ಪಿ. ಎಂ. ಪೋಷಣ್ (ಮಧ್ಯಾಹ್ನ ಉಪಾಹಾರ ಯೋಜನೆ) ಅಡಿಯಲ್ಲಿ ಶಾಲಾ ಮಕ್ಕಳಿಗೆ ವಿಶೇಷ ಭೋಜನ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಸುತ್ತೋಲೆ ಹೊರಡಿಸಲಾಗಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಬಿ. ಬಿ. ಕಾವೇರಿ ಸುತ್ತೋಲೆ ಹೊರಡಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿರುವ ವಿಶೇಷ ಭೋಜನದ 100 ದಿನಗಳ ವಿವರವನ್ನು ನೀಡುವಂತೆಯೂ ಸುತ್ತೋಲೆಯಲ್ಲಿ ವಿವರಿಸಲಾಗಿದೆ.
2024-25ನೇ ಸಾಲಿನಲ್ಲಿ ಪಿ. ಎಂ. ಪೋಷಣ್ (ಮಧ್ಯಾಹ್ನ ಉಪಾಹಾರ ಯೋಜನೆ) ಅಡಿಯಲ್ಲಿ ಶಾಲಾ ಮಕ್ಕಳಿಗೆ ವಿಶೇಷ ಭೋಜನ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಎಂಬ ವಿಷಯವನ್ನು ಈ ಸುತ್ತೋಲೆ ಒಳಗೊಂಡಿದೆ.
ಸುತ್ತೋಲೆಯ ವಿವರಗಳು: ಕೇಂದ್ರ ಸರ್ಕಾರ ಸೂಚಿತ ವಿಶೇಷ ಭೋಜನ ಪರಿಕಲ್ಪನೆಯು ಒಂದು ಸಮುದಾಯ ಭಾಗವಹಿಸುವಿಕೆ ಕಾರ್ಯಕ್ರಮವಾಗಿದ್ದು, ಇದರಲ್ಲಿ ಎನ್‌ಜಿಒಗಳು/ ಕೈಗಾರಿಕೆಗಳು/ ವಾಣಿಜ್ಯ/ ವ್ಯಾಪಾರ ಇತ್ಯಾದಿ ಸಮುದಾಯದ ಸದಸ್ಯರು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಬ್ಬಗಳು, ಮದುವೆ/ ಮದುವೆ ವಾರ್ಷಿಕೋತ್ಸವಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜನ್ಮದಿನಗಳು, ರಾಜ್ಯ ಸ್ಥಾಪನೆ ದಿನಗಳು, ರಾಷ್ಟ್ರೀಯ ಪ್ರಾಮುಖ್ಯತೆ ದಿನಗಳು ಮತ್ತು ಯಾವುದೇ ಇತರೆ ವಿಶೇಷ ಸಂದರ್ಭಗಳಲ್ಲಿ ಪೌಷ್ಠಿಕ ಮತ್ತು ಆರೋಗ್ಯಕರ ಊಟ/ ಆಹಾರ ಪದಾರ್ಥಗಳನ್ನು ಒದಗಿಸುವುದಾಗಿದೆ ಎಂಬುದನ್ನು ಸ್ಪಷ್ಟಪಡಿಸಿ, ಸದರಿ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಸಂಬಂಧ ಮಾರ್ಗಸೂಚಿಯನ್ನು ನೀಡಿದೆ.
ಆಹಾರ ಪದಾರ್ಥಗಳು
- ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) 2013ರ ಶೆಡ್ಯುಲ್ 2ರಲ್ಲಿ ಉಲ್ಲೇಖಿಸಿರುವಂತೆ ಯೋಜನೆಯ ಮಾನದಂಡಗಳಿಗೆ (ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ- 450 ಕ್ಯಾಲೋರಿಗಳು ಮತ್ತು 12 ಗ್ರಾಂ ಪ್ರೋಟೀನ್ ಮತ್ತು ಹಿರಿಯ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ- 750 ಕ್ಯಾಲೋರಿಗಳು ಮತ್ತು 20 ಗ್ರಾಂ ಪ್ರೋಟೀನ್ ಬದ್ಧವಾಗಿ ಭೋಜನದಲ್ಲಿ ತಾಜಾ, ಆರೋಗ್ಯಕರ ಮತ್ತು ಪೌಷ್ಟಿಕಾಂಶದ ಆಹಾರವನ್ನು ನೀಡಬೇಕು.
- ಸ್ಥಳೀಯವಾಗಿ ಲಭ್ಯವಿರುವ ಹಸಿರು ಎಲೆಗಳ ತರಕಾರಿಗಳು, ಕಾಳುಗಳು/ ದ್ವಿದಳ ಧಾನ್ಯಗಳು ಮತ್ತು ಸಿರಿಧಾನ್ಯಗಳು ವಿಶೇಷ ಭೋಜನದ ಮೆನುವಿನಲ್ಲಿ ಅಳವಡಿಸಬೇಕು. ಆಹಾರ ಧಾನ್ಯಗಳ ಸಂಗ್ರಹಣೆ, ಅಡುಗೆ ಮಾಡುವಾಗ ಹಾಗೂ ಬಡಿಸುವಾಗ ಸ್ವಚ್ಚತೆ ಮತ್ತು ನೈರ್ಮಲ್ಯದ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
3. ಆಹಾರ ಕಲಬೆರಕೆ ಮತ್ತು ಆಹಾರ ಹಾಳಾಗುವುದನ್ನು ತಡೆಯಲು ಪ್ರಮಾಣಿತ ಸುರಕ್ಷತಾ (Standard Safety measures) ಕ್ರಮಗಳನ್ನು ಗಮನಿಸಬೇಕು.
4. ಋತುಮಾನದ ಹಣ್ಣುಗಳನ್ನು ವಿಶೇಷ ಭೋಜನದ ಮೆನುವಿನಲ್ಲಿ ಸೇರಿಸಬಹುದು.
- ಕುಡಿಯಲು ಮತ್ತು ಅಡುಗೆ ಮಾಡಲು ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು.
ತಪ್ಪಿಸಬೇಕಾದ ಆಹಾರ ಪದಾರ್ಥಗಳು
ಜಂಕ್ (ನೂಡಲ್ಸ್, ಚಿಪ್ಸ್, ಚಾಕೊಲೇಟ್ ಇತ್ಯಾದಿ) ಮತ್ತು ಹಳಸಿದ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ನೀಡಬಾರದು. ಇಂತಹ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು.
ಆಹಾರದ ಸುರಕ್ಷತೆ
- ವಿದ್ಯಾರ್ಥಿಗಳಿಗೆ ಊಟವನ್ನು ಬಡಿಸುವ ಮೊದಲು ಶಿಕ್ಷಕರು/ ಅಡುಗೆಯವರು ಊಟವನ್ನು ರುಚಿ ನೋಡಬೇಕು.
- ಕೈ ತೊಳೆಯುವುದು ಮತ್ತು ಬಾಯಿಯ ಶುಚಿತ್ವಗಳನ್ನು ಉತ್ತಮ ಅಭ್ಯಾಸಗಳಾಗಿ ಉತ್ತೇಜಿಸಬೇಕು.
- ಊಟದ ತಯಾರಿಕೆ, ಅಡುಗೆ ಮಾಡುವಾಗ ಮತ್ತು ಬಡಿಸುವಾಗ ಶುಚಿತ್ವ, ಸುರಕ್ಷತೆ ಮತ್ತು ನೈರ್ಮಲ್ಯದ ಮಾನದಂಡಗಳು ಪಾಲಿಸಬೇಕು.
ಸಮುದಾಯದ ಭಾಗವಹಿಸುವಿಕೆ
ಶಾಲೆಗಳ ಕಡೆಗೆ ಜವಾಬ್ದಾರಿ ಮತ್ತು ಮಾಲೀಕತ್ವದ ಪ್ರಜ್ಞೆಯನ್ನು ಸಮುದಾಯದಲ್ಲಿ ಬೆಳಸಲು ಸಮುದಾಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಬೇಕು. ವಿಶೇಷ ಭೋಜನವನ್ನು ಸುಗಮವಾಗಿ ಅನುಷ್ಠಾನಗೊಳಿಸಲು ಸರಿಯಾದ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಮಾರ್ಗಸೂಚಿ ಹೇಳಿದೆ.