6 ತಿಂಗಳ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆ
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆ ಹಾಗೂ ಮಾತನಾಡುವ ಕೌಶಲವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳು (KPS), ಪಿ.ಎಂ.ಶ್ರೀ (PM SHRI) ಶಾಲೆಗಳು ಹಾಗೂ ದ್ವಿಭಾಷಾ ಮಾಧ್ಯಮ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆರು ತಿಂಗಳ ‘ಸ್ಪೋಕನ್ ಇಂಗ್ಲಿಷ್’ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಪ್ರತಿ ತರಗತಿಯ ದಾಖಲಾತಿಯನ್ನು ಆಧರಿಸಿ 50ರಿಂದ 60 ವಿದ್ಯಾರ್ಥಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ನಡೆಸುವ ಆತ್ಮವಿಶ್ವಾಸ ಹಾಗೂ ಪ್ರಾಯೋಗಿಕ ಭಾಷಾ ಕೌಶಲಗಳನ್ನು ಬೆಳೆಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಅತಿಥಿ ಶಿಕ್ಷಕರ ನೇಮಕ
ತರಬೇತಿ ನೀಡಲು ಕಲಾ ಪದವಿಯಲ್ಲಿ ಐಚ್ಛಿಕ ಇಂಗ್ಲಿಷ್ (Optional English), ಇಂಗ್ಲಿಷ್ ಹಾನರ್ಸ್ ಅಥವಾ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ 25ರಿಂದ 55 ವರ್ಷ ವಯೋಮಿತಿಯ ಅಭ್ಯರ್ಥಿಗಳನ್ನು ಶಾಲಾ ಎಸ್‌ಡಿಎಂಸಿ ಮೂಲಕ ಪಾರದರ್ಶಕವಾಗಿ ಅತಿಥಿ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಆಯ್ಕೆಯಾದ ಅತಿಥಿ ಶಿಕ್ಷಕರಿಗೆ ತಿಂಗಳಿಗೆ ₹12,000 ಗೌರವಧನ ನೀಡಲಾಗುತ್ತದೆ. ಸೆಪ್ಟೆಂಬರ್ 2026ರಿಂದ ಫೆಬ್ರವರಿ 2027ರವರೆಗೆ ಗರಿಷ್ಠ ಆರು ತಿಂಗಳ ಅವಧಿಗೆ ಈ ಗೌರವಧನ ಪಾವತಿಸಲಾಗುತ್ತದೆ.
₹19.67 ಕೋಟಿ ಅನುದಾನ
2025-26ನೇ ಸಾಲಿನ ಸಮಗ್ರ ಶಿಕ್ಷಣ ಯೋಜನೆಯ ವಾರ್ಷಿಕ ಕಾರ್ಯಯೋಜನೆ ಮತ್ತು ಆಯವ್ಯಯದಡಿ ಈ ಕಾರ್ಯಕ್ರಮಕ್ಕಾಗಿ ₹1,967.87 ಲಕ್ಷ (ಸುಮಾರು ₹19.68 ಕೋಟಿ) ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ.
ಎರಡು ಹಂತಗಳಲ್ಲಿ ಮೌಲ್ಯಮಾಪನ
ತರಬೇತಿಯ ಪರಿಣಾಮ ಹಾಗೂ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಅಳೆಯಲು ಎರಡು ಹಂತಗಳಲ್ಲಿ ಮೌಲ್ಯಮಾಪನ ನಡೆಸಲಾಗುತ್ತದೆ. ನವೆಂಬರ್ 2026ರ ಅಂತ್ಯದಲ್ಲಿ ಮೊದಲ ಹಂತದ ಹಾಗೂ ಮಾರ್ಚ್ 2027ರ ಆರಂಭದಲ್ಲಿ ಎರಡನೇ ಹಂತದ ಮೌಲ್ಯಮಾಪನ ನಡೆಯಲಿದೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಮಾತನಾಡುವ ಕೌಶಲವನ್ನು ಬೆಳೆಸುವ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಿಸಿ, ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಜಗತ್ತನ್ನು ಸಮರ್ಥವಾಗಿ ಎದುರಿಸಲು ಅಗತ್ಯವಾದ ಭಾಷಾ ಕೌಶಲ ಒದಗಿಸುವುದು ಈ ಕಾರ್ಯಕ್ರಮದ ಪ್ರಮುಖ ಆಶಯವಾಗಿದೆ.