ಬೆಂಗಳೂರು, ಸೆ. 23: ದೇಶದ ಮುಂಬರುವ ಜನಗಣತಿ–2027ರ ಸಿದ್ಧತೆಗಳು ಚುರುಕುಗೊಂಡಿದ್ದು, ಈ ಬಾರಿ ಜನಗಣತಿ ಪ್ರಕ್ರಿಯೆಯನ್ನು ವ್ಯಾಪಕವಾಗಿ ಡಿಜಿಟಲ್ ತಂತ್ರಜ್ಞಾನ ಬಳಸಿ ನಡೆಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದ್ದು, ಸಾರ್ವಜನಿಕರಿಗೆ ಸ್ವಯಂ-ಗಣತಿ (Self-Enumeration) ಮೂಲಕ ಆನ್‌ಲೈನ್‌ನಲ್ಲಿ ತಮ್ಮ ಮನೆಯ ಮಾಹಿತಿಯನ್ನು ಸ್ವತಃ ದಾಖಲಿಸುವ ಅವಕಾಶ ಕಲ್ಪಿಸಲಾಗಿದೆ.
ಮೊದಲ ಹಂತದಲ್ಲಿ ಮನೆಪಟ್ಟಿ ಮತ್ತು ವಸತಿ ಗಣತಿ (Houselisting & Housing Census) ನಡೆಯಲಿದೆ. ಇದರಲ್ಲಿ ಮನೆಗಳ ಸ್ಥಿತಿ, ಕುಡಿಯುವ ನೀರು, ವಿದ್ಯುತ್, ಅಡುಗೆ ಇಂಧನ, ಶೌಚಾಲಯ, ಇಂಟರ್ನೆಟ್ ಸೇರಿದಂತೆ ವಿವಿಧ ವಸತಿ ಸೌಲಭ್ಯಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ.
ಇದಕ್ಕೂ ಮುನ್ನ ನಿಗದಿತ ಅವಧಿಯಲ್ಲಿ ಸಾರ್ವಜನಿಕರು ಅಧಿಕೃತ ಡಿಜಿಟಲ್ ವ್ಯವಸ್ಥೆಯ ಮೂಲಕ ತಮ್ಮ ಮನೆಯ ವಿವರಗಳನ್ನು ಸ್ವತಃ ದಾಖಲಿಸಬಹುದು. ಮಾಹಿತಿ ಸಲ್ಲಿಸಿದ ಬಳಿಕ ದೊರೆಯುವ Self-Enumeration Reference ID ಅನ್ನು ಗಣತಿದಾರರ ಮನೆ ಭೇಟಿಯ ಸಂದರ್ಭದಲ್ಲಿ ಬಳಸಲಾಗುತ್ತದೆ. ಸ್ವಯಂ-ಗಣತಿ ಮಾಡಿದರೂ ಗಣತಿದಾರರ ಪರಿಶೀಲನಾ ಭೇಟಿ ನಡೆಯಲಿದೆ.
ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ (Population Enumeration) ನಡೆಯಲಿದ್ದು, ಪ್ರತಿಯೊಬ್ಬ ವ್ಯಕ್ತಿಯ ಜನಸಾಂಖ್ಯಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಇತರ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈ ಹಂತದಲ್ಲಿ ಜಾತಿ ಸಂಬಂಧಿತ ಮಾಹಿತಿಯನ್ನೂ ಸಂಗ್ರಹಿಸುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿದೆ.
ಜನಗಣತಿ–2027 ದೇಶದ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿಯಾಗಿದ್ದು, ಮಾಹಿತಿ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ಮೊಬೈಲ್ ಆ್ಯಪ್ ಹಾಗೂ ಡಿಜಿಟಲ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ನಾಗರಿಕರು ಅಧಿಕೃತ ಜನಗಣತಿ ವ್ಯವಸ್ಥೆಯ ಮೂಲಕ ಮಾತ್ರ ಮಾಹಿತಿ ನೀಡಬೇಕು ಹಾಗೂ ಗಣತಿ ಸಿಬ್ಬಂದಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.