ಗುರುಭ್ಯೋ ನಮಃ
ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ
ನಿರಂತರ ವಿದ್ಯಾರ್ಥಿಗಳ ಬಾಳಲ್ಲಿ ಅಕ್ಷರ ದೀಪವ ಉರಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.

ಶ್ರೀಮತಿ ದೇವಕಿ ಎಂ
ಸ.ಉ.ಪ್ರಾ ಶಾಲೆ ಉಪ್ಪಿನಂಗಡಿ ಪುತ್ತೂರು ತಾಲೂಕು
ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಮಿನಿಪದವು ಎಂಬಲ್ಲಿ 27/03/1962 ರಲ್ಲಿ ಜನನ. 25/03/1989 ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿ ಶಿಕ್ಷಣ ಪಡೆದು ಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಏಕೋಪಾಧ್ಯಾಯ ಶಿಕ್ಷಕಿಯಾಗಿ ಇಲಾಖೆಯ ಕರ್ತವ್ಯಕ್ಕೆ ಸೇರ್ಪಡೆ. ಸ. ಕಿ. ಪ್ರಾ ಶಾಲೆ ಸಾಜ ಪುತ್ತೂರು , ಸ ಮಾ. ಹಿ .ಪ್ರಾ .ಶಾಲೆ ಕುಂಬ್ರ ಈ ಶಾಲೆಗಳಲ್ಲಿ ಕರ್ತವ್ಯ ನಿರ್ವಹಣೆ 16/11/2002 ರಂದು ಮುಖ್ಯ ಗುರುವಾಗಿ ಬಡ್ತಿ ಹೊಂದಿ ಸರಕಾರಿ ಹಿ ಪ್ರಾ ಶಾಲೆ ವೀರಮಂಗಲಕ್ಕೆ ಸೇರ್ಪಡೆ .30/06/2005 ರಿಂದ 6 ವರ್ಷಗಳ ಕಾಲ ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಯಾಗಿ ಕರ್ತವ್ಯ ನಿರ್ವಹಣೆ .30/04/2011 ರಿಂದ ಸ ಹಿ ಪ್ರಾ ಶಾಲೆ ಇರ್ದೆ ಉಪ್ಪಳಿಗೆ ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ 28/11/2013ರಂದು ಸರಕಾರಿ ಮಾ ಉ ಹಿ ಪ್ರಾ ಶಾಲೆ ಉಪ್ಪಿನಂಗಡಿ ಇಲ್ಲಿಗೆ ಪದವಿಧರೇತರ ಮುಖ್ಯಗುರುವಾಗಿ ಪದೋನ್ನತಿ ಹೊಂದಿ ಹತ್ತು ಹಲವು ಕಾರ್ಯಕ್ರಮಗಳ ನಿರ್ವಹಣೆ. 2017ರಲ್ಲಿ ಉಪ್ಪಿನಂಗಡಿ ಶಾಲೆಯಲ್ಲಿ ನಡೆದ ವಿಭಾಗೀಯ ಮಟ್ಟದ ಯೋಗ ಸಂಗಮ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಡೆಸಿಕೊಟ್ಟ ಹೆಗ್ಗಳಿಕೆ. ಸೇವಾವಧಿಯಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ ನಿಮ್ಮ ನಿವೃತ್ತಿ ಜೀವನವು ಸುಖ ನೆಮ್ಮದಿ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಕೆಗಳು.

ಶ್ರೀಮತಿ ಕಮಲಾ ಕೆ ಎಸ್
ಸ.ಹಿ.ಪ್ರಾ ಶಾಲೆ ಕೋಡಿಂಬಾಡಿ ಪುತ್ತೂರು ತಾಲೂಕು
ನಿವೃತ್ತ ಶಿಕ್ಷಕರಾದ ಶ್ರೀಮತಿ ಕಮಲಾ ಕೆ ಎಸ್ ಇವರು 15-03-1962 ರಂದು ಜನಿಸಿ ಮಂಗಳೂರು ಬಲ್ಮಠದಲ್ಲಿ ಶಿಕ್ಷಕ ತರಬೇತಿಯನ್ನು ಪಡೆದು ದಿನಾಂಕ 5-7-1986 ರಂದು ಬೆಳ್ತಂಗಡಿ ತಾಲ್ಲೂಕಿನ ನಡ ಶಾಲೆಯಲ್ಲಿ ಶಿಕ್ಷಕ ವೃತ್ತಿಯ ಆರಂಭಿಸಿದರು. ಪುತ್ತೂರು ತಾಲೂಕಿನ ಆಲಂಕಾರು ಶಾಲೆ, ಬಜತ್ತೂರು ಶಾಲೆ ಹಾಗೂ ಅಯೋಧ್ಯಾನಗರ ಶಾಲೆಗಳಲ್ಲಿ ಸಹ ಶಿಕ್ಷಕಿಯಾಗಿದ್ದು , 2011ರಲ್ಲಿ ಮುಖ್ಯಗುರುಗಳಾಗಿ ಪದೋನ್ನತಿ ಹೊಂದಿ ಕೊಯಿಲ ಶಾಲೆ ಅಯೋಧ್ಯಾನಗರ ಶಾಲೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಾ 26-09-2016 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಿ೦ಬಾಡಿಯಲ್ಲಿ ಸೇವೆಯನ್ನು ಸಲ್ಲಿಸಿ ಹೀಗೆ 36 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿ ಈಗ ಸೇವಾ ನಿವೃತ್ತಿ ಹೊಂದುತ್ತಿರುವಿರಿ. ನಿಮ್ಮ ನಿವೃತ್ತಿ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುತ್ತೇವೆ.

ಶ್ರೀ ಬಾಲಚಂದ್ರ.ಜಿ
ದೈಹಿಕ ಶಿಕ್ಷಕರು.
ಕೊಯಿಲ, ಕೆ.ಸಿ ಫಾರ್ಮ್. ಕಡಬ ತಾಲೂಕು
ಇವರು ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಗುಂಡ್ಯ ಮನೆತನದ ಭಾರತೀಯ ಸೇನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಭಾರತಾಂಬೆಯ ಹೆಮ್ಮೆಯ ಪುತ್ರ. ಶ್ರೀಯುತ ಈಶ್ವರ ಗೌಡ ಹಾಗೂ ಶ್ರೀಮತಿ ಕಮಲ ದಂಪತಿಗಳ ಹಿರಿಯ ಪುತ್ರನಾಗಿ ದಿನಾಂಕ 28.03.1962 ರಂದು ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ.ಪೈಲಾರು ಸುಳ್ಯ, ಹಾಗೂ ಸ.ಹಿ.ಪ್ರಾ.ಶಾಲೆ.ಹಿರೇಬಂಡಾಡಿ, ಪುತ್ತೂರು ಇಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಡ ಸುಳ್ಯ ಇಲ್ಲಿ ಪೂರೈಸಿ, ನಂತರ ಪದವಿ ಪೂರ್ವ ಶಿಕ್ಷಣವನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು ಇಲ್ಲಿ ಪಡೆದು, ಎಂ ಕೆ.ಅನಂತರಾಜ್ ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ಕೇಂದ್ರ ಮೂಡಬಿದ್ರೆ ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ತರಬೇತಿಯನ್ನು ಮುಗಿಸಿ,ದಿನಾಂಕ 30.09.1994ರಲ್ಲಿ ಸರಕಾರಿ ನೇಮಕಾತಿ ಹೊಂದಿ ದ.ಕ.ಜಿ.ಪಂ.ಹಿ. ಪ್ರಾ. ಶಾಲೆ,ಕಬಕ ಪುತ್ತೂರು ಇಲ್ಲಿ ಸೇವೆಯನ್ನು ಆರಂಭಿಸಿ,ಕಬಕ ಶಾಲೆಯಲ್ಲಿ 15ವರ್ಷ 10 ತಿಂಗಳುಗಳ ಕಾಲ ಕರ್ತವ್ಯ ನಿರ್ವಹಿಸಿ,ನಂತರ ವರ್ಗಾವಣೆ ಹೊಂದಿ ಸ.ಉ.ಪ್ರಾ.ಶಾಲೆ.ಕೊಯಿಲ ಇಲ್ಲಿ 11ವರ್ಷ 8 ತಿಂಗಳುಗಳ ಅವಧಿಯ ಸೇವೆ ಸಲ್ಲಿಸಿ, ತಮ್ಮ ಅವಧಿಯಲ್ಲಿ ವಿಧ್ಯಾರ್ಥಿಗಳಿಗೆ ಹೆಚ್ಚಿನ ಕ್ರೀಡಾ ಸ್ಪೂರ್ತಿಯನ್ನು ನೀಡಿ ವಿಧ್ಯಾರ್ಥಿಗಳು ವಲಯ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ವಾಲಿಬಾಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಬಹುಮಾನವನ್ನು ತಮ್ಮದಾಗಿಸಿಕೊಳ್ಳುವಲ್ಲಿ ತಮ್ಮ ಪರಿಶ್ರಮ ಗಣನೀಯವಾದುದು. ಈ ತಿಂಗಳು ನಿವೃತ್ತಿ ಹೊಂದುತ್ತಿರುವ ನಿಮಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಶಾಂತ ಕುಮಾರಿ ಎನ್
ಸ. ಕಿ.ಪ್ರಾ.ಶಾಲೆ.ಚೆನ್ನಾವರ
ಕಡಬ ತಾಲೂಕು
ಇವರು ದಿನಾಂಕ 28.11.2003ರಂದು ಸೇವೆಗೆ ಸೇರಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ ನಂತರ 2008 ರಿಂದ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸಿದರು. ಇವರ ಕರ್ತವ್ಯದ ಅವಧಿಯಲ್ಲಿ ತಕ್ಷಶಿಲಾ ಕುಟೀರ, ಶಾಲಾ ರಜತ ಸಂಭ್ರಮ, ಅನ್ನಪೂರ್ಣ ಅಡುಗೆ ಕೊಠಡಿಯ ನಿರ್ಮಾಣ ಈ ಕಾರ್ಯಗಳು ಪೂರ್ಣಗೊಂಡಿದೆ. ವಾಯುಮಾಲಿನ್ಯ ನಿಯಂತ್ರಣ ಮಂಡಳಿಯಿಂದ 4ಪರಿಸರ ಪ್ರಶಸ್ತಿಗಳು ಶಾಲೆಗೆ ದೊರೆಯುವಲ್ಲಿ ಇವರ ಪಾತ್ರ ಮಹತ್ವದ್ದು. ವಿಶೇಷ ಚಟುವಟಿಕೆಗಳಾದ ಗದ್ದೆಯಲ್ಲೊಂದು ದಿನ, ಸಾಂಸ್ಕೃತಿಕ ಸೌರಭ, ಆಹಾರೋತ್ಸವಗಳನ್ನು ಆಯೋಜಿಸಿದ್ದಾರೆ. ಇವರ ಅವಿರತ ಸೇವೆಯನ್ನು ಪರಿಗಣಿಸಿದ ಶಿಕ್ಷಣ ಇಲಾಖೆಯು 2021-2022ನೇ ಸಾಲಿನಲ್ಲಿ ದ.ಕ ಜಿಲ್ಲಾ,ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಾಸ ಗೀತೆಗಳು, ನೃತ್ಯ,ನಾಟಕ,ಗಿಡಗಳ ಆರೈಕೆ ಇವುಗಳು ವಿದ್ಯಾರ್ಥಿಗಳ ಬಾಲ್ಯವನ್ನು ಹಸಿರಾಗಿಸಿದೆ. ಇವರು ಕರ್ತವ್ಯಕ್ಕೆ ಸೇರಿದ ಶಾಲೆಯಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಯಶೋಧ ಎಂ.ಬಿ ಗುಂಡ್ಯ
ಸ.ಹಿ.ಪ್ರಾ ಶಾಲೆ ಕೋಲ್ಚಾರು
ಸುಳ್ಯ ತಾಲೂಕು
ಇವರು ಮೂಲತ: ಪೆರಾಜೆ ಗ್ರಾಮದ ಮೂಲೆಮಜಲು ಮನೆತನದ ದಿ.ಬೊಮ್ಮಣ್ಣ ಮತ್ತು ಶ್ರೀಮತಿ ಸೀತಮ್ಮ ದಂಪತಿಯ ಪುತ್ರಿ.
ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೋಡಿಪೆರಾಜೆ ಮತ್ತು ಕುಂಬಳಚೇರಿ ಸರಕಾರಿ ಶಾಲೆಯಲ್ಲಿ ಹಾಗೂ ಬಾಳಿಲ ವಿದ್ಯಾಭೋದಿನಿ ಪ್ರೌಢಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿರುತ್ತಾರೆ. ಬಳಿಕ ಮಡಿಕೇರಿಯ ಸರಸ್ವತಿ ಟೀಚರ್ ಟ್ರೈನಿಂಗ್ ಕಾಲೇಜಿನಲ್ಲಿ ಟಿ.ಸಿ.ಹೆಚ್ ನ್ನು ಮುಗಿಸಿದ್ದು ಎರಡು ವರ್ಷಗಳ ಕಾಲ ಕೋಡಿ ಪೆರಾಜೆ ಶಾಲೆಯಲ್ಲಿ ಉಚಿತ ಸೇವೆ ಸಲ್ಲಿಸಿದರು. 1993 ರಲ್ಲಿ ಮುರುಳ್ಯ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಯರ್ತಡ್ಕದಲ್ಲಿ ಖಾಯಂ ಆಗಿ ಉದ್ಯೋಗಕ್ಕೆ ಸೇರ್ಪಡೆಗೊಂಡು 5 ವರ್ಷ ಸೇವೆ ಸಲ್ಲಿಸಿದರು. ನಂತರ ಆಲೆಟ್ಟಿಯ ಭೂತಕಲ್ಲು ಸರಕಾರಿ ಶಾಲೆಯಲ್ಲಿ 10 ವರ್ಷಗಳ ಕಾಲ ಸೇವೆ, ಪೈಂಬೆಚ್ಚಾಲ್ ಸರಕಾರಿ ಶಾಲೆಯಲ್ಲಿ 6 ವರ್ಷಗಳ ಕಾಲ ಸೇವೆ, ಕೋಲ್ಚಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4 ವರ್ಷ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿ 2018 ರಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಸೇವೆ ಸಲ್ಲಿಸಿ ಮಾ.31 ರಂದು ವೃತ್ತಿ ಸೇವೆಯಿಂದ ನಿವೃತ್ತಿ ಯಾಗಲಿದ್ದಾರೆ.
ತನ್ನ ಸುಧೀರ್ಘ 30 ವರ್ಷದ ಸೇವೆಯಲ್ಲಿ ಬಹಳಷ್ಟು ಶಾಲೆಗಳಲ್ಲಿ ಏಕೋಪಾಧ್ಯಾಯಿನಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.
2016 ರಲ್ಲಿ ಉತ್ತಮ ಶಿಕ್ಷಕಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಇವರು ಭಾಜನರಾಗಿದ್ದರು.
ಉತ್ತಮ ಶಿಕ್ಷಕಿಯಾಗಿ ಜತೆಯಲ್ಲಿ ಲೇಖಕಿಯಾಗಿ, ಸಾಹಿತ್ಯ ಕ್ಷೇತ್ರದಲ್ಲಿ, ನಾಟಕ ರಚನೆ, ಗಾಯನ,ಮನೆಮದ್ದು, ಅಂಚೆ ಚೀಟಿ ,ನಾಣ್ಯಗಳ ಸಂಗ್ರಹ ಮುಂತಾದ ಹವ್ಯಾಸಗಳನ್ನು ಬಳಸಿಕೊಂಡಿರುವ ಇವರ ಪ್ರಾಂಜಲ ಎಂಬ ಕವನ ಸಂಕಲನ ಬಿಡುಗಡೆಯಾದ ಮೊದಲ ಪುಸ್ತಕವಾಗಿದೆ. ಮೈಸೂರಿನಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಇವರು ಬರೆದ 2 ಕವನಗಳು ಆಯ್ಕೆಯಾಗಿ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಲಭಿಸಿತ್ತು.
ಶಾಲೆಯ ಹಾಗೂ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಹೊರತರುವ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯಲ್ಲಿ ಕೆಲಸ ನಿರ್ವಹಿಸಿರುತ್ತಾರೆ. ಏಕೋಪಾಧ್ಯಾಯಿನಿಯಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳನ್ನು ಕಲಿಕೆಯೊಂದಿಗೆ ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧಿಸುವಂತೆ ಪ್ರೋತ್ಸಾಹಿಸಿ 3 ಬಾರಿ ಸಮಗ್ರ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.
ಸುಳ್ಯ ರೋಟರಿ, ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ,ಗೌಡ ಸೇವಾ ಸಂಘದ ವತಿಯಿಂದ ಮತ್ತು ಇನ್ನಿತರ ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿರುತ್ತಾರೆ.
ಪ್ರಸ್ತುತ ಇವರು ಆಲೆಟ್ಟಿಯಲ್ಲಿ ವಾಸಿಸುತ್ತಿದ್ದಾರೆ. ಓರ್ವ ಪುತ್ರಿ ಶ್ರೀಮತಿ ತೇಜಸ್ವಿನಿ ಇಂಜಿನಿಯರ್ ಪದವಿಧರೆಯಾಗಿದ್ದು ಪತಿಯೊಂದಿಗೆ ಉದ್ಯೋಗ ನಿಮಿತ್ತ ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ. ಪುತ್ರ ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಇ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀ ಕರುಣ ಪಂಗಡಗಾರ
ಸ.ಹಿ.ಪ್ರಾ.ಶಾಲೆ ಒಂಟಿಕಟ್ಟೆ
ಮೂಡುಬಿದಿರೆ ತಾಲೂಕು
ಇವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಎಂಬಲ್ಲಿ ಶ್ರೀ ನಾರಾಯಣ ಪಂಗಡಗಾರ ಹಾಗೂ ಶ್ರೀಮತಿ ಗುಲಾಬಿ ಇವರ ಮಗನಾಗಿ ದಿನಾಂಕ 01.04.1962 ರಂದು ಜನಿಸಿದರು. ದಿನಾಂಕ 27.03.1997ರಂದು ಬಂಟ್ವಾಳ ತಾಲೂಕಿನ ಸ.ಹಿ.ಪ್ರಾ.ಶಾಲೆ ಪಂಬತ್ತಾಜೆ ಇಲ್ಲಿ ಸೇವೆಗೆ ಸೇರಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ದಿನಾಂಕ 31.032012 ರಂದು ಸ.ಹಿ.ಪ್ರಾ.ಶಾಲೆ.ಒಂಟಿಕಟ್ಟೆ ಇಲ್ಲಿಗೆ ವರ್ಗಾವಣೆಗೊಂಡು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.
ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಬಿ ಸುರೇಶ್ ರಾವ್
ಸ.ಹಿ.ಪ್ರಾ ಶಾಲೆ ನಾಲ್ಯಪದವು ಶಕ್ತಿನಗರ
ಮಂಗಳೂರು ದಕ್ಷಿಣ
28.03.1962 ರಲ್ಲಿ ಜನಿಸಿದ
ಬಿ ಸುರೇಶ್ ರಾವ್ ಇವರು 1982 ರಲ್ಲಿ ಸ.ಮಾ.ಹಿ.ಪ್ರಾ ಶಾಲೆ ಗುರುಕಂಬಳದಲ್ಲಿ ಸೇವೆಗೆ ಸೇರಿದರು. ಮುಂದೆ ಅಡ್ಡೂರು, ಸೂರಲ್ಪಾಡಿ, ತಾರೀಕರಿಯ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಾಲ್ಯಪದವು ಶಾಲೆಯಲ್ಲಿ ತಮ್ಮ 39 ವರ್ಷಗಳ ಸುದೀರ್ಘ ಸೇವೆಯಿಂದ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. 2021-22 ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುವ ಶ್ರೀಯುತರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಅಪೋಲಿನ್
ಸ.ಹಿ.ಪ್ರಾ.ಶಾಲೆ ಕಿಲೆಂಜಾರು
ಮಂಗಳೂರು ದಕ್ಷಿಣ
ಶ್ರೀಮತಿ ಅಪೋಲಿನ್ ಇವರು 18.03.1962 ರಲ್ಲಿ ಸರ್ಕಾರಿ ಸೇವೆಗೆ ಸೇರಿದರು. 31.03.2022 ರಲ್ಲಿ ಸ.ಹಿ.ಪ್ರಾ ಶಾಲೆ ಕಿಲೆಂಜಾರಿನಲ್ಲಿ ನಿವೃತ್ತರಾಗುತ್ತಿದ್ದಾರೆ. ಅವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಆಲ್ವಿನ್ ಫಿಲೋಮಿನಾ ಡಿಸೋಜ
ಸ.ಹಿ.ಪ್ರಾ.ಶಾಲೆ ಕುತ್ತೆತ್ತೂರು
ಮಂಗಳೂರು ಉತ್ತರ
ಇವರು 25.10.1982 ರಲ್ಲಿ ಕಾಟಿಪಳ್ಳ ಶಾಲೆಯಲ್ಲಿ ಸೇವೆಗೆ ಸೇರಿದರು. ಮುಂದೆ ಉರುಮಣೆ, ಕಾಟಿಪಳ್ಳ 6 ಕಾನ-ಕಟ್ಲದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಸ.ಹಿ.ಪ್ರಾ ಶಾಲೆ ಕುತ್ತೆತ್ತೂರು ಇಲ್ಲಿ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

ಶ್ರೀಮತಿ ಜೋಸ್ಪಿನ್ ಬೆನೆಡಿಕ್ಟ್ ಪೈಸ್
ಸ.ಹಿ.ಪ್ರಾ ಶಾಲೆ ನೀರೇಶ್ವಾಲ್ಯ ಕಂದುಕ
ಮಂಗಳೂರು ಉತ್ತರ
05.08.1993 ರಲ್ಲಿ ಚಿಕ್ಕಮಗಳೂರಿನ ಸ.ಕಿ.ಪ್ರಾ ಶಾಲೆ ಕಣಿವೆ ದಾಸರಹಳ್ಳಿಯಲ್ಲಿ ಸೇವೆಗೆ ಸೇರಿದ ಜೋಸ್ಪಿನ್ ರವರು ವರ್ಗಾವಣೆಗೊಂಡು ಮುಂದೆ ಸ.ಹಿ.ಪ್ರಾ ಶಾಲೆ ಮಂಜನಾಡಿ, ಬೋಳಿಯಾರು ಶಾಲೆಗಳಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸ.ಹಿ.ಪ್ರಾ ಶಾಲೆ ನೀರೇಶ್ವಾಲ್ಯ ದಲ್ಲಿ ನಿವೃತ್ತರಾಗುತ್ತಿದ್ದಾರೆ. ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಸಾರ್ಥಕ ಸೇವೆಯ ವಿನೀತ ಭಾವನೆಯೊಂದಿಗೆ ಈ ತಿಂಗಳು ನಿವೃತ್ತರಾಗುತ್ತಿರುವ ಎಲ್ಲಾ ಶಿಕ್ಷಕ ಬಂಧುಗಳಿಗೆ ಭಗವಂತನು ಆಯುರಾರೋಗ್ಯ ಸಂಪತ್ತನ್ನು ಕರುಣಿಸಲಿ ಎಂದು ಜಿಲ್ಲೆಯ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.