ಬೆಳಕು
ಆಸೆ ಮತ್ತು ದುರಾಸೆ
ತಂದೆ ತಾಯಿ ತಮ್ಮ ಮಕ್ಕಳನ್ನು ಬಹಳ ಆಸೆಯಿಂದ ಬೆಳೆಸುತ್ತಾರೆ, ಇಲ್ಲಿ ಆಸೆ ಅಂದ್ರೆ,ಮುತುವರ್ಜಿಯಿಂದ ಎಂದರ್ಥ. ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ವಿಧ್ಯಾಭ್ಯಾಸ ಕೊಡಿಸುತ್ತಾರೆ,ಅದು ಅವರ ಕರ್ಮಕೂಡ ಹೌದು. ಬ್ರಹ್ಮಶ್ರೀ ನಾರಾಯಣ ಗುರುಗಳು ಹೇಳುತ್ತಾರೆ,”ವಿದ್ಯೆಯಿಂದ ಸ್ವತಂತ್ರರಾಗಿರಿ,ಸಂಘಟನೆಯಿಂದ ಬಲಯುತರಾಗಿರಿ” ಎಂದು,ಅಂದ್ರೆ ವಿದ್ಯೆಯೊಂದನ್ನು ಕೊಟ್ಟರೆ ಮಕ್ಕಳು ತಮಗೆ ಬೇಕಾದ್ದನ್ನು ತಾವು ಮಾಡಿಕೊಂಡು ಸಮಾಜದಲ್ಲಿ ಬದುಕಬಹುದು.
ಇವತ್ತಿನ ಕಾಲದಲ್ಲಿ ವಿದ್ಯೆಯನ್ನು ಪಡೆಯುವುದು ಬಹಳ ಸುಲಭ, ಕಾರಣ ವಿದ್ಯೆ ಪ್ರತಿಯೊಬ್ಬನ ಹಕ್ಕು ಎಂಬುದಾಗಿ ನಮ್ಮ ಸ೦ವಿಧಾನದಲ್ಲೇ ಉಲ್ಲೇಖ ಮಾಡಲಾಗಿದೆ.
ವಿದ್ಯೆ ಪಡೆದ ಮೇಲೆ ಏನು ಮಾಡಬೇಕು,ಎಂಬುದು ಹೆಚ್ಚಿನವರಿಗೆ ಗೊತ್ತಾಗುವುದಿಲ್ಲ,ಇಲ್ಲಿಂದಲೇ ವಿದ್ಯಾರ್ಥಿಗಳ ಭವಿಷ್ಯ ಕವಲೊಡೆಯುವುದು. ಒಳ್ಳೆಯ ಮಾರ್ಗದರ್ಶನ, ಉತ್ತಮ ಸಲಹೆ,ಯೋಗ್ಯ ಗುರು,ನಿಖರ ಗುರಿ ಇದ್ದಾಗ ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕುತ್ತಾರೆ.ಅವರಲ್ಲಿ ಮೋಹ,ಮಧ,ಅಹಂಕಾರ ಇರುವುದಿಲ್ಲ. ಇಲ್ಲಿ ಅವರಲ್ಲಿ ಅತಿಯಾಸೆ ಹುಟ್ಟಿದಾಗ ಅವರ ಸಾಮಾಜಿಕ, ಆರ್ಥಿಕ, ರಾಜಕೀಯ ಬದುಕು ಬದಲಾಗುತ್ತದೆ.
ಒಬ್ಬ ವ್ಯಕ್ತಿ ಸಮಾಜದಲ್ಲಿ ಬದುಕಲು,ಅವನಿಗೆ ಒಂದು ಉದ್ಯೋಗ, ಉದ್ಯೋಗದಲ್ಲಿ ನೆಮ್ಮದಿ,ಉತ್ತಮ ಸ್ನೇಹ, ಉದ್ಯೋಗಕ್ಕೆ ತಕ್ಕುದಾದ ಸಂಬಳ,ಉತ್ತಮ ಮನಸ್ಸು,ವಿಶಾಲ ಹೃದಯ, ಸಮಾಜದಲ್ಲಿರುವವರೆಲ್ಲರೂ ನಮ್ಮವರೆನ್ನುವ ಭಾವನೆ,’ನಾನು,ನನ್ನಿಂದ ಎಂಬುದನ್ನು ಬಿಟ್ಟು ನಮ್ಮದು,ನಮ್ಮಿಂದ ‘ ಎನ್ನುವ ಸಮಚಿತ್ತ ಮನಸ್ಸು.ಇಷ್ಟು ಇದ್ರೆ ಅವನು ಮನುಷ್ಯ.
ಆದರೆ ಇಂದು ನಾವು ನೋಡಬಹುದು,ಉನ್ನತ ಪದವಿಗಳನ್ನು ಪಡೆಯಲು ಹಣ,ವಿದ್ಯೆಗೆ ತಕ್ಕ ಉದ್ಯೋಗ ಪಡೆಯಲು ಹಣ,ಹೀಗಾದಾಗ ತಂದೆ ತಾಯಿ ಅತಿಯಾಸೆಗೆ ಗುರಿಯಾಗಬೇಕಾಗುತ್ತದೆ.
ಅವರು ಮಕ್ಕಳಿಗಾಗಿ ದ್ರವ್ಯವನ್ನು ಕೂಡಿಡಲು ಪ್ರಾರಂಭಿಸುತ್ತಾರೆ,ಅದಕ್ಕೆ ಅಡ್ಡದಾರಿ ಹಿಡಿಯಲೇ ಬೇಕು.ಒಂದು ಸರಕಾರಿ ಉದ್ಯೋಗಕ್ಕೆ ಇಂತಿಷ್ಟು ಎಂದು ಮೊದಲೇ ನಿಗದಿಯಾಗಿರುತ್ತದೆ.ಪರೀಕ್ಷೆಗಳೆಲ್ಲವೂ ಕಣ್ಣೊರೆಸುವ ತಂತ್ರಗಳು ಮಾತ್ರ.ಒಂದು ಪಿ ಎಸ್ ಐ ಹುದ್ದೆಗೆ ಐವತ್ತರಿಂದ ಎಪ್ಪತ್ತು ಲಕ್ಷ ಎಂದರೆ ಸಾಮಾನ್ಯ ಜನರಿಂದ ಸಾಧ್ಯವೇ? ಇಲ್ಲ ತಾನೆ.
ಅಷ್ಟು ಕೊಟ್ಟು ಉದ್ಯೋಗಕ್ಕೆ ಸೇರಿದ ಮೇಲೆ ಅವನು ದಕ್ಷ ,ಪ್ರಾಮಾಣಿಕ, ಸಮಾಜ ಸೇವಕ,ಬಡವರ ಉದ್ದಾರಕನಾಗುವುದು ಹೇಗೆ ಸಾಧ್ಯ? ಅವನು ಜನರನ್ನು ಲೂಟಿ ಮಾಡಲು ಸುರುಹಚ್ಚಿಕೊಳ್ಳುತ್ತಾನೆ.ರಾಜಕೀಯ ವ್ಯಕ್ತಿಗಳ ಗುಲಾಮರಾಗಬೇಕಾಗುತ್ತದೆ.ಅವನಲ್ಲಿ ಅತಿಯಾಸೆ ಹುಟ್ಟಲೇ ಬೇಕಲ್ಲವೇ ?
ಒಮ್ಮೆ ಅವನು ಹಣ ಗಳಿಸುವ ದಂಧೆಗೆ ಇಳಿದನೆಂದರೆ ಅದರಿಂದ ಮೇಲೆ ಬರಬೇಕಾದರೆ ಅವನು ನಿವೃತ್ತನಾಗಬೇಕು.ವೃತ್ತಿಯಲ್ಲಿದ್ದಾಗ ಅದು ಅಸಾಧ್ಯ.
ನಾವು ದಿನಂಪ್ರತಿ ಮಾಧ್ಯಮದಲ್ಲಿ ನೋಡುತ್ತೇವೆ,ಒಬ್ಬ ಅಧಿಕಾರಿಯ ಮನೆಗೆ ಸರಕಾರಿ ಕಳ್ಳರ ಕಳ್ಳರು ದಾಳಿ ಮಾಡಿದಾಗ ಅವರ ಮನೆಯಲ್ಲಿ 30ಕೆಜಿ ಚಿನ್ನ,150ಕೋಟಿ ಹಣ,ನೂರಾರು ಕೆ ಜಿ ಬೆಳ್ಳಿ ಇದು ಹೇಗೆ ಸಾಧ್ಯ,ಅವರಲ್ಲಿರುವ ದುರಾಸೆ,ಅತಿಯಾಸೆ ಮತ್ತು ಕರ್ಮಫಲ.
ಅದಕ್ಕೆ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿದ್ದು ‘ಕರ್ಮ ಮಾಡಲು ಮಾತ್ರ ನಿನಗೆ ಅಧಿಕಾರ,ಅದರ ಫಲದಲ್ಲಿ ಎಂದಿಗೂ ಆಸಕ್ತನಾಗಬೇಡ.,ಕರ್ಮಫಲದ ಆಸೆಯನ್ನು ತ್ಯಜಿಸಬೇಕೇ ಹೊರತು,ಎಂದಿಗೂ ಕರ್ಮವನ್ನು ತ್ಯಜಿಸಬಾರದು’ ಎಂದು.
ಅಂದರೆ ಸರಕಾರಿ ಅಧಿಕಾರಿಗಳು ತಾವು ಮಾಡುವ ಕರ್ಮದಲ್ಲಿ ಫಲವನ್ನು ನಿರೀಕ್ಷೆ ಮಾಡಬಾರದು,ನಿರೀಕ್ಷೆ ಮಾಡಿದಾಗ ಅವರದ್ದು ಸೇವೆ ಆಗುವುದಿಲ್ಲ ಅದು ಕರ್ತವ್ಯವಾಗುತ್ತದೆ.
ನನ್ನ ಪ್ರಕಾರ ತಾವು ಮಾಡುವ ಕರ್ಮದಲ್ಲಿ ಫಲಾಪೇಕ್ಷೆ ಇಲ್ಲದೆ ಇರುವವರು ಎಂದರೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಕರು ಮತ್ತು ಕೆಲವು ಉನ್ನತ ಶಿಕ್ಷಣದ ಉಪಾನ್ಯಸಕರು.ಯಾಕೆಂದರೆ ಪ್ರಾಥಮಿಕ ಶಿಕ್ಷಣ ಶಿಕ್ಷಕರು ತಮ್ಮ ಶಾಲೆಯ ದೈವಸ್ವರೂಪರಾದ ಮಕ್ಕಳೇ ನಮ್ಮ ಪಾಲಿನ ಫಲಗಳು ಎಂದು ಭಾವಿಸಿರುತ್ತಾರೆ,ಆನಂದಿಸುತ್ತಾರೆ,ಎಲ್ಲಾ ನೋವುಗಳನ್ನು ಮರೆಯುತ್ತಾರೆ.ಇದು ಇಡೀ ಶಿಕ್ಷಣ ರಂಗಕ್ಕೆ ಅನ್ವಯಿತ್ತದೆ ಎಂದು ನನ್ನ ನಂಬಿಕೆ.
ಅಂದರೆ ಇವರ ಆಸೆಗೆ ಒಂದು ಮಿತಿಯಿದೆ.ಮಿತಿಯಿಲ್ಲದ ಆಸೆಯೇ ದುರಾಸೆ .ಒಂದು ಮರೆತೆ,ಇವರ ಬಗ್ಗೆ ಹೇಳದಿದ್ದರೆ ನಾನು ಕೂಡಾ ದುರಾಸೆಯುಳ್ಳವರ ಗುಂಪಿಗೆ ಸೇರಬಹುದು,ನಮ್ಮ ಹೀರೊಗಳು,ನಮ್ಮ ಸುಖ ನಿದ್ರೆ ಮಾಡಿಸುವವರು,ನಮ್ಮ ಭಾರತ ಮಾತೆಯನ್ನು ಸದಾ ರಕ್ಷಣೆ ಮಾಡುತ್ತಿರುವವರು,ತಮ್ಮ ಕುಟುಂಬದ ಸದಸ್ಯರನ್ನು ಮರೆತು ದುಡಿಯುವವರು,ಇಡೀ ಭಾರತವೇ ನಮ್ಮದು ಎಂದು ಮೀಸೆ ತಿರುವೆ ಬೀಗುವವರು,ನಮ್ಮ ಪಾಲಿನ,ಕಣ್ಣಿಗೆ ಕಾಣುವ ದೇವರುಗಳು ಅರ್ಥಾತ್ ವೀರ ಸೈನಿಕರು.ಇವರಲ್ಲಿ ಕಿಂಚಿತ್ತೂ ಆಸೆಯಿಲ್ಲ.ಇವರ ಆಸೆಯೆನಿದ್ದರು,ಜೋಪಾನವಾಗಿ ಭಾರತವನ್ನು ಕಾಯುವುದು,ಸಂದರ್ಭ ಬಂದರೆ ತನ್ನ ಜೀವವನ್ನೇ ಅರ್ಪಿಸುವವರು.
ಆದುದರಿಂದ ಆಸೆ ಬೇಡ,ದುರಾಸೆಯಂತು ಬೇಡವೇ ಬೇಡ. ತಮ್ಮ ಮಕ್ಕಳಿಗೆ,ತಮ್ಮವರಿಗಾಗಿ ಆಸ್ತಿ ರಾಶಿ ಹಾಕುವುದು ಬೇಡ. ತಮ್ಮ ಮಕ್ಕಳೇ ಆಸ್ತಿಯೆಂದು ನಂಬಿ,ಅವರನ್ನು ವಿದ್ಯಾವಂತರನ್ನಾಗಿ ಮಾಡೋಣ.
ನಾವು ದುಡಿಯುವ ದುಡಿಮೆಯ ಕಾಲಾಂಶವನ್ನು ದಾನ ಧರ್ಮಕ್ಕೆ ಮೀಸಲಿಡುವ.ಆಗ ನಾವು ದೇವರಲ್ಲಿಗೆ ಹೋಗುವ ದಾರಿ ಸುಲಳಿತವಾಗುತ್ತದೆ ಎಂಬುದು ನನ್ನ ನಂಬಿಕೆ.ಅತಿಯಾಸೆಯವನು ತನ್ನ ಆಸೆ ಈಡೇರದಿದ್ದಾಗ ಕ್ರೋಧನಾಗುತ್ತಾನೆ,ವಿವೇಕವನ್ನು ಕಳೆದುಕೊಂಡು ತನ್ನ ಬುದ್ದಿಯನ್ನು ಕಳೆದುಕೊಳ್ಳುತ್ತಾನೆ,ಕೊನೆಗೆ ಸರ್ವನಾಶವಾಗಿ ಹೋಗುತ್ತಾನೆ.ಅದಕ್ಕಾಗಿ ಎಲ್ಲ ಭಾರತೀಯರಲ್ಲಿ ಮನವಿ ನಾವೆಲ್ಲರೂ ತಮ್ಮಲ್ಲಿರುವ ಅತಿಯಾಸೆಯನ್ನು ದೂರ ಮಾಡಿ ಯಾರಿಗಾಗಿ ಬದುಕುತ್ತೇವೆ,ಯಾಕೆ ಬದುಕುತ್ತೇವೆ,ಮತ್ತು ಹೇಗೆ ಬದುಕಬೇಕು ಎಂದು ಆಲೋಚಿಸಿ ಮುಂದಡಿಯಿಡುವ.ಆಗ ನೆಮ್ಮದಿ,ತೃಪ್ತಿ, ಸಮಧಾನ,ಸಹಬಾಳ್ವೆ, ಸೋದರತ್ವ ನಮ್ಮನ್ನು ಹುಡುಕಿಕೊಂಡು ಬಂದರೂ ಆಶ್ಚರ್ಯಪಡಬೇಕಿಲ್ಲ.ಏನಂತಿರಿ.
✍️ಬಿಕೆ ಸವಣೂರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳು,ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಸವಣೂರು ಇಲ್ಲಿ ಪ್ರಭಾರ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಾಲಕೃಷ್ಣ ಸವಣೂರು ಇವರು ಮೂಲತಃ ದೈಹಿಕ ಶಿಕ್ಷಕರಾಗಿದ್ದು ತಮ್ಮ ಚಿಂತನಾ ಬರೆಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. . ಇನ್ನು ಮುಂದೆ ಬೆಳಕು ಶೀರ್ಷಿಕೆಯಲ್ಲಿ ಪ್ರತಿ ವಾರ ಇವರ ಚಿಂತನಾ ಬರೆಹ ಪ್ರಕಟ ಆಗಲಿದೆ.
ಸಂಪರ್ಕ :9945512383