ಬೆಂಗಳೂರು, ಆ. 6: ರಾಜ್ಯದ ಆಯ್ದ 956 ಸರ್ಕಾರಿ ಫ್ಲ್ಯಾಗ್ಶಿಪ್ ಶಾಲೆಗಳಲ್ಲಿ ಮಾನವ ಸಂಪನ್ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಮಹತ್ವದ ಆದೇಶ ಹೊರಡಿಸಿದೆ. 2026-27ನೇ ಸಾಲಿನ ಕೇಂದ್ರ ಪುರಸ್ಕೃತ ಸಮಗ್ರ ಶಿಕ್ಷಣ ಯೋಜನೆಯಡಿ ವಿದ್ಯಾರ್ಥಿ ದತ್ತಾಂಶ ನಿರ್ವಹಣಾ ಸಹಾಯಕರು ಹಾಗೂ ಭದ್ರತಾ ಸಿಬ್ಬಂದಿಯನ್ನು ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ರಾಜ್ಯ ಯೋಜನಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆಯ ಪ್ರಕಾರ, ಈ ಎರಡು ಹುದ್ದೆಗಳಿಗೂ ತಿಂಗಳಿಗೆ ರೂ.10,000 ಗೌರವಧನ ನಿಗದಿಪಡಿಸಲಾಗಿದ್ದು, ವರ್ಷದಲ್ಲಿ 10 ತಿಂಗಳ ಅವಧಿಗೆ ಸೇವೆ ಸಲ್ಲಿಸಬೇಕಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು 2026ರ ಆಗಸ್ಟ್ 15ರೊಳಗೆ ಪೂರ್ಣಗೊಳಿಸುವಂತೆ ಎಲ್ಲಾ ಜಿಲ್ಲೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಯೋಜನೆಯ ಮುಖ್ಯ ಉದ್ದೇಶ ರಾಜ್ಯದ ಫ್ಲ್ಯಾಗ್ಶಿಪ್ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದು, ಶಿಕ್ಷಕರ ಆಡಳಿತಾತ್ಮಕ ಕೆಲಸದ ಒತ್ತಡವನ್ನು ಕಡಿಮೆ ಮಾಡುವುದು ಹಾಗೂ ಶಾಲೆಗಳ ಸುರಕ್ಷತೆಯನ್ನು ಬಲಪಡಿಸುವುದಾಗಿದೆ. ಜೊತೆಗೆ ಈ ಶಾಲೆಗಳನ್ನು ಸುತ್ತಮುತ್ತಲಿನ ಶಾಲೆಗಳಿಗೆ ಮಾದರಿ ಕೇಂದ್ರಗಳನ್ನಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದೆ.
ಸುತ್ತೋಲೆಯಂತೆ, ವಿದ್ಯಾರ್ಥಿ ದತ್ತಾಂಶ ನಿರ್ವಹಣಾ ಸಹಾಯಕರಾಗಿ ನೇಮಕಗೊಳ್ಳುವ ಅಭ್ಯರ್ಥಿಗಳು ಕಂಪ್ಯೂಟರ್ ಕೋರ್ಸ್ ಪ್ರಮಾಣಪತ್ರದೊಂದಿಗೆ ಯಾವುದೇ ಪದವಿ ಪಡೆದಿರಬೇಕು. MS Office, ಸ್ಪ್ರೆಡ್ಶೀಟ್ಗಳು ಹಾಗೂ ವಿವಿಧ ಆನ್ಲೈನ್ ಪೋರ್ಟಲ್ಗಳ ನಿರ್ವಹಣೆಯಲ್ಲಿ ಮೂಲಭೂತ ಜ್ಞಾನ ಹೊಂದಿರಬೇಕು. ಇವರು UDISE+, SATS, LEA, MMS ಸೇರಿದಂತೆ ವಿವಿಧ ಶಿಕ್ಷಣ ನಿರ್ವಹಣಾ ವ್ಯವಸ್ಥೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ ಮತ್ತು ಶೈಕ್ಷಣಿಕ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಅಪ್ಲೋಡ್ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ.
ಭದ್ರತಾ ಸಿಬ್ಬಂದಿಗೆ ಕನಿಷ್ಠ ಎಸ್ಎಸ್ಎಲ್ಸಿ ಉತ್ತೀರ್ಣತೆ ಕಡ್ಡಾಯವಾಗಿದ್ದು, ಶಾಲೆಯ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಮೇಲ್ವಿಚಾರಣೆ, ಸಂದರ್ಶಕರ ದಾಖಲೆ ನಿರ್ವಹಣೆ, ಶಾಲಾ ಆಸ್ತಿಗಳ ರಕ್ಷಣೆ ಹಾಗೂ ಶಿಸ್ತು ಕಾಪಾಡುವ ಜವಾಬ್ದಾರಿ ನೀಡಲಾಗಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರು, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಹಾಗೂ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಕಂಪ್ಯೂಟರ್ ಪ್ರೋಗ್ರಾಮರ್ ಒಳಗೊಂಡ ಸಮಿತಿಯ ಮೂಲಕ ಪ್ರಾಯೋಗಿಕ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಸೂಚಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ನಿಗದಿತ ಅವಧಿಯೊಳಗೆ ನೇಮಕಾತಿ ಪೂರ್ಣಗೊಂಡಿರುವುದನ್ನು ಖಚಿತಪಡಿಸಿಕೊಂಡು ಜಿಲ್ಲಾ ಉಪನಿರ್ದೇಶಕರಿಗೆ ವರದಿ ಸಲ್ಲಿಸಬೇಕು. ಬಳಿಕ ಜಿಲ್ಲಾಮಟ್ಟದ ಕ್ರೋಢೀಕೃತ ವರದಿಯನ್ನು ರಾಜ್ಯ ಕಚೇರಿಗೆ ರವಾನಿಸಬೇಕಾಗಿದೆ.
ಈ ಆದೇಶವು ರಾಜ್ಯದ ಆಯ್ದ 956 ಸರ್ಕಾರಿ ಫ್ಲ್ಯಾಗ್ಶಿಪ್ ಶಾಲೆಗಳು ಹಾಗೂ ಅವುಗಳಿಗೆ ಸಂಯೋಜಿತ ಘಟಕ ಶಾಲೆಗಳಿಗೆ ಅನ್ವಯವಾಗಲಿದ್ದು, ಎಲ್ಕೆಜಿ ಯಿಂದ 12ನೇ ತರಗತಿಯವರೆಗಿನ ಶಾಲೆಗಳಲ್ಲಿ ಈ ಮಾನವ ಸಂಪನ್ಮೂಲ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.
2026-27ನೇ ಸಾಲಿನ ಪಿಎಬಿ ಸಭೆಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ನೀಡಿದ ಅನುಮೋದನೆಯ ಹಿನ್ನೆಲೆಯಲ್ಲಿ, ರಾಜ್ಯ ಯೋಜನಾ ನಿರ್ದೇಶಕರಾದ ಕೆ. ವಿದ್ಯಾ ಕುಮಾರಿ, ಐಎಎಸ್ ಅವರು 2026ರ ಜುಲೈ 31ರಂದು ಈ ಮಹತ್ವದ ಸುತ್ತೋಲೆಯನ್ನು ಹೊರಡಿಸಿದ್ದಾರೆ.