ಸ್ಪರ್ಧೆಗಳು – ಬೆಳಕು 4

WhatsApp Group Join Now
Telegram Group Join Now

ಬೆಳಕು

ಸ್ಪರ್ಧೆಗಳು

ಸ್ಪರ್ಧೆಗಳು ಎಂದರೆ ಎಲ್ಲರಿಗೂ ತಿಳಿದಿರುವ ವಿಷಯವೆ,ಹೆಚ್ಚಾಗಿ ನೆನಪಿಗೆ ಬರುವುದು ಆಟೋಟಗಳು ಅದರಲ್ಲಿಯೂ ಶಾಲಾ ಮಕ್ಕಳ ಆಟೋಟಗಳು. ಮತ್ತೆ ನೆನಪಾಗುವುದು ರಾಜಕೀಯ ಸ್ಪರ್ಧೆಗಳು, ಅಂದರೆ ಚುನಾವಣೆ. ಅದರಲ್ಲಿಲ್ಲಿಯೂ ಹಿಂದಿನ ಕಾಲದ ಚುನಾವಣೆಯ ಸ್ಪರ್ಧೆಯೇ ಬೇರೆ,ನವಯುಗದ ಚುನಾವಣಾ ಸ್ಪರ್ಧೆಯೇ ಬೇರೆ. ಈಗಿನ ಕಾಲದ ಸ್ಪರ್ಧೆ ಅಭ್ಯರ್ಥಿಗಳ ನಡುವೆ ನಡೆಯುವ ಸ್ಪರ್ಧೆಯಲ್ಲ,ಅದು ಹಣದ ಬಲಾಬಲಗಳ ನಡುವೆ ನಡೆಯುವ ಸ್ಪರ್ಧೆಯೆಂದರೂ ತಪ್ಪಲ್ಲ.
ಹಿಂದಿನ ಕಾಲದ ರಾಜಕೀಯ ಮೌಲ್ಯಾಧಾರಿತ ರಾಜಕೀಯವಾಗಿತ್ತು.ಆದರೆ ಈಗ ಅದನ್ನು ಲೈಟ್ ಹಾಕಿ ಹುಡುಕಬೇಕಷ್ಟೆ.


ಸ್ಪರ್ಧೆ ಎಂದ ಕೂಡಲೇ ಅದು ಕೋಪ,ಕ್ರೋಧದಿಂದ ಕೂಡಿರಬೇಕೆಂದಿಲ್ಲ.ಅದು ಸ್ನೇಹಮಯವಾಗಿ ಕೂಡಾ ಇರಬಹುದು.ಉದಾಹರಣೆಗೆ ಎರಡು ದೇಶಗಳ ನಡುವೆ ನಡೆಯುವ ಕ್ರಿಕೆಟ್ ಪಂದ್ಯಾಟಗಳು,ಮೈದಾನದಲ್ಲಿ ಆಟಗಾರರಲ್ಲಿ ಪರಸ್ಪರ ವಾಗ್ವಾದಗಳು ನಡೆಯುತ್ತವೆ.ಆದರೆ ಮೈದಾನದಿಂದ ಹೊರ ಬಂದಾಗ ಅವರೆಲ್ಲರೂ ಸ್ನೇಹಿಗಳೇ ಆಗಿರುತ್ತಾರೆ.ಅಂದರೆ ಸ್ಪರ್ಧೆಗಳಲ್ಲಿ ಎರಡು ವಿಧಗಳಿವೆ, ಒಂದು ಉತ್ತಮ ಗುಣಮಟ್ಟದ ಸ್ಪರ್ಧೆ ಇನ್ನೊಂದು ಕೀಳು ಮಟ್ಟದ ಸ್ಪರ್ಧೆ.ಸ್ಪರ್ಧೆ ಮುಗಿದ ತಕ್ಷಣ ಆದ ಕಹಿ ಘಟನೆಗಳನ್ನು ಮರೆಯುವಂತದ್ದು,ಇನ್ನೊಂದು ಸ್ಪರ್ಧೆಯ ನಂತರವೂ ಸೋತವರು ದ್ವೇಷ ಇಟ್ಟುಕೊಂಡು ಹಗೆ ಸಾಧಿಸುವ ಮನಸ್ಸುಗಳ ನೀಚ ಬುದ್ದಿಯ ಸ್ಪರ್ಧೆ.


ನಾವು ಕಥೆಯಲ್ಲಿ ಓದಿರುತ್ತೇವೆ.ರಾಮ,ರಾವಣರ ನಡುವೆ ನಡೆದ ಯುದ್ಧ. ಅಲ್ಲಿ ಶ್ರೀರಾಮ ಎಂದೂ ದ್ವೇಷ, ಅಸೂಯೆ, ಹಗೆತನ ಇಟ್ಟುಕೊಂಡಿರಲಿಲ್ಲ.ಶ್ರೀಕೃಷ್ಣನು ಮಹಾಭಾರತ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾನ್ ಶಕ್ತಿ.ಇಲ್ಲಿ ಕೂಡಾ ಶ್ರೀಕೃಷ್ಣನು ಯಾರಲ್ಲೂ ದ್ವೇಷ, ಅಸೂಯೆ ಇಟ್ಟುಕೊಂಡಿರಲಿಲ್ಲ.ಪುರುಷೋತ್ತಮ ಪುರುಷ ಶ್ರೀರಾಮಚಂದ್ರ ಅಥವಾ ಪರಮಾತ್ಮ ಶ್ರೀಕೃಷ್ಣ ಇವರಿಬ್ಬರಲ್ಲಿ ಇದ್ದದ್ದು ಅನ್ಯಾಯವನ್ನು ಅರ್ಥಾತ್ ಅಧರ್ಮವನ್ನು ನಾಶ ಮಾಡಿ ಧರ್ಮವನ್ನು ಸ೦ರಕ್ಷಿಸುವುದು.ಅಂದರೆ ಆವತ್ತು ಕೂಡಾ ನಡೆದದ್ದು ಸ್ಪರ್ಧೆಗಳೇ,ಆದರೆ ಅವುಗಳ ಸಾರ ನ್ಯಾಯ ರಕ್ಷಣೆ.
ಆದರೆ ಈಗಿನ ಸ್ಪರ್ಧೆಗಳ ಚಿತ್ರಣವೇ ಬೇರೆಬೇರೆ. ತಾನು ಸಾಯುವವರೆಗೂ ದ್ವೇಷ ಸಾಧಿಸುವ ಸ್ಪರ್ಧೆಗಳನ್ನು ಹೆಚ್ಚಾಗಿ ಕಾಣುತ್ತೇವೆ.


ಚರಿತ್ರೆಯನ್ನು ಬಿಡಿಸಿ ನೋಡಿದಾಗ ,ಪರಸ್ಪರ ಎರಡು ರಾಜ್ಯಗಳ ನಡುವೆ ನಡೆದಾಗ ,ಆ ಯುದ್ದಗಳು ಹಗಲು ಹೊತ್ತಿನಲ್ಲಿ ಮಾತ್ರ ನಡೆಯುತ್ತಿದ್ದವು ಮಾತ್ರವಲ್ಲದೆ ಏನಿದ್ದರೂ ಪರಸ್ಪರ ಮುಖಾಮುಖಿ ಯುದ್ಧ. ಆ ಯುದ್ದದ ಉದ್ದೇಶ ಕೂಡ ಒಂದು ರಾಜ್ಯದ ನಾಶವೇ ಆಗಿದ್ದರೂ ಅದು ನ್ಯಾಯ ಸಮ್ಮತವಾಗಿತ್ತು.
ಅತಿಬುದ್ದಿವಂತರ ನವ ಯುಗದ ಯುದ್ದಗಳನ್ನು ನೋಡಿ, ಇಲ್ಲಿ ಯುದ್ದಗಳು ಏನಿದ್ದರೂ ರಾತ್ರಿ ಹೊತ್ತಲ್ಲಿ,ಅದೂ ಹಿಂದಿನಿಂದ,ಬೆನ್ನಿಗೆ ಚೂರಿ ಹಾಕಿ ಕೊಲ್ಲುವ ಯುದ್ದ.ಯುದ್ದಕ್ಕೆ ವಿರಾಮ ಎನ್ನುವುದೇ ಇಲ್ಲ.ಇದು ಕೆಟ್ಟ, ನೀಚ,ಕ್ರೂರ, ಅಸಹ್ಯ ಮತ್ತು ಹೇಡಿತನದ ಸ್ಪರ್ಧೆಗಳು.ಮನುಷತ್ವವಿಲ್ಲದ ಅಮಾನುಷ ರೀತಿಯ ಸ್ಪರ್ಧೆಗಳು.
ಎರಡು ದೇಶಗಳ ನಡುವೆ ಭೂಮಿಗಾಗಿ,ನೀರಿಗಾಗಿ, ಹೊನ್ನಿಗಾಗಿ ನಡೆಯುವ ಸ್ಪರ್ಧೆಗಳು, ಶಸ್ತ್ರಾಸ್ತ್ರಗಳನ್ನು ರಾಶಿ ಹಾಕುವ ಸ್ಪರ್ಧೆ, ಶ್ರೀಮಂತಿಕೆಗಾಗಿ ಸ್ಪರ್ಧೆ. ಅಂದರೆ ಇಂದು ಇಡೀ ವಿಶ್ವದಲ್ಲಿ ದೇಶ ದೇಶಗಳ ನಡುವೆ ಒಂದು ರೀತಿಯ ಕೆಟ್ಟ ಸ್ಪರ್ಧೆಗಳು ನಡೆಯುತ್ತಲೇ ಇವೆ.ಇದು ಇಡೀ ಮಾನವ ಕುಲಕ್ಕೆ ಒಳ್ಳೆಯ ಸೂಚನೆಯಂತು ಅಲ್ಲವೇ ಅಲ್ಲ.


ಈಗ ಹೊಸ ಸ್ಪರ್ಧೆಗಳು ಪ್ರಾರಂಭವಾಗಿವೆ.ಅದು ಅಧಿಕಾರಿಗಳ, ರಾಜಕೀಯ ವ್ಯಕ್ತಿಗಳ ಸ್ಪರ್ಧೆ.
ಅಧಿಕಾರಿಗಳ ನಡುವಿನ ಸ್ಪರ್ಧೆ ಯಾವುದು ಎಂದು ಕುತೂಹಲದಿಂದಿದ್ದೀರ,ಸಂಪತ್ತು ಗುಡ್ಡೆ ಹಾಕುವ ಸ್ಪರ್ಧೆ. ಅಂದ್ರೆ ಯಾವ ಅಧಿಕಾರಿಯ ಮನೆಯಲ್ಲಿ ಹೆಚ್ಚು ಬಂಗಾರ,ಬೆಳ್ಳಿ,ನಗದು ರೂಪದ ಹಣ,ಯಾರ ಬಳಿ ಹೆಚ್ಚು ಮನೆಗಳಿವೆ,ಸೈಟ್ ಗಳಿವೆ,ರೆಸಾರ್ಟ್ ಗಳಿವೆ,ಐಷಾರಾಮಿ ಕಾರುಗಳಿವೆ,ಆ ಅಧಿಕಾರಿ ಸ್ಪರ್ಧೆಯಲ್ಲಿ ಗೆದ್ದ ಹಾಗೆ.ಕಡಿಮೆ ರಾಶಿ ಹಾಕಿದವ ಸೋತ ಹಾಗೆ.ಇದು ಮಾತ್ರ ಬಡ ಜನರಿಗೆ ಬಹಳ ಅಪಾಯಕಾರಿ ಸ್ಪರ್ಧೆಗಳು.
ಅದೇ ರೀತಿಯಲ್ಲಿ ರಾಜಕಾರಣಿಗಳು ಹಿಂದೆ ಬಿದ್ದಿಲ್ಲ;ಅವರಲ್ಲಿ ಕೂಡ ಸ್ಪರ್ಧೆ ಇದ್ದೇ ಇದೆ.ಅಧಿಕಾರದಲ್ಲಿರುವಾಗ ಯಾರು ಹೆಚ್ಚು ಸಂಪಾದಿಸುತ್ತಾನೆಯೋ ಅವನು ಅವನ ಪಕ್ಷದ ರಾಜಕಾರಣಿಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಗೆದ್ದ ಹಾಗೆ‌.ಹೆಚ್ಚು ಸಂಪಾದಿಸಿದವನಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಗ್ಯಾರಂಟಿ. ಇದು ಒಂದು ರೀತಿಯ ಸ್ಪರ್ಧೆ.


ಮತ್ತೊಂದು ಸ್ಪರ್ಧೆ ವಿವಿಧ ಪಕ್ಷಗಳ ನಡುವೆ ನಡೆಯುವಂತದ್ದು.ಯಾವ ಎಮ್ ಎಲ್ ಎ ಅಥವಾ ಎಮ್ ಪಿ ಹೆಚ್ಚು ವಿರೋಧ ಪಕ್ಷದ ಸದಸ್ಯರನ್ನು ತನ್ನ ಪಕ್ಷಕ್ಕೆ ಎಳೆದು ತರುತ್ತಾನೋ ಅವನು ಈ ಸ್ಪರ್ಧೆಯಲ್ಲಿ ಗೆಲ್ಲುತ್ತಾನೆ.
ಸ್ಪರ್ಧೆಗಳು ನಿಜವಾಗಿಯೂ ಬೇಕು.ಜೀವನದಲ್ಲಿ ಒಂದು ತೃಪ್ತಿ, ಸಂತೋಷ, ಮನೋರಂಜನೆ ಸಿಗಬೇಕಾದರೆ ಪ್ರತಿಸ್ಪರ್ಧಿ ಇರ್ಬೇಕು.ಉದಾಹರಣೆಗೆ ವಿದ್ಯಾರ್ಥಿಗಳ ನಡುವೆ ಅಂಕಗಳನ್ನು ಗಳಿಸುವ ಸ್ಪರ್ಧೆ, ಓಟಗಳಲ್ಲಿ ಎದುರಾಳಿ ಇದ್ದಾಗ ಮಾತ್ರ ವೇಗವಾಗಿ ಓಡಲು ಹುರುಪು ಬರುವುದು.ಸ್ಪರ್ಧೆ ಇಲ್ಲದಿದ್ದಾಗ ನೀರಸವೆನಿಸುತ್ತದೆ.ಹಗ್ಗ ಜಗ್ಗಾಟ ನೋಡಿ ಅಲ್ಲಿ ಪರಸ್ಪರ ಸ್ಪರ್ಧೆ ಬಹಳ ಮುಖ್ಯ. ಅಲ್ಲಿ ಪೈಪೋಟಿ ಇಲ್ಲದೆ ಹೋದಲ್ಲಿ ನೋಡುಗರ ಬಾಯಿಯಿಂದ ಸಿಳ್ಳೆಗಳು ಬರುವುದೇ ಇಲ್ಲ.
ಈಗ ರೈತರಲ್ಲಿ ಕೂಡ ಸ್ಪರ್ಧೆ ಶುರುವಾಗಿದೆ.ತಾನು ಕಡಿಮೆ ಜಾಗದಲ್ಲಿ ಇನ್ನೊಬ್ಬನಿಗಿಂತ ಹೆಚ್ಚು ಇಳುವರಿ ಪಡೆಯಬೇಕೆಂಬ ಹಠ.ಇದು ನಮಗೆ,ಇಡೀ ದೇಶಕ್ಕೇ ಉತ್ತಮವಾದ ಸ್ಪರ್ಧೆ.


ಕೊನೆಯದಾಗಿ ಒಂದು ಮೊಬೈಲ್ ಗೆ ಸಂಬಂಧಿಸಿದ ಸ್ಪರ್ಧೆ. ನಮಗೆಲ್ಲ ಗೊತ್ತಿರುವ ಹಾಗೆ,ಈಗ ಏನಿದ್ದರೂ ಮೊಬೈಲ್ ಯುಗ.ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್. ಅದರಲ್ಲಿ ದೇಶ ವಿದೇಶಗಳ ಪಕ್ಕಾ ಮಾಹಿತಿಗಳು ಕೂಡಲೇ ಲಭ್ಯವಾಗುತ್ತವೆ.ಪ್ರತೀ ಮೊಬೈಲ್ ಗಳಲ್ಲೂ ವಾಟ್ಸಪ್ ಗ್ರೂಪ್ ಇದ್ದೇ ಇರುತ್ತವೆ.ಇಲ್ಲಿ ಯಾವ ರೀತಿಯ ಸ್ಪರ್ಧೆ ಎನ್ನುತ್ತೀರ,ಇಲ್ಲಿ ಹೊಸ ಮೆಸೆಜ್ ಗಳನ್ನು ಯಾರು ಮೊದಲು ಹೆಚ್ಚು ಗ್ರೂಪ್ ಗಳಿಗೆ ಫಾರ್ವರ್ಡ್‌ ಮಾಡುತ್ತಾರೋ ಎನ್ನುವ ಚಿಕ್ಕ ಸ್ಪರ್ಧೆ. ಸ್ಪರ್ಧೆ ಚಿಕ್ಕದಾದರು ಅದರಿಂದಾಗುವ ಆನಂದ ಅಪಾರ.ಇದು ಒಳ್ಳೆಯ ಸ್ಪರ್ಧೆಯೇ ಆದರೆ‌ ಮೆಸೆಜ್ ಗಳನ್ನು ಫಾರ್ವರ್ಡ್ ಮಾಡುವುದಕ್ಕಿಂತ ತಾನೇ‌ ಮೆಸೆಜ್ ಕ್ರೀಯೇಟ್ ಮಾಡಿ ಫಾರ್ವರ್ಡ್‌ ಮಾಡಿ ಗೆದ್ರೆ ಬಹಳ ಉತ್ತಮ.


ಅದಕ್ಕೆ ವಿಜ್ಞಾನಿಯೊಬ್ಬರು ನೂರಾರು ವರ್ಷಗಳ ಹಿಂದೆಯೇ ಹೇಳಿದ್ದು;”struggle for existence “. ಉಳಿವಿಗಾಗಿ ಹೋರಾಟ.
ಈಗಿನ ಕಾಲದಲ್ಲಿ ಸ್ಪರ್ಧೆ ಯಿಲ್ಲದ ವ್ಯವಸ್ಥೆಯಿಲ್ಲ.ನಿಜವಾದ ಸ್ಪರ್ಧೆಯಲ್ಲಿ ಗೆದ್ದಾಗ ಸಿಗುವ ಸಂತೋಷ, ತೃಪ್ತಿ ಬೆಲೆ ಕಟ್ಟಲಾಗದ್ದು.


ಏನೇ ಇರಲಿ ಸ್ಪರ್ಧೆ ಬೇಕು ಆದರೆ ಉತ್ತಮ ಮತ್ತು ಸಮಾಜಕ್ಕೆ ಮಾದರಿಯಾಗುವ,ದೇಶಕ್ಕೆ ಒಳಿತಾಗುವ ಸ್ಪರ್ಧೆ ಇರಲಿ.ಮನುಕುಲಕ್ಕೆ,ದೇಶಕ್ಕೆ,ದೇಹಕ್ಕೆ ಮಾರಕವಾಗುವ ಸ್ಪರ್ಧೆಗಳು ಬೇಡವೇ ಬೇಡ.
✍️ಬಿ ಕೆ ಸವಣೂರು.

IMG 20221207 WA0012
ಶ್ರೀ ಬಾಲಕೃಷ್ಣ ಸವಣೂರು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳು,ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಾಲಕೃಷ್ಣ ಸವಣೂರು ಇವರು ಮೂಲತಃ ದೈಹಿಕ ಶಿಕ್ಷಕರಾಗಿದ್ದು ತಮ್ಮ ಚಿಂತನಾ ಬರೆಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. . ಇನ್ನು ಮುಂದೆ ಬೆಳಕು ಶೀರ್ಷಿಕೆಯಲ್ಲಿ ಪ್ರತಿ ವಾರ ಇವರ ಚಿಂತನಾ ಬರೆಹ ಪ್ರಕಟ ಆಗಲಿದೆ.
ಸಂಪರ್ಕ :9945512383

WhatsApp Group Join Now
Telegram Group Join Now
Sharing Is Caring:

Leave a Comment