ಶಿಕ್ಷಕ ವೃತ್ತಿ ಒಂದು ಪವಿತ್ರವಾದ ವೃತ್ತಿ ಇಂತಹ ಪವಿತ್ರ ಸೇವಾ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಫೆಬ್ರವರಿ ತಿಂಗಳಿನಲ್ಲಿ ನಿವೃತ್ತರಾಗಲಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಇವರೆಲ್ಲರೂ ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಇವರಿಗೆ ವೃತ್ತಿಯಲ್ಲಿ ಮಾತ್ರ ನಿವೃತ್ತಿ, ಪ್ರವೃತ್ತಿಯಲ್ಲಿ ಅಲ್ಲ ಎನ್ನುವ ಆಶಾಭಾವನೆ ನಮ್ಮದು…. ಶಿಕ್ಷಣ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಹೀಗೆಯೇ ಮುಂದುವರಿಯಲಿ…….
ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ
ಶ್ರೀಮತಿ ಗೀತಾ ಬಾಯಿ
ಉಮಾನಾಥ ಪ್ರಭು, ಶಾಂತಾ ಪ್ರಭುಗಳ ಪುತ್ರಿಯಾದ ಶ್ರೀಮತಿ ಗೀತಾಬಾಯಿ ಇವರು ಸರಕಾರಿ ಶಾಲೆ ರಾಯಿಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು, ಪಾಣೆ ಮಂಗಳೂರು ಶಾಲೆಗಳಲ್ಲಿ ಸೇವೆಯನ್ನು ಸಲ್ಲಿಸಿ ಅಜಿಲಮೊಗರು ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿದವರು. ಮುಂದೆ ವರ್ಗಾವಣೆಗೊಂಡು ಸ.ಹಿ.ಪ್ರಾ. ಶಾಲೆ ಕಣ್ಣೂರು ಮುಸ್ಲಿಂ ಇಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯನ್ನು ಹೊಂದುತ್ತಿದ್ದಾರೆ. ಮಕ್ಕಳೊಂದಿಗೆ, ಶಿಕ್ಷಕರೊಂದಿಗೆ ಇವರು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಎಲ್ಲರ ಪ್ರೀತಿಯನ್ನು ಗಳಿಸಿರುತ್ತಾರೆ.
ಶ್ರೀಮತಿ ಪ್ರೇಮ ಜಿ.ಬಿ
ಶ್ರೀಮತಿ ಪ್ರೇಮ ಜಿ.ಬಿ ಯವರು 1992 ರಿಂದ ಇಲ್ಲಿಯವರೆಗೆ ನಿಸ್ವಾರ್ಥವಾಗಿ ಶಿಕ್ಷಣ ಇಲಾಖೆಯಲ್ಲಿ ದುಡಿದಿದ್ದು ಈವರೆಗೆ ಸ.ಹಿ.ಪ್ರಾ ಶಾಲೆ ನೆಲಜಿ ಅಂಬಲ, ಸ.ಮಾ.ಹಿ.ಪ್ರಾ. ಶಾಲೆ ನಾಪೋಕ್ಲು ಮತ್ತು ಮಂಗಳೂರಿನ
ಶಾಲೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ. ಮಕ್ಕಳಿಗೆ ತಾಯಿಯಾಗಿ ಸಹೋದ್ಯೋಗಿಗಳಿಗೆ ಹಿರಿಯಕ್ಕ ನಾಗಿ ಮಾರ್ಗದರ್ಶನ ನೀಡಿ ಎಲ್ಲರ ಪ್ರೀತಿ ಗೌರವಗಳಿಗೆ ಪಾತ್ರರಾಗಿರುತ್ತಾರೆ.
ಶ್ರೀಯುತ ಜಗದೀಶ ನಾವಡ
1996 ರಲ್ಲಿ ಸೇವೆಗೆ ಸೇರಿದ ಶ್ರೀಯುತ ಜಗದೀಶ ನಾವಡರು ಬಂಟ್ವಾಳ ತಾಲೂಕಿನ ಇರಾ, ಮಂಗಳೂರಿನ ಪದಮನ್ನೂರು ಹಾಗೂ ಕಾಪಿಕಾಡ್ ಶಾಲೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಸಮೂಹ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸಿರುವ ಇವರು ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. ಉತ್ತಮ ನಾಯಕರು, ಮಾರ್ಗದರ್ಶಕರೂ ಆಗಿರುವ ಇವರು ತಮ್ಮ 25 ವರ್ಷಗಳ ಸುದೀರ್ಘ ವೃತ್ತಿ ಜೀವನದಿಂದ ನಿವೃತ್ತಿಗೊಳ್ಳುತ್ತಿದ್ದಾರೆ.
ಶ್ರೀಮತಿ ದೇವಕಿ
1991 ರಲ್ಲಿ ಸ.ಹಿ.ಪ್ರಾ. ಶಾಲೆ ಪದವಿನಲ್ಲಿ ಸೇವೆಗೆ ಸೇರಿದ ಶ್ರೀಮತಿ ದೇವಕಿಯವರು ಮುಂದೆ ಸ.ಹಿ.ಪ್ರಾ.ಶಾಲೆ ಕೇಪುವಿನಲ್ಲಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದವರು. 2016ರಲ್ಲಿ ಮುಖ್ಯ ಶಿಕ್ಷಕರಾಗಿ ಸ.ಹಿ.ಪ್ರಾ.ಶಾಲೆ ಬಂಟ್ರಕ್ಕೆ ಬಡ್ತಿ ಪಡೆದು ಸಮುದಾಯದ ಸಹಕಾರ ಹಾಗೂ ಶಿಕ್ಷಕರ ವಿಶ್ವಾಸದಿಂದ ಉತ್ತಮ ಸೇವೆ ಸಲ್ಲಿಸಿ ಇದೀಗ ಪುತ್ತೂರು ತಾಲೂಕಿನ ಬಂಟ್ರ ಶಾಲೆಯಲ್ಲಿ ನಿವೃತ್ತಿಯನ್ನು ಹೊಂದುತ್ತಿದ್ದಾರೆ. ಕೆ.ಎಂ.ಎಫ್ ಉಪ್ಪಿನಂಗಡಿಯಲ್ಲಿ ದುಡಿಯುತ್ತಿರುವ ಡಾಕ್ಟರ್ ರಾಜೇಂದ್ರ ಪ್ರಸಾದ್ ಹಾಗೂ ಹಾಸನದ ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಜೇಂದ್ರಪ್ರಸಾದ್ ರಂತಹ ಮಕ್ಕಳನ್ನು ಪಡೆದು ಧನ್ಯತೆಯ ಜೀವನ ಸಾಗಿಸುತ್ತಿರುವ ಇವರು ನಿವೃತ್ತ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಶ್ರೀಮತಿ ಶೈಲಜಾ
ಸುಮಾರು 25 ವರ್ಷಗಳ ಸರಕಾರಿ ಸೇವೆಯಲ್ಲಿ ಎಲೆ ಮರೆಯ ಕಾಯಿಯಂತೆ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿರುವ ಇವರು ಉತ್ತಮ ಸಂಘಟನಾ ಚತುರರು, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಸಹದ್ಯೋಗಿಗಳೊಂದಿಗೆ, ಶಿಷ್ಯರೊಂದಿಗೆ ಮಮತಾಮಯಿಯಾಗಿ, ಕ್ರಿಯಾಶೀಲತೆಯೊಂದಿಗೆ ಎಲ್ಲರಿಗೂ ಪ್ರೀತಿ ಪಾತ್ರರಾಗಿ ಸಾರ್ಥಕ ಸೇವೆ ಸಲ್ಲಿಸಿ ಇಂದು ಸ.ಹಿ.ಪ್ರಾ.ಶಾ.ಬಜತ್ತೂರು ಪುತ್ತೂರು ತಾಲೂಕಿನಲ್ಲಿ ನಿವೃತ್ತರಾಗುತ್ತಿದ್ದಾರೆ.
ಶ್ರೀಮತಿ ವಿನೋದ
ಶ್ರೀಮತಿ ವಿನೋದ ಇವರು 1991 ರಿಂದ ಶಿಕ್ಷಣ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ. ಸರಕಾರಿ ಶಾಲೆ ಸಾಣೂರು ಕಾರ್ಕಳ, ತಲಪಾಡಿ ಪಟ್ನ, ಕಾಟಿಪಳ್ಳ 8ನೇ ಬ್ಲಾಕ್ ಗಳಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಇವರು ಪ್ರಸ್ತುತ ಮಂಗಳೂರು ತಾಲೂಕಿನ ರಾಜಗುಡ್ಡೆ ಹರೇಕಳ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಗೊಳ್ಳುತ್ತಿದ್ದಾರೆ. ಉತ್ತಮ ಗೈಡ್ ಶಿಕ್ಷಕಿಯಾದ ಇವರು ಹಲವಾರು ನಾಯಕತ್ವ ಶಿಬಿರದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿರುತ್ತಾರೆ. ಉತ್ತಮ ಸಂಪನ್ಮೂಲ ವ್ಯಕ್ತಿಯೂ ಆಗಿರುವ ಇವರು 2011-12 ನೇ ಸಾಲಿನಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿರುತ್ತಾರೆ.
ಶಿಕ್ಷಣ ಇಲಾಖೆಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿರುವ ನಿಮ್ಮೆಲ್ಲರನ್ನು ಅತ್ಯಂತ ಗೌರವಪೂರ್ವಕವಾಗಿ ವಂದಿಸುತ್ತಾ ನಿಮ್ಮೆಲ್ಲರ ನಿವೃತ್ತ ಬದುಕು ಸುಖಕರವಾಗಿರಲಿ ಎಂದು ಹಾರೈಸುತ್ತೇವೆ.