ರಾಜ್ಯ ಸರಕಾರದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ರಾಜ್ಯದ ಮಾಧ್ಯಮಿಕ/ಪೌಢಶಾಲಾ (6-10)ವಿದ್ಯಾರ್ಥಿ ಕ್ರೀಡಾಪಟುಗಳಿಗೆ ವಾರ್ಷಿಕ ರೂ.10,000/- ದಂತೆ ಕ್ರೀಡಾ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ.
ಆಯಾ ಜಿಲ್ಲೆಗಳ ಉಪ/ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯವರು ಅರ್ಹ ಕ್ರೀಡಾಪಟುಗಳಿಂದ 2023-24ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ 30/06/2024 ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ತಮ್ಮ ಜಿಲ್ಲೆಯಲ್ಲಿ ಹೆಚ್ಚು ಪ್ರಚಾರ ಹೊಂದಿರುವ ಪತ್ರಿಕೆಗಳಲ್ಲಿ ಜಾಹಿರಾತು ನೀಡಿರುವ ಬಗ್ಗೆ ಕೇಂದ್ರ ಕಛೇರಿಗೆ ತಪ್ಪದೆ ವರದಿ ಸಲ್ಲಿಸುವಂತೆ ತಿಳಿಸಿದೆ.
ಅರ್ಜಿದಾರ ವಿದ್ಯಾರ್ಥಿಯು 2023-24ನೇ ಸಾಲಿನ ವಿದ್ಯಾರ್ಥಿಯಾಗಿದ್ದು ಮಾಧ್ಯಮಿಕ/ಪ್ರೌಢಶಾಲೆ(6-10) ಯಲ್ಲಿ ಓದುತ್ತಿರಬೇಕು. ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೋಂದಾಯಿತ ಸಂಸ್ಥೆಗಳು ದಿನಾಂಕ 01/04/2023 ರಿಂದ 30/03/2024ರ ವರೆಗೆ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರಬೇಕು. ಅಥವಾ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ಕ್ರೀಡಾ ಸಂಸ್ಥೆಗಳು ಆಯೋಜಿಸಿದ ರಾಷ್ಟ್ರ ಮಟ್ಟದ ಕ್ರೀಡಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರಬೇಕು.
ರಾಷ್ಟ್ರೀಯ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಅಥವಾ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕ್ರೀಡಾಪಟುಗಳು ಒಂದಕ್ಕಿಂತ ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸಿದ್ದರೂ ಸಹ ವಾರ್ಷಿಕ ಒಂದು ವಿದ್ಯಾರ್ಥಿ ವೇತನಕ್ಕೆ ಮಾತ್ರ ಅರ್ಹರಾಗಿರುತ್ತಾರೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30.06.2024