ದ.ಕ.ಜಿ.ಪಂ ಸರಕಾರಿ ಶಾಲೆ ಹರೇಕಳ ಸಜಿಪನಾಡು. ಒಂದುಹಿನ್ನೋಟ:-
1990 ರ ದಶಕದಲ್ಲಿ ಓದುಬರಹ ಗೊತ್ತಿರದ ಶ್ರೀಯುತ ಹರೇಕಳ ಹಾಜಬ್ಬರು ತಮಗೆ ಕಿತ್ತಳ ವ್ಯಾಪಾರದ
ಸಮಯದಲ್ಲಿ ಸಮಾಜದಲ್ಲಿ ಉಂಟಾದ ಭಾಷಾ ಮುಜುಗರದಿಂದಾಗಿ ಒಂದು ದೃಢ ನಿರ್ಧಾರಕ್ಕೆ ಬಂದರು. ತನ್ನೂರಿನ ಮಕ್ಕಳು ತನ್ನಂತೆ
ಅನಕ್ಷರಸ್ಥರಾಗಬಾರದೆಂದು ಶಿಕ್ಷಣ ನೀಡಲು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಹರೇಕಳ
ಗ್ರಾಮದ ಪಡು ಎಂಬ ಕುಗ್ರಾಮದಲ್ಲಿ ಸರಕಾರಿ ಶಾಲೆಯೊಂದನ್ನು ತೆರೆಯುವ ಸಂಕಲ್ಪ ತೊಟ್ಟರು.
ಅದರಂತೆ ದಿನಾಂಕ 17-6-2000 ರಂದು ಅವರ ಶತಪ್ರಯತ್ನದಿಂದಾಗಿ ಸರಕಾರಿ ಪ್ರಾಥಮಿಕ ಶಾಲೆಯ
ಪ್ರಥಮ ತರಗತಿಯು ಪಡುವಿನ ತ್ಯಾಹಾ ಮಸೀದಿಯ ಮದರಸಾ ಕಟ್ಟಡದಲ್ಲಿ ಒರ್ವ ನಿಯೋಜಿತ ಶಿಕ್ಷಕ ಮತ್ತು 28 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯವರ ಸಹಕಾರ. ಹಾಗೆಯೇ ಶಾದಿಮಹಲ್ ಮಂಗಳೂರು ಇವರ ಸಹಕಾರ ಶಾಲೆಗೆ ಶಿಕ್ಷಕರ ಕೊರತೆಯನ್ನು ನೀಗಿಸಿತು.
ಮುಂದೆ ದಾನಿಗಳ ಸಹಕಾರದಿಂದ ಶಾಲೆಗಾಗಿ ಪಡುವಿನಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಲಾಯಿತು. ಇದಕ್ಕಾಗಿ ಸರಕಾರ ಮತ್ತು ಕೆನರಾ ಬ್ಯಾಂಕ್, ಯೆನೆಪೋಯ ವೈದ್ಯಕೀಯ ಕಾಲೇಜ್, ಇತ್ಯಾದಿ ಸಂಘಸಂಸ್ಥೆಗಳ ಸಹಕಾರ ಪಡೆದುಕೊಂಡರು. ಕಠಿಣ ಪರಿಶ್ರಮದ ಫಲವಾಗಿ 2000-2001 ನೇ ಸಾಲಿನಲ್ಲಿ
1ರಿಂದ 5 ನೇ ತರಗತಿಯ ವರೆಗೆ ಪ್ರಾಥಮಿಕ ಶಿಕ್ಷಣ ಸ್ವಂತ ಕಟ್ಟಡದಲ್ಲಿ ಆರಂಭವಾಯಿತು. ಇಷ್ಟಕ್ಕೇ ಸುಮ್ಮನಿರದ
ಹಾಜಬ್ಬರು ಪ್ರಾಥಮಿಕ ಶಾಲೆಗೂ ಮಂಜೂರಾತಿ ಪಡೆದರು. 2005-06 ನೇ ಸಾಲಿನಲ್ಲಿ 6ನೇ ತರಗತಿ ಪ್ರಾರಂಭವಾಯಿತು.ಈ ಹಂತದಲ್ಲಿ 7 ಶಿಕ್ಷಕರು ಶಿಕ್ಷಣ ಇಲಾಖೆಯಿಂದ ನೇಮಕಗೊಂಡರು.
ಕೆನರಾ ಬ್ಯಾಂಕ್ ಸಹಕಾರದಿಂದ ರಂಗಮಂದಿರವನ್ನು ನಿರ್ಮಿಸಲಾಯಿತು.ಇದೇ ರಂಗಮಂದಿರದಲ್ಲಿ ಪ್ರೌಢಶಾಲಾ ತರಗತಿಗಳು 2007 ರಲ್ಲಿ ಆರಂಭಗೊಂಡವು. ಮೊದಲಿಗೆ ಸುಮಾರು 85 ಮಕ್ಕಳನ್ನು ಹೊಂದಿದ್ದ 8 ಮತ್ತು 9ನೇ ತರಗತಿಗಳಿಗೆ 2008 ರಲ್ಲಿ 5 ಮಂದಿ ವಿಷಯ ಶಿಕ್ಷಕರ ನೇಮಕವಾಯಿತು. 2009-10 ರಲ್ಲಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾದರು. ತದನಂತರದ ವರ್ಷಗಳಲ್ಲಿ ಪ್ರೌಢಶಾಲೆಗೆ ಮುಖ್ಯೋಪಾಧ್ಯಾಯರು,ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ನೇಮಕವಾಯಿತು.ಈ ಸಮಯಗಳಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಏರಿದ ಕಾರಣ ಪ್ರೌಢ ಶಾಲೆಗೆ ಸ್ವಂತ ಕಟ್ಟಡವೊಂದರ ಅಗತ್ಯ ಕಂಡುಬಂದ ಕಾರಣ ಹಾಜಬ್ಬರು ಪುನಃ ದಾನಿಗಳ ಸಹಕಾರದಿಂದ 52 ಸೆಂಟ್ಸ್ ಜಾಗವನ್ನು ಖರೀದಿಸಿದರು. HPCL ನೆರವು ಹಾಗೂ ಸರಕಾರದ ನಬಾರ್ಡ್ ಯೋಜನೆಯಡಿಯಲ್ಲಿ 18.60 ಲಕ್ಷ ಅನುದಾನದಿಂದ ಕಟ್ಟಡ ನಿರ್ಮಾಣಗೊಂಡು 2012 ರ ಜೂನ್ 14 ರಂದು ಉದ್ಘಾಟನೆಗೊಂಡಿತು.
ಪ್ರಸ್ತುತ ಪ್ರಾಥಮಿಕ ಶಾಲೆಯಲ್ಲಿ 14 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, 100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಹಾಗೂ ಪ್ರೌಢ ಶಾಲೆಯಲ್ಲಿ 6 ಮಂದಿ ವಿಷಯ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು 73ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪಣ ತೊಟ್ಟು ಕಿತ್ತಳೆ ಮಾರಿ ,ಎಲ್ಲರ ಸಹಕಾರ ಪಡೆದು ಶಾಲೆ ಕಟ್ಟಿದ ಹರೇಕಳ ಹಾಜಬ್ಬ ದೇಶದ ಹೆಮ್ಮೆ. ..ಅವರ ಬದುಕು ಸರಳತೆ ನಮಗೆಲ್ಲ ಆದರ್ಶ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿರುವುದ ಕ್ಕೆ ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಅಭಿನಂದನೆಗಳು.