ಮಾರ್ಚ್ ತಿಂಗಳಲ್ಲಿ ನಿವೃತ್ತರಾಗುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ

ಅಜ್ಞಾನವೆಂಬ ಕಾಮಾಲೆಯನ್ನು ಜ್ಞಾನದ ಮಾಂತ್ರಿಕ ಸ್ಪರ್ಶದಿಂದ ಗುಣಪಡಿಸಿ ಶಿಷ್ಯನ ಕೀರ್ತಿಯನ್ನು ಜಗದಗಲ ಪಸರಿಸುವಂತೆ ಮಾಡುವ ತಾಕತ್ತು ಎನ್ನುವುದು ಇರುವುದಾದರೆ ಅದು ಒಬ್ಬ ಸಮರ್ಥ ಗುರುವಿಗೆ ಮಾತ್ರ. ಶಿಷ್ಯನ ಏಳಿಗೆಯಲ್ಲಿ ತನ್ನ ಸಂತೋಷವನ್ನು ಅನುಭವಿಸುವ ಮಹಾನ್ ಚೇತನ ಗುರು. ಅಂತಹ ಗುರುವಿಗೆ ಶಿರಬಾಗಿ ನಮಸ್ಕರಿಸುತ್ತಾ ಈ ತಿಂಗಳ ಗುರುಭ್ಯೋನಮಃ ಕಾರ್ಯಕ್ರಮದಲ್ಲಿ ವಿವಿಧ ತಾಲ್ಲೂಕುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡುವ ಹೆಬ್ಬಯಕೆ ನಮ್ಮದು…..

ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ

IMG 20210331 WA0093 min
ಗುರುಭ್ಯೋ ನಮಃ

ಶ್ರೀಮತಿ ಸಿಂತಿಯಾ ಹೆಲಸ್ ಫರ್ನಾಂಡಿಸ್

ಶ್ರೀಮತಿ ಸಿಂತಿಯಾ ಹೆಲಸ್ ಫರ್ನಾಂಡಿಸ್ ಇವರು 25.10.1982 ರಲ್ಲಿ ಸ.ಹಿ.ಪ್ರಾ. ಶಾಲೆ ಕಲ್ಲಾಡಿ ಇಲ್ಲಿ ಸೇವೆಗೆ ಸೇರಿ ನಂತರ ಮಂಗಳೂರು ತಾಲೂಕಿನ ಸ.ಹಿ.ಪ್ರಾ.ಶಾಲೆ ಕಾವೂರು ಮತ್ತು ಅದ್ಯಪಾಡಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ 31.3.2021ರಂದು ನಿವೃತ್ತಿ ಹೊಂದುತ್ತಿದ್ದಾರೆ. ತಮ್ಮ ಅನುಭವದ ಮೂಲಕ ಅನೇಕ ಮಕ್ಕಳಿಗೆ ಸ್ಪೂರ್ತಿಯ ಚಿಲುಮೆ ಯಾದ ಇವರು ಅನೇಕ ಶಿಕ್ಷಕರಿಗೂ ಮಾರ್ಗದರ್ಶಕರು. ಇವರ ನಿವೃತ್ತ ಜೀವನ ಸುಖಕರವಾಗಿರಲಿ.

ಶ್ರೀಮತಿ ವಿಜಯ ಪ್ರಭು

22.3.1961 ರಂದು ಜನಿಸಿದ ವಿಜಯ ಪ್ರಭು ಇವರು 07.01.1994ರಲ್ಲಿ ಶಿಕ್ಷಕಿಯಾಗಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಹೆಣ್ಣೂರುಪದವಿನಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು. ಮುಂದೆ ಸ.ಕಿ.ಪ್ರಾ.ಶಾಲೆ. ಶಾಂತಿನಗರದಲ್ಲಿ ಸೇವೆ ಸಲ್ಲಿಸಿ ಈಗ ಸ.ಹಿ.ಪ್ರಾ.ಶಾಲೆ ಕಿನ್ನಿಬೆಟ್ಟು ಇಲ್ಲಿ ಈ ತಿಂಗಳು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ತಮ್ಮ ಸೇವಾವಧಿಯಲ್ಲಿ ಮಕ್ಕಳ ಪ್ರಗತಿಗಾಗಿ ಸೇವೆ ಸಲ್ಲಿಸಿದ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ವಿಜಯಲಕ್ಷ್ಮಿ ಬಿ.ಕೆ

ಶ್ರೀಮತಿ ವಿಜಯಲಕ್ಷ್ಮಿ ಅವರು 02.03.1961 ರಲ್ಲಿ ಜನಿಸಿ 20.12.1985 ರಲ್ಲಿ ಶಿಕ್ಷಕಿಯಾಗಿ ಸೇವೆ ಸೇರಿದವರು. ಆರಂಭದಲ್ಲಿ ಸ.ಮಾ.ಶಾಲೆ. ಯಸಳೂರು, ಸಕಲೇಶಪುರದಲ್ಲಿ ವೃತ್ತಿ ಜೀವನ ಆರಂಭಿಸಿ ನಂತರ ವರ್ಗಾವಣೆಗೊಂಡು ಸ.ಹಿ.ಪ್ರಾ. ಶಾಲೆ ಬಡೆಕೊಟ್ಟು ಬಂಟ್ವಾಳಕ್ಕೆ ಬಂದವರು. ಪ್ರಸ್ತುತ ಸ.ಕಿ.ಪ್ರಾ.ಶಾಲೆ ನೇರಳಕಟ್ಟೆ, ಬಂಟ್ವಾಳದಲ್ಲಿ ತಮ್ಮ 35 ವರ್ಷಗಳ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದೇವೆ.

ಶ್ರೀಮತಿ ಸರೋಜಿನಿ

ಶ್ರೀಮತಿ ಸರೋಜಿನಿಯವರು 09.01.1996 ರಂದು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಗೆ ತೊಡಗಿಸಿಕೊಂಡವರು. ಗುರುವಾಯನಕೆರೆ ಶಾಲೆಯಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿ, ನಂತರ ಬೆಳ್ತಂಗಡಿ ತಾಲೂಕಿನ ಸ.ಉ.ಪ್ರಾ.ಶಾಲೆ ಬಜಿರೆಗೆ ವರ್ಗಾವಣೆಗೊಂಡು ಅಲ್ಲಿಯೇ ತಮ್ಮ 25 ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿ ನಿವೃತ್ತಿಯನ್ನು ಹೊಂದುತ್ತಿದ್ದಾರೆ. ಸದಾ ಎಲೆಮರೆ ಕಾಯಿಯಂತೆ ಮಕ್ಕಳ ಬೆಳವಣಿಗೆಗಾಗಿ ದುಡಿದ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಸರೋಜಿನಿ

ಶ್ರೀಮತಿ ಸೀತು- ಶ್ರೀ ರಾಮಣ್ಣ ಪೂಜಾರಿ ದಂಪತಿಗಳ ನಾಲ್ವರು ಮಕ್ಕಳಲ್ಲಿ ಎರಡನೆಯವರಾಗಿ ದಿನಾಂಕ 11-03-1961 ರಲ್ಲಿ ಉಜಿರೆಯಲ್ಲಿ ಜನಿಸಿದ ಶ್ರೀಮತಿ ಸರೋಜಿನಿಯವರು ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಎಸ್.ಡಿ.ಎಂ ವಿದ್ಯಾಸಂಸ್ಥೆಗಳಲ್ಲಿ ಪೂರೈಸಿದರು.1984-86 ರಲ್ಲಿ ಕೊಕ್ಕರ್ಣೆಯ ಕುಮುದಾ ಉಮಾ ಶಂಕರ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ವೃತ್ತಿ ಶಿಕ್ಷಣವನ್ನು ಪೂರೈಸಿದರು. ತದನಂತರ ಗೌರವ ಶಿಕ್ಷಕಿಯಾಗಿ ದೊಂಪದಪಲ್ಕೆ ಹಾಗೂ ದೇವರಗುಡ್ಡೆ ಶಾಲೆಗಳಲ್ಲಿ ಸೇವೆ ಸಲ್ಲಿಸಿ, 1991 ರ ಜೂನ್ 27ರಂದು ಸ.ಹಿ.ಪ್ರಾ.ಶಾಲೆ ತೋಟತ್ತಾಡಿಯಲ್ಲಿ ಸಹಶಿಕ್ಷಕಿಯಾಗಿ ಖಾಯಂ ಸೇವೆಗೆ ಸೇರಿ ಅಲ್ಲಿ 5 ವರ್ಷಗಳ ಸೇವೆ ಸಲ್ಲಿಸಿ, 1995ರಲ್ಲಿ ಸ.ಉ.ಪ್ರಾ. ಶಾಲೆ ಪಿಲ್ಯ ಇಲ್ಲಿಗೆ ವರ್ಗಾವಣೆಗೊಂಡು ಸಾರ್ಥಕ 20 ವರ್ಷಗಳ ಕಾಲ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ,2016ರ ಫೆಬ್ರವರಿಯಲ್ಲಿ ಮುಖ್ಯಶಿಕ್ಷಕಿಯಾಗಿ ಭಡ್ತಿಗೊಂಡು ಸ.ಉ.ಪ್ರಾ.ಶಾಲೆ ಬಡಗಕಾರಂದೂರು ಇಲ್ಲಿ ಸೇವೆಗೆ ಸೇರ್ಪಡೆಗೊಂಡರು. 5 ವರ್ಷಗಳ ಕಾಲ ಮುಖ್ಯಶಿಕ್ಷಕಿಯಾಗಿ,
ಶಾಲೆಗಾಗಿ ಅಹರ್ನಿಶಿ ದುಡಿದು ಪೀಠೋಪಕರಣ, ಸುಸಜ್ಜಿತ ಶೌಚಾಲಯ, ಆವರಣ ಗೋಡೆ, ಸ್ಮಾರ್ಟ್ ಕ್ಲಾಸ್, ಇವೇ ಮೊದಲಾದ ಭೌತಿಕ ಸೌಲಭ್ಯಗಳನ್ನು ವಿವಿಧ ಅನುದಾನಗಳ ಮೂಲಕ ದೊರಕಿಸಿಕೊಳ್ಳುವಲ್ಲಿ ಶ್ರಮಿಸಿದ್ದಾರೆ. ಆಂಗ್ಲ ಮಾಧ್ಯಮ ತರಗತಿಗಳ ಜೊತೆಗೆ ಯು.ಕೆ.ಜಿ ತರಗತಿಯನ್ನು ಆರಂಭಿಸಿ ಶಾಲಾ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ್ದಾರೆ. ಸೇವಾನಿರತ ತರಬೇತಿ ಗೈಡ್ಸ್ ನಲ್ಲಿ ಬೇಸಿಕ್ ಹಾಗೂ ಅಡ್ವಾನ್ಸ್ ಪೂರೈಸಿ ಮಕ್ಕಳಲ್ಲಿ ರಾಷ್ಟ್ರೀಯ ಮನೋಭಾವ, ಮೌಲ್ಯ, ನಾಯಕತ್ವ ಗುಣ ಬೆಳೆಯಲು ಕಾರಣೀಭೂತರಾಗಿದ್ದಾರೆ. ಕುತ್ಲೂರಿನ ಶ್ರೀಯುತ ರುಕ್ಮಯ ಪೂಜಾರಿಯವರನ್ನು ವಿವಾಹವಾಗಿ, ಓರ್ವ ಮಗಳನ್ನು ಪಡೆದು ಸುಖೀ ಕೌಟುಂಬಿಕ ಜೀವನವನ್ನು ನಡೆಸುತ್ತಿದ್ದಾರೆ.
ಮಾರ್ಚ್ 31 ರಂದು ಸಾರ್ಥಕ 30 ವರ್ಷಗಳ ಸೇವೆಯನ್ನು ಸಲ್ಲಿಸಿ, ನಿವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಇವರ ನಿವೃತ್ತಿ ಜೀವನವು ಆರೋಗ್ಯ ನೆಮ್ಮದಿಯಿಂದ ಕೂಡಿರಲೆಂದು ಹಾರೈಸುತ್ತಿದ್ದೇವೆ.

ಶ್ರೀಮತಿ ರಾಜೇಶ್ವರಿ

ಶ್ರೀ ಸುಂದರರಾವ್, ಶ್ರೀಮತಿ ವೇದಾವತಿ ಇವರ ಪುತ್ರಿಯಾಗಿ ಜನಿಸಿದ ರಾಜೇಶ್ವರಿಯವರು ಹೆಜಮಾಡಿಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿ ಕೊಕ್ಕರ್ಣೆ ಯಲ್ಲಿ ಶಿಕ್ಷಕ ತರಬೇತಿಯನ್ನು ಪಡೆದು 08.04.1996 ರಲ್ಲಿ ಸ.ಹಿ.ಪ್ರಾ.ಶಾಲೆ ಅದ್ಯಪಾಡಿ ಯಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು. ಹದಿನೈದು ವರ್ಷಗಳ ಕಾಲ ಅಲ್ಲಿ ಸೇವೆಯನ್ನು ಸಲ್ಲಿಸಿ ಸ.ಹಿ.ಪ್ರಾ ಶಾಲೆ ಹಳೇಪೇಟೆ ಉಜಿರೆ ಬೆಳ್ತಂಗಡಿ ಇಲ್ಲಿಗೆ ವರ್ಗಾವಣೆಗೊಂಡು ಇದೀಗ ನಿವೃತ್ತಿಗೊಳ್ಳುತ್ತಿದ್ದಾರೆ. ಪತಿ ಪ್ರಭಾಕರ ರಾವ್, ಪುತ್ರಿ ಭವ್ಯ, ಅಳಿಯ ವಿನಯ್ ಮತ್ತು ಮೊಮ್ಮಗಳ ಜೊತೆ ನೆಮ್ಮದಿಯ ಸಂಸಾರ ನಡೆಸುತ್ತಿರುವ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಸಾವಿತ್ರಿ ಎಂ

ಸುಮಾರು 25 ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿ ವೃತ್ತಿಯಿಂದ ಸ್ವಯಂ ನಿವೃತ್ತಿ ಹೊಂದಲಿರುವ ಶ್ರೀಮತಿ ಸಾವಿತ್ರಿ ಎಂ. ಇವರು ಫೆಬ್ರವರಿ 28 ,1964 ರಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆಯ ಮುಂಗಿನ ಮನೆತನದಲ್ಲಿ ಶ್ರೀಕೃಷ್ಣ ಭಟ್ ಮತ್ತು ಪರಮೇಶ್ವರಿ ಇವರ ಮಗಳಾಗಿ ಜನಿಸಿದರು. ಇವರಿಗೆ ಐದು ಜನ ಸಹೋದರಿಯರು ಮತ್ತು ನಾಲ್ಕು ಜನ ಸಹೋದರರು. ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕುಂಬಳೆಯಲ್ಲಿ, ಪಿ.ಡಿ.ಸಿ. ಶಿಕ್ಷಣವನ್ನು ಸರಕಾರಿ ಕಾಲೇಜು ಕಾಸರಗೋಡಿನಲ್ಲಿ ಹಾಗೂ ಫಾತಿಮಾ ಟಿಟಿಐ ಬೆಂಗಳೂರು ಇಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದರು.
1996 ಜನವರಿ ತಿಂಗಳಲ್ಲಿ ಸ.ಹಿ.ಪ್ರಾ. ಶಾಲೆ ಕರ್ವೇಲು ಇಲ್ಲಿ ಸೇವೆಗೆ ಸೇರಿದರು. ಸುಮಾರು ಏಳು ವರ್ಷಗಳ ಕಾಲ ಶಿಕ್ಷಕರಾಗಿ, ಪ್ರಭಾರ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸಿದರು. 2003ರಲ್ಲಿ ಪೆರಾಜೆ ಶಾಲೆಗೆ ವರ್ಗಾವಣೆಗೊಂಡರು.18 ವರ್ಷಗಳ ಕಾಲ ಕರ್ತವ್ಯವೇ ಉಸಿರೆಂದು ಪ್ರಾಮಾಣಿಕವಾಗಿ ಮಕ್ಕಳ ಹಿತಕ್ಕಾಗಿ, ಏಳಿಗೆಗಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಇವರಿಗೆ ಅಭಿನಂದನೆಗಳು. ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.

ಶ್ರೀ ಗಣಪತಿ ಭಟ್

ಶ್ರೀಯುತರು ದಿನಾಂಕ 17.01. 1996 ರಲ್ಲಿ ಸೇವೆಗೆ ಸೇರಿದರು. ಪುತ್ತೂರಿನ ಸ.ಕಿ.ಪ್ರಾ. ಶಾಲೆ ಪಾಲೆತ್ತಡ್ಕದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿದ ಇವರು ಮುಂದೆ ವರ್ಗಾವಣೆಗೊಂಡು ಸ.ಕಿ.ಪ್ರಾ.ಶಾಲೆ.ಹಾಸನಡ್ಕದಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗುತ್ತಿದ್ದಾರೆ. ಉತ್ತಮ ವಾಗ್ಮಿ, ಉತ್ತಮ ನಾಯಕರಾಗಿರುವ ಇವರು ಅರ್ಹವಾಗಿಯೇ ಶಿಕ್ಷಕರ ಸಂಘದಲ್ಲಿ ಸುದೀರ್ಘ 15 ವರ್ಷಗಳ ಸೇವೆ ಸಲ್ಲಿಸಿ ಶಿಕ್ಷಕರ ಜೊತೆಗೆ ಉತ್ತಮ ಒಡನಾಟ ಬೆಳೆಸಿಕೊಂಡವರು. ತಮ್ಮ ಶಾಲೆಯ ಬಗ್ಗೆಯೂ ಅಭಿಮಾನ ಹೊಂದಿರುವ ಇವರು ಶಾಲೆಯ ಏಳಿಗೆಗಾಗಿ ಶ್ರಮಿಸಿದವರು. ಇವರ ನಿವೃತ್ತಿಯ ಸಂದರ್ಭದಲ್ಲಿ ಇವರಿಗೆ ವಿಶೇಷ ಅಭಿನಂದನೆಗಳು. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.

Sharing Is Caring:

Leave a Comment