಪುಣ್ಯಕ್ಕೆ ವಿಸರ್ಜನೆ ಮೊಲದ ಹಿಕ್ಕೆಯಂತೆ ಘನರೂಪದಲ್ಲಿದ್ದದ್ದಕ್ಕೆ ನಾನು ಬಚಾವಾದೆ.. ಮರಿಯನ್ನು ಓಡಿಸಿ, ಸುತ್ತಮುತ್ತ ನೋಡಿ ಯಾರೂ ನೋಡುತ್ತಿಲ್ಲವೆಂದು ಖಾತ್ರಿಪಡಿಸಿಕೊಂಡು ಮೆಲ್ಲನೆ ಡಸ್ಟ್ ಪ್ಯಾನ್ನಿಂದ ಗಲೀಜನ್ನು ಹೊರಹಾಕಿ ಏನೂ ಆಗಲಿಲ್ಲ ಎನ್ನುವಂತೆ ಕುಳಿತುಕೊಂಡೆ. ಈ ನಾಯಿಗಿನ್ನೆಷ್ಟು ಕಷ್ಟಗಳಿರಬಹುದು? ಅಲ್ಲಾ ಈ ನಾಯಿಯಿಂದ ನಮಗಿನ್ನೆಷ್ಟು ಕಿರಿಕಿರಿಗಳಿರಬಹುದು? ದೊಡ್ಡ ನಾಯಿಗಳ ಬಾಯಿಗೆ ಸಿಕ್ಕಿ ಇನ್ನೆಷ್ಟು ನರಳಬೇಕೋ ಇದು.. ಇದೆಲ್ಲದರಿಂದ ಮುಕ್ತಿ ದೊರಕಲು ಇದನ್ನು ಸಾಯಿಸಿಬಿಡುವುದೇ ಒಳಿತೆನಿಸಿತು. ಕೊಲ್ಲುವುದೇನೂ ಕಷ್ಟವಲ್ಲ ಬಿಡಿ, ಒಂದು ಪ್ಯಾಕೆಟ್ ಇಲಿಪಾಷಾಣ ಸಾಕು. ಮರುದಿನವೇ ಈ ದಯಾಮರಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದುಕೊಂಡೆ.
ನನ್ನ ಬಹುದೊಡ್ಡ ದೌರ್ಬಲ್ಯವೆಂದರೆ ಏನೇ ಅಂದುಕೊಂಡರೆ ಅದನ್ನು ನಾಳೆಗಳಿಗೆ ಮುಂದೂಡುವುದು. ( ಈ ಬರಹವೂ ಆ ದೌರ್ಬಲ್ಯಕ್ಕೆ ಉದಾಹರಣೆ. ಮೂರ್ನಾಲ್ಕು ವರ್ಷದ ಹಿಂದೆ ಬರೆಯಬೇಕು ಅಂದುಕೊಂಡಿದ್ದನ್ನು ಈಗ ಬರೆಯುತ್ತಿರುವೆ ನೋಡಿ.) ನಾಯಿಯ ವಿಷಯದಲ್ಲೂ ಅದೇ ಮುಂದುವರೆಯಿತು. ಅಷ್ಟರಲ್ಲಿ ನಾಯಿಮರಿ ಚಮತ್ಕಾರವನ್ನೇ ಮಾಡಿಬಿಟ್ಟಿತ್ತು.
ಮೂರ್ನಾಲ್ಕು ದಿನ ಕಳೆಯುವಷ್ಟರಲ್ಲಿ ನಾಯಿಮರಿ ತನ್ನ ಶತ್ರುಗಳಾಗಿದ್ದ ನಾಯಿಗ್ಯಾಂಗಿನೊಡನೆ ಸಂಧಾನ ಸಾಧಿಸಿಯಾಗಿತ್ತು. ಜಗತ್ತಿನ ವಯ್ಯಾರವನ್ನೆಲ್ಲಾ ತನ್ನೊಳಗೆ ತುಂಬಿಕೊಂಡಿರುವಂತೆ ದೇಹವನ್ನು ತಿರಿಚುತ್ತಾ, ಆ ನಾಯಿಗಳ ಪಾದದಡಿಗೆ ಬಿದ್ದು ತನ್ನ ಕಣ್ಣು ಕಿವಿ ಬಾಲಗಳಲ್ಲೆಲ್ಲ ಪ್ರೀತಿ ತೋರಿಸುತ್ತಿದ್ದ ಅದರ ಶೈಲಿಗೆ ಎಂತಹ ಕ್ರೂರ ಪ್ರಾಣಿಯದಾದರೂ ಹೃದಯ ಕರಗಬೇಕು. ಅದೇ ಪ್ರೀತಿ , ಅದೇ ವಯ್ಯಾರವನ್ನು ಶಾಲೆ ಮತ್ತು ಪಕ್ಕದ ಹಾಲಿನ ಡೈರಿಗೆ ಬರುವ ಮನುಷ್ಯ ಪ್ರಾಣಿಗಳೆಡೆಗೂ ಹರಿಸಿ ತನ್ನ ಹೊಟ್ಟೆಪಾಡಿಗೆ ಮಾತ್ರವಲ್ಲ, ಪ್ರೀತಿಗೂ ಒಂದು ದಾರಿ ಮಾಡಿಕೊಂಡಿತ್ತು. ಈ ನಡುವೆ ಅದಕ್ಯಾರೋ ಐಶ್ವರ್ಯ ಎಂದು ಹೆಸರಿಟ್ಟರಂತೆ.. ನಾಯಿಮರಿ ಎಲ್ಲರ ಬಾಯಲ್ಲೂ ಐಶೂ ಎಂದೇ ಕರೆಯಲ್ಪಟ್ಟಿತು. ತನ್ನ ಚತುರತೆಯಿಂದ ಹೊಟ್ಟೆಗೇನೂ ಕಡಿಮೆ ಮಾಡಿಕೊಳ್ಳದೇ ಬಹಳ ಮುದ್ದುಮುದ್ದಾಗಿ ಬೆಳೆಯಿತು.
ಬೆಳೆಯುತ್ತಾ ಹೋದಂತೆ ಐಶೂ ತನ್ನ ಚುರುಕುತನಕ್ಕಿಂತ ಹೆಚ್ಚು ಶಾಲೆಯ ಕುರಿತಾದ ನಿಷ್ಠೆಯಿಂದಾಗಿ ನಮ್ಮ ಗಮನ ಸೆಳೆಯ ತೊಡಗಿತು. ಮಕ್ಕಳು, ಶಿಕ್ಷಕರು ಪ್ರತೀದಿನ ಬರುವವರು ಬಿಡಿ, ಅಪರೂಪಕ್ಕೆ ಪೋಷಕರು ಶಾಲೆಗೆ ಬಂದಾಗ ಬೊಗಳದ ಐಶೂ ಅಧಿಕಾರಿಗಳು ಬಂದಾಗ ಕೋಪಗೊಂಡು ಜೋರಾಗಿ ಬೊಗಳಿದ್ದು ನಮ್ಮ ಪಾಲಿಗೆ ಬಹುದೊಡ್ಡ ಅಚ್ಚರಿ. ಶಾಲೆಯ ಮಕ್ಕಳನ್ನು ತನ್ನವರೆಂದು ಭಾವಿಸಿದ್ದಲ್ಲದೇ, ಅವರ ತಂದೆ ತಾಯಿಯರನ್ನೂ ಗುರುತಿಸಬಲ್ಲ ಶಕ್ತಿ ಈ ನಾಯಿಯಲ್ಲಿತ್ತೇನೋ ಎಂದು ನಾವು ಮಾತಾಡಿಕೊಂಡಿದ್ದೆವು.
ಒಂದು ದಿನ ಮಧ್ಯಾಹ್ನ ಮಕ್ಕಳು ಊಟ ಮುಗಿಸಿದ ನಂತರ ಪೆನ್ನು ಮಾರುವವರೊಬ್ಬರು ಬಂದರಂತೆ. ಆ ದಿನ ನಾನು ರಜೆಯಲ್ಲಿದ್ದೆ.. ಶಿಕ್ಷಕರೆಲ್ಲಾ ಊಟಕ್ಕೆ ತಯಾರಾದುದರಿಂದ ಆ ವ್ಯಕ್ತಿಯನ್ನು ನೇರವಾಗಿ ತರಗತಿಗೆ ಕಳಿಸಲಾಯಿತಂತೆ. ಅಪರಿಚಿತ ವ್ಯಕ್ತಿಯೊಬ್ಬರು ತರಗತಿಗೆ ಪ್ರವೇಶಿಸಿದ್ದು ಐಶೂವಿನ ಕಣ್ಣಿಗೆ ಬಿದ್ದದ್ದೇ ತಡ, ನೇರವಾಗಿ ತರಗತಿ ಬಾಗಿಲ ಬಳಿಗೆ ಹೋಗಿ ಒಂದಿಷ್ಟು ಬೊಗಳಿತು.. ನಂತರ ನೇರವಾಗಿ ಸ್ಟಾಫ್ರೂಮಿನ ಎದುರು ಬಂದು ರಾಗವಾಗಿ ಬೊಗಳುತ್ತಾ ಶಿಕ್ಷಕರನ್ನು ಕರೆಯಿತು. ಶಿಕ್ಷಕರು ತರಗತಿಗೆ ಹೋಗುವವರೆಗೆ ಒಮ್ಮೆ ಅಲ್ಲಿ ಹೋಗಿ, ಒಮ್ಮೆ ಇಲ್ಲಿ ಬಂದು ಬೊಗಳುವುದನ್ನು ಮುಂದುವರೆಸಿತ್ತಂತೆ. ಶಾಲೆಯ ಕುರಿತಾಗಿ ಅಷ್ಟೊಂದು ನಿಷ್ಠೆ, ಕಾಳಜಿ ನಮ್ಮ ಐಶೂಗೆ.
ಇಂತಿಪ್ಪ ಐಶೂ ಶಾಲೆಯಲ್ಲಿದ್ದದ್ದು ನಾಲ್ಕೋ ಐದೋ ತಿಂಗಳು ಅಷ್ಟೆ.. ಅದರ ಚುರುಕುತನದಿಂದ ಖುಷಿಗೊಂಡು ಸಮೀಪದ ಬ್ಯಾಂಕ್ ಉದ್ಯೋಗಿಯೊಬ್ಬರು ತನ್ನ ಮನೆಗೆ ಕರೆದೊಯ್ದರು. ಹೋರಾಟದ ಬದುಕಿನ ತಾಣವಾಗಿದ್ದ ಶಾಲೆಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದ ಐಶೂ ತನಗೊಂದು ಶಾಶ್ವತ ನೆಲೆ ದೊರಕಿದ ನಂತರ ಶಾಲೆಯನ್ನು ಬಿಡಲೇಬೇಕಾಯಿತು.
ಸಾವಿನಂಚಿನಿಂದ ಬದುಕನ್ನು ಕಟ್ಟಿಕೊಂಡಿದ್ದಕ್ಕಾಗಿ, ಕೆಲವೇ ಕಾಲದಲ್ಲಿ ನೂರಾರು ಹೃದಯಗಳನ್ನು ಗೆದ್ದುದಕ್ಕಾಗಿ ಜೀವನ ಪ್ರೀತಿಯ ಒಂದು ಅಪ್ಪಟ ಉದಾಹರಣೆಯಾಗಿ ಐಶೂ ನನಗೆ ಸದಾ ನೆನಪಿನಲ್ಲಿರುತ್ತದೆ.
- ಸದಾಶಿವ ಕೆಂಚನೂರು
ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏