ಮಕ್ಕಳು ಕಾಣೆಯಾಗಿದ್ದರು! – ಶಿಕ್ಷಕನ ಡೈರಿಯಿಂದ 46

ಶಿಕ್ಷಕನ ಡೈರಿಯಿಂದ

ಮಕ್ಕಳು ಕಾಣೆಯಾಗಿದ್ದರು!

          ಒಂದು ಚೆಂಡೆ ಕೊಟ್ಟುಬರುವಷ್ಟರಲ್ಲಿ ಏನೆಲ್ಲಾ ಆಗಿಹೋಗಿತ್ತು...!
    ‌‌                      ಶಾಲಾ‌ವಾರ್ಷಿಕೋತ್ಸವಕ್ಕೆ‌ ನಾಲ್ಕೈದು ದಿನಗಳಷ್ಟೇ ಬಾಕಿಯಿದ್ದವು.  ಮಕ್ಕಳ ನಾಟಕದ ಸಿದ್ಧತೆ ಅಂತಿಮ ಹಂತದಲ್ಲಿತ್ತು. ಆ ದಿನ ಚೆಂಡೆಯ ಸಂಗೀತದೊಂದಿಗೆ ಪ್ರಾಕ್ಟೀಸ್ ನೀಡುವುದೆಂದು ನಿರ್ಧರಿಸಿದ್ದೆ. ಪಕ್ಕದ ಶಾಲೆಯ ಶಿಕ್ಷಕ ಮಿತ್ರ ಗುರುಪ್ರಸಾದ್ ಶಾಲೆ ಬಿಟ್ಟಾಕ್ಷಣ ಚೆಂಡೆವಾದನಕ್ಕೆ ಬರುವವರಿದ್ದರು. "ಸಂಜೆ ಪ್ರಾಕ್ಟೀಸ್ ಮುಗಿಯುವಾಗ  ತಡವಾಗಬಹುದು, ತುಂಬಾ ತಡವಾದರೆ ಮನೆಗೆ ಬಿಡುವ ವ್ಯವಸ್ಥೆ ಮಾಡುತ್ತೇನೆ" ಎಂಬ ಸೂಚನೆಯನ್ನು ಹಿಂದಿನ ದಿನವೇ ಮಕ್ಕಳ ಪೋಷಕರಿಗೆ ರವಾನಿಸಿದ್ದೆ. ಪೋಷಕರದ್ದೇನೂ ತಕರಾರಿರಲಿಲ್ಲ.

             ಆ ದಿನ ಸಂಜೆ ಶಾಲೆ ಬಿಟ್ಟಾಕ್ಷಣ ಗುರುಪ್ರಸಾದರೊಂದಿಗೆ ಅವರ ಸ್ನೇಹಿತರ ಮನೆಗೆ ಹೋಗಿ ಚೆಂಡೆ ತಂದದ್ದಾಯಿತು. ಮಕ್ಕಳಿಗೆ ಪ್ರಾಕ್ಟೀಸ್ ಕೊಟ್ಟದ್ದೂ ಆಯಿತು.  ಚೆಂಡೆಯ ಮಾಲಕರಿಗೆ ಮರುದಿನ ಚೆಂಡೆಯ ಅಗತ್ಯತೆಯಿದ್ದುದರಿಂದ ಪ್ರಾಕ್ಟೀಸ್ ಮುಗಿದ ತಕ್ಷಣ ಅವರ ಮನೆಗೆ ಚೆಂಡೆಯನ್ನು ಮರಳಿಸಿದ್ದೂ ಆಯಿತು. ಅಷ್ಟರಲ್ಲಿ ಈ ಒಂದು ಎಡವಟ್ಟಾಗಿಬಿಟ್ಟಿತ್ತು.

           ಹೇಳಿ ಕೇಳಿ ನಮ್ಮದು ದೊಡ್ಡ ಶಾಲೆ. ಆರೇಳು ಕಿಲೋಮೀಟರ್ ದೂರದಿಂದ ಬರುವ ಮಕ್ಕಳು ಹಲವರಿದ್ದರು. ನಮ್ಮ ನಾಟಕ ತಂಡದಲ್ಲೂ ತುಂಬಾ ದೂರದಿಂದ ಬರುವ ಮಕ್ಕಳಿದ್ದರು. 

          ಪ್ರಾಕ್ಟೀಸ್  ಮುಗಿಯುವಾಗ ಐದೂ ಐವತ್ತು.‌ "ಆರು ಗಂಟೆಗೆ ನಮಗೆ ಬಸ್ಸಿದೆ ಸರ್." ಎಂದನೊಬ್ಬ.‌ ಅವನು ಹೋಗಬೇಕಿದ್ದ ಬಸ್ಸಿಗೆ ಹೋಗುವ ಏಳೆಂಟು ಮಕ್ಕಳಿದ್ದರು. ಆ ರೂಟಿನಲ್ಲಿ ಹೋಗುವ ಬಸ್ಸುಗಳ ಸಂಖ್ಯೆಯೂ ಕಮ್ಮಿಯಿತ್ತು. "ಆರು ಗಂಟೆಗಾ, ಹಾಗಿದ್ರೆ ನಮ್ಮದು ಪರ್ಫೆಕ್ಟ್ ಟೈಮಿಂಗು.. ಹೊರಡಿ ಬೇಗ.." ಎಂದೆ. ಮಕ್ಕಳು ಬಸ್ಸ್ಟ್ಯಾಂಡಿಗೆ ಓಡಿದರು. ನಾನು ಶಾಲೆಯ ಬೀಗ ಹಾಕಿ ಚೆಂಡೆಯನ್ನು ಅದರ ಮನೆಗೆ ಮುಟ್ಟಿಸಲು ಹೊರಟೆ. 

            ನಾನು ಮರಳಿ ಬರುವಾಗ ಹದಿನೈದೋ ಇಪ್ಪತ್ತೋ ನಿಮಿಷವಾಗಿರಬಹುದೇನೋ.. ಶಾಲೆಯ ಬಳಿಯ ಬಸ್ಸ್ಟ್ಯಾಂಡಿನ ಎದುರಿಗಿದ್ದ ಅಂಗಡಿಯಲ್ಲಿ ಕೆಲವು ವಸ್ತುಗಳನ್ನು ಖರೀದಿಸುತ್ತಿದ್ದೆ. ಪೋಷಕರೊಬ್ಬರ ಫೋನ್ ಕರೆ, "ಮಕ್ಕಳನ್ನು ಬಿಡುವಾಗ ಲೇಟಾಗ್ತದಾ?" ಎಂದು. "ಸ್ವಲ್ಪ ಹೊತ್ತಾಯ್ತಷ್ಟೆ, ಬರ್ತಾರೆ ಬೇಗ" ಎಂದೆ. ಅಂಗಡಿಯವರು ನನ್ನ ಮಾತು‌ ಕೇಳುತ್ತಿದ್ದರು. " ಆ ಊರಿನ ಮಕ್ಕಳಾ? ಅವರ 
ಬಸ್ಸು ಬರ್ಲಿಲ್ಲ‌ ಮಾರ್ರೆ ಇವತ್ತು, ಮಕ್ಕಳು ಬಸ್ಸಿಲ್ಲ ಅಂತ ಗೊತ್ತಾದ ಮೇಲೆ ಆ ಕಡೆ ನಡ್ಕೊಂಡು ಹೋದ್ರು." ಅವರು ಹಾಗೆಂದಾಗ ಒಂದು ಕ್ಷಣ ನಾನು ದಿಗಿಲುಬಿದ್ದಿದ್ದೆ. ಮಕ್ಕಳು ಮನೆಗೆ ಹೋಗಲು ವ್ಯವಸ್ಥೆಯಾಗಿದ್ದನ್ನು  ಖಾತ್ರಿಪಡಿಸಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು. ಆದರೆ ಗುಂಪಿನಲ್ಲಿದ್ದವರೆಲ್ಲರೂ ಗಂಡುಮಕ್ಕಳೇ ಆಗಿದ್ದುದು ಮತ್ತು ಅವರೆಲ್ಲರೂ ಪ್ರಬುದ್ಧ ಮಕ್ಕಳೆಂಬುದು ನಾನು ತುಸು ಸಾವರಿಸಿಕೊಳ್ಳುವಂತೆ ಮಾಡಿತ್ತು. ಅವರು ನಡೆದುಕೊಂಡು ಮುಖ್ಯ ಬಸ್ ಸ್ಟಾಪ್ ವರೆಗೆ ಹೋಗಿ ಅಲ್ಲಿ ಕುಳಿತಿರಬಹುದು ಎಂದುಕೊಂಡೆ. ಬೈಕನ್ನೇರಿ ಮುಖ್ಯ ಬಸ್ಸ್ಟ್ಯಾಂಡಿಗೆ ದೌಡಾಯಿಸಿದೆ. ಬಸ್ ಸ್ಟ್ಯಾಂಡ್ ಖಾಲಿಯಿತ್ತು. ಏಳೆಂಟು ಮಕ್ಕಳಿದ್ದರಲ್ಲಾ, ರಿಕ್ಷಾದಲ್ಲಿ ಹೋಗಿರಬಹುದು ಎಂದುಕೊಂಡೆ. ಅಲ್ಲೇ ಪಕ್ಕದಲ್ಲಿ ರಿಕ್ಷಾಗಳು ಸಾಲಾಗಿ ನಿಂತಿದ್ದವು. ಯಾರಲ್ಲಾದರೂ ಕೇಳಬಹುದಿತ್ತಾದರೂ ಕೇಳಬೇಕೆನಿಸಲಿಲ್ಲ. ನಾನು ಒಂದು ಮಾತು ಕೇಳಿದರೆ ಸುದ್ದಿ ಊರೆಲ್ಲಾ ಹಬ್ಬಿಬಿಡಬಹುದು ಎಂದು ಸುಮ್ಮನಾದೆ. 'ಒಂದೋ ಮಕ್ಕಳು ರಿಕ್ಷಾದಲ್ಲಿ ಹೋಗಿರುತ್ತಾರೆ, ಇಲ್ಲವೇ ನಡೆದು ಹೋಗಿರುತ್ತಾರೆ' ಎಂಬ ನಿರ್ಧಾರಕ್ಕೆ ಬಂದೆ. ಮಕ್ಕಳು ನಡೆದು ಹೋಗುತ್ತಿದ್ದರೆ ನನಗೆ ಸಿಗಬಹುದು ಎಂದು ಬೈಕನ್ನೇರಿ ಆ ದಿಕ್ಕಿನೆಡೆಗೆ ಹೊರಟೆ. ಸುಮಾರು ಎರಡು ಮೂರು ಕಿಲೋಮೀಟರ್ ಕ್ರಮಿಸಿದರೂ ಮಕ್ಕಳು ಕಾಣಿಸಲಿಲ್ಲ. ಮಕ್ಕಳ ಮನೆಯವರಿಗೆ ಕರೆ ಮಾಡಿ ಹೇಳಿದರೆ ದೊಡ್ಡ ರಾದ್ಧಾಂತವೇ ಆಗುತ್ತದೆಂಬ ಅರಿವು ನನಗಿತ್ತು. ಅದಲ್ಲದೇ ಮಕ್ಕಳು ಸುರಕ್ಷಿತವಾಗಿಯೇ ಮನೆಗೆ ಸಾಗುತ್ತಿದ್ದಾರೆ, ಅವರು ಎಲ್ಲಿ ಹೋಗುತ್ತಿದ್ದಾರೆ ಎಂದು ತಿಳಿಯುವ ಅಗತ್ಯವಷ್ಟೇ ಈಗ ಇರುವುದು ಎಂಬ ಧೈರ್ಯವೂ ನನಗಿತ್ತು. ಒಬ್ಬ ಹುಡುಗನ ಮನೆಗೆ ಕರೆ ಮಾಡಿದೆ, 'ಬಂದನಾ?'  ಕೇಳಿದೆ. 'ಇಲ್ಲ ಸರ್' ಎಂದ ಅವರು ಆತಂಕಕ್ಕೊಳಗಾಗುವಷ್ಟರಲ್ಲಿ , '"ಇವತ್ತು ಬಸ್ ಇರಲಿಲ್ಲ, ರಿಕ್ಷಾದಲ್ಲಿ ಬರ್ತಾ ಇದಾರೆ, ಅದಕ್ಕೆ ಸ್ವಲ್ಪ ತಡವಾಗುತ್ತಿದೆ" ಎಂದೆ. ನನ್ನ ಬಗ್ಗೆ ವಿಶ್ವಾಸವಿದ್ದ ಅವರು ನಿಶ್ಚಿಂತರಾಗಿದ್ದರು. ನಾಟಕ ತಂಡದಲ್ಲಿದ್ದ ಬೇರೆ ಭಾಗದ ಮಕ್ಕಳಿಗೆಲ್ಲಾ ಹೀಗೇ ಕರೆ ಮಾಡಿ ಮನೆ ತಲುಪಿದಿರಾ ಕೇಳಿ, ಈ ಮಕ್ಕಳು ಹೇಗೆ ಹೋದರೆಂದು ವಿಚಾರಿಸುವ ಪ್ರಯತ್ನ ಮಾಡಿದೆ. ಆದರೆ ಎಲ್ಲಿಯೂ ಅವರು ಕಾಣಿಸುತ್ತಿಲ್ಲ ಎಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಯಾರಿಂದಲೂ ಆ ಮಕ್ಕಳ ಬಗ್ಗೆ ಮಾಹಿತಿ ಸಿಗಲಿಲ್ಲ. 
       
            ಅಷ್ಟರಲ್ಲಿ ಮನೆ ತಲುಪದ ಮೂರ್ನಾಲ್ಕು ಮಕ್ಕಳ ಮನೆಯಿಂದ ಕರೆ ಬಂತು. 
        "ಎಷ್ಟು ಹೊತ್ತಾಗ್ಬಹುದು ಸರ್?" 
         "ಆಗ್ಲೇ ಕಳಿಸಿದೆ, ಬಸ್ಸಿರಲಿಲ್ಲ, ರಿಕ್ಷಾದಲ್ಲಿ ಬರ್ತಿದಾರೆ... ಸ್ವಲ್ಪ ಹೊತ್ತಾಗಬಹುದು.."
          "ಆಯ್ತು..." ಆ ಕಡೆಯಲ್ಲಿ ನಿಶ್ಚಿಂತೆ. ಎಲ್ಲರೊಂದಿಗೂ ನನ್ನದು ಇದೇ ಮಾತು. 
           ನನ್ನಲ್ಲೊಂದು ಭರವಸೆ, ಮಕ್ಕಳು ರಿಕ್ಷಾದಲ್ಲಿ ಹೋಗುತ್ತಿದ್ದರೆಂದು. ಆದರೆ ಆ ಭರವಸೆ ಮಾಯವಾಗಿದ್ದು ಅವರಲ್ಲಿ ಮೊದಲು ಮನೆ ತಲುಪಬೇಕಾಗಿದ್ದ ಅನಿರುದ್ಧನ ಮನೆಯ ಕರೆ ಬಂದಾಗ. ಅವನ ಮನೆ ತುಂಬಾ ದೂರದಲ್ಲಿರಲಿಲ್ಲ ಮತ್ತು  ರಿಕ್ಷಾದಲ್ಲಿ ಹೋಗಿದ್ದರೆ ಅವನು ಮನೆಗೆ ತಲುಪಿರಲೇಬೇಕಿತ್ತು. ಅವನ ಮನೆಯವರಿಗೂ ಉಳಿದವರಿಗೆ ಹೇಳಿದ ಉತ್ತರ ಹೇಳಿದೆ. ಶರವೇಗದಲ್ಲಿ ಹಿಂದಕ್ಕೆ ಬಂದು ನಾನು ಮೊದಲು ಹೇಳಿದ ಮುಖ್ಯ ಬಸ್ಸ್ಟ್ಯಾಂಡಿನ ಆಟೋ ರಿಕ್ಷಾ ಚಾಲಕರೊಬ್ಬರಲ್ಲಿ "ಮಕ್ಕಳನ್ನು ನೋಡಿದ್ದಿರಾ?" ಕೇಳಿದೆ. "ಆಗ ಮಕ್ಕಳು ಆ ಕಡೆ ನಡೆದುಕೊಂಡು ಹೋಗ್ತಿದ್ರು ಮಾರ್ರೆ.." 
     
         ಈಗ ಎದೆ ಧಸಕ್ಕೆಂದಿತು. ಎಂದೂ ಇಲ್ಲದ ಸ್ಪೀಡಿನಲ್ಲಿ ಮಕ್ಕಳ ಊರಿನ ದಿಕ್ಕಿಗೆ ಬೈಕ್ ಓಡಿಸತೊಡಗಿದೆ. ಈಗಾಗಲೇ ನಾನು ಮೂರು ಕಿಲೋಮೀಟರ್ ನೋಡಿ ಬಂದಾಗಿತ್ತು. ಅಲ್ಲೆಲ್ಲೂ ಕಾಣಿಸಲಿಲ್ಲ ಎಂದರೆ...? ಎಲ್ಲೋ ಒಳದಾರಿಯಿದೆಯೆಂದು ಕಾಡು ಮಾರ್ಗದಲ್ಲಿ ಹೋಗಿರಬಹುದೇ...? ಮಕ್ಕಳ ತಂದೆ ತಾಯಂದಿರಿಗೆ ನಾನೇನು ಉತ್ತರ ನೀಡಲಿ..? ನನ್ನ ಕೈಗಳು ನಡುಗುತ್ತಿದ್ದವು. ಬಾಯಿ  'ದೇವರೇ... ಏನಾಗದಿರಲಿ' ಎನ್ನುತ್ತಿತ್ತು. ಈಗ ನಾನವರ ಊರಿನ ಹತ್ತಿರ ಬಂದಿದ್ದೆ. ಅಷ್ಟರಲ್ಲಿ ಫೋನ್ ರಿಂಗಿಣಿಸಿತು.    ಅನಿರುದ್ಧನ ಮನೆಯಿಂದ..  ಆ  ಕಡೆಯಿಂದ ಹುಡುಗನದೇ ದನಿ.. ಈಗ ನನ್ನೊಳಗೆ ದಿವ್ಯ ಸಂಚಲನ... ಹೋದ ಜೀವ ಬಂದ ಹಾಗೆ..
  
           "ಮನೆಗೆ ಬಂದೆ ಸರ್.."
           "ಯಾಕಿಷ್ಟು ಲೇಟಾಯ್ತು? ನಡೆದೇ ಬಂದ್ರಾ?"
             " ತುಂಬಾ ದೂರ - ಆ ಸರ್ಕಲ್ ವರೆಗೆ ನಡೆದೆವು ಸರ್... ಅಮೇಲೊಂದು ರಿಕ್ಷಾ ಹತ್ತಿ ಬಂದೆವು.. ನಾನು ಇಲ್ಲೇ ಇಳಿದೆ.. ಅವರೆಲ್ಲರೂ ಮುಂದೆ ಹೋದರು.."
           ತುಸು ಸಮಾಧಾನ.. ಆದರೆ ಎಲ್ಲರೂ ಮನೆ ತಲುಪಿಯಾಗಿರಲಿಲ್ಲವಲ್ಲ... ನನ್ನ ಬೈಕ್ ಸವಾರಿ ಮುಂದುವರೆಯಿತು. ನಾನು ಆ ಮಕ್ಕಳ ಮನೆಗಳನ್ನು ಸಮೀಪಿಸುವುದರಲ್ಲಿದ್ದೆ. ಅಷ್ಟರಲ್ಲಿ ಕತ್ತಲಲ್ಲಿ ನಡೆದು ಸಾಗುತ್ತಿದ್ದ ಮಕ್ಕಳ‌ ಗುಂಪು ಕಾಣಿಸಿತು. ಸ್ಕೂಲ್ ಬ್ಯಾಗ್ ಹೊತ್ತು ಭರದಿಂದ ಸಾಗುತ್ತಿದ್ದ ಮಕ್ಕಳು ದಣಿದಂತೆ ಕಾಣಿಸಿದರು. ಆಗ ಸಮಯ 7.15.  ಅವರನ್ನು ಕಂಡು ನನ್ನ  ಮನಸ್ಸು ಚುರ್ರೆಂದಿತು. ಅವರಲ್ಲೂ ಇಬ್ಬರು ಕಮ್ಮಿಯಿದ್ದದ್ದು ಗಮನಕ್ಕೆ ಬಂತು. ಅವರಿಬ್ಬರ ಮನೆ ಮತ್ತೂ ದೂರದಲ್ಲಿದೆಯೆಂದೂ, ತುಸು ಹಿಂದೆ ಅವರಲ್ಲೊಬ್ಬರ ಮನೆಯವರ ಬೈಕನ್ನೇರಿದರೆಂದೂ ಉಳಿದ ಮಕ್ಕಳು ತಿಳಿಸಿದರು. ಆ ಮಕ್ಕಳಿಬ್ಬರ ಮನೆಗೆ ಫೋನಾಯಿಸಿದೆ. ಮಕ್ಕಳು ಮನೆ ತಲುಪಿದ್ದರಷ್ಟೆ. ಮನೆಯವರಿಗೆ ನಡೆದದ್ದನ್ನೆಲ್ಲ ತಿಳಿಸಿದೆ, ಕ್ಷಮೆಯಿರಲಿ ಎಂದೆ. ಅವರಿಬ್ಬರಿಗೆ ಕರೆ ಮಾಡಿಮುಗಿಸುವಷ್ಟರಲ್ಲಿ ಉಳಿದ ಮಕ್ಕಳೂ ಮನೆ ತಲುಪಿದ್ದರು. ಎಲ್ಲರ ಮನೆಗೂ ಕರೆ ಮಾಡಿ ಕತೆಯೆಲ್ಲವನ್ನೂ, ನಾನೊಬ್ಬನೇ ಅನುಭವಿಸಿದ ಟೆನ್ಶನನ್ನೂ ವಿವರಿಸಿ, ಕ್ಷಮೆ ಇರಲಿ ಎಂದು ತಿಳಿಸಿದ್ದೂ ಆಯಿತು. ಯಾರ ಮನೆಯವರಿಗೂ ನನ್ನ ಮೇಲೆ ಬೇಸರವೇನಾಗಿರಲಿಲ್ಲ, ಬದಲಿಗೆ ಮಾಸ್ಟ್ರಿಗೆ ಟೆನ್ಶನ್ ಕೊಟ್ಟಿದ್ದಕ್ಕೆ ಮಕ್ಕಳಿಗೇ ಕ್ಲಾಸ್ ತೆಗದುಕೊಂಡಿದ್ದರು. ಸ್ವಲ್ಪ ಹೊತ್ತಿನಲ್ಲಿ "Sorry.." ಹೇಳಲೆಂದು ಮಕ್ಕಳ ಕರೆಯೂ ಬರತೊಡಗಿತು. ನಿಜ, ಅವರು ಆಟೋದಲ್ಲಿ ಮನೆಗೆ ಬರಬಹುದಿತ್ತು, ಅಥವಾ ಬಸ್ಸಿಲ್ಲವೆಂದು ತಿಳಿದಾಗ ಅಲ್ಲೇ ಅಂಗಡಿಯವರಿಂದ ನನಗೋ, ಅವರ ಮನೆಯವರಿಗೋ ಫೋನಾಯಿಸಬಹುದಿತ್ತು. ಆದರವರು ಪಾದಯಾತ್ರೆಯ ಸಾಹಸವನ್ನೇ ಆಯ್ದುಕೊಂಡಿದ್ದರು. ಒಂದಿಬ್ಬರು ಆಟೋದಲ್ಲಿ ಹೋಗುವ ಸಲಹೆ ಕೊಟ್ಟಿದ್ದರೂ ಉಳಿದವರು ಬೇಡವೆಂದಿದ್ದರಂತೆ.  ನಡಿಗೆಯ ನಡುವಲ್ಲಿ ಅವರು ಎರಡು ಬಾರಿ ಖಾಲಿ ಹೋಗುತ್ತಿದ್ದ ರಿಕ್ಷಾದಲ್ಲಿ  ಸ್ವಲ್ಪ ದೂರ ಲಿಫ್ಟ್ ಕೇಳಿ, ನಡಿಗೆಯ ದೂರವನ್ನು ಕಡಿಮೆ ಮಾಡಿಕೊಂಡಿದ್ದರಷ್ಟೆ.

           ನಾನೀಗ ಸಂಪೂರ್ಣ ನಿರಾಳನಾಗಿದ್ದೆ. ಜೊತೆಗೆ ಯೋಚಿಸಲೂ ತೊಡಗಿದೆ. ಮಕ್ಕಳ ಮನೆಯವರು ಈಗೇನೋ ನನ್ನ ಪ್ರಯತ್ನದ ಕುರಿತಾಗಿ ಅಭಿಮಾನವನ್ನೇ ಇಟ್ಟುಕೊಂಡಿದ್ದರು. ಅದೇ  ಸ್ವಲ್ಪ ಮೊದಲೇ ನಾನು  ವಿಷಯ ತಿಳಿಸಿದ್ದರೆ...? ಅವರ ಪರಿಸ್ಥಿತಿ ಹೇಗಿರುತ್ತಿತ್ತು? ನಾನಂತೂ ಅವರ ಪಾಲಿಗೆ ವಿಲನ್ ಆಗಿಯೇ ಕಾಣಿಸುತ್ತಿದ್ದೆ. ಅಷ್ಟಕ್ಕೂ ಮಕ್ಕಳನ್ನು ಶಾಲಾ ಅವಧಿಯ ನಂತರವೂ ನಿಲ್ಲಿಸಿಕೊಂಡ ಮೇಲೆ ಅವರಿಗೆ ಮನೆ ತಲುಪಿಸುವ ಜವಾಬ್ದಾರಿಯೂ ನನ್ನದೇ ಅಲ್ಲವೇ?
           
           ಮರುದಿನ  ಆ ಹುಡುಗರನ್ನೆಲ್ಲಾ ಕರೆದು ನಡೆದ ವಿಷಯವನ್ನೆಲ್ಲಾ ಸಂಪೂರ್ಣ ವಿಚಾರಿಸಿದೆ. ನನ್ನ ಪಾಡನ್ನೂ ವಿವರಿಸಿದೆ‌. "ಏನೇ ಆಗಿರಲಿ, ನಿಮ್ಮ ಪಾಲಿಗಂತೂ ಇದು ಒಂದು ವಿಶೇಷ ಅನುಭವ. ಬಹಳ ವರ್ಷದ ನಂತರವೂ ನಿಮಗಿದು ನೆನಪಿರುತ್ತದೆ." ಎಂದೆ.

          "ನೀವು ನಮಗಿವತ್ತು ತುಂಬಾ ಬಯ್ಯುತ್ತೀರಿ ಅಂದುಕೊಂಡಿದ್ದೆವು ಸರ್" ಎಂದನೊಬ್ಬ ಹುಡುಗ.

 ‌‌‌‌‌‌‌          "ಇದು ನಿಮಗೆ ಮಾತ್ರವಲ್ಲ, ನನಗೂ ಒಂದು ವಿಶೇಷ ಅನುಭವ.." ಎಂದು ನಾನು ನಸುನಕ್ಕೆ.
          ‌
               - ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

Sharing Is Caring:

Leave a Comment