ಪುತ್ತೂರಿನ ಮಾಲೆ ತ್ತೋಡಿ ತಿಮ್ಮಪ್ಪ ಮೇಷ್ಟ್ರು ನಮಗೆಲ್ಲ ಮಾದರಿಯಾಗುತ್ತಾರೆ. ವಿವರಕ್ಕಾಗಿ ಈ ಲೇಖನ ಒಮ್ಮೆ ಓದಿ ನೋಡಿ

ಪುತ್ತೂರಿನ ಹಳ್ಳಿ ಶಾಲೆಗಳಲ್ಲಿ ಒಂದಾದ ಮಾಲೆತ್ತೋಡಿ ಎನ್ನುವ ಊರಿನ ಶಿಕ್ಷಕರಾದ ಶ್ರೀ ತಿಮ್ಮಪ್ಪ ಎನ್ನುವ ಶಿಕ್ಷಕರ ಶೈಕ್ಷಣಿಕ ಚಟುವಟಿಕೆಗಳ ಕುರಿತು Kpsc ಕೆಯ್ಯೂರು ಶಾಲೆಯ ಶಿಕ್ಷಕಿ ಜೆಸ್ಸಿ ಕೆ ಎ ಫೇಸ್ಬುಕ್ಕಿನಲ್ಲಿ ಬರೆದಿರುವ ಲೇಖನ ಇಲ್ಲಿದೆ ಒಮ್ಮೆ ಓದಿ ನೋಡಿ

IMG 20210520 WA0052 minIMG 20210520 WA0051 min

ಸ್ನೇಹಿತರೇ ದಯವಿಟ್ಟು ನನ್ನ ಈ ಪೋಸ್ಟನ್ನು ನೀವು ಓದಲೇಬೇಕು.

IMG 20210417 WA0010 min

ಎಸ್ ಎಸ್ ಎಲ್ ಸಿ ಎರಡನೇ ರೂಪಣಾತ್ಮಕ ಮೌಲ್ಯಮಾಪನದ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದೆವು. ಆಂಗ್ಲ ಭಾಷೆಯ ವಿಷಯ ಹಾಗಿರಲಿ ನಿರಂತರ ಹತ್ತು ವರ್ಷಗಳ ಕಾಲ ತಾವು ಕಲಿತ ಕನ್ನಡದಲ್ಲೂ ಶುದ್ಧವಾಗಿ, ಸುಲಲಿತವಾಗಿ, ನಿರರ್ಗಳವಾಗಿ ಮಾತನಾಡಲು, ತಪ್ಪಿಲ್ಲದೇ ಸರಾಗವಾಗಿ ಸ್ಪಷ್ಟವಾಗಿ ಬರೆಯಲು ಮಕ್ಕಳು ಕಷ್ಟಪಡುತ್ತಿರುವ ಬಗ್ಗೆ ನಮ್ಮ ಚರ್ಚೆ ಹೊರಳಿತು. ಪದಗಳ ಅರ್ಥ ತಿಳಿಯದೇ ಅಸಂಬದ್ಧವಾಗಿ ಉತ್ತರಿಸುವ ಅವರ ರೀತಿ ನಮ್ಮಲ್ಲಿ ಭ್ರಮನಿರಸನ ಉಂಟುಮಾಡಿತೆಂಬುದು ಸುಳ್ಳಲ್ಲ. ನಮ್ಮಲ್ಲಿ ಪ್ರತಿಯೊಬ್ಬ ಶಿಕ್ಷಕರೂ ಪ್ರಾಮಾಣಿಕವಾಗಿ ದುಡಿಯುವವರು. ಉತ್ತಮ ಫಲಿತಾಂಶಕ್ಕಾಗಿ ದಿನವಿಡೀ ಹೆಣಗುತ್ತಿರುವವರು. ಸಹಜವಾಗಿ ಭಾಷೆಯ ಕುರಿತಾದ ಕಳಕಳಿ ಚರ್ಚೆಗೆ ಹೊರಳಿತು. ಮಕ್ಕಳ ಈ ಶಬ್ದ ಭಂಡಾರ ಕುಸಿತಕ್ಕೆ, ಭಾಷಾ ದಾರಿದ್ರ್ಯಕ್ಕೆ ಕಾರಣವೇನು ಎಂದು ಚಿಂತಿಸುತ್ತಿರಬೇಕಾದರೆ ನಮ್ಮ ಮುಖ್ಯ ಶಿಕ್ಷಕರು ಅವರಿಗೆ ಪರಿಚಿತರಾದ ಒಬ್ಬರು ಶಿಕ್ಷಕರ ಕುರಿತು ಹೇಳಿದರು. ಅವರ ಬಗ್ಗೆ ನಾವು ಈ ಮೊದಲು ಕೇಳಿದ್ದೆವು. ಒಂದನೇಯಿಂದ ಐದರವರೆಗಿನ ತರಗತಿಗಳಿರುವ ಕೇವಲ ಮೂವತ್ತೆರಡು (ಪ್ರಸಕ್ತ ವರ್ಷದಲ್ಲಿ) ವಿದ್ಯಾರ್ಥಿಗಳನ್ನಷ್ಟೇ ಹೊಂದಿರುವ, ಕುಗ್ರಾಮವಾದ “ಮಾಲೆತ್ತೋಡಿ” ಎಂಬಲ್ಲಿರುವ ಈ ಶಾಲೆಯ ಮಕ್ಕಳು ಕನ್ನಡದಲ್ಲೂ ಇಂಗ್ಲಿಷಲ್ಲೂ ನಿರರ್ಗಳವಾಗಿ ಓದಬಲ್ಲರು, ಬರೆಯಬಲ್ಲರು, ಮಾತನಾಡಬಲ್ಲರು ಎಂದು ಕೇಳಿದ್ದೆವು. “ಇವತ್ತೇ ಸಂಜೆ ಶಾಲಾ ಅವಧಿಯ ನಂತರ ಅಲ್ಲಿಗೊಮ್ಮೆ ಹೋಗಿ ಅವರ ಬೋಧನಾವಿಧಾನದ ಕುರಿತು ನೇರವಾಗಿ ತಿಳಿದುಕೊಂಡು ಬರೋಣ” ಎಂದರು ನಮ್ಮ ವಿನೋದ್ ಸರ್. ನಮ್ಮಲ್ಲಿ ಎಲ್ಲಾ ಶಿಕ್ಷಕರೂ ಉತ್ಸಾಹಿಗಳೇ. ಹಾಗಾಗಿ ಖುಷಿಯಿಂದಲೇ ಹೊರಟೆವು. ಡಾಮರು ಹಾಕಿದ್ದ ಮಾರ್ಗವಾದರೂ ಡಾಮರು ಅಲ್ಲಲ್ಲಿ ಕಿತ್ತುಬಂದು ನರಕಸದೃಶ ಅನುಭವ ನೀಡಿದ ರಸ್ತೆಯಲ್ಲಿ ಮುಂದೆ ಸಾಗಿ, ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಸ್ವರ್ಗ ಸದೃಶವೆನಿಸಿರುವ ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ಮಾಲೆತ್ತೋಡಿ ತಲುಪಿದೆವು.

IMG 20210417 WA0005 min

ಶಿಕ್ಷಕ ತಿಮ್ಮಪ್ಪ ಕೊಡ್ಲಾಡಿ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿ ತಮ್ಮ ಕಚೇರಿಗೆ ಕರೆದೊಯ್ದರು.
ವಿನೋದ್ ಸರ್ ನಾವು ಬಂದ ಉದ್ದೇಶ ತಿಳಿಸಿ ಅವರ ಬೋಧನಾ ವಿಧಾನವನ್ನು ತುಸು ವಿವರಿಸುವಂತೆ ಹೇಳಿದಾಗ ತಿಮ್ಮಪ್ಪ ಕೊಡ್ಲಾಡಿಯವರು ತಾವೇ ಕೈಯಾರೆ ತಯಾರಿಸಿದ ಕಲಿಕೋಪಕರಣಗಳು English worksheet ಗಳು ಇತ್ಯಾದಿಗಳನ್ನು ತೋರಿಸಿ ತಮ್ಮ ಬೋಧನಾ ಕ್ರಮದ ಮಾಹಿತಿ ನೀಡಿದರು. ಬಳಿಕ ಅವರು ನಮ್ಮನ್ನು ತರಗತಿ ಕೋಣೆ ತೋರಿಸಲು ಕರೆದೊಯ್ದರು. ಅದೊಂದು ‘ಕಲಿಕಾ ಖಜಾನೆ’ ಎನ್ನಬಹುದು. ಚಿತ್ರ ನೋಡಿ ವಿವರಿಸಲು (Picture description) ಸಾಲು ಸಾಲು ಚಿತ್ರಗಳು ಗೋಡೆಯಲ್ಲಿದ್ದವು. ಹೆಚ್ಚಿನ (ಪೂರಕ) ಓದಿಗಾಗಿ ಪ್ರೌಢಶಾಲೆ ಹಾಗೂ ಕಾಲೇಜಿನ ಭಾಷಾ ಪಠ್ಯಪುಸ್ತಕಗಳು ಅಲ್ಲಿದ್ದವು. ಕನ್ನಡ ಹಾಗೂ ಆಂಗ್ಲ ಭಾಷೆಯ ಪುಸ್ತಕಗಳ ಗ್ರಂಥಾಲಯ ಆ ಕೊಠಡಿಯ ಒಂದು ಬದಿಯಲ್ಲಿತ್ತು. ವಿದ್ಯಾರ್ಥಿಗಳ ಕಲಿಕಾಪೂರಕ ಚಟುವಟಿಕೆಯ ರೂಪದಲ್ಲಿ ಓದಲು ತರಂಗ ಮುಂತಾದ ಹಳೆಯ ನಿಯತಕಾಲಿಕಗಳ ಸಂಗ್ರಹವೂ ಅಲ್ಲಿತ್ತು. ತಿಮ್ಮಪ್ಪ ಸರ್ ಸ್ವತಃ ರಚಿಸಿದ ಕತೆ, ಕವನಗಳ ಕಾರ್ಡ್ ಗಳೂ ಅಭ್ಯಾಸಹಾಳೆಗಳ ಗುಂಪಲ್ಲಿದ್ದವು‌. ಸಾಮರ್ಥ್ಯಾಧಾರಿತ ಕಲಿಕೆಗೆ ಏನೆಲ್ಲಾ ಬೇಕೋ ಅವೆಲ್ಲವೂ ಅಲ್ಲಿದ್ದವು.

IMG 20210417 WA0006 min


ಅವರ ಬೋಧನಾ ವಿಧಾನವನ್ನು ಶಿಕ್ಷಕರಾದವರು ಸ್ವತಃ ಹೋಗಿ ನೋಡಿದರಷ್ಟೇ ಪೂರ್ಣವಾಗಿ ಅರ್ಥವಾದೀತು. ಆದರೂ ಮಾತುಗಳಲ್ಲಿ ಅದನ್ನು ನಿಮಗೆ ತಿಳಿಸುವ ಪ್ರಯತ್ನ ನನ್ನದು. ಇಂಗ್ಲಿಷ್ ಕಲಿಕೆಯ ವಿಚಾರಕ್ಕೆ ಬರುವುದಾದರೆ ಮಗುವಿನ ಕಲಿಕೆಯನ್ನು ಸುಗಮಗೊಳಿಸಲು ಹೊರಗಡೆ ಗಿಡಗಳ ಮೇಲೆಲ್ಲಾ High frequency words ಗಳನ್ನು ತೋರಣದಂತೆ ನೇತು ಹಾಕಿರುತ್ತಾರೆ. ಮಗು ಅದನ್ನು ಪದೇಪದೇ ನೋಡುವಾಗ ಆ ಶಬ್ದಗಳ ಬಗ್ಗೆ ತಿಳಿದುಕೊಳ್ಳುತ್ತದೆ. ಅವನ್ನು ನೆನಪಿಡುತ್ತದೆ. ಉಳಿದ ಶಬ್ದಗಳನ್ನು ಕಲಿಸಲು Phonic words ಕ್ರಮವನ್ನು (Phonetics) ಬಳಸುತ್ತಾರೆ. Present continuous tense ನಲ್ಲಿ ಆಗ ನಡೆಯುತ್ತಿರುವ ಘಟನೆಗಳನ್ನು(on going actions) ನ್ನು ಪುಸ್ತಕದಲ್ಲಿ ಬರೆಯಲು ಹೇಳುತ್ತಾರೆ. ಹಲವು ದಿನ ಈ ದೈನಂದಿನ ಚಟುವಟಿಕೆಗಳನ್ನು ಈರೀತಿ ಪಟ್ಟಿ ಮಾಡಿದ ಮಗು ಸುಲಭವಾಗಿ, ತನಗರಿವಿಲ್ಲದೇ present continuous tense ನ್ನು ಬಳಸುತ್ತದೆ. ತಿಮ್ಮಪ್ಪ ಸರ್ ಅವರು ತಮ್ಮ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ವರದಿ ಮಾಡಲು ಮೂರು ರೀತಿಯಲ್ಲಿ ಕಲಿಸಿಕೊಡುತ್ತಾರೆ. ಪತ್ರಿಕಾ ವರದಿ, ಕಾರ್ಯಕ್ರಮದ ಸಾದಾವರದಿ, ಕಾರ್ಯಕ್ರಮದ highlights ಮಾತ್ರ ಹೇಳುವ ವರದಿ. ಪ್ರತಿ ಕಾರ್ಯಕ್ರಮಕ್ಕೂ ಈ ರೀತಿ ವರದಿ ಮಾಡುತ್ತಾ ಮಗು ತನಗರಿವಿಲ್ಲದೇ ಹಲವು ಭಾಷಾ ಸಾಮರ್ಥ್ಯಗಳನ್ನು ಪಡೆದುಕೊಂಡುಬಿಡುತ್ತದೆ. ಅವರು ವಿದ್ಯಾರ್ಥಿಗಳಿಗೆ ವಿರುದ್ದಾರ್ಥಕ ಪದಗಳನ್ನು ಕಲಿಸುವ ರೀತಿ ವಿಶೇಷವಾದದ್ದು. ಸಂತೋಷ- ಅಸಂತೋಷ ಅಷ್ಟೇ ಅಲ್ಲ. ‘ನನಗೆ ಹೊಸ ಬಟ್ಟೆ ಸಿಕ್ಕಿದರೆ ಸಂತೋಷವಾಗುತ್ತದೆ.

IMG 20210417 WA0009 min


ನನಗೆ ಹೊಸ ಬಟ್ಟೆ ಸಿಗದಿದ್ದರೆ ಅಸಂತೋಷವಾಗುತ್ತದೆ.’ ಹೀಗೆ ಕಲಿತಾಗ ಮಗು ಮರೆಯುವ ಪ್ರಮೇಯವೇ ಇಲ್ಲ. ಅವರ ಶಾಲೆಗೆ ದಾಖಲಾಗುವ ಮಗು ಮೂರು ನಾಲ್ಕು ತಿಂಗಳುಗಳಲ್ಲೇ ಸರಳವಾದ ಓದನ್ನು ಕನ್ನಡ ಹಾಗೂ ಆಂಗ್ಲದಲ್ಲಿ ಓದಲು ಶಕ್ತವಾಗುತ್ತದೆ. ಮುಂದಿನ ಹಂತದಲ್ಲಿ ಈ ಎರಡೂ ಭಾಷೆಗಳಲ್ಲಿ ಅದು ಮಾತನಾಡುತ್ತದೆ, ಬರೆಯುತ್ತದೆ. ಬಿಸ್ಕೆಟ್, ಚಾಕಲೇಟ್, ಅಗರ್ ಬತ್ತಿ, ಸೋಪ್ ಹೀಗೆ ಎಲ್ಲಾ ವಸ್ತುಗಳ wrapper ಗಳು ಇಲ್ಲಿ ಮಕ್ಕಳ ಓದಿಗಾಗಿ ಇರುವ ಕಲಿಕೋಪಕರಣಗಳಾಗುತ್ತವೆ. ಆಮಂತ್ರಣ ಪತ್ರಗಳು, ಪೋಸ್ಟ್ ಕಾರ್ಡ್ ಗಳು, ನೋಟೀಸುಗಳು ಕೂಡಾ ಓದುವ ವಸ್ತುಗಳೇ.‌
ನಾನು ಕಂಡುಕೊಂಡಂತೆ ಇಲ್ಲಿ ಕಲಿಕೆ ಒತ್ತಾಯದಿಂದ ಹೇರಲ್ಪಡದೇ ಸಹಜವಾಗಿ ಆಗುತ್ತದೆ. ಚಟುವಟಿಕೆ ಮೂಲಕ ತಾನು ಭಾಷೆ ಕಲಿಯುತ್ತಿದ್ದೇನೆ ಎಂದು ಮಗುವಿಗೆ ಗೊತ್ತೇ ಇರಲಿಕ್ಕಿಲ್ಲ. ಆದರೆ ಅದರ ಫಲ ಅವರ ಭಾಷಾಸಾಮರ್ಥ್ಯದಲ್ಲಿ ವ್ಯಕ್ತವಾಗುತ್ತದೆ. ನಿರರ್ಗಳ ಮಾತು ಹಾಗೂ ಬರಹ, ಉತ್ತಮ ಶಬ್ದಭಂಡಾರ ಅವರನ್ನು ಭಾಷೆಯಲ್ಲಿ ಪ್ರಬುದ್ಧರನ್ನಾಗಿಸುತ್ತದೆ. ಹತ್ತು key words ಕೊಟ್ಟು ಕನ್ನಡ ಅಥವಾ English ನಲ್ಲಿ ಕತೆ ಬರೆಯಲು ಹೇಳಿದರೆ ಸಮರ್ಪಕವಾದ ಲೇಖನ ಚಿಹ್ನೆಗಳೊಂದಿಗೆ ಅವರು ನಾಲ್ಕೈದು ಪುಟಗಳ ಕತೆ ರಚಿಸಬಲ್ಲರು. ಒಂದು ಚಿತ್ರ ನೋಡಿದರೆ ಆ ಬಗ್ಗೆ ನಾಲ್ಕೈದು ನಿಮಿಷ ಮಾತನಾಡಬಲ್ಲರು.
ತಿಮ್ಮಪ್ಪ ಕೊಡ್ಲಾಡಿಯವರ ನಿರಂತರ ಶ್ರಮ, ನಿಸ್ವಾರ್ಥ ದುಡಿಮೆ ಈ ಕಲಿಕೆಯ ಹಿಂದಿದೆ. ಈ ರೀತಿಯ ಕ್ರಮಗಳನ್ನು ಅಳವಡಿಸಬೇಕಾದರೆ ಬಹಳಷ್ಟು ಮಾನಸಿಕ ಸಿದ್ಧತೆ, ಆಲೋಚನೆ ಬೇಕು. ಕಲಿಕೋಪಕರಣಗಳ ತಯಾರಿ ಆಗಬೇಕು. ತೊಂದರೆ ತೆಗೆದುಕೊಳ್ಳುವ ಮನಸ್ಸು ಬೇಕು. ಅತ್ಯಧಿಕ ಬದ್ಧತೆ ಬೇಕು. ಆ ಕುಗ್ರಾಮದಲ್ಲಿ ಅವರು ಏನೂ ಮಾಡದಿದ್ದರೂ ಸಂಬಳ ಸಿಗುತ್ತಿತ್ತು. ಊರವರಾಗಲೀ ಅಧಿಕಾರಿಗಳಾಗಲೀ ತಂಟೆಗೆ ಹೋಗುವ ಸಾಧ್ಯತೆಯೂ ಕಡಿಮೆ. ಕನ್ನಡದಲ್ಲಿ ನಾವು ಕಲಿತ “ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವಾ…‌” ಎಂಬ ಪದ್ಯ ನನಗೆ ನೆನಪಾಗುತ್ತಿದೆ. “ಜಗಕೆ ಸಂತಸವೀವ ಘನನು ತಾನೆಂದೆಂಬ ಎಣಿಕೆ ತೋರದೇ, ಪರರ ಹೊಗಳಿಕೆಗೆ ಬಾಯ್ಬಿಡದೇ…” ತಿಮ್ಮಪ್ಪ ಸರ್ ತಮ್ಮ ಕಾಯಕವನ್ನು ಮುಂದುವರಿಸುತ್ತಿದ್ದಾರೆ.
ಅವರ ವಿದ್ಯಾರ್ಥಿಗಳ ಕೃತಿ ಸಂಪುಟ, ನೋಟ್ಸ್ ಪುಸ್ತಕಗಳನ್ನು , ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೋಡಿದ ನನಗೆ ಅಕ್ಷರಶಃ ಮಾತುಕಟ್ಟಿತು. ಹೃದಯ ತುಂಬಿತು. ಕಣ್ಣುಗಳೂ.

IMG 20210417 WA0008 min


ಕಠಿಣ ಪರಿಶ್ರಮಿ ನಾನೆಂಬ ಹೆಮ್ಮೆ ನನಗಿತ್ತು. ಆದರೆ ಇವರ ಮುಂದೆ ನಾನು ಅಸ್ತಿತ್ವವಿಲ್ಲದವಳು, ಬರಿಯ ಶೂನ್ಯ ಎಂದು ನನಗನಿಸಿತು. ನಾವು ಹೆಣಗಾಡಿ ಕಲಿಸುತ್ತಿದ್ದೇವೆ. ಮಕ್ಕಳಿಗೆ ಕಲಿಕೆಯನ್ನು ಹೇರುತ್ತಿದ್ದೇವೆ. ಅಲ್ಲಿಯ ಮಕ್ಕಳು ಸಹಜವಾಗಿ ದೈನಂದಿನ ಚಟುವಟಿಕೆಗಳ ಮೂಲಕ ತಮಗರಿವಿಲ್ಲದೇ ಕಲಿಯುತ್ತಿದ್ದಾರೆ. ಆದರೆ ಅವರ ಕಲಿಕೆ ಅತ್ಯಂತ ಪ್ರಭಾವಯುತವಾಗಿದೆ. ಸ್ಥಿರವಾಗಿದೆ. ಅವರ ಕಲಿಕೆಯಲ್ಲಿ ಮರೆವೆಂಬುದು ಇರಲು ಸಾಧ್ಯವೇ ಇಲ್ಲ. ಇದೇ ವ್ಯತ್ಯಾಸ. ಪ್ರೌಢಶಾಲಾ ಹಂತದಲ್ಲಿ ನಾವು ಈ ಪ್ರಯೋಗಗಳನ್ನು ಮಾಡುವುದು ಸ್ವಲ್ಪ ಕಷ್ಟ ಅನಿಸಬಹುದು. ಹತ್ತನೇ ತರಗತಿಗಂತೂ ಇದು ಯಾವುದೂ ನಡೆಯುವುದಿಲ್ಲ. ನಮ್ಮಲ್ಲಿ ಸಾಮರ್ಥ್ಯಗಳ ಪ್ರಸ್ತಾಪ ಇದೆಯಷ್ಟೇ. ಪರೀಕ್ಷೆಗಳು ಆ ರೀತಿ ಇಲ್ಲ. (ಆಂಶಿಕ ಬದಲಾವಣೆ ಆಗಿದೆ. ಪೂರ್ಣ ಪ್ರಮಾಣದಲ್ಲಿ ನಮ್ಮದು ಸಾಮರ್ಥ್ಯಾಧಾರಿತ ಮೌಲ್ಯಮಾಪನ ಅಲ್ಲ. ಸಾಮರ್ಥ್ಯಕ್ಕಿಂತ ಪಾಠದ ವಿಷಯಕ್ಕೆ (content) ಗೆ ಗಮನಕೊಡಬೇಕಾದ ಅನಿವಾರ್ಯತೆ ನಮಗಿದೆ. ಆದರೆ ತಿಮ್ಮಪ್ಪ ಕೊಡ್ಲಾಡಿಯವರನ್ನು ಭೇಟಿ ಮಾಡಿದ್ದಕ್ಕಾದರೂ ನಾನು ನನ್ನ ಬೋಧನಾ ವಿಧಾನವನ್ನು ಬದಲಿಸಿಕೊಳ್ಳಲೇಬೇಕು. ಅಥವಾ ಈಗಿನ ನನ್ನ ವಿಧಾನಕ್ಕೆ ಮತ್ತೊಂದಿಷ್ಟು ಸೇರಿಸಲೇಬೇಕು.

IMG 20210417 WA0007 min

ನಮ್ಮ ಶಿಕ್ಷಣ ಇಲಾಖೆ ಇವರಂತಹ ಸಂಪನ್ಮೂಲವನ್ನು ಬಳಸಿಕೊಳ್ಳಬೇಕು. ತರಬೇತಿಗಳ ನೆಪದಲ್ಲಿ ನಮ್ಮ ಕೆಲವು ದಿನಗಳನ್ನು (ಅಥವಾ ಅದರ ಬಹುಭಾಗವನ್ನು) ವೃಥಾ ಕಾಲಹರಣದಲ್ಲಿ ವ್ಯಯಮಾಡುವ ಬದಲು ಇಂತಹ ಅನುಕರಣೀಯ ಮಾದರಿಗಳನ್ನು ಪರಿಚಯಿಸಲೇಬೇಕು. ಎಂ.ಎ ಮಾಡಿದರೂ ಓದಲು, ಬರೆಯಲು, ಮಾತನಾಡಲು, ಅರ್ಜಿ ಬರೆಯಲು ತಿಳಿದಿಲ್ಲದ ಒಂದು ಜನಾಂಗ ಸೃಷ್ಟಿಯಾಗುತ್ತಿದ್ದರೆ ಅದಕ್ಕೆ ಸರಿಯಲ್ಲದ ಬೋಧನಾವಿಧಾನವೂ ಕಾರಣ. ಇಲಾಖೆ ಶಿಕ್ಷಕರ ಮೇಲಿನ ಬಿಗಿಹಿಡಿತ ಸಡಿಲಿಸಬೇಕು. ಚೌಕಟ್ಟಿನೊಳಗಿನ ಬೋಧನೆಯನ್ನೇ ಮಾಡಬೇಕೆಂಬ ಪಟ್ಟು ಸಡಿಲಿಸಬೇಕು.ಇಲಾಖೇತರ ಅನ್ಯ ಕಾರ್ಯಗಳಿಂದ ಶಿಕ್ಷಕರನ್ನು ಮುಕ್ತರಾಗಿಸಬೇಕು. ಬದಲಾವಣೆ ಖಂಡಿತಾ ಸಾಧ್ಯ. ಕೊಡ್ಲಾಡಿಯವರ ಕ್ರಮ ಅನುಸರಿಸಿದರೆ ನಮ್ಮಲ್ಲಿ ಕೇವಲ ಸ್ಕೋಲರ್ಸ್ ಅಷ್ಟೇ ಇರುತ್ತಾರೆ.
ಹೇಳಲು ಮರೆತೆ ಅವರು ತಮ್ಮ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬರುವ ಮಾನಸಿಕ ಸಾಮರ್ಥ್ಯ, ಸರಳ ಗಣಿತ, ಸಾಮಾನ್ಯ ಜ್ಞಾನ ಈ ವಿಷಯಗಳಲ್ಲೂ ಮಕ್ಕಳಿಗೆ ತಿಳುವಳಿಕೆ ನೀಡುತ್ತಿದ್ದಾರೆ.
ನಾನು ಕೇವಲ ಭಾಷೆಯ ಕುರಿತಷ್ಟೇ ಹೇಳಿದೆ. ಗಣಿತ, ಸಮಾಜ ವಿಜ್ಞಾನ, ವಿಜ್ಞಾನ ವಿಷಯಗಳಲ್ಲೂ ಅವರ ಬೋಧನಾ ವಿಧಾನ ವಿಶೇಷವಾದದ್ದು. ಪ್ರಯೋಗ ಮಾಡುವ, ಅದರ ರೆಕಾರ್ಡ್ ಬರೆಯುವ ಕ್ರಮ ಅದ್ಭುತವಾದದ್ದು. ಗಣಿತ ಹಾಗೂ ವಿಜ್ಞಾನದಲ್ಲಿ ಅವರು ಮುಖ್ಯ ಪರಿಕಲ್ಪನೆಗಳ ಹೆಸರುಗಳನ್ನು ಇಂಗ್ಲಿಷ್ ನಲ್ಲೂ ಹೇಳಿಕೊಡುತ್ತಾರೆ.

IMG 20210417 WA0004 min


ಮೂರನೇ ತರಗತಿಯ ವಿದ್ಯಾರ್ಥಿನಿ ಪುಟ್ಟ ವೈಷ್ಣವಿ (ಶಾಲಾ ಬಳಿಯೇ ಅವಳ ಮನೆಯಿದೆ) ಯನ್ನು ಸರ್ ಕರೆಸಿದರು. ಅವಳು ಒಂದು ಚಿತ್ರವನ್ನು ನೋಡಿ picture description ಮಾಡಿದ ರೀತಿ ಅದ್ಭುತವಾಗಿತ್ತು. ಅವಳು ಒಂದು ಕತೆಯನ್ನು ಸ್ಪಷ್ಟವಾಗಿ ಓದಿ ಕೇಳಿಸಿದಳು. ಅವಳ ಕನ್ನಡ ಹಾಗೂ ಇಂಗ್ಲೀಷ್ ನೋಟ್ ಬುಕ್ ಗಳನ್ನು ನೋಡಿದ ನಾವಂತೂ ಬಹಳ ಖುಷಿಪಟ್ಟೆವು. ಜೊತೆಗೆ ಆಶ್ಚರ್ಯ ಹಾಗೂ ಮೆಚ್ಚುಗೆಯ ಭಾವಗಳೂ ನಮ್ಮಲ್ಲಿ ಮೂಡಿದವು. 100 pages long book ನಲ್ಲಿ ಮುತ್ತು ಪೋಣಿಸಿದಂತೆ ಬರೆದಿದ್ದಳು. ಅವಳನ್ನು ಅಭಿನಂದಿಸಿ ಅಲ್ಲಿಂದ ಮರಳಿದೆವು.
ಸಾಧ್ಯವಿದ್ದರೆ ನನ್ನ ಶಿಕ್ಷಕ ಸ್ನೇಹಿತರೇ ದಯವಿಟ್ಟು ಈ ಶಾಲೆಗೆ ಭೇಟಿ ನೀಡಿ ಪ್ರತ್ಯಕ್ಷ ಅನುಭವ ಪಡೆದುಕೊಳ್ಳಿ. ಆ ಕ್ರಮವನ್ನು ಅನುಸರಿಸಲು ಪ್ರಯತ್ನಿಸಿ. ಶಿಕ್ಷಣ ಕ್ಷೇತ್ರದಲ್ಲಿ ಆಗ ನಾವು ಕ್ರಾಂತಿಯನ್ನೇ ಉಂಟುಮಾಡಬಹುದು.
ಅಭಿಮಾನದ ನಮನಗಳು ತಿಮ್ಮಪ್ಪ ಕೊಡ್ಲಾಡಿ ಸರ್. ????????????????????????????

Jessy Padumana…
Language English Teacher…

Sharing Is Caring:

Leave a Comment