ಇಲ್ಲಿ ಕನಸುಗಳು ಬಣ್ಣ ತುಂಬಿಕೊಳ್ಳುತ್ತವೆ.ಮನಸ್ಸುಗಳು ಮಾತನಾಡುತ್ತದೆ…ಭಾವ ಸಂಭ್ರಮದ ಜೀವೋಲ್ಲಾಸವನ್ನು ತೆರೆದಿಡುವ ಜಗಲಿಯ ಆಪ್ತತೆ ಮಕ್ಕಳನ್ನು ಗೆದ್ದಿದೆ.. ಮಗು ಮನದ ಸೃಜನಶೀಲತೆಗೆ ಕ್ರಿಯಾಶೀಲ ವೇದಿಕೆಯಾಗಿ ಮಕ್ಕಳ ನಿತ್ಯ ಕಲರವಕ್ಕೆ ಜಗಲಿ ಸಾಕ್ಷಿಯಾಗುತ್ತಿದೆ.., ಎಳೆಯರ ಹವ್ಯಾಸಗಳನ್ನು ಕಾಪಾಡುವ ಅಮೂಲ್ಯ ಕಾರ್ಯದ ರೂವಾರಿ ತಾರನಾಥ ಕೈರಂಗಳ್ ಹಾಗೂ ಬಳಗದ ಪ್ರೇರಕ ಶಕ್ತಿಯಾಗಿ ಮಾರ್ಗದರ್ಶನವಿತ್ತು ಮುನ್ನಡೆಸುವ ಎಲ್ಲ ಹಿರಿಯರಿಗೂ ಹಿರಿಮೆಯ ಪಾಲು ಸಲ್ಲುತ್ತದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸತನದೊಂದಿಗೆ ಗುರುತಿಸಿಕೊಳ್ಳುತ್ತಿರುವ
ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಯಶಸ್ವಿ ಪ್ರಯೋಗ, ಎಳೆಯರ ಪ್ರತಿಭಾ ವೇದಿಕೆ ‘ಮಕ್ಕಳ ಜಗಲಿ’ ಎನ್ನುವ ಇ-ಪತ್ರಿಕೆ…ಇಲ್ಲಿ ಮಗು ಮನದಲ್ಲಿ ಮೂಡಿದ ಭಾವಗಳೆಲ್ಲವೂ ಪ್ರಕಟವಾಗುತ್ತವೆ..ವಿಶೇಷವೆಂದರೆ ಮಕ್ಕಳ ಪ್ರತಿಭೆಗಳನ್ನು ಮುಗ್ಧವಾಗಿ ಸಂಭ್ರಮಿಸುವ ಹಿರಿಯರ ಬಳಗವಿದೆ..ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹಿರಿಯ ಕಿರಿಯ ಪ್ರತಿಭೆಗಳೆಲ್ಲರೂ ಒಂದೇ ಸೂರಿನಡಿ ಬೆಳೆವ ವಿನೂತನ ಕಲಿಕಾ ಮನೆಯಿದು…ಬಹುಶಃ ಈ ವೇದಿಕೆಯ ಹೊರತಾಗಿ ವಿವಿಧ ಕ್ಷೇತ್ರಗಳ ಇಷ್ಟೊಂದು ಪ್ರತಿಭಾವಂತ ಕುಡಿಗಳನ್ನು ಒಂದೆಡೆ ನೋಡುವ ಅವಕಾಶ ಖಂಡಿತವಾಗಿಯೂ ಸಿಗಲಾರದು!
ನಿರ್ದಿಷ್ಟ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಹಿರಿಯ ಕಿರಿಯರ ‘ಮಕ್ಕಳ ಜಗಲಿ’ ವಾಟ್ಸಾಪ್ ಬಳಗ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಹೆಚ್ಚಿನ ಸಾಧನೆಗೆ ಸ್ಫೂರ್ತಿ ತುಂಬುವ ನುಡಿಗಳ ವೇದಿಕೆಯಾಗಿಯೂ ಬೆಳೆಯುತ್ತಿದೆ..ಮಕ್ಕಳಿಗೆ ಪ್ರೇರಣೆ ನೀಡುವ ಹಿರಿಯರ ಅಂಕಣಗಳು,ಮಕ್ಕಳ ಸಾಹಿತ್ಯ ,ಆರ್ಟ್ ಮತ್ತು ಕ್ರಾಫ್ಟ್, ಸಾಧಕ ಮಕ್ಕಳ ಪರಿಚಯ..ಇವೆಲ್ಲವೂ ಜಗಲಿಯ ವಿಶೇಷತೆ. ಎಲ್ಲರನ್ನೂ ಒಂದೆಡೆ ಸೇರಿಸಿ ಅವರ ಮೂಲಕ ಜಿಲ್ಲೆ ರಾಜ್ಯವನ್ನು ಮೀರಿ ವಿದೇಶದಲ್ಲಿರುವ ಕನ್ನಡ ಪ್ರತಿಭೆಗಳಿಗೂ ಮುಕ್ತ ವೇದಿಕೆಯಾಗಿ ಜಗಲಿ ವಿಶಾಲವಾಗುತ್ತಿರುವುದು ಶ್ಲಾಘನೀಯ.
ಮಕ್ಕಳು ಆಸಕ್ತಿಯೊಡನೆ ಬೆಸೆದುಕೊಂಡಾಗ ಸಾಧ್ಯತೆಯ ಹೊಸ ಲೋಕವೊಂದು ಅನಾವರಣವಾದೀತು ಎನ್ನುವುದಕ್ಕೆ ಸಾಕ್ಷಿ ಮಕ್ಕಳ ಜಗಲಿ..ಬಿಡುವು ಮಾಡಿಕೊಂಡು ಜಗಲಿಗೊಮ್ಮೆ ಇಣುಕಿ ನೋಡಿ..ನಮ್ಮ ನಡುವಿನ ಅಪೂರ್ವ ಪುಟಾಣಿಗಳ ರಚನೆಗಳು ಬೆರಗು ಮೂಡಿಸದಿರದು!
ಬಹಳಷ್ಟು ಸಾಧಕರ ನಡುವೆ ಬೆಳೆಯುತ್ತಿರುವ ಮಕ್ಕಳು, ಹಿರಿಯರ ನುಡಿಗಳಿಗೆ ಕಿವಿಯಾಗುವ ಕಲ್ಪನೆಯೇ ಚಂದ. ಹಳೆ ಬೇರು ಹೊಸ ಚಿಗುರು ಪರಂಪರೆಯನ್ನು ಉಳಿಸಿ ಬೆಳೆಸುವ ಸಾಂಸ್ಕೃತಿಕ ಜವಾಬ್ದಾರಿಯನ್ನು ಹೊತ್ತುಕೊಂಡು ,ವಿನೂತನವಾಗಿ ತೆರೆದುಕೊಳ್ಳುವ ಜಗಲಿ ತುಂಬಿ ತುಳುಕಲಿ.
ಇನ್ನಷ್ಟು …ಮತ್ತಷ್ಟು..ಮೊಗೆದಷ್ಟು ಸಂಭ್ರಮವನ್ನು ನೀಡುವ ಹಾದಿಯಲ್ಲಿ ಮಗು ಮನಸುಗಳ ನಿತ್ಯ ಅನ್ವೇಷಣೆಯಾಗಲಿ ..
-ತೇಜಸ್ವಿ ಅಂಬೆಕಲ್ಲು
ಮಕ್ಕಳ ರಚನೆಗಳನ್ನು ಈ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ..
ತಾರನಾಥ್ ಕೈರಂಗಳ್
9844820979
ಮಂಗಳೂರು.