ಶಾಲೆ ನಮ್ಮವ್ವ ಇದ್ದಂಗೆ – ಶಿಕ್ಷಕನ ಡೈರಿಯಿಂದ 45

ಶಿಕ್ಷಕನ ಡೈರಿಯಿಂದ

ಶಾಲೆ ನಮ್ಮವ್ವ ಇದ್ದಂಗೆ..!

      ಸಿನೆಮಾವೊಂದನ್ನು ನೋಡುತ್ತಿದ್ದೆ. ಬಸ್ಸಿನ ಕ್ಲೀನರ್ ಆಗಿದ್ದ ಹೀರೋ ಸನ್ನಿವೇಶವೊಂದರಲ್ಲಿ "ಬಸ್ಸು ನಮ್ಮವ್ವ ಇದ್ದಂಗೆ.." ಎಂಬ ಡಯಲಾಗು ಬಿಟ್ಟಿದ್ದ. ಅದ್ಯಾಕೋ ಆ ಕ್ಷಣದಲ್ಲಿ ನನ್ನ ಮನಸ್ಸು "ಶಾಲೆ ನಮ್ಮವ್ವ ಇದ್ದಂಗೆ.." ಎಂಬ ಡಯಲಾಗೊಂದನ್ನು ಉಸುರಿತ್ತು. ಇದಾಗಿದ್ದು ನಾನು ಕೆಲಸಕ್ಕೆ ಸೇರಿದ ಆರಂಭದ ದಿನಗಳಲ್ಲಿ.

       ಮೊದಲ ಶಾಲೆಯನ್ನು ಬಿಟ್ಟು ಬಂದ ಕೆಲವು ದಿನಗಳಲ್ಲಿ ಹಿಂದಿನ ಶಾಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮಕ್ಕೆಂದು ಕರೆದಿದ್ದರು. ಅಲ್ಲಿ ಭೇಟಿಯಾದ ಹಳೆ ವಿದ್ಯಾರ್ಥಿನಿಯೊಬ್ಬಳು "ಹೊಸ ಶಾಲೆ ಈ ಶಾಲೆಗಿಂತ ಚೆನ್ನಾಗಿದೆಯಾ ಸರ್?" ಎಂಬ ಪ್ರಶ್ನೆಯಿಟ್ಟಿದ್ದಳು. "ನೀನು ಅಮ್ಮನ ಮನೆ ಬಿಟ್ಟು, ಕೆಲಸಕ್ಕೆಂದು ಬೇರೆ ಊರಿಗೋ, ಅಥವಾ ಮದುವೆಯಾಗಿ ಗಂಡನ ಮನೆಗೋ ಹೋದಾಗ ಆ ಮನೆಯಲ್ಲಿ ಎಷ್ಟೇ ಚೆನ್ನಾಗಿರುವ ವಾತಾವರಣವಿದ್ದರೂ, ಅಮ್ಮನ ಮನೆಯಷ್ಟು ಚೆನ್ನಾಗಿದೆ ಎನ್ನಿಸುವುದಿಲ್ಲ.." ಎಂದು ಉತ್ತರಿಸಿದ್ದೆ. ಆ ದಿನದ ಭಾಷಣವನ್ನೂ "ವೃತ್ತಿಯನ್ನು ಪ್ರೀತಿಸುವ ಶಿಕ್ಷಕನಿಗೆ ಮೊದಲ ಶಾಲೆಯೊಂದಿಗಿರುವುದು ಕರುಳಬಳ್ಳಿಯ ಸಂಬಂಧ..." ಎಂಬ ವಾಕ್ಯದಿಂದಲೇ ಆರಂಭಿಸಿದ್ದೆ. ಆ ದಿನವೂ ನನಗೆ ನೆನಪಾಗಿದ್ದು ಈ ವಾಕ್ಯವೇ... "ಶಾಲೆ ನಮ್ಮವ್ವ ಇದ್ದಂಗೆ...!"

       ಈ ವಾಕ್ಯ ಮತ್ತೆ ನೆನಪಾಗಿದ್ದು ಇತ್ತೀಚೆಗೆ ಗೆಳೆಯನೊಡನೆ ಮಾತಾಡುತ್ತಿದ್ದಾಗ. ಅವನೂ ಒಬ್ಬ ಶಿಕ್ಷಕ. ಹೀಗೇ ಮಾತಾಡುತ್ತಾ "ಹೊಸ ಜಿ.ಪಿ.ಟಿ. ಶಿಕ್ಷಕರು ಯಾವಾಗ ಶಾಲೆಗೆ ಬರಬಹುದು?" ಎಂದು ಕೇಳಿದ. ಅವನ ದನಿಯಲ್ಲಿ ಅದೇನೋ ತವಕ ಕಾಣಿಸಿತು. ಎಷ್ಟು ಬೇಗ ಹೊಸ ಶಿಕ್ಷಕರು ಬಂದಾರೋ ಎಂಬ ಆತುರವಿದ್ದಂತೆ ಕಾಣಿಸಿತು. ಆ ಸಮಯದಲ್ಲಿ ಹೊಸ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದ್ದರೂ ಅಂತಿಮ ಪ್ರಕ್ರಿಯೆ ತುಸು ನಿಧಾನವಾಗುತ್ತಿತ್ತು. 
 "ನೀನ್ಯಾಕೆ ಆತುರದಲ್ಲಿದ್ದಿ? ನಿಮ್ಮ ಶಾಲೆಗೆ ಶಿಕ್ಷಕರು ಬರಲಿಕ್ಕಿದ್ದಾರಾ?" ಕೇಳಿದೆ. 
  "ಹಾಗಲ್ಲ... ನಮ್ಮ ಹಿಂದಿನ ಶಾಲೆಗೆ... ಅಲ್ಲಿನ ಪೇರೆಂಟ್ಸ್ ಕಾಲ್ ಮಾಡುವಾಗ ಬೇಜಾರಾಗ್ತದೆ. ಎಷ್ಟು ಬೇಗ ಆ ಶಾಲೆಗೊಬ್ಬರು ಟೀಚರ್ ಬರ್ತಾರೆ ಅನ್ನಿಸ್ತದೆ" ಎಂದವನ ಧ್ವನಿ ತುಸು ಭಾರವಾಗಿದೆಯೇನೋ ಅನ್ನಿಸಿತು.
‌
     ಅವನು ತನ್ನ ಹಿಂದಿನ ಶಾಲೆಯಿಂದ ವರ್ಗಾವಣೆಗೊಂಡು ಒಂದು ವರ್ಷವಾಗಿತ್ತು. ಅದೊಂದು ಗ್ರಾಮೀಣ ಪ್ರದೇಶದ ಸಣ್ಣ ಶಾಲೆ. ಇವನೂ ಸೇರಿದಂತೆ ಮೂವರು ಶಿಕ್ಷಕರಿದ್ದರು. ಮೂವರೂ ಶಾಲೆಯಿಂದ ತುಂಬಾ ದೂರದ ಊರಿನವರೇನಾಗಿರಲಿಲ್ಲವಾದರೂ ಆ ಶಾಲೆಯಲ್ಲಿ ತುಂಬಾ ವರ್ಷಗಳಾದುದರಿಂದ ಮೂವರೂ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಮೂವರಿಗೂ ವರ್ಗಾವಣೆಯ ಭಾಗ್ಯ ಲಭಿಸಿತ್ತು. ಶಾಲೆ ಖಾಲಿಯಾಗಿತ್ತು. 

       " ಎಲ್ಲರೂ ಶಾಲೆ ಬಿಡುವಾಗ, ನಾನೊಬ್ಬನೇ ಉಳಿದು ಕೆಲಸ ಮಾಡುವುದು ಕಷ್ಟ ಎನಿಸಿತು. ಅದೂ ಅಲ್ಲದೇ  ಹೊರಗಿನ ರಾಜಕೀಯ ಶಾಲೆಯಲ್ಲಿ ಸ್ವಲ್ಪ ಕಿರಿಕಿರಿ ಉಂಟುಮಾಡಿದ್ದರಿಂದ ಶಾಲೆ ಬಿಡುವುದೇ ಸೂಕ್ತ ಎಂದು ಎಲ್ಲರಿಗೂ ಆ ಸಮಯದಲ್ಲಿ ಅನ್ನಿಸಿತ್ತು. ಅಂತಹ ಕಿರಿಕಿರಿಗಳು ಎಲ್ಲಾ ಶಾಲೆಗಳಲ್ಲೂ ಇರುವಂಥದ್ದೇ ಎಂದು ಈಗನಿಸುತ್ತಿದೆ." ಅವನ ದನಿಯಲ್ಲಿ ಪಶ್ಚಾತ್ತಾಪವಿತ್ತು. 

   "ಶಾಲೆ ಬಿಡುವಾಗ ತುಂಬಾ ಫೀಲ್ ಆಯಿತು. ಶಾಲೆಯನ್ನು ಅನಾಥಗೊಳಿಸಬಾರದಿತ್ತು ಎಂದೆನಿಸಿದರೂ ಆಗ ಕಾಲಮಿಂಚಿಯಾಗಿತ್ತು. ಈಗಲೂ ಆ ಊರ ಜನಗಳ ಅಭಿಮಾನದ ಫೋನ್ ಕರೆಗಳು ಆಗಾಗ ಬರುತ್ತಿರುತ್ತವೆ. ಅತಿಥಿ ಶಿಕ್ಷಕರಷ್ಟೇ ಇರುವ ನಮ್ಮ ಶಾಲೆಗೆ ಹೊಸ ಸರಕಾರಿ ಶಿಕ್ಷಕರು ಯಾವಾಗ ಬರುತ್ತಾರೆ ಎಂದು ಆಸೆಯಿಂದ ಪ್ರಶ್ನಿಸುತ್ತಾರೆ. ನನ್ನ ಮನಸ್ಸು ಭಾರವಾಗುತ್ತದೆ." ಅವನು ಹೀಗೆನ್ನುವಾಗ ನನ್ನ ಮನಸ್ಸೂ ಭಾರವಾಗಿತ್ತು.

  "ಆದಷ್ಟು ಬೇಗ ಹೊಸ ಶಿಕ್ಷಕರು ಬಂದರೆ ನನ್ನ ಮನಸ್ಸೊಂಚೂರು ಹಗುರವಾಗುತ್ತಿತ್ತು." ನಕ್ಕವನ ನಗೆಯಲ್ಲಿ ವಿಷಾದವೇ ಕಾಣಿಸಿತು. 

     ತಾಯಿಯೊಬ್ಬಳಿಗೆ ಬಹಳ ಜನ ಮಕ್ಕಳಿದ್ದಾಗ ಒಂದಿಬ್ಬರು ಮಕ್ಕಳು ದೂರದೂರಿಗೆ ವಲಸೆ ಹೋದರೆ ದೊಡ್ಡ ಕಷ್ಟವೆನಿಸುವುದಿಲ್ಲ. ಒಬ್ಬರೋ ಇಬ್ಬರೋ ಮಕ್ಕಳಿದ್ದು ಅವರು ದೂರದೂರಲ್ಲಿ ನೆಲೆಸಿದರೆ ತಾಯಿಗೊಂದಿಷ್ಟು ಅನಾಥಭಾವ. ತಾಯಿಗೆ ಅಂತಹ ಅನಾಥಭಾವ ಮೂಡಿಸಿ ಮರುಗುವ ಮಗನ ಹಾಗೆ ನನಗೆ ನನ್ನ ಗೆಳೆಯ ಕಾಣಿಸಿದ. ಮತ್ತದೇ ವಾಕ್ಯ ನೆನಪಾಯಿತು - "ಶಾಲೆ ನಮ್ಮವ್ವ ಇದ್ದಂಗೆ....!"

          - ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment