ಬೆಂಗಳೂರು, ಸೆ.21:
2026-27ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (SDMC) ಪ್ರಶಸ್ತಿ ನೀಡಲು ಸಮಗ್ರ ಶಿಕ್ಷಣ ಕರ್ನಾಟಕವು ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. ಸರ್ಕಾರಿ ಶಾಲೆಗಳು ಹಾಗೂ SDMCಗಳ ಕಾರ್ಯಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ಸಮಿತಿಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು ವಿದ್ಯಾವಾಹಿನಿ ಪೋರ್ಟಲ್ ಮೂಲಕ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಾಗಿದೆ. ಮೊದಲ ಹಂತದ ಪ್ರಕ್ರಿಯೆ ಸೆಪ್ಟೆಂಬರ್ 21ರಿಂದ 30ರವರೆಗೆ ನಡೆಯಲಿದ್ದು, ಶಾಲೆಗಳು 2025-26ನೇ ಸಾಲಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ ಫ್ರೀಜ್ ಮಾಡಬೇಕು. ಇದೇ ವೇಳೆ, SDMC ಅಧ್ಯಕ್ಷರಾಗಿ ಪ್ರಸ್ತುತ 2026-27ನೇ ಸಾಲಿನ ಅಧ್ಯಕ್ಷರ ವಿವರಗಳನ್ನು ನಮೂದಿಸಬೇಕಾಗಿದೆ.
ನಾಲ್ಕು ಹಂತಗಳಲ್ಲಿ ಆಯ್ಕೆ
ಕ್ಲಸ್ಟರ್ ಹಂತ: ಅಕ್ಟೋಬರ್ 1ರಿಂದ 5ರವರೆಗೆ CRP/ECO/BRPಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. SDMC ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯಶಿಕ್ಷಕರೊಂದಿಗೆ ತೆಗೆಸಿಕೊಂಡ ಗ್ರೂಪ್ ಫೋಟೋವನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
ತಾಲ್ಲೂಕು ಹಂತ: ಅಕ್ಟೋಬರ್ 7ರಿಂದ 12ರವರೆಗೆ ತಂತ್ರಾಂಶದ ಮೂಲಕ ಅತಿ ಹೆಚ್ಚು ಅಂಕ ಪಡೆದ ಮೊದಲ 18 ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ. ನಂತರ BEO ನೇತೃತ್ವದ ತಂಡವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಲಿದೆ.
ಜಿಲ್ಲಾ ಹಂತ: ಅಕ್ಟೋಬರ್ 14ರಿಂದ 22ರವರೆಗೆ ಪ್ರತಿ ತಾಲೂಕಿನಿಂದ ತಲಾ ಮೂರು ಶಾಲೆಗಳನ್ನು—ಒಂದು ಪ್ರಾಥಮಿಕ, ಒಂದು ಹಿರಿಯ ಪ್ರಾಥಮಿಕ ಹಾಗೂ ಒಂದು ಪ್ರೌಢಶಾಲೆ—ಜಿಲ್ಲಾ ಮಟ್ಟದ ತಂಡವು ಅಂತಿಮವಾಗಿ ಆಯ್ಕೆ ಮಾಡಲಿದೆ.
ವಿಜೇತ ಶಾಲೆಗಳಿಗೆ ಆಕರ್ಷಕ ಬಹುಮಾನ
ರಾಜ್ಯಾದ್ಯಂತ ಒಟ್ಟು 612 ಶಾಲೆಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಗುತ್ತದೆ. ಆಯ್ಕೆಯಾದ ಪ್ರಾಥಮಿಕ ಶಾಲೆಗೆ ₹50,000, ಹಿರಿಯ ಪ್ರಾಥಮಿಕ ಶಾಲೆಗೆ ₹75,000 ಹಾಗೂ ಪ್ರೌಢಶಾಲೆಗೆ ₹1,00,000 ಬಹುಮಾನ ನೀಡಲಾಗುತ್ತದೆ.
ಇದಲ್ಲದೆ, ಮೇಲ್ವಿಚಾರಣಾಧಿಕಾರಿಗಳ ಶಾಲಾ ಭೇಟಿಗೆ ಪ್ರೋತ್ಸಾಹ ಧನವನ್ನೂ ನಿಗದಿಪಡಿಸಲಾಗಿದೆ. ಕ್ಲಸ್ಟರ್ ಹಂತದಲ್ಲಿ ಪ್ರತಿ ಶಾಲೆಗೆ ₹150, ತಾಲ್ಲೂಕು ಹಂತದಲ್ಲಿ ₹300 ಹಾಗೂ ಜಿಲ್ಲಾ ಹಂತದಲ್ಲಿ ₹400 ನೀಡಲಾಗುತ್ತದೆ.
ಗಡುವಿನೊಳಗೆ ಮಾಹಿತಿ ಸಲ್ಲಿಕೆ ಕಡ್ಡಾಯ
ನಿಗದಿತ ದಿನಾಂಕದೊಳಗೆ ಶಾಲೆಗಳು ಅಗತ್ಯ ಮಾಹಿತಿಯನ್ನು ವಿದ್ಯಾವಾಹಿನಿ ಪೋರ್ಟಲ್‌ನಲ್ಲಿ ದಾಖಲಿಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ನಿಗದಿತ ದಿನಾಂಕದ ನಂತರ ಯಾವುದೇ ವಿಸ್ತರಣೆಗೆ ಅವಕಾಶವಿಲ್ಲ ಎಂದು ಸೂಚಿಸಲಾಗಿದ್ದು, ವಿಳಂಬವಾದಲ್ಲಿ ತಂತ್ರಾಂಶದಲ್ಲೇ ಸ್ವಯಂಚಾಲಿತವಾಗಿ (Auto Update) ಮುಂದಿನ ಪ್ರಕ್ರಿಯೆ ನಡೆಯಲಿದೆ.
ಅತ್ಯುತ್ತಮ SDMC ಪ್ರಶಸ್ತಿ ಯೋಜನೆಯ ಮೂಲಕ ಶಾಲೆಗಳ ಅಭಿವೃದ್ಧಿಯಲ್ಲಿ SDMCಗಳ ಸಕ್ರಿಯ ಪಾಲ್ಗೊಳ್ಳುವಿಕೆಗೆ ಮತ್ತಷ್ಟು ಉತ್ತೇಜನ ದೊರೆಯುವ ನಿರೀಕ್ಷೆಯಿದೆ.
📄 Open PDF