ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ನಿವೃತ್ತರಾಗುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ

ಗುರುಭ್ಯೋ ನಮಃ

ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ

IMG 20210731 WA0017 min

ತಮ್ಮ ಶಿಷ್ಯವರ್ಗದಲ್ಲಿ ಸುಜ್ಞಾನದ ಧಾರೆಯೆರೆದು, ಬದುಕಿಗೆ ದಾರಿ ತೋರಿಸಿಕೊಟ್ಟು ಜಿಲ್ಲೆಯಲ್ಲಿ ಈ ತಿಂಗಳು ನಿವೃತ್ತರಾಗುತ್ತಿರುವ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಸಂತೋಷ ಪಡುತ್ತಿದ್ದೇವೆ.

IMG 20210731 WA0004

ಶ್ರೀ ಶಂಕರ್
ದೈಹಿಕ ಶಿಕ್ಷಕರು
ಸ.ಹಿ.ಪ್ರಾ ಶಾಲೆ ಹಳೆಪೇಟೆ ಉಜಿರೆ
ಬೆಳ್ತಂಗಡಿ

ದಿವಂಗತ ಸಂಜೀವ ದೇವಾಡಿಗ ಶ್ರೀಮತಿ ಚಂದ್ರಾವತಿ ಇವರ ಪುತ್ರರಾಗಿ ಜನಿಸಿದ ಶಂಕರರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿ ಬೆಂಗಳೂರಿನಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದವರು.1985 ರಲ್ಲಿ ಸ.ಹಿ.ಪ್ರಾ ಶಾಲೆ ಬೆಳ್ತಂಗಡಿಯಲ್ಲಿ ಸೇವೆಗೆ ಸೇರಿದರು. ಮುಂದೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ,‌ ಬಂದಾರು, ತಣ್ಣೀರುಪಂಥ ಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಸ.ಹಿ.ಪ್ರಾ ಶಾಲೆ ಹಳೆಪೇಟೆ ಉಜಿರೆಯಲ್ಲಿ ತಮ್ಮ ಹುಟ್ಟಿದ ದಿನದಂದೇ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಯೂ ಆಗಿರುವ ಇವರು ತಮ್ಮ ಸಂಘಟನೆ ಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಶಿಕ್ಷಕರಿಗೆ ಸೇವೆ ಸಲ್ಲಿಸಿದವರು. ತಾಲೂಕಿನ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ವೈಯಕ್ತಿಕ ಪದಕ ಪಡೆದ ದಾಖಲೆ ಇವರ ಹೆಸರಿಗಿದೆ. ವೇಗದ ಓಟಗಾರ ರಾಗಿರುವ ಇವರು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ತಾಲೂಕಿನ ಹೆಸರನ್ನು ಮಿಂಚಿಸಿದ್ದಾರೆ. ತಮ್ಮ 36 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಪ್ರತಿವರ್ಷ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾ ಸ್ಪೂರ್ತಿ ಇವರದ್ದು. ಪತ್ನಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿರುವ ತಾರ ಕೇಸರಿ ಇವರೊಂದಿಗಿನ ತಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ

IMG 20210731 WA0016

ಶ್ರೀಮತಿ ರೂಪಾವತಿ
ಸಹಶಿಕ್ಷಕರು
ಸ.ಕಿ.ಪ್ರಾ ಶಾಲೆ ಕರಿಯಾಲು
ಬೆಳ್ತಂಗಡಿ

ಶ್ರೀ ಪಿಎಲ್ ಆನಂದರಾವ್ ಸರಸ್ವತಿ ಇವರ ಮಗಳಾಗಿ 17.07.1961 ರಲ್ಲಿ ಮೈಸೂರಿನ ಪಿರಿಯಾಪಟ್ಟಣದಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪೂರೈಸಿ ಪ್ರೌಢ ಶಿಕ್ಷಣವನ್ನು ಕಡಬದಲ್ಲಿ ಪೂರೈಸಿದರು. ಮೈಸೂರಿನ ಮಹಾರಾಣಿ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ಶಿಕ್ಷಕ ತರಬೇತಿ ಪಡೆದು 1985 ರಲ್ಲಿ ಶಾಲಾ ಮಾತೆಯಾಗಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಮೈಸೂರಿನ ಮಂಚ ದೇವನಹಳ್ಳಿ, ಅಬ್ಬೂರು ಇಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಕರಿಯಾಲು ಶಾಲೆಯಲ್ಲಿ ಸೇವಾ ನಿವೃತ್ತಿಯನ್ನು ಹೊಂದುತ್ತಿದ್ದಾರೆ. ಪತಿ ಅಂಚೆಪೇದೆಯಾಗಿರುವ ಕೆ ರಮೇಶ್ ಇವರ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. 2007 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಇವರು ಸತತ 34 ವರ್ಷಗಳಿಂದ ಶಿಕ್ಷಕರ ದಿನಾಚರಣೆಯಲ್ಲಿ ನಡೆಸುವ ಗುಂಡು ಎಸೆತ ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡು ಬಂದಿರುತ್ತಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದೇವೆ.

IMG 20210731 WA0005

ಶ್ರೀಮತಿ ಗೀತಾ ಕುಮಾರಿ ಪಿ
ಮುಖ್ಯಶಿಕ್ಷಕರು
ಸ.ಹಿ.ಪ್ರಾ ಶಾಲೆ ಹಳೆಪೇಟೆ ಉಜಿರೆ
ಬೆಳ್ತಂಗಡಿ

ಇವರು ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ದಿನಾಂಕ 01-08- 1961 ರಂದು ದಿ.ಪಾಚಪ್ಪ ಮತ್ತು ಚಿತ್ರಾಂಗಿ ಇವರ ಹಿರಿಯ ಮಗಳಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕೊರಂಜದಲ್ಲಿ, ಪ್ರೌಢಶಿಕ್ಷಣವನ್ನು ಚರ್ಚ್ ಸ್ಕೂಲ್ ಬೆಳ್ತಂಗಡಿಯಲ್ಲಿ ಮುಗಿಸಿ ಟಿ.ಸಿ.ಹೆಚ್ ಅನ್ನು ವಿರಾಜಪೇಟೆಯ ಸರ್ವೋದಯ ಕಾಲೇಜಿನಲ್ಲಿ ಪೂರೈಸಿರುತ್ತಾರೆ.
ಇವರು ತಮ್ಮ ವೃತ್ತಿ ಜೀವನವನ್ನು 1991 ರಲ್ಲಿ ಸ.ಹಿ.ಪ್ರಾ ಶಾಲೆ ನಾಳದಲ್ಲಿ ಪ್ರಾರಂಭಿಸಿ ,1997ರಿಂದ ಒಂಬತ್ತು ವರ್ಷಗಳ ಕಾಲ ಸ.ಹಿ.ಪ್ರಾ ಶಾಲೆ ನಿಡ್ಲೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. 2005 ರಿಂದ ಮುಖ್ಯ ಶಿಕ್ಷಕರಾಗಿ ಕಕ್ಕಿಂಜೆಯಲ್ಲಿ 9 ವರ್ಷಗಳ ಕಾಲ ಕಾರ್ಯ ನಿರ್ವಹಿಸಿರುತ್ತಾರೆ. 2014ರಲ್ಲಿ ಸ.ಹಿ.ಪ್ರಾ ಶಾಲೆ ಹಳೆಪೇಟೆಗೆ ವರ್ಗಾವಣೆಗೊಂಡು ಬಂದು 7 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತರಾಗುತ್ತಿದ್ದಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.

IMG 20210731 WA0006

ಶ್ರೀಮತಿ ವಾರಿಜ ಪಿ
ಸಹಶಿಕ್ಷಕರು
ಸ.ಉ.ಪ್ರಾ ಶಾಲೆ ಕನ್ಯಾಡಿ 2
ಬೆಳ್ತಂಗಡಿ

1961 ಜುಲೈ 20 ರಂದು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ಶ್ರೀಪತಿ ಕುದುರೆತ್ತಾಯ ಮತ್ತು ವನಜಾಕ್ಷಿ ದಂಪತಿಗಳ ಪ್ರಥಮ ಪುತ್ರಿಯಾಗಿ ಜನಿಸಿದ ಇವರು ತಮ್ಮ ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿಕೊಂಡು ವಿರಾಜಪೇಟೆಯ ಸರ್ವೋದಯ ಶಿಕ್ಷಕ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕ ತರಬೇತಿಯನ್ನು ಪಡೆದು 1991 ರಲ್ಲಿ ಸ.ಹಿ.ಪ್ರಾ ಶಾಲೆ ಬದನಾಜೆ ಯಲ್ಲಿ ಸಹ ಶಿಕ್ಷಕಿಯಾಗಿ ವೃತ್ತಿಯನ್ನು ಆರಂಭಿಸಿದರು. ಮುಂದಕ್ಕೆ ಸ.ಉ.ಪ್ರಾ ಶಾಲೆ ಕನ್ಯಾಡಿ 2 ಗೆ ವರ್ಗಾವಣೆಗೊಂಡು ಹತ್ತು ವರ್ಷಗಳ ಸೇವೆ ಸಲ್ಲಿಸಿ ಸುದೀರ್ಘ 30 ವರ್ಷಗಳ ಸೇವೆಯಿಂದ ಇಂದು ವಯೋನಿವೃತ್ತಿ ಹೊಂದುತ್ತಿದ್ದಾರೆ. ಇವರು ಪ್ರಥಮವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಅಂಗನವಾಡಿ ಆರಂಭಗೊಂಡಾಗ ಅಂಗನವಾಡಿ ಕಾರ್ಯಕರ್ತೆಯಾಗಿ, ಧರ್ಮಸ್ಥಳದ ವತಿಯಿಂದ ನಡೆಯುತ್ತಿರುವ ಜ್ಞಾನದೀಪ ಶಿಕ್ಷಕಿಯಾಗಿ, ವಯಸ್ಕರ ಶಿಕ್ಷಣದ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಕ್ರೀಡಾಸಕ್ತರಾಗಿರುವ ಇವರು ತಾಲೂಕು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ. ಇವರು ಕರಕುಶಲ ವಸ್ತುಗಳ ತಯಾರಿ , ಹೂದೋಟ, ನಾಟಕಾಭಿನಯದಲ್ಲಿ ಆಸಕ್ತಿಯನ್ನು ಹೊಂದಿದ್ದು ವಿದ್ಯಾರ್ಥಿಗಳಲ್ಲಿ ಈ ಕುರಿತಾಗಿ ಆಸಕ್ತಿಯನ್ನು ಬೆಳೆಸಿದವರು. 1987 ರಲ್ಲಿ ಶಿಕ್ಷಕ ಹರ್ಷಕುಮಾರ್ ಅವರನ್ನು ವಿವಾಹವಾಗಿದ್ದು ಎರಡು ಗಂಡು ಮಕ್ಕಳನ್ನು ಪಡೆದ ಸುಖೀ ಸಂಸಾರ ಇವರದ್ದು ಇವರಿಗೆ ನಿವೃತ್ತಿ ಜೀವನದ ಶುಭಾಶಯಗಳು.

IMG 20210731 WA0007

ಶ್ರೀಮತಿ ಲೀರಾ ಮಾರ್ಟಿಸ್
ಸಹಶಿಕ್ಷಕರು
ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರು ಮೂಡುಬಿದಿರೆ

13.07.1961 ರಲ್ಲಿ ಜನಿಸಿದ ಲೀರಾ ಮಾರ್ಟಿಸ್ ಇವರು 04.08.1998 ರಲ್ಲಿ ಸ.ಹಿ.ಪ್ರಾ. ಶಾಲೆ ತೋಡಾರಿನಲ್ಲಿ ಸೇವೆಗೆ ಸೇರಿದರು. ಅಲ್ಲಿಂದ ವರ್ಗಾವಣೆಗೊಂಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರು ಇಲ್ಲಿ 2009ರಿಂದ 2021ರವರೆಗೆ ಸೇವೆಯನ್ನು ಸಲ್ಲಿಸಿ ಈ ತಿಂಗಳು ಸೇವಾ ನಿವೃತ್ತಿಯನ್ನು ಹೊಂದುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20210731 WA0008

ಶ್ರೀಮತಿ ಅನ್ನಮ್ಮ
ಮುಖ್ಯಶಿಕ್ಷಕರು
ಸ.ಹಿ.ಪ್ರಾ ಶಾಲೆ ಪಡುಬೆಟ್ಟು
ಕಡಬ

ಸಿ.ಟಿ.ಜೋನ್ ಮತ್ತು ಸಾರಮ್ಮ ಇವರ ಪುತ್ರಿಯಾಗಿ ಜನಿಸಿದ ಅನ್ನಮ್ಮ ಇವರು ನೆಲ್ಯಾಡಿಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಪ್ರೌಢಶಿಕ್ಷಣವನ್ನು ಉದನೆಯಲ್ಲಿ ಪೂರೈಸಿ ಮಂಗಳೂರಿನ ಕಪಿತಾನಿಯೋದಲ್ಲಿ ಟಿ.ಸಿ.ಹೆಚ್ ಪಡೆದು, 1982 ರಲ್ಲಿ ಸ.ಹಿ.ಪ್ರಾ ಶಾಲೆ ನೆಲ್ಯಾಡಿಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ಮುಂದೆ ಗೋಳಿತೊಟ್ಟು ಶಾಲೆಗೆ ವರ್ಗಾವಣೆಗೊಂಡು ಪ್ರಭಾರ ಮುಖ್ಯೋಪಾಧ್ಯಾಯರಾಗಿದ್ದ ಸಮಯದಲ್ಲಿ ರಂಗಮಂದಿರ ನಿರ್ಮಾಣ, ಆಟದ ಮೈದಾನ, ಕಟ್ಟಡ ದುರಸ್ತಿ, ಶಾಲಾ ಸೌಂದರೀಕರಣ, ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಅಮೃತ ಮಹೋತ್ಸವ ಆಚರಿಸಿದರು. 2001 ರಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡರು. 2007ರಲ್ಲಿ ಪೂರ್ಣಕಾಲಿಕ ಮುಖ್ಯೋಪಾಧ್ಯಾಯರಾಗಿ ಭಡ್ತಿಗೊಂಡರು. ಪ್ರಸ್ತುತ ಸ.ಹಿ.ಪ್ರಾ ಶಾಲೆ ಪಡುಬೆಟ್ಟಿನಲ್ಲಿ ಶಾಲಾವನ, ತರಕಾರಿ ತೋಟ, ವಿವಿಧ ಆಟೋಟ ಸ್ಪರ್ಧೆಗಳನ್ನು, ಪ್ರತಿಭಾಕಾರಂಜಿಗಳನ್ನು ಯಶಸ್ವಿಯಾಗಿ ಸಂಘಟಿಸಿ ಈ ತಿಂಗಳು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದೇವೆ.

IMG 20210731 WA0010

ಶ್ರೀಮತಿ ಶಕುಂತಳಾ ಕೆ
ಮುಖ್ಯೋಪಾಧ್ಯಾಯರು
ಸ.ಹಿ.ಪ್ರಾ ಶಾಲೆ ಕೆಲಿಂಜ ಬಂಟ್ವಾಳ

ಶ್ರೀಯುತ ನಾರಾಯಣ ಶೆಟ್ಟಿ ಮತ್ತು ಶ್ರೀಮತಿ ಲಕ್ಷ್ಮೀ ದಂಪತಿಗಳ ಪುತ್ರಿಯಾಗಿ 1961 ರಲ್ಲಿ ಪುತ್ತೂರಿನ ಮರ್ಧಾಳದಲ್ಲಿ ಜನಿಸಿದರು. 1982 ರಲ್ಲಿ ಇವರು ಸರಕಾರಿ ಸೇವೆಗೆ ಸೇರಿದರು. ಪುತ್ತೂರು ತಾಲೂಕಿನ ಗೋಳಿತ್ತಡಿ, ಸುಂಕದಕಟ್ಟೆ ಬಂಟ್ವಾಳ ತಾಲೂಕಿನ ಕೊಡ್ಮಣ್ಣು ಇಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಮುಖ್ಯೋಪಾಧ್ಯಾಯರಾಗಿ ಕುಮ್ದೇಲು ಶಾಲೆಗೆ ಬಡ್ತಿ ಹೊಂದಿ ಸ.ಹಿ.ಪ್ರಾ ಶಾಲೆ ಕೆಲಿಂಜಕ್ಕೆ ವರ್ಗಾವಣೆಗೊಂಡು ಸುದೀರ್ಘ 39 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದುತ್ತಿದ್ದಾರೆ. ತಮ್ಮ ಸೇವಾವಧಿಯಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುವ ಇವರು ಸ್ವರಚಿತ ಹನಿಗವನ, ಚಿತ್ರಕಲೆಯನ್ನು ಹವ್ಯಾಸವಾಗಿ ಸಿಕೊಂಡಿದ್ದಾರೆ. ಸ್ವಚ್ಛತೆ ಹಾಗೂ ಸಮಯ ಪಾಲನೆಯಲ್ಲಿ ಇವರು ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಮಂಗಳೂರಿನಲ್ಲಿ ಶಿಕ್ಷಕರಾಗಿರುವ ಪತಿ ಬಾಲಕೃಷ್ಣ ಶೆಟ್ಟಿ, ಇಬ್ಬರು ಪುತ್ರಿಯರೊಂದಿಗಿನ ತಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ.

IMG 20210731 WA0009

ಶ್ರೀಮತಿ ವಸಂತಿ ಜಿ ಕೆ ಭಟ್
ಸ.ಹಿ.ಪ್ರಾ ಶಾಲೆ ಮೂಡು ಪಡುಕೋಡಿ
ಬಂಟ್ವಾಳ

ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ವಾಸುದೇವ ಪಾಂಗಣ್ಣಾಯ ಹಾಗೂ ಸುಗುಣ ಇವರ ಪುತ್ರಿಯಾಗಿ 1961 ರಲ್ಲಿ ಜನಿಸಿದ ಇವರು ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಪುಂಜಾಲಕಟ್ಟೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಹತ್ತನೇ ತರಗತಿ ಮುಗಿಸಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡ ಇವರು 1983 ರಲ್ಲಿ ಖಾಸಗಿಯಾಗಿ ಪಿಯುಸಿ ಪರೀಕ್ಷೆಯನ್ನೂ ಬರೆದರು. ಪತಿಯಾದ ಗೋಪಾಲಕೃಷ್ಣ ಭಟ್ ಅವರ ಪ್ರೋತ್ಸಾಹದಿಂದ ಉಡುಪಿಯಲ್ಲಿ ಶಿಕ್ಷಕ ತರಬೇತಿಯನ್ನು ಪೂರೈಸಿ ಬೆಂಗಳೂರಿನಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. 1991 ರಲ್ಲಿ ಹುಟ್ಟೂರಿಗೆ ಮರಳಿದ ಇವರು ಮೂಡು ಪಡುಕೋಡಿಯಲ್ಲಿ ಗೌರವ ಶಿಕ್ಷಕಿಯಾಗಿ ಸೇವೆಗೆ ಸೇರಿ 1994 ರಲ್ಲಿ ಸ.ಹಿ.ಪ್ರಾ ಶಾಲೆ ಪಿಲಿಮೊಗರಿನಲ್ಲಿ ಸರ್ಕಾರಿ ಸೇವೆಗೆ ಸೇರಿದರು. ಮುಂದೆ ಮೂಡು ಪಡುಕೋಡಿ ಶಾಲೆಗೆ ವರ್ಗಾವಣೆಗೊಂಡು ಬಂದು ಇದೀಗ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಸಮಾಜಕ್ಕೆ ತಮ್ಮ ಅಳಿಲ ಸೇವೆಯನ್ನು ಮಾಡಬೇಕೆಂಬ ಗುರಿಯನ್ನು ಹೊಂದಿರುವ ತಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.

IMG 20210731 WA0013

ಶ್ರೀಮತಿ ಮಂಜುಳಾ ಎಂ.ಬಿ
ಸಹಶಿಕ್ಷಕರು
ಸ.ಹಿ.ಪ್ರಾ ಶಾಲೆ ನ್ಯೂಪಡ್ಪು ಮಂಗಳೂರು ದಕ್ಷಿಣ

13.02.1996 ರಲ್ಲಿ ಬೆಳಗಾವಿ ಜಿಲ್ಲೆಯ ಸ.ಹಿ.ಪ್ರಾ ಶಾಲೆ ಹುದಲಿಯಲ್ಲಿ ಸೇವೆಗೆ ಸೇರಿದರು. ಮುಂದೆ 2006 ರಲ್ಲಿ ಸ.ಹಿ.ಪ್ರಾ ಶಾಲೆ ಬಂಟ್ವಾಳಕ್ಕೆ ವರ್ಗಾವಣೆಗೊಂಡು 2010 ರವರೆಗೆ ಸೇವೆ ಸಲ್ಲಿಸಿ ಸ.ಹಿ.ಪ್ರಾ ಶಾಲೆ ನ್ಯೂಪಡ್ಪುಗೆ ವರ್ಗಾವಣೆಗೊಂಡು ಈ ತಿಂಗಳು ನಿವೃತ್ತಿ ಹೊಂದುತ್ತಿದ್ದಾರೆ. ಇವರಿಗೆ ನಿವೃತ್ತಿ ಜೀವನದ ಶುಭಾಶಯಗಳು.

IMG 20210731 WA0014

ಶ್ರೀಮತಿ ಉಷಾ
ಸಹಶಿಕ್ಷಕರು
ಸ.ಹಿ.ಪ್ರಾ ಶಾಲೆ ನ್ಯೂಪಡ್ಪು ಮಂಗಳೂರು ದಕ್ಷಿಣ

25.06.1991 ರಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಸ.ಹಿ.ಪ್ರಾ ಶಾಲೆ ಬಾಗೇಶಪುರದಲ್ಲಿ ವೃತ್ತಿ ಬದುಕನ್ನು ಆರಂಭಿಸಿದ ಇವರು 1997 ರಲ್ಲಿ ಸ.ಹಿ.ಪ್ರಾ ಶಾಲೆ ಪಾಣೆಮಂಗಳೂರಿಗೆ ವರ್ಗಾವಣೆಗೊಂಡರು. ಮುಂದೆ 2000 ದಲ್ಲಿ ಸ.ಹಿ.ಪ್ರಾ ಶಾಲೆ ಬಂಟ್ವಾಳಕ್ಕೆ ವರ್ಗಾವಣೆಗೊಂಡು 2010 ರವರೆಗೆ ಸೇವೆ ಸಲ್ಲಿಸಿ ಸ.ಹಿ.ಪ್ರಾ ಶಾಲೆ ನ್ಯೂಪಡ್ಪುಗೆ ಪುನಃ ವರ್ಗಾವಣೆಗೊಂಡರು. ನ್ಯೂಪಡ್ಪು ಶಾಲೆಯಲ್ಲಿ ಈ ತಿಂಗಳು ನಿವೃತ್ತರಾಗುತ್ತಿರುವ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20210731 WA0012

ಶ್ರೀಮತಿ ಜಯಪ್ರಭ ಪಿ ಉಚ್ಚಿಲ್
ಸಹಶಿಕ್ಷಕರು
ಸ.ಹಿ.ಪ್ರಾ ಶಾಲೆ ಕಿನ್ಯ
ಮಂಗಳೂರು ದಕ್ಷಿಣ

1964 ರಲ್ಲಿ ಪರಮೇಶ್ವರ್ ಕೆ ಉಚ್ಚಿಲ್ ಹಾಗೂ ಸೀತಮ್ಮ ಇವರ ಪುತ್ರಿಯಾಗಿ ಜನಿಸಿದ ಇವರು ಕೇರಳದ ಕಾಸರಗೋಡಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಆನಂದಾಶ್ರಮ ಪ್ರೌಢಶಾಲೆಯಲ್ಲಿ ಹೈಸ್ಕೂಲು ಶಿಕ್ಷಣ ಪೂರೈಸಿ ಮಂಗಳೂರಿನ ಬಲ್ಮಠದಲ್ಲಿ ಟಿ.ಸಿ.ಎಚ್ ತರಬೇತಿಯನ್ನು ಪಡೆದರು. 1990ರಲ್ಲಿ ಸ.ಹಿ.ಪ್ರಾ ಶಾಲೆ ಬಾಜಾವು ಕುತ್ತೆತ್ತೂರು ಇಲ್ಲಿ ಕರ್ತವ್ಯಕ್ಕೆ ಸೇರಿಕೊಂಡರು. 1994 ರಲ್ಲಿ ಪಿಲಾರು ಶಾಲೆಗೆ ವರ್ಗಾವಣೆಗೊಂಡು 2009 ರಲ್ಲಿ ಉಳ್ಳಾಲ ಮಾದರಿ ಶಾಲೆಯಲ್ಲಿ ಸೇವೆ ಸಲ್ಲಿಸಿದರು. ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಶಾಲೆಯಲ್ಲಿ ಸ್ವಲ್ಪ ಸಮಯ ಸೇವೆ ಸಲ್ಲಿಸಿದ ಇವರು ಮುಖ್ಯ ಶಿಕ್ಷಕರಾಗಿ ಬಡ್ತಿ ಗೊಂಡು ಸ.ಹಿ.ಪ್ರಾ ಶಾಲೆ ಕಿನ್ಯದಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ವೈಯಕ್ತಿಕ ಹಾಗೂ ಅನಾರೋಗ್ಯದ ಕಾರಣದಿಂದ ಸ್ವಯಂ ನಿವೃತ್ತಿ ಹೊಂದುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20210731 WA0015

ಶ್ರೀಮತಿ ಅರುಣ ಕುಮಾರಿ
ಸಹಶಿಕ್ಷಕರು
ಸ.ಹಿ.ಪ್ರಾ ಶಾಲೆ ಅಡ್ಡೂರು
ಮಂಗಳೂರು ದಕ್ಷಿಣ

28.6.1991 ರಲ್ಲಿ ಸರಕಾರಿ ಸೇವೆಗೆ ಸೇರಿದ ಶ್ರೀಮತಿ ಅರುಣಕುಮಾರಿ ಇವರು ಈ ತಿಂಗಳು 30 ವರ್ಷಗಳ ಸುದೀರ್ಘ ಸೇವೆಯ ನಂತರ ಸ.ಹಿ.ಪ್ರಾ ಶಾಲೆ ಅಡ್ಡೂರು ಇಲ್ಲಿ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. ಇವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20210731 WA0011

ಶ್ರೀಮತಿ ಮ್ಯಾಗ್ಡಲಿನ್ ಡಿಸೋಜ
ಸಹಶಿಕ್ಷಕರು
ಸ.ಹಿ.ಪ್ರಾ ಶಾಲೆ ಬೊಕ್ಕಪಟ್ನ 3
ಮಂಗಳೂರು ಉತ್ತರ

ಇವರು 10.08.1998 ರಲ್ಲಿ ಸ.ಹಿ.ಪ್ರಾ ಶಾಲೆ ಕಂಡತ್ತಪಳ್ಳಿಯಲ್ಲಿ ಸೇವೆಗೆ ಸೇರಿದರು. ಮುಂದೆ ಕ್ಷೇತ್ರ ಸಂಪನ್ಮೂಲ ಕೇಂದ್ರ ಗಾಂಧಿನಗರದಲ್ಲಿ ಬಿ.ಆರ್.ಪಿ ಆಗಿ ಸೇವೆ ಸಲ್ಲಿಸಿದರು. ಪ್ರಸ್ತುತ ಸ.ಹಿ.ಪ್ರಾ ಶಾಲೆ ಬೊಕ್ಕಪಟ್ಟಣ 3 ರಲ್ಲಿ ಸಹ ಶಿಕ್ಷಕರಾಗಿರುವ ಇವರು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತಿ ಜೀವನದ ಶುಭಾಶಯಗಳು.

ಅಕ್ಕರೆಯ ಅಕ್ಷರಧಾರೆಯ ಸೇವೆಯನ್ನು ಸಲ್ಲಿಸಿ ಈ ತಿಂಗಳು ನಿವೃತ್ತರಾಗುತ್ತಿರುವ ಎಲ್ಲಾ ಶಿಕ್ಷಕ ಬಾಂಧವರಿಗೆ ಭಗವಂತನು ಆಯುರಾರೋಗ್ಯವನ್ನು ಕರುಣಿಸಿ ಸುಖ ಸಂತೋಷ ನೆಮ್ಮದಿಯನ್ನು ನೀಡಲಿ ಎಂದು ಗೌರವಪೂರ್ವಕವಾಗಿ ಹಾರೈಸುತ್ತಿದ್ದೇವೆ.

Sharing Is Caring:

Leave a Comment