ಶ್ರೀ ಎಡ್ವರ್ಡ್ ಡಿಸೋಜ ಅವರ ಸಾಧನೆಯ ಕುರಿತ ವೀಡಿಯೋ ಮಾಹಿತಿ
ಶಿಕ್ಷಕರ ಕೊರತೆ ಕುಸಿಯುವ ಭೀತಿಯಲ್ಲಿದ್ದ ಕಟ್ಟಡದ ಚಾವಣಿ ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡು ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆಗೆ ಸ್ವ ಇಚ್ಛೆಯಿಂದ ವರ್ಗಾವಣೆ ಬಯಸಿ ದಿನಾಂಕ 15.07.2003 ರಲ್ಲಿ ಸೇರ್ಪಡೆಗೊಂಡು ಊರ ಪರವೂರ ದಾನಿಗಳು, ಜನಪ್ರತಿನಿಧಿಗಳು, ಇಲಾಖೆ ಸಹೋದ್ಯೋಗಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಬಂಧು ಮಿತ್ರರ ಸಹಕಾರದಿಂದ ಒಂದು ಕೋಟಿ ರೂಪಾಯಿಗಳಿಗೂ ಹೆಚ್ಚಿನ ವೆಚ್ಚದಲ್ಲಿ ಶಾಲಾ ಭೌತಿಕ ಸೌಲಭ್ಯಗಳ ಹಾಗೂ ಸಾಂಸ್ಕೃತಿಕ ಶೈಕ್ಷಣಿಕ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕಾಗಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಶ್ರೀಯುತ ಎಡ್ವರ್ಡ್ ಡಿಸೋಜ ಇವರಿಗೆ ಹಾರ್ದಿಕ ಅಭಿನಂದನೆಗಳು.
ಈ ವರ್ಷದ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಅಡ್ವರ್ಡ್ ಡಿಸೋಜರವರ ಸಾಧನೆ ನಮಗೆ ಪ್ರೇರಣೆ
ಅಭಿವೃದ್ಧಿಪಡಿಸಲು ಸಾಧ್ಯವೇ ಇಲ್ಲವೆಂದು ನಿರ್ಲಕ್ಷಿಸಲ್ಪಟ್ಟ ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಶಿಕ್ಷಣಾಭಿಮಾನಿಗಳನ್ನು, ಊರವರನ್ನು, ಹಳೆ ವಿದ್ಯಾರ್ಥಿಗಳನ್ನು, ಪೋಷಕರನ್ನು, ಜೊತೆಗೆ ಜನಪ್ರತಿನಿಧಿಗಳನ್ನು, ಸರಕಾರ, ಇಲಾಖೆ, ದಾನಿಗಳು ಸಹೋದ್ಯೋಗಿಗಳು, ಬಂಧು ಮಿತ್ರರು, ಸಂಘ-ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲಾ ಭೌತಿಕ ಸಾಂಸ್ಕೃತಿಕ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಿದ ಇವರ ಯಶೋಗಾಥೆ ನಮಗೆಲ್ಲರಿಗೂ ಸ್ಪೂರ್ತಿಯ ಕಥೆ.
ಸ್ಪೂರ್ತಿದಾಯಕ ಸೃಜನಶೀಲ ಯೋಜನೆಗಳು
- ಸಾರ್ವಜನಿಕರಲ್ಲಿ ಓದುವ ಅಭಿರುಚಿಯನ್ನು ಬೆಳೆಸಲು ಸ್ವರ್ಣ ಗ್ರಂಥಾಲಯ ಯೋಜನೆ ಆರಂಭಿಸಲಾಗಿದೆ.
- ಸ್ವರ್ಣ ನಿಧಿ
ದಿನಕ್ಕೊಂದು ರೂಪಾಯಿ ಎಂಬ ಯೋಜನೆ ಆರಂಭಿಸಿ 1071 ದಿನಗಳಲ್ಲಿ ರೂ 333333/ ಕಾಣಿಕೆ ಡಬ್ಬಿಗಳಲ್ಲಿ ಸಂಗ್ರಹಿಸಲಾಗಿದೆ. ಈ ಹಣವನ್ನು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಬ್ಯಾಗ್ ವಿತರಣೆ, ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ ಭಾವೈಕ್ಯತಾ ಹೊರಸಂಚಾರ ಕಾರ್ಯಕ್ರಮಗಳಿಗೆ ನಿರಂತರವಾಗಿ ಬಳಸಲಾಗುತ್ತಿದೆ.
- ವಜ್ರ ನಿಧಿ
ಶಿಕ್ಷಕರ ಕೊರತೆಯನ್ನು ನೀಗಿಸಲು ಗೌರವ ಶಿಕ್ಷಕರನ್ನು ನೇಮಿಸಿ ಇವರಿಗೆ ವೇತನವನ್ನು ನೀಡುವ ಉದ್ದೇಶದಿಂದ ವಜ್ರ ನಿಧಿ ಎಂಬ ದೂರದೃಷ್ಟಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ವಾರ್ಷಿಕೋತ್ಸವದಲ್ಲಿ 5 ಮುಖಬೆಲೆಯ ಅದೃಷ್ಟ ಚೀಟಿಗಳನ್ನು ಮಾರಾಟ ಮಾಡಿ ಅದೇ ರೀತಿ ಅರವತ್ತು ದಾನಿಗಳಿಂದ ದಿನಕ್ಕೆ 3 ರೂಪಾಯಿಯಂತೆ ಸಂಗ್ರಹಿಸಿ 400 ದಿನಗಳಲ್ಲಿ 1200 ರೂಪಾಯಿ ಸಂಗ್ರಹಿಸಿ ಪರವೂರ ದಾನಿಗಳಿಂದ 444444 ರೂಪಾಯಿ ಸಂಗ್ರಹಿಸಿ ವಜ್ರಮಹೋತ್ಸವದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಗಿದೆ ಇದರಿಂದ ವಾರ್ಷಿಕ ರೂ. 60000 ದಂತೆ ನಿರಂತರ 15 ವರ್ಷಗಳಲ್ಲಿ ಗೌರವ ಶಿಕ್ಷಕರಿಗೆ ಸಂಭಾವನೆ ನೀಡಲಾಗುತ್ತಿದೆ. ಈ ನಿಧಿಗೆ ಇವರ ಕಾಣಿಕೆ 22222 ರೂಪಾಯಿಗಳು.
- ವಜ್ರ ಸಂಜೀವಿನಿ ನಿಧಿ
ಅಕ್ಷರ ದಾಸೋಹ ಸಿಬ್ಬಂದಿ ಹಾಗೂ ಓರ್ವ ಗೌರವ ಶಿಕ್ಷಕಿಗೆ ಉದ್ಯೋಗ ಕಳೆದುಕೊಂಡ ಬಳಿಕ ಮಾಸಿಕ ರೂ 1000 ಪಿಂಚಣಿ ನೀಡಲು ಸಹಕಾರಿಯಾದ ವಿಶೇಷ ಯೋಜನೆ ಇದಾಗಿದೆ. 10 ತಿಂಗಳು ಮಾಸಿಕ 500 ರೂಪಾಯಿಗಳನ್ನು ಅವರಿಂದ ಕಟ್ಟಿಸಿ ಎರಡು ತಿಂಗಳು ಇವರು ಅವರ ಕಂತನ್ನು ಕಟ್ಟುವುದರ ಮೂಲಕ ವಾರ್ಷಿಕ ರೂಪಾಯಿ 3000 ದಂತೆ ಒಟ್ಟು 33000 ರೂಗಳನ್ನು ಅವರ ಖಾತೆಗೆ ಜಮೆ ಮಾಡಿರುತ್ತಾರೆ. 2010ರಿಂದ ನಡೆದ ಯೋಜನೆಯಿಂದ ಮೂವರಿಗೂ ತಲಾ ರೂಪಾಯಿ ಒಂದು ಲಕ್ಷ ಮೊತ್ತದ ಸಂಜೀವಿನಿ ನಿಧಿಯನ್ನು ನೀಡಿ ಅವರ ಬಾಳಿನ ಮುಸ್ಸಂಜೆಯಲ್ಲಿ ಬೆಳಕಾಗಿದ್ದಾರೆ.
- ದಿ. ನೀಲಮ್ಮ ಸ್ಮಾರಕ ಶಿಕ್ಷಣ ನಿಧಿ
ಮಿತ್ರರೊಬ್ಬರ ತಾಯಿಯೊಬ್ಬರ ಸವಿನೆನಪಿಗಾಗಿ ರೂಪಾಯಿ 20000 ಮೊತ್ತದ ಶಿಕ್ಷಣ ನಿಧಿಯನ್ನು ಸ್ಥಾಪಿಸಿ ವರ್ಷಂಪ್ರತಿ ಏಳನೇ ತರಗತಿಯಲ್ಲಿ ಪ್ರಥಮ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗುತ್ತಿದೆ.
- ದಿ. ನೀಲಮ್ಮ ಸ್ಮಾರಕ ಶುದ್ಧ ಕುಡಿಯುವ ನೀರಿನ ಯೋಜನೆ
2000 ವೆಚ್ಚದಲ್ಲಿ ಅಕ್ವಾಗಾರ್ಡ್ ಸ್ಥಾಪಿಸಿ ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ
- ಸ್ವಚ್ಛ ಊರು ಸ್ವಚ್ಛ ಭಾರತ
2011ರಿಂದ ಶಾಲೆಯ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ 200 ಕುಟುಂಬಗಳಲ್ಲಿ ಹೆಚ್ಚಿನವರಿಗೆ ಪ್ಲಾಸ್ಟಿಕ್ ಸುಡದಂತೆ ಅಥವಾ ಅಲ್ಲಲ್ಲಿ ಎಸೆಯದಂತೆ ಮನವರಿಕೆ ಮಾಡಲಾಗಿದೆ ನೂರಾರು ಮನೆಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವ ಮೂಲಕ ಸ್ವಚ್ಛ ಭಾರತದ ಕಲ್ಪನೆ ಸಾಕಾರಗೊಳಿಸಲಾಗಿದೆ.
- ದೇಹದಾನ
ತಮ್ಮ ಮರಣದ ನಂತರ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು 2008 ರಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಕಂಕನಾಡಿ ಮಂಗಳೂರಿಗೆ ದೇಹದಾನ ಮಾಡುವ ಕರಾರಿಗೆ ಸಹಿ ಮಾಡಿರುತ್ತಾರೆ. ಊರಿನಲ್ಲಿಯೂ ದೇಹದಾನ, ರಕ್ತದಾನ, ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಿರುತ್ತಾರೆ.
ಇವಿಷ್ಟೇ ಅಲ್ಲದೇ ಶಾಲಾ ಜಮೀನು ರಕ್ಷಣೆ, ಕರಾವಳಿ ಜಾನಪದ ಕಲೆ ಯಕ್ಷಗಾನದ ಉಳಿವಿಗೆ ಶಾಲಾಮಕ್ಕಳಿಗೆ ಯಕ್ಷಗಾನ ತರಬೇತಿ, ಬಯಲು ರಂಗಮಂದಿರ ರಚನೆ, ಆಕರ್ಷಕ ಪ್ರವೇಶದ್ವಾರ, ಆವರಣಗೋಡೆ ರಚನೆ, ಶೌಚಾಲಯ ಮೂತ್ರಾಲಯಗಳ ರಚನೆ, ಅಕ್ಷರ ದಾಸೋಹ ಕೊಠಡಿ ರಚನೆ, ಕುಡಿಯುವ ನೀರಿನ ವ್ಯವಸ್ಥೆ, ದೂರದರ್ಶನದ ಮೂಲಕ ಶಿಕ್ಷಣ, ಸೌಂಡ್ ಸಿಸ್ಟಮ್ ಅಳವಡಿಕೆ, ಗ್ಯಾಲರಿಗಳ ನಿರ್ಮಾಣ, ಪೀಠೋಪಕರಣ ವ್ಯವಸ್ಥೆ, ಕಂಪ್ಯೂಟರ್ ಶಿಕ್ಷಣ, ಗೋಡೆ ಬರಹ, ವರ್ಣಚಿತ್ರ, ಮಾಹಿತಿ ಫಲಕ ರಚನೆ, ಶಾಲಾ ಕೊಠಡಿಗಳ ನಿರ್ಮಾಣ, ಶಾಲಾ ವಾರ್ಷಿಕೋತ್ಸವ, ಶಾಲಾ ಶೈಕ್ಷಣಿಕ ಪ್ರವಾಸಗಳ ಆಯೋಜನೆ, ಕ್ರೀಡಾಕೂಟ rally ಗಳಲ್ಲಿ ಮಕ್ಕಳ ಭಾಗವಹಿಸುವಿಕೆಗೆ ಪ್ರೋತ್ಸಾಹ, ಇಂಟರ್ ಲಾಕ್ ಅಳವಡಿಕೆ, ಧ್ವಜಸ್ತಂಭ ರಚನೆ, ಭೋಜನ ಶಾಲೆ ನಿರ್ಮಾಣ, ವ್ಯವಸ್ಥಿತವಾಗಿ ಬ್ಯಾಂಡ್ ದಳ, ಸ್ಕೌಟ್ ದಳ ರಚನೆ, ಸ್ವರ್ಣ ನಿಧಿ ಸಮಿತಿ ಅಧ್ಯಕ್ಷರಾದ ವಾಸುದೇವರಾವ್ ಇವರಿಂದ ಉಚಿತ ಟೈ, ಬೆಲ್ಟ್ ವಿತರಣೆ, ಲೋಟ, ಬಟ್ಟಲು, ಗ್ರೈಂಡರ್ ಕೊಡುಗೆ, ದಾನಿಗಳಿಂದ ಸ್ಮಾರ್ಟ್ ತರಗತಿಗಳಿಗಾಗಿ ಲ್ಯಾಪ್ಟಾಪ್, ಪ್ರೊಜೆಕ್ಟರ್ ಕೊಡುಗೆ, ಶಾಲಾ ಪ್ರವೇಶದ್ವಾರದ ಎದುರು ತಡೆಗೋಡೆ ನಿರ್ಮಾಣ, ಆರೋಗ್ಯ ಶಿಬಿರಗಳು, ಕಾನೂನು ಶಿಬಿರ, ರಕ್ತದಾನ ಶಿಬಿರ ಆಯೋಜಿಸಿ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ, ನಿವೃತ್ತ ಸೈನಿಕರಿಗೆ ಸನ್ಮಾನದ ಜೊತೆಗೆ ಯುವಜನರಿಗೆ ಸೈನ್ಯ ಸೇರಲು ಸ್ಪೂರ್ತಿ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಯೋಗ ಶಿಬಿರಗಳು, ಅಗ್ನಿಶಾಮಕ ದಳದಿಂದ ಮಾಹಿತಿ ಶಿಬಿರ, ಆಟಿ ಕೂಟ, ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳ ಆಯೋಜನೆ, ಸಸ್ಯ ವನದ ನಿರ್ಮಾಣ ಸೇರಿದಂತೆ ಇನ್ನೂ ಅನೇಕ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ.
ಇವರ ಶಾಲೆಯ ಕಾರ್ಯಕ್ರಮಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು, ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು, ಶ್ರೀ ರಾಮ ಕ್ಷೇತ್ರ ಕನ್ಯಾಡಿ ಗುರುಗಳಾದ ಶ್ರೀಶ್ರೀಶ್ರೀ ಬ್ರಹ್ಮಾನಂದ ಸ್ವಾಮೀಜಿಯವರು ಬೆಳ್ತಂಗಡಿಯ ಧರ್ಮಗುರುಗಳಾದ ವಂದನೀಯ ಜೇಮ್ಸ್ ಡಿಸೋಜ ರವರು, ಗುರುವಾಯನಕೆರೆ ಮಸೀದಿಯ ಧರ್ಮಗುರುಗಳಾದ ಬಹು ಶರಫುದ್ದೀನ್ ಸಅದಿಯವರು ಭಾಗವಹಿಸಿರುತ್ತಾರೆ. ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು, ಉರಗ ತಜ್ಞರು, ನೇತ್ರತಜ್ಞರು, ಜಾನಪದ ಕಲಾವಿದರು, ಕ್ರೀಡಾಪಟುಗಳು, ಸಮಾಜ ಸೇವಕರು ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ವಿಶೇಷ ಅಧ್ಯಯನ ತಂಡ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾಜ್ಯಸಭಾ, ಲೋಕಸಭಾ ಸದಸ್ಯರು, ಶಿಕ್ಷಣ ಇಲಾಖೆ ಮತ್ತು ಇತರ ಇಲಾಖೆಯ ಅಧಿಕಾರಿಗಳು ಶಿಕ್ಷಕರು, ಸಾವಿರಾರು ಶಿಕ್ಷಣಾಭಿಮಾನಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿರುತ್ತಾರೆ.
ಅನಾರೋಗ್ಯದಿಂದ ವಾಹನ ಚಲಾಯಿಸಲು ಆಗದಿದ್ದರೂ, ಮಂಡಿ ನೋವಿನ ಸಮಸ್ಯೆ ಇದ್ದಾಗ್ಯೂ, ಶಾಲಾ ದೇಯವಾಕ್ಯ ವಾದ “ನಮ್ಮೆಲ್ಲರ ದೃಷ್ಟಿ ಸ್ವಚ್ಛ, ಸ್ವಸ್ಥ, ಸುಸಂಸ್ಕೃತ, ಸಮಾಜದ ಸೃಷ್ಟಿ” ಗೆ ಎಳ್ಳಷ್ಟು ಚ್ಯುತಿಬಾರದಂತೆ ಕರ್ತವ್ಯ ನಿರ್ವಹಿಸಿ ಸಾರ್ಥಕತೆ ಪಡೆದಿದ್ದಾರೆ. ಈ ವರ್ಷದ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ತಮಗಿದೋ ಹಾರ್ದಿಕ ಅಭಿನಂದನೆಗಳು.ನಿಮ್ಮ ಸೇವೆಯು ಇನ್ನಷ್ಟು ಶಿಕ್ಷಕರಿಗೆ ಪ್ರೇರಣೆ ಆಗಲಿ,ಇನ್ನಷ್ಟು ಸೇವೆಯ ಮೂಲಕ ಮುಂದಿನ ದಿನಗಳಲ್ಲಿ ರಾಷ್ಟ್ರ ಪ್ರಶಸ್ತಿಯ ಗೌರವ ದೊರಕಲಿ ಎನ್ನುವ ಹಾರೈಕೆ ನಮ್ಮದು.
ಶಿಕ್ಷಕರ ಸಾಧನೆಯ ಕುರಿತಾದ ಇನ್ನಷ್ಟು ಮಾಹಿತಿ
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರ ಪಟ್ಟಿ