ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಿವೃತ್ತರಾಗುವ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವರ ಇಲ್ಲಿದೆ

ಗುರುಭ್ಯೋ ನಮಃ

WhatsApp Group Join Now
Telegram Group Join Now

ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ

IMG 20211231 WA0003 min
IMG 20211231 WA0004 min

ವಿವಿಧ ವಿಷಯಗಳನ್ನು ನಿಸ್ವಾರ್ಥದಿಂದ ಕಲಿಸಿ ನಮ್ಮನ್ನು ಪ್ರಗತಿ ಪಥದಲ್ಲಿ ಕರೆದುಕೊಂಡು ಹೋಗುವವರು ಗುರುಗಳು. ಗುರುಗಳು ನಮ್ಮನ್ನು ಅಜ್ಞಾನದಿಂದ ಜ್ಞಾನದೆಡೆಗೆ ದಾರಿ ತೋರುತ್ತಾರೆ. ಈ ರೀತಿಯಾಗಿ ಅನೇಕ ಶಿಷ್ಯರಿಗೆ ಜ್ಞಾನದ ಬೆಳಕನ್ನು ತೋರಿ ಈ ತಿಂಗಳು ನಿವೃತ್ತಿಯನ್ನು ಹೊಂದುತ್ತಿರುವ ಜಿಲ್ಲೆಯ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ.

IMG 20211230 WA0018 min

ಕೆ ಪುಟ್ಟಣ್ಣ ನಾಯ್ಕ
ಸ.ಹಿ.ಪ್ರಾ ಶಾಲೆ ನಾವೂರು ಬೆಳ್ತಂಗಡಿ ತಾಲೂಕು

ಶ್ರೀಯುತರು 29. 12.1961 ರಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಂಜದಲ್ಲಿ, ಕಾಲೇಜು ಶಿಕ್ಷಣವನ್ನು ಸುಬ್ರಹ್ಮಣ್ಯದಲ್ಲಿ ಹಾಗೂ ಟಿ.ಸಿ.ಎಚ್ ನ್ನು ಉಡುಪಿಯ ಕೊಕ್ಕರ್ಣೆಯಲ್ಲಿ ಪೂರೈಸಿ 27.01.1986 ರಲ್ಲಿ ಸ.ಕಿ.ಪ್ರಾ.ಶಾಲೆ ಬಜಿಲ ಬೆಳ್ತಂಗಡಿಯಲ್ಲಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಂದೆ ಪಡ್ಲಾಡಿ ಲೈಲಾ, ಗಾಂಧಿ ನಗರಗಳಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಸ.ಹಿ.ಪ್ರಾ ಶಾಲೆ ನಾವೂರಿನಲ್ಲಿ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. ಅಂಗನವಾಡಿ ಶಿಕ್ಷಕಿಯಾಗಿರುವ ಪತ್ನಿ ರೇವತಿ ಮಕ್ಕಳಾದ ಪ್ರತೀಕ್ ಹಾಗೂ ಪರ್ಜನ್ಯ ರೊಂದಿಗಿನ ತಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20211230 WA0019 min

ಶ್ರೀ ವೆಂಕಟೇಶ್ ಪ್ರಭು
ಸ.ಹಿ.ಪ್ರಾ ಶಾಲೆ ಕಲ್ಮಂಜ
ಬೆಳ್ತಂಗಡಿ ತಾಲೂಕು

03.12.1961 ರಲ್ಲಿ ಜನಿಸಿದ ಇವರು ಮಡಿಕೇರಿಯಲ್ಲಿ ತಮ್ಮ ಶಿಕ್ಷಣ ತರಬೇತಿಯನ್ನು ಪೂರೈಸಿದರು. 09.01.1996 ರಲ್ಲಿ ಸ.ಹಿ.ಪ್ರಾ ಶಾಲೆ ಬಯಲು ಬೆಳ್ತಂಗಡಿ ಇಲ್ಲಿ ಸೇವೆಗೆ ಸೇರಿದರು. ಎಂಟು ವರ್ಷಗಳ ನಂತರ ಸ.ಹಿ.ಪ್ರಾ ಶಾಲೆ ಕಲ್ಮಂಜಕ್ಕೆ ವರ್ಗಾವಣೆಗೊಂಡು ಇಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. ಇವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20211230 WA0025 min

ಶ್ರೀ ಮೋಹನ್ ಕೆ ಎನ್
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲೂಕು

ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇಲ್ಲಿಯ ಸಹ ಶಿಕ್ಷಕರಾಗಿರುವ ಶ್ರೀ ಮೋಹನ್ ಕೆ ಎನ್ ಇವರು ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಕೈಂತಿಲ ಇಲ್ಲಿ 20 -12- 1961 ರಲ್ಲಿ ಜನಿಸಿದರು. ತಮ್ಮ ಶಿಕ್ಷಕ ತರಬೇತಿಯನ್ನು ಸರಕಾರಿ ಶಿಕ್ಷಕರ ತರಬೇತಿ ಕೇಂದ್ರ ಕೋಲಾರ ಇಲ್ಲಿ ಪಡೆದು 11-8- 1998 ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಡಬೆಟ್ಟು ಇಲ್ಲಿ ಸರಕಾರಿ ಕರ್ತವ್ಯವನ್ನು ಆರಂಭಿಸಿದರು. ತದನಂತರ ಮುಂಡೂರು,ಸವಣೂರು, ಕೆಯ್ಯೂರು ಇಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇಲ್ಲಿ ಸುಮಾರು ಒಂಬತ್ತು ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಡಿಸೆಂಬರ್ 31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಶಿಕ್ಷಣದ ಜೊತೆಯಲ್ಲಿ ಸೇವಾದಳ, ವಿವಿಧ ಹಂತದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಿ ತಾಲೂಕು, ಜಿಲ್ಲೆಗೆ ಕಳುಹಿಸಿರುತ್ತಾರೆ. ಮಕ್ಕಳಿಗೆ ಕವನ, ಕಥೆ, ಹಾಡಿನ ಮೂಲಕ ಮಕ್ಕಳ ಇಷ್ಟದ ಶಿಕ್ಷಕರಾಗಿದ್ದರು. ಅಲ್ಲದೆ ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದಾರೆ. ನಿಮಗೆ ನಿವೃತ್ತ ಜೀವನದ ಶುಭ ಹಾರೈಕೆಗಳು.

IMG 20211230 WA0024 min

ಶ್ರೀಮತಿ ಲಿಲ್ಲಿ ಕಾರ್ಮಿನ್ ವೇಗಸ್
ಸಹಶಿಕ್ಷಕಿ
ಸ.ಕಿ ಪ್ರಾ ಶಾಲೆ ವಳಕಡಮ ಪುತ್ತೂರು ತಾಲೂಕು

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದಿ.ಅಲ್ಬರ್ಟ್ ವೇಗಸ್ ಹಾಗೂ ದಿ.ರೇಜೀನ ಮೋನಿಸ್ ರವರ ಪುತ್ರಿಯಾದ ತಾವು 27.12.1961ರಂದು ಜನಿಸಿರುತ್ತೀರಿ. 20.4.1988 ರಂದು ವಿಲಿಯಂ ಸೆರಾವೋ ಇವರನ್ನು ವಿವಾಹವಾಗಿ ಲಿಲ್ಮಾ ಲೀಡಿಯಾ ಸೆರಾವೋ ಹಾಗೂ ಸೀಮಾ ಲವೀನಾ ಸೆರಾವೋ ಪುತ್ರಿಯರೊಂದಿಗೆ ಸುಖೀ ಜೀವನವನ್ನು ನಡೆಸುತ್ತಿದ್ದೀರಿ.
26.07.1993 ರಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸ.ಹಿ.ಪ್ರಾ.ಶಾಲೆ ಚಾವಳಿಯಲ್ಲಿ ಸೇವೆಗೆ ಸೇರಿದ ಇವರು 4 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಬಳಿಕ ಮಂಗಳೂರಿನ ಸ.ಹಿ.ಪ್ರಾ ಶಾಲೆ ಬೆಂಗ್ರೆ ಕಸಬಕ್ಕೆ ವರ್ಗಾವಣೆ ಗೊಂಡರು. ಇಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಪುತ್ತೂರು ತಾಲೂಕಿನ ಸ.ಕಿ.ಪ್ರಾ ಶಾಲೆ ವಳಕಡಮದಲ್ಲಿ 13.11.2019 ರಿಂದ ಸಹಶಿಕ್ಷಕಿಯಾಗಿ 2ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ನಿಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20211230 WA0016 min

ಶ್ರೀಮತಿ ಚಂದ್ರಲೇಖ ಎಂ
ಸ.ಹಿ.ಪ್ರಾ ಶಾಲೆ ಹೊಸಗದ್ದೆ
ಕಡಬ ತಾಲೂಕು

17.12.1962 ರಂದು ಮಂಗಳೂರಿನಲ್ಲಿ ಜನಿಸಿದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರೈಸಿ, ಟಿ.ಸಿ.ಹೆಚ್ ತರಬೇತಿಯನ್ನು ಉಡುಪಿಯ ಕೊಕ್ಕರ್ಣೆಯಲ್ಲಿ ಪೂರೈಸಿದರು. 1985 ರಲ್ಲಿ ಸ.ಹಿ.ಪ್ರಾ ಶಾಲೆ ಮಚ್ಚಿನ ಬೆಳ್ತಂಗಡಿಯಲ್ಲಿ ಸೇವೆಗೆ ಸೇರಿದರು. ಮುಂದೆ ಸ.ಹಿ.ಪ್ರಾ ಶಾಲೆ ಆಲಂಕಾರು ಇಲ್ಲಿಗೆ ವರ್ಗಾವಣೆಗೊಂಡರು. ಇಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಪಡೆದರು. ಸಿ.ಆರ್.ಪಿ ಯಾಗಿ ದುಡಿದರು. ಮುಂದೆ ಮುಖ್ಯ ಶಿಕ್ಷಕಿಯಾಗಿ ಹೊಸಗದ್ದೆ ಶಾಲೆಗೆ ಭಡ್ತಿಗೊಂಡು ಈ ತಿಂಗಳು ಸೇವೆಯಿಂದ ನಿವೃತ್ತಿಗೊಳ್ಳುತ್ತಿದ್ದಾರೆ.ಇವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20211230 WA0017 min

ಶ್ರೀ ಕುಸುಮಾಧರ ಕೆ
ಸ.ಉ.ಹಿ.ಪ್ರಾ.ಶಾಲೆ ಓಂತ್ರಡ್ಕ
ಕಡಬ ತಾಲೂಕು

12.12.1961 ರಲ್ಲಿ ದಿ.ಕೆ ಕೃಷ್ಣ ಗೌಡ ಮತ್ತು ಕೆ.ಲಕ್ಷ್ಮೀ ದಂಪತಿಗಳ ಮಗನಾಗಿ ಜನಿಸಿದ ಇವರು ಬಾಲ್ಯದ ವಿದ್ಯಾಭ್ಯಾಸವನ್ನು ಸ. ಮಾ.ಹಿ.ಪ್ರಾ.ಶಾಲೆ ಪಂಜ, ಪ್ರೌಢ ಶಿಕ್ಷಣವನ್ನು ಸ.ಪ.ಪೂ.ಕಾಲೇಜು ಪಂಜದಲ್ಲಿ ಮುಗಿಸಿ ಬಿ.ಎ ಪದವಿಯನ್ನು ಕೆ.ಎಸ್.ಓ.ಯು.ನಿಂದ ಪಡೆದು ಟಿ.ಸಿ.ಎಚ್.ತರಬೇತಿಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರಿನಲ್ಲಿ ಪಡೆದು 25.06.1991 ರಲ್ಲಿ ಶಿಕ್ಷಕ ವೃತ್ತಿಯನ್ನು ಸುಳ್ಯ ತಾಲೂಕಿನ ಸ.ಕಿ.ಪ್ರಾ.ಶಾಲೆ ಗೋವಿಂದ ನಗರ ಇಲ್ಲಿ ಪ್ರಾರಂಭಿಸಿ ಬಳಿಕ ಬಾಳುಗೋಡು, ಕುಂತೂರು,ಪಂಬೆತ್ತಾಡಿಯಲ್ಲಿ ಸೇವೆ ಸಲ್ಲಿಸಿ,ಪ್ರಸ್ತುತ ಸ.ಉ.ಹಿ.ಪ್ರಾ.ಶಾಲೆ ಓಂತ್ರಡ್ಕದಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.

IMG 20211230 WA0023 min

ಶ್ರೀ ದಯಾನಂದ ಮುತ್ಲಾಜೆ
ಸ.ಹಿ.ಪ್ರಾ ಶಾಲೆ ಗುತ್ತಿಗಾರು ಸುಳ್ಯ ತಾಲೂಕು

ಸುಂದರ ಗೌಡ ಹಾಗೂ ಸರೋಜಿನಿ ಅವರ ಪುತ್ರರಾಗಿ 15.12.1961 ರಲ್ಲಿ ಜನಿಸಿದ ಇವರು 27.10.1994 ರಲ್ಲಿ ಸ.ಹಿ.ಪ್ರಾ ಶಾಲೆ ಮುರದಲ್ಲಿ ಸೇವೆಗೆ ಸೇರಿದರು. ಮುಂದೆ ವರ್ಗಾವಣೆಗೊಂಡು ಸ.ಮಾ.ಹಿ.ಪ್ರಾ ಶಾಲೆ ಗುತ್ತಿಗಾರಿನಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿ ಈ ತಿಂಗಳು ನಿವೃತ್ತರಾಗುತ್ತಿದ್ದಾರೆ. ಪತ್ನಿ ಮಂಜುಳಾ ಮಗ ಶ್ರೇಯಸ್ ಹಾಗೂ ಮಗಳು ಶ್ವೇತಾಳೊಂದಿಗಿನ ತಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20211230 WA0021 min

ಶ್ರೀಮತಿ ಶಾರದಾ
ಸ.ಹಿ.ಪ್ರಾಥಮಿಕ ಶಾಲೆ ಕೆರೆಕಾಡು


16/12/1961ರಂದು ಜನಿಸಿದ ಇವರು 9/7/1985ರಲ್ಲಿ ಸ.ಮಾ.ಹಿ. ಪ್ರಾಥಮಿಕ ಶಾಲೆ ನಿಟ್ಟೆ ಕಾರ್ಕಳ ತಾಲೂಕು ಉಡುಪಿಯಲ್ಲಿ ಸೇವೆಗೆ ಸೇರಿದರು.ಮುಂದೆ ವರ್ಗಾವಣೆಗೊಂಡು ಬಂಟ್ವಾಳ ತಾಲೂಕಿನ ವೀರಕಂಭ ಮಂಚಿ ಚಂದಳಿಕೆ ವಿಟ್ಲದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಸ.ಹಿ.ಪ್ರಾಥಮಿಕ ಶಾಲೆ ಕೆರೆಕಾಡು ಮಂಗಳೂರು ತಾಲೂಕು ಇಲ್ಲಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು

IMG 20211230 WA0022 min

ಶ್ರೀಮತಿ ಇಜುಬೆಲ್ಲಾ ವೀರಾ ಜ್ಯೂಡಿಕ್ ಡಿಸೋಜ
ಸ.ಹಿ.ಪ್ರಾಥಮಿಕ ಶಾಲೆ ಮಧ್ಯ ಮಂಗಳೂರು ಉತ್ತರ


22/12/1961ರಂದು ಜನಿಸಿದ ಇವರು 2/3/1999ರಲ್ಲಿ ಸ.ಕಿ.ಪ್ರಾಥಮಿಕ ಶಾಲೆ ಹೊಸ್ತೋಟ ಪುತ್ತೂರು ತಾಲೂಕಿನಲ್ಲಿ ಸೇವೆಗೆ ಸೇರಿದರು.ಅಲ್ಲಿಂದ 2001ರಲ್ಲಿ ಸ.ಹಿ ಪ್ರಾಥಮಿಕ ಶಾಲೆ ಮಧ್ಯಕ್ಕೆ ವರ್ಗಾವಣೆಗೊಂಡು ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ

IMG 20211230 WA0020 min

ಶ್ರೀಮತಿ ಉಷಾ ವಿ.ಕೆ
ಸ.ಮಾ.ಹಿ ಪ್ರಾಥಮಿಕ ಶಾಲೆ ಪಡುಪಣಂಬೂರು ಮಂಗಳೂರು ಉತ್ತರ


19/12/1961 ರಲ್ಲಿ ಜನಿಸಿದ ಇವರು 9/7/1985ರಲ್ಲಿ ಸೇವೆಗೆ ಸೇರಿದರು ದೈಹಿಕ ಶಿಕ್ಷಣ ಶಿಕ್ಷಕರಾದ ಇವರು ಅನೇಕ ಮಕ್ಕಳನ್ನು ವಿವಿಧ ಕ್ರೀಡೆಯಲ್ಲಿ ತರಬೇತುಗೊಳಿಸಿದವರು.ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಇವರು ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20211230 WA0015 min

ಶ್ರೀ ಶ್ರೀಪತಿ ನಾಯಕ್ ಆಜೇರು
ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಸತ್ತಿಕಲ್ಲು, ಬಂಟ್ವಾಳ

ಶ್ರೀಪತಿ ನಾಯಕ್ ಅಜೇರು ಇವರು ಶ್ರೀಯುತ ರಾಮಪ್ಪ ನಾಯಕ್ ಮತ್ತು ಚಂದ್ರಾವತಿ ದಂಪತಿಗಳ ಪುತ್ರರಾಗಿ ದಿನಾಂಕ 12-01-1961 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಜೇರು ಇಲ್ಲಿ ಪಡೆದು, ಪ್ರೌಢಶಿಕ್ಷಣವನ್ನು ಜನತಾ ಪ್ರೌಢಶಾಲೆ ಅಡ್ಯನಡ್ಕ ದಲ್ಲಿ ಪಡೆದಿರುತ್ತಾರೆ. ಶಿಕ್ಷಕ ಶಿಕ್ಷಣ ತರಬೇತಿಯನ್ನು ಕೊಡಗು ಜಿಲ್ಲೆಯ ಕೂಡಿಗೆ ಇಲ್ಲಿ ಪಡೆದಿರುತ್ತಾರೆ. ದಿನಾಂಕ 04-09-1985 ರಂದು ಕಾರ್ಕಳ ದಕ್ಷಿಣ ವಲಯದ ಪಣಪಿಲ ಶಾಲೆಯಲ್ಲಿ ಸೇವೆಗೆ ಸೇರ್ಪಡೆಗೊಂಡು ಮುಂದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದಂಬೆ, ಆಜೇರು, ನಾಟೆಕಲ್ಲು ಇಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಅಜ್ಜಿನಡ್ಕ ಮತ್ತು ಉದಯಗಿರಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸತ್ತಿಕಲ್ಲು ಇಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ದಿನಾಂಕ 31-12-2021ರಂದು ವಯೋನಿವೃತ್ತಿ ಯನ್ನು ಹೊಂದಿರುತ್ತಾರೆ.
ಪತ್ನಿ ಉಮಾ ಮತ್ತು ಯಕ್ಷಗಾನ ಭಾಗವತಳಾದ ಮಗಳು ಕಾವ್ಯಶ್ರೀ ನಾಯಕ್ ಹಾಗೂ ಯಕ್ಷಗಾನ ಮತ್ತು ಹಿಮ್ಮೇಳ ವಾದಕರಾದ ಮಗ ವಿಭುರಾಮ ಇವರೊಂದಿಗೆ ಸುಖೀ ಸಂಸಾರವನ್ನು ನಡೆಸುತ್ತಿರುವ ತಮಗೆ ನಿವೃತ್ತ ಜೀವನದ ಶುಭಾಶಯಗಳು.

IMG 20211231 WA0005 min

ಶ್ರೀಮತಿ. ಕೆ. ಜಯಂತಿ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ನೀರ್ಕಜೆ ಬಂಟ್ವಾಳ.

ಶ್ರೀಮತಿ ಕೆ ಜಯಂತಿ ಇವರು ಪುತ್ತೂರು ತಾಲೂಕು ಬೆಳ್ಳಿಪಾಡಿ ಗ್ರಾಮದ ಕೂಟೇಲು ಎಂಬಲ್ಲಿ ಶ್ರೀ ಕೆ. ಬಿರ್ಮಣ್ಣ ಗೌಡ ಹಾಗೂ ಶ್ರೀಮತಿ ವೀರಮ್ಮ ದಂಪತಿಗಳ ಸುಪುತ್ರಿಯಾಗಿ ದಿನಾಂಕ 01-01- 1962 ರಂದು ಜನಿಸಿದರು. ಬೆಳ್ಳಿಪ್ಪಾಡಿ, ಪುತ್ತೂರು ಮತ್ತು ಮಂಗಳೂರಿನಲ್ಲಿ ವಿದ್ಯಾಭ್ಯಾಸವನ್ನು ಪಡೆದು ದಿನಾಂಕ 18- 07- 1985 ರಲ್ಲಿ ಬೆಳ್ತಂಗಡಿ ತಾಲೂಕಿನ ಬಂಗಾಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರಿದರು. ಅಲ್ಲಿ ಒಂದು ವರ್ಷ ಕರ್ತವ್ಯವನ್ನು ನಿರ್ವಹಿಸಿ, ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ದೇಲಂತಬೆಟ್ಟು ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಪಡೆದು ಶಿಕ್ಷಕಿಯಾಗಿ, ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸುಮಾರು 23 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿರುತ್ತಾರೆ. 2001- 2002ನೇ ಸಾಲಿನಲ್ಲಿ ತಮ್ಮ ಪ್ರಾಮಾಣಿಕ ದಕ್ಷ ಕರ್ತವ್ಯಕ್ಕೆ “ಜನ ಮೆಚ್ಚಿದ ಶಿಕ್ಷಕಿ” ಪ್ರಶಸ್ತಿಯನ್ನು ಪಡೆದಿರುತ್ತಾರೆ. ದಿನಾಂಕ 24-05- 2009 ರಂದು ಪಡಿಬಾಗಿಲು ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಇಲ್ಲಿ ಐದು ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ದಿನಾಂಕ 25-06- 2014 ರಂದು ಮುಖ್ಯ ಶಿಕ್ಷಕಿಯಾಗಿ ಬಡ್ತಿ ಹೊಂದಿ ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರ್ಕಜೆ ಇಲ್ಲಿ ಸೇವೆಯನ್ನು ಮುಂದುವರಿಸಿರುತ್ತಾರೆ.

ಶಿಕ್ಷಕ ವೃತ್ತಿಯನ್ನು ಪ್ರೀತಿಸುತ್ತಾ, ಶಿಕ್ಷಣ ರಂಗವನ್ನು ಗೌರವಿಸುತ್ತಾ, ವಿದ್ಯಾರ್ಥಿಗಳೊಂದಿಗೆ ಆತ್ಮೀಯತೆಯನ್ನು, ಪಾಠದೊಂದಿಗೆ ಮೌಲ್ಯ ಶಿಕ್ಷಣವನ್ನು ನೀಡುತ್ತಾ ಬಂದಿರುತ್ತಾರೆ. ಸಹೋದ್ಯೋಗಿಗಳೊಂದಿಗೆ ಸ್ನೇಹಮಯ ಸಂಬಂಧದೊಂದಿಗೆ ಶಾಲಾ ಕಚೇರಿ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುತ್ತಾರೆ. ಶಾಲೆ ಹಾಗೂ ಶಾಲಾ ಆಸ್ತಿಯನ್ನು ರಕ್ಷಿಸುತ್ತಾ, ಶಾಲಾ ಪರಿಸರದಲ್ಲಿ ಕಲ್ಪವೃಕ್ಷ ಹಾಗೂ ಹಸಿರು ಮರಗಳನ್ನು ನಿರ್ಮಿಸಿ ಪೋಷಕರೊಂದಿಗೆ ಉತ್ತಮ ಬಾಂಧವ್ಯ ದೊಂದಿಗೆ ಸುಮಾರು 36 ವರ್ಷ 5 ತಿಂಗಳ ಕಾಲ ಸೇವಾವಧಿಯನ್ನು ಆತ್ಮತೃಪ್ತಿಯೊಂದಿಗೆ ಕೊನೆಗೊಳಿಸಿರುತ್ತಾರೆ.

1982 ರಲ್ಲಿ ಅಳಿಕೆ ಶ್ರೀಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ ಶ್ರೀಯುತ ನೀಲಪ್ಪ ಗೌಡರನ್ನು ವಿವಾಹವಾಗಿರುತ್ತಾರೆ. ಮೂರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಸಂತೃಪ್ತ ಜೀವನ ನಡೆಸುತ್ತಿರುತ್ತಾರೆ. ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ಶ್ರಮಿಸಿ, ಶಾಲೆಯ ಸರ್ವಾಂಗೀಣ ಪ್ರಗತಿಗೆ ಕಾರಣರಾಗಿರುತ್ತಾರೆ. ಸತತ 36 ವರ್ಷ 5 ತಿಂಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ದಿನಾಂಕ 31- 12- 2021 ರಂದು ನಿವೃತ್ತಿಯನ್ನು ಹೊಂದಿರುತ್ತಾರೆ. ತಮಗೆ ನಿವೃತ್ತ ಜೀವನದ ಶುಭಾಶಯಗಳು.

IMG 20211230 204245 min

ಶ್ರೀಮತಿ ಉದಯ ಕುಮಾರಿ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬಾಳೆಪುಣಿ ಮುದುಂಗಾರು ಕಟ್ಟೆ ಬಂಟ್ವಾಳ.

ಶ್ರೀಮತಿ ಉದಯಕುಮಾರಿ
ಇವರು ಮಂಗಳೂರಿನ ಶ್ರೀ ಕೃಷ್ಣಮೂರ್ತಿ ಹಾಗೂ ಶ್ರೀಮತಿ ಶಾಂತಾ ದಂಪತಿಗಳ ಪುತ್ರಿಯಾಗಿ ಜನಿಸಿರುತ್ತಾರೆ. ಪ್ರಾಥಮಿಕ ಶಿಕ್ಷಣವನ್ನು ಅಶೋಕನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿ 6ನೇ ತರಗತಿಯಿಂದ ಬಿಜೈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿರುತ್ತಾರೆ. ಲೂರ್ಡ್ಸ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ಹೆಣ್ಣುಮಕ್ಕಳ ಶಿಕ್ಷಕ ತರಬೇತಿ ಸಂಸ್ಥೆ ಬಲ್ಮಠ ಇಲ್ಲಿ ಶಿಕ್ಷಕ ಶಿಕ್ಷಣ ತರಬೇತಿಯನ್ನು ಪಡೆದು, ಕಲಿತ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. 1984 ರಿಂದ 1991 ರ ವರೆಗೆ ಆದರ್ಶ ಭಾರತಿ ಪ್ರೌಢಶಾಲೆಯಲ್ಲಿ ವೃತ್ತಿ ಹಾಗೂ ಚಿತ್ರಕಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. 1991 ಆಗಸ್ಟ್ನಲ್ಲಿ ಸರಕಾರಿ ಶಾಲೆ ಸುಜೀರು ಇಲ್ಲಿ ಸರಕಾರಿ ಸೇವೆ ಆರಂಭಿಸಿ ನಾಲ್ಕು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುತ್ತಾರೆ. ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಕರ್ನಕಟ್ಟೆ ಮಂಗಳೂರು, ಇಲ್ಲಿ 12 ವರ್ಷ ಸೇವೆ ಸಲ್ಲಿಸಿ ಕುವೆಂಪು ಶತಮಾನೋತ್ಸವ ಹಿರಿಯ ಪ್ರಾಥಮಿಕ ಶಾಲೆ ನಾಲ್ಯಪದವು ಇಲ್ಲಿ 11 ವರ್ಷ ಸೇವೆ ಸಲ್ಲಿಸಿರುತ್ತಾರೆ. ನಂತರ ಮುಖ್ಯೋಪಾಧ್ಯಾಯಿನಿಯಾಗಿ ಭಡ್ತಿ ಹೊಂದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳೆಪುಣಿ, ಮುದುಂಗಾರುಕಟ್ಟೆ ಇಲ್ಲಿ ಮೂರೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಇವರು ಮಾಡಿರುವ ಸಾಧನೆಯನ್ನು ಗುರುತಿಸಿ 2017ರಲ್ಲಿ “ಜಿಲ್ಲಾ ಅತ್ಯುತ್ತಮ ಶಿಕ್ಷಕಿ” ಪ್ರಶಸ್ತಿ ದೊರೆತಿದೆ.

ಶಿಕ್ಷಕಿಯಾಗಿ ನಿಷ್ಠೆ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ವಿದ್ಯಾರ್ಥಿಗಳ ಪೋಷಕರ ಹಾಗೂ ಸಹೋದ್ಯೋಗಿಗಳ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿರುತ್ತಾರೆ. ಸತತ 37 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ದಿನಾಂಕ 31- 12 -2021 ರಂದು ನಿವೃತ್ತಿಯನ್ನು ಹೊಂದಿರುತ್ತಾರೆ.

ತಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

IMG 20211230 WA0013 min

ಶ್ರೀಮತಿ ಡೊರೀನ ಡಿ ಸೋಜಾ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಸೂರ್ಯ ಬಂಟ್ವಾಳ ತಾಲೂಕು

ಶ್ರೀಮತಿ ಡೊರೀನ ಡಿ’ಸೋಜರವರು ನಿವೃತ್ತ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಪ್ ಪೋಲೀಸ್ ಇವರ ಹತ್ತು ಮಕ್ಕಳಲ್ಲಿ ನಾಲ್ಕನೆಯ ಮಗಳಾಗಿ ಬೆಳ್ತಂಗಡಿ ತಾಲೂಕಿನಲ್ಲಿ ದಿನಾಂಕ 08- 12-1961 ರಲ್ಲಿ ಜನಿಸಿದರು. ತಂದೆ ಸರಕಾರಿ ಹುದ್ದೆಯಲ್ಲಿದ್ದ ಕಾರಣ ಇವರು ಬೇರೆ ಬೇರೆ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿ, ಮಂಗಳೂರಿನ ಸಂತ ಆಗ್ನೇಸ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದು 1987ರಲ್ಲಿ ಮಂಗಳೂರಿನ ಸೈಂಟ್ ಆನ್ಸ್ ಇಲ್ಲಿ ಶಿಕ್ಷಕ ಶಿಕ್ಷಣ ತರಬೇತಿಯನ್ನು ಪಡೆದಿರುತ್ತಾರೆ. ನಂತರ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಚಿನ್ಮಯ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸಿ 1991ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬ್ಲಮೊಗರು ಇಲ್ಲಿ ಸರಕಾರಿ ಸೇವೆಗೆ ಸೇರ್ಪಡೆಯಾದರು. 2009ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲ್ಮಟ್ಟ ಇಲ್ಲಿ ಸೇವೆಯನ್ನು ಸಲ್ಲಿಸಿ, 2016ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂರ್ಯ ಬಂಟ್ವಾಳ ತಾಲೂಕು ಇಲ್ಲಿ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿ ಸೇವೆಯನ್ನು ಸಲ್ಲಿಸಿರುತ್ತಾರೆ. ಪಣಂಬೂರಿನ ಎಂಸಿಎಫ್ ಕಾರ್ಖಾನೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಯುತ ರೋಬರ್ಟ್ ಡಿಸೋಜ ಇವರೊಂದಿಗೆ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ. ಸೇವೆಯಲ್ಲಿರುವಾಗ ಉನ್ನತ ಶಿಕ್ಷಣವನ್ನು, ಸ್ಪೆಷಲ್ ಬಿಎಡ್ ಅನ್ನು , ಹಾಗೂ ಎಂಎ ಪದವಿಯನ್ನು ಪಡೆದಿರುತ್ತಾರೆ. 30 ವರ್ಷಗಳ ಕಾಲ ಸರಕಾರಿ ಸೇವೆಯನ್ನು ಸಲ್ಲಿಸಿ ದಿನಾಂಕ 31 -12 -2021ರಂದು ನಿವೃತ್ತಿಯನ್ನು ಹೊಂದಿರುತ್ತಾರೆ.
ಪತಿ, ಮಗ ಹಾಗೂ ಮಗಳೊಂದಿಗೆ ಸುಖೀ ಜೀವನ ನಡೆಸುತ್ತಿರುವ ತಮಗೆ ನಿವೃತ್ತ ಜೀವನದ ಶುಭಾಶಯಗಳು.

ವಿದ್ಯಾದಾನದ ಮೂಲಕ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿರುವ ಆದರ್ಶ ಗುರುಗಳಾದ ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಭಗವಂತನು ಆಯುರಾರೋಗ್ಯ ಕರುಣಿಸಲಿ ಎಂದು ಸಂಘದ “ಗುರುಭ್ಯೋ ನಮ:” ಕಾರ್ಯಕ್ರಮದ ಮೂಲಕ ಶುಭ ಹಾರೈಸುತ್ತಿದ್ದೇವೆ.

WhatsApp Group Join Now
Telegram Group Join Now
Sharing Is Caring:

Leave a Comment