ಶಿಕ್ಷಕನ ಡೈರಿಯಿಂದ
ಸ್ಕಂದಾ… ಎಲ್ಲಿದ್ದಿ ಕಂದಾ…?!
ಕೋವಿಡ್ ಕಾರಣದಿಂದ ದೀರ್ಘಕಾಲ ಮುಚ್ಚಿದ್ದ ತರಗತಿಗಳು ಆ ದಿನವಷ್ಟೇ ತೆರೆದಿದ್ದವು. ಇಷ್ಟು ದಿನ ನೀರಸವಾಗಿದ್ದ ಶಾಲಾ ಪರಿಸರ ಮಕ್ಕಳ ಕಲರವದಿಂದ ತುಂಬಿಕೊಂಡಿದ್ದು ನಮಗೆ ಖುಷಿ ಕೊಟ್ಟಿತ್ತಾದರೂ, ಅಪರೂಪಕ್ಕೆ ಶಾಲೆಗೆ ಬಂದ ಮಕ್ಕಳ ಸಡಗರ ದೊಡ್ಡ ಗೌಜಿಯನ್ನೇ ಉಂಟುಮಾಡಿತ್ತು. ನಮಗೂ ಬಹಳ ಕಾಲ ಮಕ್ಕಳ ಜೊತೆಗಿರದೇ ಅಭ್ಯಾಸ ತಪ್ಪಿದುದರ ಪರಿಣಾಮವೋ ಏನೋ ಸಿಕ್ಕಾಪಟ್ಟೆ ದಣಿವನ್ನೂ ತಂದಿತ್ತು.
ಹೇಳಿಕೇಳಿ ನಮ್ಮದು ದೊಡ್ಡ ಶಾಲೆ. ಸರಕಾರಿ ಶಾಲೆಯಾದರೂ ಎಲ್.ಕೆ.ಜಿ. ಯು.ಕೆ.ಜಿ. ತರಗತಿಗಳನ್ನೂ, ಶಾಲಾವಾಹನಗಳನ್ನೂ ಒಳಗೊಂಡು ಖಾಸಗಿ ಶಾಲೆಗಳಿಗೆ ಸ್ಪರ್ಧೆಯೊಡ್ಡಿ ಬೆಳೆದು ನಿಂತ ಶಾಲೆ ಎಂದು ಹಿಂದೆ ನಾನು ಬರೆದಿದ್ದುದನ್ನು ನೀವು ಓದಿರಬಹುದು. ಕೋವಿಡ್ ಕಾರಣದಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾದುದರ ಪರಿಣಾಮವಾಗಿ ನಮ್ಮ ಶಾಲೆಗೆ ದಾಖಲಾತಿಯ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿತ್ತು. ಪರಿಣಾಮವಾಗಿ ಎರಡು ಬಸ್ಸುಗಳ ಬದಲಾಗಿ ಮೂರು ಬಸ್ಸುಗಳನ್ನು ಆರಂಭಿಸಲಾಗಿತ್ತು.
ಎಲ್.ಕೆ.ಜಿ., ಯು.ಕೆ.ಜಿ. ಮತ್ತು ಬಹುತೇಕ ಒಂದನೇ ತರಗತಿಯ ಮಕ್ಕಳಿಗೆ ಶಾಲೆಯಲ್ಲದು ಮೊದಲ ದಿನ. ಬಸ್ಸಲ್ಲಿ ಬರುವ ಮಕ್ಕಳಿಗಂತೂ ಹೊಸ ಅನುಭವ. ಬಸ್ಸಿನ ಡ್ರೈವರ್ಗಳಿಗಾಗಲೀ, ಸಹಾಯಕಿಯರಿಗಾಗಲೀ ಹೆಚ್ಚಿನ ಮಕ್ಕಳ ಪರಿಚಯವಿಲ್ಲ. ಒಂದಂತೂ ಹೊಸ ಬಸ್ಸು, ಚಾಲಕ, ಸಹಾಯಕಿಯರಿಗಿಬ್ಬರಿಗೂ ಹೊಸ ಅನುಭವ. ಬೆಳಿಗ್ಗೆ ಬಸ್ಸನ್ನಿಳಿಯುವಾಗ ಪ್ರತೀ ಬಸ್ಸಿನ ಮಕ್ಕಳ ಲೆಕ್ಕವನ್ನೇನೋ ಸಹಾಯಕಿಯರು ಲೆಕ್ಕವಿಟ್ಟಿದ್ದರು. ಆದರೆ ಶಾಲೆಯ ಮೊದಲ ದಿನವೆಂದು ಬಹಳಷ್ಟು ಪೋಷಕರು ಮಧ್ಯಾಹ್ನವೇ ಬಂದು ಮಕ್ಕಳನ್ನು ಕರೆದೊಯ್ದಿದ್ದು ಎಲ್ಲಾ ಲೆಕ್ಕವನ್ನೂ ಅಸ್ತವ್ಯಸ್ತಗೊಳಿಸಿತ್ತು. ಸಂಜೆ ಶಾಲೆ ಬಿಡುವಾಗ ಏನೋ ಒಂದಿಷ್ಟು ಗಜಿಬಿಜಿ, ಗೊಂದಲ ಮಾಡಿಕೊಂಡಿದ್ದೆವು. ಮಳೆ ಬಂದು ಸಮಸ್ಯೆಯಾಗಿದ್ದು ಎನ್ನುವುದು ನನ್ನ ಅಸ್ಪಷ್ಟ ನೆನಪು. ಅಂತೂ ಮಕ್ಕಳೆಲ್ಲ, ಬಸ್ಸನ್ನೇರಿ ಮೂರೂ ಬಸ್ಸುಗಳು ಹೊರಟವು. ಉಳಿದ ಮಕ್ಕಳೂ, ಮುಖ್ಯೋಪಾಧ್ಯಾಯರೂ, ಶಿಕ್ಷಕವೃಂದವೂ ಶಾಲೆ ಬಿಟ್ಟಾಗಿತ್ತು.
ಶಾಲೆಯಿಂದ ಒಂದು ಕಿಲೋಮೀಟರಿಗಿಂತ ಸನಿಹದಲ್ಲಿ ವಾಸ್ತವ್ಯವಿದ್ದ ನಾನು ಆ ದಿನ ನಲವತ್ತೈದು ಕಿಲೋಮೀಟರ್ ದೂರದ ಅತ್ತೆ ಮನೆಗೆ ಹೊರಟಿದ್ದೆನಾದರೂ ಬೈಕನ್ನೇರಿದವನಿಗೆ, ಆ ದಿನ ನಾವು ಸುವ್ಯವಸ್ಥಿತವಾಗಿ ಮಕ್ಕಳನ್ನು ಬಸ್ಸನ್ನೇರಿಸುವಲ್ಲಿ ಎಡವಿದ್ದೆವೆಂಬುದು ನೆನಪಾಯಿತು. ಯಾವುದಕ್ಕೂ ಇರಲಿ, ಒಂದು ಗಂಟೆ ತಡವಾಗಿ ಹೋದರಾಯಿತು ಎಂದುಕೊಂಡವನು ಹತ್ತಿರದಲ್ಲಿದ್ದ ನನ್ನ ಮನೆಗೆ ಹೋಗಿ ಕುಳಿತೆ.
ಅರ್ಧ ಗಂಟೆ ಕಳೆದಾಕ್ಷಣ ಫೋನು ರಿಂಗಿಣಿಸಿತು. ಫೋನ್ ಮಾಡಿದ್ದು ಶಾಲೆಯ ಮಕ್ಕಳಿಬ್ಬರ ತಾಯಿ. "ಸರ್... ಪ್ರಸಾದ್ ಬಸ್ಸಲ್ಲಿಲ್ಲ..." ಅವರು ಮಾತಾಡಿದ್ದು ಯು.ಕೆ.ಜಿ.ಯ ಹುಡುಗ ವಿಷ್ಣುಪ್ರಸಾದನ ಬಗ್ಗೆ. ತನ್ನ ಅಂಗಡಿಯ ಬಳಿಯಲ್ಲಿ ಬಸ್ಸನ್ನಿಳಿಯುವ ಬಹಳಷ್ಟು ಮಕ್ಕಳ ಬಗ್ಗೆ ಸದಾ ಕಾಳಜಿ ಪ್ರೀತಿ ತೋರಿಸುವ ಆಕೆ ತನ್ನ ನೆರೆಹೊರೆಯ ವಿಷ್ಣುಪ್ರಸಾದನ ತಾಯಿಗೆ ಧೈರ್ಯ ತುಂಬಿ ನನಗೆ ಕರೆ ಮಾಡಿದ್ದರು.
ಅದು ಆ ದಿನವಷ್ಟೇ ನಮ್ಮ ಶಾಲೆಯ ಮಕ್ಕಳನ್ನು ಕರೆದೊಯ್ಯಲು ಪ್ರಾರಂಭಿಸಿದ ಹೊಸ ಬಸ್ಸು. ಡ್ರೈವರ್ ಮತ್ತು ಸಹಾಯಕಿಯ ನಂಬರ್ ನನ್ನಲ್ಲಿರುವುದು ಬಿಡಿ, ಸರಿಯಾದ ಮುಖ ಪರಿಚಯವೂ ನನಗಾಗಿರಲಿಲ್ಲ. ಬಹುಶಃ ಸಹಾಯಕಿ ಗಡಿಬಿಡಿಗೊಂಡು ಮುಖ್ಯೋಪಾಧ್ಯಾಯರಿಗೆ ಕರೆ ಮಾಡುವಷ್ಟರಲ್ಲಿ ಈಕೆ ನನಗೆ ಕರೆ ಮಾಡಿದ್ದರು.
ನಾನೇನೂ ವಿಚಲಿತಗೊಳ್ಳಲಿಲ್ಲ. ಇಂತಹದೊಂದು ಸಮಸ್ಯೆಯನ್ನು ನಿರೀಕ್ಷಿಸಿಯೇ ನಾನು ನನ್ನ ಪ್ರಯಾಣವನ್ನು ಒಂದು ಗಂಟೆ ಮುಂದೂಡಿದ್ದಲ್ಲವೇ? ಅಷ್ಟಕ್ಕೂ ಉಳಿದೆರಡು ಬಸ್ಸುಗಳಲ್ಲಿರುವವರ ಫೋನ್ ನಂಬರುಗಳು ನನ್ನಲ್ಲಿದ್ದವಲ್ಲ.. ಕರೆ ಮಾಡಲಾರಂಭಿಸಿದೆ. ಈಗ ನನಗೂ ಚಳಿ ಹತ್ತಿತು ನೋಡಿ.. ಎರಡೂ ಬಸ್ಸುಗಳು ಸಿಗ್ನಲ್ ತಲುಪದ ಜಾಗದಲ್ಲಿದ್ದವು. ಮೊದಲು ಫೋನಾಯಿಸಿದ ತಾಯಿಯಿಂದ ಮತ್ತೆ ಫೋನು ,"ಮಗು ಸಿಕ್ಕಿದನಾ...?" ಅಂತೂ ಒಂದು ಬಸ್ಸಿಗೆ ಕರೆ ತಾಗಿತು. ನಾನು ಕೇಳುವಷ್ಟರಲ್ಲಿ ಅವರೇ ಹೇಳಿದರು. "ಸರ್.. ಒಬ್ಬ ಹುಡುಗ ತಪ್ಪಿ ನಮ್ಮ ಬಸ್ಸಿಗೆ ಬಂದಿದ್ದಾನೆ... ವಿಷ್ಣುಪ್ರಸಾದ್ ಅಂತ ಹೆಸರು..." ಖುಷಿಯಾಯಿತು ನನಗೆ. "ಅಲ್ಲೇ ಇರಿ... ನಾನು ಬೈಕಿನಲ್ಲಿ ಬಂದು ಮಗುವನ್ನು ಕರೆದೊಯ್ತೇನೆ." ಎಂದು ಫೋನಿಟ್ಟು ಮೊದಲು ಕರೆ ಮಾಡಿದವರಿಗೆ ಫೋನಾಯಿಸಿದೆ. "ಮಗು ಇನ್ನೊಂದು ಬಸ್ಸಲ್ಲಿದ್ದಾನೆ.. ಈಗಲೇ ಕರೆ ತರ್ತೇನೆ..." ಎಂದವನಿಗೆ "ಸರ್... ಸ್ಕಂದ ಎಂಬ ಇನ್ನೊಬ್ಬ ಹುಡುಗನೂ ಕಾಣಿಸ್ತಿಲ್ಲವಂತೆ.." ಹಾಗೆಂದ ಅವರ ಧ್ವನಿಯಲ್ಲಿ ಆತಂಕವಿತ್ತು.
ಈಗ ನಿಜಕ್ಕೂ ನನಗೆ ದಿಗಿಲಾಗಿತ್ತು. ಅಷ್ಟರಲ್ಲಾಗಲೇ ನಾನು ಉಳಿದೆರಡು ಬಸ್ಸುಗಳ ಡ್ರೈವರುಗಳಲ್ಲಿ ಮಾತನಾಡಿಯಾಗಿತ್ತು. ವಿಷ್ಣುಪ್ರಸಾದನನ್ನು ಹೊರತುಪಡಿಸಿ ಬೇರಾವ ಮಕ್ಕಳೂ ಹೆಚ್ಚುವರಿಯಾಗಿ ಅವರ ಬಸ್ಸೇರಿರಲಿಲ್ಲ.
ನಾನು ಶಾಲೆಯ ಬಳಿಗೋಡಿದೆ. ಸುತ್ತಮುತ್ತೆಲ್ಲ ಹುಡುಕಾಡಿದೆ. ಬಾವಿಯ ಬಳಿಗೂ ಹೋಗಿ ನೋಡಿದೆ. ಡ್ರೈವರಿಬ್ಬರಿಗೆ ಮತ್ತೆ ಕರೆ ಮಾಡಿದೆ. ಸ್ಕಂದ ಸಿಗಲಿಲ್ಲ. ಅಷ್ಟರಲ್ಲಿ ಆಕೆಯಿಂದ ಮತ್ತೆ ಫೋನ್ ಬಂತು. "ಇಬ್ಬರೂ ಮಕ್ಕಳು ಬೇರೆ ಬೇರೆ ಬಸ್ಸಿನಲ್ಲಿದ್ದಾರೆ, ಕರೆ ತರ್ತೇನೆ. ಬಸ್ ದೂರದಲ್ಲಿದೆ. ಬರುವಾಗ ಸ್ವಲ್ಪ ಲೇಟಾಗ್ತದೆ." ಸುಳ್ಳು ಹೇಳಿದೆ. ಆ ಕ್ಷಣಕ್ಕೆ ಸ್ಕಂದನೆಂಬ ಹುಡುಗನ ತಾಯಿ ಧೃತಿಗೆಡಬಾರದಲ್ಲ...
ಅಷ್ಟರಲ್ಲಿ ಸಹೋದ್ಯೋಗಿಯೊಬ್ಬರಿಗೆ ಹೊಸ ಬಸ್ಸಿನ ಡ್ರೈವರ್ ಕರೆ ಮಾಡಿದ್ದರು. ದೂರದ ತಮ್ಮ ಮನೆಯಲ್ಲಿದ್ದ ಆ ಶಿಕ್ಷಕರು ನನ್ನೊಂದಿಗೆ ಮಾತನಾಡಿದ ನಂತರ ಶಾಲೆಗೆ ಬರಲು ಸಿದ್ಧರಾಗಿ ಹೊರಟಿದ್ದರು. ಸ್ಕಂದ ಎಲ್.ಕೆ.ಜಿ.ಯ ಹುಡುಗ. ನನಗೆ ಅವನ ತರಗತಿ ಶಿಕ್ಷಕಿಯಲ್ಲಿ ಮಾತನಾಡಬೇಕಿತ್ತು. ಅವರಿಗೆ ಫೋನಾಯಿಸಿದರೆ ಮತ್ತದೇ ಸಿಗ್ನಲ್ ಪ್ರಾಬ್ಲಂ. ಅಂತೂ ಇಂತೂ ತುಂಬಾ ಪ್ರಯತ್ನಗಳ ನಂತರ ಹೇಗೋ ಕರೆ ತಾಗಿತು.
"ಮೇಡಂ... ಸ್ಕಂದನೆಂಬ ಹುಡುಗ ಬಸ್ಸಲಿಲ್ಲವಂತೆ.."
" ಇಲ್ಲ ಸರ್.. ಎಲ್ಲಾ ಮಕ್ಕಳು ಸರಿಯಾಗಿ ಬಸ್ ಹತ್ತಿದ್ದರು. ಅವನೂ ಹತ್ತಿದ್ದ."
"ಯಾವ ಬಸ್ ಹತ್ತಿದನೆಂದು ನೆನಪಿದೆಯೇ??"
"ಹೊಸಗಾಡಿಯನ್ನೇ ಹತ್ತಿದ್ದು ಸರ್... " ಎಂದವರು, ಏನನ್ನೋ ನೆನಪಿಸಿಕೊಂಡು, "ಆ ಹುಡುಗನನ್ನು ನೀವೇ ಹತ್ತಿಸಿದ್ದು ಸರ್... ಅವನೊಬ್ಬನೇ ಎಲ್ಲರನ್ನು ಬಿಟ್ಟು ಬಂದ ನೋಡಿ... ನೀವು ತುಂಬಾ ಮಾತಾಡಿಸಿ ಬಸ್ಸು ಹತ್ತಿಸಿದ್ರಲ್ಲಾ.. ಅವನೇ ಸ್ಕಂದ.."
ಈಗ ನನಗೂ ನೆನಪಾಯಿತು. ಉಳಿದ ಮಕ್ಕಳು ಬಸ್ಸನ್ನೇರಲು ಹೊರಡುವುದಕ್ಕಿಂತ ಮೊದಲೇ ತನ್ನ ವಯಸ್ಸಿಗಲ್ಲದ ವಿಶಿಷ್ಟ ಗಂಭೀರ ಮುಖಮುದ್ರೆಯ ಜೊತೆಜೊತೆಯಲ್ಲೇ ತುಂಟ ಕಿರುನಗೆಯೊಂದನ್ನು ಬೀರಿಕೊಂಡು ಬಸ್ಸಿನೆಡೆಗೆ ಬರುತ್ತಿದ್ದ ಹುಡುಗನನ್ನು ನಿಲ್ಲಿಸಿ ಮಾತನಾಡಿದ್ದೆ. ಅವನ ಮರೂನು ಬಣ್ಣದ ಟೀಶರಟೂ, ಅಗಲವಾದ ಮುಖಾರವಿಂದ ಮತ್ತು ಗಂಭೀರ ನಗು ಎಲ್ಲವೂ ಉಳಿದ ಮಕ್ಕಳಿಗಿಂತ ವಿಭಿನ್ನವೂ ವಿಶಿಷ್ಟವೂ ಎಂದೆನಿಸಿದ್ದರಿಂದ ಅವನೊಂದಿಗೆ ತುಸು ವಿನೋದದ ಮಾತಾಡಿ ಬಸ್ಸು ಹತ್ತಿಸಿದ್ದು ನೆನಪಾಯಿತು.
ಮೊದಲು ಕರೆಮಾಡಿದ ತಾಯಿಗೆ ಫೋನಾಯಿಸಿ ಬಸ್ಸಿನ ಸಹಾಯಕಿಗೆ ಫೋನ್ ಕೊಡಲು ತಿಳಿಸಿದೆ. "ವಿಷ್ಣುಪ್ರಸಾದ್ ಒಬ್ಬನೇ ಸಿಕ್ಕಿರುವುದು, ಸ್ಕಂದ ಬೇರೆ ಬಸ್ಸನ್ನೇರಿಲ್ಲ.. ನಿಮ್ಮದೇ ಬಸ್ಸಿಗೆ ನಾನೇ ಅವನನ್ನು ಹತ್ತಿಸಿದ್ದೆ.. ಬೇರೆಲ್ಲಾದರೂ ಇಳಿದುಕೊಂಡನಾ?"
"ಇಲ್ಲ ಸರ್.. ಬೇರೆಲ್ಲೂ ಇಳಿದಿಲ್ಲ.." ಆಕೆ ಅಕ್ಷರಶಃ ಬಿಕ್ಕುತ್ತಿದ್ದಳು. "ಮತ್ತೇನಾಗಿರಲ್ಲ, ಬೇರೆಲ್ಲಾದರೂ ಇಳಿದಿರಬೇಕು... ಹುಡುಕೋಣ" ಎಂದವನು ವಿಷ್ಣುಪ್ರಸಾದನನ್ನಾದರೂ ಮನೆಗೆ ಬಿಡೋಣ ಎಂದು ಮೊದಲ ಬಸ್ಸಿನ ಡ್ರೈವರಿಗೆ ಕರೆ ಮಾಡಿ ಅವರೆಲ್ಲಿದ್ದಾರೆಂದು ತಿಳಿದು ಆ ಕಡೆಗೆ ಸಾಗಿದೆ.
ಅಷ್ಟರಲ್ಲಿ ಮತ್ತೊಂದು ಫೋನು.. ಮಗು ಕಾಣೆಯಾದ ಬಸ್ಸಿನಲ್ಲೇ ಹೋಗುತ್ತಿದ್ದ ಇನ್ನೊಂದು ಮಗುವಿನ ಮನೆಯವರು. ಅವರ ಮನೆ ತಲುಪಲು ಬಸ್ಸು ಇನ್ನೂ ಸುಮಾರು ದೂರ ಹೋಗಬೇಕಿತ್ತು. "ಮಕ್ಕಳ ಬಸ್ಸು ಬರುವಾಗ ಸ್ವಲ್ಪ ಲೇಟಾಗ್ತದೆ.." ಅವರು ಕೇಳುವ ಮುನ್ನವೇ ಹೇಳಿದೆ.
"ಒಂದು ಮಗು ಕಳೆದುಹೋಗಿದೆಯಂತೆ ಹೌದೇ...?"
" ಹಾಂ.. ನಿಮಗ್ಯಾರು ಹೇಳಿದ್ರು?"
"ಇಲ್ಲೇ ಯಾರೋ ಹೇಳಿದ್ರು.." ಅವರ ಧ್ವನಿಯಲ್ಲಿ ಆತಂಕವಿತ್ತು.
"ಮಗುವೊಂದು ತಪ್ಪಿ ಬೇರೆ ಬಸ್ ಹತ್ತಿದಾನೆ.. ಅವನನ್ನು ಕರೆದುಕೊಂಡು ಬರ್ತೇನೆ ಈಗ." ಅರ್ಧಸತ್ಯವನ್ನಷ್ಟೇ ಹೇಳಿದೆ. ಅವರು ನಂಬಲಿಲ್ಲ.. ವಿದ್ಯಾವಂತ ಪೋಷಕರು ಅಗತ್ಯಕ್ಕಿಂತ ಜಾಸ್ತಿ ಯೋಚಿಸುತ್ತಾರೆ. "ಸರ್ , ಕಾಣೆಯಾಗಿದ್ದು ಗಂಡೋ, ಹೆಣ್ಣೋ..?" ಅವರ ಯೋಚನೆಯೇನೆಂಬುದು ನನಗೆ ಅರ್ಥವಾಯಿತು.
"ಗಂಡು ಮಗು, ಸಿಕ್ಕಿದಾನೆ, ಕರ್ಕೊಂಡು ಬರ್ತೇನೆ."
ಅವರು ನಂಬಲು ಸಿದ್ಧರಿಲ್ಲ. ಅವರ ಯೋಚನೆ ಯಾವ ದಿಕ್ಕಿನಲ್ಲಿದೆಯೆಂದು ತಿಳಿದು "ನಿಮ್ಮ ಮಗಳು ಬಸ್ಸಿನಲ್ಲೇ ಕುಳಿತಿದ್ದಾಳೆ" ಎಂದು ತಿಳಿಸಿದೆನಾದರೂ, ಎಷ್ಟು ನಂಬಿದರೋ ತಿಳಿಯಲಿಲ್ಲ. ಮತ್ತೂ ಫೋನ್ ಇಡಲು ಅವರು ಸಿದ್ಧರಿರಲಿಲ್ಲ. ನಾನಾಗ ಫೋನಲ್ಲಿ ಮಾತನಾಡುತ್ತಾ ಬೈಕ್ ಚಲಾಯಿಸುವ ಸ್ಥಿತಿಯಲ್ಲಿರಲಿಲ್ಲ.. ಹೇಗೋ ಫೋನಿಟ್ಟು ಮುಂದೆ ಸಾಗುವಷ್ಟರಲ್ಲಿ ಮತ್ತೆ ಫೋನ್ ಬಂತು..
"ಸರ್.... ಸ್ಕಂದ ಬಸ್ಸಿನ ಒಳಗಡೆಯೇ ಇದ್ದ ಸರ್....." ಈಗ ಒಂದು ಬಗೆಯ ನಿರಾಳತೆ... ಅದರೊಂದಿಗೆ ಸಿಟ್ಟು, ಗೊಂದಲ, ಕುತೂಹಲಗಳೆಲ್ಲ ಒಂದುಗೂಡಿ ಬಂದವು. "ಅವನ ಮನೆ ಈ ಸ್ಟಾಪಿನಿಂದ ಸ್ವಲ್ಪ ಒಳಗೆ ಹೋಗಬೇಕಂತೆ ಸರ್.. ಕರೆದುಕೊಂಡು ಹೋಗಲಿಕ್ಕೆ ಬಂದದ್ದು ಅವರ ಮನೆಯವರಲ್ಲ.. ಮನೆಯವರು ಎಲ್ಲಿಗೋ ಹೋಗಿದ್ದರಂತೆ, ಒಂದು ರಿಕ್ಷಾ ಕಳಿಸಿದ್ದರು. ಆ ರಿಕ್ಷಾದವರಿಗೆ ಇವನ ಪರಿಚಯವೇ ಇಲ್ಲ. ಇವನು ಸುಮ್ಮನೆ ಒಳಗೆ ಕುಳಿತುಕೊಂಡಿದ್ದ.. ಅವರು ಮಗು ಬಂದಿಲ್ಲ ಎಂದರು, ನಾವೂ ಹಾಗೇ ತಿಳಿದೆವು." ಆಕೆ ಆ ದಿನವಷ್ಟೇ ಕೆಲಸಕ್ಕೆ ಸೇರಿದ ಸಹಾಯಕಿ. ಈ ಹುಡುಗನದ್ದೂ ಮೊದಲನೆಯ ದಿನ.. ಅಕ್ಕಪಕ್ಕದ ಮನೆಯ ಮಕ್ಕಳ್ಯಾರೂ ಇಲ್ಲದಿರುವುದೂ ಒಂದು ಕಾರಣವಾದರೂ, ಮಕ್ಕಳಲ್ಲೊಬ್ಬರೂ ಅವನ ಹೆಸರು ತಿಳಿಯದಿದ್ದುದು ವಿಚಿತ್ರವೆನಿಸಿತು. ಬಹುಶಃ ಅವನ ದಿವ್ಯ ಗಾಂಭೀರ್ಯತೆ ಅದಕ್ಕೆ ಕಾರಣವೇನೋ... "ಅಷ್ಟು ಹೊತ್ತು ಅವನ ಸುದ್ದಿಯೇ ಮಾತಾಡುತ್ತಿದ್ದರೂ ಆ ಹುಡುಗ ಸುಮ್ಮನೇ ಇದ್ದ. ನೀವು ಹೇಳಿದ ಮೇಲೆ ಮತ್ತೆ ಮತ್ತೆ ಸ್ಕಂದ ಯಾರು ಅಂತ ಕೇಳಿದೆ. ಆಮೇಲೆ ನಿಧಾನಕ್ಕೆ ನಾನು ಅಂದ" ಈಗ ಸಹಾಯಕಿ ಖುಷಿಯಾಗಿದ್ದರು. ಅವರ ಬಸ್ ಮುಂದೆ ಸಾಗಿತ್ತು. ನಾನು ಸಿಹಿಸುದ್ದಿಯನ್ನು ಮನೆಯಿಂದ ಶಾಲೆಯೆಡೆಗೆ ಹೊರಟಿದ್ದ ಸಹೋದ್ಯೋಗಿಗೆ ತಿಳಿಸಿದೆ. ಅವರೂ ಹತ್ತಿರ ಹತ್ತಿರ ಬಂದಿದ್ದರು. ವಾಪಸಾಗಲು ತಿಳಿಸಿ, ವಿಷ್ಣುಪ್ರಸಾದನನ್ನು ಬೈಕಲ್ಲಿ ಕುಳ್ಳಿರಿಸಿಕೊಂಡೆ. ಹುಡುಗ ಧೈರ್ಯವಾಗಿದ್ದ. ಸ್ಥಳವನ್ನು ತಲುಪುವಾಗ ತಾಯಂದಿರೆಲ್ಲಾ ಗುಂಪಾಗಿ ಕಾಯುತ್ತಿದ್ದರು. ವಿಷ್ಣುಪ್ರಸಾದನ ತಾಯಿ ಕಣ್ಣೀರು ಸುರಿಸುತ್ತಿದ್ದರು. ಸ್ಕಂದ ಸಿಕ್ಕಿದ್ದಾನೆಂದು ನಾನು ಆರಂಭದಲ್ಲಿ ಸುಳ್ಳು ಹೇಳಿದ್ದರಿಂದ ಇವನು ಸಿಕ್ಕಿರುವ ಬಗ್ಗೆ ಸಂಶಯವಿದ್ದರಲಿಕ್ಕೂ ಸಾಕು. "Sorry... ಇನ್ಯಾವತ್ತೂ ಈ ರೀತಿಯ ತಪ್ಪಾಗುವುದಿಲ್ಲ.." ಕೈ ಮುಗಿದು ನುಡಿದಾಗ ಮಗುವಿನ ತಾಯಿ ಹೇಗೆ ಪ್ರತಿಕ್ರಿಯಿಸುವುದೆಂದು ತೋಚದೆ ನಿಂತ ಹಾಗನಿಸಿತು.
ಅಲ್ಲಿದ್ದವರೊಡನೆ ನಡೆದುದೆಲ್ಲದರ ಕುರಿತು ಬಹಳ ಮಾತನಾಡಿ ಮನಸ್ಸಲ್ಲಿ ತುಂಬಿಕೊಂಡಿದ್ದುದನ್ನೆಲ್ಲಾ ಹೊರಹಾಕಿ ಮನೆಗೆ ಬಂದೆ. ಮೊಬೈಲ್ ತೆಗೆದಾಗ ಮೊದಲಿಗೆ ಕರೆ ಮಾಡಿದ ತಾಯಿಯ ಮೆಸೇಜಿತ್ತು.. "Thank you sir... ನೀವು ತುಂಬಾ ಗ್ರೇಟ್ ಅನಿಸಿತು.. ತುಂಬಾ ತಾಳ್ಮೆಯಿದೆ ನಿಮಗೆ..". ಯಾವಾಗಲೂ ತಾಳ್ಮೆ ಕಡಿಮೆಯೆಂದು ಬಯ್ಯಿಸಿಕೊಳ್ಳುತ್ತಿದ್ದ ನನಗೆ ಜೀವನದಲ್ಲಿ ಮೊದಲ ಬಾರಿಗೆ ತಾಳ್ಮೆ ಜಾಸ್ತಿ ಎಂಬ ಸರ್ಟಿಫಿಕೇಟ್ ಸಿಕ್ಕಿತ್ತು.
ಖುಷಿಯಾಯಿತು.. ತುಸು ಉಬ್ಬಿದೆ...
-ಸದಾಶಿವ ಕೆಂಚನೂರು
ತರಗತಿಯಲ್ಲಿ ನಡೆಯುವ ಘಟನೆಗಳಲ್ಲಿನ ಸೂಕ್ಷ್ಮತೆಯನ್ನು ಅರಿತು ಶಿಕ್ಷಕ ಹೇಗೆ ಆ ಸಂದರ್ಭವನ್ನು ಮಗುವಿಗೆ ಹೊಸ ಮೌಲ್ಯಗಳನ್ನು ತಿಳಿಸುವಂತೆ ಬದಲಾಯಿಸಬಹುದು ಎನ್ನುವುದಕ್ಕೆ ಸಾಕ್ಷಿ ಶಿಕ್ಷಕ ಸದಾಶಿವ ಕೆಂಚನೂರು ಅವರ ಶಿಕ್ಷಕನ ಡೈರಿಯಿಂದ ಎನ್ನುವ ಲೇಖನ ಸರಣಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ 11 ವರುಷಗಳ ವೃತ್ತಿಯನ್ನು ಮುಗಿಸಿ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.. .ಇವರ ಶಿಕ್ಷಕನ ಡೈರಿಯಿಂದ ಲೇಖನಗಳು ಇನ್ನು ಮುಂದೆ ಪ್ರತಿ ಆದಿತ್ಯವಾರ ಪ್ರಕಟ ಆಗಲಿದೆ . . ಓದಿ ನಿಮ್ಮದಾಗಿಸಿಕೊಳ್ಳಿ🙏Mob:97417 02799