ಸತ್ಪ್ರಜೆಗಳ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರು ಮಹತ್ವದ ಸ್ಥಾನವನ್ನು ಪಡೆದಿದ್ದಾರೆ ನಮ್ಮ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಶಿಕ್ಷಕರಿದ್ದರೆ ಸುಸಂಸ್ಕೃತ ಪ್ರಜೆಗಳನ್ನು ಹೊಂದಿದ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ. ಶಿಕ್ಷಕ ವೃತ್ತಿಯಲ್ಲಿ ತಮ್ಮ ಜೀವನವನ್ನು ಸವೆಸಿ ಈ ತಿಂಗಳು ನಿವೃತ್ತಿ ಹೊಂದುತ್ತಿರುವ ಶಿಕ್ಷಕರ ಪರಿಚಯವನ್ನು ನಿಮ್ಮ ಮುಂದಿಡುತ್ತಿದ್ದೇವೆ….
ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ
ಶ್ರೀಮತಿ ಜ್ಯೋತಿ ಎನ್. ಎಸ್
ಸ.ಉ. ಪ್ರಾ. ಶಾಲೆ ಕಿಲ್ಲೂರು ಬೆಳ್ತಂಗಡಿ ತಾಲೂಕು
ದಿನಾಂಕ 25.04.1961ರಲ್ಲಿ ಜನಿಸಿದ ಇವರು 24.01.1990 ರಲ್ಲಿ ಶಿಕ್ಷಣ ಕ್ಷೇತ್ರದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬೆಳ್ತಂಗಡಿ ತಾಲೂಕಿನ ಕರಿಯಾಲು, ನಾವೂರು, ಬೆಳ್ತಂಗಡಿ, ಕರ್ನೋಡಿ ಇಂದಬೆಟ್ಟು ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಸ.ಉ.ಪ್ರಾ.ಶಾಲೆ ಕಿಲ್ಲೂರು ಇಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯನ್ನು ಹೊಂದುತ್ತಿದ್ದಾರೆ. ಗೈಡ್ಸ್ ಶಿಕ್ಷಕಿಯಾಗಿರುವ ಇವರು ಅನೇಕ ಮಕ್ಕಳನ್ನು ಗೈಡ್ಸ್ ರ್ಯಾಲಿಯಲ್ಲಿ ಭಾಗವಹಿಸಲು ತಯಾರುಗೊಳಿಸಿದ್ದಾರೆ. ಯೋಗ ಶಿಕ್ಷಕಿಯಾಗಿ ಅನೇಕ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ಮಾರ್ಗದರ್ಶನ ನೀಡಿರುತ್ತಾರೆ. ಶಿಕ್ಷಕ ದಿನಾಚರಣೆಯ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿರುವ ಇವರು ತಮ್ಮ ಮಕ್ಕಳನ್ನು ಪ್ರತಿಭಾಕಾರಂಜಿ ಹಾಗೂ ವಿವಿಧ ಆಟೋಟಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ರುತ್ತಾರೆ. ಅನೇಕ ಕಾರ್ಯಕ್ರಮಗಳನ್ನು ತಮ್ಮ ಶಾಲೆಯಲ್ಲಿ ಸಂಘಟಿಸಿ ಯಶಸ್ವಿಯಾಗಿದ್ದಾರೆ. ಇವರಿಗೆ ನಿವೃತ್ತಿ ಜೀವನದ ಶುಭಾಶಯಗಳು.
ಶ್ರೀ ರೋಹಿತಾಶ್ವ
ಸ.ಉ.ಪ್ರಾ. ಶಾಲೆ ಪಿಲಾರು ಮಂಗಳೂರು
ಮಂಗಳೂರು ತಾಲೂಕಿನ ಸೋಮೇಶ್ವರದ ಉಚ್ಚಿಲದಲ್ಲಿ ಶ್ರೀ ಭವಾನಿಶಂಕರ ಮತ್ತು ಶ್ರೀಮತಿ ಸಬಿತಾ ಅವರ ಪುತ್ರರಾಗಿ ಜನಿಸಿದ ಇವರು ಸ್ಥಳೀಯ ಶಾಲೆಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಶಿಕ್ಷಕ ವೃತ್ತಿ ಶ್ರೇಷ್ಠವಾದುದು ಎಂದರಿತು ಶಿಕ್ಷಕನಾಗಬೇಕು ಎಂಬ ಮಹದಾಸೆಯಿಂದ ಟಿ.ಸಿ.ಹೆಚ್ ತರಬೇತಿಯನ್ನು ಪಡೆದು 06.01.1986 ರಲ್ಲಿ ಪುತ್ತೂರು ತಾಲೂಕಿನ ಕೊಣಾಲು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿದರು. ಮುಂದೆ ಮಂಜನಾಡಿ ಶಾಲೆಗೆ ವರ್ಗವಾಗಿ 1995 ರಿಂದ 2007 ರವರೆಗೆ ಸೇವೆ ಸಲ್ಲಿಸಿದರು. 2007 ರಲ್ಲಿ ಪಿಲಾರು ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕ ಸ್ನೇಹಿಯಾಗಿ ಈ ಜವಾಬ್ದಾರಿಯನ್ನು ನಿರ್ವಹಿಸಿದರು. ಶಿಕ್ಷಕ ದಿನಾಚರಣೆ,ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮಗಳು, ಪ್ರತಿಭಾ ಕಾರಂಜಿ, ಕಲೋತ್ಸವ ದಂತಹ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ ಅನುಭವವನ್ನು ಹೊಂದಿದವರು. ಪ್ರಸ್ತುತ ಸ.ಹಿ.ಪ್ರಾ. ಶಾಲೆ ಪಿಲಾರು ಇಲ್ಲಿ ಶಿಕ್ಷಕರಾಗಿರುವ ಇವರು ಈ ತಿಂಗಳು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಧರ್ಮಪತ್ನಿ ವಿಮಲಾ ಪುತ್ರ ಹಾಗೂ ಪುತ್ರಿಯೊಂದಿಗಿನ ತಮ್ಮ ನಿವೃತ್ತ ಜೀವನ ನೆಮ್ಮದಿಯಿಂದ ಕೂಡಿರಲಿ ಎನ್ನುವ ಹಾರೈಕೆ ನಮ್ಮದು.
ಶ್ರೀಮತಿ ಸುನಾಳಿನಿ
ದ.ಕ.ಜಿ.ಪಂ.ಉರ್ದು ಮಾದರಿ ಶಾಲೆ ಬಂದರು ಮಂಗಳೂರು
ಶ್ರೀಮತಿ ಸುನಾಳಿನಿ ಎಸ್ ಇವರು ದ.ಕ.ಜಿ.ಪಂ.ಉರ್ದು ಮಾದರಿ ಶಾಲೆ ಬಂದರು ಮಂಗಳೂರು ಉತ್ತರದಲ್ಲಿ ಸೇವೆ ಸಲ್ಲಿಸುತ್ತಿದ್ದು ಈ ತಿಂಗಳು ತಮ್ಮ ಸುದೀರ್ಘ 25 ವರ್ಷಗಳ ಸೇವಾ ಜೀವನದಿಂದ ನಿವೃತ್ತಿಯನ್ನು ಹೊಂದಲಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಕಿಯಾಗಿ, ಸಹ ಶಿಕ್ಷಕರೊಂದಿಗೆ ಸ್ನೇಹಮಯಿಯಾಗಿ ಕರ್ತವ್ಯ ಪೂರೈಸಿದ ತಮಗೆ ತಮ್ಮ ನಿವೃತ್ತಿ ಜೀವನದ ಶುಭಾಶಯಗಳು.
ಶ್ರೀಮತಿ ಶಶಿಪ್ರಭಾ ಬಾಯಿ
ಸ.ಹಿ.ಪ್ರಾ. ಶಾಲೆ ಬಡಗ ಎಕ್ಕಾರು ಮಂಗಳೂರು
ಸ.ಹಿ.ಪ್ರಾ ಶಾಲೆ ಚಿತ್ರಾಪು, ಮೇಲೆಕ್ಕಾರು, ಪಡುಪೆರಾರ, ಕಿನ್ನಿಕಂಬಳ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಈಗ ಬಡಗ ಎಕ್ಕಾರು ಮಂಗಳೂರು ಉತ್ತರದಲ್ಲಿ 39 ವರ್ಷಗಳ ತಮ್ಮ ಸೇವೆಯಿಂದ ಈ ತಿಂಗಳು ನಿವೃತ್ತಿಯಾಗುತ್ತಿದ್ದಾರೆ. ತಮ್ಮ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಸುಖೀ ಜೀವನ ನಡೆಸುತ್ತಿರುವ ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶ್ರೀಮತಿ ಅಸ್ಮಾ ಬಾನು
ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮೂಲರಪಟ್ನ ಮಂಗಳೂರು
ಶ್ರೀ ಸೈಯದ್ ರಸೂಲ್, ಶ್ರೀಮತಿ ಖತೀಜ ಬೇಗಂರ ಮಗಳಾಗಿ 21.04.1961 ರಲ್ಲಿ ಜನಿಸಿದ ಇವರು 01.07.1991 ರಲ್ಲಿ ಸರಕಾರಿ ಉರ್ದು ಶಾಲೆ ಕಂಡಕೆಪಳ್ಳಿ ಇಲ್ಲಿ ಶಿಕ್ಷಣ ಇಲಾಖೆಯಲ್ಲಿ ಸೇವೆಗೆ ಸೇರಿದರು. ಪ್ರಸ್ತುತ ಸರಕಾರಿ ಉರ್ದು ಶಾಲೆ ಮೂಲರಪಟ್ನ ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಈ ತಿಂಗಳು 30 ವರ್ಷಗಳ ತಮ್ಮ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ತಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದೇವೆ.
ಶ್ರೀ ಪ್ರಕಾಶ್ ಭಟ್
ಸ.ಹಿ.ಪ್ರಾ ಶಾಲೆ ಕಳಾರ ಕಡಬ ತಾಲೂಕು
ಶ್ರೀಯುತರು ಸುಳ್ಯ ತಾಲೂಕಿನ ಕೆನ್ನೆ ಗ್ರಾಮದ ಕಾಯಂಬಾಡಿ ಶ್ರೀ ಶ್ರೀನಿವಾಸ್ ಭಟ್, ಶ್ರೀಮತಿ ಕಮಲಾ ಇವರ ಮಗನಾಗಿ 07.04.1961 ರಲ್ಲಿ ಜನಿಸಿದರು. ಇವರು ಸ್ಥಳೀಯ ಶಾಲೆಗಳಲ್ಲಿ ತಮ್ಮ ಶಿಕ್ಷಣ ಪೂರೈಸಿ ಕುಮುದ ಉಮಾಶಂಕರ ಶಿಕ್ಷಕರ ತರಬೇತಿ ಸಂಸ್ಥೆ ಕೊಕ್ಕರಣೆಯಲ್ಲಿ ಶಿಕ್ಷಕ ಶಿಕ್ಷಣ ತರಬೇತಿಯನ್ನು ಪೂರೈಸಿ ದರು. 25.06.1991 ರಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡರು. ಸ.ಹಿ.ಪ್ರಾ ಶಾಲೆ ಕಲ್ಪತಬೈಲು, ಸ.ಹಿ.ಪ್ರಾ.ಶಾಲೆ ಕರಿಕಳ, ಸ.ಹಿ.ಪ್ರಾ.ಶಾಲೆ ಕೋಡಿಂಬಾಳ ಗಳಲ್ಲಿ ಸೇವೆಸಲ್ಲಿಸಿದ ಇವರು ಸ.ಹಿ.ಪ್ರಾ. ಶಾಲೆ ಕಳಾರಕ್ಕೆ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದರು. ಇವರು ಈ ತಿಂಗಳು ತಮ್ಮ 30 ವರ್ಷಗಳ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. ಪತ್ನಿ ಸುಜಾತಾ ಭಟ್, ಮಗನಾದ ಪ್ರಖ್ಯಾತ್ ಭಟ್, ಮಗಳು ಆರತಿ, ಸೊಸೆ ಶೋಭಿತಾರೊಂದಿಗಿನ ತಮ್ಮ ನಿವೃತ್ತಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀ ದಾಮೋದರ
ಸ.ಹಿ. ಪ್ರಾ. ಶಾಲೆ ಮಂಕುಡೆ, ಬಂಟ್ವಾಳ ತಾಲೂಕು.ದ.ಕ
ಸೇವೆಗೆ ಸೇರಿದ ದಿನಾಂಕ :06/08/1998
ವಯೋ ನಿವೃತ್ತಿ ಹೊಂದಿದ ದಿನಾಂಕ: 30/04/2021
ಬಂಟ್ವಾಳ ತಾಲೂಕಿನ ಮಂಕುಡೆ ಶಾಲೆಯಲ್ಲಿ ನಿರಂತರ 23 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿರುವ ಶ್ರೀ ದಾಮೋದರ್ ಅವರು ಸೇವೆಯಿಂದ ಈ ದಿನ ವಯೋ ನಿವೃತ್ತಿಯನ್ನು ಹೊಂದಲಿದ್ದಾರೆ. ಯಕ್ಷಗಾನ ನಾಟಕ ಕ್ಷೇತ್ರಗಳಲ್ಲಿ ವಿಶೇಷ ಪರಿಣತಿಯನ್ನು ಇವರು ಹೊಂದಿದ್ದು ಹಲವಾರು ವಿದ್ಯಾರ್ಥಿಗಳಲ್ಲಿ ಕಲೆಯ ಬಗ್ಗೆ ಅಭಿಮಾನವನ್ನು ಮೂಡಿಸಿದ್ದಾರೆ. ಯಕ್ಷಗಾನ ಮತ್ತು ನಾಟಕಗಳ ಮೇಕಪ್ ಮಾಡುವುದರಲ್ಲಿ ಕೂಡ ಇವರು ನಿಸ್ಸೀಮರು. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಲಲಿತಾ ಎಂ.ಬಿ
ಸ.ಹಿ.ಪ್ರಾ.ಶಾಲೆ ಕನ್ಯಾನ ಬಂಟ್ವಾಳ
15.04.1961ರಲ್ಲಿ ಪುತ್ತೂರಿನ ಮುಂಡಾಳ ಬಾರಿಕೆ ಮನೆಯಲ್ಲಿ ಶ್ರೀ ಲಕ್ಷ್ಮಣಗೌಡ ಮತ್ತು ಶ್ರೀಮತಿ ಸೇಸಮ್ಮನವರ ಏಕಮಾತ್ರ ಪುತ್ರಿಯಾಗಿ ಜನಿಸಿದ ಇವರು 1988 ರಲ್ಲಿ ಸಿ.ಪಿ.ಎಡ್ ತರಬೇತಿಯನ್ನು ಮೂಡುಬಿದರೆಯಲ್ಲಿ ಪೂರೈಸಿ 1994 ರಲ್ಲಿ ಬಂಟ್ವಾಳ ತಾಲೂಕಿನ ಸ.ಹಿ.ಪ್ರಾ.ಶಾಲೆ ಮಿತ್ತನಡ್ಕದಲ್ಲಿ ಸರ್ಕಾರಿ ಸೇವೆಗೆ ಸೇರಿದರು. ನಂತರ ವರ್ಗಾವಣೆಗೊಂಡು ಸ.ಹಿ.ಪ್ರಾ. ಶಾಲೆ ಕನ್ಯಾನಕ್ಕೆ ಸೇರಿ ಇಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದುತ್ತಿದ್ದಾರೆ.
ಸತ್ಯಸಂಧತೆ, ಕರ್ತವ್ಯಪ್ರಜ್ಞೆ ಪ್ರಾಮಾಣಿಕತೆಯನ್ನು ತಮ್ಮ ಆದರ್ಶವೆಂದು ನಂಬಿದ ಇವರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದವರು. ಮಕ್ಕಳ ಕ್ರೀಡಾ ಬದುಕಿಗೆ ಸ್ಪೂರ್ತಿಯಾಗಿ ನಿಂತಿರುವ ಇವರು ಅವರಿಗೆ ಉತ್ತಮ ತರಬೇತಿ ನೀಡಿ ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದವರೆಗೆ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ತಯಾರುಗೊಳಿಸಿರುತ್ತಾರೆ. ಗಂಡ ಕುಞಣ್ಣ ಗೌಡ, ಮಗ ನಿತಿನ್ ಪ್ರಸಾದ್, ಮಗಳು ನಿಶಿತಾಳೊಂದಿಗೆ ತಮ್ಮ ನಿವೃತ್ತ ಜೀವನವನ್ನು ನಡೆಸಲಿದ್ದಾರೆ. ತಮಗೆ ತಮ್ಮ ನಿವೃತ್ತ ಜೀವನದ ಶುಭಾಶಯಗಳು
ಶ್ರೀಮತಿ ವನಜಾಕ್ಷಿ
ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮಂಡೆಕೋಲು ಸುಳ್ಯ
ಇವರು ಆಲೆಟ್ಟಿ ನಾರ್ಕೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ, ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಪಡೆದು ಮಡಿಕೇರಿಯ ಸರಸ್ವತಿ ಟೀಚರ್ ಟ್ರೈನಿಂಗ್ ಕಾಲೇಜಿನಲ್ಲಿ ಟಿ.ಸಿ.ಹೆಚ್ ನ್ನು ಮುಗಿಸಿದ ಬಳಿಕ ಆಲೆಟ್ಟಿ ಆಶ್ರಮ ಶಾಲೆ ಮತ್ತು ಬಡ್ಡಡ್ಕ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿದ್ದರು. 1991 ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ನಾರ್ಕೋಡು) ಆಲೆಟ್ಟಿಯಲ್ಲಿ ಸಹಶಿಕ್ಷಕಿ ಹುದ್ದೆಗೆ ನೇಮಕಗೊಂಡು 19 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ 2010 ರಿಂದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರಿನಲ್ಲಿ ಸೇವೆ ಸಲ್ಲಿಸಿರುತ್ತಾರೆ. 2016 ರಲ್ಲಿ ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಎ.30 ರಂದು ವೃತ್ತಿಯಿಂದ ನಿವೃತ್ತಿಯಾಗಲಿದ್ದಾರೆ. ಪ್ರಸ್ತುತ ಇವರು ಆಲೆಟ್ಟಿಯಲ್ಲಿ ವಾಸಿಸುತ್ತಿದ್ದಾರೆ. ಇವರ ಪತಿ ದಿ. ಸೀತಾರಾಮ ಪಿ. ಇಬ್ಬರು ಪುತ್ರರಾದ ಪ್ರವೀಣ್ ಪಿ.ಎಸ್ ಮತ್ತು ಪ್ರಜ್ವಲ್ ಪಿ.ಎಸ್ ಇಂಜಿನಿಯರ್ ಪದವಿಧರರಾಗಿದ್ದು ಉದ್ಯೋಗದಲ್ಲಿದ್ದಾರೆ. ಪುತ್ರಿ ಪ್ರಜ್ಞಾ ಪಿ.ಎಸ್ ಮಂಗಳೂರಿನ ಬೋಂದೆಲ್ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉದ್ಯೋಗಿಯಾಗಿರುತ್ತಾರೆ. ಇವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಸುಂದರಿ ಪಿ
ಸ.ಉ.ಪ್ರಾ. ಶಾಲೆ ಕುಡಿಪ್ಪಾಡಿ ಪುತ್ತೂರು
ಶ್ರೀ ಐತ್ತಪ್ಪ ಗೌಡ ಮತ್ತು ಶ್ರೀಮತಿ ಕಾವೇರಿ ಇವರ ಮಗಳಾಗಿ 12.04.1961 ರಲ್ಲಿ ಜನಿಸಿದ ಸುಂದರಿಯವರು 04.07.1991 ರಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರಿದರು. ಪುತ್ತೂರು ತಾಲೂಕಿನ ಸ.ಕಿ.ಪ್ರಾ. ಶಾಲೆ ಪುಣ್ಚಪ್ಪಾಡಿ, ಕುದ್ಮಾರು, ಬಂಟ್ರೆಂಜ, ಅನಂತಾಡಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ 2006 ರಲ್ಲಿ ಅನಂತಾಡಿ ಗ್ರಾಮದ “ಉತ್ತಮ ಶಿಕ್ಷಕಿ” ಪ್ರಶಸ್ತಿ ಪಡೆದರು. 2020 ರಲ್ಲಿ ಸ.ಉ.ಪ್ರಾ. ಶಾಲೆ ಕುಡಿಪ್ಪಾಡಿಗೆ ಮುಖ್ಯಶಿಕ್ಷಕಿಯಾಗಿ ಬಡ್ತಿಗೊಂಡು ಇಲ್ಲಿ ಈ ತಿಂಗಳು ತಮ್ಮ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ. ಮಗಳು ಧನ್ಯಶ್ರೀ , ಅಳಿಯ ಗಂಗಾಧರ ರೊಂದಿಗೆ ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತಿದ್ದೇವೆ.
ಶ್ರೀಮತಿ ಪ್ರಭಾವತಿ
ಸ.ಹಿ.ಪ್ರಾ.ಶಾಲೆ ಮುರ ಪುತ್ತೂರು
1961ರಲ್ಲಿ ಶ್ರೀ ಕುಞಿಕಣ್ಣ, ಶ್ರೀಮತಿ ಲಕ್ಷ್ಮೀ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರು 25.10.1982 ರಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರಿದರು. ಪುತ್ತೂರು ತಾಲೂಕಿನ ಸ.ಹಿ.ಪ್ರಾ.ಶಾಲೆ ಪಡ್ನೂರು, ಕಬಕದಲ್ಲಿ ಕರ್ತವ್ಯ ನಿರ್ವಹಿಸಿದರು. ಸ.ಹಿ.ಪ್ರಾ. ಶಾಲೆ ಮುರದಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗುತ್ತಿದ್ದಾರೆ. ಪತಿ ನಾಗೇಶ್, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಕ್ಕಳಾದ ಶ್ರುತಿ ಯು ಮತ್ತು ಸಚಿನ್ ಯು ಅವರ ಜೊತೆಗಿನ ತಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.
ಶ್ರೀಮತಿ ಪುಷ್ಪಾವತಿ ಕೆ. ಎನ್
ಸ.ಹಿ.ಪ್ರಾ.ಶಾಲೆ ಬನ್ನೂರು ಪುತ್ತೂರು
ಶ್ರೀ ನೇಮಣ್ಣ ಹಾಗೂ ಶ್ರೀಮತಿ ದಮಯಂತಿ ಇವರ ಮಗಳಾಗಿ ಜನಿಸಿದ ಪುಷ್ಪಾವತಿಯವರು ಪ್ರಾಥಮಿಕ ಶಿಕ್ಷಣವನ್ನು ಏನೇಕಲ್ಲು ಮತ್ತು ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಸುಬ್ರಮಣ್ಯದಲ್ಲಿ ಮುಗಿಸಿದರು. ಟಿ.ಸಿಹೆಚ್ ಶಿಕ್ಷಣವನ್ನು ಸರಸ್ವತಿ ಶಿಕ್ಷಣ ಸಂಸ್ಥೆ ಮಡಿಕೇರಿಯಲ್ಲಿ ಪೂರೈಸಿ 13.1.1998 ರಲ್ಲಿ ಸ.ಹಿ.ಪ್ರಾ.ಶಾಲೆ ಬನ್ನೂರು ಇಲ್ಲಿ ಸೇವೆಗೆ ಸೇರಿ 22 ವರ್ಷಗಳ ಸೇವೆಯಿಂದ ಅದೇ ಶಾಲೆಯಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ಪತಿ ಬಿ.ಎಸ್.ಎನ್.ಎಲ್. ನಿವೃತ್ತ ನೌಕರರಾದ ಗಂಗಾಧರ, ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಮಕ್ಕಳಾದ ಅನೂಪ್ ಹಾಗೂ ಅಭಿಷೇಕ್ ರೊಂದಿಗೆ ಮುಂದಿನ ನಿವೃತ್ತ ಜೀವನ ಕಳೆಯಲಿದ್ದಾರೆ. ಅವರಿಗೆ ನಿವೃತ್ತ ಜೀವನದ ಶುಭಾಶಯಗಳು.
ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಸೇವೆಗೈದು ನಿವೃತ್ತಿಯನ್ನು ಹೊಂದುತ್ತಿರುವ ಎಲ್ಲಾ ಶಿಕ್ಷಕರಿಗೆ ಭಗವಂತನು ಆರೋಗ್ಯ ಹಾಗೂ ನೆಮ್ಮದಿಯನ್ನು ನೀಡಿ ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತಿದ್ದೇವೆ.