ಇಂಗ್ಲೀಷ್ ಮೇಷ್ಟ್ರ ವಿಜ್ಞಾನ ಪಾಠವೂ…., ರಾಸಾಯನಿಕ ಬದಲಾವಣೆಯೂ… – ಶಿಕ್ಷಕನ ಡೈರಿಯಿಂದ 49

WhatsApp Group Join Now
Telegram Group Join Now

ಶಿಕ್ಷಕನ‌ ಡೈರಿಯಿಂದ

ಇಂಗ್ಲೀಷ್ ಮೇಷ್ಟ್ರ ವಿಜ್ಞಾನ ಪಾಠವೂ…., ರಾಸಾಯನಿಕ ಬದಲಾವಣೆಯೂ…

    ಶಾಲೆಯಲ್ಲೊಂದು‌‌ ಚೆಂದದ ವಿಜ್ಞಾನ ಮೇಳ ಆಯೋಜಿಸಬೇಕೆನ್ನುವುದು ನನ್ನ ಬಹುಕಾಲದ‌ ಕನಸಾಗಿತ್ತು. ನಾನು ಹೈಸ್ಕೂಲು ಓದಿದ ಮುಲ್ಕಿಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪ್ರತೀವರ್ಷ ನಡೆಯುತ್ತಿದ್ದ ವಿಜ್ಞಾನ ಮೇಳದ ನೆನಪುಗಳು ನಮ್ಮ ಶಾಲೆಯಲ್ಲಿಯೂ ಇಂತಹ ಕಾರ್ಯಕ್ರಮ ನಡೆಸಬೇಕೆಂದು ಪ್ರಚೋದಿಸುತ್ತಿದ್ದವು. ಆದರೆ ವಿಜ್ಞಾನ ಶಿಕ್ಷಕನಲ್ಲದ ಮತ್ತು ವಿಜ್ಞಾನದ ಜ್ಞಾನ ತುಸು ಕಮ್ಮಿಯೇ ಇರುವ ನನ್ನಿಂದ ವಿಜ್ಞಾನ ಮೇಳದ ಆಯೋಜನೆ ಸಾಧ್ಯವೇ? ಹೀಗೇ ನನ್ನ ಕನಸನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದೆ. ನನ್ನ ಸಹೋದ್ಯೋಗಿ ವಿಜ್ಞಾನ ಶಿಕ್ಷಕರುಗಳಲ್ಲೂ ಅಂತಹುದೇ ಕನಸಿತ್ತು. ಅವರ ಶ್ರಮದಿಂದ ಭರ್ಜರಿಯಾದ ವಿಜ್ಞಾನ ಹಬ್ಬವೂ‌‌ ಸಂಪನ್ನಗೊಂಡಿತ್ತು. ಹಬ್ಬದ ಆಯೋಜನೆಯ ಕನಸು ಕಂಡಿದ್ದನ್ನು ಬಿಟ್ಟರೆ, ಅದರ ಆಯೋಜನೆಯಲ್ಲಿ ನನ್ನ ಪರಿಶ್ರಮವೇನಿಲ್ಲದಿದ್ದರೂ, ಆ ಕಾರ್ಯಕ್ರಮದ ರೂವಾರಿಗಳಲ್ಲಿ ನಾನೂ ಒಬ್ಬನೆಂಬಂತೆ ಪೋಸು ಕೊಟ್ಟು ಸಂಭ್ರಮಿಸಿದ್ದೆ. ವಿಜ್ಞಾನ ಮಾದರಿಗಳ ತಯಾರಿ, ಪ್ರಯೋಗಗಳ ಸಿದ್ಧತೆಯಲ್ಲಿ ವಿಜ್ಞಾನ ಶಿಕ್ಷಕರು ಮಾರ್ಗದರ್ಶನ ನೀಡುವಾಗ ಬೆರಗುಗಣ್ಣುಗಳಿಂದ ನೋಡುತ್ತಿದ್ದೆ. ವಿಜ್ಞಾನ ಶಿಕ್ಷಕನಾಗುವುದೆಂದರೆ ಎಷ್ಟು ಚೆನ್ನ ಎಂಬ ಯೋಚನೆ ಆಗ ಮನಸ್ಸಿಗೆ ಬರುತ್ತಿತ್ತು. ಆ ಕ್ಷಣಕ್ಕೆ ಹಿಂದೆ ನಾನೂ ವಿಜ್ಞಾನ ಪಾಠ ಮಾಡಿದ ದಿನಗಳು ನೆನಪಾದವು.

   ಹನ್ನೊಂದೂವರೆ ವರ್ಷಗಳ ಕಾಲ ಕರ್ತವ್ಯನಿರ್ವಹಿಸಿದ್ದ ಮೊದಲ ಶಾಲೆಯಲ್ಲಿ ಇಂಗ್ಲೀಷ್ ಬಿಟ್ಟು ಉಳಿದ ವಿಷಯಗಳನ್ನು ಕಲಿಸಿದ್ದು ತುಂಬಾ ಕಡಿಮೆಯಾದರೂ ವಿಜ್ಞಾನವೊಂದನ್ನು ಬಿಟ್ಟು ಉಳಿದ ವಿಷಯಗಳನ್ನು ಅಪರೂಪಕ್ಕಾದರೂ ಭೋದಿಸಿದ್ದಿತ್ತು. ವಿಜ್ಞಾನ ಕಲಿಸಿದ್ದು ಡಿ ಎಡ್ ತರಬೇತಿ ಅವಧಿಯ ಅಭ್ಯಾಸ ಬೋಧನೆಗಳಲ್ಲಿ ಮಾತ್ರ. ಈಗಿನ ಶಾಲೆಗೆ ಬಂದಾಗ ಇಲ್ಲಿ ವಿಜ್ಞಾನ ಶಿಕ್ಷಕರು ಇರಲಿಲ್ಲವಾದ್ದರಿಂದ ಹಿರಿಯ ತರಗತಿಗಳಿಗೆ ವಿಜ್ಞಾನ ಕಲಿಸುವ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ಳಬೇಕಾಯಿತು. ನನಗೂ ಉತ್ಸಾಹವಿತ್ತು. ಮಕ್ಕಳಲ್ಲಿ ಕುತೂಹಲ ಕೆರಳಿಸುವ ಮತ್ತು ಕಲಿಕೆಯನ್ನು ಅರ್ಥಪೂರ್ಣವಾಗಿ‌ ಕಟ್ಟಿಕೊಳ್ಳಲು ನೆರವಾಗುವ ಅವಕಾಶ ವಿಜ್ಞಾನದಷ್ಟು ಇನ್ಯಾವ ವಿಷಯಗಳಲ್ಲಿ ಸಿಗಲಾರದು ಎಂಬುದು ನಾನು ಈಗಲೂ ದೃಢವಾಗಿ ನಂಬುವ ವಿಚಾರ. ಆದರೆ ಹತ್ತನೇ ತರಗತಿಯವರೆಗಷ್ಟೇ ವಿಜ್ಞಾನ ಕಲಿತಿದ್ದವನು ನಾನು. ಏಳನೇ ತರಗತಿಯ ಪಠ್ಯದಲ್ಲಿರುವುದನ್ನು ಅರ್ಥ ಮಾಡಿಕೊಳ್ಳಲು ಮತ್ತು ಅರ್ಥಮಾಡಿಸಲು ನನಗೇನೂ ಕಷ್ಟವಾಗಿರಲಿಲ್ಲವಾದರೂ, ಪಠ್ಯ ಪ್ರವೇಶಿಸಿದಾಕ್ಷಣ ಮಕ್ಕಳಲ್ಲಿ ಹುಟ್ಟಬಹುದಾದ ಹತ್ತಾರು ಪ್ರಶ್ನೆಗಳು ನನ್ನ ಮನಸ್ಸಲ್ಲಿಯೇ ಹುಟ್ಟಿಕೊಳ್ಳುತ್ತಿದ್ದವು. ಗೂಗಲ್ಲೆಂಬ ಆಪ್ತಮಿತ್ರನಿಲ್ಲದಿದ್ದರೆ ನಾನು ವಿಜ್ಞಾನ ಕಲಿಸುವುದನ್ನು ಆನಂದಿಸಲು ಸಾಧ್ಯವಾಗುತ್ತಿರಲಿಲ್ಲವೇನೋ.. ಗೂಗಲ್ನೊಡನೆ ದಿನಕ್ಕೆ ಕನಿಷ್ಟ ಅರ್ಧಗಂಟೆಯಾದರೂ ಕಳೆಯಬೇಕಾದ ಅನಿವಾರ್ಯತೆಯನ್ನು ನನ್ನೊಳಗೆ ಹುಟ್ಟುತ್ತಿದ್ದ ಪ್ರಶ್ನೆಗಳು ಸೃಷ್ಟಿಸಿದ್ದವು. ವಾಸ್ತವದಲ್ಲಿ ಅವೆಲ್ಲವೂ ಮಕ್ಕಳಲ್ಲಿ ಹುಟ್ಟುವ ಪ್ರಶ್ನೆಗಳೇನೂ ಆಗಿರಲಿಲ್ಲವಾದರೂ ನನ್ನ ಅರಿವಿನ ವಿಸ್ತಾರ ಹೆಚ್ಚಿಸಲಾದರೂ ಅವು ನೆರವಾಗುವಂತಿದ್ದವು. ಆದರೆ ಎಲ್ಲಾ ಜ್ಞಾನವನ್ನು ಗೂಗಲ್ ನೀಡಲು ಸಾಧ್ಯವೇ? ಕೆಲವು ಕಲಿಕೆಗಳು ಅನುಭವದಿಂದಲೇ ಆಗಬೇಕು.

    ಒಂದು ದಿನ ಪ್ರಯೋಗವೊಂದಕ್ಕೆಂದು ರಾಸಾಯನಿಕವೊಂದನ್ನು ತರಗತಿಗೆ ಕೊಂಡೊಯ್ದಿದ್ದೆ. ನನ್ನ ಸೀಮಿತ ಜ್ಞಾನದ ಕಾರಣದಿಂದಲೂ, ಘಟನೆ ನಡೆದು ಮೂರ್ನಾಲ್ಕು ವರ್ಷಗಳಾದುದರಿಂದಲೂ ಆ ಪ್ರಯೋಗ ಯಾವುದು ಎಂದಾಗಲೀ, ಉಪಯೋಗಿಸಿದ ರಾಸಾಯನಿಕ ಯಾವುದೆಂದಾಗಲೀ ನನಗೆ ನೆನಪಿಲ್ಲ. ಯಾವುದೋ ಲವಣವೊಂದರ ಹರಳುಗಳನ್ನು ನೀರಲ್ಲಿ ಕದಡಿದ್ದಷ್ಟೇ ನೆನಪು. ಪ್ರಯೋಗ ಮುಗಿದ ನಂತರ ಇರಬೇಕು, ಆ ದ್ರಾವಣ ಬಿಸಿಯಾಗಿರುವುದು ನನ್ನ ಗಮನಕ್ಕೆ ಬಂತು. ಏನೋ ಕಂಡುಹಿಡಿದವನಂತೆ‌ ಖುಷಿಯಲ್ಲಿ "ನೋಡಿ, ಮೊನ್ನೆ ರಾಸಾಯನಿಕ ಬದಲಾವಣೆಗಳ ಲಕ್ಷಣಗಳನ್ನು ಹೇಳುವಾಗ ಉಷ್ಣ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದೆನಲ್ಲಾ, ನೋಡಿ... ಈ ನೀರು ಬಿಸಿಯಾಗಿದೆ" ಎಂದೆ. ಮಕ್ಕಳೆಲ್ಲರಲ್ಲೂ ಆ ನೀರನ್ನು ಸ್ಪರ್ಶಿಸಲು ಹೇಳಿದೆ‌. ಮಕ್ಕಳೆಲ್ಲರೂ ನೀರು ಮುಟ್ಟಿ ಬೆಚ್ಚಗಿರುವುದನ್ನು ಕಂಡು ಕೌತುಕಭರಿತರಾಗಿದ್ದರು. ಎಲ್ಲಾ ಮಕ್ಕಳ ಸರದಿ ಮುಗಿಯುವ ಹೊತ್ತಿಗೆ ನಡುವಿನಿಂದ ಒಬ್ಬ ವಿದ್ಯಾರ್ಥಿ "ಸರ್... ವಾಸನೆ" ಎಂದು ಚೀರಿದ. ಅವನ ಬೆನ್ನಿಗೇ ಒಂದಿಬ್ಬರು "ಹೌದು.... ವ್ಯಾಕ್" ಎಂದು ಬಿಟ್ಟಿದ್ದರು. ಮರುಕ್ಷಣವೇ ಇಡೀ ತರಗತಿ ಅದನ್ನೇ ಪುನರುಚ್ಛರಿಸಿತ್ತು. ನನ್ನ ಕೈಯನ್ನು ಮೂಗಿನ ಬಳಿಗಿಟ್ಟೆ.. ಒಂದು ಬಗೆಯ ಕೆಟ್ಟ ವಾಸನೆ. ಮಕ್ಕಳೆಲ್ಲರೂ "ಯಬಾ" ಎಂದು ಕಿರುಚುತ್ತಾ ಬೇಸ್ತು ಬಿದ್ದೆವೆಂದು ನಗುತ್ತಿದ್ದರೆ ತನ್ನ ಉದಾಸೀನತೆಯ ಕಾರಣದಿಂದ ನೀರನ್ನು ಮುಟ್ಟದೇ ಕುಳಿತಿದ್ದ ಕೊನೆಯ ಬೆಂಚಿನ ವಿವೇಕ ಮುಸಿಮುಸಿ ನಗುತ್ತಿದ್ದ. 

     ಸಾಬೂನು ಹಾಕಿ ತೊಳೆದರೂ ನಮ್ಮ ಕೈಯ ವಾಸನೆಯನ್ನು ಹೋಗಲಾಡಿಸಲಾಗಿರಲಿಲ್ಲ. ಮಕ್ಕಳೊಂದಿಗೆ ನಾನೂ ಬೇಸ್ತುಬಿದ್ದಿದ್ದೆ. ಆ ಕ್ಷಣಕ್ಕೆ ರಾಸಾಯನಿಕ ಬದಲಾವಣೆಯ ಲಕ್ಷಣಗಳ ಪಟ್ಟಿಯಲ್ಲಿ "ವಾಸನೆ ಬದಲಾಗಬಹುದು, ಇಲ್ಲವೇ ಹೊಸ ವಾಸನೆ ಬರಬಹುದು" ಎಂಬ ಅಂಶವಿದ್ದದ್ದು ನೆನಪಾಯಿತು. ಮಕ್ಕಳಿಗೆ ಅದನ್ನು ನೆನಪಿಸಿದೆ. ಇದಾಗಿ ಕೆಲವು ದಿನಗಳಲ್ಲಿ ಶಾಲೆಗೆ ವಿಜ್ಞಾನ ‌ಶಿಕ್ಷಕರು ಬರುವುದರೊಂದಿಗೆ ನಾನು ವಿಜ್ಞಾನ ವಿಷಯಕ್ಕೆ ವಿದಾಯ ಹೇಳಿದೆ. ( ಇಷ್ಟು ಬರೆದ ಮೇಲೆ ಆ ಪ್ರಯೋಗ ಯಾವುದೆಂದು ಏಳನೇ ತರಗತಿಯ ವಿಜ್ಞಾನ ಪುಸ್ತಕದಲ್ಲಿ ಹುಡುಕಿದೆನಾದರೂ ಅಂಥದೊಂದು ಪ್ರಯೋಗ ಕಾಣಿಸಲಿಲ್ಲ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಆ ಪ್ರಯೋಗಕ್ಕೆ  ಕತ್ತರಿ ಬಿದ್ದಿದೆಯೋ, ಅಥವಾ ಈಗ ಪಠ್ಯದಲ್ಲಿರುವ ಪ್ರಯೋಗವನ್ನು ನಾನು ಗುರುತಿಸಲಾಗಲಿಲ್ಲವೋ ತಿಳಿಯದು.)

    ಘಟನೆಯನ್ನು ನೆನಪಿಸಿಕೊಂಡಾಗ ಈಗ ನನ್ನಲ್ಲಿಷ್ಟು ಪ್ರಶ್ನೆಗಳು ಹುಟ್ಟುತ್ತವೆ. ಆ ನೀರನ್ನು ಮುಟ್ಟಿದಾಗ ಕೆಟ್ಟ ವಾಸನೆಯಲ್ಲದೇ, ಚರ್ಮದ ಅಲರ್ಜಿಯೋ, ಅಥವಾ ಇನ್ನೇನೋ ಸಮಸ್ಯೆ ಆಗುವಂತಿದ್ದರೆ? ಒಬ್ಬ ಶಿಕ್ಷಕನ ಜ್ಞಾನದ ಮಿತಿ ಅನಾಹುತವೊಂದಕ್ಕೆ ಕಾರಣವಾಗಲೂಬಹುದೆನ್ನುವುದಕ್ಕೆ ಇದೂ ಒಂದು ಸಣ್ಣ ಉದಾಹರಣೆಯಲ್ಲವೇ.....? ಇದಕ್ಕಾಗಿ ಶಾಲೆಯೊಂದರಲ್ಲಿ ಎಲ್ಲಾ ವಿಷಯಕ್ಕೂ ಪರಿಣಿತರಾದ ಶಿಕ್ಷಕರು ಬೇಕೆನ್ನಲೇ‌‌....? ಅಥವಾ ಶಿಕ್ಷಕನಾಗಿರುವವನು ಎಲ್ಲಾ ವಿಷಯದಲ್ಲಿ ಪರಿಣಿತನಾಗಿರಬೇಕೆನ್ನಲೇ....? ಒಬ್ಬ ಶಿಕ್ಷಕನಾಗಿ ಎಲ್ಲಾ ವಿಷಯಗಳಲ್ಲಿ ನಾನು ಪರಿಣಿತನಾಗಬೇಕಿತ್ತೇ.....? ಇದು ನನ್ನ ವೈಫಲ್ಯವೇ ಅಥವಾ ನಮಗೆ ತರಬೇತಿ ನೀಡುವ ವ್ಯವಸ್ಥೆಯದ್ದೇ....? ಪ್ರತೀ ವರ್ಷ ರಾಶಿ ರಾಶಿ ತರಬೇತಿ ಪಡೆಯುವ ನಾವುಗಳು ಎಲ್ಲಾ ಪಠ್ಯವಿಷಯಗಳಲ್ಲಿ ನಮ್ಮ ಪರಿಣತಿಯನ್ನು ಹೆಚ್ಚಿಸಿಕೊಳ್ಳುವಂತಹ ತರಬೇತಿ ಪಡೆಯುತ್ತಿದ್ದೇವೆಯೇ...? ಹೀಗೆ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತಿದೆ...

     - ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು
ಸದಾಶಿವ ಕೆಂಚನೂರು

ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏
Mob:97417 02799

WhatsApp Group Join Now
Telegram Group Join Now
Sharing Is Caring:

1 thought on “ಇಂಗ್ಲೀಷ್ ಮೇಷ್ಟ್ರ ವಿಜ್ಞಾನ ಪಾಠವೂ…., ರಾಸಾಯನಿಕ ಬದಲಾವಣೆಯೂ… – ಶಿಕ್ಷಕನ ಡೈರಿಯಿಂದ 49”

Leave a Comment