ಇಂದು GOOGLE ತನ್ನ DOODLE ಮೂಲಕ ಗೌರವ ಸಲ್ಲಿಸಿದ ಮಹಿಳೆ ಯಾರು? ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿಯ ಕುರಿತ ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now

ಶಿಕ್ಷಣಕ್ಕಾಗಿ ಹೋರಾಡಿದ ಅಕ್ಷರದವ್ವ ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್ ಇವರಿಗೆ ಪ್ರೀತಿಯ ನಮನಗಳು,ಅಕ್ಷರ ದೀಪ ಸದಾ ಉರಿಯುತ್ತಿರಲಿ

IMG 20220109 WA0002 min

ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಅಕ್ಷರದವ್ವ “ಫಾತಿಮಾ ಶೇಖ್” ಜನ್ಮದಿನದ ಶುಭಾಶಯಗಳುಫಾತಿಮಾ ಶೇಖ್ ದೇಶ ಮರೆಯಬಾರದ ಅನರ್ಘ್ಯ ರತ್ನ.

(ಕೃಪೆ : ವಾರ್ತಾಭಾರತಿ ಪತ್ರಿಕಾ ವರದಿ)

ಫಾತಿಮಾ ಶೇಖ್ ದೇಶ ಮರೆಯಬಾರದ ಅನರ್ಘ್ಯ ರತ್ನ. ಅವರ ಬದುಕು ಮತ್ತು ಹೋರಾಟಗಳ ದಾಖಲೀಕರಣ ಮಾಡುವ ಕೆಲಸ ಆಗಬೇಕಾಗಿದೆ. ಅವರ ಕುರಿತಂತೆ ಸಂಶೋಧನೆಯೂ ಆಗಬೇಕಿದೆ. ಇಲ್ಲವಾದರೆ ಫಾತಿಮಾ ಶೇಖ್ ಎಂಬ ಹೆಸರು ಅಜ್ಞಾತವಾಗಿಯೇ ಉಳಿದು ಮುಂದೊಂದು ದಿನ ಸಂಪೂರ್ಣವಾಗಿ ಇತಿಹಾಸದ ಪುಟಗಳಿಂದ ಅಳಿಸಿ ಹೋಗಬಹುದು.

ನಾವು ಪಾಕಿಸ್ತಾನದ ಹೆಣ್ಮಕ್ಕಳ ಶಿಕ್ಷಣದ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್ ಝಾ ಬಗ್ಗೆ ಮಾತನಾಡುತ್ತೇವೆ. ಮಹಿಳಾ ಶಿಕ್ಷಣದ ಹಕ್ಕಿನ ಕುರಿತಂತಹ ಹೋರಾಟದ ಐಕಾನ್ ಆಗಿ ಮಲಾಲರನ್ನೇ ಮುಂದಿಡುತ್ತೇವೆ. ಆದರೆ ನಮ್ಮ ದೇಶದಲ್ಲಿ ಒಂದೂ ಮುಕ್ಕಾಲು ಶತಮಾನದ ಹಿಂದೆಯೇ ಮುಸ್ಲಿಂ ಮಹಿಳೆಯರಿಗೆ ಮತ್ತು ತಳವರ್ಗಕ್ಕೆ ಶಿಕ್ಷಣದ ಬೆಳಕು ನೀಡಲು ಬದುಕು ಸವೆಸಿದ ಅಕ್ಷರ ಮಾತೆ ಫಾತಿಮಾ ಶೇಖ್‌ರನ್ನು ಮರೆತೇ ಬಿಟ್ಟಿದ್ದೇವೆ ಅಥವಾ ನಮ್ಮಲ್ಲಿ ಅಂತಹವರೊಬ್ಬರಿದ್ದರು ಎಂಬುದು ನಮಗೆ ಗೊತ್ತೇ ಇಲ್ಲ.

ಅದು 1848 ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಅವರ ಮಡದಿ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ತಳವರ್ಗಕ್ಕೆ ಶಿಕ್ಷಣದ ಬೆಳಕು ನೀಡಲು ಪ್ರಾರಂಭಿಸಿದ ಕಾಲ. ಆಗ ಅವರ ವಿರುದ್ಧ ಸವರ್ಣೀಯ ಶಕ್ತಿಗಳು ಅವರನ್ನು ಶತಾಯ ಗತಾಯ ಹಣಿಯಬೇಕೆಂದು ಒಗ್ಗಟ್ಟಾದವು. ಅವರ ಮೇಲೆ ದೈಹಿಕ, ಮಾನಸಿಕ ಹಲ್ಲೆಗಳೂ ಪ್ರಾರಂಭವಾದವು. ಒಂದು ಹಂತದಲ್ಲಿ ಮಹಾತ್ಮಾ ಜ್ಯೋತಿಬಾ ಫುಲೆಯವರ ಕೊಲೆಗೂ ಸಂಚು ಹೂಡಲಾಗಿತ್ತು.

ಒಮ್ಮೆ ಅವರ ವಿರುದ್ಧ ಬಲಿಷ್ಠ ಹೋರಾಟಕ್ಕೆ ಸಜ್ಜಾದ ಸವರ್ಣೀಯರ ಬೃಹತ್ ಗುಂಪೊಂದು ಅವರ ಮುಂದೆ ಎರಡು ಶರ್ತಗಳನ್ನು ಹಾಕಿತು. ಒಂದೋ ಕೆಳಜಾತಿಯವರಿಗೆ ಶಿಕ್ಷಣ ನೀಡುವ ಈ ಅತಿರೇಕದ ಚಟುವಟಿಕೆಗಳನ್ನು ನಿಲ್ಲಿಸಬೇಕು ಅಥವಾ ನಿಮ್ಮ ಮನೆ ಖಾಲಿ ಮಾಡಬೇಕು. ಆಗ ಅವರು ಎರಡನೆಯದ್ದನ್ನು ಆಯ್ಕೆ ಮಾಡಿದರು.

ಆಗ ಕೆಳಜಾತಿಯವರಿಗೆ ಶಿಕ್ಷಣ ನೀಡಲು ಒಂದು ಪುಟ್ಟ ಕೋಣೆಯನ್ನು ನೀಡಲು ಯಾರೂ ಮುಂದೆ ಬರಲಿಲ್ಲ. ಅವರ ಬಂಧುಗಳು, ಜಾತಿ ಬಾಂಧವರು ಸವರ್ಣೀಯರಿಗೆ ಬೆದರಿ ಅವರಿಂದ ಅಂತರ ಕಾಯ್ದುಕೊಂಡರು. ಅಂದು ಅವರ ಸಹಾಯಕ್ಕೆ ಬಂದವರು ಪುಣೆಯ ಮಿಯಾಂ ಉಸ್ಮಾನ್ ಶೇಖ್. ಅವರು ಗಂಜ್ ಪೇಟೆಯಲ್ಲಿರುವ ತಮ್ಮ ಮನೆಯನ್ನೇ ಈ ಅಕ್ಷರ ದಾಸೋಹದ ಮಿಶನ್ ಗಾಗಿ ಉಚಿತವಾಗಿ ಬಿಟ್ಟುಕೊಟ್ಟರು.

ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಪುಲೆಯವರ ಇಂತಹದೊಂದು ಅದ್ಭುತ ಹೋರಾಟ ಉಸ್ಮಾನ್ ಶೇಖ್ ಅವರ ಸಹೋದರಿ ಫಾತಿಮಾ ಶೇಖ್ ಅವರ ಮೇಲೆ ಎಂತಹ ಪ್ರಭಾವ ಬೀರಿತೆಂದರೆ ಆ ಕಾಲದ ಅಪರೂಪದಲ್ಲೇ ಅಪರೂಪ ಎನ್ನಬಹುದಾದಂತಹ ಸುಶಿಕ್ಷಿತ ಮುಸ್ಲಿಂ ಹೆಣ್ಣು ಮಗಳಾದ ಅವರು ಅಕ್ಷರದವ್ವಳ ಹೆಗಲಿಗೆ ಹೆಗಲು ಕೊಟ್ಟು ದುಡಿಯಲು ನಿರ್ಧರಿಸಿದರು. ಅವರು ಆ ಕಾಲದ ಸಾಮಾಜಿಕ ವ್ಯವಸ್ಥೆಯನ್ನು ಮೆಟ್ಟಿ ನಿಂತು ಫುಲೆ ದಂಪತಿಯೊಂದಿಗೆ ಸೇರಿಕೊಂಡರು. ಅಕ್ಷರದವ್ವಳ ಶಾಲೆಯಲ್ಲಿ ಶಿಕ್ಷಕಿಯಾಗಿ ತಳವರ್ಗದ ಮತ್ತು ಮುಸ್ಲಿಂ ಹೆಣ್ಮಕ್ಕಳಿಗೆ ಪಾಠ ಹೇಳಿಕೊಟ್ಟರು. ಆ ಮೂಲಕ ಅವರು “ಭಾರತದ ಪ್ರಪ್ರಥಮ ಮುಸ್ಲಿಂ ಶಿಕ್ಷಕಿ” ಎಂಬ ಕೀರ್ತಿಗೆ ಭಾಜನರಾದರು.

ಫಾತಿಮಾ ಮತ್ತು ಸಾವಿತ್ರಿ ಫುಲೆ ಶಾಲೆ ಕಲಿಸಲೆಂದು ಹೋಗುವಾಗ ಮೇಲ್ಜಾತಿ ಜನರಿಂದ ನಿರಂತರ ಕಿರುಕುಳ ಮತ್ತು ಅವಮಾನವನ್ನು ಎದುರಿಸಬೇಕಾಯಿತು. ಅವರ ಮೇಲೆ ಕಲ್ಲೆಸೆತ, ದನದ ಸೆಗಣಿ ಎಸೆತ ಇವೆಲ್ಲಾ ಮಾಮೂಲಿಯಾಗಿತ್ತು. ಯಾಕೆಂದರೆ ಕೆಳಸಮುದಾಯ ಸುಶಿಕ್ಷಿತರಾಗುವುದನ್ನು ಸವರ್ಣೀಯರು ಊಹಿಸಲೂ ಸಾಧ್ಯವಿರಲಿಲ್ಲ. ಫಾತಿಮಾ ಮತ್ತು ಸಾವಿತ್ರಿಬಾಯಿ ಸವರ್ಣೀಯರ ಯಾವುದೇ ಕಿರುಕುಳಗಳನ್ನು ಗಣನೆಗೆ ತೆಗೆದುಕೊಳ್ಳದೆ ತಮ್ಮ ಅಕ್ಷರ ದಾಸೋಹದ ಕೆಲಸವನ್ನು ಮುಂದುವರಿಸಿದರು.

ಅವರು ಶಾಲೆಗೆ ಹೋಗುವಾಗ ಸದಾ ತಮ್ಮ ಚೀಲಗಳಲ್ಲಿ ಒಂದು ಜೊತೆ ಹೆಚ್ಚುವರಿ ಬಟ್ಟೆಯನ್ನು ಹಿಡಿದುಕೊಂಡೇ ಹೋಗುತ್ತಿದ್ದರು. ತಮ್ಮ ಮೇಲೆ ಎರಚಲಾದ ಸೆಗಣಿಯುಕ್ತ ಬಟ್ಟೆಯನ್ನು ಬದಲಿಸಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಮತ್ತೆ ಸಂಜೆ ಶಾಲೆಯಿಂದ ಹೊರಡುವಾಗ ಬೆಳಗ್ಗಿನ ಸೆಗಣಿ ಎರಚಲ್ಪಟ್ಟ ಬಟ್ಟೆಯನ್ನೇ ಧರಿಸುತ್ತಿದ್ದರು.

ಈ ಹೋರಾಟದ ಪಯಣ ಫಾತಿಮಾರಿಗೆ ಸಾವಿತ್ರಿ ಬಾಯಿ ಅವರಿಗಿಂತಲೂ ಸಂಕಷ್ಟದ್ದಾಗಿತ್ತು. ಅವರಿಗೆ ಹಿಂದೂ ಸಮುದಾಯಗಳಂತೆಯೇ ತನ್ನದೇ ಮುಸ್ಲಿಂ ಸಮುದಾಯದೊಳಗಿಂದಲೂ ಪ್ರಬಲ ವಿರೋಧ ವ್ಯಕ್ತವಾಗಿತ್ತು. ಆದರೆ ಅವರು ಯಾವುದೇ ಸಂದರ್ಭದಲ್ಲೂ ಎದೆಗುಂದದೇ ತನ್ನ ಕೆಲಸಗಳಲ್ಲಿ ಅಚಲವಾಗಿ ತೊಡಗಿಸಿಕೊಂಡಿದ್ದರು. ಆ ಕಾಲದಲ್ಲಿ ಮುಸ್ಲಿಮರಲ್ಲಿ ಶಿಕ್ಷಣದ ಕುರಿತು ಕಿಂಚಿತ್ ಜಾಗೃತಿಯೂ ಇರಲಿಲ್ಲ. ಇನ್ನು ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣದ ಕತೆಯಂತೂ ಕೇಳುವುದೇ ಬೇಡ. ಮೂಲಭೂತವಾದಿಗಳಿಂದ ಎದುರಾಗುತ್ತಿರುವ ತೀವ್ರ ವಿರೋಧವನ್ನೂ ಲೆಕ್ಕಿಸದೆ ಫಾತಿಮಾ ಮುಸ್ಲಿಂ ಮತ್ತು ದಲಿತ, ಶೂದ್ರರ ಮನೆ ಮನೆಗೆ ತೆರಳಿ ಶೈಕ್ಷಣಿಕ ಜಾಗೃತಿ ಮೂಡಿಸುತ್ತಿದ್ದರು. ಆಗ ಅವರು ಒಂದೊಂದು ಮನೆಯವರೊಂದಿಗೆ ಆಪ್ತ ಸಮಾಲೋಚನೆ ನಡೆಸಲು ಒಂದೊಂದು ಗಂಟೆಗಳಷ್ಟು ಸಮಯ ತೆಗೆದುಕೊಳ್ಳುತ್ತಿದ್ದರಂತೆ. ಹಾಗೆ ಭೇಟಿ ನೀಡಿ ಒಮ್ಮೆ ಆಪ್ತ ಸಮಾಲೋಚನೆ ನೀಡಿದ ಕೂಡಲೇ ಜನರ ಮನೋಸ್ಥಿತಿಯೇನೂ ಬದಲಾಗುತ್ತಿರಲಿಲ್ಲವಂತೆ. ಆವರೆಗೆ ಶಿಕ್ಷಣ ಎಂಬುದು ಕೇವಲ ಮೇಲ್ಜಾತಿಯವರ ಸ್ವತ್ತೇ ಹೊರತು ಅದರ ಕುರಿತು ನಾವು ಯೋಚನೆ ಮಾಡಲೂ ಬಾರದು ಎಂಬಂತಿದ್ದ ಜನಸಮೂಹಕ್ಕೆ ಶಿಕ್ಷಣವು ಅನ್ನ, ನೀರು, ಬಟ್ಟೆ, ವಸತಿಯಷ್ಟೇ ಮನುಷ್ಯನಿಗೆ ಅಗತ್ಯ ಎಂಬುದನ್ನು ಜನರ ತಲೆಯಲ್ಲಿ ಕೂರಿಸುವುದು ಸುಲಭದ ಕೆಲಸವೇನಾಗಿರಲಿಲ್ಲ. ಇದನ್ನು ಆ ವರ್ಗಕ್ಕೆ ಮನವರಿಕೆ ಮಾಡ ಹೋದಾಗೆಲ್ಲಾ ಇವರನ್ನು ಸಂಶಯದಿಂದ ನೋಡಿ ಕುಹಕವಾಡಿದವರೇ ಹೆಚ್ಚು. ಆದರೆ ಅವರ ಉಪೇಕ್ಷೆ ಇವರನ್ನು ಧೃತಿಗೆಡಿಸಲಿಲ್ಲ.

ಮುಂದಿಟ್ಟ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ ಎಂಬ ದೃಢ ನಿರ್ಧಾರಕ್ಕೆ ಅವರು ಬಂದರು. ಆ ಸಂದರ್ಭದಲ್ಲಿ ಫಾತಿಮಾ- ಸಾವಿತ್ರಿಬಾಯಿಯವರಿಗೆ ಜೊತೆಯಾಗಿದ್ದ ಇನ್ನೋರ್ವ ಸಮಾಜ ಸುಧಾರಕಿ ಸುಗುಣಾ ಬಾಯಿ. ಅವರು ಕೂಡಾ ಇವರ ಶಾಲೆಯಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುವ ಧೈರ್ಯ ತೋರಿದ್ದರು.

ದುರಂತವೇನೆಂದರೆ ಅಕ್ಷರದವ್ವ ಸಾವಿತ್ರಿ ಬಾಯಿಯವರ ಬದುಕು ಮತ್ತು ಹೋರಾಟದ ಕುರಿತಂತೆ ನೂರಾರು ಪುಸ್ತಕಗಳು ದೇಶದ ವಿವಿಧ ಭಾಷೆಗಳಲ್ಲಿ ಬಂದಿವೆಯಾದರೂ ಅವರ ಚಳವಳಿಯ ಸಂಗಾತಿ ಫಾತಿಮಾ ಶೇಖ್ ಅವರ ಉಲ್ಲೇಖ ಎಲ್ಲೂ ಕಾಣಸಿಗುವುದಿಲ್ಲ ಮತ್ತು ಇಡೀ ಸಮಾಜವೇ ಫುಲೆ ದಂಪತಿಗಳಿಗೆ ಒಂದು ವಿಧದ ಬಹಿಷ್ಕಾರ ಹಾಕಿದಾಗ, ಅವರದ್ದೇ ಸಮುದಾಯ ಅವರನ್ನು ದೂರತಳ್ಳಿದಾಗ ಅವರ ಅಕ್ಷರದಾಸೋಹದ ಮಿಶನ್ ಗಾಗಿ ಮನೆಯನ್ನೇ ಬಿಟ್ಟು ಕೊಟ್ಟ ಉಸ್ಮಾನ್ ಶೇಖ್ ಅವರ ಉಲ್ಲೇಖವೂ ಕಾಣಸಿಗುವುದಿಲ್ಲ. ಉಸ್ಮಾನ್ ಶೇಖ್ ಫುಲೆ ದಂಪತಿಗಾಗಿ ತನ್ನ ಮನೆಯನ್ನು ಬಿಟ್ಟು ಕೊಟ್ಟಿದ್ದಕ್ಕೆ ಮತ್ತು ತನ್ನ ಸಹೋದರಿ ಫಾತಿಮಾರನ್ನು ಚಳವಳಿಗೆ ಇಳಿಸಿದ್ದಕ್ಕೆ ತನ್ನ ಸಮುದಾಯ ಮತ್ತು ಸವರ್ಣೀಯರಿಂದ ಬಹಳಷ್ಟು ಕಿರುಕುಳಕ್ಕೆ ಒಳಗಾಗಬೇಕಾಗಿ ಬಂದಿತ್ತು. ಆದರೆ ಅವ್ಯಾವುದನ್ನೂ ಲೆಕ್ಕಿಸದೆ ಅವರು ಫುಲೆ ದಂಪತಿಯ ಜೊತೆ ಬಂಡೆಯಂತೆ ನಿಂತಿದ್ದರು.

ಈ ಐಕ್ಯದ ಕನಸನ್ನು ನನಸಾಗಿಸಲು ಫಾತಿಮಾ ಶೇಕ್ – ಸಾವಿತ್ರಿ ಬಾಯಿ ಫುಲೆಯವರ ಹೋರಾಟದ ಅನನ್ಯ ಕಥನ ಅತೀ ದೊಡ್ಡ ಸ್ಫೂರ್ತಿಯಾಗಬಲ್ಲುದು. ಈ ನೆಲೆಯಲ್ಲಿಯೂ ಅದಕ್ಕೆ ಮಹತ್ವವಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ.

ಕೃಪೆ : ವಾರ್ತಾಭಾರತಿ ಪತ್ರಿಕಾ ವರದಿ

WhatsApp Group Join Now
Telegram Group Join Now
Sharing Is Caring:

Leave a Comment