ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು
(ಕೃತಿ ಪರಿಚಯ – 10)
ಹೊತ್ತಗೆಯೊಳಗೆ ಒಂದಿಷ್ಟು ಹೊತ್ತು ಅಂಕಣದಲ್ಲಿ ಈ ವಾರ ಪರಿಚಯಿಸಲಾಗುತ್ತಿರುವ ಕೃತಿ “ನನ್ನ ಜೀವನವೇ ನನ್ನ ಸಂದೇಶ” “MY LIFE IS MY MESSAGE”
ಪುಟಗಳು:- 32+4
ಪ್ರಕಟಣೆ:- ನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಇಲಾಖೆ.
ವಾರ್ತಾ ಸೌಧ ,ಬೆಂಗಳೂರು.
ಬೆಲೆ:- ಉಚಿತ ವಿತರಣೆ.
ಮುದ್ರಕರು:- ಲಾವಣ್ಯಮುದ್ರಣ.
ವಿದ್ಯಾಪೀಠ ವೃತ್ತ ಬೆಂಗಳೂರು.
ಇ-ಮೈಲ್: info@thelavanya.com
ಪುಸ್ತಕವೆಂದರೆ ಅದು ದೊಡ್ಡದಾಗಿರಲಿ, ಚಿಕ್ಕದೇ ಆಗಿರಲಿ ಓದಿದ ಕ್ಷಣಕ್ಕೆ ನಮ್ಮಲ್ಲೊಂದು ಉತ್ತಮ ಬದಲಾವಣೆ ಉಂಟಾಗಬೇಕು. ಉತ್ತಮ ದಾರಿಯಲ್ಲಿ ಸಾಗಲು ಪ್ರೇರಣೆಯಾಗಬೇಕು.ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಹಾಗೂ ಮನಸ್ಸಿನ ಬಲಿಷ್ಠತೆ ದಾರಿ ದೀಪವಾಗಬೇಕು. ಅಂತಹಾ ಒಂದು ಪರಿಣಾಮ ಬೀರುವ, ಕೈ ಅಂಗುಲದಷ್ಟಿರುವ ಪುಸ್ತಕ ಇದಾಗಿದೆ.
ಮಹಾತ್ಮಾ ಗಾಂಧೀಜಿಯವರ ಜೀವನ ಸಂದೇಶಗಳನ್ನು ಒಳಗೊಂಡ ಈ ಪುಸ್ತಕದ ಗಾತ್ರ ನೋಡಿದಾಕ್ಷಣ ಇದರಲ್ಲೇನಿದೆ ಅಷ್ಟೊಂದು ವಿಶೇಷತೆ ಅನಿಸಿ ಬಿಡಬಹುದು. ಅದೂ ಕಾಲು ಗಂಟೆಯಲ್ಲಿ ಓದಿ ಮುಗಿಸಬಹುದಾದ ಈ ಹೊತ್ತಗೆ ಮನಸ್ಸಿನ ಕಲ್ಮಶಗಳನ್ನು ಹೊಡೆದು ಗುಡಿಸಿ ಸನ್ಮಾರ್ಗದೆಡೆಗೆ ಸಾಗುವ ಅತ್ಯದ್ಭುತ ಸಂದೇಶಗಳನ್ನು ಹೊಂದಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.
ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮುದ್ರಿತಗೊಂಡಿರುವ ಈ ಸಂದೇಶಗಳು ಮಹಾತ್ಮಾ ಗಾಂಧೀಜಿಯವರ ವ್ಯಕ್ತಿತ್ವದ ಪ್ರತಿಬಿಂಬಗಳು. ಅವರ ಜೀವನಕ್ಕೆ ಹಿಡಿದ ಕೈಗನ್ನಡಿ. ಇದರಲ್ಲಿರುವ ಪ್ರತೀ ಪದಗಳೂ ಓದದೇ ಬಿಡಲಾರದಷ್ಟು ಬಲಿಷ್ಠತೆಯನ್ನು ಹೊಂದಿದೆ. ಜೀವನದ ತಲ್ಲಣಗಳಿಂದ ಮನಸ್ಸನ್ನು ಮುಕ್ತಗೊಳಿಸಿ ಆತ್ಮ ವಿಮರ್ಶೆ ,ಚಿಂತನೆಗೆ ಒಡ್ಡುವ ಕೆಲಸ ಮಾಡಿಸುತ್ತದೆ ಎನ್ನಬಹುದು.
ಈ ಪುಸ್ತಕದಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಹಲವು ಸಂದೇಶಗಳಲ್ಲಿ ‘ಪುಸ್ತಕಗಳು ನಮ್ಮ ಮುಂದಿನ ಪೀಳಿಗೆಯ ದಾರಿದೀಪ ‘ ಕಷ್ಟದ ಜೀವನವೇ ಶಿಸ್ತನ್ನು ಕಲಿಸುವ ಶಾಲೆ ‘ ‘ಸರಳ ಜೀವನ ಮತ್ತು ಮೇಲ್ಮಟ್ಟದ ವಿಚಾರ ಮನುಷ್ಯನನ್ನು ಮಹಾನ್ ಆಗಿ ಮಾಡಿಬಿಡುತ್ತದೆ’ ‘ದೇವರ ಎಣಿಕೆ ಪುಸ್ತಕದಲ್ಲಿ ನಮ್ಮ ನಡತೆ ಮಾತ್ರ ಎಣಿಕೆಗೆ ಬರುತ್ತದೆಯೇ ವಿನಹ, ನಮ್ಮ ಓದು ಅಥವಾ ಮಾತುಗಳಲ್ಲ….’ ಹೀಗೆ ಸಾಲು ಸಾಲು ಸಂದೇಶಗಳು ಮನಸ್ಸಿನ ಕದವನ್ನು ತಟ್ಟಿಬಿಡುತ್ತದೆ….
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು 2016 ರಲ್ಲಿ ಎಲ್ಲಾ ಸರಕಾರಿ ಶಾಲೆಗಳಿಗೆ ಹಂಚಿರುವ ಪುಟ್ಟ ಪುಸ್ತಕ ಬೆಟ್ಟದಷ್ಟು ಮಹತ್ವವನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಗಳು ,ಯುವ ಸಮುದಾಯ,ವಯಸ್ಕರು ಓದಿ ತಮ್ಮದಾಗಿಸಿಕೊಳ್ಳಲೇಬೇಕಾದ ಈ ಉತ್ತಮ ಅವಶ್ಯಕ ಪುಸ್ತಕ ಓದಿರಿ ಹಂಚಿಕೊಳ್ಳಿರಿ…..ಎಂದು ಹೇಳುತ್ತಾ.
ಧನ್ಯವಾದಗಳೊಂದಿಗೆ,
ಪರಮೇಶ್ವರಿ.
ಸಹಶಿಕ್ಷಕರು.
ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಾಲ್ಸೂರು.
ಆತ್ಮೀಯ ಶಿಕ್ಷಕ ಮಿತ್ರರೇ,
ನೀವು ಕೂಡ ಇದೇ ರೀತಿ ಹಲವು ಉತ್ತಮ ಪುಸ್ತಕಗಳನ್ನು ಓದಿ ತಮ್ಮದಾಗಿಸಿ ಜ್ಞಾನವನ್ನು ಹೆಚ್ಚಿಸಿಕೊಂಡಿರಬಹುದು. ನೀವು ಓದಿದ ಹೊತ್ತಗೆಯ ಪರಿಚಯವನ್ನು ನಮ್ಮೊಂದಿಗೆ ಇದೇ ರೀತಿ ಹಂಚುವ ಮೂಲಕ ನಮಗೂ ಜ್ಞಾನದ ಬೆಳಕನ್ನು ಹಚ್ಚುವಲ್ಲಿ ಕೈಜೋಡಿಸಬೇಕಾಗಿ ವಿನಂತಿ.
ತಮ್ಮ ಬರಹವನ್ನು ಕಳಿಸಬೇಕಾದ ಸಂಖ್ಯೆ :- 8970260893