ಶಿಕ್ಷಕನ ಡೈರಿಯಿಂದ
ಶಿಕ್ಷಕರಲ್ಲವೇ? ಶಿಕ್ಷಿಸುವುದರಲ್ಲೇನಿದೆ ತಪ್ಪು?
'ಬೆತ್ತ ಹಿಡಿದ ನನ್ನೊಳಗೆ ಸ್ಯಾಡಿಸಂ ತುಂಬಿತ್ತೇ?' ಎನ್ನುವ ಶೀರ್ಷಿಕೆಯಡಿಯಲ್ಲಿ ಹಿಂದೊಮ್ಮೆ ಲೇಖನವನ್ನು ಬರೆದಿದ್ದೆ. "ನೀವು ಶಿಕ್ಷಕರಲ್ಲವೇ? ಶಿಕ್ಷಿಸುವುದರಲ್ಲಿ ತಪ್ಪೇನಿದೆ?" ಎಂಬ ಪ್ರಶ್ನೆಯನ್ನು ಓದುಗರೊಬ್ಬರು ಮುಂದಿಟ್ಟಿದ್ದರು. ಪ್ರಶ್ನೆಯ ಧಾಟಿ ನೋಡಿದಾಗ ಶಿಕ್ಷೆ ನೀಡುವುದು ಶಿಕ್ಷಕನ ಕರ್ತವ್ಯ ಎಂದೇ ಅವರು ಭಾವಿಸಿದ್ದಂತೆ ಕಾಣಿಸಿತು. ಅವರ ಪ್ರಶ್ನೆ ಶಿಕ್ಷಣದ ಕುರಿತಾಗಿ ಇಡೀ ಸಮಾಜದ ದೃಷ್ಟಿಕೋನ ಎಂಬಂತೆಯೇ ನಾನು ಗ್ರಹಿಸಿದೆ.
ಶಿಕ್ಷೆ ಕೊಡುವುದು ಶಿಕ್ಷಕನ ಕರ್ತವ್ಯ ಮಾತ್ರವಲ್ಲ ಅದವನ ಹಕ್ಕೂ ಹೌದು ಎಂಬರ್ಥದಲ್ಲಿ ವಾದಿಸುವ ಹಲವರನ್ನು ನಾನು ಕಂಡಿದ್ದೇನೆ. ಶಿಕ್ಷಣ , ಶಿಕ್ಷಕ ಎಂಬ ಪದಗಳ ಮೂಲವೇ ಶಿಕ್ಷೆ ಎನ್ನುವ ಪದ ಎಂದೇ ಅವರು ಭಾವಿಸಿರುತ್ತಾರೆ. ವಿಚಿತ್ರ ಎಂದರೆ ತಮ್ಮ ಕರ್ತವ್ಯದ ಬಗ್ಗೆ ಬಹಳ ಬದ್ಧತೆಯನ್ನೂ, ಮಕ್ಕಳ ಕುರಿತಾಗಿ ಪ್ರೀತಿಯನ್ನೂ, ಅವರ ಭವಿಷ್ಯದ ಬಗ್ಗೆ ಕಾಳಜಿಯನ್ನೂ ಹೊಂದಿರುವ ಕೆಲವು ಬಹಳ ಒಳ್ಳೆಯ ಶಿಕ್ಷಕರೂ ಶಿಕ್ಷೆಯಿಂದ ಮಾತ್ರ ಕಲಿಕೆ ಸಾಧ್ಯ ಎಂದು ದೃಢವಾಗಿ ನಂಬಿರುವುದನ್ನು ನಾನು ಕಂಡಿದ್ದೇನೆ. ಈಗ ನಾನು ಹೇಳಲು ಹೊರಟಿದ್ದು ಅಂತಹ ಒಬ್ಬರು ಶಿಕ್ಷಕರ ಕತೆಯನ್ನು...
ಆ ಶಾಲೆಯ ಶಿಕ್ಷಕರಲ್ಲಿ ತೀರಾ ಹಿರಿಯರಾಗಿದ್ದ ಅವರು ಬಹಳ ವರ್ಷಗಳಿಂದ ಅದೇ ಶಾಲೆಯಲ್ಲಿದ್ದವರು. ತೀರಾ ಮುಗ್ಧ ಸ್ವಭಾವ, ಸಹೋದ್ಯೋಗಿಗಳ ಮೇಲೆ ಅಪಾರ ಪ್ರೀತಿ, ಮಕ್ಕಳ ಕಲಿಕೆಯ ಕುರಿತಾದ ವಿಪರೀತ ಕಾಳಜಿಗಳಿಂದಾಗಿ ಅಜಾತಶತ್ರು ಅನ್ನಿಸಿಕೊಂಡಿದ್ದವರು. ಅವರು ಕೈ ಗಂಟಿನ ಮೇಲೆ ಪೆಟ್ಟು ಕೊಟ್ಟು ಪಾಠ ಕಲಿಸುತ್ತಿದ್ದ ಬಗೆಯನ್ನು ಅವರ ಹಳೆ ವಿದ್ಯಾರ್ಥಿಗಳು ಅತೀವ ಹೆಮ್ಮೆಯಿಂದ ಹೇಳುತ್ತಿದ್ದುದನ್ನು ನಾನೂ ಕೇಳಿದ್ದೆ. ಅವರು ಅದೇ ಶೈಲಿಯಲ್ಲಿ ಕಲಿಸುವುದನ್ನು ಒಂದೆರಡು ಬಾರಿ ನಾನೂ ಕಂಡಿದ್ದಿತ್ತು.
ಒಂದು ದಿನ ಶಾಲೆಯ ಮುಖ್ಯೋಪಾಧ್ಯಾಯರು "ನಿಮ್ಮ ತರಗತಿಯ ಒಬ್ಬಳು ಹುಡುಗಿಯ ಕೈ ಏನೋ ನೋವಾಗಿದೆ ಅಂತ ಒಂದು ಕಂಪ್ಲೇಂಟ್ ಬಂದಿದೆ. ಒಮ್ಮೆ ವಿಚಾರಿಸಿ ಎಂದವರು "ಯಾರೋ ಹೊಡೆದದ್ದು ಅಂತ ಹೇಳಿದ ಹಾಗಾಯ್ತು" ಎಂದು ಮೆಲ್ಲನೆ ಉಸುರಿದರು. ನಾನು ತರಗತಿಗೆ ಹೋಗಿ ಹುಡುಗಿಯನ್ನು ವಿಚಾರಿಸಿದೆ. ಅವಳ ಅಂಗೈಯಲ್ಲಿ ಒಂದು ಬದಿ ತುಸು ಕಪ್ಪಾಗಿತ್ತು. ಹಿಂದಿನ ದಿನ ತೋಳಿನವರೆಗೂ ಕೈ ತುಂಬಾ ನೋವಿತ್ತು, ಜ್ವರವೂ ಬಂದಿತ್ತು, ನೋವಿನ ಮಾತ್ರೆ ಕೊಟ್ಟ ಮೇಲೆ ತುಸು ಕಡಿಮೆಯಾಗಿದೆ ಎಂದು ಹೇಳಿದವಳಲ್ಲಿ "ಹೇಗೆ ನೋವಾಗಿದ್ದು?" ಕೇಳಿದೆ. "........ ಸರ್ ಹೊಡೆದಿದ್ದು" ಎಂದು ಮೆಲುದನಿಯಲ್ಲಿ ಹೇಳಿದವಳು, ಹಿಂದಿನ ದಿನ ಅಮ್ಮ ಮುಖ್ಯೋಪಾಧ್ಯಾಯರಿಗೆ ಫೋನಾಯಿಸಿದ್ದರೆಂಬುದನ್ನೂ ತಿಳಿಸಿದ್ದಳು. ಅವಳ ಕೈಗಾದ ನೋವು ಸ್ವಲ್ಪ ಗಂಭೀರವಾದದ್ದೇ ಎಂದು ನನಗನಿಸಿತ್ತು. ಪೆಟ್ಟು ಕೊಟ್ಟ ಹಿರಿಯ ಶಿಕ್ಷಕರಿಗೆ ವಿಚಾರ ತಿಳಿಸೋಣ ಎಂದುಕೊಂಡವನು, ಜೊತೆಯಲ್ಲಿದ್ದ ಇನ್ನೊಬ್ಬರು ಸಹೋದ್ಯೋಗಿಗೆ ವಿಷಯ ತಿಳಿಸಿದೆ. ಇಬ್ಬರೂ ಚರ್ಚಿಸಿ "ಹೆಡ್ಮಾಸ್ಟ್ರೇ ಈ ವಿಷಯವನ್ನು ಅವರಿಗೆ ತಿಳಿಸಿದರೆ ಸರಿ" ಎಂಬ ತೀರ್ಮಾನಕ್ಕೆ ಬಂದೆವು. ಹುಡುಗಿಯ ಕೈ ನೋವನ್ನು ತಾನೇ ಪರಿಶೀಲಿಸದೇ ನನ್ನ ಬಳಿ ಹೇಳಿದ ಮುಖ್ಯೋಪಾಧ್ಯಾಯರ ನಡೆಯಲ್ಲಿ ನಮಗೊಂಚೂರು ಅಸಹಜತೆ ಕಂಡಿತ್ತು. ಅವರ ಈ ತರದ ನಡೆಗಳ ಅರಿವಿದ್ದ ನಾವು ತುಸು ಎಚ್ಚರದಿಂದಲೇ ಹೆಜ್ಜೆಯಿಡೋಣ, ಹಿರಿಯ ಶಿಕ್ಷಕರ ದೃಷ್ಟಿಯಲ್ಲಿ ನಾವು ನಿಷ್ಟುರರಾಗುವುದು ಬೇಡ ಎಂದುಕೊಂಡೆವು.
ಆದರೂ ಈ ಘಟನೆ ಪುನರಾವರ್ತನೆ ಆಗದ ಹಾಗೆ ನಾನೇನಾದರೂ ಮಾಡಲೇಬೇಕು ಎಂದು ನನಗನಿಸಿತ್ತು. ಆ ಹುಡುಗಿಯ ತರಗತಿಯ ಟೇಬಲ್ ಮೇಲೆ 'ಸ್ಕೇಲ್ ' ಎಂದೂ ಕರೆಯಬಹುದಾಗಿದ್ದ ದಪ್ಪನೆಯ ಮರದ ಪಟ್ಟಿಗಳೆರಡನ್ನು ಕಂಡೆ. ಅವಳಿಗೆ ಪೆಟ್ಟು ಬಿದ್ದಿದ್ದು ಆ ಪಟ್ಟಿಯಿಂದಲೇ. ಆ ತರದ ಪಟ್ಟಿಗಳನ್ನು ನಾನು ಬೇರೆ ತರಗತಿಗಳಲ್ಲಿಯೂ ಕಂಡದ್ದಿತ್ತು. ನಾನು ಎಲ್ಲಾ ತರಗತಿ ಕೊಠಡಿಗಳಲ್ಲೂ ಆ ಬಗೆಯ ಪಟ್ಟಿಗಳನ್ನು ಹುಡುಕಿದೆ.., ಸಿಕ್ಕಿದ ಐದಾರು ಪಟ್ಟಿಗಳನ್ನು ತಣ್ಣಗೆ ನನ್ನ ಮೇಜಿನ ಡ್ರಾವರಲ್ಲಿ ಹುದುಗಿಸಿಟ್ಟೆ. Problem solved ಎಂದು ಬೀಗಿದೆ.
ಎರಡು ಮೂರು ದಿನಗಳು ಕಳೆದಿದ್ದವು. ಸ್ಟಾಫ್ರೂಮಿಗೆ ಮಹಿಳೆಯೊಬ್ಬರು ಸಿಟ್ಟಿನಿಂದ ನುಗ್ಗಿದವರು ಮುಖ್ಯೋಪಾಧ್ಯಾಯರೆದುರು "ಆತ ಶಿಕ್ಷಕನೋ, ಇಲ್ಲ ರಾಕ್ಷಸನೋ.." ಎಂದು ಅಬ್ಬರಿಸಿದ್ದರು. ಅವರು ಅದೇ ಹುಡುಗಿಯ ತಾಯಿ.. ಪೆಟ್ಟು ಬಿದ್ದ ಮರುದಿನ ಅವರು ಹಾಗೆ ಬಂದಿದ್ದರೆ ವಿಚಿತ್ರವೇನಿರಲಿಲ್ಲ.., ಎರಡು ಮೂರು ದಿನಗಳು ಕಳೆದ ಮೇಲೆ ಇಷ್ಟೊಂದು ಸಿಟ್ಟು ನನಗೆ ಸೋಜಿಗ ಎನಿಸಿತು. ಆಕೆ ಮುಂದುವರೆಸಿದರು, "ಮೊನ್ನೆ ಹೊಡೆದಿದ್ದಾರೆಂದು ಕಂಪ್ಲೇಂಟ್ ಮಾಡಿದ್ದಳೆಂದು ನಿನ್ನೆ ಮತ್ತೆ ಹೊಡೆದಿದ್ದಾರೆ.." ಅವರ ಧ್ವನಿ ನಡುಗುತ್ತಿತ್ತು. ಅಷ್ಟರಲ್ಲಿ ಆ ಹುಡುಗಿಗೂ ಕರೆ ಹೋಗಿತ್ತು, ಅವಳ ಕಾಲಲ್ಲಿ ಬರೆ ಕಾಣಿಸಿತು. ಪೆಟ್ಟು ಕೊಟ್ಟ ಶಿಕ್ಷಕರೂ ಬಂದರು. ಅವರು ಬರುವ ಹೊತ್ತಿಗೆ ಆ ತಾಯಿ ತುಸು ತಣ್ಣಗಾಗಿದ್ದರಾದರೂ, ಆಕೆ ಬಂದಿರುವುದು ಮಗಳಿಗೆ ಪೆಟ್ಟು ಕೊಟ್ಟಿರುವುದನ್ನು ಆಕ್ಷೇಪಿಸಲು ಎನ್ನುವುದು ಅವರಿಗೆ ಅರ್ಥವಾಗಿತ್ತು. ಆದರೆ ತಾನು ಕೊಟ್ಟ ಏಟಿನಿಂದ ಆಕೆಗೆ ಅಷ್ಟೊಂದು ಪೆಟ್ಟಾಗಿತ್ತೆಂದಾಗಲೀ, ಅವರೊಮ್ಮೆ ಆ ಬಗ್ಗೆ ದೂರು ಕೊಟ್ಟಿದ್ದರೆಂಬುದಾಗಲೀ ಅವರಿಗೆ ತಿಳಿದಿರಲಿಲ್ಲ. ತಾನು ಕೊಟ್ಟ ಏಟು ಆ ಹುಡುಗಿಯ ಒಳಿತಿಗಾಗಿ ಎಂದು ದೃಢವಾಗಿ ನಂಬಿದ್ದ ಅವರು ಆ ಹುಡುಗಿಯ ತಪ್ಪುಗಳನ್ನೂ, ಉದಾಸೀನತೆಯನ್ನೂ ವಿವರಿಸುತ್ತಾ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳತೊಡಗಿದರು. ಅವರ ಸಮರ್ಥನೆ ತಣ್ಣಗಾಗಿದ್ದ ಆ ತಾಯಿಯನ್ನು ಮತ್ತೆ ಕೆರಳಿಸಿತ್ತು. "ನನ್ನ ಮಗಳು ಕಲಿಯದಿದ್ದರೆ ಪರವಾಗಿಲ್ಲ, ಅವಳು ಆರೋಗ್ಯವಾಗಿ ಖುಷಿಯಾಗಿದ್ದರೆ ಸಾಕು" ಎಂದು ಬಿಕ್ಕಳಿಸುತ್ತಾ, "ಆ ಮಾಸ್ಟ್ರು ಮನುಷ್ಯರೇ ಅಲ್ಲ" ಎಂದು ಸರ್ಟಿಫಿಕೇಟ್ ಕೊಟ್ಟುಬಿಟ್ಟರು. ಇಷ್ಟಾಗುವಷ್ಟರಲ್ಲಿ ಆಕೆಯನ್ನು ಶಾಲೆಯವರೆಗೆ ಕರೆ ತಂದು, ಅಷ್ಟೂ ಹೊತ್ತು ಗೇಟಿನ ಬಳಿ ನಿಂತಿದ್ದ ಆಕೆಯ ಸಹೋದರ ಒಳಗೆ ಬಂದಿದ್ದರು. ಬಾಯಿಗೆ ಒಂದು ಚೂರೂ ಫಿಲ್ಟರಿಡದೇ ಮಾತಾಡಿದ ಆತನ ಮಾತುಗಳು ಮಾಸ್ಟ್ರಿಗೆ ಒಂದೂ ಮಾತಾಡದಂತೆ ಮಾಡಿತ್ತು. ಪೆಟ್ಟು ಕೊಟ್ಟ ಆ ಹಿರಿಯ ಜೀವ ತಲೆತಗ್ಗಿಸಿ ಮೌನವಾಗಿ ಕಣ್ಣೀರಿಟ್ಟರು. ನಾವ್ಯಾರೂ ಏನೂ ಮಾತನಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಹುಡುಗಿಯ ಪೋಷಕರು ತಾವು ಹೇಳಬೇಕಾಗಿದ್ದನ್ನು ಹೇಳಿ ಹೊರನಡೆದಿದ್ದರು.
ವಾಸ್ತವದಲ್ಲಿ ತಾನು ಮೊದಲ ದಿನ ಹೊಡೆದ ಪೆಟ್ಟಿನಿಂದ ಆ ಹುಡುಗಿಗೆ ದೊಡ್ಡ ಏಟಾಗಿತ್ತೆಂಬ ಸತ್ಯಾಗಲೀ, ಅವರೊಮ್ಮೆ ದೂರು ಕೊಟ್ಟಿದ್ದಾಗಲೀ ಆ ಶಿಕ್ಷಕರಿಗೆ ತಿಳಿದಿರಲೇ ಇಲ್ಲ. ತರಗತಿಯ ಹೊರಗೆ ತುಂಬಾ ಚುರುಕಾಗಿದ್ದ ಆ ಹುಡುಗಿ ಕಲಿಕೆಯಲ್ಲಿ ಹಿಂದುಳಿದಿದ್ದುದನ್ನು ಕಂಡು, ಉದಾಸೀನತೆಯಿಂದಾಗಿಯೇ ಕಲಿಯುತ್ತಿಲ್ಲ ಎಂದುಕೊಂಡು ಪೆಟ್ಟಿನಿಂದಲೇ ಸರಿ ಮಾಡುತ್ತೇನೆಂದು ಮತ್ತೆ ಮತ್ತೆ ಶಿಕ್ಷಿಸಿದ್ದರು. ತಾನು ಮೊದಲು ದೂರು ಕೊಟ್ಟಿದ್ದೇನೆಂಬ ಕಾರಣದಿಂದಲೇ ಮತ್ತೆ ಹೊಡೆದಿದ್ದಾರೆಂದು ತಾಯಿ ಭಾವಿಸಿದ್ದರು. ಛೇ! ನಾನಾದರೂ ಹೇಳಬೇಕಿತ್ತು ಎಂದುಕೊಂಡೆ. ಆ ಹಿರಿಯ ಶಿಕ್ಷಕರ ಕಣ್ಣೀರು ನಮ್ಮೆಲ್ಲರ ಮನಸ್ಸನ್ನೂ ಕದಡಿತ್ತು. ಮೊದಲ ದಿನ ಹುಡುಗಿಗಾದ ನೋವು ತಿಳಿದಿದ್ದರೆ ಅವರು ಎಚ್ಚೆತ್ತುಕೊಳ್ಳುತ್ತಿದ್ದಾರೇನೋ ಎಂದು ನಾವೆಲ್ಲ ಮಾತಾಡಿಕೊಂಡೆವು. ಮುಖ್ಯೋಪಾಧ್ಯಾಯರು ಮಾತ್ರ ತನ್ನ ವಿರೋಧಿಯಾಗಿದ್ದ ಆ ಊರಿನ ರಾಜಕೀಯ ನಾಯಕರ ಹೆಸರನ್ನು ಈ ಪ್ರಕರಣಕ್ಕೆ ತಳುಕು ಹಾಕುವ ಪ್ರಯತ್ನ ಮಾಡುತ್ತಿದ್ದರು.
* * *
ನಮ್ಮೆಲ್ಲರನ್ನು ಬಹಳ ದಿನ ಯೋಚನೆಗೆ ಹಚ್ಚಿಸಿದ ಘಟನೆಯದು. ಆ ಪೋಷಕರು ಹಾಗೆಲ್ಲಾ ವರ್ತಿಸಬಾರದಿತ್ತು ಎಂದು ಬಹಳ ಬಾರಿ ನಾನು ಯೋಚಿಸಿದ್ದಿದೆ.. ಮರುಕ್ಷಣವೇ ಮನಸ್ಸು ಅವರ ಮಗಳ ಸ್ಥಾನದಲ್ಲಿ ನನ್ನ ಮಗನನ್ನು ಕಲ್ಪಿಸಿಕೊಳ್ಳುತ್ತದೆ. ಇನ್ನೊಂದು ಘಳಿಗೆಯಲ್ಲಿ ಆ ಶಿಕ್ಷಕರ ಸ್ಥಾನದಲ್ಲಿ ನನ್ನನ್ನೇ ಕಲ್ಪಿಸಿಕೊಳ್ಳಬೇಕೆನಿಸುತ್ತದೆ. ಆ ಘಟನೆ ನಡೆಯಬಾರದಿತ್ತು ಎನ್ನುವುದೇನೋ ಸತ್ಯ... ಆದರೂ ಇದು ಮುಂದೆ ಇನ್ನಾವುದೋ ಮಗು ಆ ಶಿಕ್ಷಕರಿಂದ ಇಂತಹುದೇ ಶಿಕ್ಷೆ ಪಡೆದಿರುವುದನ್ನು ತಡೆದಿರಲೂಬಹುದು, ಆ ಶಿಕ್ಷಕರು ವೃತ್ತಿಜೀವನದಲ್ಲಿ ಇದಕ್ಕಿಂತ ದೊಡ್ಡ ಸಮಸ್ಯೆ ತಂದುಕೊಳ್ಳುವುದನ್ನೂ ತಡೆದಿರಲೂಬಹುದು. ಅದಕ್ಕಿಂತ ಮಿಗಿಲಾಗಿ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಾದ ನಾವುಗಳೂ, ಓದುತ್ತಿರುವ ನೀವುಗಳೂ ಇಂತಹ ಸಂದರ್ಭಗಳು ಮರುಕಳಿಸದಂತೆ ಎಚ್ಚರವಹಿಸಲು ಕಾರಣವಾಗಲೂಬಹುದು. ನೀವೇನಂತೀರಿ?
- ಸದಾಶಿವ ಕೆಂಚನೂರು
ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799