ಬೆಂಗಳೂರು: ಆಧುನಿಕ ಜೀವನಶೈಲಿಯ ಒತ್ತಡ ಮತ್ತು ಕೆಲಸದ ದಣಿವುಗಳಿಂದ ಬಳಲುತ್ತಿರುವ ರಾಜ್ಯ ಸರ್ಕಾರಿ ನೌಕರರ ಆರೋಗ್ಯ ರಕ್ಷಣೆಗೆ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (KASS) ಅಡಿಯಲ್ಲೇ 40 ವರ್ಷ ವಯಸ್ಸು ಮೀರಿದ ಎಲ್ಲಾ ಸರ್ಕಾರಿ ನೌಕರರಿಗೆ ಇನ್ಮುಂದೆ ವರ್ಷಕ್ಕೊಮ್ಮೆ ಉಚಿತವಾಗಿ ವಾರ್ಷಿಕ ಆರೋಗ್ಯ ತಪಾಸಣೆ (Annual Health Checkup) ಸೌಲಭ್ಯವನ್ನು ಒದಗಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಅಧಿಕೃತ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲೇ ಈ ‘ಪ್ರಿವೆಂಟಿವ್ ಹೆಲ್ತ್ ಚೆಕಪ್’ ಸೌಲಭ್ಯವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇತ್ತೀಚಿನ ದಿನಗಳಲ್ಲಿ ನೌಕರರಲ್ಲಿ ಮಧುಮೇಹ, ರಕ್ತದೊತ್ತಡ, ಹೃದಯಾಘಾತ ಹಾಗೂ ಪಾರ್ಶ್ವವಾಯು ಮುಂತಾದ ಗಂಭೀರ ಕಾಯಿಲೆಗಳು ಹೆಚ್ಚಾಗುತ್ತಿರುವುದನ್ನು ಮನಗಂಡು, ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಈ ಯೋಜನೆ ಸಹಕಾರಿಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಆದೇಶವನ್ನು ಪರಿಶೀಲಿಸಿ. 👇
ಯಾರೆಲ್ಲಾ ಈ ಸೌಲಭ್ಯಕ್ಕೆ ಅರ್ಹರು?
- 40 ವರ್ಷ ಮೀರಿದ ನೌಕರರು: 40 ವರ್ಷ ವಯಸ್ಸು ಪೂರ್ಣಗೊಂಡಿರುವ ನೌಕರರಿಗೆ ಮಾತ್ರ ಇದು ಅನ್ವಯಿಸುತ್ತದೆ.
- KASS ನೋಂದಾಯಿತರು: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಟ್ಟಿರುವ (Opt-in ಆಗಿರುವ) ನೌಕರರಿಗೆ ಮಾತ್ರ ಈ ನಗದು ರಹಿತ (Cashless) ಸೌಲಭ್ಯ ಸಿಗಲಿದೆ.
- ನೌಕರರಿಗೆ ಮಾತ್ರ ಸೀಮಿತ: ಈ ವಾರ್ಷಿಕ ಆರೋಗ್ಯ ತಪಾಸಣೆಯು ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿದ್ದು, ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಇದು ಅನ್ವಯಿಸುವುದಿಲ್ಲ.
- ವಿನಾಯಿತಿ: ಸ್ವ-ಇಚ್ಛೆಯಿಂದ ಯೋಜನೆಗೆ ಒಳಪಡದ (Opt-out ಆದ) ನೌಕರರು ಈ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.
ಯಾವೆಲ್ಲಾ ತಪಾಸಣೆಗಳು ಲಭ್ಯ?
ಕ್ಯಾಲೆಂಡರ್ ವರ್ಷದಲ್ಲಿ ಒಂದು ಬಾರಿ ನೌಕರರು ಈ ಕೆಳಗಿನ ಪ್ರಮುಖ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಳ್ಳಬಹುದು:
- ಸಾಮಾನ್ಯ ತಪಾಸಣೆ: ರಕ್ತದೊತ್ತಡ (BP), ನಾಡಿಮಿಡಿತ, ತೂಕ, BMI ಇತ್ಯಾದಿ.
- ವ್ಯವಸ್ಥಿತ ತಪಾಸಣೆ: ಉಸಿರಾಟದ ವ್ಯವಸ್ಥೆ, ಹೃದಯ ಸಂಬಂಧಿ (CVS), ಉದರ, ಹಲ್ಲು ಮತ್ತು ಕಣ್ಣಿನ ತಪಾಸಣೆ.
- ಮಹಿಳಾ ನೌಕರರಿಗೆ ವಿಶೇಷ: ಗೈನೆಕಾಲಜಿಕಲ್ ಹಾಗೂ ಸ್ತನ ತಪಾಸಣೆ (Mammogram) ಸೌಲಭ್ಯ.
- .ಲ್ಯಾಬ್ ಪರೀಕ್ಷೆಗಳು: ಕಂಪ್ಲೀಟ್ ಹೆಮೋಗ್ರಾಂ, ಲಿಪಿಡ್ ಪ್ರೊಫೈಲ್ (ಕೊಲೆಸ್ಟ್ರಾಲ್), ಲಿವರ್ ಫಂಕ್ಷನ್ ಟೆಸ್ಟ್ (LFT), ಕಿಡ್ನಿ ಫಂಕ್ಷನ್ ಟೆಸ್ಟ್ (KFT), ಥೈರಾಯ್ಡ್ (TSH), ರಕ್ತದ ಸಕ್ಕರೆ ಪ್ರಮಾಣ (Fasting & PP) ಹಾಗೂ ಪುರುಷರಿಗೆ PSA ಮತ್ತು ಮಹಿಳೆಯರಿಗೆ PAP Smear ಪರೀಕ್ಷೆಗಳು.
- ಇತರ ಪರೀಕ್ಷೆಗಳು: ಎದೆಯ ಎಕ್ಸ್-ರೇ (X-Ray Chest) ಮತ್ತು ಇಸಿಜಿ (ECG).
ಉಚಿತ ತಪಾಸಣೆಯ ಮಿತಿ ಎಷ್ಟು?
ಈ ವಾರ್ಷಿಕ ವೈದ್ಯಕೀಯ ತಪಾಸಣೆಗಳಿಗೆ ಸರ್ಕಾರವು ಸಂಚಿತ ದರಗಳನ್ನು (Consolidated Rates) ನಿಗದಿಪಡಿಸಿದ್ದು, ಅದರ ವಿವರ ಇಲ್ಲಿದೆ:
- ಪುರುಷ ನೌಕರರಿಗೆ: ಗರಿಷ್ಠ ರೂ. 2,000/-
- ಮಹಿಳಾ ನೌಕರರಿಗೆ: ಗರಿಷ್ಠ ರೂ. 2,200/-
ಪ್ರಮುಖ ಸೂಚನೆ: ಈ ಎಲ್ಲಾ ತಪಾಸಣೆಗಳನ್ನು ಸರ್ಕಾರಿ ಆಸ್ಪತ್ರೆಗಳು (ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಸೇರಿ) ಅಥವಾ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ನೋಂದಾಯಿತವಾಗಿರುವ ಎಂಪ್ಯಾನೆಲ್ಡ್ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ನಗದು ರಹಿತವಾಗಿ ಪಡೆಯಲು ಅವಕಾಶವಿರುತ್ತದೆ. ಅಲ್ಲದೆ, ಎಲ್ಲಾ ಪರೀಕ್ಷೆಗಳನ್ನು ಒಂದೇ ಸಂಸ್ಥೆಯಲ್ಲಿ ಪಡೆದು, ಒಂದೇ ಕ್ಲೈಮ್‌ನಲ್ಲಿ ಇತ್ಯರ್ಥಪಡಿಸಬೇಕಿರುತ್ತದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕರು ಈ ಸಂಬಂಧ ನೋಂದಾಯಿತ ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರ ಆರೋಗ್ಯ ರಕ್ಷಣೆಗೆ ದೊಡ್ಡ ಬಲ ಸಿಕ್ಕಂತಾಗಿದೆ.