ಶಿಕ್ಷಕರ ಸಂಘದಿಂದ ಮಾನ್ಯ ಶಿಕ್ಷಣ ಸಚಿವರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

IMG 20220520 WA0036

ರಿಗೆ,
ಶ್ರೀ ಬಿ.ಸಿ ನಾಗೇಶ್
ಮಾನ್ಯ ಶಿಕ್ಷಣ ಸಚಿವರು
ಕರ್ನಾಟಕ ಸರ್ಕಾರ

ಮಾನ್ಯರೇ,

ವಿಷಯ: ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ,

 ಶಿಕ್ಷಕರ ಹಲವು ವರ್ಷಗಳ ಬೇಡಿಕೆಗಳಿಗೆ ಸ್ಪಂದಿಸಿ ಶಿಕ್ಷಕ ಸ್ನೇಹಿ ಸಚಿವರಾಗಿ ರಾಜ್ಯದ ಎಲ್ಲಾ ಶಿಕ್ಷಕರ ಮನ ಗೆದ್ದಿರುವ ತಮಗೆ ದಕ್ಷಿಣ ಕನ್ನಡ ಜಿಲ್ಲೆಗೆ ಆತ್ಮೀಯ ಸ್ವಾಗತವನ್ನು ಕೋರುತ್ತಾ ಸಮಸ್ತ ಶಿಕ್ಷಕರ ಪರವಾಗಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸುವಂತೆ ವಿನಮ್ರವಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.
 • 40 % ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸೇವಾಜೇಷ್ಠತೆಯೊಂದಿಗೆ ಜಿ.ಪಿ.ಟಿ ವೃಂದಕ್ಕೆ ಭಡ್ತಿ ನೀಡುವ ಪ್ರಕ್ರಿಯೆಯನ್ನು ಚಾಲ್ತಿಯಲ್ಲಿರುವ ಜಿ.ಪಿ.ಟಿ ಶಿಕ್ಷಕರ ನೇಮಕಾತಿಗೂ ಪೂರ್ವವೇ ಪೂರ್ತಿಗೊಳಿಸಿ ಪಿ.ಎಸ್.ಟಿ ಶಿಕ್ಷಕರಿಗೆ ನ್ಯಾಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿ.

IMG 20220520 WA0031
 • ಈಗಾಗಲೇ ಹಲವು ರಾಜ್ಯಗಳಲ್ಲಿ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದ್ದು ನಮ್ಮ ರಾಜ್ಯದಲ್ಲೂ ಸರಕಾರಿ ನೌಕರರಿಗೆ ಎನ್.ಪಿ.ಎಸ್. ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಮಾನ್ಯ ಮುಖ್ಯ ಮಂತ್ರಿಗಳಿಗೆ ಒತ್ತಾಯಿಸುವಂತೆ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.
 • ಹಲವು ವರುಷಗಳಿಂದ ವರ್ಗಾವಣೆಯಿಂದ ವಂಚಿತರಾಗಿ ಕುಟುಂಬ ವರ್ಗದಿಂದ ದೂರದಲ್ಲಿರುವ ಶಿಕ್ಷಕರಿಗೆ ಮಾನವೀಯ ದೃಷ್ಟಿಯಿಂದ ನ್ಯಾಯ ಒದಗಿಸುವ ನಿಟ್ಟಿನಲ್ಲಿ, ಒಂದು ಬಾರಿ ಬಯಸಿದ ಜಿಲ್ಲೆಗೆ ವರ್ಗಾವಣೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವುದು ಹಾಗೂ 25% ಗಿಂತ ಹೆಚ್ಚು ಖಾಲಿ ಹುದ್ದೆಗಳಿರುವ ತಾಲೂಕಿಗೆ ವಿಧಿಸಿರುವ ವರ್ಗಾವಣೆಯ ನಿರ್ಬಂಧವನ್ನು ಕೈಬಿಟ್ಟು ವರ್ಗಾವಣೆಯಲ್ಲಿ ಶಿಕ್ಷಕರಿಗೆ ಮುಕ್ತ ಅವಕಾಶ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ.
 • ಮುಖ್ಯ ಗುರುಗಳ ಕಾಲಮಿತಿ ಭಡ್ತಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿ ವೇತನ ವ್ಯತ್ಯಾಸವನ್ನು ಸರಿದೂಗಿಸಲು ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡುತ್ತಿದ್ದೇವೆ.

IMG 20220520 WA0032
 • ಗ್ಯಾಸ್ ಖರೀದಿಗಾಗಿ ಪ್ರಸ್ತುತ ಇರುವ ದರವು ಪ್ರತೀ ಮಗುವಿನ ಲೆಕ್ಕಾಚಾರದಂತೆ ನೋಡಿದರೆ ಕಿರಿಯ ಪ್ರಾಥಮಿಕ ಹಾಗೂ ಕಡಿಮೆ ಮಕ್ಕಳಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸಾಕಾಗುತ್ತಿಲ್ಲ. ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಗ್ಯಾಸ್ ಮತ್ತು ಇನ್ನಿತರ ವಸ್ತುಗಳ ಖರೀದಿಗೆ ನೀಡಲಾಗುತ್ತಿರುವ ಅನುದಾನವನ್ನು ಹೆಚ್ಚಿಸುವಂತೆ ಮನವಿ.
 • ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಧಿಯ ಬಳಕೆ ಕಡಿಮೆ ಇರುವುದರಿಂದ ಹಾಗೂ ವಿದ್ಯಾರ್ಥಿಗಳು ಗೋಧಿಯಿಂದ ಮಾಡಿದ ತಿಂಡಿಗಳನ್ನು ತಿನ್ನಲು ಹೆಚ್ಚಿನ ಆಸಕ್ತಿ ತೋರಿಸದೇ ಇರುವುದರಿಂದ, ಮುಂದಿನ ದಿನಗಳಲ್ಲಿ ಗೋಧಿಯ ಸರಬರಾಜು ನಿಲ್ಲಿಸುವ ಕುರಿತಂತೆ ಯೋಚಿಸುವುದು ಹಾಗೂ ಇಲ್ಲಿಯ ಆಹಾರ ಪದ್ಧತಿಯಾದ ಕುಚ್ಚಲಕ್ಕಿಯನ್ನು ಸರಬರಾಜು ಮಾಡಲು ಸೂಕ್ತ ಆದೇಶ ನೀಡುವುದರ ಮೂಲಕ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ.

IMG 20220520 WA0030
 • ಜಿಲ್ಲೆಯ ಹಲವು ಶಾಲೆಗಳಲ್ಲಿ ನೆಟ್ ವರ್ಕ್ ಸಮಸ್ಯೆಯಿದ್ದು ಆನ್ಲೈನ್ ಮಾಹಿತಿ ನೀಡಲು ಮತ್ತು ಆನ್ಲೈನ್ ಕಲಿಕೆಗೆ ತೊಂದರೆಯಾಗುತ್ತಿದೆ.ಆದುದರಿಂದ ನೆಟ್ವರ್ಕ್ ಸಮಸ್ಯೆ ಇರುವ ಶಾಲೆಗಳಿಗೆ ಬೂಸ್ಟರ್ ಅಳವಡಿಸುವುದರ ಮೂಲಕ ನೆಟ್ವರ್ಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ.
 • ಸರ್ಕಾರಿ ಶಾಲೆಗಳ ವಿದ್ಯುತ್ ಬಿಲ್ ಮತ್ತು ನೀರಿನ ಬಿಲ್ಲುಗಳನ್ನು ಪಂಚಾಯತ್ ವತಿಯಿಂದ ಭರಿಸಲು ಸೂಕ್ತ ಆದೇಶ ನೀಡುವಂತೆ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.
 • ಪ್ರತೀ ಹಿರಿಯ ಪ್ರಾಥಮಿಕ ಶಾಲೆಗೆ ಓರ್ವ ದೈಹಿಕ ಶಿಕ್ಷಕರನ್ನು ನೇಮಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳುವುದು ಮತ್ತು ನೂರಕ್ಕಿಂತ ಅಧಿಕ ಮಕ್ಕಳಿರುವ ಶಾಲೆಗಳಿಗೆ ದೈಹಿಕ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಲು ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡುತ್ತಿದ್ದೇವೆ.

IMG 20220520 WA0033
 • ಹಿಂದಿ ಶಿಕ್ಷಕರ ಹುದ್ದೆಗಳಿಗೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದು.
 • ಖಾಲಿ ಇರುವ ಸಿ.ಆರ್.ಪಿ., ಬಿ.ಆರ್.ಪಿ., ಇ.ಸಿ.ಒ. ಹುದ್ದೆಗಳಿಗೆ ಈಗಾಗಲೇ ಪರೀಕ್ಷೆ ಬರೆದಿರುವ ಶಿಕ್ಷಕರಿಗೆ ಮೆರಿಟ್ ಆಧಾರದಲ್ಲಿ ಸ್ಥಳ ಆಯ್ಕೆಗೆ ಎರಡನೇ ಅವಕಾಶ ಮಾಡಿಕೊಡುವಂತೆ ವಿನಂತಿ.
 • ಬಿ.ಐ.ಇ.ಆರ್.ಟಿ.ಗಳಿಗೆ ಈ ಹಿಂದೆ ನೀಡುತ್ತಿದ್ದಂತೆ ನಿಗದಿತ ಪ್ರಯಾಣ ಭತ್ಯೆ ಮತ್ತು ವಿಶೇಷ ಭತ್ಯೆ ನೀಡುವುದು. ಎಸ್.ಆರ್.ಪಿ. ಕೇಂದ್ರಗಳ ನಿರ್ವಹಣೆಗೆ ಪ್ರತ್ಯೇಕ ಅನುದಾನ ಒದಗಿಸುವುದು. ಪ್ರೌಢ ಬಿ.ಐ.ಇ.ಆರ್.ಟಿ. ಖಾಲಿ ಹುದ್ದೆಗಳಿಗೆ ವಿದ್ಯಾರ್ಹತೆ ಇರುವ ಪ್ರಾಥಮಿಕ ಬಿ.ಐ.ಇ.ಆರ್.ಟಿ.ಗಳಿಗೆ ಭಡ್ತಿ ನೀಡಲು ಕ್ರಮ ಕೈಗೊಳ್ಳುವಂತೆ ವಿನಂತಿ.
 • ಶಾಲಾ ಪ್ರಾರಂಭದಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತಾ, ಹೆಚ್ಚುವರಿಯಾಗಿ ಖಾಲಿ ಇರುವ ಹುದ್ದೆಗಳಿಗೆ ಎರಡನೇ ಹಂತದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಲು ಅವಕಾಶ ಮಾಡಿಕೊಡುವಂತೆ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.
 • 2007, 2008 ಹಾಗೂ ಬೇರೆ ಬೇರೆ ಅವಧಿಯಲ್ಲಿ ನೇಮಕವಾದ ಶಿಕ್ಷಕರ ಮೂಲ ವೇತನಕ್ಕೆ ಸಂಬಂಧಿಸಿದಂತೆ ಜಿಲ್ಲಾವಾರು ವ್ಯತ್ಯಾಸವಿದ್ದು ವೇತನ ವ್ಯತ್ಯಾಸವನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ.
 • ನಮ್ಮ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬೀಳುತ್ತಿದ್ದು, ಜಿಲ್ಲೆಯ ಹಲವು ಶಾಲೆಗಳು ಶಿಥಿಲಾವಸ್ಥೆಯಲ್ಲಿ ಇರುವುದರಿಂದ, ಸುರಕ್ಷತೆಯ ದೃಷ್ಟಿಯಿಂದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ವಿಶೇಷ ಅನುದಾನವನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.
 • ಬೇಸಿಗೆ ರಜಾ ಅವಧಿಯಲ್ಲಿ ಶಾಲೆಗಳು ಪ್ರಾರಂಭವಾಗಿರುವುದರಿಂದ ನಿಯಮಾನುಸಾರ ರಜಾ ಅವಧಿಯ ಕರ್ತವ್ಯಕ್ಕೆ ಶಿಕ್ಷಕರಿಗೆ ಇ.ಎಲ್. ನೀಡಲು ಆದೇಶ ಹೊರಡಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ.

IMG 20220520 WA0035
 • ನೂತನ ತಾಲೂಕು ಕಡಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಪ್ರಾರಂಭಿಸಲು ಈಗಾಗಲೇ ಹೊರಡಿಸುವ ಆದೇಶದನ್ವಯ ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ.
 • 2022-23ನೇ ಸಾಲಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಗತ್ಯತೆ/ಹೆಚ್ಚುವರಿ ಹುದ್ದೆಗಳ ಗುರುತಿಸುವಿಕೆ ಹಾಗೂ ಮರುಹೊಂದಾಣಿಕೆ ಪ್ರಕ್ರಿಯೆಯಗಳನ್ನು ಅನುಷ್ಠಾನಗೊಳಿಸುವಾಗ ಹೆಚ್ಚುವರಿ ಶಿಕ್ಷಕರಿಗೆ ತೊಂದರೆಯಾಗದಂತೆ ತಾಲೂಕಿನ ಒಳಗಡೆ ಅವಕಾಶ ನೀಡುವಂತೆ ಮನವಿ.
 • ಆಂಗ್ಲ ಮಾಧ್ಯಮ ತರಗತಿಗಳಿರುವ ಶಾಲೆಗಳಿಗೆ ಹೆಚ್ಚುವರಿ ಅತಿಥಿ ಶಿಕ್ಷಕರನ್ನು ಒದಗಿಸಲು ಅವಕಾಶ ಮಾಡಿಕೊಡುವುದು ಮತ್ತು ಹೆಚ್ಚುವರಿ ಕೊಠಡಿ ಅಗತ್ಯವಿರುವುದರಿಂದ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಸೂಕ್ತ ಅನುದಾನ ಒದಗಿಸಿಕೊಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ.
 • ಪ್ರಭಾರ ಮುಖ್ಯ ಗುರುಗಳಿಗೆ ಪ್ರಭಾರ ಭತ್ಯೆಯನ್ನು ನೀಡಲು ಸೂಕ್ತ ಆದೇಶ ಹೊರಡಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ.

Sharing Is Caring:

Leave a Comment