ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಆವರಣದಲ್ಲಿ ಇನ್ಮುಂದೆ ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ ಹಾಗೂ ದೂರದರ್ಶನ ಧಾರಾವಾಹಿಗಳ ಚಿತ್ರೀಕರಣ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿ ಕಡಕ್ ಸುತ್ತೋಲೆ ಹೊರಡಿಸಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಕೋರಿ ನಿರ್ಮಾಪಕರು ಮತ್ತು ನಿರ್ದೇಶಕರು ಇಲಾಖೆಗೆ ನಿರಂತರವಾಗಿ ಪ್ರಸ್ತಾವನೆಗಳನ್ನು ಸಲ್ಲಿಸುತ್ತಿದ್ದರು. ಆದರೆ, ವಿದ್ಯಾರ್ಥಿಗಳ ಸುರಕ್ಷತೆ, ಕಲಿಕಾ ಪರಿಸರ ಹಾಗೂ ಭದ್ರತಾ ಅಪಾಯಗಳನ್ನು ಪರಿಗಣಿಸಿ ಇಲಾಖೆಯು ಈ ಮಹತ್ವದ ತೀರ್ಮಾನ ಕೈಗೊಂಡಿದೆ.
ನಿಷೇಧಕ್ಕೆ ಮುಖ್ಯ 6 ಕಾರಣಗಳು:
- ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಗೌಪ್ಯತೆ
ಶಾಲೆಯಲ್ಲಿನ ಮಕ್ಕಳ ಸುರಕ್ಷತೆ ಮತ್ತು ಗೌಪ್ಯತೆಯನ್ನು ಕಾಪಾಡುವುದು ಶಾಲಾ ಮುಖ್ಯಸ್ಥರ ಪ್ರಮುಖ ಜವಾಬ್ದಾರಿಯಾಗಿದೆ. - ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆ
ಚಿತ್ರೀಕರಣದಿಂದಾಗಿ ಶಾಲೆಯ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅಡ್ಡಿಯುಂಟಾಗಿ, ವಿದ್ಯಾರ್ಥಿಗಳ ಕಲಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. - ಪೋಷಕರ ಆಕ್ಷೇಪ
ಕೆಲವು ಪೋಷಕರು ತಮ್ಮ ಮಕ್ಕಳ ಚಿತ್ರಗಳು ಅಥವಾ ವಿಡಿಯೋಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಲು ಒಪ್ಪಿಗೆ ನೀಡುವುದಿಲ್ಲ. - ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ
ಶೂಟಿಂಗ್ ಹಾವಳಿಯಿಂದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಹಾಗೂ ಮಾನಸಿಕ ಒತ್ತಡ ಉಂಟಾಗಬಹುದು. - ಬಿಗಿಯಾದ ಶೈಕ್ಷಣಿಕ ವೇಳಾಪಟ್ಟಿ
ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳು, ಅವಧಿಗಳು ಹಾಗೂ ರಜೆಗಳನ್ನು ನಿಗದಿಪಡಿಸಲಾಗಿದೆ. ವಾರ್ಷಿಕ ಕಾರ್ಯಸೂಚಿಯಲ್ಲಿ ಶೈಕ್ಷಣೇತರ ಚಟುವಟಿಕೆಗಳಿಗೆ ಯಾವುದೇ ರೀತಿಯ ಆಸ್ಪದ ಅಥವಾ ಸಮಯವನ್ನು ನೀಡಿರುವುದಿಲ್ಲ. - ಸುರಕ್ಷತೆ ಮತ್ತು ಶಾಲಾ ನಿಯಮಗಳು
ಶಾಲೆಯ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕಾಪಾಡಲು ಹಾಗೂ ನಿಯಮಗಳ ಪ್ರಕಾರ ಖಾಸಗಿ ಕಾರ್ಯಕ್ರಮಗಳಿಗೆ ಶಾಲಾ ಮೈದಾನ ಅಥವಾ ಆವರಣವನ್ನು ಬಳಸಲು ಅವಕಾಶವಿರುವುದಿಲ್ಲ.
ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ:
ಈ ಹಿಂದಿನ ನಿಯಮಗಳನ್ವಯವೂ ಶೈಕ್ಷಣೇತರ ಕಾರ್ಯಕ್ರಮಗಳಿಗೆ ಶಾಲಾ ಮೈದಾನ ಬಳಕೆಯನ್ನು ನಿಷೇಧಿಸಲಾಗಿತ್ತು. ಈಗ ಅದನ್ನು ಪುನರುಚ್ಚರಿಸಲಾಗಿದ್ದು, ಯಾವುದೇ ಕಾರಣಕ್ಕೂ ಶಾಲೆಯ ಒಳಗೆ ಅಥವಾ ಆವರಣದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಬಾರದು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಾಲ್ಕರ್ ಅವರು ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.