ಕನ್ನಡ ಭಾಷಾಭಿಮಾನ – ಬೆಳಕು 5

WhatsApp Group Join Now
Telegram Group Join Now

ಬೆಳಕು

ಕನ್ನಡ ಭಾಷಾಭಿಮಾನ

ಎಲ್ಲಾ ಕನ್ನಡಿಗರ ಆಶಯ ಒಂದೇ ನಾವೆಲ್ಲರೂ ಕನ್ನಡ ಮಾತನಾಡಬೇಕು,ಮತ್ತು ವ್ಯವಹಾರಗಳಲ್ಲಿ ಕನ್ನಡವನ್ನೇ ಬಳಸಬೇಕು.ಆದರೆ ಯಾರು ಮಾತನಾಡಬೇಕು,ಎಲ್ಲಿ ಮಾತನಾಡಬೇಕು ಎಂಬುದು ಸ್ವಲ್ಪ ಇಕ್ಕಟ್ಟಿನಲ್ಲಿ ಇದೆ ಎಂಬುದು ನನ್ನ ಅನಿಸಿಕೆ.
ಕರ್ನಾಟಕದಲ್ಲಿ ಪ್ರತೀ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತೇವೆ,ಅದಕ್ಕಾಗಿ ನೂರಾರು ಕೋಟಿ ಹಣ ಬಿಡುಗಡೆ ಆಗುತ್ತದೆ ಮತ್ತು ಖರ್ಚಾಗುತ್ತದೆ,ನೂರಾರು ಜನ ಬರುತ್ತಾರೆ ಊಟ ಮಾಡುತ್ತಾರೆ, ಊಟ ಚೆನ್ನಾಗಿದ್ದರೆ ಸಮ್ಮೇಳನ ಚೆನ್ನಾಗಿತ್ತು ಎಂಬ ಮಾತುಗಳು ಹರಿದಾಡುತ್ತವೆ.
ಸಮ್ಮೇಳನದ ಅಧ್ಯಕ್ಷರ ;ಆಯ್ಕೆಗೆ ಒಂದಿಷ್ಟು ಚರ್ಚೆಗಳು, ರಾಜಕೀಯ ಕೆಸರಾಟಗಳು,ನಡೆದು ಅಂತ್ಯ ಕಾಣುತ್ತದೆ.ಸಮ್ಮೇಳನ ಪ್ರಾರಂಭದಲ್ಲಿ, ಅದ್ದೂರಿ ಮೆರವಣಿಗೆ, ಅದಕ್ಕೊಂದಷ್ಟು ಲಕ್ಷಗಳು ಖರ್ಚು.ಅಧ್ಯಕ್ಷರ ,ತೆರೆದ ವಾಹನದಲ್ಲಿ ಮೆರವಣಿಗೆ, ಭಾರವಾಗುವಷ್ಟು ಹೂ ಹಾರಗಳು,ಮೆರವಣಿಗೆಯುದ್ದಕ್ಕೂ ಕಟೌಟ್ ಗಳು,ಕಾಣಸಿಗುತ್ತವೆ.
ಸಮ್ಮೇಳನದ ಪ್ರಾರಂಭದಲ್ಲಿ ರಾಜಕೀಯ ಮುತ್ಸದ್ದಿಗಳ ಭಾಷಣ,ಆಶ್ವಾಸನೆಗಳ ಸುರಿಮಳೆ,ಎದುರಿಗೆ ಕುಳಿತವರ ಕರತಾಡನ.ಅಲ್ಲಿಗೆ ಒಂದು ಹಂತ ಮುಗಿಯುತ್ತದೆ,ಅರ್ಧ ಕನ್ನಡಾಭಿಮಾನಿಗಳ ಸೀಟುಗಳು ಖಾಲಿಯಾಗುತ್ತವೆ.
ವಿವಿಧ ಗೋಷ್ಠಿಗಳ ಪ್ರಾರಂಭ: ಗೋಷ್ಠಿಯ ಮೊದಲ ವೇದವಾಕ್ಯ;ಕನ್ನಡಿಗರೆಲ್ಲರೂ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು,ಅದರಲ್ಲಿಯೂ ಶಿಕ್ಷಕರು,ಆಗ ಕನ್ನಡ ಭಾಷೆಯ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮೊದಲ ಗೋಷ್ಠಿಯ ವಿಸರ್ಜನೆಯಾಗುತ್ತದೆ.
ಅಂತೂ ಹಲವು ಗೋಷ್ಠಿಗಳು ನಡೆಯುತ್ತವೆ,ಕೊನೆಗೆ ಮಹಾಯಾಗದ ಸಮೀಪಕ್ಕೆ ಬರುತ್ತೇವೆ.ಅಧ್ಯಕ್ಷರ ಭಾಷಣ,ಅವರ ಮಾತುಗಳು ನಡಾವಳಿ ಪುಸ್ತಕದಲ್ಲಿ ದಾಖಲಾಗುತ್ತವೆ.ಅವರು ಸರಕಾರಕ್ಕೆ ಹಲವು ಒತ್ತಾಯಗಳನ್ನು ಮಾಡುತ್ತಾರೆ, ಹಲವಾರು ಬೇಡಿಕೆಗಳನ್ನು ಮಂಡಿಸುತ್ತಾರೆ,ಸರಕಾರಕ್ಕೆ ಸಲ್ಲಿಕೆಯಾಗುತ್ತವೆ.
ಅಧ್ಯಕ್ಷರ ಭಾಷಣ ಅಂದ್ರೆ ಅದು ಸಮ್ಮೇಳನದ ಕರಡು ನಿರ್ಣಯಗಳೂ ಹೌದು. ಅವುಗಳನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕು.ಆದರೆ ಆ ನಿರ್ಣಯಗಳು ಮತ್ತೆ ಮುನ್ನಲೆಗೆ ಬರುವುದು ಮುಂದಿನ ಸಮ್ಮೇಳನದ ಸಮಯದಲ್ಲಿ.
ಆದುದರಿಂದ ಕನ್ನಡ ಭಾಷೆಯ ಅಭಿವೃದ್ಧಿ, ಬೆಳವಣಿಗೆ, ಸಾಕ್ಷತ್ಕಾರ ಕೇವಲ ಸಾಹಿತ್ಯ ಸಮ್ಮೇಳನಗಳಿಂದ ಸಾಧ್ಯವಿಲ್ಲ.ನಮ್ಮ ದೇಶದ ಇತರ ರಾಜ್ಯಗಳಲ್ಲಿ ಇಂತಹ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೊ ಎಂಬುದು ನನಗೆ ಗೊತ್ತಿಲ್ಲ, ಆದರೆ ಅವರ ಭಾಷಭಿಮಾನ ಮಾತ್ರ ಗೊತ್ತಿದೆ.
ನಮ್ಮ ಕನ್ನಡ ಭಾಷೆಯ ಉನ್ನತಿ ಆಗಬೇಕಾದರೆ ಮೊದಲು ಬೇಕಾದದ್ದು ರಾಜಕೀಯ ಇಚ್ಚಾಸಕ್ತಿ,ರಾಜಕೀಯ ಬೆಂಬಲ, ಸರಕಾರಗಳ ದಿಟ್ಟ ನಿರ್ಧಾರಗಳು,ಇವು ಆಗದೆ ಹೋದರೆ ಎಷ್ಟು ಸಾಹಿತ್ಯ ಸಮ್ಮೇಳನ ಮಾಡಿದರು ಕನ್ನಡ ಭಾಷೆಯ ಅಭಿವೃದ್ಧಿ ಕಷ್ಟ ಸಾಧ್ಯ.

ಕನ್ನಡ ಭಾಷೆಯ ಕಂಪು ನಾಡಿನೆಲ್ಲೆಡೆ ಪಸರಿಸಬೇಕಾದರೆ ಮೊದಲು ಅದು ನಮ್ಮ ವಿಧಾನ ಸಭೆಯಲ್ಲಿ ಚರ್ಚೆಗೆ ಬರಬೇಕು,ಸವಿಸ್ತಾರವಾಗಿ ಚರ್ಚಿಸಿ ಅವುಗಳು ಲಿಖಿತ ರೂಪದಲ್ಲಿ ಹೊರಹೊಮ್ಮಬೇಕು.ಅವುಗಳು ಕಾನೂನು ರೂಪದಲ್ಲಿ ಜಾರಿಗೆ ಬರಬೇಕು, ಪ್ರತಿಯೊಂದು ಸರಕಾರ ಮಟ್ಟದ ವ್ಯವಹಾರಗಳು ಕೂಡಾ ಕನ್ನಡ ಭಾಷೆಯಲ್ಲೇ ಆಗಬೇಕು ಎಂದು ಕಾನೂನು ತರಬೇಕು,ಉದಾಹರಣೆಗೆ ಸರಕಾರದ ಎಲ್ಲಾ ಗಜೆಟ್ ಪ್ರಕಟಣೆಗಳು,ಐ ಎ ಎಸ್ ಅಧಿಕಾರಿಗಳ ಆದೇಶಗಳು,ನಾವೆಲ್ಲರೂ ವೇದವಾಕ್ಯವೆಂದು ನಂಬಿರು ನ್ಯಾಯಾಲಯಗಳ ಆದೇಶ ಪ್ರತಿಗಳು,ನ್ಯಾಯಾಲಯದಲ್ಲಿ ವಾದ-ವಿವಾದಗಳು ಕನ್ನಡದಲ್ಲೇ ಆಗಬೇಕು,ಪ್ರತಿಯೊಂದು ಸರಕಾರಿ,ಅರೆ ಸರಕಾರಿ,ಖಾಸಗಿ ಕಛೇರಿಗಳ ನಾಮಫಲಕಗಳು ಕನ್ನಡದಲ್ಲೇ ಇರುವಂತೆ ಜಾಗೃತಿ ಮೂಡಿಸಬೇಕು,ಆಗದೇ ಇದ್ದಾಗ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು.ಅದೇ ರೀತಿಯಲ್ಲಿ ಪ್ರತಿಯೊಂದು ಅಂಗಡಿ ಮುಂಗಟ್ಟುಗಳ ಹೆಸರುಗಳು, ಚಿಕ್ಕ ಪುಟ್ಟ ತಳ್ಳು ಗಾಡಿಗಳ ಹೆಸರುಗಳು ಕೂಡಾ ಕನ್ನಡದಲ್ಲೇ ಇರುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು.ವಾಹನಗಳ ನಂಬರ್ ಪ್ಲೇಟ್ ಗಳಲ್ಲಿ ಕನ್ನಡ ಅಂಕೆಗಳು ಇರುವಂತೆ ಮಾಡಬೇಕು.ಇಷ್ಟೆಲ್ಲಾ ಮಾಡಿದಾಗ ಕನ್ನಡ ಭಾಷೆಯ ಉನ್ನತಿ ಆಗದೆ ಇರುತ್ತದೆಯೇ?,


ಇನ್ನು ಸ್ವಲ್ಪ ಮುಂದೆ ಹೋಗಿ ಕರ್ನಾಟಕದಲ್ಲಿ ಹುಟ್ಟಿದ ಎಷ್ಟು ದೊಡ್ಡ ಅಧಿಕಾರಿಯಾಗಲಿ,ಎಷ್ಟು ದೊಡ್ಡ ರಾಜಕೀಯ ವ್ಯಕ್ತಿಯಾಗಲೀ,ಮಹಾನ್ ಸಿನಿಮ ತಾರೆಯರಾಗಲೀ,ಕ್ರಿಕೆಟ್ ಆಟಗಾರರಾಗಲೀ,ವಿಶ್ವ ಸುಂದರಿಯಾಗಲೀ ಮಹಾನ್ ವಿಜ್ಞಾನಿಗಳಾಗಲೀ ಕನ್ನಡ ನಾಡಲ್ಲಿ ಶುದ್ಧ ಕನ್ನಡದಲ್ಲೇ ಮಾತನಾಡಬೇಕು.ಬೇರೆ ರಾಜ್ಯದ ಸಿನಿಮಾ ತಾರೆಯರು ಎಂದಾದರು ಅವರ ಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ಅವರ ರಾಜ್ಯದಲ್ಲಿ ಮಾತನಾಡಿದ್ದನ್ನು ನೋಡಿದ್ದೀರ ಮಿತ್ರರೇ,ಇಲ್ಲವಲ್ಲ.
ನಮ್ಮ ರಾಜ್ಯದ ಚಿಕ್ಕ ಪುಟ್ಟ ಸಿನಿಮಾ ತಾರೆಯರಿರಬಹುದು,ವಿವಿಧ ಆಟಗಾರರಿರಬಹುದು,ಅವರು ಒಂದು ಕನ್ನಡ ಶಬ್ದ ಬಳಸಿದರೆ,ನಾಲ್ಕು ಇಂಗ್ಲಿಷ್ ಶಬ್ದಗಳನ್ನು ಬಳಸುತ್ತಾರೆ.ನಿಜವಾಗಿಯೂ ಅವರಿಗೆ ಕನ್ನಡ ಗೊತ್ತಿಲ್ವ,ಗೊತ್ತಿದೆ ಆದರೆ ತಮ್ಮ ದೊಡ್ಡಸ್ತಿಕೆಯನ್ನು ತೋರಿಸುವುದು ಅವರ ಉದ್ದೇಶ ಅಷ್ಟೇ.


ಕನ್ನಡ ಭಾಷೆಯ ವಿಷಕ್ಕೆ ಬಂದಾಗ ನಮ್ಮ ರಾಜಕೀಯ ಮುತ್ಸದ್ದಿಗಳನ್ನು ಮೆಚ್ಚಲೇ ಬೇಕು.ಅವರು ಅಪ್ಪಿ ತಪ್ಪಿಯೂ ಬೇರೆ ಪದಗಳನ್ನು ಬಳಸುವುದಿಲ್ಲ.ಕಾರಣ ಹಲವು ಇರಬಹುದು. ಆದರೆ ಅವರಿಗೆ ಈ ವಿಷಯದಲ್ಲಿ ಹತ್ತಕ್ಕೆ ಹತ್ತು ಅಂಕಗಳನ್ನು ಕೊಡಲೇ ಬೇಕು.ಅವರ ಒಂದು ಒಂದೂವರೆ ತಾಸಿನ ಭಾಷಣದುದ್ದಕ್ಕೂ ಕನ್ನಡ ಪದಗಳನ್ನು ಬಿಟ್ಟು ಬೇರೆ ಭಾಷೆಯ ಪದಗಳನ್ನು ಬಳಸುವುದಿಲ್ಲ.ದೇಶದ ಲೋಕಸಭೆಯಲ್ಲೂ ಕೂಡ ನಮ್ಮ ಹೆಮ್ಮೆಯ ಜನ ನಾಯಕರು ಕನ್ನಡದಲ್ಲೇ ಪ್ರತಿಜ್ಞೆ ಸ್ವೀಕಾರ ಮಾಡಿದ್ದನ್ನು ನೋಡಿದ್ದೇವೆ.ಇದು ಭಾಷಾಭಿಮಾನ.


ಮೊನ್ನೆ ಒಬ್ಬರು ಮಿತ್ರರು ಸಿಕ್ಕಿದಾಗ ನನ್ನಲ್ಲಿ ಕೇಳಿದ ಪ್ರಶ್ನೆ; ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ನಾನು ಯಾವುದೋ ಒಂದು ಆಂಗ ಮಾಧ್ಯಮ ಶಾಲೆಯ ಹೆಸರು ಹೇಳಿದೆ;ಅವರಿಂದ ಥಟ್ಟನೆ ಬಂದ ಮಾತು,ಮತ್ತೆ ಹೇಗೆ ಕನ್ನಡ ಮಾಧ್ಯಮ ಶಾಲೆಗಳು ಉಳಿಯುವುದು.


ಅವರ ಪ್ರಕಾರ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸಿದಾಗ ಒಮ್ಮೆಲೆ ಕನ್ನಡ ಭಾಷೆಯ ಅಭಿವೃದ್ಧಿ, ಉನ್ನತಿ ಆಗುತ್ತದೆ ಎಂದು.
ಇದು ತಪ್ಪು ಅಭಿಪ್ರಾಯ, ಭಾರತ ದೇಶದಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ಹಕ್ಕಿದೆ,ಸರಕಾರಿ ನೌಕರನಾಗಲಿ,ಖಾಸಾಗಿ ಸಂಸ್ಥೆಗಳ ನೌಕರರಾಗಲಿ,ಒಬ್ಬ ರೈತನಾಗಲಿ,ಕೂಲಿ ಕಾರ್ಮಿಕರಾಗಲಿ ಅವರಿಗೆ ಅವರದ್ದೇ ಆದ ವೈಯಕ್ತಿಕ ಸ್ವಾತಂತ್ರ್ಯವಿದೆ.
ಸರಕಾರಿ ಶಾಲೆಗಳಿಗೆ ಸರಕಾರಗಳು ಹಲವಾರು ಸೌಲಭ್ಯಗಳನ್ನು ಕೊಡುತ್ತಾ ಇವೆ.ನಮ್ಮ ಘನ ಸರಕಾರಗಳು,ಪ್ರತೀ ವರ್ಷ ಪೂರ್ಣ ಕಾಲಿಕ ಶಿಕ್ಷಕರ ನೇಮಕಾತಿ ಮಾಡಬೇಕು.ಪ್ರತೀ ತಿಂಗಳು ನೂರಾರು ಶಿಕ್ಷಕರು ನಿವೃತ್ತಿಯಾಗುತ್ತಾರೆ,ಆದರೆ ನೇಮಕಾತಿ ಆಗುತ್ತಿಲ್ಲ.ತರಗತಿಗೊಬ್ಬ ಶಿಕ್ಷಕರು, ತರಗತಿಗೊಂದು ಕೊಠಡಿ, ಸುಸಜ್ಜಿತ ಶೌಚಾಲಯಗಳು,ಗಣಕ ಯಂತ್ರಗಳ ಅಳವಡಿಕೆ,ಉತ್ತಮ ಗ್ರಂಥಾಲಯ, ಕೊಟ್ಟಾಗ ಸರಕಾರಿ ಶಾಲೆಗಳು ಮಕ್ಕಳಿಂದ ತುಂಬಿ ತುಳುಕುತ್ತವೆ.
ಈ ರೀತಿಯಲ್ಲಿ ಕೂಡಾ ಕನ್ನಡ ಭಾಷೆಯ ಅಭಿವೃದ್ಧಿ ಸಾಧ್ಯ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ.ಆದರೆ ಅದರ ಅನುಸ್ಠಾನ ಸರಿಯಾಗಿ ಆದಂತೆ ಕಾಣುತ್ತಿಲ್ಲ.


ಇನ್ನಾದರೂ ನಾವೆಲ್ಲ ಎಚ್ಚೆತ್ತುಕೊಳ್ಳೋಣ,ನಾಡು,ನುಡಿ,ನೀರು, ಮಣ್ಣು ಉಳಿಸಿಕೊಳ್ಳೋಣ,ಕರ್ನಾಟಕದಲ್ಲಿ ಕನ್ನಡವನ್ನೇ ಮಾತನಾಡೋಣ,ಎಲ್ಲಾ ಭಾಷೆಗಳನ್ನು ಕಲಿಯೋಣ,ನಮ್ಮತನವನ್ನು ಉಳಿಸೋಣ,ಕನ್ನಡ ನಾಡಿನ ಕಂಪು-ಇಂಪು ಸವಿಯೋಣ.ಕನ್ನಡಾಂಬೆಯನ್ನು ಪೂಜಿಸಿ ಉಳಿಸೋಣ.
ಯಾರ ಬಾಯಲ್ಲೂ ಕನ್ನಡ ನಾಡನ್ನು ಬೇರ್ಪಡಿಸುವ ಮಾತು ಬಾರದಂತೆ ನೋಡಿಕೊಳ್ಳೋಣ.
ಚಾಮುಂಡೇಶ್ವರಿ ದೇವಿಯ ಅನುಗ್ರಹಕ್ಕೆ ಪಾತ್ರರಾಗೋಣ.
✍️ಬಿ ಕೆ ಸವಣೂರು.

IMG 20221207 WA0012
ಶ್ರೀ ಬಾಲಕೃಷ್ಣ ಸವಣೂರು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳು,ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಾಲಕೃಷ್ಣ ಸವಣೂರು ಇವರು ಮೂಲತಃ ದೈಹಿಕ ಶಿಕ್ಷಕರಾಗಿದ್ದು ತಮ್ಮ ಚಿಂತನಾ ಬರೆಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. . ಇನ್ನು ಮುಂದೆ ಬೆಳಕು ಶೀರ್ಷಿಕೆಯಲ್ಲಿ ಪ್ರತಿ ವಾರ ಇವರ ಚಿಂತನಾ ಬರೆಹ ಪ್ರಕಟ ಆಗಲಿದೆ.
ಸಂಪರ್ಕ :9945512383

WhatsApp Group Join Now
Telegram Group Join Now
Sharing Is Caring:

Leave a Comment