ಹೃದಯದ ಶಸ್ತ್ರಚಿಕಿತ್ಸೆಗೆ ಸಹೃದಯತೆ ಮೆರೆದ ಕ್ಷೇತ್ರಶಿಕ್ಷಣಾಧಿಕಾರಿಗಳು
ಡಿಸೆಂಬರ್ 2021ರ ಎರಡು ಮೂರನೇ ವಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಗುವಿನ ಹೃದಯ ಚಿಕಿತ್ಸೆಗೆ ಸಹಾಯ ಚಾಚಿರೆಂಬ ಪೋಸ್ಟ್ ಹರಿದಾಡಿತ್ತು. ಇದು ಮೂಡುಬಿದಿರೆ ತಾಲೂಕಿನ ವ್ಯಾಪ್ತಿಯ ಮಗುವೆಂದು ಗಮನಕ್ಕೆ ಬಂದಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ದೇವರಾಜ ರವರು ಶಾಲಾವಯಸ್ಸಿನ ಮಗುವಾದ್ದರಿಂದ ಈ ಮಗುವು ಯಾವ ಶಾಲೆಯ ವ್ಯಾಪ್ತಿಗೆ ಒಳಪಡುವುದೆಂದು ಮಾಹಿತಿ ಕಲೆ ಹಾಕಿಸಿದರು.
ಕುಮಾರಿ ಸಾನ್ವಿ
ಮೂಡುಬಿದಿರೆ ತಾಲೂಕಿನ ಮೂಡುಕೊಣಾಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವ್ಯಾಪ್ತಿಯೆಂದು ತಿಳಿದಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದೇವರಾಜ್ , ಸಿ.ಆರ್.ಪಿ. ಆದರ್ಶ, ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಐಡಾ ಪಿರೇರಾ ಮತ್ತು ಬಿ.ಐ.ಇ.ಆರ್.ಟಿ.ಯವರಾದ ಫ್ಲೇವಿ ಡಿಸೋಜರೊಂದಿಗೆ ಮನೆ ಭೇಟಿ ಮಾಡಿದ್ದರು.
ಮಗುವಿನ ಆರೋಗ್ಯದ ಬಗ್ಗೆ ಹಾಗೂ ಈ ಹಿಂದೆ ಎರಡು ಸಲ ಮಾಡಿದ ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಈ ಹಿಂದಿನ ಚಿಕಿತ್ಸೆಯು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಆಗಿರುವುದರಿಂದ ಪೋಷಕರಿಗೆ ಮುಂದಿನ ಚಿಕಿತ್ಸೆಯೂ ಕೂಡ ಅಲ್ಲೇ ನಡೆಸಬೇಕೆಂಬುವುದು ಮನವಿಯಾಗಿತ್ತು . ಪೋಷಕರು ತೀರಾ ಬಡವರಾಗಿರುವುದರಿಂದ ಶಸ್ತ್ರಚಿಕಿತ್ಸೆಯ ಖರ್ಚನ್ನು ಭರಿಸಲು ಅಸಾಧ್ಯತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಅದೇ ರೀತಿ ಮಗುವಿಗೆ ಆರೋಗ್ಯ ಹದಗೆಟ್ಟಿರುವುದರಿಂದ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಯು ಅನಿವಾರ್ಯ ಎನ್ನುವುದನ್ನು ಅವರು ತಿಳಿಸಿದರು.
ಆದರೆ ನಾರಾಯಣ ಹೃದಯಾಲಯದಲ್ಲಿ ಮೂರೂವರೆ ತಿಂಗಳ ನಂತರ ಶಸ್ತ್ರಚಿಕಿತ್ಸೆಗೆ ದಾಖಲಿಸಲು ಅಪಾಯಿಂಟ್ಮೆಂಟ್ ಇರುವ ಬಗ್ಗೆ ತುಂಬಾ ಬೇಸರದಿಂದ ವಿಷಯವನ್ನು ತಂಡದವರಲ್ಲಿ ಹಂಚಿಕೊಂಡರು.
ತುರ್ತಾಗಿ ಮಗುವಿಗೆ ಚಿಕಿತ್ಸೆ ಒದಗಿಸಬೇಕೆಂಬ ಬಗ್ಗೆ ಮಾಹಿತಿಯನ್ನು ಕೇಳಿದ ತಂಡದವರಿಗೆ ಇದರಿಂದ ತುಂಬಾ ನೋವಾಯಿತು. ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ, ಆರ್.ಬಿ.ಎಸ್ ಕೆ ಹಾಗೂ ಆಯುಷ್ಮಾನ್ ಯೋಜನೆಯಲ್ಲಿ ಸಿಗಬಹುದಾದ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯಲಾಯ್ತು.
ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದ ವತಿಯಿಂದ ಮಗುವಿನ ಚಿಕಿತ್ಸೆಗೆ ಸಂಪೂರ್ಣವಾದ ಖರ್ಚನ್ನು ಈ ಯೋಜನೆಯಡಿಯಲ್ಲಿ ಭರಿಸುವುದಾಗಿ ಅಧಿಕಾರಿಗಳು ಮಾಹಿತಿಯನ್ನು ನೀಡಿದರು. ತದನಂತರ ಜನಪ್ರತಿನಿಧಿಗಳ ಸಹಕಾರದೊಂದಿಗೆ ನಾರಾಯಣ ಹೃದಯಾಲಯದ ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಸಂಪರ್ಕಿಸಲು ಪ್ರಯತ್ನಿಸಿದಾಗ ಅಡೆತಡೆಗಳು ಒದಗಿ ಬಂದವು. ಈ ಸಂದರ್ಭದಲ್ಲಿ ಹೆಜಮಾಡಿ ಉದ್ಯಮಿಯಾದ ಶ್ರೀ ರೋಲ್ಸ್ ಪಾವ್ಲ್ ಡಿಕೋಸ್ಟಾ ಅವರ ಸಹಕಾರದಿಂದ ಭಾರತೀಯ ಜನತಾ ಪಕ್ಷದ ನಾಯಕರೂ, ಕ್ರೈಸ್ತ ಅಭಿವೃದ್ಧಿ ಪರಿಷತ್ ಇದರ ಅಧ್ಯಕ್ಷರಾದ ಶ್ರೀ ಜೊಯ್ಲಸ್ ಡಿಸೋಜ ಅವರ ಸಂಪರ್ಕ ಪಡೆದು, ಅವರ ಪ್ರಭಾವದಿಂದ ಸೂಕ್ತವಾದ ಚಿಕಿತ್ಸೆಯನ್ನು ಮಗುವಿಗೆ ಒದಗಿಸಿಕೊಡಲು ಅನುಕೂಲವಾಯಿತು.
ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಸುದೇಶ್ ಪ್ರಭು ಇವರ ಸೆಕ್ರೆಟರಿಯವರಾದ ಸತೀಶ್ ಕಾರ್ಕಳ ಸಹಕಾರದಿಂದ ಆಸ್ಪತ್ರೆಯಲ್ಲಿ ದಾಖಲಾತಿಯನ್ನು ಪಡೆಯಲು ಅನುಕೂಲವಾಯಿತು .ಅವರ ಸೂಕ್ತ ಮಾರ್ಗದರ್ಶನ ಹಾಗೂ ಸಹಕಾರದಿಂದ ಮಗುವಿಗೆ ಶಸ್ತ್ರಚಿಕಿತ್ಸೆಯ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಿಕೊಟ್ಟು ಮಗುವಿಗೆ ಸೂಕ್ತ ಸಮಯದಲ್ಲಿ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೆರವೇರಿಸಿ ಮಗು ಆರೋಗ್ಯಯುತವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಲು ಶ್ರೀಮಾನ್ ಜೊಯ್ಲಾಸ್ ಡಿಸೋಜ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆಯ ಆಯುಷ್ಮಾನ್ ಹಾಗೂ ಸ್ಯಾಟ್ಸ್ ನೋಡಲ್ ಅಧಿಕಾರಿ ಅವರಾದ ಜಗನ್ನಾಥ್ ಶಿರ್ಲಾಲ್ ಹಾಗೂ ಆರ್.ಬಿ.ಎಸ್.ಕೆ. ತಂಡದ ಸದಸ್ಯರ ಸಹಕಾರಕ್ಕೆ
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತಿದ್ದೇವೆ.
__ಕ್ಷೇತ್ರ ಸಂಪನ್ಮೂಲ ಕೇಂದ್ರ ಮೂಡುಬಿದಿರೆ.