ಆಗಸ್ಟ್ 10 ಜಂತು ಹುಳು ನಿವಾರಣಾ ದಿನ ಸಂಪೂರ್ಣ ಮಾಹಿತಿ ಇಲ್ಲಿದೆ

IMG 20220809 WA0023
WhatsApp Group Join Now
Telegram Group Join Now

ಪ್ರತೀ ವರ್ಷ, ವರ್ಷಕ್ಕೆ ಎರಡು ಬಾರಿ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ. ಹೊಟ್ಟೆ ಹುಳಗಳ ನಿರ್ಮೂಲನೆಗಾಗಿ ಸರಕಾರವು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನು ಆಚರಿಸುತ್ತದೆ.

IMG 20220809 WA0025

ಈ ವರ್ಷ ಆಗಸ್ಟ್‌ 10ರಂದು 1ರಿಂದ 19 ವರ್ಷ ವಯಸ್ಸಿನ ಎಲ್ಲ ಮಕ್ಕಳು ಹಾಗೂ ಹದಿಹರೆಯದವರಿಗೆ ಆರೋಗ್ಯ ಕಾರ್ಯಕರ್ತರು, ಶಾಲಾ ಶಿಕ್ಷಕರು ಮತ್ತುಅಂಗನವಾಡಿ ಕಾರ್ಯಕರ್ತೆಯರು ಜಂತು ಹುಳ ನಿವಾರಣೆಗಾಗಿ, ವಯಸ್ಸಿಗೆ ಅನುಗುಣವಾಗಿ ಸೂಕ್ತ ಪ್ರಮಾಣದ ಡೋಸೇಜ್‌ ಪ್ರಕಾರ ಅಲ್ಬೆಂಡಜೋಲ್‌ (Albendazole) ಮಾತ್ರೆಯನ್ನು ನೀಡಲಿದ್ದಾರೆ. ಜಂತುಹುಳುಗಳು ಮನುಷ್ಯರಲ್ಲಿ ಒಂದು ಪರೋಪ ಜೀವಿಯಾಗಿದ್ದು (Parasite), ಕರುಳಿನಲ್ಲಿ ನೆಲಸಿರುತ್ತವೆ. ಈ ಹುಳುಗಳಲ್ಲಿ ಜಂತುಹುಳು (Round worm), ಲಾಡಿ ಹುಳು (tape Worm), ಕೊಕ್ಕೆಹುಳು (Hook worm), ಚಿಲುಮಿ ಹುಳು (Pin worm) ಹಾಗೂ ಚಾಟಿ ಹುಳು (Wip worm) ಎಂಬ ವಿವಿಧ ಪ್ರಕಾರಗಳಿವೆ.

IMG 20220809 WA0022

ಜಂತುಹುಳುAncylostoma duodenale:


ಈ ತೆರನಾದ ಹುಳುಗಳಲ್ಲಿ ಹೆಣ್ಣು ಹುಳುವು ಸುಮಾರು 10 ರಿಂದ 14 ಸೆಂ.ಮೀ. ಉದ್ದವಿದ್ದು, 3 ರಿಂದ 4 ಮಿ.ಮೀ. ದಪ್ಪವಿರುತ್ತದೆ. ಗಂಡು ಹುಳುವು ಹೆಣ್ಣಿನ ಅರ್ಧದಷ್ಟು ಮಾತ್ರ ಉದ್ದ ಹಾಗೂ ದಪ್ಪವಿರುತ್ತದೆ. ಹುಳಕ್ಕೆ ಪಳಪಳನೆ ಹೊಳೆಯುವ ಮಾಸಲು ಬಿಳುಪು ಬಣ್ಣ ಇರುತ್ತದೆ. ಸೋಂಕು ಪೀಡಿತ ಮಗು ಬಯಲಿನಲ್ಲಿ ಮಲ ವಿಸರ್ಜನೆ ಮಾಡಿದರೆ ಮಣ್ಣು ಕಲುಷಿತಗೊಳ್ಳುತ್ತದೆ. ಮಲದಲ್ಲಿರುವ ಮೊಟ್ಟೆಗಳು ಲಾರ್ವಾಗಳಾಗಿ ಬೆಳೆಯುತ್ತವೆ. ಇತರರು ಅಂತಹ ಕಲುಷಿತ ಮಣ್ಣಿನಲ್ಲಿ ಕೆಲಸ/ ಆಡಿದ ಅನಂತರ ಕೊಳಕು ಕೈಗಳಿಂದ ಆಹಾರ ಸೇವಿಸುವುದರಿಂದ ಮೊಟ್ಟೆಗಳು/ಲಾರ್ವಾಗಳು ಅವರ ಕರುಳಿನೊಳಕ್ಕೆ ಹೋಗಿ ಅನಂತರ ವಯಸ್ಕ ಹುಳುಗಳಾಗಿ ಬೆಳೆಯುತ್ತವೆ. ಹೊಟ್ಟೆ ಸೇರಿದ ಮೊಟ್ಟೆಗಳು ಒಡೆದು ಮರಿಗಳಾಗಿ ರಕ್ತ ಪ್ರವಾಹವನ್ನು ಸೇರುತ್ತವೆ. ಆಗ ಇಡೀ ಮೈಯಲ್ಲಿ ತುರಿಕೆ ಉಂಟಾಗಬಹುದು. ಮರಿಗಳು ಹಾಗೆಯೇ ಶ್ವಾಸಕೋಶ ಸೇರಿ ಒಣಕೆಮ್ಮು ಮತ್ತು ನ್ಯುಮೋನಿಯಾ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕರುಳಿನಲ್ಲಿ ಬೆಳೆಯು ತ್ತಿರುವ ಮರಿಗಳು ಬೆಳೆದು ಹೊಟ್ಟೆನೋವು, ಅಜೀರ್ಣ, ನಿಶ್ಶಕ್ತಿ ಉಂಟು ಮಾಡಬಹುದು. ಈ ಹುಳುಗಳಿಗೆ ಚಲನಾ ಸಾಮರ್ಥ್ಯ ಇರುವುದರಿಂದ ಅದು ಪಿತ್ತಕೋಶ, ಪಿತ್ತನಾಳಗಳನ್ನೂ ಆಕ್ರಮಿಸಿ ಪಿತ್ತರಸ ಹರಿಯುವಿಕೆಗೆ ಅಡಚಣೆ ಮಾಡಿ ಕಾಮಾಲೆಯನ್ನು ಉಂಟು ಮಾಡಬಹುದು. ಮರಿಗಳು ರಕ್ತನಾಳಗಳ ಮೂಲಕ ಮಿದುಳನ್ನು ತಲುಪಿದರೆ ಮಕ್ಕಳಲ್ಲಿ ನರಸಂಬಂಧ ತೊಂದರೆಗಳು ಕಂಡುಬರುವುದು.

IMG 20220809 WA0021


ಲಾಡಿ ಹುಳು:

ಈ ತೆರೆನಾದ ಹುಳುಗಳು ಕರುಳಿನಲ್ಲಿ ಸುಮಾರು 5 ರಿಂದ 10 ಮೀ. ಉದ್ದದಷ್ಟು ಬೆಳೆಯುತ್ತವೆ. ಈ ಹುಳುಗಳು ಬಿಳಿ ಅಥವಾ ಅರೆ ಪಾರದರ್ಶಕ ಬಣ್ಣ ಹೊಂದಿರುತ್ತದೆ. ಮಾಂಸವನ್ನು ಸರಿಯಾಗಿ ಬೇಯಿಸದೆ ಸೇವನೆ ಮಾಡುವವರ ಹೊಟ್ಟೆಯಲ್ಲಿ ಲಾಡಿ ಹುಳು ಸೇರಿಕೊಳ್ಳುತ್ತದೆ. ಇದರಿಂದ ಅಪೌಷ್ಟಿಕತೆ, ಭೇದಿ, ಹೊಟ್ಟೆನೋವು ಉಂಟಾಗುತ್ತದೆ. ರಕ್ತನಾಳಗಳ ಮೂಲಕ ತತ್ತಿ ತುಂಬಿದ ಗಂಟುಗಳು (cyst) ಮಿದುಳನ್ನು ಸೇರಿದರೆ ಅಪಸ್ಮಾರ ಹಾಗೂ ನರ ಸಂಬಂಧಿ ತೊಂದರೆಗಳು ಕೂಡ ಉಂಟಾಗಬಹುದು.

IMG 20220809 WA0026

ಕೊಕ್ಕೆ ಹುಳು Ancylostoma duodenale :

ಈ ತೆರನಾದ ಹುಳುಗಳು ಸುಮಾರು ಒಂದು ಸೆಂ.ಮೀ. ಉದ್ದವಿದ್ದು, ಬೂದು ಬಿಳಿಬಣ್ಣ ಹೊಂದಿರುತ್ತವೆ. ಮನುಷ್ಯನು ಬರಿಗಾಲಿನಲ್ಲಿ ನಡೆಯುವುದರಿಂದ ಕೊಕ್ಕೆ ಮರಿಹುಳಗಳು ಕಾಲಿನ ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ರಕ್ತ ಪ್ರವಾಹದ ಮೂಲಕ ಕೆಲವು ದಿನಗಳಲ್ಲಿ ಶ್ವಾಸಕೋಶ ಸೇರುತ್ತದೆ. ಇದರಿಂದ ಒಣಕೆಮ್ಮು ಆರಂಭವಾಗಬಹುದು, ಕೆಲವೊಮ್ಮೆ ಕೆಮ್ಮಿದಾಗ ರಕ್ತ ಬರಬಹುದು. ಮರಿಹುಳುಗಳು ಕೆಮ್ಮಿದಾಗ ಬಾಯಿಯ ಮೂಲಕ ಹೊರಬಂದು ಎಂಜಲು ನುಂಗಿದಾಗ ಹೊಟ್ಟೆಯನ್ನು ಸೇರುತ್ತವೆ. ಇದರಿಂದ ಹೊಟ್ಟೆ ನೋವು, ಭೇದಿ ಪ್ರಾರಂಭವಾಗಬಹುದು. ಕರುಳಿನ ಒಳಗೋಡೆಗೆ ಕಚ್ಚಿಕೊಂಡು ರಕ್ತಹೀರಿ ರಕ್ತಹೀನತೆ ಉಂಟುಮಾಡಬಲ್ಲದು. ಇದರಿಂದ ಅಂಥವರಲ್ಲಿ ನಿಶ್ಶಕ್ತಿ ಉಂಟಾಗುತ್ತದೆ. ವಯಸ್ಕರಲ್ಲಿ ದುಡಿಯುವ ಸಾಮರ್ಥ್ಯ ಕಡಿಮೆಯಾಗುತ್ತದೆ. ರಕ್ತಹೀನತೆಗೆ ಒಳಗಾದ ಗರ್ಭಿಣಿಯರಿಗೆ ಅಪೌಷ್ಟಿಕತೆ ಹೊಂದಿರುವ ಮಕ್ಕಳು ಜನಿಸುತ್ತಾರೆ. ಅಂತಹ ಮಕ್ಕಳು ಮುಂದೆ ಆಟ- ಪಾಠಗಳಲ್ಲಿ ಹಿಂದೆ ಬೀಳುವುದಲ್ಲದೆ ಅವರ ಬೆಳವಣಿಗೆಯೂ ಸಮರ್ಪಕವಾಗಿ ಆಗುವುದಿಲ್ಲ.

IMG 20220809 WA0027


ಚಿಲುಮೆ ಹುಳು :

ಈ ತೆರನಾದ ಹುಳುಗಳು ಸುಮಾರು 1 ಸೆಂ. ಮೀ. ಉದ್ದವಿದ್ದು ಬಿಳಿ ದಾರದಂತಿರುತ್ತವೆ. ಗುದದ್ವಾರದ ಹೊರಗಡೆ ಇವು ಸಾವಿರ ಮೊಟ್ಟೆಗಳನ್ನು ಇಡುತ್ತವೆ. ಆಗ ಅಲ್ಲಿ ಕೆರೆತ ಉಂಟಾಗುತ್ತದೆ. ಮಗುವಿಕೆ ತುರಿಕೆ ಉಂಟಾದಾಗ ಅದರ ಉಗುರಿಗೆ ಮೊಟ್ಟೆಗಳು ಅಂಟಿಕೊಂಡು ಮಗು ಸೇವಿಸುವ ಆಹಾರ ಮತ್ತಿತರರ ಪದಾರ್ಥಗಳಿಗೆ ಅಂಟಿಕೊಳ್ಳುತ್ತದೆ. ಹೀಗೆ ಅವು ಮತ್ತೆ ಮಗುವಿನ ಬಾಯಿ ಮತ್ತು ಬೇರೆಯವರ ಹೊಟ್ಟೆಯನ್ನು ಸೇರುತ್ತವೆ. ಇವು ಮಕ್ಕಳ ಗುದದಲ್ಲಿ ತುರಿಕೆ ಉಂಟುಮಾಡಿ ನಿದ್ದೆಗೆಡಿಸಬಹುದು.

IMG 20220809 WA0024


ಚಾಟಿ ಹುಳು :

ಈ ಹುಳು ಸುಮಾರು 3ರಿಂದ 5 ಸೆಂ.ಮೀ ಉದ್ದವಿದ್ದು, ಗುಲಾಬಿ ಅಥವಾ ಕಂದು ಬಣ್ಣ ಹೊಂದಿರುತ್ತದೆ. ಮಲ ಕಲುಷಿತ ಆಹಾರ-ನೀರು ಸೇವಿಸುವುದರಿಂದ ಹರಡುತ್ತದೆ. ಇದರಿಂದ ಭೇದಿ ಉಂಟಾಗಬಹುದು. ಕೆಲವು ಮಕ್ಕಳಲ್ಲಿ ಗುದನಾಳ ಕೆಳಸರಿತ (rectal prolapse) ಕೂಡ ಉಂಟಾಗಬಹುದು.

IMG 20220809 WA0019


ಹೊಟ್ಟೆ ಹುಳು ನಿವಾರಣ ಚಿಕಿತ್ಸೆ :

ಒಂದು ಡೋಸ್‌ ಅಲ್ಬೆಂಡಜೋಲ್‌ (400 ಎಂ.ಜಿ.) ಮಾತ್ರೆ ಮನುಷ್ಯನ ಕರುಳಿನಲ್ಲಿರುವ ಈ ಎಲ್ಲ ಹುಳುಗಳನ್ನು ನಿರ್ಮೂಲನೆ ಮಾಡುತ್ತದೆ. ಒಂದರಿಂದ ಎರಡು ವರ್ಷದ ಮಕ್ಕಳಿಗೆ ಕೇವಲ ಅರ್ಧ ಮಾತ್ರೆಯನ್ನು ನೀಡಬೇಕು ಹಾಗೂ ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಒಂದು ಪೂರ್ತಿ ಮಾತ್ರೆಯನ್ನು ನೀಡಬೇಕು. ಮೂರು ವರ್ಷದವರೆಗಿನ ಮಕ್ಕಳಿಗೆ ಮಾತ್ರೆಯನ್ನು ಪುಡಿ ಮಾಡಿ ಶುದ್ಧವಾದ ನೀರನಲ್ಲಿ ಸೇರಿಸಿ ಕುಡಿಸುವುದು. ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಈ ಮಾತ್ರೆಯನ್ನು ಚೀಪಿ ತಿನ್ನಿಸುವುದು.

IMG 20220809 WA0020

ಆಗಸ್ಟ್‌ 10ರಂದು ರಾಷ್ಟ್ರೀಯ ಜಂತುಹುಳ ನಿವಾರಣ ದಿನಾಚರಣೆಯ ಅಂಗವಾಗಿ ಈ ಮಾತ್ರೆಯನ್ನು ಮಕ್ಕಳು ಸೇವಿಸುವುದನ್ನು ಖಾತ್ರಿಗೊಳಿಸಲು ಶಾಲೆಯಲ್ಲಿ/ಅಂಗನವಾಡಿಯಲ್ಲಿ ಶಾಲಾ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಮ್ಮುಖದಲ್ಲಿ ಸೇವಿಸಬೇಕು. ಮನೆಗೆ ಕೊಂಡೊಯ್ದು ಈ ಮಾತ್ರೆಯನ್ನು ತಿನ್ನಲು ಅವಕಾಶ ಇರುವುದಿಲ್ಲ. ಒಂದು ವೇಳೆ ಆಗಸ್ಟ್‌ 10ರಂದು ಮಕ್ಕಳು ಮಾತ್ರೆ ತೆಗೆದುಕೊಳ್ಳದಿದ್ದರೆ ಅಂತಹ ಮಕ್ಕಳಿಗೆ ಆಗಸ್ಟ್‌ 17ರ ಮಾಪ್‌-ಅಪ್‌ ದಿನದಂದು ಮಾತ್ರೆಯನ್ನು ನೀಡಲಾಗುವುದು. ಈ ಮಾತ್ರೆಯನ್ನು ಖಾಲಿ ಹೊಟ್ಟೆಯಲ್ಲಿ ಕೂಡ ತೆಗೆದುಕೊಳ್ಳಬಹುದು.

IMG 20220809 WA0017

ಈ ಅಲ್ಬೆಂಡಜೋಲ್‌ ಮಾತ್ರೆ ಸಾಮಾನ್ಯವಾಗಿ ಕರುಳಿನಲ್ಲಿರುವ ಎಲ್ಲ ತರಹದ ಹುಳುಗಳನ್ನು ಸಾಯಿಸುತ್ತದೆ. ಸತ್ತ ಹುಳುಗಳು ಕರುಳಿನಲ್ಲಿ ಜೀರ್ಣಗೊಳ್ಳುವುದರಿಂದ ಚಿಕಿತ್ಸೆಯ ಅನಂತರ ಮಲದಲ್ಲಿ ಕಾಣಿಸಿಕೊಳ್ಳದಿರಬಹುದು. ಈ ಹುಳಗಳ ಚಿಕಿತ್ಸೆಗೆ ಇತರ ಮಾತ್ರೆಗಳು, ಔಷಧಗಳು ಕೂಡ ಲಭ್ಯವಿವೆ. ಮೆಬೆಂಡಜೋಲ್‌ ಎಂಬ ಮಾತ್ರೆ ಕೂಡ ಹುಳವನ್ನು ಕರುಳಿನೊಳಗೆ ನಾಶ ಮಾಡುತ್ತದೆ. ನಾಶವಾದ ಹುಳುಗಳು ಕರುಳಿನಲ್ಲಿ ಜೀರ್ಣಗೊಳ್ಳುವುದು ಹಾಗೂ ಮಲದಲ್ಲಿ ಕಾಣಿಸಿಕೊಳ್ಳದಿರಬಹುದು. ಇದಲ್ಲದೇ ಪೈಪರಝೀನ್‌ ಹಾಗೂ ಪೈರೆಂಟಲ್‌ ಪಾಮೋಯೇಟ್‌ ಎಂಬ ಮಾತ್ರೆಗಳು ಲಭ್ಯವಿದೆ. ಈ ಮಾತ್ರೆಗಳನ್ನು ಸೇವಿಸಿದರೆ ಕರುಳಿನಲ್ಲಿರುವ ಹುಳುಗಳು ನಿಸ್ತೇಜಗೊಂಡು ಮಲವಿಸರ್ಜನೆಯೊಂದಿಗೆ ಹೊರಬರುವ ಸಾಧ್ಯತೆಗಳಿರುತ್ತದೆ. ಈ ಎಲ್ಲ ಮಾತ್ರೆಗಳನ್ನು ವೈದ್ಯರ ಸಲಹೆಯಂತೆ/ಆರೋಗ್ಯ ಕಾರ್ಯಕರ್ತರ ಮಾರ್ಗದರ್ಶನದಲ್ಲಿ ಸೇವಿಸುವುದು.

IMG 20220809 WA0018

ಹುಳ ಬಾಧೆಯನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು :

  • ಬಯಲಿನಲ್ಲಿ ಮಲ ವಿಸರ್ಜನೆ ಮಾಡಬಾರದು, ಶೌಚಾಲಯವನ್ನೇ ಬಳಸಬೇಕು.
  • ಮಲ ವಿಸರ್ಜನೆಯ ಬಳಿಕ, ಆಹಾರ ತಯಾರಿಸುವ, ಸೇವಿಸುವ ಮೊದಲು ಕೈಗಳನ್ನು ಸ್ವತ್ಛವಾಗಿ ಸೋಪಿನಿಂದ ತೊಳೆಯಬೇಕು.
  • ಮನೆಯಿಂದ ಹೊರಗೆ ಪಾದರಕ್ಷೆಯನ್ನು ಧರಿಸಿಕೊಳ್ಳಬೇಕು.
  • ಮಾಂಸ ಪದಾರ್ಥಗಳನ್ನು ಸರಿಯಾಗಿ ಬೇಯಿಸಿ ಸೇವಿಸಬೇಕು. ಕೊಳಕು ಪ್ರದೇಶಗಳಲ್ಲಿ ಬೆಳೆದ ತರಕಾರಿಗಳನ್ನು ಚೆನ್ನಾಗಿ ತೊಳೆದು, ಬಳಿಕ ಸರಿಯಾಗಿ ಬೇಯಿಸಿ ಸೇವಿಸಬೇಕು.
  • ರೈತರು ಕೆಲಸ ಮಾಡುವಾಗ ಕೈ -ಕಾಲಿಗೆ ರಕ್ಷಾಗವಸು ಧರಿಸಬೇಕು.
  • ಮಗುವಿನ ಉಗುರುಗಳನ್ನು ನಿಯಮಿತವಾಗಿ ಕತ್ತರಿಸಿ ಯಾವಾಗಲೂ ಉದ್ದವಿಲ್ಲದಂತೆ ನೋಡಿಕೊಳ್ಳಬೇಕು.
IMG 20220809 WA0016

ಒಂದು ಸಲ ಈ ಮಾತ್ರೆ (ಅಲ್ಬೆಂಡಜೋಲ್‌) ಸೇವನೆಯ ಅನಂತರ ಕರುಳಿನಲ್ಲಿರುವ ಎಲ್ಲ ಹುಳುಗಳು ನಾಶಗೊಂಡರೂ ಮನುಷ್ಯನ ನಿರ್ಲಕ್ಷ್ಯದಿಂದ ಪುನಃ ಕಲುಷಿತ ಆಹಾರ, ನೀರು, ಚರ್ಮದ ಮೂಲಕ ಪುನಃ 8ರಿಂದ 10 ವಾರಗಳಲ್ಲಿ ಹೊಸ ಹುಳುಗಳು ಕರುಳಿನಲ್ಲಿ ಕಾಣಿಸಿಕೊಳ್ಳಬಹುದು. ಆದ್ದರಿಂದ ಪ್ರತೀ ಆರು ತಿಂಗಳಿಗೊಮ್ಮೆ ಹುಳ ನಿವಾರಣ ಮಾತ್ರೆಗಳನ್ನು ಸೇವಿಸುವುದು ಉತ್ತಮ.

WhatsApp Group Join Now
Telegram Group Join Now
Sharing Is Caring:

2 thoughts on “ಆಗಸ್ಟ್ 10 ಜಂತು ಹುಳು ನಿವಾರಣಾ ದಿನ ಸಂಪೂರ್ಣ ಮಾಹಿತಿ ಇಲ್ಲಿದೆ”

Leave a Comment