ಡಿಸೆಂಬರ್ 1ರಿಂದ ಅರ್ಜಿ ಸಲ್ಲಿಕೆ ಆರಂಭ – ಡಿಸೆಂಬರ್ 31 ಕೊನೆಯ ದಿನಾಂಕ
ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರ ಮಕ್ಕಳಿಗೆ ಧನಸಹಾಯ ಮಂಜೂರು ಮಾಡಲು ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಕೆಯು 2026ರ ಡಿಸೆಂಬರ್ 1ರಿಂದ ಆರಂಭವಾಗಲಿದ್ದು, ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಅರ್ಹ ಸೇವಾನಿರತ ಹಾಗೂ ನಿವೃತ್ತ ಶಿಕ್ಷಕರು, ಉಪನ್ಯಾಸಕರು ಮತ್ತು ಪ್ರಾಂಶುಪಾಲರು https://kstbfonline.karnataka.gov.in ವೆಬ್‌ಸೈಟ್ ಅಥವಾ TBF/SWF ONLINE SERVICES ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಭೌತಿಕ ಅರ್ಜಿಗಳಿಗೆ ಅವಕಾಶವಿರುವುದಿಲ್ಲ. ಈಗಾಗಲೇ ಭೌತಿಕ ಆಜೀವ ಸದಸ್ಯತ್ವ ಕಾರ್ಡ್ ಹೊಂದಿರುವವರು ಆನ್‌ಲೈನ್‌ನಲ್ಲಿ ತಮ್ಮ ವಿವರಗಳನ್ನು ನವೀಕರಿಸಿ ಹೊಸ ಸದಸ್ಯತ್ವ ಸಂಖ್ಯೆ ಪಡೆದ ನಂತರ ಅರ್ಜಿ ಸಲ್ಲಿಸಬಹುದು.
ಪ್ರಮುಖ ನಿಯಮಗಳು ಮತ್ತು ಷರತ್ತುಗಳು:
- ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಧನಸಹಾಯ ನೀಡಲಾಗುತ್ತದೆ. ತಂದೆ ಮತ್ತು ತಾಯಿ ಇಬ್ಬರೂ ಶಿಕ್ಷಕರಾಗಿದ್ದರೆ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬೇಕು.
- ವಿದ್ಯಾರ್ಥಿಯು 2026-27ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರಬೇಕು. ವ್ಯಾಸಂಗ ಪ್ರಮಾಣಪತ್ರ ಕಡ್ಡಾಯ.
- ಸೇವಾನಿರತ ಶಿಕ್ಷಕರು ಅರ್ಜಿಗೆ ಸಂಬಂಧಿಸಿದಂತೆ ವೇತನ ಬಟವಾಡೆ ಅಧಿಕಾರಿಗಳ (DDO) ಸಹಿ ಪಡೆಯಬೇಕು.
- ನಿವೃತ್ತ ಶಿಕ್ಷಕರು ಗೆಜೆಟೆಡ್ ಅಧಿಕಾರಿಗಳಿಂದ ಅರ್ಜಿಯನ್ನು ದೃಢೀಕರಿಸಬೇಕು. ಜೊತೆಗೆ ಮಹಾಲೇಖಪಾಲರ ಪಿಂಚಣಿ ಮಂಜೂರಾತಿ ಆದೇಶದ ಪ್ರತಿಯನ್ನು ಸಲ್ಲಿಸಬೇಕು.
- ರಾಷ್ಟ್ರೀಕೃತ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಚಾಲ್ತಿಯಲ್ಲಿರುವ IFSC ಕೋಡ್ ನೀಡುವುದು ಕಡ್ಡಾಯ.
ಯಾರಿಗೆ ಧನಸಹಾಯ ಲಭ್ಯವಿಲ್ಲ?
ಬೋಧಕೇತರ ಸಿಬ್ಬಂದಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ. CA ಮತ್ತು PhD ಕೋರ್ಸ್‌ಗಳಿಗೆ ಧನಸಹಾಯ ನೀಡಲಾಗುವುದಿಲ್ಲ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಸಂಜೆ ಕಾಲೇಜು, ಖಾಸಗಿ, ಬಾಹ್ಯ ಮತ್ತು ಮುಕ್ತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ನಿಗದಿತ ಅರ್ಹತೆ ಮತ್ತು ನಿಯಮಗಳನ್ನು ಪಾಲಿಸಿ, ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಡಿಸೆಂಬರ್ 31, 2026ರ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಕಾರ್ಯದರ್ಶಿ/ಖಜಾಂಚಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Click Here to View PDF