ಅಂತರ್ಜಾಲದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸರಕಾರಿ ನೌಕರರು ಪ್ರದರ್ಶಿಸುವ ವರ್ತನೆಯು ಕರ್ನಾಟಕ ನಾಗರಿಕ ಸೇವಾ ನಿಯಮ 2021 ರ ವ್ಯಾಪ್ತಿಗೆ ಒಳಪಡುತ್ತದೆ.ಈ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸರ್ಕಾರಿ ನೌಕರರ ವಿರುದ್ಧ ನಾಗರಿಕ ಸೇವಾ ನಿಯಮ 1957ರ ಅನ್ವಯ ಶಿಸ್ತು ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರಿ ನೌಕರರ ನಡತೆಯ ನಿಯಮಗಳು
ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರ ನಿಯಮ 3(1) ಅನುಸಾರ ಪ್ರತಿಯೊಬ್ಬ ಸರಕಾರಿ ನೌಕರನು ಎಲ್ಲಾ ಕಾಲಗಳಲ್ಲಿಯೂ ಸಂಪೂರ್ಣ ನೀತಿ ನಿಷ್ಠೆಯನ್ನು ಹೊಂದಿರತಕ್ಕದ್ದು ಹಾಗೂ ಸರ್ಕಾರಿ ನೌಕರನಿಗೆ ಅನುಚಿತವಾದ ಯಾವುದನ್ನೂ ಮಾಡತಕ್ಕದ್ದಲ್ಲ. ಅದೇ ನಿಯಮಗಳ ನಿಯಮ 3(2)ರ ಅನುಸಾರ ಪ್ರತಿಯೊಬ್ಬ ಸರ್ಕಾರಿ ನೌಕರನು ರಾಜಕೀಯವಾಗಿ ತಟಸ್ಥನಾಗಿರತಕ್ಕದ್ದು. ಮುಂದುವರಿದು ಅದೇ ನಿಯಮಗಳ ನಿಯಮ 3(5) ರ ಅನುಸಾರ ಪ್ರತಿಯೊಬ್ಬ ಸರ್ಕಾರಿ ನೌಕರನು ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಯನ್ನು ಸಮರ್ಥಿಸತಕ್ಕದ್ದು ಮತ್ತು ಎತ್ತಿಹಿಡಿಯತಕ್ಕದ್ದು. ಅಲ್ಲದೇ ನ್ಯಾಯಸಮ್ಮತವಾಗಿ ಮತ್ತು ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸತಕ್ಕದ್ದು ಹಾಗೂ ಯಾವುದೇ ವ್ಯಕ್ತಿಯ ಅಥವಾ ಪಕ್ಷದ ಬಗ್ಗೆ ತಾರತಮ್ಯ ಮಾಡತಕ್ಕದ್ದಲ್ಲ.
2021 ರ ನಿಯಮಗಳ ನಿಯಮ 10 ರ ಅನುಸಾರ ಆಕಾಶವಾಣಿ, ದೂರದರ್ಶನ ಪ್ರಸಾರ, ಚಲನಚಿತ್ರ ಅಥವಾ ಬರವಣಿಗೆಯು ಸಂಪೂರ್ಣವಾಗಿ ಸಾಹಿತ್ಯಕ, ಕಲಾತ್ಮಕ ಅಥವಾ ವೈಜ್ಞಾನಿಕ ಸ್ವರೂಪದ್ದಾಗಿರದ ಹೊರತು ಸರ್ಕಾರಿ ನೌಕರನು ನೇಮಿಸಲಾದ ಪ್ರಾಧಿಕಾರದ ಪೂರ್ವಾನುಮತಿಯನ್ನು ಪಡೆಯಬೇಕಾಗುತ್ತದೆ. ಮುಂದುವರಿದು ಅದೇ ನಿಯಮ 10 ರ 2 ನೇ ಪರಂತುಕದಲ್ಲಿ ಇಂತಹ ಚಟುವಟಿಕೆಗಳಿಂದ ಸರ್ಕಾರಿ ನೌಕರರ ಅಧಿಕೃತ ಕರ್ತವ್ಯಗಳಿಗೆ ಭಾದಕವಾಗಬಾರದು ಎಂದು ಸ್ಪಷ್ಟಪಡಿಸಲಾಗಿದೆ. ಅದೇ ನಿಯಮಗಳ ನಿಯಮ 11ರ ಅನುಸಾರ ಸರ್ಕಾರಿ ನೌಕರನು ಕರ್ನಾಟಕ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ಪ್ರಸ್ತುತ ಅಥವಾ ಇತ್ತೀಚಿನ ಯಾವುದೇ ನೀತಿಯ ಅಥವಾ ಕ್ರಮದ ಬಗ್ಗೆ ಪ್ರತಿಕೂಲ ಟೀಕೆಯ ಪರಿಣಾಮ ಹೊಂದಿರುವಂತಹ ಯಾವುದೇ ಸಂಗತಿಗಳ ನಿರೂಪಣೆಯನ್ನು ಮಾಡತಕ್ಕದ್ದಲ್ಲ. ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸತಕ್ಕದ್ದಲ್ಲ. ಸರ್ಕಾರಿ ನೌಕರರ ಮಾನ್ಯತೆ ಪಡೆದ ಸಂಘದ ಪದಾಧಿಕಾರಿಗಳು ಸರ್ಕಾರಿ ನೌಕರರ ಸೇವಾ ಸ್ಥಿತಿ ಗತಿ ರಕ್ಷಿಸುವ ಅಥವಾ ಅವುಗಳಲ್ಲಿ ಸುಧಾರಣೆಯನ್ನು ಸುನಿಶ್ಚಿತಗೊಳಿಸುವ ಉದ್ದೇಶಗಳಿಗಾಗಿ ವ್ಯಕ್ತಪಡಿಸಿದ ಪ್ರಾಮಾಣಿಕ ಅಭಿಪ್ರಾಯಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಮೇಲಿನ ನಿಯಮಗಳು ಓರ್ವ ಸರ್ಕಾರಿ ನೌಕರನು ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಡೆದುಕೊಳ್ಳಬೇಕೆಂಬುದನ್ನು ಸ್ಪಷ್ಟಪಡಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸರ್ಕಾರಿ ನೌಕರರು ಅಂತರ್ಜಾಲದ ವೆಬ್‌ಸೈಟ್ ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ 2021ರ ನಡತೆ ನಿಯಮಗಳ ಅವಕಾಶಗಳನ್ನು ಮೀರಿ ಸರ್ಕಾರ ಮತ್ತು ಇತರೆ ಸರ್ಕಾರಿ ನೌಕರರಿಗೆ ಮುಜುಗರ ಉಂಟುಮಾಡುವಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಕಂಡುಬರುತ್ತಿದೆ. ಅಲ್ಲದೆ ಸರ್ಕಾರದ ನೀತಿಗೆ ವಿರುದ್ಧವಾದ ಅಥವಾ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಲೇಖನ, ಅಭಿಪ್ರಾಯ ಮತ್ತು ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ಗಮನಿಸಲಾಗಿದೆ.
ಅಂತರ್ಜಾಲದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರಿ ನೌಕರನು ಪ್ರದರ್ಶಿಸುವ ವರ್ತನೆಯು ಸಹ ಕರ್ನಾಟಕ ರಾಜ್ಯ ನಾಗರಿಕ ಸೇವಾ(ನಡತೆ) ನಿಯಮಗಳು, 2021 ರ ವ್ಯಾಪ್ತಿಗೆ ಒಳಪಡುತ್ತವೆ. ಈ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸರ್ಕಾರಿ ನೌಕರರ ವಿರುದ್ಧ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ಅವಕಾಶಗಳನ್ವಯ ಶಿಸ್ತುಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಗಳಿಗೆ ಈ ಮೂಲಕ ತಿಳಿಸಲಾಗಿದೆ.