ಕೆಲಸ ಮಾಡ್ಲಿಕ್ಕೆ ನಾವು… ಶೋ ಮಾಡ್ಲಿಕ್ಕೆ ಮಾತ್ರ ಅವರೇಕೆ!? – ಶಿಕ್ಷಕನ ಡೈರಿಯಿಂದ 48

WhatsApp Group Join Now
Telegram Group Join Now

ಶಿಕ್ಷಕನ ಡೈರಿಯಿಂದ

ಕೆಲಸ ಮಾಡ್ಲಿಕ್ಕೆ ನಾವು… ಶೋ ಮಾಡ್ಲಿಕ್ಕೆ ಮಾತ್ರ ಅವರೇಕೆ!?

    ತಮ್ಮ ಅಚ್ಚುಮೆಚ್ಚಿನ ಶಿಕ್ಷಕರ ವಿರುದ್ಧ ಆ ಹುಡುಗರು ತಿರುಗಿಬಿದ್ದಿದ್ದರು. ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಆ ಶಿಕ್ಷಕರಿಗೆ ಮಕ್ಕಳ ವರ್ತನೆ ಆಘಾತ ತಂದಿತ್ತು. "ಈ ಮಕ್ಕಳು ಈ ತರ ಎಲ್ಲಾ ಯೋಚಿಸ್ತಾರೆ ಎಂದು ನಾನಂದುಕೊಂಡಿರಲಿಲ್ಲ, ಇವರ ವರ್ತನೆ ಕಾಲೇಜು ಮಕ್ಕಳ ಮಟ್ಟಕ್ಕಿಂತಲೂ ಹೆಚ್ಚಿದೆ.." ಎನ್ನುತ್ತಾ ತನ್ನ ಬೇಸರವನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. 
    ಶಾಲೆಯ ಇತಿಹಾಸದಲ್ಲೇ ಅತೀ ಹೆಚ್ಚು ಪ್ರಚಂಡರೂ, ಬುದ್ಧಿವಂತರೂ, ಪೋಕರಿಗಳೂ ಎನ್ನಿಸಿಕೊಂಡಿದ್ದ ಬ್ಯಾಚದು. ಅವರ ಪೋಕರಿತನವನ್ನು ಬೈದುಕೊಳ್ಳುತ್ತಿದ್ದರೂ, ಅವರ ಪ್ರಚಂಡತನದ ಬಗ್ಗೆ ಒಳಗೊಳಗೇ ಹೆಮ್ಮೆಪಟ್ಟುಕೊಳ್ಳುತ್ತಿದ್ದವರು ನಾವೆಲ್ಲಾ. ತಮ್ಮೆಲ್ಲ ತುಂಟಾಟಗಳ ನಡುವೆಯೇ ಶಿಕ್ಷಕರ ಬಗ್ಗೆ ಪ್ರೀತಿ ಅಭಿಮಾನಕ್ಕೇನೂ ಕಡಿಮೆ ಮಾಡಿಕೊಂಡ ವಿದ್ಯಾರ್ಥಿಗಳೇನೂ ಅವರಾಗಿರಲಿಲ್ಲ. ಅದರಲ್ಲೂ ಆ ಒಬ್ಬರು ಶಿಕ್ಷಕರ ಬಗ್ಗೆಯಂತೂ ಅವರಿಗೆ ಒಂದು ಹಿಡಿಯಷ್ಟು ಹೆಚ್ಚೇ ಪ್ರೀತಿ. ಈ ದಿನ ಅವರ ಬಂಡಾಯದ‌ ಮಾತುಗಳು‌ ಬಂದಿದ್ದೂ ಈ ಶಿಕ್ಷಕರನ್ನುದ್ದೇಶಿಸಿಯೇ.. 

   ಆ ದಿನ ಶಾಲೆಯಲ್ಲೊಂದು ಸ್ವಚ್ಛತಾ ಅಭಿಯಾನದ ಕಾರ್ಯಕ್ರಮವಿತ್ತು. ಅಭಿಯಾನದಲ್ಲಿ ಸಭಾ ಕಾರ್ಯಕ್ರಮ, ಮೆರವಣಿಗೆ, ಸ್ವಚ್ಚತಾ ಕಾರ್ಯಕ್ರಮಗಳೆಲ್ಲವೂ ಇದ್ದವು. ಮೆರವಣಿಗೆಗೆ ಬೇಕಾದ ಫಲಕಗಳನ್ನೆಲ್ಲಾ ಕೆಲವು ಗಂಡುಮಕ್ಕಳು ಉತ್ಸಾಹದಿಂದ ತಯಾರಿಸಿದ್ದರು. ಮೆರವಣಿಗೆಯ ದಿನ ಸೇವಾದಳದ ಸಮವಸ್ತ್ರದಲ್ಲಿದ್ದ ಹುಡುಗಿಯರು ಮುಂಚೂಣಿಯಲ್ಲಿದ್ದರು. ಕೆಲವು ಫಲಕಗಳು ಅವರ ಕೈ ಸೇರಿದ್ದವು. ಮುಂದಿನ ಸಾಲುಗಳಲ್ಲಿ ಅವರಿದ್ದುದರಿಂದ ಸಹಜವಾಗಿಯೇ ಫೋಟೋಗಳಿಗೂ ಅವರೇ ಕಾಣಿಸಿಕೊಂಡಿದ್ದರು. ಇದೆಲ್ಲವೂ ಈ ಹುಡುಗರನ್ನು ಕೆರಳಿಸಿತ್ತು.

     " ಕೆಲಸ ಮಾಡಲು ನಾವು...! ಶೋ ಮಾಡ್ಲಿಕ್ಕೆ ಹುಡುಗಿಯರು" ಎಂಬ ಯೋಚನೆ ಒಂದಿಬ್ಬರಲ್ಲಿ ಮೂಡಿದ್ದೇ ತಡ, ಅದು ಕಾಡ್ಗಿಚ್ಚಿನ ವೇಗದಲ್ಲಿ ಉಳಿದ ಹುಡುಗರ ಮನಸ್ಸನ್ನೂ ಸೇರಿಬಿಟ್ಟಿತ್ತು. ತಮ್ಮ ಆಕ್ಷೇಪಣೆಯನ್ನು ಶಿಕ್ಷಕರ ಮುಂದೆ ಸಿಟ್ಟಿನಿಂದ ವ್ಯಕ್ತಪಡಿಸಿದ್ದರು. ಕೆಲವು ದಿನಗಳ ಹಿಂದೆ ವಾರ್ಷಿಕೋತ್ಸವದಲ್ಲೂ ಬಹುಮಾನವನ್ನು ವೇದಿಕೆಗೆ ಕೊಂಡೊಯ್ಯಲೂ ಹುಡುಗಿಯರೇ ಇದ್ದದ್ದು ಎನ್ನುವುದನ್ನು ಕೂಡ ಆ ಕ್ಷಣದಲ್ಲಿ ನೆನಪಿಸಿಕೊಂಡಿದ್ದರು. ಸ್ವಚ್ಛತಾ ಅಭಿಯಾನದ ನಿರ್ವಹಣೆ ಮಾಡಿದ್ದ ಮಕ್ಕಳ ಮೆಚ್ಚಿನ ಶಿಕ್ಷಕರು ಮಕ್ಕಳಿಗೆ ಸ್ಪಷ್ಟನೆ ಕೊಟ್ಟರಾದರೂ, ಅವರಿಗೆ ಮಕ್ಕಳ ವರ್ತನೆ ಬೇಸರ ತರಿಸಿತ್ತು. ಕೆಲವು ಶಿಕ್ಷಕಿಯರಿಗಂತೂ ಬಹಳ ಕೋಪ ಬಂದಿತ್ತು.

   ನನ್ನ ಕಿವಿಗೆ ಈ ವಿಷಯ ಬಿದ್ದಿದ್ದು ಸ್ವಲ್ಪ ತಡವಾಗಿ. ನನಗೆ ಆ ವಿಷಯ ಕೇಳಿದಾಗ ಸಣ್ಣನೆಯ ನಗು ಹುಟ್ಟಿತ್ತು. ನಗು ಬರಲು ಕಾರಣ ನನ್ನ ವಿದ್ಯಾರ್ಥಿ ಜೀವನದ ನೆನಪುಗಳು. ವಿದ್ಯಾರ್ಥಿಯಾಗಿದ್ದಾಗ ಬಹಳಷ್ಟು ಬಾರಿ ಈ ತರಹದ ಕೋಪ ನನಗೂ ಬಂದಿತ್ತು. ಆಗೆಲ್ಲಾ ಹುಡುಗಿಯರೊಂದಿಗೆ ಜಗಳ ಮಾಡಲು ನಾನು ಮುಂಚೂಣಿಯಲ್ಲಿರುತ್ತಿದ್ದೆ. ಹಾಸ್ಟೆಲಿನಲ್ಲಿದ್ದಾಗ ಅಡುಗೆಯವರು ಹೆಣ್ಣುಮಕ್ಕಳ ಪರವಾಗಿ ಪಕ್ಷಪಾತ ಮಾಡುತ್ತಿದ್ದಾರೆಂಬ ಆರೋಪ ಹೊತ್ತುಕೊಂಡು ಪ್ರಾಂಶುಪಾಲರನ್ನು ಭೇಟಿಯಾಗುತ್ತಿದ್ದ ನಿಯೋಗದ ಮುಂದಾಳತ್ವ ನನ್ನದೇ ಆಗಿರುತ್ತಿತ್ತು. ಆಗಿನದ್ದೆಲ್ಲ ನಮ್ಮದು ತಪ್ಪು ಗ್ರಹಿಕೆ ಎಂದು ಅರ್ಥವಾಗುವ ಹೊತ್ತಿಗೆ ನಾವು ದೊಡ್ಡವರಾಗಿದ್ದವು.

   ಈ ದಿನ ಬಂಡಾಯ ಮೊಳಗಿಸಿದ ಮಕ್ಕಳಲ್ಲಿ ನನಗೆ ನಾನೇ ಕಾಣಿಸಿದೆ. ನಾನೊಂದು ಬಾರಿ ಈ ಮಕ್ಕಳನ್ನು ಮಾತನಾಡಿಸಹೊರಟೆ. ನನ್ನಂತೆಯೇ ಆ ವಿಚಾರವನ್ನು ಆಗಷ್ಟೇ ಕೇಳಿದ ಒಬ್ಬರು ಶಿಕ್ಷಕಿಯೂ ನನ್ನೊಡನಿದ್ದರು. ತರಗತಿಯ ಹುಡುಗಿಯರೆಲ್ಲಾ ಹೊರಗೆ ಸ್ವಚ್ಛತಾ ಕೆಲಸದಲ್ಲಿ ಚೂರು ಪಾರು ತೊಡಗಿಸಿಕೊಂಡಿದ್ದರೆ, ಹುಡುಗರು ಕಣ್ಣು ಕೆಂಪು ಮಾಡಿಕೊಂಡು ಒಳಗೆ ಕುಳಿತಿದ್ದರು. ಒಂದಿಬ್ಬರಂತೂ ಕೋಪ ತಡೆಯಲಾಗದೇ ಅಳುತ್ತಿದ್ದರು. ನಾವಿಬ್ಬರು ಮಕ್ಕಳಿಗೊಂದಿಷ್ಟು ಬುದ್ಧಿ ಹೇಳುವ ಪ್ರಯತ್ನ ಮಾಡಿದೆವು. "ನಿಮ್ಮ ನೆಚ್ಚಿನ ಶಿಕ್ಷಕರಿಗೆ ತುಂಬಾ ಬೇಜಾರು ಮಾಡಿಬಿಟ್ಟಿರಲ್ಲಾ..." ಎಂದಾಗ ಮಕ್ಕಳ ಮನಸ್ಸು ಮತ್ತಷ್ಟು ಕದಡಿತ್ತು. ಶಿಕ್ಷಕರಲ್ಲಿ Sorry ಕೇಳಲು ಗುಂಪು ಹೊರಟಿತ್ತು. ತಾವು ಶಿಕ್ಷಕರಲ್ಲಿ ಆಕ್ಷೇಪಣೆ ಸಲ್ಲಿಸುತ್ತಿರುವಾಗ ಸುತ್ತಲಿದ್ದ ಶಿಕ್ಷಕಿಯರು ತಮಗೆ ಅವಮಾನವಾಗುವಂತಹ ಕಾಮೆಂಟುಗಳನ್ನು ಮಾಡಿದ್ದರೆಂದೂ ತಮಗೆ ಅಳುಬರುತ್ತಿರುವುದು ಆ ಕಾರಣಕ್ಕೇ ಎಂದೂ ಒಂದಿಷ್ಟು ಸಮಜಾಯಿಷಿಗಳನ್ನು ಕೊಟ್ಟುಕೊಳ್ಳುತ್ತಾ, ಕಣ್ಣೀರು ಸುರಿಸಿಕೊಂಡೇ ಆ ಶಿಕ್ಷಕರೊಡನೆ ಒಂದಿಷ್ಟು ಮಾತಾಡಿ ಬಂದರು.

    *     *     *

  ಮಕ್ಕಳ ಆ ವರ್ತನೆಯ ಕುರಿತು ನೀವೇನೆನ್ನುತ್ತೀರೋ ನನಗೆ ತಿಳಿಯದು. ಆದರೆ ನಾನು ವಿದ್ಯಾರ್ಥಿಯಾಗಿದ್ದಾಗಿನ ದಿನದಿಂದ, ಇಂದಿನವರೆಗೆ ನಾನು ಗಮನಿಸಿದಂತೆ ಶಾಲೆಯಲ್ಲಿ ಗಂಡು ಮಕ್ಕಳಿಗೆ ಪ್ರಾಶಸ್ತ್ಯ ಸಿಗುವುದರ ಬಗ್ಗೆ ಹೆಣ್ಣುಮಕ್ಕಳಿಗೆ ಆಕ್ಷೇಪಣೆ ತೀರಾ ಕಡಿಮೆ... ಹೆಣ್ಣುಮಕ್ಕಳಿಗೆ ಪ್ರಾಶಸ್ತ್ಯ ಸಿಗುವುದರ ಬಗ್ಗೆ ಗಂಡು ಮಕ್ಕಳ ಆಕ್ಷೇಪಣೆ ಬಹಳ ಹೆಚ್ಚು.. ಇದನ್ನು ನೀವು‌ ಮಕ್ಕಳ ಕುಟುಂಬ ಅಥವಾ ಸಮಾಜದ ಪ್ರಭಾವ ಎಂದೋ, ಅವರೊಳಗಡಗಿರುವ ಪುರುಷಾಹಂಕಾರದ ಪರಿಣಾಮ ಎಂದೋ ಭಾವಿಸಬಹುದು. ಆದರೆ ಎಲ್ಲೋ ಒಂದೆಡೆ ಗಂಡು ಮಕ್ಕಳ ಭಾವನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ನಾವು ಸೋಲುತ್ತಿದ್ದೇವೇನೋ ಎಂದು ಅದೆಷ್ಟೋ ಬಾರಿ ನನಗನಿಸಿದೆ. 

      *     *     *

  ಮೇಲೆ ಹೇಳಿದ ಘಟನೆ ನಡೆದ ಸ್ವಲ್ಪ ದಿನಗಳ ಬಳಿಕ ಟಿ.ವಿ. ಚಾನೆಲ್ಲೊಂದರ ತಂಡ ನಮ್ಮ ಶಾಲೆಗೆ ಬಂದಿತ್ತು. ನಮ್ಮ ಶಾಲೆಯಲ್ಲಿ ಕಲಿತಿದ್ದ ಸೆಲೆಬ್ರಿಟಿಯೊಬ್ಬರ ಕುರಿತಾದ ಕಾರ್ಯಕ್ರಮವೊಂದಕ್ಕಾಗಿ ಶಾಲೆಯ ಕೆಲವು ವೀಡಿಯೋಗಳನ್ನು ಚಿತ್ರೀಕರಿಸಲು ಆ ತಂಡ ಬಂದಿತ್ತು. ಏಳನೇ ತರಗತಿಯ ಎಲ್ಲಾ ಗಂಡುಮಕ್ಕಳನ್ನು ಮತ್ತು ಐದಾರು ಹೆಣ್ಣುಮಕ್ಕಳನ್ನಷ್ಟೇ ಕರೆದ ಅವರು ಗಂಟೆ ಹೊಡೆದಾಗ ಮಕ್ಕಳು ಹೊರಗೋಡುವ ದೃಶ್ಯವೊಂದನ್ನು ಚಿತ್ರೀಕರಿಸಿಕೊಂಡಿದ್ದರು. ಇವರೆಲ್ಲಾ ಶೂಟಿಂಗಿಗೆ ಹೋಗಿದ್ದಾಗ ಶೂಟಿಂಗಿಗೆ ಹೋಗದ ಹುಡುಗಿಯರು ತರಗತಿಯಲ್ಲೇ ಇದ್ದರು. ಶೂಟಿಂಗಿಗೆ ಹೋದವರು ತರಗತಿಗೆ ಬರುವಾಗ ನಾನೂ ತರಗತಿಯಲ್ಲಿದ್ದೆ. ಶೂಟಿಂಗಿಗೆ ಹೋಗದ ಮಕ್ಕಳು ತಮಗೊಂದು ಅವಕಾಶ ಮಿಸ್ಸಾಯಿತು ಎಂಬಂತಹ ಯಾವುದೇ ಬೇಸರದಲ್ಲಿಲ್ಲದ್ದನ್ನು ಗಮನಿಸಿದವನು ಅವರನ್ನು ಪ್ರಶ್ನಿಸಿದೆ., "ಇವತ್ತು ನಿಮ್ಮನ್ನು ಇಲ್ಲೇ ಕುಳ್ಳಿರಿಸಿದರಲ್ಲಾ? ನಿಮಗೇನೂ ಕೋಪ ಬರಲಿಲ್ವಾ? ಬೇಜಾರಾಗಿ ಅಳುವುದಿಲ್ಲವಾ?" ನಗುತ್ತಲೇ ಕೇಳಿದೆ. ಹುಡುಗಿಯರು ಮುಗುಳುನಗುತ್ತಾ ಇಲ್ಲ ಎಂದು ಉತ್ತರಿಸಿದರೆ, ಅಲ್ಲಿಯವರೆಗೆ ಗಮ್ಮತ್ತಿನ ಮೂಡಲ್ಲಿದ್ದ ಹುಡುಗರು ಮಾಸ್ಟ್ರು ನಮಗೇ ಹೇಳುತ್ತಿದ್ದಾರೆ ಎಂದು ಅರ್ಥಮಾಡಿಕೊಂಡು, ತುಸು ನಾಚಿಕೊಂಡಂತೆ ಕಂಡರು. ನಾನು ಆ ದಿನದ ಹುಡುಗರಿಗಾದ ಬೇಸರವನ್ನು ನೆನಪಿಸಿದೆ. ಈ ದಿನ ಹುಡುಗಿಯರ ವರ್ತನೆಯನ್ನು ಉಲ್ಲೇಖಿಸಿ, 'ಮೆಚ್ಯೂರಿಟಿ' ಎಂದರೇನು ಎನ್ನುವುದರ ಕುರಿತು ಮಾತನಾಡತೊಡಗಿದೆ. "ಎಷ್ಟೋ ಸಂದರ್ಭಗಳಲ್ಲಿ ನಮ್ಮ ಅರ್ಹತೆಗೆ ತಕ್ಕಂತ ಅವಕಾಶಗಳು ಸಿಗುವುದಿಲ್ಲ, ನಮಗಿಂತ ಕಡಿಮೆ ಯೋಗ್ಯತೆಯುಳ್ಳವರಿಗೆ ನಮಗಿಂತ ಹೆಚ್ಚಿನ ಅವಕಾಶಗಳೋ, ಸೌಲಭ್ಯಗಳೋ ಸಿಗಬಹುದು. ಅಂತಹ ಸಂದರ್ಭಗಳಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಆಧಾರದಲ್ಲಿ ನಾವು ಮಾನಸಿಕವಾಗಿ ಎಷ್ಟು ಸದೃಢರು ಎಂದು ತಿಳಿಯಬಹುದು" ಎಂಬಿತ್ಯಾದಿ ಭಾಷಣ ಬಿಗಿದೆ. ಮಕ್ಕಳು ಅಹುದಹುದೆಂದು ತಲೆದೂಗಿದಂತೆ ಕಾಣಿಸಿತು. ಖುಷಿಯಾದೆ.

     *     *     *

   ಮೊದಲ ಘಟನೆಯ ಮಕ್ಕಳ ವರ್ತನೆ ನಿಮಗೆ ಅವಿಧೇಯತೆಯೋ, ಲಿಂಗ ಅಸಮಾನತೆಯೋ, ಶಾಲೆಯಲ್ಲಿ ಮಕ್ಕಳು ವರ್ತಿಸಬಾರದ ರೀತಿಯೋ ಎಂದೆಲ್ಲಾ ಅನಿಸಿದರೆ ಅದಕ್ಕೆ ನನ್ನ ಆಕ್ಷೇಪಣೆಯಿದೆ. ಮಕ್ಕಳ ಶಾಲಾ ಜೀವನದಲ್ಲಿ ಇಂತಹುದೆಲ್ಲಾ ನಡೆಯುತ್ತಲಿರಬೇಕು ಮತ್ತು ಇದರಿಂದ ಅವರಿಗೂ, ನಮಗೂ ಒಂದಿಷ್ಟು ವಿಚಾರಗಳನ್ನು ಕಲಿಯಲು ಸಾಧ್ಯವಾಗುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. 

    - ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

WhatsApp Group Join Now
Telegram Group Join Now
Sharing Is Caring:

Leave a Comment