25 percent ಗಿಂತ ಹೆಚ್ಚು ಖಾಲಿ ಹುದ್ದೆ ಇರುವ ತಾಲೂಕುಗಳಿಂದ ವರ್ಗಾವಣೆ ಇಲ್ಲ ಎನ್ನುವ ಅವೈಜ್ಞಾನಿಕ ನಿಯಮದಿಂದ ಅದೆಷ್ಟೋ ಶಿಕ್ಷಕರು ವರ್ಗಾವಣೆ ವಂಚಿತರಾಗಿದ್ದಾರೆ. . .ಕುಟುಂಬದಿಂದ ದೂರ ಇರುವ,ಸ್ವಂತ ಮನೆಯವರ ನೋವಿಗೆ ಸ್ಪಂದಿಸಲು ಸಾಧ್ಯ ಆಗದೆ ನೊಂದುಕೊಂಡಿರುವ ಶಿಕ್ಷಕರಿಂದ ಗುಣಮಟ್ಟದ ಬೋಧನೆ ನಿರೀಕ್ಷೆ ಮಾಡುವುದು ತಪ್ಪಾದೀತು. . ಇಲ್ಲಿ ಪ್ರಕಟ ಆಗಿರುವ ಶಿಕ್ಷಕಿಯ ನೋವು ಕೇವಲ ಒಬ್ಬರದ್ದಲ್ಲ ಹಲವರದ್ದು ಇನ್ನಾದರೂ ಇಲಾಖೆ ತಕ್ಷಣ ಸ್ಪಂದಿಸಿ ಸ್ವಂತ ಜಿಲ್ಲೆಗೆ,ಸ್ವಂತ ತಾಲೂಕಿಗೆ ವರ್ಗಾವಣೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆಯಲಿ ಎನ್ನುವುದು ನಮ್ಮ ಬೇಡಿಕೆ
KSPSTA DK
ಅಂದು ಡಿಸೆಂಬರ್ 28.ರಾತ್ರಿ ಬೆಂಗಳೂರು ಬಸ್ ಹತ್ತಿದ ಆ ಶಿಕ್ಷಕಿಯ ಕಣ್ಣು ತುಂಬಾ ಕನಸುಗಳು,ಮನಸ್ಸು ತುಂಬಾ ನೂರಾರು ನಿರೀಕ್ಷೆಗಳು.ಕಣ್ಣು ಮುಚ್ಚಿ ಮಲಗಿದರೂ ಅವಳ ಕನಸುಗಳು ಗರಿಬಿಚ್ಚಿ ನರ್ತಿಸುತ್ತಿದ್ದವು.
ಆ ಕನಸಿನಲ್ಲಿ…
ಮಗಳಿಗೆ ಪ್ರೀತಿಯಿಂದ ಎಬ್ಬಿಸಿ,ಮುಖತೊಳೆಸಿ,ಸ್ನಾನಮಾಡಿಸಿ ಹಾಲುಕುಡಿಸಿ,ಕೈತುತ್ತು ತಿನ್ನಿಸುತ್ತಾಳೆ.ಬೇಡ ಎಂದರೂ ಶಕ್ತಿ ಬೇಕಲ್ಲ ಇನ್ನೊಂದು ತುತ್ತು,ಅಮ್ಮನ ತುತ್ತು,ಅಪ್ಪನ ತುತ್ತು ಎಂದು ರಮಿಸಿ ತಿನ್ನಿಸುತ್ತಿದ್ದಾಳೆ.
ಮನೆಯ ಮುಂದಿನ ಅಂಗಳದಲ್ಲಿ ಕಾಲ ಮೇಲೆ ಮಗಳನ್ನು ಕೂರಿಸಿಕೊಂಡು ಮಗಳು ಬಹು ಪ್ರೀತಿಯಿಂದ ಬೆಳೆಸಿದ ಕೂದಲನ್ನು ಬಾಚಿ,ಕಣ್ತಪ್ಪಿನಿಂದ ಉಳಿದ ಒಂದೇ ಒಂದು ಹೇನೇನಾದರೂ ಸಿಗುವುದೇ ಎಂದು ಕಣ್ಣೆಂಬ ದುರ್ಬೀನಿಂದ ಹುಡುಕಿ ಹುಡುಕಿ ಬಾಚಿ ಜುಟ್ಟು ಕಟ್ಟಿ ದೃಷ್ಟಿ ತೆಗೆದು, ಒಳಗೆ ಬಂದು ಶಾಲೆ ಬಟ್ಟೆ ಹಾಕಿ ,ಪೌಡರ್ ಕಾಡಿಗೆಹಚ್ಚಿ ಮಗಳ ಅಂದವನ್ನು ಕಣ್ತುಂಬಿಕೊಂಡು ಕೆನ್ನೆಗೆ ಮುತ್ತಿಕ್ಕುತ್ತಿದ್ದಾಳೆ..
ಅವಳೇ ಮಾಡಿದ ನೀರು ದೋಸೆಯನ್ನು ತುಪ್ಪ,ಸಕ್ಕರೆಯಲ್ಲಿ ಅದ್ದಿ ತಿನ್ನುತ್ತಾ,ಚಾ ಹೀರುತ್ತಾ ತಿಂದು ಮುಗಿಸಿ ತನಗಿಷ್ಟವಾದ ಸೀರೆ ಹುಡುಕಿ ತಯಾರಾಗಿ ಮಗಳ ಕೈ ಹಿಡಿದು ತನ್ನ ಶಾಲೆಗೆ ಮಗಳೊಂದಿಗೆ ಹೋಗುತ್ತಿದ್ದಾಳೆ.ಮಗಳಿಗೂ ಅಮ್ಮನೇ ಟೀಚರ್ ಎಂಬ ಖುಷಿ..ಅಮ್ಮನಿಗೋ ಮಗಳಿಗೆ ತಾನೇ ಟೀಚರ್ ಆಗಬೇಕೆಂಬ ಕನಸು ಈಡೇರಿತು ಎಂಬ ಹೆಮ್ಮೆ..
ಅಮ್ಮ ಮಗಳಿಬ್ಬರಿಗೂ ಕೈ ಬೀಸಿದ ಅಪ್ಪ,ಅಮ್ಮ..ತಮ್ಮ ತಮ್ಮ ನಿತ್ಯದ ಕಾಯಕದಲ್ಲಿ ತಲ್ಲೀನ.ಸಂಜೆ ತನಕ ಅವರಿಬ್ಬರಿಗೂ ಕೆಲಸದೇ ಧ್ಯಾನ..ಅಮ್ಮ ಮಗಳಿಗೆ ಶಾಲೆಯೇ ಪ್ರಪಂಚ..
ಈ ಕನಸು ಡಿಸೆಂಬರ್ 29ರ ಮಧ್ಯಾಹ್ನ 11.10ರ ತನಕ ಕಣ್ತುಂಬ ,ಮನಸು ತುಂಬಾ ಬೆಚ್ಚನೆ ಅನುಭವ ನೀಡುತ್ತಿತ್ತು.ಆದರೆ ಅವರ ಸರದಿ ಕ್ರಮ ಸಂಖ್ಯೆ 504 ಬಂದಾಗ ಆಕೆಯ ಹಾರ್ಟ್ ಬೀಟ್ ತುಂಬಾನೇ ಜಾಸ್ತಿ ಇತ್ತು.ವರ್ಷವೀಡೀ ಓದಿ ಸಿ.ಇ.ಟಿ.ಫಲಿತಾಂಶ ಬಿಟ್ಟಾಗಲೂ ಆ ಭಯ ಇರಲಿಲ್ಲ..ಆ ಭಯ ನಿಜವೇ ಆಯ್ತು..25.12 ಎಂದು ಕಂಪ್ಯೂಟರ್ ಪರದೆ ತೋರಿಸಿದಾಗ ಕನಸು ಒಡೆದು ಚೂರಾಯ್ತು..
ನಿಯಮದ ಪ್ರಕಾರ ಯಾವ ತಾಲೂಕು ನಿಂದ ಹೊರಬರಬೇಕೆಂದರೂ ಅಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರ ಶೇ.25 ಕ್ಕಿಂತ ಜಾಸ್ತಿ ಖಾಲಿ ಹುದ್ದೆ ಇದ್ದರೆ ಆ ತಾಲೂಕು ಲಾಕ್..ಈ ಲಾಕ್ ನಿಯಮ ಅನ್ ಲಾಕ್ ಆಗುವ ತನಕ ಬೆಂಗಳೂರಿನ ಶಿಕ್ಷಕರ ಸದನದ ಪ್ರತೀ ಗೋಡೆಗಳೂ,ಕಂಪ್ಯೂಟರ್, ಕುರ್ಚಿಗಳು ಕಣ್ಣೀರನ್ನು,ಹತಾಶೆಯನ್ನು,ನಿಟ್ಟುಸಿರನ್ನು ,ಹಿಡಿಶಾಪಗಳನ್ನು ನೋಡಿಕೊಂಡು,ಕೇಳಿಸಿಕೊಂಡು ವ್ಯಥೆ ಪಡುವುದು ತಪ್ಪಲ್ಲ..
ಆಕೆಯದು ಮತ್ತದೇ ಬದುಕು…
ಬೆಳಿಗ್ಗೆ ಬೇಗನೇ ಎದ್ದು ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮುಗಿಸೋದು,ಮಗಳನ್ನು ಎಬ್ಬಿಸಿ ರೆಡಿಮಾಡಿಸಿ,ಗಡಿಬಿಡಿಗೆ ಮಗು ನೋವೆಂದರೂ ಕೇಳದೆ ಸಿಕ್ಕಾದ ಕೂದಲನ್ನು ನೋವಾಗುವ ಹಾಗೆ ಬಾಚಿ,ಕಟ್ಟಿ ಈ ಮೇಲೆ ತಿಂಡಿ ತಿನ್ನು ಎಂದು ,ತಾನೋ ಕೈಗೆ ಸಿಕ್ಕ ಸೀರೆಯನ್ನು ಮೂರೇ ನಿಮಿಷದಲ್ಲಿ ಉಟ್ಟು,ಮೂರು ಬಾರಿಯಾದರೂ ಗಡಿಯಾರ ನೋಡಿ,ಒಂದೇ ಕಣ್ಣಿಗೆ ಕಾಜಲ್ ಹಚ್ಚಿ,ಕೈಗೆ ವಾಚ್ ಕಟ್ಟಲು ಸಮಯ ಸಾಕಗಲ್ಲ ಎಂದು ಬ್ಯಾಗ್ ಗೆ ತುರುಕಿ,ತಾನೇ ಹೊಯ್ದಿಟ್ಟ ಒಂದೇ ಒಂದು ದೋಸೆಯನ್ನು ಬಾಯಿಗೆ ತುರುಕಿಕೊಳ್ಳುತ್ತಾ, ತಣಿದ ಚಾ ಕಷಾಯ ತರಹ ಒಂದೇ ಗುಟುಕಿಗೆ ಕುಡಿದು ,ದೇವರಿಗೊಂದು ನಮಸ್ಕಾರ ಹಾಕಿ,ಕಾಲಿಗೆಚಪ್ಪಲಿ ಮೆಟ್ಟಿ ಮಗಳಿಗೊಂದು ಮುತ್ತಿಕ್ಕಿ ಗೇಟ್ ತನಕ ಓಡಿದ್ದೇ ಜಾಸ್ತಿ..ಅಪ್ಪಯ್ಯನ ಸ್ಕೂಟಿಯಲ್ಲಿ ೨ಕೀ
ಮೀ ಬಂದು ರಸ್ತೆಗೆ ಬರೋದರೊಳಗೆ ಬಸ್ ಅರ್ಜೆಂಟ್ ಅನ್ನೋ ತರಹ ಬೇಗನೇ ಬಂದು ಟೀಚರ್ ಎಂದು ಪಾಂ ಪಾಂ ಎಂದು,ಪಾಪಾ ಎನ್ನುತ್ತಾ ಹತ್ತಿಸಿಕೊಂಡಾಗ ಲೇಟ್ ಆಯ್ತಾ ಟೀಚರ್ ಎನ್ನುವ ಕಂಡಕ್ಟರ್ ಅವರ ವಿಷಾದದ ನಗೆ!ಮತ್ತೆ ನಾನಿದ್ದೀನಿ ಬೇಜಾರ್ ಆಗಬೇಡ 2 ಗಂಟೆ ಪುಲ್ ರೆಸ್ಟ್ ಮಾಡು ಎನ್ನುವ ಬಸ್ ನ ಸೀಟುಗಳು..ಚಳಿಗಾಲದಲ್ಲಿ ಬಹು ಹದೆಗೆಡುವ ಆರೋಗ್ಯ.. ಮಾತ್ರೆಗಳು,ಇನ್ಹೇಲರ್,ಬಿಸಿನೀರು…ಮತ್ತೆ ೧೦ರಿಂದ ೪.೩೦ರ ತನಕ ಸಂಪೂರ್ಣ ತಲ್ಲೀನತೆ…
ಕನಸುಗಳು ಕನಸುಗಳಾಗಿಯೇ ಉಳಿಯಿತು.ಈ ವರ್ಷದ ವರ್ಗಾವಣೆ ಎಂಬ ಪ್ರಹಸನದಲ್ಲಿ ನನ್ನನ್ನೂ ಸೇರಿಸಿ ಹಲವರು ಪಾತ್ರವಾಗಿ ಬಂದರು..ಹೌದು ನಾವೋ ವರ್ಗಾವಣೆ ವಂಚಿತ ಶಿಕ್ಷಕರು.ಹೊರಜಿಲ್ಲೆಯಲ್ಲಿ ಕರ್ತವ್ಯ ೧೦,೧೫ ವರ್ಷ ಮಾಡಿ ನಮ್ಮನ್ನು ನಂಬಿದ ಕುಟುಂಬದೊಂದಿಗೆ ನಮ್ಮ ಜಿಲ್ಲೆಯಲ್ಲಿ ಕಾಲ ಕಳೆಯಬೇಕು ಎಂಬ ಕನಸು ನಮಗೂ ಇದೆಯಲ್ಲವೇ?ನಮ್ಮ ಅಪ್ಪ ಅಮ್ಮನಿಗೂ ವಯಸ್ಸು ಆಗುತ್ತದೆ ಅಲ್ವಾ? ಅವರಿಗೆ ಮಕ್ಕಳಿಂದ ಒಂದಿಷ್ಟು ನಿರೀಕ್ಷೆಗಳೂ ಇರುತ್ತದೆ ಅಲ್ವಾ? ನಮ್ಮ ಮಕ್ಕಳು ಅಮ್ಮ, ಅಪ್ಪ ಒಂದೆರಡು ಗಂಟೆ ಹೆಚ್ಚೇ ನಮ್ಮೊಂದಿಗೆ ಇರಲಿ ಎಂದು ಬಯಸುತ್ತವೆ ಅಲ್ಲವೇ?ಸಂಬಂಧಿಕರಿಗೂ ,ಕುಟುಂಬಕ್ಕೂ ಇನ್ನೇನುಕೊಡಲು ಸಾಧ್ಯ..ಕೊನೆ ಪಕ್ಷ ಪ್ರೀತಿಹಂಚಲು ಸಮಯವಾದರೂ ಕೊಡಬೇಕಲ್ಲ..ಇದೇ ನಿಯಮಗಳಿದ್ದರೆ ಶಿಕ್ಷಕರ ವೈಯಕ್ತಿಕ ಬದುಕು,ಆಯಸ್ಸು,ಆರೋಗ್ಯ ಎಲ್ಲವೂ ಬಹು ಬೇಗ ವ್ಯಾಲಿಡಿಟಿ ಮುಗಿಸಿಕೊಳ್ಳುತ್ತವೆ…
ನನಗೆ ಸಿಕ್ಕಿಲ್ಲ ಸರಿ..ನನ್ನ ಆತ್ಮೀಯ ಸ್ನೇಹಿತರೊಬ್ಬರಿಗೆ ಇಂದು ದೇವರು ಅನ್ಯಾಯ ಮಾಡಿಬಿಟ್ಟ..ಅವರಿಗಾದರೂ ದೇವರು ಅವಕಾಶ ಕೊಡಲಿ ಎಂದು ನಮ್ಮ ಇಡೀ ಕುಟುಂಬ ಪ್ರಾರ್ಥಿಸಿತ್ತು..ಅದೂ ಸುಳ್ಳಾಯ್ತು..ಅವರ ಕಷ್ಟ ದೇವರಿಗೇ ಪ್ರೀತಿ..ಇಂತಹ ನೂರಾರು ಶಿಕ್ಷಕಿಯರನ್ನು ಮೊನ್ನೆ ನಾನು ಬೆಂಗಳೂರಲ್ಲಿ ನೋಡಿದೆ…ಇಲ್ಲಿ ಒಬ್ಬೊಬ್ಬರ ಸಮಸ್ಯೆ ನೋಡಿದಾಗ ನಾವು ಅವರಿಗಿಂತ ಬೆಸ್ಟ್ ಅನಿಸಿದ್ದೂ ಇದೆ..ಎಲ್ಲರ ಸಮಸ್ಯೆಗೆ ಪರಿಹಾರ ಎಂದು ದೇವಾ!!!!????
ಕೊನೆಯ ವಿಷಾದದ ಪ್ರಶ್ನೆ …ಶಿಕ್ಷಕರು ವರ್ಗಾವಣೆ ಹೊಂದಿ ಇನ್ನೊಂದು ಸರಕಾರಿ ಶಾಲೆಗೆ ಹೋಗುತ್ತಾರೆಯೇ ಹೊರತು ಪೋಸ್ಟ್ ಆಫೀಸ್ ಗೆ ಅಲ್ಲ..ಮತ್ಯಾಕೆ ಈ ನಿಯಮ..????
ರೇಖಾ.ಪಿ.ಕುಲಾಲ್